Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ

Writing : ‘ಪುಟಗಟ್ಟಲೆ ಬರೆದಾಗ, ಅನುವಾದಿಸಿದಾಗಲೂ ಹೇಳಬೇಕಾದುದನ್ನು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗುತ್ತಿಲ್ಲ ಎಂದೆನ್ನಿಸಿದಾಗೆಲ್ಲ ಮೌನವಾಗುತ್ತೇನೆ. ಬಹಿರಂಗದಲ್ಲಿ ಕದಲಿಸಿದ್ದೆಲ್ಲ ಅಂತರಂಗದೊಳಗೆ ಘನೀಕೃತಗೊಳ್ಳುತ್ತಾ ಹೋಗುತ್ತದೆ. ಕವಿತೆಗೆ ಸುಮ್ಮನೇ ಶರಣಾಗುತ್ತೇನೆ.‘ ಡಾ. ಸಂತೋಷ್ ನಾಯಕ್. ಆರ್.

Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ
Follow us
|

Updated on: May 29, 2022 | 6:30 AM

ಅವಿತಕವಿತೆ | AvithaKavithe : ನನಗೆ ಅನಿಸುವಂತೆ, ಇದುವರೆಗೂ ಭಾಷೆ ಜಗತ್ತನ್ನು ಕಟ್ಟುವುದಕ್ಕೆ ಒಳಗೊಂಡದ್ದಕ್ಕಿಂತಲೂ ಕೆಡವಲು, ಕೊಲ್ಲಲು, ಅಧಿಕಾರ ಸ್ಥಾಪಿಸಲು, ಬೇರೆಯವರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳಲು ಹೆಚ್ಚು ‘ಬಳಕೆ’ಯಾಗಿದೆ. ಪ್ರಾಣಿಗಳು ಸುಳ್ಳು ಹೇಳುವುದಿಲ್ಲ, ಇಲ್ಲದಿರುವುದನ್ನು ಹೇಳಿ ವಂಚಿಸುವುದಿಲ್ಲ. ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ. ಒಮ್ಮೊಮ್ಮೆ ಗದ್ಯದ ಮೂಲಕ ಪುಟಗಟ್ಟಲೆ ಬರೆದಾಗ, ಅನುವಾದಿಸಿದಾಗ ಇನ್ನೂ ಏನೋ ಹೇಳಬೇಕಾದುದನ್ನು ಪರಿಣಾಮಕಾರಿಯಾಗಿ ಹೇಳಲು ಸಾಧ್ಯವಾಗುತ್ತಿಲ್ಲ ಎಂದೆನ್ನಿಸಿದಾಗೆಲ್ಲ ಮೌನವಾಗುತ್ತೇನೆ. ಆಗ ಬಹಿರಂಗದಲ್ಲಿ ಕದಲಿಸಿದ್ದೆಲ್ಲ ಅಂತರಂಗದೊಳಗೆ ಘನೀಕೃತಗೊಳ್ಳುತ್ತಾ ಹೋಗುತ್ತದೆ. ಒಂದೊಂದೇ ಪದಗಳು ಕೈಹಿಡಿಯುವ ಸೂಚನೆ ಕಾಣುತ್ತಿದ್ದಂತೆ ಕವಿತೆಗೆ ಸುಮ್ಮನೇ ಶರಣಾಗುತ್ತೇನೆ. ಈ ಪ್ರಯಾಣ ಸಶಕ್ತವಾಗಿ ಸಾಗುತ್ತಿರುವಾಗ ಇನ್ನೇನೋ ಹೊಸ ಹೊಳಹುಗಳು ಗೋಚರಿಸಿ ಮತ್ತಷ್ಟು ಆಳಕ್ಕಿಳಿಯಬೇಕು ಎನ್ನಿಸಿ ಮುಂದುವರಿಯುತ್ತೇನೆ. ಹೀಗೆ ಹೊಮ್ಮಿದ ಕವಿತೆ, ಓದುಗರಲ್ಲಿ ಇನ್ನೂ ಅನೇಕಾರ್ಥಗಳಲ್ಲಿ ವಿಸ್ತರಿಕೊಂಡರೆ, ಅನುಭೂತಿ ನೀಡಿದರೆ ಕವಿಗೆ ಇನ್ನೇನು ಬೇಕು? ಈ ಸಾರ್ಥಕತೆಗಾಗಿ ನಾನು ಇತರರ ಕವನಗಳನ್ನು ಕೇಳುತ್ತೇನೆ, ಓದುತ್ತೇನೆ. ಹಾಗೆಯೇ ನನ್ನೊಳಗಿನ ಆಳಭಾವ, ತಲ್ಲಣ, ನೋವನ್ನು ಸೂಕ್ಷ್ಮವಾಗಿ ಹಿಡಿದಿಡುವುದು ಹೇಗೆ ಎಂಬ ಆಂತರಿಕ ತಳಮಳದಲ್ಲಿ ಮತ್ತೆ ಕವಿತೆ ಬರೆಯಲು ತೊಡಗುತ್ತೇನೆ.                                  ಡಾ. ಸಂತೋಷ್ ನಾಯಕ್. ಆರ್. (Dr. Santhosh Naik R)

