ನಾನೆಂಬ ಪರಿಮಳದ ಹಾದಿಯಲಿ: ಬೊಂಬೆಯನ್ನು ದೂರ ಎಸೆದು ಕೇಳಿದೆ, ಕೇಳಿಸಿತೆ ಸಿಡಿದ ಸದ್ದು?

|

Updated on: Feb 03, 2021 | 10:56 AM

‘ಮಾರ್ಗಮಧ್ಯದಲ್ಲಿ ಹಾಲು ಒಡೆದು ಹೋಯಿತು. ಮಗಳು ಒಂದೇ ಸಮನೆ ಕಿರುಚಿ ಅಳು. ಸುತ್ತಲಿನ ಹಳ್ಳಿಗಳ ಹೆಂಗಸರಿಂದ ಒಂದೇ ಮಾತು, ಪೇಟೆಯ ಹೆಣ್ಣುಮಕ್ಕಳು ಏನೆಂದರೂ ನಿರ್ದಯಿಗಳು! ನನ್ನ ಗಂಡ ಅಸಹಾಯಕನಾಗಿ ಕರುಣೆಯಿಂದ ನನ್ನನ್ನು ನೋಡಿದರೆ ಅಮ್ಮನ ಕಣ್ಣುಗಳು ತುಂಬಿ ಬಂದವು. ನಾನು ಜಗತ್ತನ್ನೇ ಮರೆತವಳಂತೆ ಕಿಟಕಿಯ ಕಡೆ ಮುಖಮಾಡಿ ಹೊರಗೆ ದಿಟ್ಟಿಸುತ್ತಿದ್ದೆ. ಕಿಟಕಿಯಲ್ಲಿ ಏನಿತ್ತು? ಅದೇ ಬಟಾಬಯಲು, ಕಣ್ಣಿಗೆ ರಾಚುವ ರಣರಣ ಬಿಸಿಲು, ದೂಳು! ಎದೆಯ ಮೇಲೆ ಕಲ್ಲು ಬಂಡೆಯನ್ನು ಹೇರಿಕೊಂಡು ಸ್ವತಃ ಕಲ್ಲು ಬಂಡೆಯಂತೆ ಕುಳಿತೆ.’ ವೀಣಾ ನಿರಂಜನ

ನಾನೆಂಬ ಪರಿಮಳದ ಹಾದಿಯಲಿ: ಬೊಂಬೆಯನ್ನು ದೂರ ಎಸೆದು ಕೇಳಿದೆ, ಕೇಳಿಸಿತೆ ಸಿಡಿದ ಸದ್ದು?
Follow us on

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಮೂಲತಃ ಉತ್ತರ ಕರ್ನಾಟಕದವರಾದ ವೀಣಾ ನಿರಂಜನ ಪ್ರಸ್ತುತ ಮೈಸೂರಿನಲ್ಲಿ ವಾಸ. ಅಂಚೆ ಇಲಾಖೆಯಲ್ಲಿ ಕೆಲಸ. ಸಾಹಿತ್ಯದಲ್ಲಿ ಆಸಕ್ತಿ. ಕಾವ್ಯವೆಂದರೆ ಪ್ರೀತಿ. ಆಗಾಗ ಲೇಖನ ಕವಿತೆಗಳನ್ನು ಬರೆಯುತ್ತಾರೆ.

