Literature: ಅನುಸಂಧಾನ; ‘ನನ್ನ ಕತೆಗಳಲ್ಲಿ ಈ ದೇಹ ಆನಂದದ ತಾಣವಾಗುವ ಬಗೆಯನ್ನು ತೋರಿಸಲು ಬಯಸುತ್ತೇನೆ’ ಬೆಲ್ ಆಲಿಡ್

Short Story of Bel Olid : ಈಕೆಯ ಐದು ಕತೆಗಳನ್ನೋದಿದರೆ ಗಂಡಿಗೆ ಐದು ಕ್ಷಣಕಾಲಕ್ಕಾದರೂ ಸ್ವತಃ ಹೆಣ್ಣಾಗುವುದು ಎಂದರೇನೆಂದು ಅರ್ಥವಾಗುವುದು ಸಾಧ್ಯವಿದೆ. ಇತ್ತೀಚೆಗೆ ಬಿಡುಗಡೆಯಾದ Wilder Winds ನಿಂದ (ಅನುವಾದ Laura McGlouchlin) ಆಯ್ದ ಒಂದು ಕತೆಯ ಅನುವಾದ ಇಲ್ಲಿದೆ. 

Literature: ಅನುಸಂಧಾನ; ‘ನನ್ನ ಕತೆಗಳಲ್ಲಿ ಈ ದೇಹ ಆನಂದದ ತಾಣವಾಗುವ ಬಗೆಯನ್ನು ತೋರಿಸಲು ಬಯಸುತ್ತೇನೆ’ ಬೆಲ್ ಆಲಿಡ್
ಲೇಖಕಿ ಬೆಲ್ ಆಲಿಡ್
Follow us
ಶ್ರೀದೇವಿ ಕಳಸದ
|

Updated on:May 29, 2022 | 8:31 AM

ಅನುಸಂಧಾನ | Anusandhana : ದೈನಂದಿನದ ಸಣ್ಣಪುಟ್ಟ ವಿವರಗಳನ್ನೇ ಇಟ್ಟುಕೊಂಡು ಹೆಣ್ಣಿನ ಕ್ಷಣಗಳನ್ನು ಕಟ್ಟಿಕೊಡುವುದರ ಮೂಲಕವೇ ಅವಳ ದುಗುಡ, ಏಕಾಕಿತನ, ಸಂಕಟಗಳನ್ನು ಕಥನದ ಉಸಿರಾಗಿ ಓದುಗನೆದೆಗೆ ತಟ್ಟುವಂತೆ ಹೇಳಬಲ್ಲ Isabel Olid Báez (1977, Spain), ಸಾಹಿತ್ಯ ಕ್ಷೇತ್ರದಲ್ಲಿ Bel Olid ಎಂದೇ ಖ್ಯಾತರು. ಕ್ಯಾಟಲೊನಿಯನ್ ಸಾಹಿತಿಯಾದ ಇವರು ಮಕ್ಕಳಿಗಾಗಿಯೂ ಬರೆದಿದ್ದಾರೆ, ಹಿರಿಯರಿಗಾಗಿಯೂ ಬರೆದಿದ್ದಾರೆ. ಟೀಕೆ-ಟಿಪ್ಪಣಿಗಳನ್ನೂ, ಪ್ರಬಂಧಗಳನ್ನೂ ಬರೆಯುತ್ತ ನಾಲ್ಕು ವಿಭಿನ್ನ ಭಾಷೆಗಳ ನೂರಕ್ಕೂ ಹೆಚ್ಚು ಕೃತಿಗಳ ಅನುವಾದವನ್ನೂ ಕೈಗೊಂಡಿದ್ದಾರೆ. ಬರೆಯುವುದರಾಚೆ ಚಳವಳಿ, ಹೋರಾಟಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡಿರುವ ಅವರು ಲಿಂಗಾಧಾರಿತ ಅಸಮಾನತೆ, ಲೈಂಗಿಕ ಕಿರುಕುಳ ಮತ್ತು ದೈನಂದಿನ ಬದುಕಿನಲ್ಲಿ ಎದುರಿಸುವ ಸಾಮಾಜಿಕ ಕಟ್ಟುಕಟ್ಟಳೆಗಳ ವಿರುದ್ಧ  ಸಾಹಿತಿಯಾಗಿಯೂ, ಹೋರಾಟಗಾರ್ತಿಯಾಗಿಯೂ ಕ್ರಿಯಾಶೀಲರಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ Wilder Winds ನಿಂದ (ಅನುವಾದ Laura McGlouchlin) ಆಯ್ದ ಒಂದು ಕತೆಯ ಅನುವಾದ ನಿಮ್ಮ ಓದಿಗಿದೆ.  ನರೇಂದ್ರ ಪೈ, ಲೇಖಕ, ಅನುವಾದಕ (Narendra Pai)

ಯುನೈಟೆಡ್ ಕಿಂಗ್‌ಡಮ್‌ನ ಲೀಡ್ಸ್ ವಾಸಿ ಬರಹಗಾರ ಲಿಯಾಮ್ ಬಿಷಪ್ ‌ಗೆ ನೀಡಿದ ಸಂದರ್ಶನದಲ್ಲಿ ಬೆಲ್ ಆಲಿಡ್ ತಮ್ಮ ಇತ್ತೀಚಿನ ಸಂಕಲನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ವಿಶೇಷವಾಗಿ ಇಲ್ಲೀಗ ಕೊಟ್ಟಿರುವ ಕತೆಯ ಕುರಿತು ಕೂಡ ಅವರು ಉಲ್ಲೇಖಿಸಿದ್ದಾರೆ.

