Music: ವೈಶಾಲಿಯಾನ; ಕಾಮದಹನದಂದು ಹುಟ್ಟಿದ ಗುರು ಶೇಷಾದ್ರಿ ಗವಾಯಿಯವರನ್ನು ನೆನೆಯುತ್ತ
Pandit R.V. Sheshadri Gawai : ನಮ್ಮ ಮನೆ-ಮನಗಳನ್ನು ಸಂಗೀತಮಯವನ್ನಾಗಿಸಿ, ನಂದಾದೀಪವಾಗಿದ್ದ ಗುರುಗಳು ಒಮ್ಮೆಯೂ ಮುನಿಸಿಕೊಂಡಿದ್ದಿಲ್ಲ. ಅವರ ಎಣೆಯಿಲ್ಲದ ವಾತ್ಸಲ್ಯ- ತಾಳ್ಮೆ ನೆನೆದು ಅದೆಷ್ಟೋ ಬಾರಿ ಗದ್ಗದಿತಳಾಗಿದ್ದೇನೆ.
ವೈಶಾಲಿಯಾನ | Vaishaliyaana : ಹೋಳಿಹುಣ್ಣಿಮೆ ಸಮೀಪಿಸುತ್ತಿದ್ದಂತೆ, ನನ್ನ ನೆನಪಿನ ಸುರುಳಿ ಬಿಚ್ಚಿಕೊಳ್ಳಲಾರಂಭಿಸುತ್ತದೆ. ಕಾಮದಹನದಂದು ಹುಟ್ಟಿದ, ನನ್ನ ಸಂಗೀತ ಗುರುಗಳಾದ ‘ಸಂಗೀತ ಮಹಾಮೋಪಾಧ್ಯಾಯ’ ಪಂ. ಆರ್. ವಿ ಶೇಷಾದ್ರಿ ಗವಾಯಿಯಯವರ (1924-2003) ಕುರಿತಾದ ಅಸಂಖ್ಯಾತ ಮಧುರ ಸ್ಮೃತಿಗಳನ್ನು ಮೆಲುಕು ಹಾಕುತ್ತಾ, ಭಾವಪರವಶಳಾಗಿ ಬಿಡುತ್ತೇನೆ. ಗುರುಗಳು ಕೇವಲ ನನ್ನ ಗುರುಗಳಷ್ಟೇ ಆಗಿರಲಿಲ್ಲ, ಅವರು ನನ್ನ ಇಡೀ ಕುಟುಂಬಕ್ಕೇ ಗುರುಗಳಾಗಿದ್ದರು. ಎರಡು ದಶಕಗಳಿಗೂ ಮೀರಿದ ಗುರು-ಶಿಷ್ಯೆಯ ಒಡನಾಟ ನನ್ನ ಪಾಲಿಗೆ ಎಂದೆಂದಿಗೂ ಅವಿಸ್ಮರಣೀಯ. ಉತ್ಕಟ ಸಂಗೀತ ಪ್ರೇಮಿಗಳೂ, ಶಾಸ್ತ್ರೀಯ ಸಂಗೀತಾಸಕ್ತರೂ ಆದ ನನ್ನ ತಂದೆ- ತಾಯಿ, ಸಹೋದರ- ಸಹೋದರಿಯರೂ ಗವಾಯಿಗಳ ಶಿಷ್ಯಮಂಡಳಿಗೆ ಸೇರ್ಪಡೆಯಾದದ್ದು ಅಚ್ಚರಿಯ ಸಂಗತಿಯೇನಲ್ಲ. ಹೀಗೆ ನನ್ನ ಸಂಗೀತದ ಅಧ್ಯಯನಕ್ಕೆ ಇಡೀ ಕುಟುಂಬವೇ ಅತ್ಯುತ್ತಮ ಸಾಥ್ ನೀಡಿತ್ತು. ಡಾ. ಕೆ. ಎಸ್. ವೈಶಾಲಿ (Dr. K. S. Vaishali)
(ಯಾನ 6, ಭಾಗ 1)
