Music: ವೈಶಾಲಿಯಾನ; ‘ಮಾಡಲಿಲ್ಲವೇ ತಪವ ಕೂಡೆ ಸುಗುಣದೊಡನೆ ತಿಳಿದು, ನೋಡಿ ತ್ರಿವಿಧ ಕರಣದಲ್ಲಿ’
Pandit R.V. Sheshadri Gawai : ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿ ಸಂಗೀತ ಪಾಠ- ಪ್ರವಚನಗಳನ್ನು ಮಾಡಲು ಹೋದಾಗ, ಪಾಂಡಿತ್ಯವನ್ನು ನಿಸ್ಪೃಹತೆಯಿಂದ ಧಾರೆಯೆರೆಯುವ ಧಾರಾಳತೆಯಿಂದ ಗವಾಯಿಗಳು ಗಮನ ಸೆಳೆದಿದ್ದರು.
ವೈಶಾಲಿಯಾನ | Vaishaliyaana : ಹಳೆಯ ಸಂಚಿಕೆಗಳನ್ನು ಗುರುಗಳ ಹುಟ್ಟುಹಬ್ಬ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ತಿರುವಿಹಾಕುತ್ತಿದ್ದಾಗ ಕಂಡಿದ್ದು ಸಂಚಿಕೆಯೊಂದರಲ್ಲಿ ಪ್ರತಿಕೆಯನ್ನು ಶ್ಲಾಘಿಸಿ, ಪ್ರಶಂಸಾಪೂರ್ವಕವಾಗಿ ವಿದ್ವಾನ್ ಗಾನಕಲಾಸಿಂಧು ಚೆನ್ನಕೇಶಯ್ಯನವರು ಬರೆದ ಆಶೀರ್ವಚನ : “ಶ್ರೀ ವಿಷ್ಣು ಪಾದೋದ್ಭವೆಯೂ, ಶ್ರೀ ಪರಶಿವನ ಜಟಾಜೂಟಮಂಡಿತಳೂ, ತ್ರಿಪಥಗಾಮಿನಿಯೂ ಆದ ಶ್ರೀ ಗಂಗಾಮಾತೆಯು ಲೋಕವನ್ನು ಪಾವನಗೊಳಿಸುತ್ತ, ಅನವರತ ಪೂರ್ಣಪ್ರವಾಹದಿಂದ ವಿರಾಜಿಸುತ್ತಿರುವಂತೆ ಈ ಗಾಯನ ಗಂಗೆಯೂ ಜನಾದರಣೀಯಳಾಗಿ ಅನಂತ ಮುಖಗಳಿಂದ ತನ್ನ ಆದರ್ಶವನ್ನು ಸಾಧಿಸುತ್ತ, ಚಿರಕಾಲ ವರ್ಧಿಸುತ್ತಿರಲೆಂದು ಅಂತರಂಗಪೂರ್ವಕವಾಗಿ ಹಾರೈಸುತ್ತೇನೆ.” ಒಂದೆರಡು ವರ್ಷಗಳನ್ನು ಪೂರೈಸುವುದೇ ಕಠಿಣ ಸವಾಲಾಗಿರುವಾಗ, ನನ್ನ ಗುರುಗಳು ಮನೆಮನೆಗೂ ಹೋಗಿ ಸಂಗೀತ ಪಾಠ ಹೇಳಿ, ಸಂವಾದಿನಿ ಕಲಾವಿದರಾಗಿ ಮತ್ತು ಅನೇಕ ಶಿಷ್ಯವೃಂದವನ್ನು ಪೊರೆದರು. ಡಾ. ಕೆ. ಎಸ್. ವೈಶಾಲಿ (Dr. K. S. Vaishali)
(ಯಾನ 6, ಭಾಗ 3)
ಸಂಗೀತ ಪ್ರಪಂಚದ ಮೇರು ಗಾಯಕರಾದ ಪಂ. ಮಲ್ಲಿಕಾರ್ಜುನ ಮನಸೂರ್, ಪಂ. ಬಸವರಾಜ ರಾಜಗುರು, ಪಂ. ಸಿದ್ಧರಾಮ ಜಂಬಲದಿನ್ನಿ, ಪಂ. ಸಂಗಮೇಶ್ವರ ಗುರವ್ ಮುಂತಾದ ಅನೇಕ ಕಲಾವಿದರಿಗೆ ಅತ್ಯುತ್ತಮ ಸಾಥ್ ನೀಡಿ, ಅನೇಕ ಸಂಗೀತ ಕಛೇರಿಗಳಲ್ಲಿ ಪಾಲ್ಗೊಂಡು, ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ , ಇಂತಹ ಅಮೂಲ್ಯವಾದ ಪತ್ರಿಕೆಯನ್ನು ಯಾರ ನೆರವೂ ಇಲ್ಲದೇ ಹೇಗೆ ನೆಡೆಸಿಕೊಂಡು ಬಂದರೆಂದು ಹಲವಾರು ಬಾರಿ ಯೋಚಿಸಿ ಮೂಕವಿಸ್ಮಿತಳಾಗಿದ್ದೇನೆ.
