Vaishaliyaana : ವೈಶಾಲಿಯಾನ : ಮೂರನೇ ಅಲೆಯ ಹೊತ್ತಿನಲ್ಲಿ ನೆನಪಾಗುತ್ತಿರುವ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳು

Vaishaliyaana : ವೈಶಾಲಿಯಾನ : ಮೂರನೇ ಅಲೆಯ ಹೊತ್ತಿನಲ್ಲಿ ನೆನಪಾಗುತ್ತಿರುವ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳು
ಫೋಟೋ : ಕೃಷ್ಣ ದೇವಾಂಗಮಠ

Poets and Environment ; ಈ ಕವಿಗಳಾರೂ ನಮ್ಮ ಕಾಲದ ಪರಿಸರವಾದಿಗಳ ಹಾಗೆ ಜಾಗತಿಕ ತಾಪಮಾನ ಅಥವಾ ಪರಮಾಣು ಚಳಿಗಾಲ ಮತ್ತು ಪರಮಾಣು ಸ್ಫೋಟದ ಬಗ್ಗೆ ಬರೆಯಲಿಲ್ಲವಾದರೂ ಈ ಭೂಮಿಯ ಮೇಲಿನ ನಮ್ಮ ಬದುಕು ಎಷ್ಟು ನಾಜೂಕಾದದ್ದು, ಎಷ್ಟು ಬೇಗ ಕಮರಿಹೋಗಬಹುದೆಂಬ ಪ್ರಜ್ಞೆಯನ್ನು ನಮ್ಮಲ್ಲಿ ಜಾಗೃತಗೊಳಿಸುತ್ತಾರೆ.’ ಡಾ. ಕೆ. ಎಸ್. ವೈಶಾಲಿ

ಶ್ರೀದೇವಿ ಕಳಸದ | Shridevi Kalasad

|

Jan 08, 2022 | 10:55 AM

Vaishaliyaana | ವೈಶಾಲಿಯಾನ : ಎ.ಕೆ ರಾಮಾನುಜಂರವರ ಜನಪದ ಕತೆಗಳ ಕಣಜದಲ್ಲಿ ಬರುವ ಕತೆಯೊಂದರಲ್ಲಿ ಸುಂದರವಾದ ತರುಣಿಯೊಬ್ಬಳು ತನ್ನ ಇಚ್ಛಾನುಸಾರ ಫಲ-ಪುಷ್ಪಭರಿತ ಪರಿಮಳಿಸುವ ಮರವಾಗುವ ವರವನ್ನು ಪಡೆದಿದ್ದಾಳೆ. ಅವಳನ್ನು ಬಯಸಿ ಮದುವೆಯಾಗುವ ಕುಮಾರ್ ಎನ್ನುವ ಯುವಕನಿಗೆ ಮಾತ್ರ ಈ ರಹಸ್ಯ ತಿಳಿದಿರುತ್ತದೆ. ಒಮ್ಮೆ ಹೇಗೋ ಒತ್ತಡಕ್ಕೆ ಮಣಿದು ಕಾಡಿನ ಮಧ್ಯೆ ಚೆಲುವಿ ಗಂಡನಿಲ್ಲದ ಸಮಯದಲ್ಲಿ ಪುಂಡಾಟದ ಹುಡುಗರ ನಡುವೆ ಮರವಾಗಿ ಮಾರ್ಪಡುತ್ತಾಳೆ. ಆ ಹುಡುಗರು ಹುಡುಗಾಟವಾಡುತ್ತ, ಧಾಂದಲೆ ಮಾಡುತ್ತ, ಮರದ ರೆಂಬೆ ಕೊಂಬೆಗಳನ್ನು ಮುರಿದು ಅಲ್ಲಿಂದ ಪಲಾಯನಗೈಯುತ್ತಾರೆ. ಹೆಂಡತಿಯನ್ನು ಕಾಣದೆ ಅವಳನ್ನು ಹುಡುಕುತ್ತ ಅಲೆಯುವ ಕುಮಾರನಿಗೆ ಕಾಡಿನ ಮಧ್ಯೆ ಮುರಿದ ರೆಂಬೆ- ಕೊಂಬೆಗಳಿಂದ ಹರಿಯುತ್ತಿರುವ ಕಣ್ಣೀರು ತನ್ನ ಹೆಂಡತಿಯದು ಎಂದು ತಿಳಿಯುತ್ತದೆ. ಪರಿಸರದ ಅಳಿವಿನ ಕುರಿತಾದ ಅತ್ಯಂತ ಸಂವೇದನಾಶೀಲ ಈ ಚಲನಚಿತ್ರವನ್ನು ಗಿರೀಶ್ ಕಾರ್ನಾಡರು 1992 ರಲ್ಲಿ ದೂರದರ್ಶನಕ್ಕಾಗಿ ನಿರ್ದೇಶಿಸಿದ್ದರು. ಡಾ. ಕೆ. ಎಸ್. ವೈಶಾಲಿ, ಲೇಖಕಿ, ಬೆಂಗಳೂರು

