ವೈಶಾಲಿಯಾನ : ಸ್ತ್ರೀಯರ ಸಂಗೀತ ಪುರುಷರ ಸಂಗೀತ ಎಂಬ ಪರಿಕಲ್ಪನೆಯೇ ಹಾಸ್ಯಾಸ್ಪದವಲ್ಲವೇ?

ವೈಶಾಲಿಯಾನ : ಸ್ತ್ರೀಯರ ಸಂಗೀತ ಪುರುಷರ ಸಂಗೀತ ಎಂಬ ಪರಿಕಲ್ಪನೆಯೇ ಹಾಸ್ಯಾಸ್ಪದವಲ್ಲವೇ?
ಕಲಾವಿದರಾದ ರಾಜಶೇಖರ ಮನ್ಸೂರ್, ಶಿವಕುಮಾರ ಶರ್ಮಾ, ಕಿಶೋರಿ ಅಮೋನ್ಕರ್, ಬೆಂಗಳೂರು ನಾಗರತ್ನಮ್ಮ

Artist Religion Gender: “ಒಬ್ಬ ಮುಸ್ಲಿಂ ಸಂಗೀತ ಕಲಾವಿದ ಪ್ರಬುದ್ಧ ಕಲಾವಿದನಾದರೆ ‘ಉಸ್ತಾದ್’ ಆಗುತ್ತಾನೆ. ಹಿಂದೂ ಆಗಿದ್ದರೆ , ‘ಪಂಡಿತ್’ ಎನಿಸಿಕೊಳ್ಳುತ್ತಾನೆ. ಆದರೆ ಅದ್ವಿತೀಯ ಸಂಗೀತ ಕಲಾವಿದೆಯರಾದ ಕೇಸರ್‌ಬಾಯಿ, ಮೂಗೂಬಾಯಿಯರು ಮಾತ್ರ ಕೇವಲ ‘ಬಾಯಿ’ಯರಾಗಿಯೇ ಉಳಿಯುತ್ತಾರೆ”

ಶ್ರೀದೇವಿ ಕಳಸದ | Shridevi Kalasad

|

May 14, 2022 | 11:09 AM

ವೈಶಾಲಿಯಾನ | Vaishaliyaana : ಈಗ ಕೆಲವು ದಿನಗಳ ಹಿಂದೆ ವಿಖ್ಯಾತ ಸಂತೂರ್ ಕಲಾವಿದ ಪಂಡಿತ್ ಶಿವಕುಮಾರ್ ಶರ್ಮ ನಮ್ಮನ್ನಗಲಿದರು. ಕಾಶ್ಮೀರದ ಜನಪದ ವಾದ್ಯವಾದ ಸಂತೂರನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮುಖ್ಯವಾಹಿನಿಗೆ ತಂದ ಹೆಗ್ಗಳಿಕೆ ಪಂಡಿತ್ ಶಿವಕುಮಾರ ಶರ್ಮಾರಿಗೆ ಸಲ್ಲಬೇಕು. ವೇದ ಕಾಲದ ‘ಶತ ತಂತ್ರಿ’ ವೀಣೆ , ತರುವಾಯ ‘ವನ ವೀಣ’ ವಾದ್ಯಗಳನ್ನು ಸಂತೂರಿನ ಪ್ರಾಚೀನ ಸ್ವರೂಪವೆಂದು ಹೇಳಲಾಗುತ್ತದೆ. ಸೂಫಿ ಕಲಾವಿದರು ಕಾಶ್ಮೀರದಲ್ಲಿ ಸೂಫಿಯಾನ ಕಲಾಂಗಳ ವಾದ್ಯ ಸಮೂಹದಲ್ಲಿ ರಬಾಬ್ , ಸಿತಾರ್ ಮೊದಲಾದ ವಾದ್ಯಗಳೊಡನೆ ಸಂತೂರನ್ನೂ ಬಳಸುತ್ತಿದ್ದರು. ಈ ಸೂಫಿಯಾನ ವಾದ್ಯದಲ್ಲಿ ಪ್ರಪ್ರಥಮವಾಗಿ ಹೊಸ ಬಗೆಯ ಅವಿಷ್ಕಾರಗಳನ್ನು ಮಾಡಿ , ವಿನೂತನ ಪ್ರಯೋಗವನ್ನು ನಡೆಸಿದವರು ಪಂಡಿತ್ ಶಿವಕುಮಾರ ಶರ್ಮಾ. ಅವರು ಬಳಸುತ್ತಿದ್ದ ಸಂತೂರ್ ವಾದ್ಯಕ್ಕೆ ನೂರರ ಬದಲು 86 ತಂತಿಗಳಷ್ಟೇ ಇದ್ದವು. ಶಾಸ್ತ್ರೀಯ ಸಂಗೀತದ ಜೀವಾಳವಾದ ರಾಗ್‌ಧಾರಿ ಸಂಗೀತದಲ್ಲಿ ರಾಗ ವಿಸ್ತಾರದ ಅವಿಭಾಜ್ಯ ಅಂಗಗಳಾದ ‘ಮೀಂಡ್’, ‘ಗಮಕ್’ಗಳನ್ನು ಸಂತೂರ್‌ನಲ್ಲಿ ನುಡಿಸುವುದು ಶಕ್ಯವೇ? ಇದೊಂದು ಅನೇಕ ಕುಂದು ಕೊರತೆಗಳಿರುವ ವಾದ್ಯ ಎಂದು ಮೂಗು ಮುರಿಯುವ ವಿಮರ್ಶಕರಿಗೇನೂ ಬರವಿರಲಿಲ್ಲ. ಆದರೆ ಇವೆಲ್ಲ ನಿಂದೆ ಅಪಹಾಸ್ಯಗಳನ್ನೂ ಜೀರ್ಣಿಸಿಕೊಂಡು ಎಲ್ಲರೂ ನಿಬ್ಬೆರಗಾಗುವಂತೆ ಪಂಡಿತ್ ಶಿವಕುಮಾರ ಶರ್ಮಾ ಬೆಳೆದರು. ಡಾ. ಕೆ. ಎಸ್. ವೈಶಾಲಿ (Dr. K.S. Vaishali)

