Music: ವೈಶಾಲಿಯಾನ; ‘ಕರೀಮ ನಾಮ ತೇರೋ, ತೂ ಸಾಹೇಬ’ ಕಿಶೋರಿತಾಯಿ ಧ್ಯಾನಸ್ಥರಾಗಿ ಹಾಡುವಾಗ…

Hindu Muslim : ಅನೇಕ ಮುಸ್ಲಿಂ ಉಸ್ತಾದರುಗಳು ತಮ್ಮ ಹಿಂದೂ ಶಿಷ್ಯರಿಗೆ ಎಣೆಯಿಲ್ಲದ ವಾತ್ಸಲ್ಯ ಮಮತೆಗಳಿಂದ ತಮ್ಮ ಗಂಧರ್ವ ಗಾಯನ ವಿದ್ಯೆಯನ್ನು ಧಾರೆಯೆರೆದು, ಅವರ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದನ್ನು ನಾವು ಎಂದಾದರೂ ಮರೆಯಲಾದೀತೇ?

Music: ವೈಶಾಲಿಯಾನ; ‘ಕರೀಮ ನಾಮ ತೇರೋ, ತೂ ಸಾಹೇಬ’ ಕಿಶೋರಿತಾಯಿ ಧ್ಯಾನಸ್ಥರಾಗಿ ಹಾಡುವಾಗ...
ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಬಿಸ್ಮಿಲ್ಲಾ ಖಾನ್, ಕಿಶೋರಿ ಅಮೋನಕರ
Follow us
ಶ್ರೀದೇವಿ ಕಳಸದ
|

Updated on:Apr 16, 2022 | 9:28 AM

ವೈಶಾಲಿಯಾನ | Vaishaliyaana : ಖಯಾಲ್ ಸಂಗೀತದ ಜನಕ ಅಮೀರ್ ಖುಸ್ರೋ ಎಂಬ ಐತಿಹ್ಯಗಳಿದ್ದರೂ, ಅದನ್ನು ನಿಖರವಾಗಿ ಹೇಳಲಾಗುವುದಿಲ್ಲ. 1719 ರಿಂದ 1748ರ ವರೆಗೆ ಆಳ್ವಿಕೆ ನಡೆಸಿದ ಮೊಘಲ್ ದೊರೆ ಮೊಹಮ್ಮದ್ ಶಾ ‘ರಂಗೀಲೆ’ಯ ಕಾಲದಲ್ಲಿ ಖಯಾಲ್ ಸಂಗೀತ ಪ್ರವರ್ಧಮಾನಕ್ಕೆ ಬಂದಿತೆಂದು ಹೇಳಲಾಗುತ್ತದೆ. ಆತನ ದರ್ಬಾರಿನಲ್ಲಿದ್ದ ನಿಯಾಮತ್ ಖಾನ್ ಎಂಬ ವಿದ್ವಾಂಸನೇ ‘ಸದಾರಂಗ್’ ಎಂಬ ಅಂಕಿತ ನಾಮದಲ್ಲಿ ಬಂದಿಶ್‌ಗಳನ್ನು ರಚಿಸಿದನೆಂಬ ಉಲ್ಲೇಖವಿದೆ. ನಿಯಾಮತ್ ಖಾನರ ಸೋದರಸಂಬಂಧಿ ಫಿರೋಜ್ ಖಾನ್  ‘ಅದಾರಂಗ್’ ಅಕಿಂತನಾಮದಲ್ಲಿ ಅನೇಕ ರಚನೆಗಳನ್ನು ಮಾಡಿದ. ಈಗಲೂ ಇವುಗಳನ್ನು ಹಾಡುತ್ತಾರೆ. ವರ್ಷ ಋತುವಿನ ರಾಗ ಮಿಯಾ ಕಿ ಮಲ್ಹಾರ್ ರಾಗದಲ್ಲಿ ಪಂ. ಭೀಮಸೇನ ಜೋಷಿಯವರು ಹಾಡಿದ ಪ್ರಾರ್ಥನಾರೂಪದ ಬಂದಿಶ್ ‘ಕರೀಮ ನಾಮ ತೇರೋ, ತೂ ಸಾಹೇಬ, ಸದಾರಂಗ, ದುಃಖ ದರಿದ್ರ ದೂರ ಕೀಜೆ, ಸುಖ ದೀಜೆ, ಸದಾರಂಗ ಬಿನತೀ ಕರತ ಹೂ ಸುನ ಲೀಜೆ” ಅಥವಾ “ತೂ ಹೇ ಮೋಮ್ಮದ ಶಾ ದರಬಾರ ಹೇ ನಿಜಾಮುದ್ದೀನ ಔಲಿಯಾ” ಮುಂತಾದ ರಚನೆಗಳನ್ನು ಒಂದು ಧ್ಯಾನಸ್ಥ ಸ್ಥಿತಿಯಲ್ಲಿ ಹಾಡುವಾಗ, ಯಾವ ಹಿಂದೂ ಖ್ಯಾಲ್ ಗಾಯಕ ಅಥವಾ ಗಾಯಕಿಗೆ ಹಿಂದೂ- ಮುಸ್ಲಿಂ ಎಂಬ ಭೇದ-ಭಾವದ ಮನಸ್ಥಿತಿಯಲ್ಲಿ ಅಂತಹ ಬಂದಿಶ್‌ಗಳನ್ನು ಪ್ರಸ್ತುತ ಪಡಿಸಲು ಸಾಧ್ಯ?

