ನಮ್ಮ ದೇಶ ಸಾವಿರಾರು ಸಂಸ್ಕೃತಿ, ಆಚಾರ -ವಿಚಾರಗಳಿಂದ ವೈವಿಧ್ಯಮಯವಾಗಿದೆ. ಅದರಲ್ಲೂ ತುಳುವನಾಡು ಹಲವಾರು ವಿಭಿನ್ನ ಸಂಸ್ಕೃತಿಗಳ ನೆಲೆಬೀಡಾಗಿದೆ. ಪ್ರತಿಯೊಂದು ತಿಂಗಳಿನ ಮಹತ್ವವನ್ನು ಸಾರುವ ಅರ್ಥಪೂರ್ಣ ಆಚರಣೆಗಳು ತುಳುವರ ಬದುಕನ್ನು ಸುಂದರಗೊಳಿಸಿದೆ. ಇಂತಹ ಆಚರಣೆಗಳಲ್ಲಿ ಮುಖ್ಯವಾದದ್ದು ಪತ್ತನಾಜೆ. ಪತ್ತನಾಜೆ ಅರ್ಥಾತ್ ಹತ್ತನಾವಧಿಯು ತುಳುವರ ಬೇಸ ತಿಂಗಳಿನ ಹತ್ತನೇ ದಿನ. ಈ ದಿನ ತುಳುನಾಡಿನಲ್ಲಿ ನಡೆಯುವ ಮದುವೆ – ಮುಂಜಿ, ಆಟ-ಅಯೊನೊ, ಕೋಲ-ಜಾತ್ರೆ ಮುಂತಾದ ಕಾರ್ಯಕ್ರಮಗಳಿಗೆ ಅಲ್ಪವಿರಾಮ ನೀಡಲಾಗುತ್ತದೆ. ಇದು ತುಳುನಾಡಿನ ಪೂರ್ವಿಕರು ತಮ್ಮ ಒಳಿತಿಗಾಗಿ ತಾವೇ ರೂಪಿಸಿಕೊಂಡ ಕಟ್ಟುಪಾಡು.
ವೃಷಭ ಮಾಸದಲ್ಲಿ ಅಂದರೆ ಮೇ ೨೪ ಅಥವಾ ೨೫ ನೇ ತಾರೀಕಿನಂದು ಬರುವ ಈ ಪತ್ತನಾಜೆಯಿಂದ ತುಳುವರ ಕೃಷಿ ಕಾಯಕವು ಆರಂಭಗೊಳ್ಳುತ್ತದ. ಈ ದಿನದಿಂದ ಗದ್ದೆ ಹೂಳಲು ಪ್ರಾರಂಭಿಸಿ ೧೮ ದಿನದಂದು ಗದ್ದೆ ನಾಟಿ ಮಾಡಲಾಗುತ್ತದೆ. ಮುಂದೆ ನವೆಂಬರ್ ನವರೆಗೆ ೬ ತಿಂಗಳುಗಳ ಕಾಲ ತುಳುನಾಡಿನಲ್ಲಿ ವ್ಯವಸಾಯಕ್ಕೆ ಮಾತ್ರ ಪ್ರಾಧಾನ್ಯತೆ.
ಕೃಷಿಯ ಹೊರತಾಗಿ ಬೇರೆ ವಿಷಯಗಳಿಗೆ ಸಮಯವಿಲ್ಲದಿರುವುದರಿಂದ ಸಂಭ್ರಮ ಸಡಗರಗಳಿಗೆ ಸ್ವಲ್ಪ ಕಾಲ ತೆರೆ ಎಳೆಯಲಾಗುತ್ತದೆ. ಎರ್ಮಾಳ್ ಜಪ್ಪು ಖಂಡೇವು ಎಂಬ ತುಳು ಗಾದೆಯಂತೆ ಎರ್ಮಾಳಿನಲ್ಲಿ ನಡೆಯುವ ಜಾತ್ರೆಯ ಮೂಲಕ ತುಳುನಾಡಿನಲ್ಲಿ ಉತ್ಸವಗಳು ಆರಂಭಗೊAಡು ಖಂಡೇವಿನಲ್ಲಿ ನಡೆಯುವ ಜಾತ್ರೆಯ ಮೂಲಕ ಸಂಪನ್ನಗೊಳ್ಳುತ್ತದೆ.
ಪತ್ತನಾಜೆಯ ದಿನ ತುಳುವರು ದೈವಗಳಿಗೆ ಅಗೇಲು ಪರ್ವ ಸೇವೆಗಳನ್ನು ನೀಡಿ ದೈವಸ್ಥಾನಗಳ ಬಾಗಿಲು ಮುಚ್ಚುತ್ತಾರೆ. ಸಂಕ್ರಾAತಿಯ ದಿನದಂದು ದೀಪ ಇಡಲು ಮಾತ್ರ ತೆಗೆಯಲಾಗುತ್ತದೆ. ಯಕ್ಷಗಾನ ಕಲಾವಿದರು ಕೂಡಾ ಪತ್ತನಾಜೆಯ ಮರುದಿನ ಗೆಜ್ಜೆಯನ್ನು ಬಿಚ್ಚಿಡುತ್ತಾರೆ. ಮುಂದೆ ದೀಪಾವಳಿವರೆಗೆ ತಾಸೆಯ ಗಗ್ಗರ, ತಾಸೆ ಮತ್ತು ಚೆಂಡೆ – ಗೆಜ್ಜೆಯ ಶಬ್ದ ಕೇಳಿಬರುವುದಿಲ್ಲ.
ಪತ್ತನಾಜೆ ಗೆ ಪತ್ತ್ ಪನಿ ಬರ್ಸ ಎಂಬ ಗಾದೆಯಂತೆ ಪತ್ತನಾಜೆಯಂದು ಹತ್ತು ಹಾನಿಯಾದರೂ ಮಳೆ ಬೀಳಬೇಕೆಂದು ತುಳುವರ ನಂಬಿಕೆ. ಆ ದಿನದ ಮಳೆಯು ಮುಂದಿನ ಮುಂದೆ ಬೆಳೆಯುವ ಬೆಳೆಯ ಸಮೃದ್ಧತೆಯನ್ನು ಸೂಚಿಸುತ್ತದೆ. ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡದಿದ್ದರೂ ತುಳುವರು ತಮ್ಮ ಸುಂದರ ಬದುಕಿಗೆ ಬೇಕಾದ ಅರ್ಥಪೂರ್ಣ ನಿಯಮಗಳನ್ನು ರೂಪಿಸಿಕೊಂಡಿದ್ದರು. ಹೀಗೆ ಪತ್ತನಾಜೆಯು ಕೂಡಾ ತುಳುವರ ಕಾಲಜ್ಞಾನ ಕ್ಕೆ ಹಿಡಿದ ಕೈಗನ್ನಡಿಯಾಗಿದೆ.
– ಜಗದೀಶ್ ಬಳಂಜ
ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