(ಯಾನ 10)

ಐವತ್ತರ ದಶಕದಲ್ಲಿ ಚಲನಚಿತ್ರ ರಂಗದ ಅನಭಿಷಿಕ್ತ ದೊರೆಯಾಗಿದ್ದ ವಿ. ಶಾಂತಾರಾಮ್‌ರವರ ಚಲನಚಿತ್ರ ‘ಝನಕ್ ಝನಕ್ ಪಾಯಲ್ ಬಾಜೆ’ಗೆ ಸಂಗೀತ ಸಂಯೋಜನೆ ಮಾಡಲು ಮುಂಬಯಿಗೆ ಆಗಮಿಸಿದ ಪಂಡಿತ್ ಶರ್ಮ ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ. ಅತ್ಯುತ್ತಮ ತಬಲಾವಾದಕರೂ ಆಗಿದ್ದ ಪಂಡಿತ್ ಶರ್ಮ ತಮ್ಮ ಸಂತೂರ್ ವಾದನದಲ್ಲಿಯೂ ಬಹಳ ವೈಶಿಷ್ಟ್ಯಪೂರ್ಣವಾದ ‘ಲಯಕಾರಿ’ಗೆ ಹೆಸರುವಾಸಿಯಾಗಿದ್ದರು. ನುರಿತ ಸಂಗೀತ ಕಲಾವಿದರೂ ಕೇಳರಿಯದ ಅನೇಕ ಅಪ್ರಚಲಿತ ರಾಗಗಳನ್ನು ಲೀಲಾಜಾಲವಾಗಿ ಹಾಡಬಲ್ಲ ಅಪರೂಪದ ಪಾಂಡಿತ್ಯವನ್ನು ಹೊಂದಿದ್ದ, ಕರ್ನಾಟಕ ವಿಶ್ವವಿದ್ಯಾನಿಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ, ಅತ್ರೌಳಿ- ಜೈಪುರ್ ಘರಾನಾದ ಪ್ರಖ್ಯಾತ ಗಾಯಕರಾದ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್‌ರವರ ಸುಪುತ್ರ, ಪಂಡಿತ್ ಡಾ. ರಾಜಶೇಖರ್ ಮನ್ಸೂರ್‌ರವರೂ ಪಂಡಿತ್ ಶಿವಕುಮಾರ್ ಶರ್ಮರವರ ನಿಧನದ ಕೆಲವೇ ದಿನಗಳ ಹಿಂದೆ ವಿಧಿವಶರಾದರು.

ಈ ಇಬ್ಬರು ಶ್ರೇಷ್ಠ ಸಂಗೀತ ಕಲಾವಿದರ ಬಗ್ಗೆ ಯೋಚಿಸುತ್ತಿದ್ದ ನನಗೆ ಭಾರತೀಯ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಪ್ರವರ್ಧಮಾನಕ್ಕೆ ಬರುವ ಮೊದಲು ಕಲಾವಿದರು ಎದುರಿಸಬೇಕಾದ ಗಂಭೀರ ಸಮಸ್ಯೆ- ಸವಾಲುಗಳಿಗೆ ಸಂಬಂಧಿಸಿದಂತೆ ಮಹಿಳೆಯರ ಹಾದಿ ಇನ್ನೂ ದುರ್ಗಮವಾಗಿತ್ತು ಎಂದೆನಿಸಿತು. ನಮ್ಮ ಸಮಕಾಲೀನ ಸಂದರ್ಭದಲ್ಲಿ ಅನೇಕ ಪ್ರತಿಭಾವಂತ ಹೆಣ್ಣು ಮಕ್ಕಳು ಈ ಕ್ಷೇತ್ರದಲ್ಲಿ ಮಿಂಚುತ್ತಿರಬಹುದು. ಆದರೆ ಇವರ ಇಂದಿನ ಆತ್ಮವಿಶ್ವಾಸಕ್ಕೆ, ಪ್ರಗತಿಗೆ, ಅದಮ್ಯ ಸಾಹಸಿಗಳಾಗಿ, ಮೊದಲಗಿತ್ತಿಯರಾಗಿ ಇಂದಿನ ಪೀಳಿಗೆಯ ಕಲಾವಿದೆಯರಿಗೆ ಮಾದರಿಯಾದಂಥ ಹಿಂದಿನ ತಲೆಮಾರಿನ ಕಲಾವಿದೆಯರು ಕಾರಣವಲ್ಲವೇ? ಆ ತಲೆಮಾರಿನ ಸಂಗೀತ ಕಲಾವಿದೆಯರ ಸಂಕಷ್ಟಗಳು ನನಗೆ ನೆನಪಾದವು. ಆ ಒಂದು ಐತಿಹಾಸಿಕ ಕಾಲಘಟ್ಟದಲ್ಲಿ ಈ ಅಪ್ರತಿಮ ಕಲಾವಿದೆಯರು ಮಹಿಳೆಯರಾಗಿ ಹೇಗೆ ಬದುಕಿದರು? ಪುರುಷ ಪ್ರಧಾನ ಸಮಾಜದಲ್ಲಿ ಅವರು ಎದುರಿಸಿದ ಧರ್ಮ ಸಂಕಟಗಳು, ಸತ್ವ ಪರೀಕ್ಷೆಗಳು , ತುಮುಲ -ಬೇಗುದಿಗಳು ಯಾವ ಬಗೆಯವು? ಅವರ ದೈನಂದಿನ ಬದುಕಿನಲ್ಲಿ ಸಂಗೀತ ಕಲೆ ಎಷ್ಟು ಮಹತ್ವವನ್ನು ಹೊಂದಿತ್ತು? ಯೌವನದಿಂದಾಚೆಗೂ ವರ್ಷಾನುಗಟ್ಟಲೆ ಅವರು ಸಂಗೀತವನ್ನು ಹೇಗೆ ಮುಂದುವರೆಸಿಕೊಂಡು ಹೋದರು? ಸಂಗೀತ ಅವರ ಜೀವನದ ಮುಖ್ಯ ನಿರ್ಣಯಗಳನ್ನು ಹೇಗೆ ಪ್ರಭಾವಿಸಿತು? ಅವರು ಯಾವ ಕಾರಣಕ್ಕಾಗಿ ಸಂಗೀತವನ್ನು ಆಯ್ಕೆ ಮಾಡಿಕೊಂಡರು? ಅವರ ಕೌಟುಂಬಿಕ ಜೀವನ ಹೇಗಿತ್ತು? ಜೀವನದ ಬಗ್ಗೆ ಅವರ ದೃಷ್ಟಿಕೋನ ಹೇಗಿತ್ತು? – ಹೀಗೆ ನನ್ನ ಆಲೋಚನಾ ಲಹರಿ ಸಾಗಿತು.

