Hijab: ವೈಶಾಲಿಯಾನ; ಮುಸ್ಲಿಂ ಯುವತಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು ಎಂಥಾ ಹೇಯವಾದ ಆಷಾಢಭೂತಿತನ!

Orhan Pamuk’s Snow : ‘ಹಿಮ ಕಾದಂಬರಿ, ಸಮಕಾಲೀನ ಭಾರತದ ಸಾಮಾಜಿಕ ವ್ಯವಸ್ಥೆಗೆ, ಅದರಲ್ಲೂ ವಿಶೇಷವಾಗಿ ನಮ್ಮ ರಾಜ್ಯದಲ್ಲಿ ಹುಟ್ಟುಹಾಕಿರುವ ‘ಹಿಜಾಬ್’ ವಿವಾದಕ್ಕೆ ಬಹಳ ಪ್ರಸ್ತುತವೆನಿಸುತ್ತದೆ. ಎರಡೂ ಧ್ರುವದವರೂ ನಡೆಸುವ ದೌರ್ಜನ್ಯಗಳಿಗೆ ಮಹಿಳೆಯರು ಹೇಗೆ ಬಲಿಪಶುಗಳಾಗುತ್ತಾರೆ ಎಂಬುದನ್ನು ಪಾಮುಕ್ ವರ್ಣಿಸಿರುವುದರ ಬಗ್ಗೆ ಅನೇಕರಿಗೆ ಅಸಮಾಧಾನವಿದೆ.‘ ಡಾ. ಕೆ. ಎಸ್. ವೈಶಾಲಿ

Hijab: ವೈಶಾಲಿಯಾನ; ಮುಸ್ಲಿಂ ಯುವತಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು ಎಂಥಾ ಹೇಯವಾದ ಆಷಾಢಭೂತಿತನ!
ಲೇಖಕ ಒರ್ಹಾನ್ ಪಾಮುಕ್, ಗಾಯಕಿ ಲತಾ ಮಂಗೇಶ್ಕರ್, ಕವಿ ಚೆನ್ನವೀರ ಕಣವಿ, ಗಾಯಕ ಶೇಷಾದ್ರಿ ಗವಾಯಿ
Follow us
ಶ್ರೀದೇವಿ ಕಳಸದ
|

Updated on:Feb 19, 2022 | 1:32 PM

ವೈಶಾಲಿಯಾನ | Vaishaliyaana : ನಮ್ಮ ಇಡೀ ರಾಜ್ಯದೆಲ್ಲೆಡೆ ‘ಹಿಜಾಬ್’ ವಿವಾದ ಕಾಳ್ಗಿಚ್ಚಿನಂತೆ ಹಬ್ಬಿದೆ. ತಾರಕಕ್ಕೇರಿರುವ ಈ ಸಂಘರ್ಷ, ಹೈಕೋರ್ಟಿನಲ್ಲಿಯೂ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ನಮ್ಮಲ್ಲಿ ಅನೇಕ ಕಾಲೇಜುಗಳಲ್ಲಿ ವಸ್ತ್ರಸಂಹಿತೆಗೆ ಸಂಬಂಧಿಸಿದಂತೆ ಬಿಗಿಯಾದ ಕಟ್ಟುಪಾಡುಗಳೇನೂ ಇಲ್ಲ. ಬಹಳ ಕಾಲದಿಂದಲೂ ಮುಸ್ಲಿಂ ಸಮುದಾಯದ ಹುಡುಗಿಯರು ಶಾಲಾ- ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರುವ ಪ್ರತೀತಿ ಇದ್ದು, ಅದು ಸರ್ವೇ ಸಾಮಾನ್ಯವಾಗಿ ಕಂಡುಬರುವ ದೃಶ್ಯವಾಗಿತ್ತು. ಇದನ್ನು ಏಕಾಏಕಿ ಜ್ವಾಲಾಮುಖಿಯಂತೆ ಭುಗಿಲ್ಲೆಂದು ಸಿಡಿಯುವ ಪ್ರಕೋಪಕ್ಕೆ ಕೊಂಡೊಯ್ದ ಖ್ಯಾತಿ ದಕ್ಷಿಣ ಕನ್ನಡದ ಉಡುಪಿಯ ಕಾಲೇಜಿನ ಪ್ರಾಂಶುಪಾಲರು ಮತ್ತು ಅಲ್ಲಿನ ಆಡಳಿತ ಮಂಡಳಿಗೆ ಸಲ್ಲಬೇಕು. ಶಿರವಸ್ತ್ರ ಧರಿಸಿದ ಮುಸ್ಲಿಂ ತರುಣಿಯರಿಗೆ ಕಾಲೇಜಿಗೆ ಪ್ರವೇಶ ನಿಷೇಧಿಸಿ, ತಮ್ಮದೆಂದು ಭಾವಿಸಿದ್ದ ಕಾಲೇಜಿನಲ್ಲೇ ಅವರನ್ನು ಪರಕೀಯರನ್ನಾಗಿಸುವುದು,  ಭೀತಿ, ಮಾನಸಿಕ ತಲ್ಲಣಗಳನ್ನುಂಟು ಮಾಡಿ ಅವರು ವ್ಯಾಸಂಗ ಮುಂದುವರಿಸಲು ಸಾಧ್ಯವಾಗದಂಥಾ ಪ್ರತಿಕೂಲ ವಾತಾವರಣ ನಿರ್ಮಿಸುವುದು ಯಾವ ರೀತಿಯ ಮಹಿಳಾ ಸಬಲೀಕರಣವಾಗುತ್ತದೆ? ಎಂದು ಯೋಚಿಸಿ ಹೈರಾಣಗೊಂಡಿದ್ದೇನೆ. ಡಾ. ಕೆ. ಎಸ್. ವೈಶಾಲಿ, ಹಿಂದೂಸ್ತಾನಿ ಗಾಯಕಿ, ಲೇಖಕಿ