ಗುರುಗಳ ಸಂವಾದಿನಿ ಸೋಲೊ ವಾದನ ಕಛೇರಿಗಳನ್ನು ಕೇಳುವುದೆಂದರೆ ಅದೊಂದು ರಸದೌತಣ. ಕೀರವಾಣಿ, ಜೋಗ್, ನಟ್ ಭೈರವ್ ರಾಗಗಳಲ್ಲಿ ಅವರ ಸೋಲೊ ವಾದನ ಕೇಳಿ ಮಂತ್ರಮುಗ್ಧರಾಗದವರೇ ಇರಲಿಲ್ಲವೆನ್ನಬಹುದು. ಭಾರತ ಉಪಖಂಡದಲ್ಲಿ ಸಂವಾದಿನಿ ಬೆಳೆದುಬಂದ ಬಗ್ಗೆ ಅವರ ವಿದ್ವತ್ಫೂರ್ಣವಾದ ವ್ಯಾಖ್ಯಾನಗಳನ್ನು ನಾನು ಧ್ವನಿಮುದ್ರಣ ಮಾಡಿಕೊಳ್ಳಲಾಗದಿದ್ದುದಕ್ಕೆ ತೀವ್ರ ಪಶ್ಚಾತ್ತಾಪ ಪಟ್ಟಿದ್ದೇನೆ. ಗುರುಗಳ ಸಂಗೀತ ಪಾಠಗಳನ್ನೆಲ್ಲ ಧ್ವನಿಮುದ್ರಣ ಮಾಡಿಕೊಂಡಿದ್ದರೆ ವರ್ಣಿಸಲಸದಳವಾದ ಸಂಗ್ರಹವಾಗುತ್ತಿತ್ತು! ಅನೇಕ ಅಪರೂಪದ ವಚನಗಳು, ತತ್ವಪದಗಳು ನನ್ನ ಗುರುವಿನ ಭಂಡಾರದಲ್ಲಿದ್ದವು. ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿಯಿಂದ ಆಯ್ದ ಒಂದು ಅಪರೂಪದ ತತ್ವಪದವನ್ನು ಅವರು ಪಟದೀಪ್ ರಾಗದಲ್ಲಿ ಸಂಯೋಜಿಸಿದ್ದರು. “ಮಾಡಲಿಲ್ಲವೇ ತಪವ ಕೂಡೆ ಸುಗುಣದೊಡನೆ ತಿಳಿದು, ನೋಡಿ ತ್ರಿವಿಧ ಕರಣದಲ್ಲಿ” ಎಂಬ ತತ್ವಪದವನ್ನು ನನ್ನ ಸಂಗೀತ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಹಾಡಿದಾಗ, ಡಾ.ಯು.ಆರ್ ಅನಂತಮೂರ್ತಿಯವರು ಅದನ್ನು ಬಹಳ ಆಸ್ಥೆಯಿಂದ ಆಲಿಸಿ, ಟಿಪ್ಪಣಿ ಮಾಡಿಕೊಂಡಿದ್ದು ನನಗೆ ವಿಶೇಷವಾದ ಧನ್ಯತೆಯನ್ನು ನೀಡಿತ್ತು.