ಅಲ್ಲಿ ಎಲ್ಲಾ ವಯಸ್ಸಿನ ಪಾತ್ರಗಳಿವೆ, ತಾರುಣ್ಯದ ಪಾತ್ರಗಳು, ವಯಸ್ಸಾದ ಪಾತ್ರಗಳು, ಮತ್ತು ಅವುಗಳಲ್ಲಿ ಕೆಲವು ಆಗಷ್ಟೇ ಲೈಂಗಿಕತೆಯ ಅರಿವನ್ನು ಪಡೆಯುತ್ತಿರುವಂಥ ಹದಿಹರಯದ ಪಾತ್ರಗಳು. ಮತ್ತು ನನ್ನ ಎಲ್ಲಾ ಪಾತ್ರಗಳೂ ಅವರ ಬದುಕಿನ ಬೇರೆ ಬೇರೆ ಘಟ್ಟದಲ್ಲಿವೆ, ಬೇರೆ ಬೇರೆ ಸ್ಥಳದಲ್ಲಿ ಬದುಕು ಕಟ್ಟಿಕೊಳ್ಳುತ್ತಿವೆ. ಅದು ಅವರಿಗೊಂದು ಬಗೆಯ ನಿರ್ದೇಶಿತ ನಿಯಂತ್ರಣವನ್ನು – ಕಂಡೀಶನಿಂಗ್ ಎನ್ನುತ್ತೇವಲ್ಲ ಅದನ್ನು ಹೇರಿದೆ. ಇದು ನಮ್ಮೆಲ್ಲರ ಬದುಕಿನಲ್ಲೂ ಇದ್ದೇ ಇರುತ್ತದೆ. ಕೆಲವನ್ನು ನಾವು ಮಾಡಲೇಬೇಕು, ಕೆಲವೊಂದನ್ನು ಮಾಡಬಾರದು, ಹಾಗಿದ್ದೂ ಕೆಲವರು ಸಾಮಾನ್ಯವಾಗಿ ಏನನ್ನು ಮಾಡಬಾರದು ಎಂದು ನಿರೀಕ್ಷಿಸಲಾಗುತ್ತೋ ಅದನ್ನೇ ಮಾಡುತ್ತಾರೆ ಕೂಡ. “She is a Woman” ಕತೆಯಲ್ಲಿ ಹದಿಹರಯದ ಹುಡುಗಿ ನಿರೂಪಕಿ. ಅವಳಿಗೆ ಇನ್ನೊಬ್ಬ ಹೆಣ್ಣನ್ನು ನಗ್ನವಾಗಿ ಕಂಡು ಆಘಾತವಾಗುತ್ತದೆ. ಆಮೇಲೆ ಆ ಹೆಂಗಸಿನ ಮಗಳೇ ನಿರೂಪಕಿಯ ಮೇಲೆ ಲೈಂಗಿಕ ಬಲಾತ್ಕಾರ ನಡೆಸುತ್ತಾಳೆ. ಅವಳಿಗೆ ಅಂಥ ವಾಂಛೆಗಳಿಗೆ ಹೇಗೆ ಪ್ರತಿಸ್ಪಂದಿಸಬೇಕೆನ್ನುವುದು ತಿಳಿಯುವುದಿಲ್ಲ.”

ಇದನ್ನೂ ಓದಿ
Image
Literature : ಅಚ್ಚಿಗೂ ಮೊದಲು; ಸಹನಾ ಹೆಗಡೆ ಅನುವಾದಿಸಿದ ‘ಅನಿಮಲ್ ಫಾರ್ಮ್’ ಕಾದಂಬರಿ ಸದ್ಯದಲ್ಲೇ ನಿಮ್ಮ ಓದಿಗೆ
Image
Literature: ಅನುಸಂಧಾನ; ನಾನು ಎನ್ನುವುದು ನಿಜಕ್ಕೂ ಇದೆಯೆ?
Image
Literature: ಅನುಸಂಧಾನ; ಕಲಾತ್ಮಕ ಅಭಿವ್ಯಕ್ತಿಯಲ್ಲಿ ಸತ್ಯಕ್ಕೆ ಮುಸುಕು ತೊಡಿಸಿ ಹೇಳಿ ಪರವಾಗಿಲ್ಲ
Image
Literature: ಅನುಸಂಧಾನ; ‘ನೋಟವು ಶಬ್ದಗಳಿಗಿಂತ ಮೊದಲು ತೊಡಗುತ್ತದೆ’