*

(ಯಾನ 4)

ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುವ, ಸರ್ವಧರ್ಮಸ್ನೇಹಿಯಾದಂಥ, ಧರ್ಮ ನಿರಪೇಕ್ಷಿತ ಪ್ರಾಪಂಚಿಕ ದೃಷ್ಟಿಕೋನವನ್ನು ಬೆಂಬಲಿಸುವವರು ನಾವಾಗಿದ್ದರೆ, ನಮ್ಮ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ತರುಣಿಯರಿಗೆ ನಾವು ಯಾವ ರೀತಿಯಲ್ಲಿ ನೈತಿಕ ಬೆಂಬಲವನ್ನು ನೀಡಿದ್ದೇವೆ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಅಸಮಾನತೆಗಳನ್ನು ನಿರ್ಮೂಲನ ಮಾಡುವುದು, ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವುದು, ಉನ್ನತ ಶಿಕ್ಷಣದ ಆಶೋತ್ತರಗಳಲ್ಲೊಂದು. ಸಾಮಾಜಿಕ ನ್ಯಾಯ, ಮಹಿಳಾ ವಿಮೋಚನೆಯ ಬಗ್ಗೆ ನೀಲಿ ನಕ್ಷೆಗಳನ್ನು ರೂಪಿಸುತ್ತಲೇ, ಮತ್ತೊಂದು ಕಡೆಯಿಂದ ಮುಸ್ಲಿಂ ಯುವತಿಯರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು, ಎಂಥಾ ಹೇಯವಾದ ಆಷಾಢಭೂತಿತನ! ಈ ಬಗೆಯ ತೋರಿಕೆಯ ಸೋಗನ್ನು ಹಾಕುವುದರಲ್ಲಿ ನಾವು ನಿಸ್ಸೀಮರಾಗಿಬಿಟ್ಟದ್ದೇವೆ. ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿಯ ಹಕ್ಕುಗಳನ್ನು ಒಕ್ಕೊರಲಿಂದ ಸಮರ್ಥಿಸುವ ಶಿಕ್ಷಣ ಸಂಸ್ಥೆಗಳು ಸೈನ್ಯದ ತುಕಡಿಗಳಂತೆ ಕಾರ್ಯ ನಿರ್ವಹಿಸುತ್ತ, ಇಂತಹ ಉಡುಪನ್ನು ಧರಿಸಿಯೇ ಕಾಲೇಜಿಗೆ ಬರಬೇಕೆಂದು ಆದೇಶ ಹೊರಡಿಸಿದರೆ, ಸುಮಾರು ಮುಸ್ಲಿಂ ಹುಡುಗಿಯರು ಶಾಲಾ-ಕಾಲೇಜುಗಳಿಗೆ ಗೈರುಹಾಜರಾಗುವ ಪರಿಸ್ಥಿತಿಯನ್ನು, ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳೇ ನಿರ್ಮಾಣ ಮಾಡಿದಂತಾಗುತ್ತದೆ.

ಹಿಜಾಬ್ ಅಥವಾ ಶಿರವಸ್ತ್ರವನ್ನು ಧಾರ್ಮಿಕ ಮೂಲಭೂತವಾದದ/ಶೋಷಿಸಲ್ಪಟ್ಟವರ ಲಾಂಛನವೆಂದು ಅರ್ಥೈಸಿಕೊಳ್ಳುವ ಮೂಲ ಗ್ರಹಿಕೆಯೇ ಸಂಕುಚಿತವಾದದ್ದು ಎಂಬುದು ನನ್ನ ಅಭಿಪ್ರಾಯ. ವಿಪರ್ಯಾಸವೆಂದರೆ ಕರ್ನಾಟಕದಲ್ಲಿನ ಸದ್ಯದ ಪ್ರಕ್ಷುಬ್ಧ ಸನ್ನಿವೇಶದಲ್ಲಿ, ‘ಹಿಜಾಬ್’ ಈಗ ಅಲ್ಪಸಂಖ್ಯಾತರಾದ ಮುಸ್ಲಿಂ ಮಹಿಳೆಯರಿಗೆ, ಸರ್ವಾಧಿಕಾರಿ ಧೋರಣೆಯ ಆಡಳಿತ ವರ್ಗವನ್ನು ಖಂಡಿಸುವ ಪ್ರತಿಭಟನಾತ್ಮಕ ನಿಲುವಿನ ಸಂಕೇತವಾಗಿ ಮಾರ್ಪಟ್ಟಿದೆ. ಇದು ಒಂದು ನಿರಂಕುಶಮತಿ ವ್ಯವಸ್ಥೆಯ ವಿರುದ್ಧ, ಮಹಿಳೆಯರಿಗೆ ಅವರಿಗೆ ಹಿತವೆನಿಸುವ ಉಡುಪನ್ನು ಕೂಡ ಧರಿಸಲು ಸ್ವಾತಂತ್ರ್ಯ ನೀಡದ, ಅವರ ಹಕ್ಕುಗಳನ್ನು ಗೌರವಿಸದ ಅಧಿಕಾರಶಾಹಿಯ ವಿರುದ್ಧ ಹೋರಾಟ ನಡೆಸುವ ಒಂದು ಶಸ್ತ್ರವಾಗಿ ರೂಪಾಂತರ ಹೊಂದಿದೆ. ಹಿಜಾಬ್ ಧರಿಸದ ಹುಡುಗಿಯರೂ ಇನ್ನುಮುಂದೆ ವ್ಯವಸ್ಥೆಯ ವಿರುದ್ಧ ತಮ್ಮ ಬಂಡಾಯದ ಕುರುಹಾಗಿ ಇದನ್ನು ಧರಿಸಲು ಇಚ್ಛಿಸಬಹುದೆಂಬ ವಿಲಕ್ಷಣ ಸಾಧ್ಯತೆಗಳಿಗೆ ಇದು ನಾಂದಿಯಾಗಬಹುದು. ಹಿಜಾಬ್ ಕೇವಲ ವಸ್ತ್ರ ಸಂಹಿತೆಯ ಭಾಗವಾಗದೇ ರಾಜಕೀಯ ನಿಲುವಿನ ದ್ಯೋತಕವಾಗುವ ಪರಿಯನ್ನು ನಾವೀಗ ನೋಡುತ್ತಿದ್ದೇವೆ.

