Literature: ಅನುಸಂಧಾನ; ನಾನು ಎನ್ನುವುದು ನಿಜಕ್ಕೂ ಇದೆಯೆ?

Literature: ಅನುಸಂಧಾನ; ನಾನು ಎನ್ನುವುದು ನಿಜಕ್ಕೂ ಇದೆಯೆ?
ಪತ್ರಕರ್ತ ಅನಿಲ್ ಅನಂತಸ್ವಾಮಿ

Reading : ಮನುಷ್ಯ, ಮನಸ್ಸು, ಬದುಕು ಮುಂತಾದ ಮೂಲಭೂತ ವಿಚಾರಗಳ ಕುರಿತೇ ಜಿಜ್ಞಾಸುಗಳಾದವರಿಗೆ ಸಾಹಿತ್ಯ ಅದನ್ನು ಕಂಡುಕೊಳ್ಳಲು ಇರುವ ಹಲವು ಬಗೆಯ ಆಕರಗಳಲ್ಲಿ ಒಂದು. ಹಾಗಾಗಿ ಅವರು ಸಾಹಿತ್ಯ ಪರೋಕ್ಷವಾಗಿ ಪ್ರಯತ್ನಿಸುವ ಮಾನವಿಕ ಸಂಗತಿಗಳನ್ನೆಲ್ಲಓದುತ್ತಿರುತ್ತಾರೆ.

ಶ್ರೀದೇವಿ ಕಳಸದ | Shridevi Kalasad

|

May 15, 2022 | 9:22 AM

ಅನುಸಂಧಾನ | Anusandhana: ಒಂದು ಕಾಲದಲ್ಲಿ ಲಂಡನ್ನಿನ ‘ನ್ಯೂ ಸೈಂಟಿಸ್ಟ್’ ಮ್ಯಾಗಝೀನಿನ ಸಹ ಸಂಪಾದಕರಾಗಿಯೂ, ಲೇಖಕರಾಗಿಯೂ ಬರೆಯುತ್ತಿದ್ದ ಅನಿಲ್ ಅನಂತಸ್ವಾಮಿ ಖ್ಯಾತ ಪತ್ರಕರ್ತರು. ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ವೈಜ್ಞಾನಿಕ ಬರವಣಿಗೆ ಕುರಿತ ಕಾರ್ಯಕ್ರಮಗಳಲ್ಲಿ ಅತಿಥಿ ಸಂಪಾದಕರಾಗಿ ಭಾಗವಹಿಸುತ್ತಿದ್ದವರು. ಬೆಂಗಳೂರಿನ ನ್ಯಾಶನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸಸ್‌ನಲ್ಲಿ ವಾರ್ಷಿಕ ವೈಜ್ಞಾನಿಕ ಬರವಣಿಗೆಯ ಶಿಬಿರಗಳನ್ನು ಯೋಜಿಸಿ, ನಿರ್ವಹಿಸಿ, ಬೋಧಿಸಿ ಕೂಡ ಪರಿಚಿತರು. ಇವರ ಮೊದಲ ಕೃತಿ ‘ದ ಎಜ್ಜ್ ಆಫ್ ಫಿಸಿಕ್ಸ್‌ ’ 2010ರ ವರ್ಷದ ಪುಸ್ತಕ ಎಂದು ಆಯ್ಕೆಯಾಗಿತ್ತು. ‘ದ ಮ್ಯಾನ್ ವಾಸಂಟ್ ದೇರ್’ ಇವರ ಎರಡನೆಯ ಕೃತಿ. ಇದು 2016 ರಲ್ಲಿ ಪೆನ್ ಸಂಸ್ಥೆ ಇ. ಒ. ವಿಲ್ಸನ್ ಹೆಸರಿನಲ್ಲಿ ಕೊಡುವ ಲಿಟರರಿ ಸೈನ್ಸ್ ರೈಟಿಂಗ್ ಅವಾರ್ಡ್‌ಗೂ ಪಾತ್ರವಾಗಿತ್ತು. ಆ ಬಳಿಕ ಅನಿಲ್ ಅನಂತಸ್ವಾಮಿಯವರು ಇತರ ಹಲವಾರು ಕೃತಿಗಳನ್ನು ಬರೆದಿದ್ದು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅವರ ಕೃತಿಗಳು ಅನುವಾದಗೊಂಡಿವೆ. ಪ್ರಸ್ತುತ ಇಲ್ಲಿ ಕಾಣಿಸಲಾದ ಭಾಗವನ್ನು ‘ದ ವ್ಯಾನ್ ವಾಸಂಟ್ ದೇರ್’ ಕೃತಿಯಿಂದ ಆರಿಸಿಕೊಳ್ಳಲಾಗಿದೆ. ನರೇಂದ್ರ ಪೈ, ಲೇಖಕ, ಅನುವಾದಕ (Narendra Pai)