ತಮ್ಮ ಕತೆಗಳಲ್ಲಿ ತಾನೇಕೆ ಸಾಕಷ್ಟು “ಸ್ಪೇಸ್” ಮುಕ್ತವಾಗಿಟ್ಟು ಬಿಡುತ್ತೇನೆ, ವಿವರಗಳಲ್ಲಿ ಪ್ರತಿಯೊಂದನ್ನೂ ಸ್ಪಷ್ಟಗೊಳಿಸಲು ಹೋಗುವುದಿಲ್ಲ ಎನ್ನುವ ಕುರಿತು ಹೇಳುತ್ತಲೇ ನಮ್ಮ ಸಮಾಜ ಹೆಚ್ಚು ಹೆಚ್ಚು ವಿವರ ಸಂಗ್ರಹಿಸುತ್ತಲೇ ಒಡೆಯುವುದನ್ನು ಶುರುಮಾಡುತ್ತದೆ ಎಂದೂ ಸೂಚ್ಯವಾಗಿ ಹೇಳಿದ್ದಾರೆ.

“ಕೊನೆಗೂ ನಾವು ಹೇಗೆ ಕಾಣುತ್ತೇವೆ ಎನ್ನುವುದು ನಮ್ಮನ್ನು ಗುಂಪುಗಳಾಗಿ ಒಡೆಯುವ, ಭೇದ ಭಾವವನ್ನು ಹುಟ್ಟು ಹಾಕುವ ಬಹಳ ನೇರವಾದ ಒಂದು ಕ್ರಮ. ನಾನೀಗ ಎಲ್ಲಿ ಬದುಕುತ್ತಿದ್ದೇನೆ ಎನ್ನುವುದು ಕೆಲವೊಂದು ಸಿದ್ಧಮಾದರಿಯ ನಡಾವಳಿಯನ್ನು ನಿಷ್ಕ್ರಿಯಗೊಳಿಸುವ ಪ್ರಶ್ನೆ. ಜನಾಂಗೀಯ ಭೇದ, ಲಿಂಗಾಧಾರಿತ ಭೇದಭಾವ ಮುಂತಾದವೆಲ್ಲ ಬೇರೆಲ್ಲ ಕಡೆ ಇರುವಂತೆಯೇ ನಾನೀಗ ಬದುಕುತ್ತಿರುವಲ್ಲಿ ಕೂಡ ನಿಜಕ್ಕೂ ಚಾಲ್ತಿಯಲ್ಲಿವೆ.  ನಲ್ವತ್ತು ವರ್ಷಗಳ ಕಾಲ ನಾನು ಮಹಿಳೆಯಂತೆ ಬದುಕಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ನನ್ನ ವ್ಯಕ್ತಿತ್ವ ಗಂಡು-ಹೆಣ್ಣು ಎರಡೂ ಅಲ್ಲದ ಗುರುತಿಸುವಿಕೆಯತ್ತ ಕೆಲವೊಂದು ಬೆಳವಣಿಗೆಯನ್ನು ಕಂಡಿದೆ. ಅದರಿಂದೇನಾಗಿದೆ ಎಂದರೆ, ನಾನು ಈ ಸಮಾಜ ನನ್ನ ದೇಹದಲ್ಲಿ ಅಂಥ ಬದಲಾವಣೆಯನ್ನು ಗುರುತಿಸಲು ಬೇಕಾದ ಕೆಲವು ಚಿಹ್ನೆಗಳನ್ನು ಕಾಣುವುದಕ್ಕೆ ಬಯಸುತ್ತಿದೆ ಎನ್ನುವ ಬಗ್ಗೆ ಯೋಚಿಸಬೇಕಾಗಿದೆ. ಮತ್ತು ನನಗೆ ಅಂಥ ಯಾವುದೇ ಸಾಕ್ಷಿಯನ್ನು ಕೊಡುವ ಇಚ್ಛೆಯಿಲ್ಲ.