ಬಾಲ್ಯದಲ್ಲಿ ಬೊಂಬೆಯಾಟವಾಡದ ಹೆಣ್ಣುಮಗು ಇರಲಿಕ್ಕಿಲ್ಲ ಎಂದೇ ನನಗನ್ನಿಸುತ್ತದೆ. ಹುಟ್ಟುವಾಗಲೇ ತಾಯ್ತನದ ಮಧುರ ಅನುಭೂತಿಯೊಂದು ಆ ಜೀವದಲ್ಲಿ ಸ್ಥಾಪಿಸಿ ಬಿಟ್ಟಿರುತ್ತದೋ ಏನೋ. ನಾನು ಚಿಕ್ಕವಳಿದ್ದಾಗ ನನ್ನದೊಂದು ಮರದ ಬೊಂಬೆಯಿತ್ತು. ಅದಕ್ಕೆ ಹೊಸ ಹೊಸ ಬಟ್ಟೆಗಳನ್ನು ಹಾಕಿ ಸಿಂಗರಿಸಿ, ಹೂಗಳನ್ನು ಆಯ್ದು ತಂದು ಹುಟ್ಟುಹಬ್ಬ ಆಚರಿಸಿ ನಾವೆಲ್ಲ ಗೆಳತಿಯರು ಸಂಭ್ರಮಿಸುತ್ತಿದ್ದೆವು.  ಕಾಲ ಬದಲಾದಂತೆ ಬೊಂಬೆಗಳು ಬದಲಾಗಿವೆ. ಆದರೆ ಬೊಂಬೆಯಾಟ ಮಾತ್ರ ನಿಂತಿಲ್ಲ. ಪ್ರತಿ ಹೆಣ್ಣಿನಲ್ಲೂ ತಾಯಿಯಾಗುವ ಆಸೆ ಬದುಕಿನ ಹಲವು ಆಯಾಮಗಳಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಬೆಳೆದು ಆ ಘಟ್ಟ ತಲುಪಿದಾಗ ಸಿಕ್ಕುವ ತಾಯ್ತನದ ಅನನ್ಯ ಅನುಭವ ಹೆಣ್ಣುಮಕ್ಕಳನ್ನು ಹೆಚ್ಚು ಪ್ರೌಢ, ಸಹನಶೀಲ ಮತ್ತು ತ್ಯಾಗಮಯಿಯನ್ನಾಗಿಸುತ್ತದೆ ಎಂದು ನನ್ನ ಅನಿಸಿಕೆ.

ನನ್ನ ಜೀವನದಲ್ಲಿ ಈ ಘಟ್ಟ ತಲುಪಿದ ಗಳಿಗೆ ಹಲವಾರು ಸಂಕಟ ಮತ್ತು ಸವಾಲುಗಳಿಂದ ಕೂಡಿತ್ತು. ನನಗೆ ಮಗು ಬೇಕು ಎಂದು ನಾನು ನಿರ್ಧಾರ ತೆಗೆದುಕೊಂಡ ಸನ್ನಿವೇಶವೇ ಇವತ್ತೂ ನನ್ನಲ್ಲಿ ಹಲವಾರು ಭಾವನೆಗಳನ್ನು ಒಟ್ಟಿಗೆ ಹುಟ್ಟು ಹಾಕುತ್ತದೆ. ಅದಾಗಲೇ ಒಂದು ವಿಫಲ ಗರ್ಭದ ನಂತರ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳನ್ನು ಎದುರಿಸುತ್ತಿದ್ದೆ. ಆ ವೇಳೆಯಲ್ಲಿ ತಂಗಿ ಹೆರಿಗೆಯಲ್ಲಿ ಹೋಗಿಬಿಟ್ಟಳು. ಮೊದಲೇ ಅಕ್ಕ ಅನಿರೀಕ್ಷಿತವಾಗಿ ಅಪಘಾತದಲ್ಲಿ ನಿರ್ಗಮಿಸಿದ್ದರಿಂದ ನಮ್ಮಮ್ಮನಿಗೆ ಆಘಾತವಾಗಿತ್ತು. ಅದರಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಧುತ್ತೆಂದು ಎದುರಾದ ತಂಗಿಯ ಸಾವು ಅಮ್ಮನನ್ನು ಇನ್ನಿಲ್ಲದಂತೆ ಕಂಗೆಡಿಸಿತ್ತು.