ಬೌದ್ಧ ಧರ್ಮದ ಅನುಯಾಯಿಗಳಾದ ಭಾರತೀಯರಲ್ಲಿ ಕಂಡುಬರುವ ಮಾಧ್ಯಮಿಕ ಪರಂಪರೆಯವರಿಗೆ ಸೇರಿದ ಪಠ್ಯವೊಂದರಲ್ಲಿ ನರಭಕ್ಷಕರನ್ನು ಮುಖಾಮುಖಿಯಾದ ಮನುಷ್ಯನ ಈ ಕತೆ ಬರುತ್ತದೆ. ಬೌದ್ಧ ಪರಂಪರೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಮನುಷ್ಯನ ನಿಜವಾದ ಅಸ್ತಿತ್ವವೇನು, ಅವನ ‘ಸ್ವ’ದ ಪರಿಕಲ್ಪನೆಯೇನು ಎನ್ನುವ ವೈಚಾರಿಕತೆಯೇನಿದೆ, ಅದನ್ನು ವಿವರಿಸುವ ಕತೆಗಳಲ್ಲಿಯೇ ಇದು ಕೊಂಚ ವಿಭಿನ್ನವಾದ, ಸ್ವಲ್ಪ ಇರಿಸುಮುರಿಸು ಉಂಟುಮಾಡುವಂಥ ಕತೆ ಎನ್ನಬಹುದು.