ಅತ್ಯಂತ ಸೋಜಿಗದ ಸಂಗತಿಯೆಂದರೆ ಕೆಲವೊಮ್ಮೆ ಚಾರಿತ್ರಿಕ ಸನ್ನಿವೇಶಗಳು ಮತ್ತು ನಮ್ಮ ಈ ವರ್ತಮಾನದ ವಾಸ್ತವಗಳು, ನಮ್ಮನ್ನು ಮೂಕವಿಸ್ಮಿತರನ್ನಾಗಿಸುವಂತೆ ಕಾಲ್ಪನಿಕ ಸೃಷ್ಟಿಗಳಾದ ಕತೆ- ಕಾದಂಬರಿಗಳಲ್ಲಿ ಅದ್ಭುತ ರೂಪವನ್ನು ತಾಳುತ್ತವೆ. ಈ ಕತೆ-ಕಾದಂಬರಿಗಳು ಎಷ್ಟೋ ಸಾಮಾಜಿಕ ಸಂಘರ್ಷಗಳ ಬಗ್ಗೆ ವಿಸ್ಮಯಕಾರಿಯಾದ ಮುನ್ಸೂಚನೆಗಳನ್ನೂ ನೀಡಬಹುದು. ನಮ್ಮನ್ನು ತಬ್ಬಿಬ್ಬಾಗಿಸುವ ಕರ್ನಾಟಕದ ಪ್ರಸಕ್ತ ಹಿಜಾಬ್ ವಿವಾದದ ತಿರುವುಗಳು 2002ರಲ್ಲಿ ಪ್ರಕಟಗೊಂಡ ಟರ್ಕಿಷ್ ಕಾದಂಬರಿಕಾರ ಒರ್ಹಾನ್ ಪಾಮುಕ್‌ರವರ ರಾಜಕೀಯ ಕಾದಂಬರಿ Snow (ಹಿಮ) ದಲ್ಲಿ ಬರುವ ವಿದ್ಯಮಾನಗಳನ್ನು ಬಹುಪಾಲು ಹೋಲುತ್ತಿರುವುದನ್ನು ಗಮನಿಸುತ್ತ ನಾನು ದಂಗು ಬಡಿದುಹೋದೆ. ಚರಿತ್ರೆ ನಿಜವಾದ ಘಟನೆಗಳನ್ನು ದಾಖಲಿಸುತ್ತದೆ. ಸಾಹಿತ್ಯ ಕಾಲ್ಪನಿಕ ಸಂಗತಿಗಳನ್ನು ವರ್ಣಿಸುತ್ತದೆ ಎಂಬುದೊಂದು ಸಾಮಾನ್ಯ ತಿಳುವಳಿಕೆಯಾದರೂ ಇವುಗಳ ನಡುವಿನ ವ್ಯತ್ಯಾಸ ಅಷ್ಟು ಆಳವಾದದ್ದೇನಲ್ಲ.

ಯಾನ 1 : Vaishaliyaana : ವೈಶಾಲಿಯಾನ : ಮೂರನೇ ಅಲೆಯ ಹೊತ್ತಿನಲ್ಲಿ ನೆನಪಾಗುತ್ತಿರುವ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳು

Vaishaliyaana column Dr KS Vaishali Discussed Hijab Controversy and Tribute to Lata Mangeshkar and Chennaveer Kanavi

ವೈಶಾಲಿಯವರು ಅನುವಾದಿಸಿದ ಒರ್ಹಾನ್ ಪಾಮುಕ್ ಕಾದಂಬರಿ

ಪಾಮುಕ್‌ನ ಹಿಮ ಇದಕ್ಕೆ ಮಾದರಿಯಂತಿರುವ ಕಾದಂಬರಿ. 600 ಪುಟಗಳ, ರೋಚಕವಾದ ಈ ಬೃಹತ್ ರಾಜಕೀಯ ಕಾದಂಬರಿಯನ್ನು ನಾನು 2017ರಲ್ಲಿ ಕನ್ನಡಕ್ಕೆ ಅನುವಾದಿಸಿ, ಪ್ರಕಟಿಸಿದ್ದೆ. ಕಾದಂಬರಿಯ ಕಾಲಘಟ್ಟ 1990ರ ದಶಕ. ಕಾದಂಬರಿಯಲ್ಲಿ ಬರುವ ಘಟನೆಗಳು ಈ ದಶಕದ ಮೊದಲ ವರ್ಷಗಳಲ್ಲಿ ನಡೆಯುತ್ತವೆ. ಆಗ ಟರ್ಕಿಯಲ್ಲಿ ಇಸ್ಲಾಮಿ ಮೂಲಭೂತವಾದಿಗಳು ಅಧಿಕಾರಕ್ಕೆ ಬರುವ ಆತಂಕಗಳಿದ್ದವು. ಹಾಗಾಗಿ ಹಿಮ ಒಂದು ಐತಿಹಾಸಿಕ ಕಾಲಘಟ್ಟದ ಕಾದಂಬರಿಯೆನ್ನಬಹುದು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾಡುವಂತೆ ತನಗೆ ಎಲ್ಲಾ ಇಸ್ಲಾಮೀಯರನ್ನೂ ಉಗ್ರಗಾಮಿಗಳೆಂದು ಖಂಡಿಸುವುದರಲ್ಲಿ ಆಸಕ್ತಿಯಿಲ್ಲ. ಆದರೆ ಅದೇ ಸಮಯದಲ್ಲಿ ಸೆಕ್ಯುಲರ್ ಆದರ್ಶಗಳನ್ನು ಹೊಂದಿದವರೆಲ್ಲರೂ ಪಾಶ್ಚಿಮಾತ್ಯರ ಕೀಳು ದರ್ಜೆಯ ಅನುಕರಣೆಯಲ್ಲಿ ತೊಡಗಿರುವವರೆಂದು ಅರ್ಥೈಸಿಕೊಳ್ಳುವ ಇಸ್ಲಾಮೀಯರ ದೃಷ್ಟಿಕೋನವನ್ನೂ ತಾನು ಖಂಡಿಸುತ್ತೇನೆ . ಹೀಗೆ ಎರಡೂ ಬಣದವರಲ್ಲಿ ಹೇರಳವಾಗಿರುವ ಚರ್ವಿತ-ಚರ್ವಣವಾದ ಹಳಸಲು ಅಭಿಪ್ರಾಯಗಳನ್ನು (ಕ್ಲೀಷೆಗಳು) ನಾಶ ಮಾಡುವುದೇ ತನ್ನ ಧ್ಯೇಯವಾಗಿದೆ ಹಾಗೂ ತನ್ನ ರಾಜಕೀಯ ಕಾದಂಬರಿಯ ಮೂಲ ಉದ್ದೇಶವೂ ಇದೇ ಎಂದು ಪಾಮುಕ್ ಹೇಳುತ್ತಾರೆ.