ಡಾ. ಕೆ. ಎಸ್. ವೈಶಾಲಿ (Dr. K. S. Vaishali)

(ಯಾನ 8, ಭಾಗ 2)

ಪಂಡಿತಾ ಕಿಶೋರಿ ಅಮೋನ್‌ಕರ್‌ರವರ ಮಿಯಾ ಕಿ ಮಲ್ಹಾರ್ ರಾಗದಲ್ಲಿ ‘ಕರೀಮ ನಾಮ ತೇರೋ” ಪ್ರಸ್ತುತಿ ಒಂದು ಆರ್ತ ಭಾವದ ಶರಣಾಗತಿಯನ್ನು, ಎಷ್ಟು ಹೃದಯ ಸ್ಪರ್ಶಿಯಾಗಿ ಅನಾವರಣಗೊಳಿಸುತ್ತದೆ! ಮುಸಲ್ಮಾನ ಗುರುಗಳು- ಹಿಂದೂ ಶಿಷ್ಯರುಗಳ ಅನ್ಯೋನ್ಯತೆಯ ಅಸಂಖ್ಯಾತ ಉದಾಹರಣೆಗಳು ನಮಗೆ ಲಭ್ಯ. ಇಂದು ನಾವು ಹಿಂದೂಸ್ತಾನಿ ಸಂಗೀತದ ಪ್ರಮುಖ ಘರಾಣೆಗಳನ್ನು ಹೆಸರಿಸುವಾಗ, ಅವೆಲ್ಲ ಘರಾಣೆಗಳಿಗೂ ಒಬ್ಬೊಬ್ಬ ಮುಸ್ಲಿಂ ಪ್ರವರ್ತಕರಿದ್ದರೆಂಬ ಮುಖ್ಯವಾದ ಅಂಶವನ್ನು ಮರೆತುಬಿಡುತ್ತೇವೆ. ಗ್ವಾಲಿಯರ್ ಘರಾನಾವನ್ನು, ಸರ್ವಾನುಮತದಿಂದ, ಎಲ್ಲ ಘರಾನಾಗಳ ತಾಯಿಯೆಂದು ಪರಿಗಣಿಸಲಾಗಿದೆ. ನಮ್ಮ ಸಮಕಾಲೀನ ಸಂದರ್ಭದಲ್ಲಿ ಪ್ರಚಲಿತವಾಗಿರುವ ಅನೇಕ ಗಾಯನ ಶೈಲಿಗಳನ್ನು ಈ ಘರಾನಾಗೆ ಸೇರಿದವುಗಳೆಂದು ಗುರುತಿಸಬಹುದಾಗಿದೆ. ಗ್ವಾಲಿಯರ್ ಘರಾನ ಗಾಯಕಿಯ ಸ್ಥಾಪಕರಾದ ನತ್ಥನ್ ಪೀರ್ ಭಕ್ಷ್ ಮತ್ತು ಖಾದಿರ್ ಪೀರ್ ಭಕ್ಷ್ ಅವರ ಮೊಮ್ಮಕ್ಕಳಾದ ಹದ್ದೂ ಖಾನ್ ಹಾಗೂ ಹಸ್ಸೂ ಖಾನರ ಪ್ರಸ್ತಾಪವನ್ನೇ ನಾವು ಮಾಡುವುದಿಲ್ಲ.