ಭಾಗ 1 : Music: ವೈಶಾಲಿಯಾನ; ಕಾಮದಹನದಂದು ಹುಟ್ಟಿದ ಗುರು ಶೇಷಾದ್ರಿ ಗವಾಯಿಯವರನ್ನು ನೆನೆಯುತ್ತ
ಪ್ರೀತಿಯ ಗುರುಗಳೇ ನನಗೆ ಸಂವಾದಿನಿಯನ್ನು ನುಡಿಸಿ ಪ್ರೋತ್ಸಾಹಿಸುತ್ತಿದ್ದರು. ಅದು ನನ್ನ ಪುಣ್ಯದ ಫಲವೇ ಸರಿ. ಹೀಗೆ ಗುರುಗಳು ಹಾಗೂ ತಬಲಾ ಕಲಾವಿದರಾದ ವಿದ್ವಾನ್ ಪಂ. ಎಂ. ನಾಗೇಶರೊಡಗೂಡಿ ಹಲವಾರು ಹಿಂದೂಸ್ತಾನಿ ಶಾಸ್ತ್ರೀಯ ಕಛೇರಿಗಳನ್ನು ನೀಡುವ ಸೌಭಾಗ್ಯ ನನಗೆ ಒದಗಿ ಬಂದಿತ್ತು. ಅಲ್ಲದೆ, ಗುರುಗಳ ಅರವಿಂದ ಸಂಗೀತ ವಿದ್ಯಾಲಯ ಮುಂಬಯಿಯ ಗಂಧರ್ವ ಮಹಾವಿದ್ಯಾಲಯದ ಸಂಗೀತ ಪರೀಕ್ಷೆಗಳಿಗೆ ಕೇಂದ್ರವಾಗಿತ್ತು. ಪ್ರಾರಂಭಿಕ ಹಂತದಿಂದ ಹಿಡಿದು ವಿಶಾರದಾ ಪೂರ್ಣದವರೆಗೂ ಎಲ್ಲ ಪರೀಕ್ಷೆಗಳೂ ಇಲ್ಲಿಯೇ ನಡೆಯುತ್ತಿದ್ದವು. ಅನೇಕ ಶಿಷ್ಯರು ಗುರುಗಳ ಮಾರ್ಗದರ್ಶನದಿಂದ ಪ್ರಬುದ್ಧ ಗಾಯಕರು, ತಬಲಾ, ಸಿತಾರ್ ಹಾಗೂ ಸಂವಾದಿನಿ ಕಲಾವಿದರಾಗಿ ಮಿಂಚಿದರು. ಪಂ. ಗೋಪಿನಾಥ್, ಲಾವಣ್ಯ ಕಮಲೇಶ್ ದಿನೇಶ್, ಲಕ್ಷ್ಮೀ ಕುಲಕರ್ಣಿ, ಪ್ರವೀಣ್ ರಾವ್, ಡಾ. ಉದಯರಾಜ್ ಕರ್ಪೂರ್ ಮೊದಲಾದ ಶಿಷ್ಯ ಪ್ರಮುಖರು ನನಗೆ ನೆನಪಾಗುತ್ತಾರೆ. ಗುರುಗಳ ಹಿರಿಯ ಶಿಷ್ಯರಾಗಿದ್ದ ಪಂ. ನಾಗರಾಜ್, ರಾಧಾಕೃಷ್ಣ, ಮಂಜುನಾಥ್ ಮೊದಲಾದವರು ಆದರ್ಶ ಸಂಗೀತ ಶಿಕ್ಷಕರಾಗಿ ಅನೇಕ ಶಿಷ್ಯರನ್ನು ತಯಾರು ಮಾಡಿದರು.
ಗುರುಗಳು ಬೇಸಿಗೆಯಲ್ಲಿ ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿ ಸಂಗೀತ ಪಾಠ- ಪ್ರವಚನಗಳನ್ನು ಮಾಡಲು ಕೆಲವು ವಾರಗಳ ಮಟ್ಟಿಗೆ ಹೋದಾಗ, ಅಲ್ಲಿಯ ಶಿಷ್ಯರು ಅವರ ಪಾಂಡಿತ್ಯವನ್ನು, ನಿಸ್ಪೃಹತೆಯಿಂದ ಎಲ್ಲವನ್ನೂ ಧಾರೆಯೆರೆಯುವ ಅವರ ಧಾರಾಳತೆಯನ್ನು, ಮುಕ್ತಕಂಠದಿಂದ ಕೊಂಡಾಡಿದ್ದರು. ಒತ್ತಾಯದ ಆಹ್ವಾನದ ಮೇರೆಗೆ ಗುರುಗಳು ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿ ಬೇಸಿಗೆಯ ಶಿಬಿರದಲ್ಲಿ ಬೋಧನೆ ಮಾಡಲು ಮೂರ್ನಾಲ್ಕು ಬಾರಿ ಹೋಗಿ ಬಂದರು. ಬೆಂಗಳೂರಿನ ಬಸವ ಸಮಿತಿ, ರಾಮಕೃಷ್ಣಾಶ್ರಮಗಳಲ್ಲೂ ಅವರು ಸಂಗೀತ ತರಗತಿಗಳನ್ನು ನಡೆಸುತ್ತಿದ್ದರು.