ಲೋಕವ ವಂಚಿಸಿದ ಶಬ್ದಗಳೇ

ಇರುವುದ ಮರೆಮಾಚಿ
ಇಲ್ಲದಿರುವುದ ಕಾಣಿಸಲು
ಪದಕೋಶವನ್ನೇ ಖಾಲಿ ಮಾಡಿದ
ಶಬ್ದ ಜಾಲಗಳೇ

ನೀವು ಕಟ್ಟಿದ ಇಂದ್ರಜಾಲದ
ಭ್ರಮಾಲೋಕದ ಅಮಲ ತಲೆಗೇರಿಸಿ
ಹುಸಿಯ ಉಸುಕೊಳಗೆ ಮುಳುಗಿಸಿದ
ನುಡಿ ದಾಳಗಳೇ

ಬುದ್ಧಿಗೇಡಿ ಮನುಷ್ಯನ ಬುರುಡೆಯೊಳಗೆ
ಕುಳಿತು ನಾವು ಅವರು ಇವರು ಎಂದು
ಬೇಧ ಮಾಡಿದ ಸೋಗಲಾಡಿ
ಭಾಷಾ ಗೋಡೆಗಳೇ

ಕಥೆ ಪುರಾಣ ಸಿದ್ಧಾಂತಗಳ ಕಟ್ಟಿ
ಸುಳ್ಳುಗಳನ್ನು ಛೂ ಬಿಟ್ಟು
ನಂಬಿದ ಜನರ ನೋಡಿ ನಗುವ
ಮರಳು ಮಾತುಗಳೇ

ಪ್ರೇಮ ಅಂತಃಕರಣ ಮಮತೆ
ತುಂಡರಿಸಿ ಒತ್ತರಿಸಿ ಉಪ್ಪಿನಕಾಯಿ
ಹಾಕಿ ದ್ವೇಷ ಅಸೂಯೆ ಜೊತೆ ಚಪ್ಪರಿಸಿದ
ಚುಚ್ಚು ನುಡಿಗಳೇ