ಸಂದರ್ಶನವೊಂದರಲ್ಲಿ ಕಿರಾನಾ ಘರಾನೆಯ ಸುಪ್ರಸಿದ್ಧ ಗಾಯಕಿ ಗಂಗೂಬಾಯಿ ಹಾನಗಲ್‌ರವರು “ಒಬ್ಬ ಮುಸ್ಲಿಂ ಸಂಗೀತ ಕಲಾವಿದ ಪ್ರಬುದ್ಧ ಕಲಾವಿದನಾದರೆ ‘ಉಸ್ತಾದ್’ ಆಗುತ್ತಾನೆ. ಹಿಂದೂ ಆಗಿದ್ದರೆ , ‘ಪಂಡಿತ್’ ಎನಿಸಿಕೊಳ್ಳುತ್ತಾನೆ. ಆದರೆ ಅದ್ವಿತೀಯ ಸಂಗೀತ ಕಲಾವಿದೆಯರಾದ ಕೇಸರ್‌ಬಾಯಿ, ಮೂಗೂಬಾಯಿಯರು ಮಾತ್ರ ಕೇವಲ ‘ಬಾಯಿ’ಯರಾಗಿಯೇ ಉಳಿಯುತ್ತಾರೆ” ಎಂದು ಖಡಕ್ಕಾಗಿ ಲಿಂಗ ತಾರತಮ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ಇದೊಂದು ಅಪ್ರಿಯವಾದ ಸತ್ಯ. ಹಾಗೆಂದು ನಾನೇನು ಇಲ್ಲಿ ಒಂದು Feminist Enclave ಸ್ಥಾಪನೆ ಮಾಡಲು ಹೊರಟಿಲ್ಲವಾದರೂ ಈ ಸಂಗತಿಗಳನ್ನು ಪುನರಾವಲೋಕನ ಮಾಡಿ ಪರಾಮರ್ಶಿಸುವ ಅಗತ್ಯವಿದೆಯೆಂಬುದನ್ನು ಮಾತ್ರ ಹೇಳುತ್ತಿದ್ದೇನೆ.

ಇಪ್ಪತ್ತನೆಯ ಶತಮಾನದ ಮೂವತ್ತರ ದಶಕದವರೆಗೂ ದಕ್ಷಿಣದಲ್ಲಿ ದೇವದಾಸಿಯರನ್ನೊಳಗೊಂಡು ಯಾವ ಗಾಯಕಿಯರೂ ತಮ್ಮ ಗಾಯನದಲ್ಲಿ ತಮ್ಮ ಕಲ್ಪನಾ ಸಾಮರ್ಥ್ಯವನ್ನು ಬಿಂಬಿಸುವ ಆಲಾಪನೆ, ಕಲ್ಪನಾ ಸ್ವರಗಳ ಮಂಡನೆ ಮುಂತಾದವುಗಳನ್ನು ಪ್ರದರ್ಶಿಸುವಂತಿರಲಿಲ್ಲ, ಈ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡುತ್ತಿದ್ದ ಏಕೈಕ ದೇವದಾಸಿ ಮನೆತನದ ಗಾಯಕಿಯೆಂದರೆ ತಂಜಾವೂರಿನ ‘ಸ್ವರ’ ಮಂಗಳಮ್ಮಾಳ್ ಮಾತ್ರ ಎಂದು ಸಿ.ಎಸ್ ಲಕ್ಷ್ಮೀ ಹೇಳುತ್ತಾರೆ. Kali for Women ಪ್ರಕಟಿಸಿದ The Singer and the Song ( 2000) ಎಂಬ ತಮ್ಮ ಪುಸ್ತಕದಲ್ಲಿ ಲಕ್ಷ್ಮೀ 1942ರಲ್ಲಿ ಬರೆಯುತ್ತಿದ್ದ ಒಬ್ಬ ಸಂಗೀತ ವಿಮರ್ಶಕನ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಆತ “ಇತ್ತೀಚೆಗೆ ಮಹಿಳೆಯರು ತಮ್ಮ ಕಛೇರಿಗಳಲ್ಲಿ ರಾಗಂ- ತಾನಂ- ಪಲ್ಲವಿ ಹಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಅವರು ಬಹಳ ಪ್ರೌಢಿಮೆಯಿಂದಲೇ ಇದನ್ನು ನಿರ್ವಹಿಸುತ್ತಿದ್ದರೂ, ಮಹಿಳೆಯರು ಇಷ್ಟೆಲ್ಲ ಕಸರತ್ತು ಮಾಡುವ ಅವಶ್ಯಕತೆಯಿಲ್ಲ. ಅವರು ಒಂದು ರಾಗಮಾಲಿಕೆಯಲ್ಲಿ ಒಂದು ರಾಗವನ್ನು ಸಂಕ್ಷಿಪ್ತವಾಗಿ ನಿರೂಪಿಸಿದರೆ ಸಾಕು, ದೀರ್ಘವಾದ ರಾಗಾಲಾಪನೆ, ಪಲ್ಲವಿಗಳ ಪಾಡಿತ್ಯಪೂರ್ಣ ಪ್ರಸ್ತುತಿ – ಇವೆಲ್ಲ ಅನಗತ್ಯ , ಹೆಣ್ಣುಮಕ್ಕಳಿಗೆ ಶೋಭಿಸುವಂಥದ್ದಲ್ಲ.” ಎಂಬ ಹೇಳಿಕೆ ನೀಡಿದ್ದರು.