ನಾನು ಗವಾಯಿಗಳ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಧ್ಯಯನ ಪ್ರಾಂಭಿಸಿದಾಗ ಸುಮಾರು ಏಳು ಅಥವಾ ಎಂಟು ವರ್ಷಗಳ ಪುಟ್ಟ ಬಾಲಕಿ. ನನ್ನ ತಂಗಿಯರಾದ ವೈಜಯಂತಿ ಮತ್ತು ಶೆಫಾಲಿ ತುಂಬಾ ಚಿಕ್ಕ ಹುಡುಗಿಯರು. ನನ್ನ ಪುಟ್ಟ ತಮ್ಮ ಸ್ಕಂದ ಎಳೆಯ ಶಿಶು. ನಾನು ಸಂವಾದಿನಿಯನ್ನು ನುಡಿಸುತ್ತ ಹಾಡುತ್ತಿರುವಾಗ ಪಕ್ಕದಲ್ಲಿ ನನ್ನ ತಾಯಿ ಪುಟ್ಟ ಶಿಶುವಾಗಿದ್ದ ತಮ್ಮನನ್ನು ಮಲಗಿಸುತ್ತಿದ್ದರು. ತಮ್ಮ ಕೈಕಾಲು ಬಡಿಯುತ್ತ, ತನ್ನದೇ ಬಾಲಭಾಷೆಯಲ್ಲಿ ಕೆಲವೊಮ್ಮೆ ಆಲಾಪ ಮಾಡುತ್ತ, ಕೇಕೆ ಹಾಕುತ್ತ ದನಿಗೂಡಿಸುತ್ತಿದ್ದ. ನನ್ನ ಪಾಠದ ಮುಕ್ತಾಯಕ್ಕೆ ನಾನು ಭೈರವಿಯಲ್ಲಿ ಒಂದು ಮಂಗಳಗೀತೆಯನ್ನು ಹಾಡುತ್ತಿದ್ದೆ. “ಸ್ವಾಮಿ ನರಸಿಂಹ ಸರಸ್ವತಿಗೆ, ಗುರುಮೂರ್ತಿಗೆ, ಯತಿವರ್ಯಗೆ ಮಂಗಳ, ಕಾಮಿತ –ಕಾಮಫಲ ತೃಪ್ತಗೆ ಮಂಗಳ” ಎಂದು ಸಾಗುತ್ತಿದ್ದ ಸಾಲುಗಳನ್ನು ಮುದ್ದಾಗಿ ನನ್ನ ಒಂದೂವರೆ ವರ್ಷದ ತಮ್ಮ ಸ್ಕಂದ ‘ಕಾಮಿತ, ಕಾಮಿತ’ ಎನ್ನುತ್ತ ತೊದಲು ನುಡಿಯಲ್ಲಿ ಹಾಡಲು ಪ್ರಯತ್ನಿಸುತ್ತಿದ್ದದ್ದು ನೆನಪಾಗುತ್ತದೆ.
ಅವನು ಮೊದಲು ಅಂಬೆಗಾಲಿಟ್ಟು, ನಡೆಯಲು ಕಲಿತಾಗ, ನಾನು ಯಮನ್ ರಾಗದಲ್ಲಿ ಹಾರ್ಮೋನಿಯಂ ನುಡಿಸುತ್ತ, ‘ಸಖಿ ಏರಿ ಆಲಿ ಪಿಯಾ ಬಿನ’ ಎಂಬ ಛೋಟಾ ಖ್ಯಾಲ್ ಹಾಡುತ್ತಿದ್ದರೆ, ಆತ ಸಂತೋಷದಿಂದ ಕೇಕೆ ಹಾಕುತ್ತಿದ್ದ. ಪುಟ್ಟ ತಂಗಿಯರಾದ ವೈಜಯಂತಿ- ಶೆಫಾಲಿ ದನಿಗೂಡಿಸುತ್ತಿದ್ದರು. ನನ್ನ ತಾಯಿ ಶಾಲಿನಿಯವರೂ ಗವಾಯಿಗಳ ಬಳಿ ಹತ್ತು ವರ್ಷ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ನನ್ನೊಡನೆ ಅಭ್ಯಾಸ ಮಾಡಿದ್ದರು. ಸೊಗಸಾಗಿ ಸಂವಾದಿನಿಯನ್ನೂ ನುಡಿಸಲು ಕಲಿತಿದ್ದರು.