ನಮ್ಮಮ್ಮನಿಗೆ ನಾವು ಮೂರು ಜನ ಹೆಣ್ಣುಮಕ್ಕಳು. ಹೆಣ್ಣು ಹೆತ್ತವರು ಎಂಬ ಹಣೆಪಟ್ಟಿ ಹೊತ್ತು ಸಾಕಷ್ಟು ಕಷ್ಟ, ಮಾನಸಿಕ ಹಿಂಸೆಗಳನ್ನು ಅನುಭವಿಸಿಯೇ ನಮ್ಮನ್ನು ಬೆಳೆಸಿದ ಅಮ್ಮ-ಅಪ್ಪ ನಮ್ಮ ಬದುಕಿನ ಬಗ್ಗೆ ಅಪಾರ ಕನಸುಗಳನ್ನು ಮತ್ತು ಕಾಳಜಿಯನ್ನು ಹೊಂದಿದ್ದರು. ಸಾಹಿತ್ಯಾಸಕ್ತ ಅಪ್ಪನಿಂದ ನಮಗೂ ಓದು ಮತ್ತು ಬರವಣಿಗೆಯ ಬಗ್ಗೆ ಆಸಕ್ತಿ ಮೊಳೆಯುತ್ತಿದ್ದ ಕಾಲ ಅದು. ಅಪ್ಪನಿಂದ ಸಾಕಷ್ಟು ಪ್ರಭಾವಿತರಾಗಿ ಅವರ ಮಾರ್ಗದರ್ಶನದಲ್ಲಿ ಓದು ನಿರಂತರ ಸಾಗಿತ್ತು. ನಾನು ಅದೇ ಆಗ ಕಾಲೇಜು ಮೆಟ್ಟಿಲು ಹತ್ತಿದ್ದೆ. ಅಪ್ಪ ಅನಾರೋಗ್ಯದಿಂದ ಚೇತರಿಸಿಕೊಳ್ಳದೆ ಒಂದು ದಿನ ನಮ್ಮನ್ನೆಲ್ಲ ಅನಾಥರನ್ನಾಗಿಸಿ ಹೋಗಿಬಿಟ್ಟರು. ಆ ಸಮಯದಲ್ಲಿ ನಮ್ಮವರು ಅನ್ನಿಸಿ ಕೊಂಡವರ್ಯಾರು ನಾವು ಮೂವರು ಹೆಣ್ಣುಮಕ್ಕಳು ಎಂಬ ಕಾರಣದಿಂದ ನಮ್ಮ ಜೊತೆ ನಿಲ್ಲಲಿಲ್ಲ. ನಮ್ಮ ಬದುಕಿನ ನಾವೆಯನ್ನು ನಾವೇ ನಡೆಸಿಕೊಂಡು ಹೋಗಬೇಕಾಗಿ ಬಂತು. ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತ ಕಾಲೇಜು ಮುಂದುವರೆಸುವ ಪರಿಸ್ಥಿತಿ ಎದುರಾಯಿತು. ಆದರೂ ನಮ್ಮ ನಿರಂತರ ಓದು ಜಾರಿಯಲ್ಲಿತ್ತು. ವಿದ್ಯಾರ್ಥಿ ದೆಸೆಯಲ್ಲಿ ಯಾವುದೇ ಕಾವ್ಯ, ಕತೆ, ಲೇಖನ ಸ್ಪರ್ಧೆಗಳಿದ್ದರೂ ತಂಗಿ ವಿಭಾ ಮತ್ತು ನಾನು ಸದಾ ಸಿದ್ಧರಾಗಿರುತ್ತಿದ್ದೇವು. ಕ್ರೈಸ್ಟ್ ಕಾಲೇಜು ಕನ್ನಡ ಸಂಘ, ಕರ್ನಾಟಕ ವಿವಿಯ ಕನ್ನಡ ಅಧ್ಯಯನ ಪೀಠ, ಜೆಎಸ್ಎಸ್ ಕಾಲೇಜು ಮುಂತಾದ ಕಡೆಗಳಲ್ಲಿ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನಮ್ಮ ಆತ್ಮವಿಶ್ವಾಸ ಚೆನ್ನಾಗಿ ಕುದುರತೊಡಗಿತ್ತು. ಅನೇಕ ಕಷ್ಟಗಳನ್ನು ದಾಟಿ ನಾವು ಮೂವರು ಓದು ಪೂರ್ಣಗೊಳಿಸಿ ಕೆಲಸ ಸೇರಿದ ಮೇಲೆ ಹೀಗೆ ಒಬ್ಬರಾದ ಮೇಲೆ ಒಬ್ಬರಂತೆ ಅಕ್ಕ ಮತ್ತು ತಂಗಿ ಆಕಸ್ಮಿಕವಾಗಿ ಅಮ್ಮನ ಮಡಿಲಿಗೆ ನನ್ನೊಬ್ಬಳನ್ನೇ ಬಿಟ್ಟು ದೂರ ಬಹುದೂರ ಸಾಗಿದ್ದರು.