ಹದ್ದೂ ಖಾನ್‌ರವರು ಹಿಂದೂ ಶಿಷ್ಯರನ್ನು ತಯಾರು ಮಾಡಿದವರಲ್ಲಿ ಮೊದಲಿಗರಾಗಿದ್ದರು. ಅವರ ಪ್ರಮುಖ ಶಿಷ್ಯರಾಗಿದ್ದ ಬಾಲಕೃಷ್ಠ ಬುವಾ ಈಚಲರಂಜೀಕರ್‌ರವರು ಮಹಾರಾಷ್ಟ್ರದಲ್ಲಿ ಹಿಂದೂಸ್ತಾನಿ ಸಂಗೀತವನ್ನು ಜನಪ್ರಿಯಗೊಳಿಸಿ ವಿಷ್ಣು ದಿಗಂಬರ ಪಲುಸ್ಕರರಂತಹ ಮೇರು ಗಾಯಕರನ್ನು ತಯಾರು ಮಾಡಿದರು. ಇಂದು ನಾವು ಕೃಷ್ಣರಾವ್ ಪಂಡಿತ್, ಓಂಕಾರ್‌ನಾಥ್ ಠಾಕೂರ್, ವಿನಾಯಕರಾವ್ ಪಟವರ್ಧನ್ ಮೊದಲಾದ ವಿದ್ವಾಂಸರ ಬಗ್ಗೆ ಮಾತನಾಡುತ್ತೇವಾದರೂ, ಗ್ವಾಲಿಯರ್ ಘರಾನಾದ ಮುಸ್ಲಿಂ ಪ್ರವರ್ತಕರನ್ನು ಮರೆತೇಬಿಟ್ಟದ್ದೇವೆ. ಗ್ವಾಲಿಯರ್ ಘರಾನಾದಿಂದಾಚೆ ಹೋಗಿ, ತುಸು ಬೇರೆ ಘರಾನಾಗಳನ್ನು ಗಮನಿಸಿದರೆ, ಅಲ್ಲಿಯೂ ಆದೇ ಪ್ರತಿನಿಧೀಕರಣದ ರಾಜಕೀಯ ನಮಗೆ ಎದುರಾಗುತ್ತದೆ.

ಇದನ್ನೂ ಓದಿ : Music: ವೈಶಾಲಿಯಾನ; ‘ಮಾಡಲಿಲ್ಲವೇ ತಪವ ಕೂಡೆ ಸುಗುಣದೊಡನೆ ತಿಳಿದು, ನೋಡಿ ತ್ರಿವಿಧ ಕರಣದಲ್ಲಿ’