Importance of Solitude and Gender Sensitivity in Classical Music tradition Vaishaliyana Column by Dr KS Vaishali

ಡಿ. ಕೆ. ಪಟ್ಟಮ್ಮಾಳ್

ಶಾಲಾ ಮಾಸ್ತರರ ಮಗಳಾದ ಕರ್ನಾಟಕ ಶಾಸ್ತ್ರೀಯ ಗಾಯಕಿ ಡಿ.ಕೆ ಪಟ್ಟಮ್ಮಾಳ್ ಶಾಲೆಯ ನಾಟಕದಲ್ಲಿ ಅಭಿನಯಿಸಿ, ಪಾರಿತೋಷಕವನ್ನು ಪಡೆದ ಭಾವಚಿತ್ರ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಅವರ ತಂದೆ ತಾನು ತಲೆ ಎತ್ತಿಕೊಂಡು ಹೇಗೆ ಓಡಾಡುವುದು? ತನ್ನ ಮಗಳನ್ನು ಯಾರು ಮದುವೆಯಾಗುತ್ತಾರೆ ಎಂದು ವ್ಯಾಕುಲಗೊಂಡಿದ್ದರಂತೆ. ಪಟ್ಟಮ್ಮಾಳ್ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ‘ಪಲ್ಲವಿ’ ಮಂಡನೆಯನ್ನು ಮೊದಲ ಬಾರಿಗೆ ಪ್ರಯೋಗ ಮಾಡಿ ಸೈ ಎನಿಸಿಕೊಂಡಂಥ ಸಾಹಸಿ ಕಲಾವಿದೆ. ಆಕೆಯ ಕಾಲದಲ್ಲಿ ಕಲಾವಿದೆಯರಿಗೆ ವಿಶೇಷ ಸ್ಥಾನ –ಮಾನಗಳೇನೂ ದೊರಕಿರಲಿಲ್ಲ. ಪಟ್ಟಮ್ಮಾಳ್ ಈ ಲಿಂಗ ಬೇಧ-ಭಾವವನ್ನು ದಿಟ್ಟತನದಿಂದಲೇ ಪ್ರಶ್ನಿಸಿದ್ದರು. “ನಾವು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಎನ್ನುವ ವರ್ಗೀಕರಣ ಮಾಡಬಹುದು. ಆದರೆ ಈ ಎರಡೂ ಶಾಸ್ತ್ರೀಯ ಸಂಗೀತ ಪ್ರಕಾರಗಳನ್ನು ಲಿಂಗತ್ವದ ಆಧಾರದ ಮೇಲೆ ಮರುವಿಂಗಡಣೆ ಮಾಡಲು ಸಾಧ್ಯವೇ? ಸ್ತ್ರೀಯರ ಸಂಗೀತ ಹಾಗೂ ಪುರುಷರ ಸಂಗೀತ ಎಂಬ ಪರಿಕಲ್ಪನೆಯೇ ಹಾಸ್ಯಾಸ್ಪದವಲ್ಲವೇ? ಈ ಬಗೆಯ ಪೂರ್ವಗ್ರಹಗಳೀಂದ ಎಷ್ಟೋ ಪ್ರಬುದ್ಧ ಮೃದಂಗ ಕಲಾವಿದರು ಮತ್ತು ವಯೊಲಿನ್ ಕಲಾವಿದರು ಗಾಯಕಿಯರೊಂದಿಗೆ ನುಡಿಸಲು ನಿರಾಕರಿಸುತ್ತಿದ್ದರು. ಆದರೆ ನಾನು ಈ ಬಗೆಯ ಧೋರಣೆಗಳಿಂದ ಅಧೀರಳಾಗಲಿಲ್ಲ. ಕಡುವಿರೋಧ, ಟೀಕಾ ಪ್ರಹಾರಗಳ ನಡುವೆಯೂ ನಾನು ಅಪ್ರತಿಭಳಾಗದೇ ‘ಪಲ್ಲವಿ’ಗಳನ್ನು, ‘ಕಲ್ಪನಾಸ್ವರ’ಗಳನ್ನು ಹಾಡುತ್ತಲೇ ಹೋದೆ” ಎಂದು ನಿರ್ಭಿಡೆಯಿಂದ ಈ ಲಿಂಗತ್ವದ ರಾಜಕಾರಣ ಶಾಸ್ತ್ರೀಯ ಸಂಗೀತ ಪ್ರಪಂಚದಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂಬುದರ ಅನಾವರಣವನ್ನೂ ಪಟ್ಟಮ್ಮಾಳ್ ಭೇಷಾಗಿಯೇ ಮಾಡಿದರು!