ಯಾನ – 1

ಮತ್ತೆ ಕೋವಿಡ್‌ನ ಭೀತಿ ನಮ್ಮನ್ನು ಕಂಗಾಲು ಮಾಡಿದೆ. ಕೋವಿಡ್ ವಿರುದ್ಧ ಮಕ್ಕಳಿಗೆ ರಕ್ಷಣೆ ನೀಡುವ ಸಲುವಾಗಿ ಕರ್ನಾಟಕ ಸರ್ಕಾರ ಶಾಲಾ- ಕಾಲೇಜುಗಳಲ್ಲಿ ಲಸಿಕೆ ಅಭಿಯಾನಕ್ಕೆ ಹೆಚ್ಚಿನ ಮಹತ್ವ ನೀಡಿದೆ. ವಾರಾಂತ್ಯದ ನಿಷೇಧಾಜ್ಞೆ ಮತ್ತೆ ಜಾರಿಯಾಗಿದೆ. ಕಳೆದ ಎರಡು ವರ್ಷಗಳಿಂದಲೂ ಎಲ್ಲೆಲ್ಲೂ ವೈರಾಣುಗಳ ಹಾವಳಿಯ ಬಗ್ಗೆಯೇ ಮಾತು – ಚರ್ಚೆ, ಸಂಶೋಧನೆ, ಆತಂಕ ಎಷ್ಟರ ಮಟ್ಟಿಗೆ ನಮ್ಮನ್ನು ವ್ಯಾಪಿಸಿಕೊಂಡಿದೆಯೆಂದರೆ ‘ಸರ್ವಂ ಕೋವಿಡ್‌ಮಯಂ’ ಎನ್ನುವಂತಾಗಿದೆ. ಈ ಕೋವಿಡ್ ಮತ್ತು ಇನ್ನಿತರ ಸಾಂಕ್ರಾಮಿಕ ಪಿಡುಗುಗಳು ನಮ್ಮ ಪರಿಸರದ ವಿನಾಶದ ಮನ್ಸೂಚನೆಗಳಾಗಿವೆ ಎಂಬ ವಾದವೂ ಚಾಲ್ತಿಯಲ್ಲಿದ್ದು, ಇತ್ತೀಚೆಗೆ ಪರಿಸರದ ಉಳಿವಿನ ಬಗ್ಗೆ ಬಹಳ ಜಾಗೃತಿ ಮೂಡತೊಡಗಿದೆ. ಈ ಪರಿಸರವಾದದ ಬಗ್ಗೆ ನನಗೂ ಕೆಲವು ಚಿಂತನೆಗಳನ್ನು ಹಂಚಿಕೊಳ್ಳಬೇಕೆನಿಸಿದೆ. ಅಷ್ಟಕ್ಕೂ ಪರಿಸರವಾದವೇಕೆ ಇಂದಿನ ದಿನಗಳಲ್ಲಿ ಇಷ್ಟು ಪ್ರಸ್ತುತ ಎನ್ನಿಸಿಕೊಳ್ಳುತ್ತಿದೆ? ನಮಗಿರುವುದೊಂದೇ ಭೂಮಿ. ಶುದ್ಧವಾದ ಗಾಳಿ, ಉಸಿರಾಡಲು ಆಮ್ಲಜನಕ, ಕುಡಿಯಲು ನೀರು, ಮಾಲಿನ್ಯಮುಕ್ತ ವಾತಾವರಣವಿಲ್ಲದೇ ನಾವು ಬದುಕಬಲ್ಲೆವೇ? ಅಪಾಯಕಾರಿ ರಾಸಾಯನಿಕಗಳು, ಎಲ್ಲೆಲ್ಲೂ ಕಂಡುಬರುವ ಗಗನಚುಂಬಿ ಕಟ್ಟಡಗಳಿಂದ ನಮ್ಮನ್ನು ಉಸಿರುಗಟ್ಟಿಸುವ ಕಾಂಕ್ರೀಟ್ ಅರಣ್ಯಗಳು, ನಗರೀಕರಣಗಳ ದುಷ್ಪರಿಣಾಮವಾಗಿ ಪರಿಸರ ಮಾಲಿನ್ಯ – ಪ್ರದೂಷಣೆಗಳು ಮನುಕುಲದ ಜಂಘಾಬಲವನ್ನೇ ಉಡುಗಿಸುವಂಥಾ ಮಾರಕ ರೋಗಗಳಿಗೆ ಕಾರಣವಾಗಿವೆ. ಈ ಆಪತ್ತಿನ ಅರಿವು ಮೂಡಿಸಲು ಕರೆಗಂಟೆಯನ್ನೊತ್ತಿ ನಮ್ಮನ್ನು ಪರಿಸರವಾದಿಗಳು ಎಚ್ಚರಿಸುತ್ತಲೇ ಇದ್ದಾರೆ.