ದೇಹ ಎನ್ನುವುದು ಹಿಂಸೆಗೆ ಒಂದು ಅಸ್ತ್ರವಾಗುವ ಸಾಧ್ಯತೆ ಹೊಂದಿರುವಂಥಾದ್ದು. ಅದನ್ನು ನಿಯಂತ್ರಿಸುವುದು ಸಾಧ್ಯವಿದೆ, ಅದನ್ನು ನಿಂದಿಸುವುದಕ್ಕೆ, ಕೇಡುಂಟು ಮಾಡುವುದಕ್ಕೆ ಸಾಧ್ಯವಿದೆ. ಆದರೆ ನಾವೆಲ್ಲವನ್ನೂ ಶಾಂತಗೊಳಿಸುವುದಕ್ಕೆ ಕೂಡ ಸಾಧ್ಯವಿದೆ, ಹಿಂಸೆಯನ್ನು ಮೀರಲು ಸಾಧ್ಯವಿದೆ, ಈ ದೇಹವನ್ನು ಒಂದು ಮನೆಯಂತೆ ಪೋಷಿಸಲು ಬರುತ್ತದೆ. ನನ್ನ ಕತೆಗಳಲ್ಲಿ ನಾನು ಹೇಗೆ ಈ ದೇಹ ಒಂದು ಆನಂದದ ತಾಣವಾಗುವುದು ಸಾಧ್ಯ ಎನ್ನುವುದನ್ನುತೋರಿಸಲು ಬಯಸುತ್ತೇನೆ. ನೀವು ಕಥಾನಕದ ಪಾತ್ರವರ್ಗವನ್ನು ವಿವರಿಸದೇ ಬಿಟ್ಟಾಗ ಓದುಗನ ಮನಸ್ಸು ಸಿದ್ಧಮಾದರಿಯ ಪಾತ್ರವರ್ಗವನ್ನು ಕಲ್ಪಿಸಿಕೊಳ್ಳತೊಡಗುತ್ತದೆ ಎನ್ನುವುದು ನಿಜವೇ. ನನ್ನ ಪಾತ್ರಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವಾಗ ಓದುಗರು ತಮ್ಮನ್ನೇ ತಾವು ಆಯಾ ಪಾತ್ರವಾಗಿ ಕಂಡುಕೊಳ್ಳಬೇಕೆಂದು ನನ್ನ ನಿರೀಕ್ಷೆ.”

Short Story of Bel Olid Anusandhana Column by Kannada Writer Narendra Pai

ಬೆಲ್ ಆಲಿಡ್ ಕೃತಿಗಳು

ಕಥೆ : ಹೆಣ್ಣಿವಳು

ಹೆಲೆನಾ, ಯಜಮಾನರ ಮಗಳು, ನನ್ನನ್ನು ತನ್ನ ಜೊತೆ ಆಟವಾಡಲು ಕರೆದಿದ್ದಳು. ಅವರ ಡೈನಿಂಗ್ ರೂಮಿನಲ್ಲಿ ಕುಳಿತಿದ್ದ ನನ್ನನ್ನು ಕಂಡ ಅವಳು ಹಾಗೆ ಕರೆದಿದ್ದರಲ್ಲಿ ಅಂಥ ವಿಶೇಷವೇನೂ ಇರಲಿಲ್ಲ. ಆ ಮನೆಯ ಆಧುನಿಕತೆ ಮತ್ತು ವೈಭವಗಳೆದುರು ಕಂಗಾಲಾದವರಂತೆ, ಹಲಗೆ ತರ ಅಲುಗಾಡದೆ ಕುಳಿತಿದ್ದ ನಾನು ನನ್ನೆದುರಿದ್ದ ಹಾಲಿನ ಗ್ಲಾಸ್ ನೋಡುತ್ತ ಉಗುಳುನುಂಗಿದೆ. ಯಜಮಾನಿ ನನ್ನನ್ನು ನನ್ನ ಪಾಡಿಗೆ ಅಲ್ಲಿ ಬಿಟ್ಟು ಹೋಗುವ ಮುನ್ನ ಕೊಟ್ಟಿದ್ದ ಹಾಲು ಎದುರಿಗಿತ್ತು.

ನನ್ನ ಆಂಟಿ ಯಜಮಾನಿಯ ಬಳಿ ಹಾಗೆ ನನ್ನನ್ನು ತನ್ನೊಂದಿಗೆ, ಕೆಲಸದವರ ಕೋಣೆಯಲ್ಲಿ ಒಂದೆರಡು ದಿನಗಳ ಮಟ್ಟಿಗೆ, ನನ್ನಮ್ಮ ಗುಣ ಹೊಂದುವವರೆಗೆ, ಉಳಿಸಿಕೊಳ್ಳಲು ಪರ್ಮಿಶನ್ ಕೇಳಿದ್ದಳು. ಆ ದಿನಗಳಲ್ಲಿ ನನ್ನಮ್ಮ ಮತ್ತೆ ಮತ್ತೆ ಮನೆಗೂ ಆಸ್ಪತ್ರೆಗೂ ಎಡತಾಕುತ್ತಲೇ ಇದ್ದಳು. ಆಗೆಲ್ಲ ಮನೆಯಲ್ಲಿ ನಾನೊಬ್ಬಳೇ ಇರಬೇಕಾಗುತ್ತಿತ್ತು. ನನ್ನ ವಯಸ್ಸಿನ ಹುಡುಗಿ, ಹೆಚ್ಚೂ ಕಡಿಮೆ ತಾರುಣ್ಯಕ್ಕೆ ಕಾಲಿಟ್ಟಿರುವ ವಯಸ್ಸಿನವಳು, ಹಾಗೆ ಒಬ್ಬೊಬ್ಬಳೇ ಇರುವುದು ಸರಿಯಲ್ಲ ಎಂದು ಯಾರಿಗೋ ಕಂಡಿರಬೇಕು. ನನ್ನ ಆಂಟಿ ಯಜಮಾನಿಯ ಮನೆಯಲ್ಲಿ ಕೆಲಸಕ್ಕಿದ್ದಳು. ಅವಳಿಗೆ ಮಲಗಲು ಅಲ್ಲಿಯೇ ಒಂದು ಚಿಕ್ಕ ರೂಮು ಕೊಟ್ಟಿದ್ದರು. ಅದು ಚಿಕ್ಕದಾಗಿದ್ದರೂ ವ್ಯವಸ್ಥೆ ಚೆನ್ನಾಗಿತ್ತು. ಒಂದು ದೊಡ್ಡ ಬೆಡ್ಡು, ಕನ್ನಡಿಯಿದ್ದ ವಾರ್ಡ್‌ರೋಬು ಮತ್ತು ಕಿಟಕಿಯ ಪಕ್ಕ ಇರಿಸಲಾದ ಹೂಗಿಡದ ಪುಟ್ಟ ಕುಂಡ ಕೂಡ ಇತ್ತು.

