Ukraine Invasion: ವೈಶಾಲಿಯಾನ; ಮಹಾಕೃತಿಗಳು ಕಟ್ಟಿಕೊಟ್ಟ ಮೌಲ್ಯಗಳನ್ನು ವಿಸ್ಮೃತಿಗೊಳಗಾಗಿ ನಿರ್ಲಕ್ಷಿಸುತ್ತಿದ್ದೇವೆ
War and Sensibility : ತನ್ನ ಸೊಸೆಯರು, ಹೆಣ್ಣುಮಕ್ಕಳು ಗ್ರೀಕ್ ನಾಯಕರ ನಡುವೆ ಬೆಲೆವೆಣ್ಣುಗಳಾಗಿ ಹರಾಜಾಗಿ, ದಾಸಿಯರಾಗುವುದನ್ನು ನೋಡುತ್ತ ಆಘಾತಗೊಳ್ಳುವ ಹೆಕ್ಯೂಬಳಿಗೆ ಮತ್ತೊಂದಿಷ್ಟು ಅನಿಷ್ಟದ ವಾರ್ತೆಗಳು ತಲುಪುತ್ತವೆ.
ವೈಶಾಲಿಯಾನ | Viashaliyaana : ಭಯಾನಕವಾದ ಕೋವಿಡ್ ಹಿಡಿತದಲ್ಲಿ ನಲುಗಿದ ಮಾನವಕುಲಕ್ಕೆ ಈಗ ಮತ್ತೊಂದು ಭೀಕರವಾದ ಆಪತ್ತು ಬಂದೆರಗಿದೆ. ಜಾಗತಿಕ ನಿರ್ಬಂಧಕ್ಕೂ ಮಣಿಯದೆ, ಆರ್ಥಿಕ ದಿಗ್ಬಂಧನಕ್ಕೂ ಅಂಜದೆ, ಕಳೆದ ವಾರದಿಂದ ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾ, (Russia Ukraine War Crisis) ಔಪಚಾರಿಕವಾಗಿ ಉಕ್ರೇನ್ ಜೊತೆಗೆ ಸಂಧಾನದ ಮಾತುಕತೆಗೆ ಮೊದಲು ಒಪ್ಪಿದಂತೆ ನಟಿಸಿದರೂ, ಒಳಗೇ ಕುದಿಯುತ್ತ, ಕೆಂಡಾಮಂಡಲಗೊಂಡಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರವರು ಪುಟ್ಟ ದೇಶ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ಮಾಡುವ ಗಂಡಾಂತರವೂ ಎದುರಾಗಿದೆ. ಈ ಯುದ್ಧದ ಕರಾಳತೆ ಇಡೀ ಜಗತ್ತಿಗೇ ಕಾಳ್ಗಿಚ್ಚಿನಂತೆ ಹಬ್ಬಿದರೂ ಆಶ್ಚರ್ಯವಿಲ್ಲ. ಸಮರಾವೇಶದಿಂದ ಸಮುದಾಯಗಳು, ದೇಶಗಳೇ ನಾಶಗೊಂಡಿವೆ. ನಾಗರಿಕತೆಗಳೇ ನಿರ್ನಾಮಗೊಂಡಿವೆ ಎಂಬುದನ್ನು ಅವಶ್ಯ ನೆನಪಿಡಲೇಬೇಕು. ಡಾ. ಕೆ. ಎಸ್. ವೈಶಾಲಿ (Dr. K. S. Vaishali)
(ಯಾನ 5, ಭಾಗ 1)
ಎರಡನೆಯ ಮಹಾಯುದ್ಧದ ಸಮಯದಲ್ಲಿ ಅಮೆರಿಕಾ ಹೇಗೆ ಜಪಾನಿನ ಎರಡು ನಗರಗಳಾದ ಹಿರೋಷಿಮಾ-ನಾಗಸಾಕಿಗಳ ಮೇಲೆ ಅಣ್ವಸ್ತ್ರ ದಾಳಿ ನಡೆಸಿ, ಆ ದುರ್ಘಟನೆ ಜಗತ್ತು ಅಲ್ಲಿಯವರೆಗೂ ಕಂಡು-ಕೇಳರಿಯದ ಅತಿ ಘೋರ ದುರಂತಕ್ಕೆ ನಾಂದಿಯಾಯಿತು ಎಂಬ ಕಹಿ ಸತ್ಯವನ್ನು ನಾವು ಈಗ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಕೂಡ ಅರಗಿಸಿಕೊಳ್ಳಲಾಗಿಲ್ಲ. ಅನಾದಿ ಕಾಲದಿಂದಲೂ ಮಾನವರು ಯುದ್ಧಗಳನ್ನು ಸೆಣಸುತ್ತಲೇ ಬಂದಿದ್ದಾರೆ. ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದರೆ, ಕಣ್ಣಿಗೆ ರಾಚುವುದೇ ಯುದ್ಧಗಳ ಸರಮಾಲೆ.