ಪರಿಸರ ಪ್ರಜ್ಞೆಯ ಬಗ್ಗೆ ನಾನು ಯೋಚಿಸತೊಡಗಿದಾಗ ಸಾಹಿತ್ಯಾಸಕ್ತಳಾದ ನನಗೆ ಮೊದಲು ನೆನಪಾದವರೇ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳು. ಏಕೆ ಮನುಷ್ಯರು ಇಷ್ಟು ಪ್ರಾಪಂಚಿಕ ವ್ಯವಹಾರಗಳಲ್ಲಿ ಮುಳುಗಿಹೋಗಿ ಪ್ರಕೃತಿಯ ಆರಾಧನೆಯನ್ನು ಕಡೆಗಣಿಸಿದ್ದಾರೆ, ವಿಶಾಲವಾದ ಸಮುದ್ರ ಚಂದ್ರನಿಗೆ ಎದೆಯೊಡ್ಡಿರುವ ಪರಿ, ಎಲ್ಲಾ ಹೊತ್ತಿನಲ್ಲೂ ಸುಯ್‌ಗುಡುವ ಗಾಳಿ, ನಿದ್ರೆಗೆ ಜಾರುತ್ತಿರುವ ಹೂಗಳಂತೆ ಕಂಗೊಳಿಸುವುದನ್ನು ನಾವು ಆಹ್ಲಾದಿಸಲೂ ಸಾಧ್ಯವಿಲ್ಲದಷ್ಟು ಪ್ರಕೃತಿ ಸೌಂದರ್ಯಕ್ಕೆ ವಿಮುಖರಾಗುತ್ತಿದ್ದೇವೆ ಎಂದು ಶೋಕಿಸುವ ಕವಿ ವರ್ಡ್ಸವರ್ತ್ ನೆನಪಾಗುತ್ತಾನೆ. ಷೆಲ್ಲಿ, ಬೈರನ್, ಬ್ಲೇಕ್ ಮೊದಲಾದ ಕವಿಗಳೂ ಪರಿಸರದ ಬಗ್ಗೆ ಭವಿಷ್ಯದ್ದರ್ಶನದ ಅರಿವು ಮೂಡಿಸುವಂತಹ ಕವನಗಳನ್ನು ಬರೆದಿದ್ದಾರೆ. ಈ ಕವಿಗಳಾರೂ ನಮ್ಮ ಕಾಲದ ಪರಿಸರವಾದಿಗಳ ಹಾಗೆ ಜಾಗತಿಕ ತಾಪಮಾನ ಅಥವಾ ಪರಮಾಣು ಚಳಿಗಾಲ ಮತ್ತು ಪರಮಾಣು ಸ್ಫೋಟದ ಬಗ್ಗೆ ಬರೆಯಲಿಲ್ಲವಾದರೂ ಈ ಭೂಮಿಯ ಮೇಲಿನ ನಮ್ಮ ಬದುಕು ಎಷ್ಟು ನಾಜೂಕಾದದ್ದು, ಎಷ್ಟು ಬೇಗ ಕಮರಿಹೋಗಬಹುದೆಂಬ ಪ್ರಜ್ಞೆಯನ್ನು ನಮ್ಮಲ್ಲಿ ಜಾಗೃತಗೊಳಿಸುತ್ತಾರೆ. ವಿಕ್ಟೋರಿಯನ್ ಕಾದಂಬರಿಕಾರ ಥಾಮಸ್ ಹಾರ್ಡಿಯ ಸುಪ್ರಸಿದ್ಧವಾದ ‘ಎಗ್ಡನ್ ಕುರುಚಲು ಭೂಮಿ’ ವರ್ಣನೆಯಲ್ಲಂತೂ ಅದನ್ನೊಂದು ಜೀವಂತ ವ್ಯಕ್ತಿಯನ್ನಾಗಿಯೇ ಆತ ಚಿತ್ರಿಸಿದ್ದಾನೆ. ಪ್ರಸಿದ್ಧ ಕವಿ ಮ್ಯಾಥ್ಯೂ ಅರ್ನಾಲ್ಡ್​ನ ಅತ್ಯಂತ ಜನಪ್ರಿಯ ಕವನ ‘ಡೋವರ್ ಬೀಚ್’ ಇಂಗ್ಲಿಷ್ ಸಾಹಿತ್ಯದಲ್ಲೇ ಸ್ಥಳದ ವರ್ಣನೆಯ ಕುರಿತಾದ ಅಮೋಘ ಕವನಗಳಲ್ಲಿ ಒಂದಾಗಿದೆ.