ತಂಗಿಯ ಸಾವಿನ ನಂತರ ಅದನ್ನೇ ವಿಪರೀತ ಹಚ್ಚಿಕೊಂಡಿದ್ದ ಅಮ್ಮ ಹಾಸಿಗೆ ಹಿಡಿದುಬಿಟ್ಟಳು. ಅವಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ಕಷ್ಟವೆನ್ನಿಸತೊಡಗಿತ್ತು. ಆ ಸಮಯದಲ್ಲಿ ನನ್ನ ಆತ್ಮೀಯರೆಲ್ಲ ನನಗೆ ಹೇಳಿದ ಉಪಾಯವೇ ಅಮ್ಮನಿಗಾಗಿ ನಾವೊಂದು ಮಗುವನ್ನು ಪಡೆಯುವುದು. ಮೊದಲ ಗರ್ಭಪಾತ ಮತ್ತು ತಂಗಿಯ ಸಾವಿನಿಂದ ಸಾಕಷ್ಟು ಜರ್ಜರಿತಳಾಗಿದ್ದ ನಾನು ಅಷ್ಟು ಬೇಗ ದೈಹಿಕವಾಗಿ ಮಾನಸಿಕವಾಗಿ ಸಿದ್ಧಳಾಗಿರಲಿಲ್ಲ. ಹೆರಿಗೆಯ ನಂತರ ಪ್ರಾಣ ಬಿಟ್ಟ ತಂಗಿಯ ನೆನಪು ಇನ್ನಿಲ್ಲದಂತೆ ಕಾಡುತ್ತಿತ್ತು. ಅಂಥ ಒಂದು ಮನಸ್ಥಿತಿಯಲ್ಲಿ ಗರ್ಭಧರಿಸಿ ಬಿಟ್ಟೆ! ಅಮ್ಮನಾಗುವ ಕನಸು ಎಲ್ಲರಂತೆ ಸಹಜವಾಗಿ ನನ್ನಲ್ಲೂ ಇತ್ತು. ಆದರೆ ತಂಗಿಯ ನರಳಿಕೆಗೆ ಸಾಕ್ಷಿಯಾಗಿದ್ದ ನನಗೆ ಮನದ ಯಾವುದೋ ಮೂಲೆಯಲ್ಲಿ ಅವ್ಯಕ್ತ ಭಯ ಸದಾ ಕಾಡುತ್ತಲೇ ಇತ್ತು. ಈ ಮಧ್ಯೆ ಮಧುಮೇಹ ನನ್ನನ್ನು ಬಾಧಿಸತೊಡಗಿತು. ಇದೆಲ್ಲದರ ಜೊತೆಗೆ ನಾನು ಹೆರಿಗೆಗೆ ಸಿದ್ಧಳಾಗಿದ್ದೆ. ಈ ಬಾರಿಯೂ ಎಂಟನೇ ತಿಂಗಳಿಗೆ ಅನಿವಾರ್ಯವಾಗಿ ಹೆರಿಗೆ ಮಾಡಿಸಿಕೊಳ್ಳಬೇಕಾಯಿತು. ನನ್ನ ಮಗಳು ಈಚೆ ಬಂದ ತಕ್ಷಣ ಅವಳನ್ನು ಎನ್ಐಸಿಯುನಲ್ಲಿ ಇಡಬೇಕಾದ ಪರಿಸ್ಥಿತಿ ಉಂಟಾಯಿತು. ನಾಲ್ಕು ದಿನಗಳ ನಂತರ ನನ್ನ ಮಡಿಲಿಗೆ ಬಂದ ಮಗಳಿಗೆ ಪ್ರಥಮ ಬಾರಿಗೆ ನನ್ನೆಲ್ಲಾ ಸಾರವನ್ನು ನೀಡುತ್ತಿರುವಂತೆ ಹಾಲೂಡಿಸಿದ್ದೆ.ಅಮ್ಮ ಈಗ ಮೊಮ್ಮಗಳ ಆರೈಕೆಯಲ್ಲಿ ಮಗ್ನಳಾಗಿ ನಡೆದದ್ದೆಲ್ಲ ಮರೆತು ಲವಲವಿಕೆಯಿಂದ ಓಡಾಡತೊಡಗಿದ್ದಳು. ಅಮ್ಮನ ನಂಬಿಕೆಯ ಪ್ರಕಾರ ನನ್ನ ತಂಗಿಯೇ  ನನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬಂದಿದ್ದಳು! ಆದರೆ ಹದಿನೈದು ದಿನಗಳಲ್ಲಿ ನಮ್ಮ ಖುಷಿಗೆ ಮತ್ತೆ ಪೆಟ್ಟುಬಿತ್ತು. ನಾನು ಸಿವಿಟಿಗೆ ತುತ್ತಾಗಿ ಎಡಗಡೆ ದೇಹದ ಮೇಲೆ ಸ್ವಾಧೀನ ಕಳೆದುಕೊಂಡು ಐಸಿಯುಗೆ ಶಿಫ್ಟ್ ಆಗಿದ್ದೆ. ನನ್ನ ಮಗಳು ಅಜ್ಜಿಯ ಜೊತೆ ತನ್ನ ದೊಡ್ಡಪ್ಪನ ಮನೆಯಲ್ಲಿ. ನನ್ನ ದೇಹದ ಮೇಲೆ ನಾನಾ ಪ್ರಕಾರದ ರಾಸಾಯನಿಕಗಳನ್ನು ಪ್ರಯೋಗಿಸಿ, ಔಷಧಿ ಕೆಲಸ ಮಾಡುವುದು ಬಿಡುವುದು ರೋಗಿಯ ಇಚ್ಛಾಶಕ್ತಿಯನ್ನು ಅವಲಂಬಿಸಿರುತ್ತದೆ ಎಂದು ವೈದ್ಯರು ಹೇಳಿದರು. ನನಗೋ ನನ್ನ ಕರುಳ ಕುಡಿಯನ್ನು ಬೇಗ ಸೇರುವ ಆತುರ.