ಆಂಟಿ ಕಿಚನ್ನಿನಲ್ಲಿ ಏನೋ ತಿಕ್ಕುತ್ತಿದ್ದಳು. ಯಜಮಾನಿ ಅವಳಿಗೆ ನನಗೊಂದು ಗ್ಲಾಸ್ ಹಾಲು ಕೊಡಲು ಹೇಳಿದ್ದಳು. ‘ದೇವರು ಒಳ್ಳೇದು ಮಾಡಲಿ! ಈ ವಯಸ್ಸಿನಲ್ಲಿ ಹುಡುಗಿಯರು ಚೆನ್ನಾಗಿ ತಿಂದುಂಡು ಬೆಳೀಬೇಕು.’ ಆಮೇಲೆ ನನ್ನನ್ನು ಡೈನಿಂಗ್ ರೂಮಿನಲ್ಲಿ ಕೂರಿಸಿದರು. ನಾನಲ್ಲಿ ಕುಳಿತೆ. ಎರಡೂ ಮೊಣಕಾಲುಗಳನ್ನು ಒಂದಕ್ಕೊಂದು ಅಂಟಿಸಿಕೊಂಡು, ತೊಡೆಯ ಮೇಲೆ ಒಂದರ ಮೇಲೊಂದು ಕೈಯಿಟ್ಟು, ಪ್ರಾಯಕ್ಕೆ ಬಂದ ಹುಡುಗಿಯರು ಹೇಗೆ ಕೂರಬೇಕೆಂದು ನನ್ನಮ್ಮ ಹೇಳಿಕೊಟ್ಟಿದ್ದಳೋ ಹಾಗೆ.

ಇದನ್ನೂ ಓದಿ : ವೈಶಾಲಿಯಾನ: ಇಂಗ್ಲಿಷ್! ಹೆಮ್ಮೆಯಿಂದ ಬಳಸುತ್ತಿದ್ದೇವೋ, ಸಂಕೋಚದಿಂದ ಮುದುಡಿ ಹೋಗುತ್ತಿದ್ದೇವೋ?

ಹೆಲೆನಾ ಒಂದು ರಾಶಿ ಬೊಂಬೆಗಳ ಪೇಪರ್ ಕಟಿಂಗ್ಸ್ ಹೊತ್ತುಕೊಂಡು ಕತ್ತರಿಯೊಂದಿಗೆ ಬಂದು ನನ್ನೆದುರು ಕುಳಿತಳು. ಒಂದು ಸಣ್ಣ ಹುಡುಗಿ, ಅವಳ ಸುತ್ತಲೂ ಅವಳನ್ನು ಅಲಂಕರಿಸಲು ಬೇಕಾದ ಬಟ್ಟೆ ಮತ್ತಿತರ ವಸ್ತುಗಳಿದ್ದ ಚಿತ್ರದ ಹಾಳೆಯನ್ನು ನನಗೆ ಕೊಟ್ಟು ನಾನು ಸ್ಕರ್ಟು, ಶೂ ಮತ್ತು ಹ್ಯಾಟು ಕಟ್ ಮಾಡುವುದನ್ನೇ ನೋಡುತ್ತ ಕೂತಳು. ಆಗಾಗ ಮೌನವನ್ನು ಒಡೆಯಲೋ ಎಂಬಂತೆ ಏನಾದರೂ ಪ್ರಶ್ನೆ ಹಾಕುತ್ತ ಇದ್ದಳು. ನನಗೆ ಉತ್ತರ ಕೊಡಬೇಕೋ ಕೊಡಬಾರದೋ ಗೊಂದಲ. ಆಮೇಲೆ ಅವಳು ಟೇಬಲ್ಲಿನ ಮೇಲೆ ಬಾಗಿಕೊಂಡು, ಹೆಚ್ಚೂ ಕಡಿಮೆ ಅದನ್ನು ಹತ್ತಿಯೇ ನನ್ನ ತೀರ ಸನಿಹಕ್ಕೆ ಬಂದು ಕತ್ತರಿಸಿದ್ದ ಗೊಂಬೆ ತೆಗೆದುಕೊಂಡು ಅದಕ್ಕೆ ಹಳದಿ ಬಣ್ಣದ ಡ್ರೆಸ್ಸನ್ನು ಹಾಕಿದಳು. ಅವಳ ಉಸಿರಿಗೆ ಹಣ್ಣಿನ ಪರಿಮಳವಿರುವುದು ಗೊತ್ತಾಗುವಷ್ಟು ಹತ್ತಿರ ಬಂದಿದ್ದಳು. ಕಿಚನ್ನಿನಲ್ಲಿದ್ದ ಆಂಟಿ ಯಾವ ಕ್ಷಣದಲ್ಲಾದರೂ ಬಂದು ಬಿಡಬಹುದೆಂದು ಎಣಿಸಿದ್ದೇ ನನ್ನ ಮುಖ ಒಮ್ಮೆಗೇ ಕೆಂಪೇರಿದ್ದು ನನಗಿನ್ನೂ ನೆನಪಿದೆ. ನಾನು ತಟ್ಟನೇ ಎದ್ದು ನಿಂತೆ.