ಸ್ವಲ್ಪ ದಿನ ಕಾಯಿರಿ
ನಿಮ್ಮ ನಂಬಿದ ನಾವು
ನಮ್ಮ ನಂಬಿದ ನೀವು
ಗುರುತಿಲ್ಲದೆ ಅಳಿಯುವೆವು

ಆಗ
ಮಾತು ನುಡಿಗಳಿರದ ಜಗವು
ಬದುಕಿ ಉಸಿರಾಡುವುದು

AvithaKavithe Poetry Column by Dr Santhosh Naik R and Dr P Bharathidevi

ಸಂತೋಷ್ ಕೈಬರಹ

ಕವಿತೆ ಅವರದು ನೋಟ ನಿಮ್ಮದು

ಶಬ್ದ ಎನ್ನುವ ಜ್ಯೋತಿ ಜಗತ್ತನ್ನು ಬೆಳಗದೇ ಇದ್ದಿದ್ದರೆ ಜಗತ್ತು ಕತ್ತಲಾಗಿರುತ್ತಿತ್ತು ಎಂದಿದ್ದ ದಂಡಿ. ಆದರೆ, ಅದು ಸೃಷ್ಟಿಸಿರುವ ಜಾಲ ನಮ್ಮ ನಡುವೆ ಅರಿವು, ಬಾಂಧವ್ಯ ಗಟ್ಟಿಗೊಳಿಸುವ ಬದಲು ಕಂದಕಗಳನ್ನೇ ಸೃಷ್ಟಿಸಿರುವ, ಬೆಳಕಿನ ಬದಲು ಅಂಧಕಾರವನ್ನೇ ಹೆಚ್ಚಿಸಿರುವ ವೈಚಿತ್ರ್ಯ ಮೇಲಿನ ಮಾತಿಗೆ ಸವಾಲೊಡ್ಡುವ ಹಾಗಿದೆ. ಕವಿ ಸಂತೋಷ್ ನಾಯಕ್ ಅವರು ಬೆಸೆಯುವ ಸೇತುವೆಯಾಗದೇ ಗೋಡೆಯಾಗುವ, ಜಾಲ ಸೃಷ್ಟಿಸಿ ನಿಜ ಮರೆಸುವ ಮಾತಿನ ಈ ‘ಲೋಕ ವಂಚಿಸುವ’ ಮೋಡಿಯನ್ನು ಈ ಕವಿತೆಯಲ್ಲಿ ಕಾಣಿಸುತ್ತಾರೆ.

ಇದನ್ನೂ ಓದಿ
Image
Poetry : ಅವಿತಕವಿತೆ ; ನಾನೆಂದೂ ಕೇಳುವುದಿಲ್ಲ ಯಾವುದು ನಿನ್ನ ದೇಶ ಅಥವಾ ಅಲ್ಲೂ ಉಂಟಾ ಗಂಡಸರ ಪದಕೋಶ?
Image
Poetry : ಅವಿತಕವಿತೆ ; ಸತ್ತಾಗ ಜನ ಹೇಳುವರು ಇಂತವರ ‘ತಾಯಿ’ ತೀರಿಹೋದಳೆಂದು
Image
Poetry : ಅವಿತಕವಿತೆ ; ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು…
Image
Poetry ; ಅವಿತಕವಿತೆ : ಒಬ್ಬಂಟಿಗರಾಗುವ ಹೆಂಗಳೆಯರು ಬಿರುಗಾಳಿ ಬುಡಕೀಳದ ಹೆಮ್ಮರದ ಹಾಗೆ

ಭಾರತೀದೇವಿ ಕವನಗಳನ್ನೂ ಓದಿ : Poetry : ಅವಿತಕವಿತೆ ; ಗೀರು ಕಾಣದಂತೆ ಅವನು ಒಡಕು ಕಾಣದಂತೆ ಅವಳು