ತನ್ನ ಸ್ವಯಿಚ್ಛೆಯಿಂದಲೇ ಹಿಜಾಬ್ ಧರಿಸುವ ಶಿರವಸ್ತ್ರಧಾರಿಣಿ ಯುವತಿಯರ ಪಡೆಯ ನಾಯಕಿಯಾದ ತರುಣಿ ಕ್ಯಾಡಿಫ್‌ಳನ್ನು ಪಾಮುಕ್ ಬಹಳ ಕಕ್ಕುಲಾತಿಯಿಂದ ಚಿತ್ರಿಸಿದ್ದರ ಬಗ್ಗೆ ಟರ್ಕಿಯ ಸೆಕ್ಯುಲರ್‌ವಾದಿಗಳು ಮುನಿಸಿಕೊಂಡಿದ್ದರು. ಕರ್ಸ್ ಎಂಬ ನಗರದಲ್ಲಿನ ಕಾಲೇಜೊಂದರಲ್ಲಿ ಪ್ರಗತಿಪರ ಸೆಕ್ಯುಲರ್‌ವಾದಿ ಎಂದೆನ್ನಿಸಿಕೊಳ್ಳುವ ಪ್ರಾಂಶುಪಾಲ ಶಿರವಸ್ತ್ರ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಪ್ರವೇಶ ನಿಷೇಧಿಸಲಾಗಿದೆಯೆಂದು ಘೋಷಿಸುತ್ತಾನೆ. ದಿನವೂ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದು ಪರಿ -ಪರಿಯಾಗಿ ಮೊರೆಯಿಡುತ್ತಾರೆ ಆದರೆ ನಿರ್ದಾಕ್ಷಿಣ್ಯವಾಗಿ ಅವರನ್ನು ತರಗತಿಗಳಿಂದ ಹೊರದಬ್ಬಲಾಗುತ್ತದೆ. ಇಸ್ತಾನ್‌ಬುಲ್‌ನಲ್ಲಿ ಅತ್ಯಾಧುನಿಕವಾದ ಉಡುಪುಗಳನ್ನು ಧರಿಸುತ್ತಿದ್ದ ಕಾದಂಬರಿಯ ನಾಯಕಿಯ ತಂಗಿ ಕ್ಯಾಡಿಫ್, ಕರ್ಸ್ ನಗರದ ಕಾಲೇಜಿನಲ್ಲಿ ಓದಲು ಬಂದವಳು, ಆಡಳಿತ ಮಂಡಳಿಯ ಅಮಾನವೀಯ ಧೋರಣೆಯಿಂದ ರೋಸಿಹೋಗಿ, ಬೇಸತ್ತು, ರೊಚ್ಚಿಗೆದ್ದು, ಹಿಜಾಬ್ ಧರಿಸುವ ಶಿರವಸ್ತ್ರಧಾರಿಣಿಯರ ಗುಂಪಿನ ನಾಯಕಿಯಾಗಿ ಹಠಾತ್ತಾಗಿ ಬದಲಾಗುತ್ತಾಳೆ.