‘ನಂಗೆ ಬಾತ್ರೂಮಿಗೆ ಹೋಗ್ಬೇಕು’ ಎಂದೇನೋ ಮಣಮಣಿಸಿ ಮೊದಲು ಸಿಕ್ಕಿದ ಬಾಗಿಲನ್ನು ತಳ್ಳಿ ತೆರೆದೆ.

ಬಹುಶಃ ಬಾತ್‌ರೂಮಿನ ಒಳಗೆ ಹೊಗುವ ಮೊದಲೇ ನಾನು ಬಸವಳಿದಿರಬೇಕು, ಅಥವಾ ಬಹುಶಃ ನನ್ನ ರೋಗಗ್ರಸ್ತ, ಒಣಗಿದ ಕೃಶಕಾಯದ, ವಯಸ್ಸಾದ ಅಮ್ಮನಿಗೆ ಹೋಲಿಸಿದಲ್ಲಿ ಪುಟಿವ ಜೀವರಸದಿಂದ ಕಂಪಿಸುವಂತಿದ್ದ, ತಾರುಣ್ಯದ ತೇಜಸ್ಸಿನಿಂದ ಚಿಮ್ಮುತ್ತಿದ್ದ ಆಕೆ ಕಾರಣ, ಆದರೆ ನಾನಂತೂ ಕನ್ನಡಿಯೆದುರು ಟೀಶರ್ಟ್ ಇಲ್ಲದೆ, ಬ್ರಾ ಕೂಡ ಇಲ್ಲದೆ, ಎಡ ತೋಳನ್ನೆತ್ತಿ, ಬಲಗೈಯಲ್ಲಿ ಡಬ್ಬಲ್ ಎಜ್ಜಿನ ರೇಜರ್ ಹಿಡಿದು ಕಂಕುಳದ ಕೂದಲು ಶೇವ್ ಮಾಡುತ್ತ ನಿಂತಿದ್ದ ರೇಶಿಮೆಯಂಥ ನುಣುಪಾದ ಚರ್ಮದ ಆ ಸುಂದರ ಹುಡುಗಿಯ ಪ್ರತಿಮೆಯನ್ನು ಕಂಡು ಥಕ್ಕಾಗಿ ಬಿಟ್ಟೆ.

ಅವಳಿನಿತೂ ವಿಚಲಿತಳಾಗಲಿಲ್ಲ. ಸುಂದರವಾಗಿ ನಕ್ಕು ಇನ್ನೇನು ಮುಗಿಯಿತು, ಒಂದೇ ನಿಮಿಷ, ಬಂದುಬಿಟ್ಟೆ ಎಂದಳು. ಅದೇ ದಾರಿಯಲ್ಲಿ ಮುಂದೆ ಹೋದರೆ ಇನ್ನೊಂದು ಬಾತ್‌ರೂಮಿದೆ, ಅದನ್ನು ಬೇಕಾದರೆ ಬಳಸಬಹುದು ಎಂದೂ ಹೇಳಿದಳು. ಆ ಕಂಗಳು ನನ್ನನ್ನು ಅವಳ ಮಗಳಷ್ಟೇ ಕುತೂಹಲದಿಂದ ನಿರುಕಿಸುತ್ತಿದ್ದವು. ಮತ್ತು ನನಗೆ ಆಕೆಯ ತ್ವಚೆ ತುಂಬಾ ಮೃದುವಾಗಿದೆ ಅನಿಸಿತು. ನಾನು ಅಲ್ಲಿಂದ ಕದಲಿಲ್ಲ, ಮತ್ತು ಆಕೆಯ ಕಣ್ಣುಗಳು ನನ್ನ ಮೇಲಿಂದ ಅತ್ತ ಸರಿಯಲಿಲ್ಲ. ಆಗ ನನಗೆ ಹೆಲೆನಾಳ ಕರೆ ಕೇಳಿಸಿತು – ‘ಬರುವುದಿಲ್ಲವೆ ನೀನು?’ – ನಾನು ಬಾಗಿಲೆಳೆದುಕೊಂಡೆ. ಆ ಹಾಲಿನ ಕೊನೆಗೆ ಓಡಿ, ಆ ಇನ್ನೊಂದು ಬಾಗಿಲನ್ನು ತೆರೆದು ಕತ್ತಲಲ್ಲಿ ಕೂತುಬಿಟ್ಟೆ. ನನ್ನ ಉಸಿರು ಮತ್ತೆ ಮೊದಲಿನ ಹದಕ್ಕೆ ಬರುವ ತನಕವೂ ಹಾಗೆಯೇ ತುಂಬ ಹೊತ್ತು ಕೂತಿದ್ದೆ, ಡೈನಿಂಗ್ ರೂಮಿಗೆ ಮರಳಲು ನನಗೆ ಬೇಕಾದ ಧೈರ್ಯವನ್ನೆಲ್ಲ ಒಗ್ಗೂಡಿಸುತ್ತಿದ್ದೇನೋ ಎಂಬಂತೆ.