ಸುದೀರ್ಘವಾದ ಯಾತ್ರೆ ಹೊರಟಿದ್ದ ಒಬ್ಬ ವ್ಯಕ್ತಿ ಒಮ್ಮೆ ರಾತ್ರಿ ಹೊತ್ತಿನಲ್ಲಿ ಎಲ್ಲಾದರೂ ತಂಗಿಕೊಳ್ಳಲು ಆಶ್ರಯ ಸಿಗಬಹುದೇ ಎಂದು ಹುಡುಕುತ್ತಿದ್ದಾಗ, ದೂರದಲ್ಲಿ ಯಾರೂ ವಾಸವಿಲ್ಲದ ಒಂದು ಒಂಟಿಮನೆಯನ್ನು ಕಾಣುತ್ತಾನೆ. ಸರಿ, ಇವತ್ತು ರಾತ್ರಿ ಇಲ್ಲಿಯೇ ಉಳಿದರಾಯಿತು ಎಂದುಕೊಂಡು ಆ ಮನೆಯನ್ನು ಹೊಕ್ಕು ಮಲಗುವ ತಯಾರಿ ಮಾಡುತ್ತಿರುತ್ತಾನೆ. ಆ ಹೊತ್ತಿಗೆ ಅಲ್ಲಿಗೆ ನರಭಕ್ಷಕನೊಬ್ಬ ಒಂದು ಮೃತದೇಹವನ್ನು ಹೊತ್ತುಕೊಂಡು ಬರುತ್ತಾನೆ. ಇನ್ನೇನು ಅದು ಆ ಮೃತದೇಹವನ್ನು ಭಕ್ಷಿಸತೊಡಗಬೇಕು ಎನ್ನುವಾಗ, ಅದನ್ನೇ ಹುಡುಕಿಕೊಂಡೋ ಅಟ್ಟಿಸಿಕೊಂಡೋ ಬಂದಂತೆ ಇನ್ನೊಬ್ಬ ನರಭಕ್ಷಕ ಅಲ್ಲಿಗೆ ತಲುಪುತ್ತಾನೆ. ಹೊಸದಾಗಿ ಬಂದ ನರಭಕ್ಷಕನಿಗೂ, ಮೊದಲನೆಯವನಿಗೂ ಆ ಶವ ಯಾರಿಗೆ ಸೇರಿದ್ದು, ಅದನ್ನು ನಿಜಕ್ಕೂ ಇಲ್ಲಿಗೆ ಹೊತ್ತು ತಂದವರು ಯಾರು ಎನ್ನುವ ಬಗ್ಗೆ ಚರ್ಚೆ ಶುರುವಾಗಿ, ಅದು ಇತ್ಯರ್ಥವಾಗದ ಜಗಳವಾಗಿ ಪರಿವರ್ತನೆಯಾಗುತ್ತದೆ. ಆಗ ಇಬ್ಬರೂ ಸೇರಿ ಈ ಮನುಷ್ಯನ ಬಳಿ ತಮ್ಮ ಜಗಳವನ್ನು ಇತ್ಯರ್ಥ ಮಾಡುವಂತೆ ಕೇಳಿಕೊಳ್ಳುತ್ತಾರೆ. ಆ ನರಭಕ್ಷಕರಿಗೆ ಈಗ ಉತ್ತರ ಬೇಕು. ಶವವನ್ನು ಮನೆಗೆ ಹೊತ್ತು ತಂದವರು ಯಾರು?

ಮನುಷ್ಯನಿಗೆ ತಾನು ಸಿಕ್ಕಿ ಹಾಕಿಕೊಂಡ ಪರಿಸ್ಥಿತಿ ಎಂಥಾದ್ದು ಎನ್ನುವುದು ಚೆನ್ನಾಗಿ ಅರ್ಥವಾಗುತ್ತದೆ. ಒಬ್ಬ ನರಭಕ್ಷಕ ತನ್ನನ್ನು ಕೊಲ್ಲದಿದ್ದರೆ ಇನ್ನೊಬ್ಬ ಕೊಲ್ಲುವುದಂತೂ ನಿಶ್ಚಿತ. ಹಾಗಾಗಿ ಸುಳ್ಳು ಕೆಲಸಕ್ಕೆ ಬರುವುದಿಲ್ಲ. ಸತ್ಯವನ್ನೇ ಹೇಳುವುದು ವಾಸಿ ಎಂದು ಯೋಚಿಸಿ, ಮೊದಲನೆಯ ನರಭಕ್ಷಕನೇ ಹೆಣ ಹೊತ್ತು ತಂದಿದ್ದು ಎಂದು ಹೇಳಿಬಿಡುತ್ತಾನೆ. ತಕ್ಷಣವೇ ಕ್ರೋಧಾವಿಷ್ಟ ಎರಡನೆಯ ನರಭಕ್ಷಕ ಮನುಷ್ಯನ ಒಂದು ತೋಳನ್ನು ಹರಿದು ತೆಗೆದು ತಿಂದುಬಿಡುತ್ತಾನೆ. ಇದು ಕತೆಗೆ ವಿಲಕ್ಷಣವಾದ ಒಂದು ತಿರುವನ್ನು ಕೊಡುತ್ತದೆ. ಎರಡನೆಯ ನರಭಕ್ಷಕ ಮನುಷ್ಯನ ತೋಳು ಹರಿದು ತಿಂದ ತಕ್ಷಣವೇ ಮೊದಲನೆಯ ನರಭಕ್ಷಕ ತಾನು ಹೊತ್ತು ತಂದ ಶವದ ಒಂದು ಕೈಯನ್ನು ಕಿತ್ತು ಮನುಷ್ಯನಿಗೆ ಜೋಡಿಸಿ ಅವನನ್ನು ಮೊದಲಿನಂತೆ ಮಾಡಿಬಿಡುತ್ತದೆ. ಎರಡನೆಯ ನರಭಕ್ಷಕ ಮನುಷ್ಯನ ಕಾಲು ಕಿತ್ತರೆ, ಮೊದಲನೆಯ ನರಭಕ್ಷಕ ಶವದ ಕಾಲು ಕಿತ್ತು ಮನುಷ್ಯನ ದೇಹಕ್ಕೆ ಜೋಡಿಸುತ್ತದೆ. ಇದು ಹೀಗೆಯೇ ನಡೆದು ಮನುಷ್ಯನ ಇಡೀ ದೇಹ, ಕೈಕಾಲು, ಮುಂಡ, ತಲೆ ಕೂಡ ಸೇರಿದಂತೆ ಇಬ್ಬರು ನರಭಕ್ಷಕರ ಪಾಲಾಗುತ್ತದೆ. ಬದಲಾಗಿ ಮನುಷ್ಯನಿಗೆ ಶವದ ದೇಹದ ಭಾಗಗಳು ಸಿಗುತ್ತ ಹೋಗುತ್ತದೆ. ಕೊನೆಯಲ್ಲಿ ಜೀವಂತ ದೇಹವನ್ನು ಪೂರ್ತಿಯಾಗಿ ತಿಂದ ತೃಪ್ತಿಯಿಂದ ಇಬ್ಬರೂ ಬಾಯೊರೆಸಿಕೊಂಡು ತೇಗಿ ಜಾಗ ಖಾಲಿ ಮಾಡುತ್ತಾರೆ.