Vaishaliyana Column by Writer Vocalist Dr KS Vaishali

ಲಾರ್ಡ್​ ಬೈರನ್, ವಿಲಿಯಂ ಬ್ಲೇಕ್

ಅಮೆರಿಕನ್ ಲೇಖಕರೂ ಪ್ರಕೃತಿಯ ಆರಾಧನೆಯಲ್ಲಿ ಹಿಂದೆ ಬಿದ್ದವರಲ್ಲ. 1854 ರಲ್ಲಿ ಪ್ರಕಟಗೊಂಡ ಹೆನ್ರಿ ಡೇವಿಡ್ ಥೋರೊನ ಕೃತಿ ವಾಲ್ಡನ್, ಪ್ರಕೃತಿ -ಪರಿಸರ ಪ್ರಜ್ಞೆಯ ಅತ್ಯಂತ ಉತ್ಕೃಷ್ಟ ಸಂವೇದನೆಯನ್ನು ಧ್ವನಿಸುವ ಕೃತಿ. ವಾಲ್ಡನ್ ಅರಣ್ಯ ಪ್ರದೇಶದ ಮೂಲೆ ಮೂಲೆಗಳಲ್ಲೂ ಕಾಲ್ನಡಿಗೆಯಲ್ಲಿ ಸಂಚರಿಸುತ್ತ, ಏಕಾಂಗಿಯಾಗಿ ಸ್ವಲ್ಪ ಸಮಯದ ಕಾಲ ಕಾಡಿನ ಮಧ್ಯೆ ತಾನೇ ಕೈಯಾರೆ ನಿರ್ಮಿಸಿದ ಪರ್ಣಕುಟೀರದಲ್ಲಿ ವಾಸ ಮಾಡಿದ ಥೋರೊನಿಗೆ ಪ್ರಕೃತಿಯೇ ಒಂದು ಔಷಧವಾಗಿತ್ತು. ವನ್ಯ ಜಗತ್ತೆನ್ನುವುದು ನಮ್ಮ ನಾಗರೀಕತೆಗಿಂತ ಭಿನ್ನವಾದ ನಾಗರಿಕತೆಯನ್ನುವುದು ಆತನ ಅಭಿಪ್ರಾಯವಾಗಿತ್ತು. ಕವಿ ರಾಬರ್ಟ್ ಫ್ರಾಸ್ಟ್​ನ ಕವನಗಳೂ ಪ್ರಕೃತಿಯೊಡನೆ ಗಾಢ ಸಂವಾದದಲ್ಲಿ ತೊಡಗುವ ಪರಿಸರದ ಕವನಗಳೇ ಆಗಿದ್ದವು.

ಪರಿಸರ ಅಧ್ಯಯನ ಎನ್ನುವ ಕ್ಷೇತ್ರದಲ್ಲಿ ಸ್ವಲ್ಪ ಅಂತರ್ಶಿಸ್ತೀಯ ಗ್ರಹಿಕೆಗಳನ್ನು ಅಳವಡಿಸಿಕೊಂಡು, ಈ ರೊಮ್ಯಾಂಟಿಕ್ ಕವನಗಳ ಅಧ್ಯಯನವನ್ನೂ ಪಠ್ಯಕ್ರಮದಲ್ಲಿ ಸೇರಿಸಿಕೊಂಡರೆ ಅದೊಂದು ಹೊಸ ಆಯಾಮ- ಒಳನೋಟವನ್ನೇ ನೀಡಬಹುದೇನೊ. ಈ ಸ್ತ್ರೀವಾದಿ ಪರಿಸರವಾದವೂ ನನ್ನನ್ನು ತುಂಬಾ ಅಕರ್ಷಿಸಿದೆ. ಸುಮಾರು 1970ರಲ್ಲಿ , ನ್ಯೂಕ್ಲಿಯರ್ ವಿರೋಧಿ ಆಂದೋಲನ ಹಾಗೂ ಹಸಿರು ಕ್ರಾಂತಿಯ ಸಂದರ್ಭದಲ್ಲಿ ಮೊಳಕೆಯೊಡೆದ ಈ ಪರಿಕಲ್ಪನೆ ಪ್ರಕೃತಿ – ಪರಿಸರದ ವಿನಾಶವನ್ನು ಮಹಿಳೆಯ ಶೋಷಣೆಯೊಡನೆ ಜೋಡಿಸಿ ನೋಡುವ ಒಂದು ದೃಷ್ಟಿಕೋನವೆನ್ನಬಹುದು.