ಸಾಂದರ್ಭಿಕ ಚಿತ್ರ

ನನ್ನ ಮನೆಯಲ್ಲಿ ಎಲ್ಲರೂ ಆಗಲೇ ಇನ್ನು ಇವಳ ಕೈಲಿ ಮಗಳನ್ನು ಬೆಳೆಸುವುದು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ನನ್ನ ಪತಿಯಂತೂ ನನ್ನ ಮಗುವನ್ನು ತಮ್ಮ ಅತ್ತಿಗೆಗೆ ಒಪ್ಪಿಸಿಬಿಟ್ಟಿದ್ದರು. ಇದು ಗೊತ್ತಾದದ್ದೇ ನಾನು ಆಸ್ಪತ್ರೆಯಲ್ಲಿಯೇ ಮುಷ್ಕರ ಹೂಡಿದ್ದೆ.  ಖಂಡಿತವಾಗಿಯೂ ಇದರಿಂದ ಬಿಡುಗಡೆ ಪಡೆದುಕೊಂಡು ಬಂದು ನನ್ನ ಮಗಳನ್ನು ನಾನೇ ಬೆಳೆಸುತ್ತೇನೆ ಎಂಬ ಹಠ ತೊಟ್ಟುಬಿಟ್ಟೆ. ಇದೇ ಚಮತ್ಕಾರ ತೋರಿತೇನೊ. ಬಹುಬೇಗ ಗುಣಮುಖಳಾಗಿ ಮನೆಗೆ ಬಂದು ನನ್ನ ಮಗಳನ್ನು ಸೇರಿದೆ. ಆದರೆ ಡಾಕ್ಟ್ರು ಜೀವನಪೂರ್ತಿ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಇವು ಮಗುವಿನ ದೇಹಕ್ಕೆ ವಿಷವಾಗಿ ಪರಿಣಮಿಸುವ ಸಾಧ್ಯತೆ ಇರುವುದರಿಂದ ಇನ್ನು ಮುಂದೆ ನೀವು ಮಗುವಿಗೆ ಹಾಲೂಡಿಸುವಂತಿಲ್ಲ ಎಂದು ಹೇಳಿ ಮನೆಗೆ ಕಳಿಸಿದರು.  ಕಣ್ಣಿಗೆ ಕಣ್ಣೀರು ತುಂಬಿಸಿಕೊಂಡು ಎದೆಹಾಲು ಬತ್ತಿಸಿಕೊಂಡಿದ್ದೆ. ನನ್ನ ಮಗಳಿಗೆ ನಾನು ಎದೆಹಾಲು ಕುಡಿಸಿದ್ದು ಬರೀ ಹದಿನೈದು ದಿನ ಮಾತ್ರ. ಅಮ್ಮನ ಮಡಿಲಲ್ಲಿ, ತಂದೆಯ ಕಾಳಜಿಯಲ್ಲಿ, ಅಜ್ಜಿಯ ಆರೈಕೆಯಲ್ಲಿ ಮಗಳು ಬೆಳೆದು ದೊಡ್ಡವಳಾಗತೊಡಗಿದಳು.