ಕಿರಾನಾ ಗಾಯಕಿ ಒಂದು ಘರಾನವಾಗಿ ಮೈದಾಳಿದ ಗರಿಮೆ ನಿಜಕ್ಕೂ ಉಸ್ತಾದ್ ಅಬ್ದುಲ್ ಕರೀಂ ಖಾನ್ ಸಾಹೇಬರ ಪರಿಶ್ರಮದ ಫಲ. ಕರೀಂ ಖಾನ್ ಸಾಬ್‌ರವರ ಮೋಹಕ ಗಾಯನ ಶೈಲಿಗೆ ಮರುಳಾಗದವರೇ ಇರಲಿಲ್ಲ. ಅವರು ಮೈಸೂರಿನ ರಾಜರ ಆಸ್ಥಾನದಲ್ಲಿ ಸ್ವಲ್ಪ ಸಮಯ ಕಳೆದ ಕಾರಣ, ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಅವರ ಪ್ರಭಾವ ಹಳೆ ಮೈಸೂರು ಸೀಮೆಯಲ್ಲಿಯೂ ಗಣನೀಯ ಪ್ರಮಾಣದಲ್ಲಿತ್ತು. ಖಾನ್ ಸಾಹೇಬರ ಶಿಷ್ಯ ಮಂಡಳಿಯಲ್ಲಿ ಸವಾಯಿ ಗಂಧರ್ವ, ಬಾಲಕೃಷ್ಣ ಬುವಾ ಕಪಿಲೇಶ್ವರಿ, ರೋಶನಾರ ಬೇಗಂ ಮೊದಲಾದ ಪ್ರಸಿದ್ಧ ಕಲಾವಿದರಿದ್ದರು. ಇದರಿಂದ ಕಿರಾನಾ ಘರಾನ ಸಂಗೀತ ದೇಶದುದ್ದಗಲಕ್ಕೂ ಪಸರಿಸಿತು. ಭಾರತ ರತ್ನ ಭೀಮ್‌ಸೇನ್ ಜೋಷಿಯವರು ಹಾಗೂ ವಿದುಷಿ ಗಂಗೂಬಾಯಿ ಹಾನಗಲ್ಲರವರು ಸವಾಯಿ ಗಂಧರ್ವರ ಶಿಷ್ಯರಾಗಿದ್ದರು ಎನ್ನುವ ಸಂಗತಿ ಈಗ ಸರ್ವವಿದಿತ ಆದರೆ ಅಬ್ದುಲ್ ಕರೀಂ ಖಾನ್ ಸಾಹೇಬರು ಈ ಘರಾನೆದಾರ್ ಗಾಯಕಿಯ ಜನಕರೆಂಬುದನ್ನು ನಾವು ಆದರದಿಂದ ಸ್ಮರಿಸಬೇಕಾಗಿದೆ. ಉಸ್ತಾದ್ ಕರೀಂ ಖಾನ್ ಸಾಹೇಬರು, ಕಿರಾನಾ ಗಾಯಕಿಯ ಅದ್ವಿತೀಯವಾದ ‘ಮೇರುಖಂಡ’ ಆಲಾಪಿ ಪದ್ಧತಿಯ ಅನ್ವೇಷಕರು ಎನ್ನುವುದು ಮತ್ತೊಂದು ಮಹತ್ವದ ವಿಷಯ. ಅನೇಕ ಮುಸ್ಲಿಂ ಉಸ್ತಾದರುಗಳು ತಮ್ಮ ಹಿಂದೂ ಶಿಷ್ಯರಿಗೆ ಎಣೆಯಿಲ್ಲದ ವಾತ್ಸಲ್ಯ ಮಮತೆಗಳಿಂದ ತಮ್ಮ ಗಂಧರ್ವ ಗಾಯನ ವಿದ್ಯೆಯನ್ನು ಧಾರೆಯೆರೆದು, ಅವರ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದನ್ನು ನಾವು ಎಂದಾದರೂ ಮರೆಯಲಾದೀತೇ?