1905ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಂಡ “ಸುಲ್ತಾನಳ ಕನಸು” ಎಂಬ ನೀಳ್ಗತೆಯಲ್ಲಿ ರುಕಿಯಾ ಶೇಖಾವತ್ ಹುಸೇನ್ ಎಂಬ ಲೇಖಕಿ ಪರಿಸರವಾದಿ ಸ್ತ್ರೀವಾದಿ ಚಿಂತನೆಯನ್ನು ಒಂದು ವಿಡಂಬನಾತ್ಮಕ ಕತೆಯ ಮೂಲಕ ಅಭಿವ್ಯಕ್ತಿಸಿದ್ದಾಳೆ. ಈ ಕಥೆಯ ನಾಯಕಿ ಸುಲ್ತಾನ ಒಬ್ಬ ಪರ್ದಾಧಾರಿಣಿ ಮಹಿಳೆ. ಆಕೆ ತನಗೆ ಅಪರಿಚಿತವಾದ ಒಂದು ಸುಂದರ ನಾಡಿಗೆ ಭೇಟಿ ನೀಡುತ್ತಾಳೆ. ಸುಮಾರು ನಡುರಾತ್ರಿಯ ಸಮಯದಲ್ಲಿ ಆಕೆ ರಸ್ತೆಯಲ್ಲಿ ತನ್ನಂತೆ ಅನೇಕ ಮಹಿಳೆಯರು ನಿರ್ಭಿಡೆಯಿಂದ ಯಾವ ಅವಕುಂಠನವನ್ನೂ ಧರಿಸದೆ ಓಡಾಡುತ್ತಿರುವುದನ್ನು ನೋಡಿ ಗರ ಬಡಿದವಳಂತಾಗಿ ತನ್ನನ್ನು ಅಲ್ಲಿಗೆ ಕರೆದೊಯ್ದ ಮಹಿಳೆಯನ್ನು ಈ ಸೋಜಿಗದ ಬಗ್ಗೆ ಪ್ರಶ್ನಿಸುತ್ತಾಳೆ. ಆಗ ಆಕೆಗೆ ಅಲ್ಲಿಯ ಮಹಿಳೆಯರೆಲ್ಲರೂ ಸಕ್ರಿಯವಾಗಿ ಸಾರ್ವಜನಿಕ ರಂಗದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದು, ಅಲ್ಲಿಯ ಪುರುಷರೆಲ್ಲರೂ ಮರ್ದಾನಾಗಳಲ್ಲಿ, ಜನಾನದಲ್ಲಿಯೇ ಗೃಹಕೃತ್ಯಗಳನ್ನು ಮಾಡಿಕೊಂಡು ಕಾಲಕಳೆಯುವ ಗೃಹಿಣಿಯರಂತೆ, ಅಡುಗೆ , ಕಸೂತಿ, ಮಕ್ಕಳ ಲಾಲನೆ-ಪಾಲನೆಯಲ್ಲಿ ನಿರತರಾಗಿದ್ದಾರೆಂಬ ವಿಲಕ್ಷಣವಾದ ಸಂಗತಿ ತಿಳಿದುಬರುತ್ತದೆ. ಈ ಮಾರ್ಮಿಕವಾದ ವಿಡಂಬನೆಯ ಮೂಲಕ ರುಕಿಯಾ ಲಿಂಗಾಧಾರಿತ ಅಸಮಾನತೆಯ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ.