ಈ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ಹೇಳಲೇಬೇಕು. ಒಂದು ಸಲ ಮಗಳಿನ್ನೂ ಚಿಕ್ಕವಳಿದ್ದಾಗ ಧಾರವಾಡದಿಂದ ದೂರದ ನಮ್ಮೂರಿಗೆ ಹೋಗಬೇಕಾಗಿ ಬಂದಿತ್ತು. ಸಾಕಷ್ಟು ಎಚ್ಚರಿಕೆಯಿಂದ, ಮುತುವರ್ಜಿಯಿಂದ ಅವಳಿಗೆ ಬಾಟಲು ಮತ್ತು ಫ್ಲಾಸ್ಕ್ ತುಂಬ ಹಾಲು ತುಂಬಿಸಿಕೊಂಡು ಹೊರಟೆ. ಅದು ಬಿಸಿಲುಗಾಲ. ಬಯಲುಸೀಮೆ ಬೇರೆ. ಮಾರ್ಗಮಧ್ಯದಲ್ಲಿ ಹಾಲು ಒಡೆದು ಹೋಯಿತು. ಮಗಳು ಒಂದೇ ಸಮನೆ ಕಿರುಚಿ ಅಳುತ್ತಿದ್ದಾಳೆ. ಅವಳನ್ನು ರಮಿಸಲು ನನ್ನ ಪತಿ, ಅಮ್ಮ ಮತ್ತು ನಾನು ಮೂವರೂ ಹರಸಾಹಸ ಪಟ್ಟೆವು. ಏನೆಂದರೂ ಅವಳ ಅಳು ನಿಲ್ಲುತ್ತಿಲ್ಲ. ಸುತ್ತಲಿನ ಹಳ್ಳಿಗಳ ಹೆಂಗಸರಿಂದ ತುಂಬಿದ್ದ ಬಸ್ಸಿನಲ್ಲಿ ಗುಜುಗುಜು ಶುರುವಾಯಿತು. ಎಲ್ಲರ ಬಾಯಲ್ಲೂ ಒಂದೇ ಮಾತು. ಪೇಟೆಯ ಹೆಣ್ಣುಮಕ್ಕಳು ಏನೆಂದರೂ ನಿರ್ದಯಿಗಳು! ನನ್ನ ಗಂಡ ಅಸಹಾಯಕನಾಗಿ ಕರುಣೆಯಿಂದ ನನ್ನನ್ನು ನೋಡಿದರೆ ಅಮ್ಮನ ಕಣ್ಣುಗಳು ತುಂಬಿ ಬಂದಿದ್ದವು. ನಾನು ಜಗತ್ತನ್ನೇ ಮರೆತವಳಂತೆ ಕಿಟಕಿಯ ಕಡೆ ಮುಖಮಾಡಿ ಹೊರಗೆ ದಿಟ್ಟಿಸುತ್ತಿದ್ದೆ. ಕಿಟಕಿಯಲ್ಲಿ ಏನಿತ್ತು? ಅದೇ ಬಟಾಬಯಲು, ಕಣ್ಣಿಗೆ ರಾಚುವ ರಣರಣ ಬಿಸಿಲು, ದೂಳು! ಎದೆಯ ಮೇಲೆ ಕಲ್ಲು ಬಂಡೆಯನ್ನು ಹೇರಿಕೊಂಡು ಸ್ವತಃ ಕಲ್ಲು ಬಂಡೆಯಂತೆ ಕುಳಿತಿದ್ದೆ. ಹತ್ತಿರದ ಹಳ್ಳಿಯ ಚಿಕ್ಕ ಹೋಟೆಲ್ಲು ಕಂಡ ತಕ್ಷಣ ಡ್ರೈವರ್ ಬಸ್ಸು ನಿಲ್ಲಿಸಿ ಮಗುವಿಗೆ ಹಾಲು ತರಲು ಹೇಳಿದರು. ಮಗಳು ಅಲ್ಲಿ ಸಿಕ್ಕ ಆ ನೀರು ಹಾಲನ್ನು ಬಾಯಿಗಿಟ್ಟುಕೊಂಡು ಅಮೃತ ಸವಿಯುವಂತೆ ಮೈ ಮರೆತಳು. ಆಗ ನನ್ನ ಕಣ್ಣಲ್ಲಿ ಧಾರಾಕಾರ ನೀರು ಸುರಿಯುತ್ತಿತ್ತು. ಇಂಥದೇ ಪ್ರಸಂಗ ಬೆಂಗಳೂರಿನಿಂದ ಬರುವಾಗ ಮತ್ತೊಮ್ಮೆ ಪುನರಾವರ್ತನೆ ಆಯಿತು. ನಾನು ಆಗ ಇನ್ನು ಮುಂದೆ ಮಗಳು ಬೆಳೆದು ದೊಡ್ಡವಳಾಗುವವರೆಗೆ ಎಲ್ಲಿಯೂ ದೂರ ಪ್ರಯಾಣ ಕೈಗೊಳ್ಳುವುದಿಲ್ಲ ಎಂಬ ಸಂಕಲ್ಪ ಮಾಡಿದೆ.