ತಂಜಾವೂರಿನ ನಾಯಕ ದೊರೆಗಳ ವಂಶಸ್ಥನಾದ 18ನೇ ಶತಮಾನದ ರಾಜ ಪ್ರತಾಪಸಿಂಹನ ಆಸ್ಥಾನದಲ್ಲಿದ್ದ ಕವಿಯಿತ್ರಿ ಮುದ್ದುಪಳನಿಯ ಮಹಾ ಕಾವ್ಯ ರಾಧಿಕಾ ಸಾಂತ್ವನ ಶೃಂಗಾರ ಪ್ರಬಂಧವನ್ನು ಪರಿಷ್ಕರಿಸಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಅದನ್ನು ಪ್ರಕಟಿಸಿದ ಧೀಮಂತ ಕಲಾವಿದೆ ಬೆಂಗಳೂರು ನಾಗರತ್ನಮ್ಮನವರ ಅವತರಣಿಕೆಯ ಮೇಲೆ ಮಾರಾಟ ಮಾಡದಂತೆ ನಿಷೇಧ ಹೇರಲಾಯಿತು. 1905ರಿಂದ 1934ರವರೆಗೆ 1,235 ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ನೀಡಿದ, ಊರೂರು ತಿರುಗುವಾಗ ಮುರಿದು ಹೋಗಬಾರದೆಂಬ ಕಾಳಜಿಯಿಂದ, ಎಲ್ಲಾ ಬಿಡಿ ಭಾಗಗಳನ್ನು ಪ್ರತ್ಯೇಕಿಸಿ, ಅವುಗಳನ್ನು ಪುನಃ ಜೋಡಿಸಿ ನುಡಿಸಬಹದಾದ ಆಧುನಿಕ ತಂಬೂರಿಯ ಅನ್ವೇಷಕಿಯೂ ಆಗಿದ್ದ ಅಸಾಮಾನ್ಯ ಕಲಾವಿದೆ ನಾಗರತ್ನಮ್ಮನವರೂ ಸಹ ಅವಮಾನವನ್ನು ಸಹಿಸಿಕೊಳ್ಳಬೇಕಾಯಿತು. ಕಾಂಚಿಪುರದ ಧನಕೋಟಿ ಅಮ್ಮಾಳ್ ಎಂಬ ಶಾಸ್ತ್ರೀಯ ಸಂಗೀತ ಕಲಾವಿದೆ ಪ್ರೇಕ್ಷಕ ವೃಂದದವರು ಅಗೌರವ ತೋರಿಸಿದರೆ ಸಹಿಸಿಕೊಳ್ಳುತ್ತಿರಲಿಲ್ಲ. ಸ್ವಾಭಿಮಾನದ ಖನಿಯಾಗಿದ್ದ ಆಕೆ ಒಮ್ಮೆ ಧನಿಕರ ಶ್ರೋತೃ ವರ್ಗವೊಂದರಲ್ಲಿ ಹಾಡುವಾಗ ಅವರಲ್ಲೊಬ್ಬರು ತನ್ನನ್ನು ಏಕವಚನದಲ್ಲಿ ಸಂಬೋಧಿಸಿ ರಾಮಾಯಣದ ಕೀರ್ತನೆಯೊಂದನ್ನು ಹಾಡಲು ಕೇಳಿಕೊಂಡರು ಎಂಬ ಕಾರಣಕ್ಕಾಗಿ ಆಕೆ ಕೇದಾರ ಗೌಳ ರಾಗದಲ್ಲಿ ಕೂಡಲೇ ಹನುಮಂತ ರಾವಣನ ಆಸ್ಥಾನದಲ್ಲಿ ಹಾಡಿದ “ನೀನಾರು ಎಲೆ ಮರ್ಕಟವೇ” ಎಂದು ಪ್ರಾರಂಭವಾಗುವ ಕೃತಿಯನ್ನು ಹಾಡಲಾರಂಭಿಸಿಯೇ ಬಿಟ್ಟರಂತೆ!

ನನ್ನ ಗುರುಗಳಾದ ಗಾನ ಸರಸ್ವತಿ ಪಂಡಿತಾ ಕಿಶೋರಿ ಅಮೋನ್‌ಕರ್‌ರವರೂ ನನ್ನೊಡನೆ ಒಂದು ಸ್ವಾರಸ್ಯಕರವಾದ ವೃತ್ತಾಂತವನ್ನು ಹಂಚಿಕೊಂಡಿದ್ದರು. ಅದು ಸ್ವಾತಂತ್ರ್ಯಪೂರ್ವದ, ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ ನಡೆದ ಘಟನೆ. ಕಿಶೋರಿ ತಾಯಿಯವರು ಸುಮಾರು ಇಪ್ಪತ್ತೈದರ ಹರೆಯದ ತರುಣಿ, ಇನ್ನೂ ಬೆರಳೆಣಿಕೆಯಷ್ಟು ರಾಜ ಮನೆತನಗಳು ಆಡಳಿತ ನಡೆಸುತ್ತಿದ್ದ ಕೆಲವು ಪ್ರದೇಶಗಳಿದ್ದವು. ಉತ್ತರ ಭಾರತದ ಒಂದು ರಾಜ ಸಂಸ್ಥಾನದವರು ಕಿಶೋರಿ ತಾಯಿಯವರಿಗೆ ಸಂಗೀತ ಕಾರ್ಯಕ್ರಮ ನೀಡಲು ಆಹ್ವಾನಿಸಿದ್ದರು. ಮೂರನೆಯ ದರ್ಜೆಯ ಬೋಗಿಯಲ್ಲಿ ಒಂದು ದಿನದ ಪ್ರಯಾಸಕರ ರೈಲು ಪ್ರಯಾಣ ಮಾಡಿದ ಕಿಶೋರಿ ತಾಯಿಯವರು ಆಗಮಿಸಿದ ದಿನದ ಸಾಯಂಕಾಲದಂದು ಕಾರ್ಯಕ್ರಮ ನೀಡಬೇಕಿತ್ತು. ಅರಮನೆಗೆ ಸೇರಿದ ಔತಣಕೂಟಗಳನ್ನು ನಡೆಸುವ ಒಂದು ಭವ್ಯವಾದ, ವಿಶಾಲ ಕೊಠಡಿಯಲ್ಲಿಯೇ ವೇದಿಕೆಯನ್ನೂ ನಿರ್ಮಿಸಲಾಗಿತ್ತು. ತಾನು ಕಛೇರಿ ಪ್ರಾರಂಭಿಸುತ್ತಿದ್ದಂತೆಯೇ ರಾಣಿವಾಸದ ಹಲವಾರು ಹೆಂಗಳೆಯರು ಪಾನೀಯಗಳನ್ನು ಸೇವಿಸುತ್ತ, ರಾಜ ಪರಿವಾರದ ಅತಿಥಿಗಳೊಡನೆ ಕುಶಲೋಪಚಾರದ ಸಂಭಾಷಣೆಗಳನ್ನು ಮಾಡುತ್ತ, ಒಂದು ಶಾಸ್ತ್ರೀಯ ಸಂಗೀತ ಕಛೇರಿ ತಮ್ಮ ಮುಂದೆ ನಡೆಯುತ್ತಿದೆಯೆಂಬ ಪರಿವೆಯೂ ಇಲ್ಲದವರಂತೆ ವರ್ತಿಸುತ್ತಿರುವುದನ್ನು ನೋಡಿ ಕಿಶೋರಿ ತಾಯಿಯವರಿಗೆ ಆಘಾತವಾಯಿತು. ಕೂಡಲೇ ತಾನು ಹಾಡುತ್ತಿದ್ದ ವಿಲಂಬಿತ್ ಖ್ಯಾಲನ್ನು ನಿಲ್ಲಿಸಿ ‘ಉಧೋ ಕರಮ ಕೀ ಗತಿ ನ್ಯಾರಿ’ ಎಂಬ ಮೀರಾ ಭಜನೆಯನ್ನು ಹಾಡಲಾರಂಭಿಸಿದೆನೆಂದು ತಾಯಿ ನನಗೆ ಹೇಳಿದರು.