Vaishaliyana Column by Writer Vocalist Dr KS Vaishali

ಮ್ಯಾಥ್ಯೂ ಅರ್ನಾಲ್ಡ್​, ವಿಲಯಂ ವರ್ಡ್ಸ್​ವರ್ತ್

ಮಧ್ಯಮವರ್ಗದ ಸಾಂಪ್ರದಾಯಿಕ ಕುಟುಂಬದಲ್ಲಿ 19ನೇ ಶತಮಾನದ ಕಾಲಘಟ್ಟದಲ್ಲಿ ಬಂಗಾಳದಲ್ಲಿ ಜನಿಸಿದ ರುಕಿಯಾ ಶಿಕ್ಷಣದಿಂದ ವಂಚಿತರಾದರೂ, ಸಾಕ್ಷರಸ್ಥರಾಗುವ ಹೆಬ್ಬಯಕೆಯಿಂದ ಎಲ್ಲರ ಕಣ್ಣು ತಪ್ಪಿಸಿ ಅಣ್ಣನ ಸಹಾಯದಿಂದ ಬಂಗಾಳಿ, ಇಂಗ್ಲಿಷ್ ಭಾಷೆಗಳನ್ನು ಕಲಿತು ಎರಡೂ ಭಾಷೆಗಳಲ್ಲೂ ವಿಪುಲ ಸಾಹಿತ್ಯ ರಚನೆ ಮಾಡಿದರು. ‘ಸುಲ್ತಾನಳ ಕನಸು’ ಎಂಬ ಕತೆಯನ್ನು ಆಕೆ ಇಂಗ್ಲಿಷ್‌ನಲ್ಲೇ ಬರೆದರು . ಈ ಕತೆಯಲ್ಲಿ ರುಕಿಯಾ 1905 ರಲ್ಲೇ ಸೌರಶಕ್ತಿಯ ಬಳಕೆ, ಸಾವಯವ ಕೃಷಿ ಮತ್ತು ಮಳೆ ನೀರಿನ ಕೊಯ್ಲಿನ ಬಗ್ಗೆ ಪ್ರಸ್ತಾಪಿಸಿದ್ದರು ಎನ್ನುವುದು ಮತ್ತೊಂದು ಸ್ವಾರಸ್ಯಕರವಾದ ಸಂಗತಿ.

ನಾನು ಬಾಲ್ಯದಲ್ಲಿ ಓದಿದ ಮತ್ತೊಂದು ಕಿರು ಕಾದಂಬರಿ ನೆನಪಾಗುತ್ತದೆ. ಮಕ್ಕಳ ಸಾಹಿತ್ಯದಲ್ಲಿ ಬಂದ ಒಂದು ಅಪರೂಪದ ಕೃತಿ ಇದು. ಪರಿಸರವಾದ, ಜಲ ಸಂರಕ್ಷಣೆ, ಪ್ರಾಣಿ-ಪಕ್ಷಿ ಸಂಕುಲದ ಬಗ್ಗೆ ಕಾಳಜಿ, ಲಿಂಗ ಸಮಾನತೆ – ಇವೇ ಮುಂತಾದ ಸಂವೇದನೆಗಳನ್ನು ಒಳಗೊಂಡ ‘‘ರ‍್ಯಾಗಿಟಿ ಅಂಡ್ ದಿ ಕ್ಲೌಡ್” (Raggity and the Cloud) ಕಿರು ಕಾದಂಬರಿ ರ‍್ಯಾಗಿಟಿ ಎಂಬ ಪುಟ್ಟ 9 ವರ್ಷ ಪ್ರಾಯದ ಹೆಣ್ಣು ಮಗುವಿನ ಸಾಹಸಗಳ ವರ್ಣನೆ. ಈ ಅನಾಥ ಹೆಣ್ಣು ಮಗು ಒಬ್ಬ ದರ್ಜಿಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಕೊಳೆಗೇರಿಯ ನಿವಾಸಿ. ಆಕೆ ಕೇವಲ ಚಿಂದಿ ಬಟ್ಟೆಗಳನ್ನೇ ತೊಡುವುದರಿಂದ ಆಕೆಗೆ ರ‍್ಯಾಗಿಟಿ’ ಎನ್ನುವ ಅಡ್ಡ ಹೆಸರಿನ ಪಟ್ಟಿ ಅಂಟಿಕೊಂಡಿದೆ. ಆಕೆ ವಿಲಿಯಂ ಬ್ಲೇಕ್‌ನ ಕವನಗಳಲ್ಲಿ ಬರುವ ಚಿಮಣಿ ಸ್ವಚ್ಛಗೊಳಿಸುವ ಬಾಲ ಕಾರ್ಮಿಕರಂತೆ ಶೋಷಿತಳಾದ ಒಬ್ಬ ಪುಟ್ಟ ಹೆಣ್ಣು ಮಗಳು.