ಇನ್ನು ನಾನು ಅಂಚೆ ಇಲಾಖೆ ಉದ್ಯೋಗಿ. ಹೆರಿಗೆ ರಜೆಯ ನಂತರ ಕೆಲಸಕ್ಕೆ ಹಾಜರಾದೆ. ನಾನು ಮರಳಿ ಬಂದಿದ್ದು ಒಂದು ಪವಾಡವೆಂಬಂತೆ ನನ್ನ ಸಹೋದ್ಯೋಗಿಗಳು ಸ್ವಾಗತಿಸಿದರು. ಧಾರವಾಡ ಕಚೇರಿಯಲ್ಲಿದ್ದಾಗ ದಿನವೂ ಸಂಜೆ ತನ್ನ ಅಜ್ಜಿಯೊಂದಿಗೆ ಮಗಳು ಬರುತ್ತಿದ್ದಳು. ಹುಬ್ಬಳ್ಳಿ ಧಾರವಾಡದ ಮಧ್ಯೆ ಓಡಾಡುವಾಗ ಇಡೀ ದಿನ ಮಗಳಿಗೆ ನನ್ನ ಮುಖದರ್ಶನವಾಗುತ್ತಿರಲಿಲ್ಲ. ಎಲ್ಲದರ ಮಧ್ಯೆ ಅವಳು ಬೆಳೆದು ದೊಡ್ಡವಳಾದಳು. ‘ನನಗೆ ಹೆಣ್ಣು ಮಗಳಿದ್ದಾಳೆ’ ಎಂದು  ಹೆಮ್ಮೆಯಿಂದ ಹೇಳುವಂಥ ಮಗಳಿದ್ದಾಳೆ ನನಗೆ. ಅದು ನನ್ನ ಭಾಗ್ಯ ಎಂದು ನಂಬಿದ್ದೇನೆ.

ಕವಿ ವಿಭಾ ಕವಿತೆಗಳ ಮೂಲಕ ಸದಾ ಜೀವಂತ

ಈ ಎಲ್ಲ ತಾಪತ್ರಯಗಳ ನಡುವೆ ನನ್ನನ್ನು ನಾನು ಮರೆತು ಬಿಟ್ಟಿದ್ದೆ. ಜೊತೆಯಾಗಿ ಓದಿ ಚರ್ಚಿಸಿ, ಬರೆದು ಹಂಚಿಕೊಳ್ಳುತ್ತಿದ್ದ, ಜೀವದ ಗೆಳತಿಯಂತಿದ್ದ ತಂಗಿ ವಿಭಾ ಇದ್ದಕ್ಕಿದ್ದಂತೆ ತನ್ನ ಕಾವ್ಯಯಾತ್ರೆ ಅರ್ಧಕ್ಕೆ ನಿಲ್ಲಿಸಿ ಹೊರಟುಬಿಟ್ಟಿದ್ದಳು. ಅಕ್ಕ ತಂಗಿಯರಿರುವಾಗ ಬೇರೆ ಗೆಳತಿಯರು ಬೇಕೆ ಎಂಬಂತಿದ್ದ ನನ್ನ ಸುತ್ತ ಶೂನ್ಯವೊಂದು ಆವರಿಸಿದಂತಾಗಿ ತೀರಾ ಒಂಟಿಯಾದಂತೆ ಹಿಂಸೆ ಅನುಭವಿಸ ತೊಡಗಿದ್ದೆ. ಈ ಸಮಯದಲ್ಲಿ ಓದು ಬರವಣಿಗೆ ಅಪ್ರಿಯವಾಗಿದ್ದು ಸುಳ್ಳಲ್ಲ. ಆದರೆ ನನ್ನ ಅಸ್ತಿತ್ವದ ಪ್ರಶ್ನೆ ನನ್ನನ್ನು ಪ್ರತಿ ಕ್ಷಣವೂ ಹಿಂಡುತ್ತಿತ್ತು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮೊದಲೇ ಪಡೆದಿದ್ದು ನನಗೆ ಇದರಿಂದ ತೃಪ್ತಿ ಇರಲಿಲ್ಲ. ಹಾಗಾಗಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಗೆ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದೆ. ಏಳು ತಿಂಗಳ ಬಸುರಿಯಾಗಿದ್ದಾಗ ಕೆಎಎಸ್ ಮುಖ್ಯ ಪರೀಕ್ಷೆ ಬರೆದು ಪಾಸಾದೆ. ಸಂದರ್ಶನದ ಹೊತ್ತಿಗೆ ಆರು ತಿಂಗಳ ಮಗಳು ಕೈಯಲ್ಲಿದ್ದಳು. ಸಂದರ್ಶನ ಫಲ ಕೊಡಲಿಲ್ಲ. ನನ್ನ ಅಧಿಕಾರಿಯಾಗುವ ಆಸೆ ನಂತರವೂ ಫಲಿಸಲಿಲ್ಲ.