ನಾನು ಪ್ರಶ್ನಾರ್ಥಕವಾಗಿ ಅವರತ್ತ ನೋಡಿದಾಗ ಅವರು ನಸು ನಗುತ್ತ ‘ಈ ಮೀರಾ ಭಜನೆಯಲ್ಲಿ ಬರುವ ಎರಡು ಸಾಲುಗಳನ್ನು ನಾನು ಮತ್ತೆ ಮತ್ತೆ ಹಾಡತೊಡಗಿದೆ. ಆ ಸಾಲುಗಳ ಅರ್ಥ ಹೀಗಿದೆ : ಮೂರ್ಖರಿಗೆ ಈ ಪ್ರಪಂಚದಲ್ಲಿ ರಾಜರ ಪಟ್ಟ ದೊರಕುತ್ತದೆ. ಆದರೆ ಪಂಡಿತರು ಭಿಕಾರಿಗಳಾಗಿ ಅಲೆಯುತ್ತಾರೆ. – ಈ ಸಾಲುಗಳನ್ನು ನಾನು ಪುನರಾವರ್ತನೆ ಮಾಡುತ್ತಿದ್ದುದನ್ನು ಅಲ್ಲಿಯ ರಾಜ ಗಮನಿಸಿದ. ಆತ ತುಂಬ ಸುಸಂಸ್ಕೃತ ವ್ಯಕಿಯಾಗಿದ್ದ. ಮೆಲ್ಲಗೆ ನನ್ನ ಬಳಿ ಬಂದು ಆತ “ಸಹೋದರಿ, ನನ್ನನ್ನು ಹಾಗೂ ನನ್ನ ಪರಿವಾರದವರನ್ನು ದಯಮಾಡಿ ಕ್ಷಮಿಸಿ. ನಾನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಬಹಳ ಕೇಳಿದ್ದೇನೆ. ನೀವು ಅಪತ್ರಿಮ ಕಲಾವಿದೆಯೆಂಬುದು ನಿಸ್ಸಂದೇಹ. ನೀವು ಖ್ಯಾಲ್ ಗಾಯನ ಮತ್ತೆ ಪ್ರಾರಂಭಿಸಬೇಕೆಂದು ನನ್ನ ಕೋರಿಕೆ . ಇನ್ನು ಇಲ್ಲಿ ಯಾವುದೇ ರೀತಿಯ ಅಹಿತಕರ ಗದ್ದಲಗಳು ನಡೆಯದಂತೆ ನಾನು ತಾಕೀತು ಮಾಡಿದ್ದೇನೆ” ಎಂದು ತನ್ನ ಕ್ಷಮೆ ಕೋರಿದ ಬಳಿಕವೇ ತಾನು ಗಾಯನವನ್ನು ಮುಂದುವರಿಸಿದೆನೆಂದು ತಾಯಿ ನನ್ನ ಬಳಿ ಹೇಳಿಕೊಂಡಿದ್ದರು. ಗಾನಸರಸ್ವತಿ ಪಂಡಿತಾ ಕಿಶೋರಿ ಅಮೋನ್‌ಕರ್‌ರವರೇ ಇಂತಹ ಮುಜುಗರ ತರಿಸುವ ಪ್ರಸಂಗಗಳನ್ನು ಎದುರಿಸದ ಮೇಲೆ ಸಾಮಾನ್ಯ ಕಲಾವಿದೆಯರ ಪಾಡೇನಿರಬಹುದೆಂದು ನಾವು ಊಹಿಸಬಹುದಲ್ಲವೇ?

ತಾನು ಒಬ್ಬ ಹಳೆಯ ರಂಗನಟಿಯನ್ನು ಭೇಟಿ ಮಾಡಲು ಹೋದ ಸಂದರ್ಭವನ್ನು ವಿವರಿಸುತ್ತ , ಸಿ ಎಸ್ ಲಕ್ಷ್ಮೀಯವರು ದೇವದಾಸಿಯಾಗಿದ್ದ ಆ ಕಲಾವಿದೆ ಒಬ್ಬ ಅಸಾಧಾರಣ ಸಂವಾದಿನಿ ಕಲಾವಿದೆಯೂ ಆಗಿದ್ದಳೆಂಬುದನ್ನು ನೆನಪು ಮಾಡಿಕೊಳ್ಳುತ್ತ ಆಕೆಯ ಹಾರ್ಮೋನಿಯಂ ನೋಡಲು ಉತ್ಸುಕರಾಗಿದ್ದರು. ಅವರ ಕೋರಿಕೆಯ ಮೇರೆಗೆ ಇಳಿಯ ವಯಸ್ಸಿನ ಆ ಕಲಾವಿದೆ ತನ್ನ ಹಳೆಯ ಅವಶೇಷದಂತಿದ್ದ ಹಾರ್ಮೋನಿಯಂ ಪೆಟ್ಟಿಗೆಯನ್ನು ಹೊರತೆಗೆದಾಗ ಅದರ ಒಳಗಿಂದ ಒಂದು ಹಲ್ಲಿ ಹಾಗೂ ಹಲವಾರು ಜಿರಳೆಗಳು ಹೊರಬಂದವು. ದುರವಸ್ಥೆಯಲ್ಲಿದ್ದ ಹಾರ್ಮೋನಿಯಂ ಆ ಮನೆಯವರಿಗೆ ಆಕೆ ದೇವದಾಸಿಯಾಗಿದ್ದ ಸಮಯದ ಸಂಕೇತವಾಗಿದ್ದು, ಬೇಡವಾದ ವಸ್ತುವಾಗಿತ್ತು ಎಂದು ಅರಿವಾಗಿ ತನಗೆ ಸಂಕಟವಾಯಿತೆಂದು ಲಕ್ಷ್ಮೀ ಹೇಳಿಕೊಂಡಿದ್ದಾರೆ.