ಇದನ್ನೂ ಓದಿ : Literature: ವೈಶಾಲಿಯಾನ; ಸಾಹಿತ್ಯಕ್ಕೆ ಮನಸ್ಸನ್ನು ಪರಿವರ್ತಿಸುವಂಥ ಅಪರಿಮಿತ ಶಕ್ತಿಯಿದೆ
ಪಂ. ಶೇಷಾದ್ರಿ ಗವಾಯಿಯವರು ಜ್ಞಾನದ ಭಂಡಾರವೇ ಆಗಿದ್ದರೂ ಅತ್ಯಂತ ಸರಳ ಸ್ವಭಾವದ ಮಮತಾಮಯಿ. ಗುರುಗಳು ಸೂರ್ಯ – ಚಂದ್ರರಿದ್ದ ಹಾಗೆ ಎಂದು ನನ್ನ ತಂದೆ ಅವರನ್ನು ಬಣ್ಣಿಸುತ್ತಿದ್ದರು. ವಾರಕ್ಕೆ ಎರಡು ಬಾರಿ ಗುರುಗಳು ನಮ್ಮ ಮನೆಗೆ ಚಾಮರಾಜಪೇಟೆಯಿಂದ ಬರುತ್ತಿದ್ದರು. ಆ ಎರಡು ದಿನಗಳಂದು ನನ್ನ ಮನೆಯವರಿಗೆಲ್ಲ ಸಂಭ್ರಮ. ಹೀಗೆ ಪ್ರಾರಂಭವಾದ ಈ ಅನ್ಯೋನ್ಯ ಒಡನಾಟ ಇಪ್ಪತ್ತು ವರ್ಷಗಳವರೆಗೂ, ಗುರುಗಳು ಅಸ್ತಂಗತರಾಗುವ ಮುನ್ನ ಕೆಲವು ತಿಂಗಳವರೆಗೂ ನಡೆದಿತ್ತು. ನಮ್ಮ ಮನೆ- ಮನಗಳನ್ನು ಸಂಗೀತಮಯವನ್ನಾಗಿಸಿ, ಬೆಳಗಿದ ನಂದಾದೀಪವಾಗಿದ್ದ ಗುರುಗಳು ಒಮ್ಮೆಯಾದರೂ ಮುನಿಸಿಕೊಂಡಿದ್ದಿಲ್ಲ. ಅವರ ಎಣೆಯಿಲ್ಲದ ವಾತ್ಸಲ್ಯ- ತಾಳ್ಮೆಗಳನ್ನು ನೆನೆಸಿ ನಾನು ಅದೆಷ್ಟೋ ಬಾರಿ ಗದ್ಗದಿತಳಾಗಿದ್ದೇನೆ.
ನಿಸ್ಸಂದೇಹವಾಗಿಯೂ ಗವಾಯಿಗಳು ಒಂದು ವಿಶ್ವವಿದ್ಯಾನಿಲಯವೇ ಆಗಿದ್ದರು ಎಂದರೆ ಅದು ಅತಿಶಯೋಕ್ತಿಯೇನಲ್ಲ. ಅದು ಅವರನ್ನು ಬಲ್ಲವರೆಲ್ಲರೂ ಒಕ್ಕೊರಲಿನಿಂದ ಅನುಮೋದಿಸುವ ಸತ್ಯವಾಗಿತ್ತು. ಗುರುಗಳು ತಮ್ಮ ಬಾಲ್ಯ- ಯೌವನದ ಸಂಗೀತದ ಅಧ್ಯಯನದ ದಿನಗಳ ಬಗ್ಗೆ ಸುದೀರ್ಘವಾಗಿ, ನನ್ನೊಡನೆ ಹಾಗೂ ನನ್ನ ತಾಯಿಯೊಡನೆ ಹಂಚಿಕೊಂಡಿದ್ದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯುವ ಹೆಬ್ಬಯಕೆಯಿಂದ ಎಳೆಯ ಪ್ರಾಯದಲ್ಲಿಯೇ ಮನೆಯನ್ನು ತೊರೆದು ಬಂದ ಗವಾಯಿಯವರು, ಶಿಷ್ಯವೃತ್ತಿ ಮಾಡಿದ್ದು, ಗದಗಿನ ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರಲ್ಲಿ ಮತ್ತು ಅವರ ಶಿಷ್ಯರಾದ ಡಾ. ಪುಟ್ಟರಾಜ ಗವಾಯಿಗಳಲ್ಲಿ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಹಿಂದಿನ ಯಾನ : Ukraine Invasion: ವೈಶಾಲಿಯಾನ; ಮಹಾಕೃತಿಗಳು ಕಟ್ಟಿಕೊಟ್ಟ ಮೌಲ್ಯಗಳನ್ನು ವಿಸ್ಮೃತಿಗೊಳಗಾಗಿ ನಿರ್ಲಕ್ಷಿಸುತ್ತಿದ್ದೇವೆ
ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/vaishaliyaana
Published On - 10:01 am, Sat, 19 March 22