ಅವರ ಭಜನಾ ಕಾರ್ಯಕ್ರಮಗಳನ್ನು ಅಲ್ಲಿಯ ಶಿಷ್ಯರಾದ ವಿದ್ವಾನ್ ಗುರುರಾಜ್‌ರವರು ಇಂದಿಗೂ ಜ್ಞಾಪಿಸಿಕೊಳ್ಳುತ್ತಾರೆ. ಗುರುಗಳು ಸ್ಥಾಪಿಸಿದ ‘ಸಂಗೀತ ಕೃಪಾಕುಟೀರ’ ಸಂಸ್ಥೆಯನ್ನು ಇಂದಿನವರೆಗೂ ಮುಂದುವರಿಸಿಕೊಂಡು ಬರುತ್ತಿರುವ ಅವರ ಮತ್ತೋರ್ವ ಶಿಷ್ಯೋತ್ತಮರಾದ ಪಂ. ಗುಂಡಾಸ್ತ್ರಿಯವರು, ಗುರುಗಳ ಹೆಸರಿನಲ್ಲಿ ಪ್ರತೀವರ್ಷದ ಹೋಳಿ ಹಬ್ಬದಂದು “ಪಂ. ಆರ್.ವಿ ಶೇಷಾದ್ರಿ ಗವಾಯಿ ಪುಣ್ಯ ಸ್ಮರಣೋತ್ಸವ’ವನ್ನು ಭಕ್ತಿ- ಶ್ರದ್ಧೆಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಭಾನುವಾರ ಗುರುಗಳ 19ನೇ ಪುಣ್ಯ ಸ್ಮರಣೋತ್ಸವದ ಪ್ರಯುಕ್ತ ಸಂಗೀತ ಕಛೇರಿಗಳು ಬನಶಂಕರಿಯ ಸ್ವಾಮಿ ವಿವೇಕಾನಂದ ವಿದ್ಯಾಶಾಲೆಯಲ್ಲಿ ಜರುಗಲಿವೆ. ನನ್ನ ಗುರುಗಳು ಎಲೆಯ ಮರೆಯ ಕಾಯಿಯಂತೆ , ಸಂಗೀತ ಕ್ಷೇತ್ರದಲ್ಲಿ ಸತತವಾಗಿ ದುಡಿದು , ಅಮೋಘ ಸೇವೆ ಸಲ್ಲಿಸಿದ ಅನೇಕ ವಿದ್ವಾಂಸರು- ವಿದುಷಿಯರಿಗೆ ತಮ್ಮ ಮಾಸ ಪತ್ರಿಕೆಯಲ್ಲಿ ಸಂಗೀತದ ಕುರಿತಾದ ಲೇಖನಗಳನ್ನು ಬರೆಯಲು ಅವಕಾಶ ನೀಡಿದ್ದರು. ಸಂಗೀತ ವಿದುಷಿ ಬಿ.ಎಸ್ ಚಂದ್ರಕಲಾರವರು ‘ಗಾಯನ ಗಂಗಾ’ ದ ಕುರಿತಾಗಿ ಬರೆದ ಕವನವೊಂದನ್ನು ಮೆಲುಕು ಹಾಕುತ್ತ, ಗುರುಗಳಿಗೆ ನನ್ನ ಅಶ್ರುತರ್ಪಣ ಸಲ್ಲಿಸುತ್ತಿದ್ದೇನೆ – “ಗಾಯನ ಗಂಗಾ, ಸ್ವಾದಶುಭಾಂಗ / ಸಜ್ಜನರಾಶ್ರಿತ ಪೋಷೆ ಕೃಪಾಂಗ /ವಿದ್ವಜ್ಜನರಾ ಭಾವರಸಾಂಗ / ಉತ್ತರ ದಕ್ಷಿಣ ಗಾನ ಸುಧಾಂಗ / ಕಲೆಗದು ರಂಗಾಕಾರ್ಯ ಭುಜಾಂಗ / “ಗಾಯನ ಗಂಗಾ ನಾದ ವಿಹಂಗ” “ಶಾಸ್ತ್ರಕೆ ಸಮ್ಮತ ಕೋವಿದರಭಿಮತ / ನಾಡಿಗೆ ಸನ್ನುತ ಧ್ಯೇಯವು ಉನ್ನತ / ವಿಷಯವ ಹೊಮ್ಮುತ ಬೆಳಕದ ಚಿಮ್ಮುತ / ನವರಸ ಸೂಸುವ ತಣಿಸುವ ಒಮ್ಮತ / ಗಾಯನ ಗಂಗಾ ಜೀವ ತರಂಗಾ”
(ಮುಗಿಯಿತು)
(ಮುಂದಿನ ಯಾನ : 2.4.2022)
ಈ ಅಂಕಣದ ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/vaishaliyaana