ಒಬ್ಬ ಗಣಿಕಾ ಸ್ತ್ರೀ ಅತ್ಯುತ್ತಮ ಕಲಾವಿದೆಯಾಗಿದ್ದರೂ ಆಕೆಯನ್ನು ಆಗಿನ ಸಮಾಜ ವೇಶ್ಯೆಯೆಂದೇ ಪರಿಗಣಿಸುತ್ತಿತ್ತು. ಜೈಪುರದ ರಾಜರ ಆಶ್ರಯದಲ್ಲಿದ್ದ ‘ಗುನಿಜನ್‌ಖಾನ’ (ವಾಸ್ತವದಲ್ಲಿ ಕಲಾವಿದರ ಸಮುದಾಯ) ಸಾಮಾನ್ಯ ಜನರ ದೃಷ್ಟಿಯಲ್ಲಿ ‘ರಂಡಿ ಕಾರ್ಖಾನೆ’ಯೇ ಆಗಿತ್ತು. 1939ರಲ್ಲಿ ಚಗನ್ ಎಂಬ ನೃತ್ಯಾಂಗನೆ ರಾಸ್ತಾ ಕಲ್ಯಾನ್ ಕಾ ಚೌಕಿಯಲ್ಲಿ ಮನೆಯನ್ನು ಖರೀದಿಸಲು ಅಪೇಕ್ಷಿಸಿದ್ದಳು. ಆಗ ಅಲ್ಲಿಯ ನಿವಾಸಿಗಳೆಲ್ಲರೂ ಒಂದು ಪತ್ರದಲ್ಲಿ ಅಲ್ಲಿ ಅನೇಕ ಗೌರವಾನ್ವಿತ ಹಿಂದೂ ಹಾಗೂ ಮುಸ್ಲಿಂ ಕುಟುಂಬಗಳು ವಾಸಿಸುತ್ತಿದ್ದು, ತಾವೆಲ್ಲರೂ ಅಲ್ಲಿಂದ ಜಾಗ ಖಾಲಿ ಮಾಡಬೇಕಾದ ಪರಿಸ್ಥಿತಿ ಉಂಟಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದರು. ಆಗಿನ ಪ್ರಖ್ಯಾತ ಕಲಾವಿದೆಯಾಗಿದ್ದ ಗೌಹರ್ ಜಾನ್ ಕೂಡ ‘ಗುನಿಜನ್ ಖಾನ’ದ ಸದಸ್ಯೆಯೇ ಆಗಿದ್ದಳು.

ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್‌ರವರ ಶಿಷ್ಯರಾದ ಜಗದೀಶ್ ಪ್ರಸಾದ್ ಕಮರ್ ತಮ್ಮ ಪುತ್ರಿ ಬಾಗೇಶ್ವರಿ ಕಮರ್‌ಗೆ ಶಹನಾಯಿ ಕಲಿಸಲು ಹಿಂದೇಟು ಹಾಕಿದ್ದರಂತೆ. ಅನಂತರ ಕಮರ್‌ರವರ ಪತ್ನಿ ಚಂದ್ರಾವತಿ ತನ್ನ ಪತಿಯ ಶಿಷ್ಯರೊಬ್ಬರಿಂದ ಮಗಳಿಗೆ ಗುಟ್ಟಾಗಿ ಶಹನಾಯಿ ಪಾಠ ಹೇಳಿಸಿದರು. ಹತ್ತು ವರ್ಷದ ಬಾಲಕಿ ಶಾಲೆಯಿಂದ ಮರಳಿ ಮನೆಗೆ ಬಂದ ಬಳಿಕ ತನ್ನ ಅಜ್ಜನ ಮನೆಯಲ್ಲಿ ರಿಯಾಜ್ ಮಾಡುತ್ತಿದ್ದಳು. ಒಮ್ಮೆ ತನ್ನ ಮಾವನ ಮನೆಗೆ ಬಂದಿದ್ದ ಕಮರ್‌ರವರು ಕೋನೇಯೊಳಗಿನಿಂದ ರಾಗ ಮಿಯಾ ಕಿ ತೋಡಿಯ ಮಧುರ ಶಹನಾಯಿ ವಾದನವನ್ನು ಕೇಳಿ ದಂಗಾದರು. ಕೋಣೆಯ ಬಾಗಿಲು ತೆರೆದು ನೋಡಿದಾಗ ತಮ್ಮ ಮಗಳೇ ಗೋಡೆಗೆ ಮುಖ ಮಾಡಿ ನುಡಿಸುತ್ತಿದ್ದ ದೃಶ್ಯವನ್ನು ನೋಡಿ ತಬ್ಬಿಬ್ಬಾದ ಕಮರ್‌ರವರು ತನ್ನ ಮಗಳಿಗೆ ಶಹನಾಯಿ ಪಾಠ ಹೇಳಿಕೊಡಲು ನಿರ್ಧರಿಸಿದರಂತೆ , ಆದರೆ ತಮ್ಮ ಗುರುಗಳಾದ ಉಸ್ತಾದ್ ಬಿಸ್ಮಿಲ್ಲಾ ಖಾನ್‌ರವರ ಸಮ್ಮತಿಯ ಷರತ್ತನ್ನೂ ವಿಧಿಸಲು ಆತ ಮರೆಯಲಿಲ್ಲ! ಇನ್ನು ಪುರುಷರ ವಾದ್ಯಗಳೆಂದೇ ಹೆಸರುವಾಸಿಯಾದ ಲಯ ವಾದ್ಯಗಳಾದ ತಬಲಾ, ಮೃದಂಗ, ಘಟಂಗಳಲ್ಲಿ ಮಹಿಳೆಯರ ಪ್ರವೇಶವಂತೂ ಮೊದಲಿಗೆ ದುಸ್ಸಾಹಸವೇ ಆಗಿದ್ದು ಅದು ಮತ್ತೊಂದು ರೋಮಾಂಚನೀಯ ಇತಿಹಾಸವೆನ್ನಬಹುದು.

Importance of Solitude and Gender Sensitivity in Classical Music tradition Vaishaliyana Column by Dr KS Vaishali

ಧೋಂಡೂತಾಯಿ ಕುಲಕರ್ಣಿ

ಅತ್ರೌಳಿ-ಜೈಪುರ್ ಘರಾನೆಯ ಪ್ರವರ್ತಕರಾದ ಉಸ್ತಾದ್ ಅಲ್ಲಾದಿಯಾ ಖಾನರ ಪುತ್ರ ಬುರ್ಜಿ ಖಾನ್ ಮತ್ತು ಅವರ ಮತ್ತೊಬ್ಬ ಪುತ್ರ ಹೈದರ್ ಖಾನ್‌ರ ಶಿಷ್ಯೆ ಲಕ್ಷ್ಮೀಬಾಯಯವರ ಶಿಷ್ಯೆಯಾಗಿ ನಂತರ ಕೇಸರಬಾಯಿಯವರ ಬಳಿಯೂ ಅಧ್ಯಯನ ಮಾಡಿ ತನ್ನ ಜೀವನವನ್ನೇ ಸಂಗೀತಕ್ಕೆ ಮುಡಿಪಾಗಿಟ್ಟು, ಅವಿವಾಹಿತೆಯಾಗಿ, ಬ್ರಹ್ಮಚಾರಿಣಿಯಾಗಿ ಬದುಕಿದ ಅಸಾಮಾನ್ಯ ಸಂಗೀತ ಕಲಾವಿದೆ ಧೋಂಡೂತಾಯಿ ಕುಲಕರ್ಣಿ ಸಂದರ್ಶನವೊಂದರಲ್ಲಿ “ನಾನು ಅವಿವಾಹಿತೆಯಾಗಿರುವ ಬಗ್ಗೆ ನನಗೆ ಕಿಂಚಿತ್ತೂ ದುಃಖವಿಲ್ಲ. ಏಕಾಂತ ಸ್ಥಿತಿ ಕೂಡ ನನ್ನ ಪಾಲಿಗೆ ವರವೇ ಸರಿ. ಏಕೆಂದರೆ ನನ್ನ ಸಂಗೀತಮಯ ವಾತಾವರಣಕ್ಕೆ ಭಂಗ ತರುವಂಥದ್ದೇನೂ ನನ್ನ ಜೀವನ ಶೈಲಿಯಲ್ಲಿಲ್ಲ. ಕೆಲವೊಮ್ಮೆ ಮನೆಯೊಳಗೆ ಕುಟುಂಬದ ಸದಸ್ಯರೊಡನೆ ಮನಸ್ತಾಪವಾಗಬಹುದು. ಮಕ್ಕಳು ಸರಿಯಾಗಿ ಓದದೇ ಹೋಗಬಹುದು, ಯಾರೋ ಅಸ್ವಸ್ಥರಾಗಬಹುದು, ಅತ್ತೆಯ ಯಾವುದೋ ಮಾತು ಕಹಿಯೆನಿಸಬಹುದು, ಗಂಡನ ಚುಚ್ಚು ಮಾತಿನಿಂದ ನೊಂದುಕೊಳ್ಳಬಹುದು – ಇವೆಲ್ಲ ಸಂಭವಿಸುವುದು ಸಹಜ. ಇವು ನನ್ನ ಅನುಭವಗಳಲ್ಲ. ನನ್ನ ಜೀವನದಲ್ಲಿ ಇಂಥಾ ಘಟನೆಗಳು ಸಂಭವಿಸುವುದಿಲ್ಲ. ನಾನು ಸಂಗೀತದಲ್ಲಿ ಹಲವಾರು ತಾಸುಗಳಷ್ಟು ತೊಡಗಿಕೊಳ್ಳಬಹುದು. ನಾನು ನಾಲ್ಕು ಗಂಟೆಗಳವರೆಗೂ ರಿಯಾಜ್ ಮಾಡುತ್ತಿದ್ದರೂ , ನನಗೆ ತೊಂದರೆ ಕೊಡಲು ಯಾರೂ ಇಲ್ಲ. ಅಡುಗೆ ಮಾಡಿ ಹಾಕು, ನನಗೆ ಬಡಿಸು ಇತ್ಯಾದಿ. ಇಂತಹ ಗೃಹ ಕೃತ್ಯಗಳನ್ನು ನಾನು ನಿರ್ವಹಿಸಲು ಇಚ್ಛಿಸುವುದಿಲ್ಲ. ನನ್ನ ಮನಸ್ಸು ಶಾಂತವಾಗಿರುತ್ತದೆ. ಆದ್ದರಿಂದ ನನ್ನ ಸಂಗೀತವೂ ಅಭಿವೃದ್ಧಿ ಹೊಂದುತ್ತದೆ. ಇನ್ನು ಒಂಟಿತನ, ಏಕಾಂತವಾಸದ ಬಗ್ಗೆ ಹೇಳುವುದಾದರೆ ನನಗೆ ಪ್ರತಿಯೊಬ್ಬ ವ್ಯಕ್ತಿಯೂ ಈ ಬಗೆಯ ಏಕಾಂತದ, ಒಂಟಿಯಾಗಿರುವ ಅನುಭವವನ್ನು ಪಡೆಯಬೇಕು ಎನ್ನಿಸುತ್ತದೆ.” ಎಂದು ಹೇಳಿದ್ದಾರೆ. ಎಷ್ಟು ನಿರಾಡಂಬರದಿಂದ ಕೂಡಿದ ಅರ್ಥಗರ್ಭಿತ ಮಾತುಗಳಲ್ಲವೇ?

(ಮುಂದಿನ ಯಾನ : 28.5.2022)

ಇದನ್ನೂ ಓದಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

Follow us on

Related Stories

Most Read Stories

Click on your DTH Provider to Add TV9 Kannada