ಆ ದೇಶದಲ್ಲಿ ಭೀಕರವಾದ ಜಲಕ್ಷಾಮ ತಲೆದೋರಿದೆ. ಏಕೆಂದರೆ ನಿರಂಕುಶಮತಿ ಹಾಗೂ ದುರಾಸೆಯ ಬುದ್ಧಿಯವನಾದ ಅಲ್ಲಿಯ ರಾಜ ಗ್ಯಾಲನ್ನುಗಟ್ಟಲೆ ನೀರನ್ನು ತನ್ನ ಅರಮನೆಯಲ್ಲಿ ಗುಟ್ಟಾಗಿ ಶೇಖರಿಸಿಟ್ಟಿದ್ದಾನೆ. ಈ ಬರಗಾಲದಿಂದ ತತ್ತರಿಸುತ್ತಿರುವ ನಾಡಿನಲ್ಲಿ ತನ್ನ ತಾಯಿಯ ಕಣ್ಣು ತಪ್ಪಿಸಿ ಪುಟ್ಟ ಮೋಡವೊಂದು ಬಾಯಾರಿಕೆಯಿಂದ ಬಾಲಕಿ ರ‍್ಯಾಗಿಟಿಯನ್ನು ಸಂಧಿಸುತ್ತದೆ. ರ‍್ಯಾಗಿಟಿ ಮತ್ತು ತುಂಟ ಮೋಡದ ಸ್ನೇಹದ ವರ್ಣನೆ ಅಪ್ಯಾಯಮಾನವೆನಿಸುತ್ತದೆ. ಕಿಲಾಡಿ ಮೋಡ ಪಕ್ಕಾ ಛದ್ಮವೇಷಧಾರಿ. ಬಾಲಕ, ಬಾಲಕಿ, ಸಿಂಹ, ಹಾವು, ರಾಜ ಮನೆತನದ ಯುವತಿಯರು ಧರಿಸುವ ಚೆಂದದ ನಿಲುವಂಗಿ – ಹೀಗೆ ಥರಾವರಿ ವೇಷಗಳನ್ನು ತಾಳಿ ಜನರನ್ನು ಬೇಸ್ತು ಬೀಳಿಸುವ ಮೋಡವೂ ಹಾಗೂ ರ‍್ಯಾಗಿಟಿಯೂ ಕೂಡಿ ರಾಜನ ಅರಮನೆಯಲ್ಲಿರುವ ‘ರೊಸರೀಟಾ’ ಎಂಬ ಅತ್ಯಂತ ಬುದ್ಧಿವಂತೆಯಾದ ಕಪ್ಪೆಯನ್ನು ಸಂಧಿಸಲು ಹೋಗುತ್ತಾರೆ. ರಾಜ ನೀರನ್ನು ಎಲ್ಲಿ ಅಡಗಿಸಿಟ್ಟದ್ದಾನೆ ಎಂಬುದರ ರಹಸ್ಯವನ್ನು ಭೇದಿಸುವ ಸಾಹಸ ಮಾಡುತ್ತಾರೆ. ಈ ಕಿರು ಕಾದಂಬರಿ ಪರಿಸರ ವಿನಾಶದ ಭವಿಷ್ಯದ್ದರ್ಶನವನ್ನು ಬಹಳ ಪರಿಣಾಮಕಾರಿಯಾಗಿ ಮಕ್ಕಳಿಗೆ ತಿಳಿಸಿಕೊಡುತ್ತದೆ. ಪುಟ್ಟ ಬಾಲಕಿಯ ಸ್ನೇಹಿತರಾಗಿ ಬರುವ ಪ್ರಾಣಿಗಳೆಲ್ಲ ಅವಳ ಬಳಿ ಮಾತನಾಡುತ್ತವೆ. ಮನುಷ್ಯ ಹಾಗೂ ಮನುಷ್ಯೇತರ ಜೀವಿಗಳು , ಮೋಡ, ಗಾಳಿ, ನೀರಿನೊಡನೆ ನಡೆಯುವ ರಸವತ್ತಾದ ಸಂವಾದಗಳು ಸಹಬಾಳ್ವೆಯ ಬಗ್ಗೆ ಒಂದು ರಮ್ಯವಾದ ಭಾಷ್ಯವನ್ನೇ ಬರೆಯುತ್ತವೆ.

Vaishaliyana Column by Writer Vocalist Dr KS Vaishali

ರ್ಯಾಗಿಟಿ ಅಂಡ್ ದಿ ಕ್ಲೌಡ್

ಎ.ಕೆ ರಾಮಾನುಜಂರವರ ಜನಪದ ಕತೆಗಳ ಕಣಜದಲ್ಲಿ ಬರುವ ಕತೆಯೊಂದರಲ್ಲಿ ಸುಂದರವಾದ ತರುಣಿಯೊಬ್ಬಳು ತನ್ನ ಇಚ್ಛಾನುಸಾರ ಫಲ-ಪುಷ್ಪಭರಿತ ಪರಿಮಳಿಸುವ ಮರವಾಗುವ ವರವನ್ನು ಪಡೆದಿದ್ದಾಳೆ. ಅವಳನ್ನು ಬಯಸಿ ಮದುವೆಯಾಗುವ ಕುಮಾರ್ ಎನ್ನುವ ಯುವಕನಿಗೆ ಮಾತ್ರ ಈ ರಹಸ್ಯ ತಿಳಿದಿರುತ್ತದೆ. ಒಮ್ಮೆ ಹೇಗೋ ಒತ್ತಡಕ್ಕೆ ಮಣಿದು ಕಾಡಿನ ಮಧ್ಯೆ ಚೆಲುವಿ ಗಂಡನಿಲ್ಲದ ಸಮಯದಲ್ಲಿ ಪುಂಡಾಟದ ಹುಡುಗರ ನಡುವೆ ಮರವಾಗಿ ಮಾರ್ಪಡುತ್ತಾಳೆ. ಆ ಹುಡುಗರು ಹುಡುಗಾಟವಾಡುತ್ತ , ಧಾಂದಲೆ ಮಾಡುತ್ತ , ಮರದ ರೆಂಬೆ ಕೊಂಬೆಗಳನ್ನು ಮುರಿದು ಅಲ್ಲಿಂದ ಪಲಾಯನಗೈಯುತ್ತಾರೆ. ಹೆಂಡತಿಯನ್ನು ಕಾಣದೆ ಅವಳನ್ನು ಹುಡುಕುತ್ತ ಅಲೆಯುವ ಕುಮಾರನಿಗೆ ಕಾಡಿನ ಮಧ್ಯೆ ಮುರಿದ ರೆಂಬೆ- ಕೊಂಬೆಗಳಿಂದ ಹರಿಯುತ್ತಿರುವ ಕಣ್ಣೀರು ತನ್ನ ಹೆಂಡತಿಯದು ಎಂದು ತಿಳಿಯುತ್ತದೆ. ಪರಿಸರದ ಅಳಿವಿನ ಕುರಿತಾದ ಅತ್ಯಂತ ಸಂವೇದನಾಶೀಲ ಈ ಚಲನಚಿತ್ರವನ್ನು ಗಿರೀಶ್ ಕಾರ್ನಾಡರು 1992 ರಲ್ಲಿ ದೂರದರ್ಶನಕ್ಕಾಗಿ ನಿರ್ದೇಶಿಸಿದ್ದರು.

ಮರವನ್ನು ಕಡಿಯುವುದನ್ನು ನರಮೇಧದೊಂದಿಗೆ ಸಮೀಕರಿಸಿ ನೋಡುವ ‘ಮರವನ್ನು ಕೊಲ್ಲುವುದು’ ಎಂಬ ಮಾರ್ಮಿಕ ಕವನದ ಕರ್ತೃ ಕವಿ ಜೀವ್ ಪಟೇಲ್ ಹೇಳುವಂತೆ “ಕೊಡಲಿಯಿಂದ ಅಥವಾ ಚಾಕುವಿನಿಂದ ಮರದ ತೊಗಟೆ, ಕಾಂಡ, ರೆಂಬೆ ಕೊಂಬೆಗಳನ್ನು ಕೊಚ್ಚಿ ಹಾಕಿದರಷ್ಟೇ ಸಾಲದು, ಅದನ್ನು ಬೇರು ಸಹಿತ ಕಿತ್ತು, ಬಲವಾದ ಹಗ್ಗದಿಂದ ಬುಡ ಸಮೇತ ಭೂಮಿಯಿಂದ ಕತ್ತರಿಸಿ ಬಿಸಾಡಬೇಕು” – ಎಂಬ ವರ್ಣನೆ ಈ ಪಾಶವೀ ಕೃತ್ಯ ಯಾವ ಒಂದು ಕಗ್ಗೊಲೆಗೂ ಕಡಿಮೆಯಿಲ್ಲದಷ್ಟು ಹೇಯವಾದದ್ದು ಎಂದು ನಿರೂಪಿಸುತ್ತದೆ.

ಸಾಹಿತ್ಯದ ಅಧ್ಯಯನವೂ ನಮ್ಮ ಪರಿಸರ ಪ್ರಜ್ಞೆಯನ್ನು ವಿಕಸಿತಗೊಳಿಸಲು ಅತ್ಯಮೂಲ್ಯವಾದ ಸಂಪನ್ಮೂಲವಾಗಬಲ್ಲದು. ಪರಿಸರ ಪ್ರಜ್ಞೆಯಿಂದಲೇ ಮಾನಸಿಕ ಹಾಗೂ ಶಾರೀರಕ ಸ್ವಾಸ್ಥ್ಯದ ಕನಸು ಸಾಕಾರಗೊಂಡರೆ ಅರ್ಥಪೂರ್ಣ.

*

ಮುಂದಿನ ಯಾನ : 22.1.2022 | ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com 

ಅಂಕಣದ ಆಶಯ : Vaishaliyaana : ಲೇಖಕಿ ಡಾ. ಕೆ. ಎಸ್. ವೈಶಾಲಿಯವರ ಅಂಕಣ ‘ವೈಶಾಲಿಯಾನ‘ ನಾಳೆಯಿಂದ ನಿಮ್ಮ ಓದಿಗೆ

Follow us on

Related Stories

Most Read Stories

Click on your DTH Provider to Add TV9 Kannada