ನಮ್ಮ ಕರ್ನಾಟಕದ ಮತ್ತೊಬ್ಬ ಮಹಾನ್ ಗಾಯಕರಾದ ಪಂಡಿತ್ ಮಲ್ಲಿಕಾರ್ಜುನ ಮನ್‌ಸೂರ್‌ರವರ ಬಗ್ಗೆ ಯಾರು ತಾನೇ ಕೇಳಿಲ್ಲ? ಅಪ್ರಚಲಿತ ರಾಗಗಳನ್ನು ಕರಾತಲಮಲಕ ಮಾಡಿಕೊಂಡು ಲೀಲಾಜಾಲವಾಗಿ ‘ಕುಕುಭ್ ಬಿಲಾವಲ್, ಖಟ್, ಖೇಮ್, ಸಾವನಿ -ನಟ್’ ಮೊದಲಾದ ಕ್ಲಿಷ್ಟ ರಾಗಗಳನ್ನು ವಿದ್ವತ್ಫೂರ್ಣವಾಗಿ ಮಂಡಿಸುತ್ತಿದ್ದ ಅವರ ವೈಖರಿ ನಮ್ಮನ್ನು ಚಕಿತಗೊಳಿಸುತ್ತದೆ. ಆದರೆ ಮನ್‌ಸೂರರು ಅತ್ರೌಳಿ-ಜೈಪುರ್ ಘರಾನೆಯ ಪ್ರವರ್ತಕರಾದ ಉಸ್ತಾದ್ ಅಲ್ಲಾದಿಯಾ ಖಾನ್‌ರವರ ಸಹೋದರ ಉಸ್ತಾದ್ ಹೈದರ್ ಖಾನ್‌ರವರ ಸುಪುತ್ರರಾದ ಉಸ್ತಾದ್ ಮಂಜೀ ಖಾನ್ ಹಾಗೂ ಉಸ್ತಾದ್ ಬುರ್ಜೀ ಖಾನ್‌ರವರುಗಳ ಶಿಷ್ಯರೆಂಬ ವಿಚಾರದ ಅರಿವು ನಮ್ಮಲ್ಲಿ ಬಹಳಷ್ಟು ಜನರಿಗಿಲ್ಲ. ಬೌದ್ಧಿಕ ಪ್ರಖರತೆಗೆ ಹೆಸರುವಾಸಿಯಾದ, ‘ಅನವಟ್’ ಅಪ್ರಚಲಿತ, ಜೋಡ್’ ರಾಗಗಳ ಅದ್ಭುತ ಭಂಡಾರವಾಗಿದ್ದ ಅತ್ರೌಳಿ-ಜೈಪುರ್ ಘರಾನಾದ ಜನಕರಾದ ಉಸ್ತಾದ್ ಅಲ್ಲಾದಿಯಾ ಖಾನ್‌ರವರು ಯಾವ ಭೇದ-ಬಾವವವನ್ನೂ ಮಾಡದೆ ಭಾರತದ ಇಬ್ಬರು ಮಹಿಳಾ ಗಾನ ರತ್ನಗಳನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿ ಅವರಿಗೆ ತಮ್ಮ ಸಕಲ ವಿದ್ವತ್ತನ್ನೂ ಧಾರೆಯೆರೆದರು  ಅವರೇ ಅಸಾಧಾರಣ ವಿದ್ವತ್ ಹಾಗೂ ಪ್ರಾವೀಣ್ಯತೆಯನ್ನು ಹೊಂದಿದ ಗಾಯಕಿರಾದ ಕೇಸರಬಾಯಿ ಕೇಳ್ಕರ್ ಹಾಗೂ ಮೂಗೂಬಾಯಿ ಕುರ್ಡೀಕರ್‌ರವರು.

ಭಾಗ 3 : Music: ವೈಶಾಲಿಯಾನ; ‘ಇದನ್ನು ನೀವು ‘ಹರಾಮ್’ ಎಂದರೆ, ನಾನು ಮತ್ತಷ್ಟು ಹರಾಮ್…’ ಎಂದಿದ್ದರು ಬಿಸ್ಮಿಲ್ಲಾ ಖಾನ್

ಪ್ರತಿಕ್ರಿಯೆಗಾಗಿ : tv9kannadadigital@gmail.com

ಭಾಗ 1 :Music: ವೈಶಾಲಿಯಾನ; ‘ಮುಸ್ಲಿಂ ಟೆಕ್ನಿಷಿಯನ್​ ಕಳಿಸಿಕೊಟ್ಟರೆ ಅಭ್ಯಂತರವಿಲ್ಲ ತಾನೆ?’

Published On - 8:38 am, Sat, 16 April 22