ತೃತೀಯ ಜಗತ್ತಿನ ದಮನಿತ ಮಹಿಳೆಗೆ ಸಂಬಂಧಿಸಿದಂತೆ (Gendered subaltern) ಸಾಂಪ್ರದಾಯಿಕ ವ್ಯವಸ್ಥೆಯೊಂದು ಆಧುನೀಕತೆಯನ್ನು ಒಪ್ಪಿಕೊಳ್ಳುವ ಸಂಕ್ರಮಣ ಕಾಲದಲ್ಲಿ, ಮಹಿಳಾ ವಿಮೋಚನೆಯ ಪ್ರಶ್ನೆ ಯಾವ ರೀತಿಯ ರೂಪಾಂತರಗಳನ್ನು ಹೊಂದುತ್ತದೆ, ಅಲ್ಲಿ ನಮ್ಮನ್ನು ಕಂಗೆಡಿಸುವಂಥ ಯಾವ ಬಗೆಯ ವಿಲಕ್ಷಣ ಪರಿಸ್ಥಿತಿಗಳು ಉದ್ಭವಿಸುತ್ತವೆ ಎನ್ನುವುದನ್ನು ಅದ್ಭುತವಾದ ಕಥನಗಾರಿಕೆಯ ಮೂಲಕ ನಮ್ಮನ್ನು ಬೆಚ್ಚಿ ಬೀಳಿಸುತ್ತ ಮನವರಿಕೆ ಮಾಡಿಕೊಡುವ ಪಾಮುಕ್‌ನ ಹಿಮ ಕಾದಂಬರಿ, ಸಮಕಾಲೀನ ಭಾರತದ ಸಾಮಾಜಿಕ ವ್ಯವಸ್ಥೆಗೆ, ಅದರಲ್ಲೂ ವಿಶೇಷವಾಗಿ ಈ ಕರ್ನಾಟಕದಲ್ಲಿ ಹುಟ್ಟು ಹಾಕಿರುವ ‘ಹಿಜಾಬ್’ ವಿವಾದಕ್ಕೆ ಬಹಳ ಪ್ರಸ್ತುತವೆನಿಸುತ್ತದೆ. ರಾಜಕೀಯ ಇಸ್ಲಾಮಿಗಳು, ಸೆಕ್ಯುಲರ್ ಗಣತಂತ್ರವಾದಿಗಳು, ಪ್ರಜಾಪ್ರಭುತ್ವವದ ಪ್ರತಿಪಾದಕರು, ಪ್ರಗತಿಪರ ಮೌಲ್ಯಗಳನ್ನು ಅನುಮೋದಿಸುವವರು – ಹೀಗೆ ಎರಡೂ ಧ್ರುವದವರೂ ನಡೆಸುವ ದೌರ್ಜನ್ಯಗಳಿಗೆ ಮಹಿಳೆಯರು ಹೇಗೆ ಬಲಿಪಶುಗಳಾಗುತ್ತಾರೆ ಎಂಬುದನ್ನು ಪಾಮುಕ್ ವರ್ಣಿಸಿರುವುದರ ಬಗ್ಗೆ ಅನೇಕರಿಗೆ ಅಸಮಾಧಾನವಿದೆ. ಆದರೆ ಈ ಯಾವ ಕಟು ವಾಸ್ತವಗಳನ್ನು ಚಿತ್ರಿಸಲೂ ಪಾಮುಕ್ ಹಿಂಜರಿಯುವುದಿಲ್ಲ.

ಯಾನ 2 : Pandita Ramabai : Vaishaliyaana : ಅತ್ತ ಪುರೋಹಿತಶಾಹಿಗಳ ಇತ್ತ ಪಾದ್ರಿಗಳ ಅಡಿಯಾಳಾಗದ ರಮಾಬಾಯಿ ಇಂದಿಗೂ ಪ್ರಸ್ತುತ

Vaishaliyaana column Dr KS Vaishali Discussed Hijab Controversy and Tribute to Lata Mangeshkar and Chennaveer Kanavi

ಲತಾ ಮಂಗೇಶ್ಕರ್

ವಿಷಯಾಂತರ ಮಾಡುವುದಾದರೆ, ಹಿಜಾಬ್‌ನ ವಿಷಯವೊಂದೇ ಅಲ್ಲ, ನನ್ನನ್ನು ವಿಚಲಿತಗೊಳಿಸಿದ ಮತ್ತೊಂದು ಶೋಕದ ವಾರ್ತೆಯೆಂದರೆ, ಸ್ವರ ಕೋಗಿಲೆ ಲತಾ ಮಂಗೇಶ್‌ಕರ್‌ರವರ ಸಾವು. ನಾನು 6-7 ವರ್ಷದ ಬಾಲಕಿಯಾಗಿದ್ದಾಗ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಲಿಕೆಯನ್ನು ಪ್ರಾರಂಭಿಸಿದೆ. ಕಳೆದ ನಾಲ್ಕು ದಶಕಗಳಿಂದ, ಶಾಸ್ತ್ರೀಯ ಖಯಾಲ್ ಸಂಗೀತದ ಅಧ್ಯಯನವನ್ನು ಅವಿರತವಾಗಿ ಮುಂದುವರಿಸಿಕೊಂಡು ಬರುತ್ತಿರುವ ನನಗೆ, ಕನ್ನಡತಿಯಾಗಿ, ದಕ್ಷಿಣ ಭಾರತದವಳಾಗಿ, ನಲವತ್ತು ವರ್ಷಗಳ ಹಿಂದೆ ಭಾಷೆಯ ಸಮಸ್ಯೆ ಎದುರಾಗಿತ್ತು. ಅದು ದೂರದರ್ಶನ, ಸಾಮಾಜಿಕ ಜಾಲತಾಣಗಳು, ಅಂತರ್ಜಾಲದ ಕಾಲವಲ್ಲ.