ಆಮೇಲೆ ಆಂಟಿ ಬಾಗಿಲನ್ನು ತಟ್ಟಿ ಆಸ್ಪತ್ರೆಯಿಂದ ಕರೆ ಬಂದಿದೆಯೆಂದೂ ತಾನು ಹೋಗಬೇಕಾಗಿದೆ ಎಂದೂ ಹೇಳಿ, ರಾತ್ರಿ ಯಜಮಾನಿ ಹೊರಗಡೆ ಹೋಗುತ್ತಿರುವುದರಿಂದ ಮನೆಯಲ್ಲಿರುವುದಿಲ್ಲವೆಂತಲೂ, ನಾನು ಹೆಲೆನಾಳನ್ನು ನೋಯಿಸದಂತೆ ಜೊತೆಯಾಗಿರಬೇಕೆಂದೂ ಹೇಳಿದಳು.

ಅವರು ಹೊರ ಹೋಗುವಾಗ – ಯಜಮಾನಿ ಸಿನಿಮಾ ತಾರೆಯರು ತೊಡುವಂಥ ಬಟ್ಟೆ ತೊಟ್ಟು, ಟೈ ಕಟ್ಟಿ ಹೊಳೆಯುವ ಶೂಸ್ ತೊಟ್ಟ ಯಜಮಾನಿ – ಹೆಲೆನಾ ನನ್ನನ್ನು ಅವಳ ಬೆಡ್‌ರೂಮಿಗೆ ಎಳೆದುಕೊಂಡು ಹೋದಳು.

‘ನಾವು ಅವರ ಜೊತೆ ಪಾರ್ಟಿಗೆ ಹೋಗುವ ಹಾಗಿಲ್ಲ, ಆದರೆ ನಾವು ಹಾಡು ಹಾಕೋಣಂತೆ’ ಎಂದಳು.

ಮೊತ್ತ ಮೊದಲಬಾರಿಗೆ ನಾನು ಆ ಇಂಪಾದ ಸ್ವರ ಮತ್ತು ಮನಸ್ಸೆಳೆವ ಟ್ಯೂನುಗಳನ್ನು ಕೇಳಿದೆ.  ಕುಣಿಯುವುದಕ್ಕೆಂದೇ ಕಟ್ಟುವ ಬೊಲೆರೋ ಮತ್ತು ಜಾನಪದ ಹಾಡುಗಳನ್ನು ಮೆಚ್ಚಿಕೊಂಡಷ್ಟೇ ಇವುಗಳನ್ನೂ ನಾನು ಇಷ್ಟಪಟ್ಟೆನೋ ಇಲ್ಲವೋ ಹೇಳಲಾರೆನಾದರೂ ಅಲ್ಲಿ, ಹಾಗೆ ಹೆಲೆನಾಳ ಕೋಣೆಯಲ್ಲಿ ಹಾಡು ಕೇಳುತ್ತ ಕುಣಿಯುವುದು ನನ್ನ ಭಾಗ್ಯವೇ ಅಂದುಕೊಂಡೆ.

ಆ ರಾತ್ರಿ ನಾನು ನನ್ನ ಪೈಜಾಮಾ ಟಾಪ್ ಮೇಲಕ್ಕೆತ್ತಿ ಮಡಚಿ, ತಲೆಗೂದಲ ಜುಟ್ಟು ಬಿಚ್ಚಿ ಹಾಕಿ, ಕೆನ್ನೆಗಳು ಕೆಂಪೇರಿ ಉರಿಯುವಷ್ಟು ಕುಣಿದೆ. ಸಾವಿರ ಸಲ ರೆಕಾರ್ಡ್ ಪ್ಲೇ ಮಾಡಿ, ತೀರ ತಡವಾದ ಮೇಲೆ ಮಲಗುವ ಸಮಯವಾಯ್ತೆಂದು ಅರಿವಿಗೆ ಬಂದಾಗ ಹೆಲೆನಾ ನಾನು ಅಲ್ಲಿಯೇ ಅವಳ ಜೊತೆ ಉಳಿದುಕೊಳ್ಳಬಹುದು ಎಂದಳು. ಹಣ್ಣಿನ ಪರಿಮಳದ ಉಸಿರು ಮತ್ತು ರೇಶಿಮೆಯಂಥ ನುಣುಪಾದ ಮೈ. ಆದರೆ ನಾನು ಥ್ಯಾಂಕ್ಯೂ ಎಂದಷ್ಟೇ ಹೇಳಿ ಆಂಟಿಯ ದೊಡ್ಡ ಬೆಡ್ಡಿನ ಕೋಣೆಗೆ ಓಡಿ ಬಂದುಬಿಟ್ಟೆ.

ಇದನ್ನೂ ಓದಿ : Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ

ಇಡೀ ರಾತ್ರಿ ನಾನು ಕುಂಡದಲ್ಲಿದ್ದ ಹೂವಿನ ಗಿಡವನ್ನೇ ನೋಡುತ್ತ ಕೂತೆ. ನೋಡುತ್ತ ನನಗೆ ನನ್ನ ದೇಹದ ಒಳಹೊರಗೆಲ್ಲ ಇರುವೆಗಳು ಹರಿದಾಡುತ್ತಿರುವಂತೆ ಆಗುತ್ತಿತ್ತು.

ನನ್ನ ಆಂಟಿ ಮರುದಿನ ಇನ್ನೂ ಕತ್ತಲಿರುವಾಗಲೇ ಮರಳಿದಳು. ಅವಳ ಮುಖದಲ್ಲಿ ಕಳೆಯಿರಲಿಲ್ಲ. ಒಂದಷ್ಟು ಹೊತ್ತು ಸುಧಾರಿಸಿಕೊಂಡು ಅವಳು ಮತ್ತೆ ಆಸ್ಪತ್ರೆಗೆ ಓಡಬೇಕಾಗುತ್ತಿತ್ತು. ದಿನಗಳು ಉರುಳಿದಂತೆಲ್ಲ ಅವಳ ಮತ್ತು ನನ್ನಮ್ಮನ ಆಸ್ಪತ್ರೆ ಭೇಟಿಗಳು ಒಂದರ ಹಿಂದೊಂದರಂತೆ ಮರುಕಳಿಸುತ್ತಲೇ ಹೋದವು. ಯಜಮಾನಿಯ ಒತ್ತಾಯಕ್ಕೋ ಎಂಬಂತೆ ನಾನು ಅವರ ಮನೆಯಲ್ಲೇ ಉಳಿದುಕೊಂಡೆ. ಆದರೆ ನಾನೆಂದೂ ಮತ್ತೊಮ್ಮೆ ಆಕೆಯನ್ನು ಅರೆನಗ್ನ ಸ್ಥಿತಿಯಲ್ಲಿ ಗಾಬರಿಪಡಿಸಲಿಲ್ಲ.

ಅಲ್ಲಿಂದ ಮುಂದೆ ನಾನು ಕದ ದೂಡುವ ಸಾಹಸ ಮಾಡುವ ಮೊದಲು ಸದಾ ಬಾಗಿಲಿನ ಮೇಲೆ ಮೆತ್ತಗೆ ತಟ್ಟಿಯೇ ಮುಂದುವರಿಯುತ್ತಿದ್ದೆ, ಅಲ್ಲಿಂದ ಮುಂದೆ ನಾನು ಸದಾ ಹಿಂಜರಿಕೆ ಮತ್ತು ಹೊಸ ನಿರೀಕ್ಷೆ ಎರಡನ್ನೂ ಹೊತ್ತು ಅಪರಿಚಿತರ ಮನೆಯ ಬಾತ್‍ರೂಮುಗಳನ್ನು ಪ್ರವೇಶಿಸುತ್ತಿದ್ದೇನೆ. ಅಲ್ಲಿಂದ ಮುಂದೆ ನಾನು ನನ್ನ ಕಂಕುಳನ್ನು ಶೇವ್ ಮಾಡಿಕೊಳ್ಳುವಾಗಲೆಲ್ಲ ಕನ್ನಡಿಯಲ್ಲಿ ನನ್ನದೇ ಬೆತ್ತಲೆ ಪ್ರತಿಬಿಂಬವನ್ನು ಆರಾಧಿಸುತ್ತ ಬಂದಿದ್ದೇನೆ. ಅಲ್ಲಿಂದ ಮುಂದೆ ಆ ಸಂಗೀತಕ್ಕೆ ಅದೇ ಹಣ್ಣಿನ ಪರಿಮಳ ಮತ್ತು ರೇಶಿಮೆಯ ನುಣುಪಿನ ದೇಹ ಅಂಟಿಕೊಂಡಂತೆ ಅದು ಕಿವಿಗೆ ಕೇಳಿಸಿದೆ, ಹಿನ್ನೆಲೆಯಲ್ಲಿ ಹೊಂಚು ಹಾಕುತ್ತಿರುವ ಮೃತ್ಯುವಿನ ಶಿಲ್ಕು ಕೂಡ ಸೇರಿ.

*

ಈ ಅಂಕಣದ ಎಲ್ಲಾ ಬರಹಗಳನ್ನೂ ಓದಲು ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 8:24 am, Sun, 29 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