ಈಗ ಮಗಳು ಕೂಡ ‘ಅಮ್ಮ ನೀನು ಮೊದಲಿನಂತೆ ಓದು, ಬರೆ’ ಅಂತೆಲ್ಲ ಒತ್ತಾಯದಿಂದ ಹೇಳುತ್ತಿದ್ದಾಳೆ. ಬದುಕಿನ ಇನ್ನೊಂದು ಆಯಾಮ ಹೀಗೆ ತೆರೆದು ಕೊಳ್ಳಬಹುದು ಎಂದು ನನಗೆ ಈಗಲೂ ನಂಬಲಾಗುತ್ತಿಲ್ಲ. ಆದರೆ ಓದಬೇಕು, ಬರೆಯಬೇಕು, ಎಷ್ಟೆಲ್ಲ ಕಾಲ ವ್ಯರ್ಥವಾಗಿ ಹೋಯಿತು ಎಂಬ ಹಳಹಳಿಕೆ, ಹುಕಿ ಮಾತ್ರ ಕಾಡತೊಡಗಿದೆ. ಆಗೊಮ್ಮೆ ಈಗೊಮ್ಮೆ ಕವಿತೆಯೊಂದನ್ನು ಬರೆದು ಎದೆಗೊತ್ತಿಕೊಳ್ಳತೊಡಗಿದ್ದೇನೆ. ಇಷ್ಟು ವರ್ಷಗಳ ಕಾಲ ನನ್ನ ಸುತ್ತ ಸುತ್ತಿಕೊಂಡ ಕಹಿ ನೆನಪುಗಳ, ಅನುಭವಗಳ ಬವಣೆಯಿಂದ ಬಿಡುಗಡೆ ಪಡೆಯಬೇಕು. ಅದಕ್ಕಾಗಿ ನನಗೆ ಕಾವ್ಯ ಬೇಕು. ಕಾವ್ಯಕ್ಕಿರುವ ಪೊರೆವ ಶಕ್ತಿಯೂ ತಾಯ್ತನದ ಶಕ್ತಿಯಂತೆ. ಈ ಯಾತ್ರೆಯಲ್ಲಿ ದೃಢವಾದ ಹೆಜ್ಜೆಯಿಡಬೇಕು.

ಸುಮ್ಮನಿರುವುದು ಇಷ್ಟ 
ಸುಮ್ಮನಿರುವುದು ಇಷ್ಟ ನನಗೆ
ನನ್ನಜ್ಜಿಯೂ ಸುಮ್ಮನಿದ್ದಳು
ಅವ್ವಳು ಕೂಡಾ
ಸುಮ್ಮನಿರು ಎಂದೇ ಹೇಳುತ್ತಾರೆ
ಎಲ್ಲ ಹಿರಿಯರು, ಸರೀಕರು
ಯಾಕೆ ಎಂದು ಕೇಳುತ್ತಾಳೆ
ಮಗಳು ಇಂದು
ಉತ್ತರವಿಲ್ಲದೇ ಹರಿಹಾಯುತ್ತೇನೆ
ಸುಮ್ಮನಿರು ಎಂದು ಹೇಳಿದೆ ಅಷ್ಟೇ

ಅದೇ ಪರಂಪರೆ, ಅದೇ ಧರ್ಮ

ಮಗಳು ಎತ್ತಿ ತಂದಳು
ಬೊಂಬೆಯೊಂದನ್ನ
ಪಕ್ಕ ನಿಲ್ಲಿಸಿ ಕೇಳಿದಳು ನನ್ನ
‘ಅಮ್ಮ, ಯಾರು ಸರಿ
ನೀನೊ, ನಾನೊ, ಈ ಬೊಂಬೆಯೊ’

ಒಂದು ಕ್ಷಣ ನಿರುತ್ತರೆ ನಾನು
ಮರುಕ್ಷಣವೇ
ಬೊಂಬೆಯನ್ನೆಸೆದು ದೂರ
ಕೇಳಿದೆ
‘ಕೇಳಿಸಿತೇ ಸದ್ದು ಸಿಡಿದದ್ದು’

ನಾನೆಂಬ ಪರಿಮಳದ ಹಾದಿಯಲಿ: ನಾನು ಅವಳನ್ನು ಒಮ್ಮೆಯೂ ಅಮ್ಮಾ ಎನ್ನಲೇ ಇಲ್ಲ

Published On - 1:16 pm, Tue, 2 February 21