ಪ್ರತಿಯೊಂದು ರಾಗದಲ್ಲೂ ನನ್ನ ಪೂಜ್ಯ ಗುರುಗಳಾದ ಪಂಡಿತ್ ಶೇಷಾದ್ರಿ ಗವಾಯಿಯವರು ಸುಂದರವಾದ ಲಕ್ಷಣಗೀತೆಗಳನ್ನು ಹೇಳಿಕೊಡುತ್ತಿದ್ದರು. ಅವುಗಳನ್ನು ಸಂವಾದಿನಿಯಲ್ಲಿ ನುಡಿಸುತ್ತಾ, ಸ್ವರ¸ಸ್ಥಾನಗಳನ್ನು ಗುರುತಿಸುವುದೆಂದರೆ ನನಗೆ ಬಹು ಪ್ರೀತಿ. ಒಂದು ರೀತಿಯಲ್ಲಿ ಸಂವಾದಿನಿ ನನ್ನ ಪ್ರೀತಿಯ ಗೆಳತಿಯಾಗಿದ್ದಳು. ಸಂಸ್ಕೃತ ಭಾಷೆಯನ್ನು ಅಲ್ಪ-ಸ್ವಲ್ಪ ಬಲ್ಲ ನನಗೆ ಹಿಂದಿ-ಬೃಜ್ ಭಾಷೆಯ ಪದಗಳು ಅರ್ಥವಾಗುತ್ತಿದ್ದರೂ, ಕೆಲವು ಉರ್ದು ಮಿಶ್ರಿತ, ಅಪ್ಪಟ ಹಿಂದಿ ಶಬ್ದಗಳು ಅರ್ಥವಾಗುತ್ತಿರಲಿಲ್ಲ. ಗುರುಗಳು ರಸವತ್ತಾಗಿ ವಿವರಣೆ ಕೊಡುತ್ತಿದ್ದರಾದರೂ, ನನ್ನನ್ನು ಹಿಂದಿ ಕಲಿಕೆಯ ಗೀಳು ಸಂಪೂರ್ಣವಾಗಿ ಆವರಿಸಿಕೊಂಡಿತ್ತು. ನಾನು ರೇಡಿಯೋದಲ್ಲಿ ಲತಾ ಮಂಗೇಶ್‌ಕರ್‌ವರ ಚಲನಚಿತ್ರ ಗೀತೆಗಳನ್ನು ಕೇಳುತ್ತಿದ್ದೆ. “ಭೂಲೆ ಬಿಸರೆ ಗೀತ್”, “ಸಂಗೀತ್ ಸರಿತಾ” ಗೀತ ಸರಣಿಗಳಲ್ಲಿ ಇಂಪಾಗಿ ಪ್ರಸಾರಗೊಳ್ಳುತ್ತಿದ್ದ ಅವರ ಗೀತೆಗಳು, ನನ್ನನ್ನು ಅಯಸ್ಕಾಂತದಂತೆ ಸೆಳೆದಿದ್ದವು. ಹಾಡುಗಳನ್ನು ಕೇಳುತ್ತ, ನಾನು ಸರಸರನೆ, ನನಗೆ ಅರ್ಥವಾಗದ ಪದಗಳನ್ನು ಕನ್ನಡ ಲಿಪಿಯಲ್ಲಿ ಬರೆದುಕೊಂಡು, ಅವುಗಳನ್ನು ಹಿಂದಿ -ಕನ್ನಡ ನಿಘಂಟಿನಲ್ಲಿ ಹುಡುಕುತ್ತಿದ್ದೆ.

ಇದೇ ಒಂದು ಹವ್ಯಾಸವಾಗಿ ಹೋಗಿ, ನಾನು ಸರಾಗವಾಗಿ ಛೋಟಾ ಖ್ಯಾಲ್‌ಗಳನ್ನು ಗ್ರಹಿಸತೊಡಗಿದೆ. ಶಾಸ್ತ್ರೀಯ ಸಂಗೀತದ ರಾಗಗಳ ತಳಹದಿಯ ಮೇಲೆ ಸಂರಚಿಸಲಾಗಿದ್ದ ಲತಾರವರ ಅಸಂಖ್ಯಾತ ಗೀತೆಗಳು ನನಗೆ ಕಂಠಪಾಠವಾಗಿಬಿಟ್ಟವು. ಅವುಗಳ ಮೂಲಕ ನಾನು ಯಮನ್, ದುರ್ಗಾ, ಸೋಹನಿ, ಮಾರ್ವಾ, ಲಲಿತ್, ಭಟಿಯಾರ್, ಭೈರವ್, ಜೀವನ್‌ಪುರಿ, ಅಹೀರ್ ಭೈರವ್, ಮಿಯಾಕಿ ತೋಡಿ, ಜಯಜಯವಂತಿ, ಭೀಮ್‌ಪಲಾಸ್‌ಗಳ ಪ್ರಪಂಚದಲ್ಲಿ ಕಳೆದುಹೋದೆ. ಹಿಂದಿ ಭಾಷಾ ಪ್ರೌಢಿಮೆ ಮತ್ತು ರಾಗಗಳ ಕುರಿತಾದ ತಿಳಿವಳಿಕೆ – ಎರಡೂ ಸುಧಾರಿಸತೊಡಗಿದವು. ಆಕೆಯ ಗೀತ ಮಂಡನೆ ನನಗೆ ಅತ್ಯಂತ ಕಠಿಣವಾದ ಶಾಸ್ತ್ರೀಯ ಸಂಗೀತ ಲೋಕದ ಪರಿಭಾಷೆಗಳನ್ನೂ ಅರ್ಥಮಾಡಿಸಿತೆಂದರೆ ಅದು ಉತ್ಪ್ರೇಕ್ಷೆಯಾಗಲಾರದು.

ಯಾನದ ಆಶಯ : Vaishaliyaana : ಲೇಖಕಿ ಡಾ. ಕೆ. ಎಸ್. ವೈಶಾಲಿಯವರ ಅಂಕಣ ‘ವೈಶಾಲಿಯಾನ‘ ನಾಳೆಯಿಂದ ನಿಮ್ಮ ಓದಿಗೆ

Vaishaliyaana column Dr KS Vaishali Discussed Hijab Controversy and Tribute to Lata Mangeshkar and Chennaveer Kanavi

ಗಾಯಕಿಯರಾದ ಲತಾ ಮಂಗೇಶ್ಕರ್ ಮತ್ತು ಮಾಲಿನಿ ರಾಜೂರ್ಕರ್

ಒಬ್ಬ ಖ್ಯಾಲ್ ಗಾಯಕಿಗೆ ಲತಾರವರ ನಿರೂಪಣೆಗಳಲ್ಲಿ, ರಾಗ ಭಾವದ ಉದ್ದೀಪನೆಯ ಬಗ್ಗೆ, ಸಾಹಿತ್ಯದ ಬಳಕೆ, ಆಲಾಪ, ಮುರ್ಕಿ, ಗಮಕಗಳು, ಒಂದು ರಾಗದಿಂದ ಮತ್ತೊಂದು ರಾಗಕ್ಕೆ ಸುಲಲಿತವಾಗಿ ಸಂಚರಿಸಿ ಮತ್ತೆ ಬಂದು ಕೂಡಿಕೊಳ್ಳುವ ಆವಿರ್ಭಾವ – ತಿರೋಭಾವಗಳ ಯಕ್ಷಿಣಿ ತಂತ್ರಗಾರಿಕೆ, ಸಪಾಟ್, ವಕ್ರ, ಕೂಟ್, ಅಚರಕ್ ತಾನುಗಳ ಬಗ್ಗೆಯೂ ಅಮೂಲ್ಯವಾದ ಒಳನೋಟಗಳು ಪ್ರಾಪ್ತಿಯಾಗುತ್ತವೆ. ಹತ್ತೇ ನಿಮಿಷಗಳಲ್ಲಿ ಅಷ್ಟು ಸಂವೇದನಾಶೀಲತೆಯಿಂದ, ಭಾವನೆಗಳ ಮಹಾಪೂರವನ್ನೇ ನಮ್ಮಲ್ಲಿ ಉಕ್ಕಿಸುವ, ಒಂದು ಅಮೋಘವಾದ ರಸಾನುಭವವೇ ಸಂಗೀತವಲ್ಲವೇ? ಇಲ್ಲಿ ಶಾಸ್ತ್ರೀಯ, ಲಘು ಶಾಸ್ತ್ರೀಯ ಎಂಬ ವರ್ಗೀಕರಣವೇ ಕೆಲವೊಮ್ಮೆ ಅವೈಜ್ಞಾನಿಕ ಮಡಿವಂತಿಕೆಯಾಗಿ ಭಾಸವಾಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಲತಾರವರ ಹಳೆಯ ಚಲನಚಿತ್ರ ಗೀತೆಗಳು ಒಬ್ಬ ಖ್ಯಾಲ್ – ಠುಮ್ರಿ ಗಾಯಕಿಗೆ ತನ್ನ ಮಾಧ್ಯಮದ ಮೂಲಕ ತಾನು ಏನನ್ನು ಅಭಿವ್ಯಕ್ತಿಗೊಳಿಸುತ್ತಿದ್ದೇನೆಂಬ ಪರಿಕಲ್ಪನೆಯನ್ನು ಸ್ಪಷ್ಟವಾಗಿ ನೀಡಬಲ್ಲವು.

ಆದರೆ ಯಾವ ಗಾಯಕಿಯನ್ನೂ ವೈಭವೀಕರಿಸಿ, ಆಕೆಯನ್ನು ಆರಾಧಿಸುವಷ್ಟಕ್ಕೇ ನಮ್ಮನ್ನು ನಾವು ಸೀಮಿತಗೊಳಿಸಿಕೊಳ್ಳಲಾಗದು. ನಮಗೆ ಆಕೆಯ ಜನಪ್ರಿಯತೆ , ಆಕೆಯ ವ್ಯಕ್ತಿತ್ವ, ಆಕೆಯ ಧ್ವನಿ – ಇವುಗಳು ಹೇಗೆ ಒಂದು ಭೂಮಿಕೆಯನ್ನು ನಿರ್ಮಿಸಿ, ನಮ್ಮಲ್ಲಿ ಒಬ್ಬ ಆದರ್ಶ ಭಾರತೀಯ ಗಾಯಕಿಯ ಕಂಠ ಮಾಧುರ್ಯದ  ಪರಿಕಲ್ಪನೆಯನ್ನು ಸೃಷ್ಟಿಸುವಲ್ಲಿ ಸಹಾಯಕಾರಿಯಾಗುತ್ತದೆ ಎಂಬ ಸಾಂಸ್ಕೃತಿಕ ಅಧ್ಯಯನವೂ ಮುಖ್ಯವಾಗುತ್ತದೆ. ಲತಾರವರ ಧ್ವನಿಯನ್ನು ಕೃತಕವಾದ, ತಾರ ಸ್ಥಾಯಿಯ, ಹದಿಹರೆಯದ ಹುಡುಗಿಯ ಧ್ವನಿ, ಇದು ತನ್ನ ಛಾಪನ್ನೊತ್ತಿ, ಎಲ್ಲಾ ಗಾಯಕಿಯರೂ ಅಳವಡಿಸಿಕೊಳ್ಳಲೇಬೇಕಾದ ಒಂದು ಮಾದರಿಯಾಗಿಬಿಟ್ಟಿದೆ, ಅವರ ಗಾಯನ ಮಧುರವಾಗಿದೆಯೇ, ಅಲ್ಲವೇ ಎಂಬುದು ಮುಖ್ಯವೇ ಅಲ್ಲ ಎಂಬಂಥ ಅಧ್ಯಯನಗಳೂ ಬಂದಿವೆ. ಆದರೆ ಇಂತಹ ಸಾಮಾಜಿಕ- ಸಾಂಸ್ಕೃತಿಕ ಅಧ್ಯಯನಗಳಲ್ಲಿ ಢಾಳಾಗಿ ಗೋಚರಿಸುವ ಪೊಳ್ಳು ಸಮರ್ಥನೆಗಳು, ಸಂಗೀತ ಜ್ಞಾನದ ಅಭಾವ, ಅತಿಯಾದ ಸರಳೀಕರಣ- ಮೊದಲಾದ ಅಂಶಗಳು, ನಮಗೆ ಅದರಲ್ಲಿ ಅಡಗಿರುವ ಲಿಂಗ-ತಾರತಮ್ಯ ರಾಜಕಾರಣದ ಹುನ್ನಾರಗಳನ್ನೂ, ಕುಹಕದ ಒಳದಾರಿಗಳನ್ನೂ ಪರಿಚಯಿಸುತ್ತದೆ.