ಪ್ರಪಂಚದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ಇಲಿಯಡ್, ಒಡಿಸ್ಸಿ, ಏನಿಡ್ಗಳಲ್ಲಿ ವರ್ಣಿಸಲಾಗಿರುವ ಯುದ್ಧಗಳಲ್ಲಿ ಅವ್ಯಾಹತವಾಗಿ ನಡೆದ ಮನುಷ್ಯರ ಮಾರಣ ಹೋಮಗಳನ್ನು, ಜರ್ಝರಿತರಾಗಿ ಹತ್ತಿರದವರೆಲ್ಲರನ್ನೂ ಕಳೆದುಕೊಂಡು, ತಬ್ಬಲಿಗಳಾಗಿ ಕಂಗಾಲಾದ ಎಳೆಯ ಮಕ್ಕಳನ್ನು, ಕಂಗೆಟ್ಟು ಬಸವಳಿದು, ವೈರಿ ಸೈನಿಕರ ಕಾಮತೃಷೆಗೆ ಬಲಿಯಾಗಿ, ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಅಸುನೀಗಿದ ಮಹಿಳೆಯರ ಕುರಿತಾಗಿ ನಾವು ಎಷ್ಟೋ ಓದಿರಬಹುದು, ಚಲನಚಿತ್ರಗಳನ್ನು ವೀಕ್ಷಿಸಿರಬಹುದು. ಆದರೆ ಏಕೆ ಈ ಘೋರ ದುರಂತಗಳು ನಮ್ಮನ್ನು ಯುದ್ಧದಿಂದ ಸಂಭವಿಸುವ ವಿಪತ್ತುಗಳ ಬಗ್ಗೆ ಸಂವೇದನಾಶೀಲರನ್ನಾಗಿ ಮಾಡುವಲ್ಲಿ ವಿಫಲಗೊಂಡಿವೆ ?
ಇದನ್ನೂ ಓದಿ : Theatre: ಅಂಕಪರದೆ; ‘ವ್ಯೋಮ 360 ನಾಟಕೋತ್ಸವ’ದಲ್ಲಿ ರಂಗರಥದಿಂದ ‘ಆ್ಯಬ್ಸಿಂತ್’
ಕವಿ ಹೋಮರ್‌ನ ಇಲಿಯಡ್ ಮಹಾಕಾವ್ಯ ಟ್ರೋಜನ್ನರು ಮತ್ತು ಅಖೈಯಾನರು/ಗ್ರೀಕರ ನಡುವೆ ಹತ್ತು ವರ್ಷಗಳ ಕಾಲ ನಡೆದ ಯುದ್ಧದ ಕುರಿತಾದ ಅಮೋಘ ಚಿತ್ರಣ ನೀಡುತ್ತದೆ. ಕ್ರಿಸ್ತಪೂರ್ವ ಕಾಲಘಟ್ಟದಲ್ಲಿಯೇ ಹೊರಬಂದ ಈ ಮಹಾಕೃತಿಗಳು ಕಟ್ಟಿಕೊಟ್ಟ ಮೌಲ್ಯಗಳನ್ನು ನಾವೇಕೆ ವಿಸ್ಮೃತಿಗೊಳಗಾಗಿ ನಿರ್ಲಕ್ಷಿಸುತ್ತಿದ್ದೇವೆ? ಅನೇಕ ವರ್ಷಗಳವರೆಗೆ ನಡೆದ ಭೀಕರ ಪೀಲೊಪೊನ್ನೇಷಿಯನ್ ಕದನಗಳ ಹಿನ್ನೆಲೆಯಲ್ಲಿ, ಮಹಾನ್ ನಾಟಕಕಾರ ಯೂರಿಪಿಡಿಸ್ ರಚಿಸಿದ ಟ್ರೋಜನ್ ವಿಮೆನ್ ನಾಟಕದಲ್ಲಿ, ಸಮರದಲ್ಲಿ ಗ್ರೀಕರು ಗೆದ್ದ ನಂತರ ನಡೆಯುವ ಬರ್ಬರ ಕೃತ್ಯಗಳ ಮನಕಲಕುವ ವರ್ಣನೆ ಇದೆ. ದೊರೆ ಪ್ರಿಯಾಂನ ರಾಣಿ, ಹೆಕ್ಯೂಬಾ ತನ್ನೆಲ್ಲ ಮಡಿದ ಪುತ್ರ- ಪ್ರತಿಯರನ್ನು ನೆನೆಸಿ ಆರ್ತನಾದ ಮಾಡುತ್ತ, ಪ್ರಲಾಪಿಸುವ ವರ್ಣನೆ ನಮ್ಮ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ.
ತನ್ನ ಮಿರ್ಮಿಡಿಯೋನ್ ಯೋಧರೊಡಗೂಡಿ ವೀರಾಗ್ರಣಿ ರಾಜಕುಮಾರ ಹೆಕ್ಟರ್‌ನನ್ನು ಯುದ್ಧಭೂಮಿಯಲ್ಲಿ ಹತ್ಯೆಗೈದ ಅಖಿಲಸ್ ಅವನ ಕಳೇಬರಕ್ಕೆ ಅವಮಾನ ಮಾಡಿ ಅದನ್ನು ಟ್ರೋಜನ್ನರಿಗೆ ಒಪ್ಪಿಸದೇ ಸತಾಯಿಸುವಾಗ, ಹೆಕ್ಟರನ ತಂದೆ ದೊರೆ ಪ್ರಿಯಾಂ ತನ್ನ ಪುತ್ರನ ಅಂತ್ಯಕ್ರಿಯೆಗಳನ್ನು ನೆರವೇರಿಸಲಿಕ್ಕಾಗಿ ಅವನ ಶವಕ್ಕಾಗಿ ಅಂಗಲಾಚುವ ಸನ್ನಿವೇಶ, ನಮ್ಮ ಕಣ್ಣಾಲಿಗಳನ್ನು ಮಂಜಾಗಿಸುತ್ತದೆ. ಸುಂದರವಾದ ಇಡೀ ಟ್ರಾಯ್ ನಗರವೇ ಬೆಂಕಿಯಲ್ಲಿ ಬೆಂದು ಭಸ್ಮವಾಗುವುದನ್ನು , ತನ್ನ ಸೊಸೆಯರು, ಹೆಣ್ಣುಮಕ್ಕಳು ಗ್ರೀಕ್ ನಾಯಕರ ನಡುವೆ ಬೆಲೆವೆಣ್ಣುಗಳಾಗಿ ಹರಾಜಾಗಿ, ದಾಸಿಯರಾಗುವುದನ್ನು ನೋಡುತ್ತ ಆಘಾತಗೊಳ್ಳುವ ಹೆಕ್ಯೂಬಳಿಗೆ ಮತ್ತೊಂದಿಷ್ಟು ಅನಿಷ್ಟದ ವಾರ್ತೆಗಳು ತಲುಪುತ್ತವೆ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಹಿಂದಿನ ಯಾನ : Hijab: ವೈಶಾಲಿಯಾನ; ಮುಸ್ಲಿಂ ಯುವತಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು ಎಂಥಾ ಹೇಯವಾದ ಆಷಾಢಭೂತಿತನ!