Who am I Anusandhana Column by Narendra Pai

ಅನಿಲ್ ಅನಂತಸ್ವಾಮಿ ಕೃತಿ

ನರಭಕ್ಷಕರಿಂದ ಪಾರಾದ ಮನುಷ್ಯ ಇನ್ನಿಲ್ಲದಂತೆ ಕಂಗಾಲಾಗಿದ್ದ. ಅವನ ಕಣ್ಣೆದುರು ನಡೆದಿದ್ದನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಅವನಿಂದ ಸಾಧ್ಯವಾಗಿರಲಿಲ್ಲ. ಅವನು ಯಾವ ದೇಹವನ್ನು ತಳೆದು ಹುಟ್ಟಿದ್ದನೋ ಅದನ್ನು ನರಭಕ್ಷಕರು ತಿಂದು ಮುಗಿಸಿದ್ದರು. ಸಂಪೂರ್ಣವಾಗಿ ಬೇರೆ ಯಾರದೋ ದೇಹವನ್ನು ಅವನೀಗ ಹೊತ್ತಿದ್ದ. ಅವನಿಗೀಗ ತನ್ನದೆಂಬ ಒಂದು ಭೌತಿಕ ಅಸ್ತಿತ್ವ ಇದೆಯೇ ಅಥವಾ ಇಲ್ಲವೆ? ಹೌದೆಂದಾದಲ್ಲಿ, ಅದು ಗುರುತಿಸಲ್ಪಡಬೇಕಾದ್ದು ಅವನ ದೇಹದಿಂದಲೆ ಅಥವಾ ಬೇರೊಬ್ಬನ ದೇಹದಿಂದಲೆ? ಉತ್ತರ ಇಲ್ಲ ಎಂದಾದಲ್ಲಿ ಅವನೀಗ ಕಾಣುತ್ತಿರುವ ಅವನದೇ ದೇಹದಂಥ ದೇಹದೊಂದಿಗೆ ಅವನ ಸಂಬಂಧವಾದರೂ ಏನು?