ಅನೇಕ ಬಗೆಯ ಗಾಯನ ಶೈಲಿಗಳನ್ನು ರೂಪಿಸಿಕೊಂಡಿರುವ, ವೈವಿಧ್ಯಮಯವಾದ ನಮ್ಮ ಗಾಯಕಿಯರ ಒಂದು ಸಮೂಹಕ್ಕೇ ಅಪಚಾರವೆಸಗುವಂತಹ ಅರೆ- ಬೆಂದ ಅಧ್ಯಯನಗಳನ್ನು ಪರಿಶೀಲಿಸುತ್ತ, ಅಲ್ಲಿ ಕಣ್ಣಿಗೆ ರಾಚುವಂತಿರುವ ಹುಂಬತನದ ಪ್ರದರ್ಶನವನ್ನು, ಪಾಂಡಿತ್ಯದ ಮುಖವಾಡ ಧರಿಸಿ, ಧೂರ್ತತೆಯನ್ನು ಮರೆಮಾಚುವ ವೈಖರಿಯನ್ನು ಗಮನಿಸಿ ದಿಜ್ಮೂಢಳಾದೆ! ಅನೇಕ ಹಿರಿಯ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿಯರ ಬಳಿ ಒಡನಾಡಿರುವ ನನ್ನ ಬಳಿ ಹಲವಾರು ಗಾಯಕಿಯರು ಲತಾರವರ ಗಾಯನದ ಬಗ್ಗೆ ತುಂಬು ಅಭಿಮಾನದಿಂದ ಮಾತನಾಡಿದ್ದಾರೆ. ಒಮ್ಮೆ ನಾನು ಹೈದರಾಬಾದಿನಲ್ಲಿರುವ ಅವರ ಮನೆಗೆ ಹೋದಾಗ, ಪ್ರಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ವಿದುಷಿ ಮಾಲಿನಿ ರಾಜೂರ್ಕರ್ ಅವರು ತಾನು ಲತಾರವರಿಂದ ಅಭಿನಂದನಾಪೂರ್ವಕ ಬಳುವಳಿಯನ್ನು ಸಭೆಯೊಂದರಲ್ಲಿ ಸ್ವೀಕರಿಸಿದ ಭಾವ ಚಿತ್ರವನ್ನು ನನಗೆ ತೋರಿಸಿ ಭಾವುಕರಾಗಿದ್ದನ್ನು ನೆನೆಸಿ, ನಾನು ಈಗಲೂ ರೋಮಾಂಚನಗೊಳ್ಳುತ್ತೇನೆ. ಹೀಗೆ ಸಜ್ಜನಿಕೆಯ, ಸದಭಿರುಚಿಯ, ಪ್ರಶಂಸಾತ್ಮಕ ಹಾಗೂ ಸಿನಿಕತನದ ಪ್ರತಿಕ್ರಿಯೆಗಳೆರಡನ್ನೂ ನಾನು ಗಮನಿಸಿದ್ದೇನೆ.

ವೈಶಾಲಿಯವರ ಈ ಬರಹವನ್ನೂ ಓದಿ : Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ

Vaishaliyaana column Dr KS Vaishali Discussed Hijab Controversy and Tribute to Lata Mangeshkar and Chennaveer Kanavi

ಚೆನ್ನವೀರ ಕಣವಿ

ಸಂಗೀತದಂತೆ ಮನಸ್ಸನ್ನು ಹಗುರಾಗಿಸಿ , ತಂಪನ್ನೆರೆಯುವ, ಮಾಂತ್ರಿಕ ಶಕ್ತಿ ಕಾವ್ಯಕ್ಕೂ ಇದೆಯೆಂಬುದು ನಿರ್ವಿವಾದ. ಮೊನ್ನೆ ತಾನೆ ನಮ್ಮನ್ನು ಅಗಲಿದ ‘ಚೆಂಬೆಳಕಿನ ಕವಿ’ ಚೆನ್ನವೀರಕಣವಿಯವರ “ಹೂವು ಹೊರಳುವವು ಸೂರ್ಯನ ಕಡೆಗೆ, ನಮ್ಮ ದಾರಿ ಬರಿ ಚಂದ್ರನವರೆಗೆ/ ಇರುಳಿನ ಒಡಲಿಗೆ, ದೂರದ ಕಡಲಿಗೆ/ ಮುಳುಗಿದಂತೆ, ದಿನ ಬೆಳಗಿದಂತೆ/ ಹೊರಬರುವನು ಕೂಸಿನ ಹಾಗೆ.” ಕವನದ ಸಾಲುಗಳನ್ನು ಗುನುಗುತ್ತ, ಅವರ ಮತ್ತೊಂದು ಅಮೋಘ ಕಾವ್ಯ ಚಿತ್ರಣದಲ್ಲಿ ಬರುವ ಬಸವಣ್ಣನವರ ಮಡದಿ ನೀಲಾಂಬಿಕೆಯ ವರ್ಣನೆಯನ್ನು ಧ್ಯಾನಿಸುತ್ತ, “ನೆರಳಾದಳು ಬಸವಣ್ಣಗೆ, ಹರಳಾದಳು ಬೆರಳಿಗೆ, ಅರಳಾದಳು ಲಿಂಗದಲ್ಲಿ, ಪರಿಮಳಿಸುತ ಪೂಜೆಗೆ, ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ” ಎಂದು ತಿಲಕ್ ಕಾಮೋದ್ ರಾಗದಲ್ಲಿ ಮುಕ್ತಾಯ ಹಾಡುತ್ತಿದ್ದೇನೆ.

ಪ್ರತಿಕ್ರಿಯೆಗಾಗಿ : tv9kannadadigital@gmail.com

(ಮುಂದಿನ ಯಾನ : 5.2.2022)

*

ಹಿಂದಿನ ಯಾನ : ವೈಶಾಲಿಯಾನ : ಎಂಟನೇ ವಯಸ್ಸು ಬಾಲಿಕೆಯ ಮದುವೆಗೆ ಸೂಕ್ತ ಎಂದಿದ್ದ ಮನು ಮತ್ತವನ ಸ್ಮೃತಿಯ ಪರಿಣಾಮಗಳು

Published On - 11:35 am, Sat, 19 February 22

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್