ನಮ್ಮ ಅನುಭವ ಹಾಗೂ ಜಗತ್ತನ್ನು ವಿವರಿಸಲು, ಸಂವಹನ ನಡೆಸಲು, ಯೋಚಿಸಲು ನಾವು ರೂಪಿಸಿಕೊಂಡಿರುವ ಭಾಷೆ ಒಳಜಗತ್ತಿನಿಂದ ಹೊರಬಂದು ಶಬ್ದಗಳ ರೂಪ ಪಡೆಯುವಾಗಲೇ ನಿಜದಿಂದ ದೂರವಾಗುತ್ತದೆ. ಹೀಗಾಗಿ ಯಾವ ಪದವೂ ಅನುಭವವನ್ನು ವಿವರಿಸುವುದು ಸಾಧ್ಯವೇ ಇಲ್ಲ. ಹೀಗೆ ಹೇಳಲು ಹೊರಟಾಗ ಅವರವರ ಅನುಭವ, ಗ್ರಹಿಕೆಗೆ ತಕ್ಕ ಹಾಗೆ ಆಯಾ ಅರ್ಥ ಹೊಮ್ಮಿಸುತ್ತಾ ನಮ್ಮ ಕೈಮೀರಿ ಹೋಗುತ್ತದೆ. ಹಲವು ಅರ್ಥಛಾಯೆಗಳು, ವಿರೋಧಾಭಾಸಗಳು, ತಪ್ಪು ಗ್ರಹಿಕೆಗಳು, ಹುಸಿ ಎಲ್ಲವೂ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಹೀಗೆ ನಮ್ಮ ಕೈತಪ್ಪಿ ಹೋಗುವುದು ಒಂದಾದರೆ ಇನ್ನೊಂದೆಡೆ ಸಂತೋಷ್ ಅವರು ಹೇಳುವ ಹಾಗೆ, ಸತ್ಯವನ್ನು ಮರೆಮಾಚಲು ಶಬ್ದಗಳು ಉಪಕರಣಗಳಾಗುತ್ತವೆ. ಉದ್ದೇಶಪೂರ್ವಕ ಕಥನಗಳ ಹೆಣಿಗೆ ‘ಇರುವುದನ್ನು ಮರೆಮಾಚಿ ಇಲ್ಲದಿರುವುದ ಕಾಣಿಸಲು’ ಪದಗಳನ್ನು ಬಳಸಿಕೊಳ್ಳುತ್ತವೆ. ಇದು ವಾಸ್ತವವನ್ನು ಮರೆಸಿ ‘ಇಂದ್ರಜಾಲ’ ಕವಿಸಿ, ‘ಭ್ರಮಾಲೋಕ’ ಸೃಷ್ಟಿಸಿ ಹುಸಿಯೇ ನಿಜವೆನ್ನುವಂತೆ ಮಾಡುತ್ತದೆ. ಇಂತಹ ಶಬ್ದಗಳನ್ನು ಕವಿ ‘ಹುಸಿಯ ಉಸುಕೊಳಗೆ ಮುಳುಗಿಸಿದ ನುಡಿ ದಾಳಗಳು’ ಎಂದು ಕರೆದಿದ್ದಾರೆ.

ನಾವು-ನೀವು ಎಂದು ಹೆಸರು ಕೊಟ್ಟು, ಹಾಗೆ ಮಾಡಿ ನಮ್ಮನ್ನು ದೂರವಿಟ್ಟ ಭಾಷೆ ನಮ್ಮ ನಡುವೆ ಕಂದಕವನ್ನೂ ಗೋಡೆಯನ್ನೂ ಸೃಷ್ಟಿಸಿರುವ ವಾಸ್ತವ ನಮ್ಮ ಮುಂದಿದೆ. ಹೀಗೆ ಒಡೆಯಲೆಂದೇ ಕಥೆ, ಪುರಾಣ, ಸಿದ್ಧಾಂತಗಳನ್ನು ಸೃಷ್ಟಿಸಲಾಗಿದೆ. ಇವುಗಳನ್ನು ಜನರ ಮೇಲೆ ಛೂ ಬಿಟ್ಟು ಅಧಿಕಾರವನ್ನು ಹಿಡಿದವರ ನಿಜ ಉದಾಹರಣೆ ನಮ್ಮ ಮುಂದಿದೆ. ನಮ್ಮದಲ್ಲದ ನಿಲುವು, ಧರ್ಮ, ನಂಬಿಕೆ ಹೊಂದಿರುವವರನ್ನು ಹಣಿಯಲು ಟ್ರೋಲ್ ಆರ್ಮಿಗಳು ಸಿದ್ಧವಾಗಿವೆ. ಇಂತಹ ಸಂದರ್ಭದ ಭ್ರಷ್ಟಗೊಂಡ, ಪ್ರೇಮ ಅಂತಃಕರಣಗಳೇ ಇಲ್ಲದ ಭಾಷೆಯನ್ನು ಸಂತೋಷ್ ಅವರು ಆತ್ಮವಂಚನೆಗೆ ದೂಡುವ, ಲೋಕ ವಂಚಿಸುವ ಭಾಷೆ ಎನ್ನುವಾಗ ಕೊನೆಯಲ್ಲಿ ಭಾಷೆಯೇ ಇಲ್ಲದ ಸ್ಥಿತಿ ಇಂತಹ ಒಡಕುಗಳಿಂದ ನಮ್ಮನ್ನು ಕಾಪಾಡಬಲ್ಲದು ಎಂಬ ನೆಲೆಗೆ ಬರುತ್ತಾರೆ.

ಇದನ್ನೂ ಓದಿ : New Book: ಶೆಲ್ಫಿಗೇರುವ ಮುನ್ನ; ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಅನುವಾದಿತ ಕೃತಿ ಇಂದಿನಿಂದ ಲಭ್ಯ

ಬಹುಶಃ ಭಾಷೆ ಇರುವವರೆಗೂ ಈ ಅರ್ಥೈಸುವಿಕೆಯ ಗೊಂದಲಗಳು, ಭಾಷಾ ಜಾಲ ಹರಡಿ ಮೋಸಗೊಳಿಸುವ ಬಗೆ ಇದ್ದೇ ಇರುತ್ತವೇನೋ. ಈ ಹುಸಿಯನ್ನೇ ನಂಬಿ ಹೊರಟ ನಮಗೆ ಅಳಿಗಾಲವಲ್ಲದೆ, ಉಳಿಗಾಲವಿಲ್ಲ. ಹೀಗೆ ಬಣ್ಣದ ನುಡಿ ಕಟ್ಟಿ, ನಾವೇ ಒಡೆದುಕೊಂಡು ಛಿದ್ರವಾಗಿ ನಮ್ಮನ್ನು ನಂಬಿದ ಭಾಷೆ, ಭಾಷೆಯನ್ನು ನಂಬಿದ ನಾವು ಅಳಿದ ಹೊತ್ತಿನಲ್ಲಿ ನಿಜವಾದ ಪ್ರೀತಿ, ಕರುಣೆಗಳಿಂದ ಒಬ್ಬರೊಡನೆ ಒಬ್ಬರು ಬೆಸೆದುಕೊಳ್ಳುವ, ಜೀವಂತ ಜಗತ್ತು ಉದಯಿಸಬಹುದು ಎನ್ನುತ್ತಾ ‘ಮಾತು ನುಡಿಗಳಿರದ ಜಗವು, ಬದುಕಿ ಉಸಿರಾಡುವುದು’ ಎನ್ನುತ್ತಾರೆ ಕವಿ. ಅಂತರಂಗದಲ್ಲಿ, ಸಂಬಂಧಗಳಲ್ಲಿ, ಸಮಾಜದಲ್ಲಿ ಎಲ್ಲೆಡೆಯೂ ಮಾತು ಸೋಲುತ್ತಾ, ಹುಸಿ, ಭ್ರಮೆ ವಿಜೃಂಭಿಸುತ್ತಾ ನಿಜದಿಂದ ನಮ್ಮನ್ನು ದೂರ ಸೆಳೆಯುತ್ತಿರುವ ಝಳ ನಮ್ಮೆಲ್ಲರನ್ನೂ ತಟ್ಟುತ್ತಿದೆ. ಇದರಿಂದ ಬಿಡಿಸಿಕೊಳ್ಳುವ ಹಾದಿ ಎಂತು? ಈ ಹುಡುಕಾಟ ಎಲ್ಲರದೂ ಹೌದು.                                                                                ಡಾ. ಭಾರತೀದೇವಿ. ಪಿ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