ಮರುದಿನ ಅವನು ಹಾದಿಯಲ್ಲಿ ನಡೆದು ಸಾಗುತ್ತಿರಬೇಕಾದರೆ ತಲೆ ಮಾತ್ರ ಭಯಂಕರವಾದ ಗೊಂದಲದ ಗೂಡಾಗಿತ್ತು. ಕೊನೆಗೆ ಅವನು ಬೌದ್ಧ ಭಿಕ್ಷುಗಳ ಒಂದು ಗುಂಪನ್ನು ಕಾಣುತ್ತಾನೆ. ಅವನ ಬಳಿ ಕೇಳಲು ಪ್ರಶ್ನೆಗಳಿದ್ದವು, ಧಗಧಗ ಉರಿಯುತ್ತಿರುವ ಪ್ರಶ್ನೆ. ತನಗೆ ಭೌತಿಕ ಅಸ್ತಿತ್ವ ಇದೆಯೇ ಇಲ್ಲವೆ? ಭಿಕ್ಷುಗಳು ಅವನಿಗೆ ಪ್ರಶ್ನೆಯಿಂದಲೇ ಉತ್ತರಿಸುತ್ತಾರೆ. ನೀನು ಯಾರು? ಆ ಮನುಷ್ಯನಿಗೆ ಈ ಪ್ರಶ್ನೆಯ ಉತ್ತರ ತಿಳಿದಿರಲಿಲ್ಲ. ಈಗ ತಾನು ಒಂದು ನಿರ್ದಿಷ್ಟ ವ್ಯಕ್ತಿಯೇ ಎನ್ನುವ ಕುರಿತು ಕೂಡಾ ಅವನಿಗೆ ಸ್ಪಷ್ಟವಿರಲಿಲ್ಲ. ಅವನು ನರಭಕ್ಷಕರ ಜೊತೆ ತನಗಾದ ವಿಚಿತ್ರವೂ ಭಯಂಕರವೂ ಆದ ಅನುಭವವನ್ನು ಆ ಭಿಕ್ಷುಗಳಿಗೆ ವಿವರಿಸುತ್ತಾನೆ.

ಆಧುನಿಕ ನ್ಯೂರೋಸೈಂಟಿಸ್ಟರ ಬಳಿ ಇದೇ ಪ್ರಶ್ನೆಯನ್ನು ಅವನು ಕೇಳಿದ್ದರೆ ಅವರೇನು ಉತ್ತರ ಕೊಡುತ್ತಿದ್ದರು? ಕೆಲವರಂತೂ ಜೀವವಿಜ್ಞಾನದ ಚೌಕಟ್ಟಿನಲ್ಲಿ ನರಭಕ್ಷಕರು ಸಾಧ್ಯವಾಗಿಸಿದಂಥ ಒಂದು ದೇಹದ ಅದಲು ಬದಲು ಪ್ರಕ್ರಿಯೆ ಅಸಂಭವ ಎಂದು ತಳ್ಳಿ ಹಾಕುತ್ತಿದ್ದರಾದರೂ, ತಮ್ಮ ಅರಿವಿನ ಮಿತಿಯಾಚೆಯದನ್ನು ವಿವರಿಸುವ ಹಂಬಲ ಅವರಲ್ಲಿ ಕೆಲವರಿಗಾದರೂ ಆಗಿಯೇ ಆಗುತ್ತಿತ್ತು. ಅಂಥ ಉತ್ತರಗಳು, ‘ನಾನು’ ಎನ್ನುವ ಒಂದು ಪರಿಕಲ್ಪನೆಯನ್ನು ವಿವರಿಸಲು ಪ್ರಯತ್ನಿಸುವ ಬಗೆಯೇನಿದೆ, ಈ ಪುಸ್ತಕ ಅದರತ್ತ ತನ್ನ ಕೇಂದ್ರ ಗಮನ ನೆಟ್ಟಿದೆ.

ಪ್ರತಿಕ್ರಿಯೆಗಾಗಿ : tv9kannadadigital@gmail.com

(ಮುಂದಿನ ಸಂಧಾನ : 29.5.2022)

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada