Qatar Mail : ‘ನೀನು ನಮ್ಮಿಬ್ಬರ ವಿಡಿಯೋ ತೆಗೆದಿದ್ದೀಯಾ, ಮೊದಲು ಡಿಲೀಟ್ ಮಾಡು’ ಹೀಗೆಂದು ಆಕೆ ಗುಡುಗಿದಳು

Photography : ‘ಇಲ್ಲಿ ಮಹಿಳೆಯರನ್ನು, ಮಕ್ಕಳನ್ನು ಅವರ ಒಪ್ಪಿಗೆಯಿಲ್ಲದೆ, ಸರ್ಕಾರಿ ಕಟ್ಟಡಗಳನ್ನು, ರಾಯಭಾರಿ ಕಟ್ಟಡಗಳನ್ನು, ಪಾರ್ಲಿಮೆಂಟ್ ಕಟ್ಟಡವನ್ನು ಪೂರ್ವ ಅನುಮತಿಯಿಲ್ಲದೆ, ಆಕ್ಸಿಡೆಂಟ್ ದೃಶ್ಯಗಳನ್ನು, ಕ್ಯಾಮೆರಾ ಮತ್ತು ಮೊಬೈಲಿನಲ್ಲಿ ಚಿತ್ರಿಸುವುದು ಮಾತ್ರವಲ್ಲದೆ ಅವುಗಳನ್ನು ಹಂಚಿಕೊಳ್ಳುವುದೂ ಸಹ ಅಪರಾಧವೇ.’ ಚೈತ್ರಾ ಅರ್ಜುನಪುರಿ

Qatar Mail : ‘ನೀನು ನಮ್ಮಿಬ್ಬರ ವಿಡಿಯೋ ತೆಗೆದಿದ್ದೀಯಾ, ಮೊದಲು ಡಿಲೀಟ್ ಮಾಡು’ ಹೀಗೆಂದು ಆಕೆ ಗುಡುಗಿದಳು
ಕತಾರ್ ನ್ಯಾಷನಲ್ ಡೇ: ಲೈಟುಗಳಿಂದ ಸಜ್ಜಾಗಿದ್ದ ಕತಾರಾ ಕಲ್ಚರಲ್ ವಿಲೇಜ್ ನಲ್ಲಿರುವ ಗ್ಯಾಲರೀಸ್ ಲಫಾಯೆಟ್ಟೆ ಹೈ ಸ್ಟ್ರೀಟ್
Follow us
|

Updated on:Jan 07, 2022 | 1:06 PM

ಕತಾರ್ ಮೇಲ್ | Qatar Mail :  ನಾನು ಆ ಹುಡುಗಿ ವಿಡಿಯೋ ಅಳಿಸಲು ಜೋರು ಮಾಡಿದಾಗ ಏಕೆ ಪ್ರತಿಭಟಿಸಲಿಲ್ಲ, ಸುತ್ತಮುತ್ತಲಿದ್ದ ಜನರ ನೆರವನ್ನು ಏಕೆ ಪಡೆಯಲಿಲ್ಲ, ಅಲ್ಲಿದ್ದ ಕಾವಲುಗಾರನನ್ನು ಏಕೆ ಕರೆಯಲಿಲ್ಲ ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಕಾರಣವೂ ಇದೆ. “ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮೆರಾಗಳು ಅಥವಾ ಮೊಬೈಲ್ ಫೋನ್‌ ಗಳೊಂದಿಗೆ ಅನಧಿಕೃತ ಛಾಯಾಗ್ರಹಣ ಮಾಡಿ ಖಾಸಗಿ ಜೀವನದ ಪಾವಿತ್ರ್ಯತೆಯನ್ನು ಉಲ್ಲಂಘಿಸಿದರೆ ಹತ್ತು ಸಾವಿರ ರಿಯಾಲ್ ದಂಡವನ್ನೂ ಮತ್ತು ಕಾನೂನಿನ ಪ್ರಕಾರ (Law No. 4 of 2017) ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಲಾಗುವುದು,” ಎಂದು ಆಂತರಿಕ ಸಚಿವಾಲಯ 2021ರ ಪ್ರಾರಂಭದಲ್ಲಿಯೇ ಪುನರುಚ್ಚರಿಸಿತ್ತು. ಇಲ್ಲಿನ ಕಾನೂನು ಇಷ್ಟು ಕಠಿಣವಾಗಿರುವಾಗ ಯಾರಿಗೆ ತಾನೇ ಆ ಹುಡುಗಿಯನ್ನು ಪ್ರತಿಭಟಿಸಲು ಧೈರ್ಯ ಬರುತ್ತದೆ? “ಹೆಣ್ ಮಕ್ಳೇ ಸ್ಟ್ರಾಂಗು ಗುರು” ಅಂತ ಗಂಡು ಹೈಕ್ಳು ಮಾತ್ರ ಅಲ್ಲ, ನನ್ನಂಥಾ ಮಂಡ್ಯ ಹೆಣ್ಣು ಹೈಕ್ಳುಗಳೂ ಹಾಡಬಹುದು ಎಂದುಕೊಂಡು ಗುನುಗುತ್ತಾ ಮುಂದಕ್ಕೆ ಹೆಜ್ಜೆ ಹಾಕಿದೆ. ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್​ಫೋಟೋಗ್ರಾಫರ್, ಕತಾರ್

(ಪತ್ರ​ – 1)

ನಾನು ಎಲ್ಲಿಗೆ ಹೋದರೂ ನನ್ನೊಂದಿಗೆ ಕ್ಯಾಮೆರಾ ಕೊಂಡೊಯ್ಯುವುದನ್ನು ಮರೆಯುವುದಿಲ್ಲ. ಒಂದೇ ಸ್ಥಳಕ್ಕೆ ನೂರಾರು ಬಾರಿ ಈ ಹಿಂದೆ ಭೇಟಿ ನೀಡಿದ್ದರೂ, ಅದೇ ಸ್ಥಳವನ್ನು ಮತ್ತೆ ಮತ್ತೆ ಕ್ಯಾಮೆರಾದಲ್ಲಿ ಬಂಧಿಸುವುದು ನನಗೆ ಯಾವತ್ತೂ ನೀರಸವೆನಿಸಿಲ್ಲ. ನಾನು ಮೆಚ್ಚಿ ಚಿತ್ರಗಳಿಗಾಗಿ ಆಗಾಗ ಭೇಟಿ ನೀಡುವ ಸ್ಥಳ ಕತಾರಾ ಕಲ್ಚರಲ್ ವಿಲೇಜ್. ಕೆಲವು ದಿನಗಳ ಹಿಂದೆ ಅಲ್ಲಿಗೆ ಭೇಟಿ ನೀಡಿದಾಗಲೂ ಎಂದಿನಂತೆ ಕೈಯಲ್ಲಿ ಕ್ಯಾಮೆರಾವಿತ್ತು. ನಾನು ಕ್ಯಾಮೆರಾದಲ್ಲಿ ಎರಡು ಚಿತ್ರಗಳನ್ನೂ ತೆಗೆದಿರಲಿಲ್ಲ, ಅಲ್ಲೀಯೇ ಪಕ್ಕದಲ್ಲಿ ನಿಂತಿದ್ದ ಕಾವಲುಗಾರ ಬಳಿಗೆ ಬಂದು, ನಾನು ಮೀಡಿಯಾದವಳೆ, ಅಲ್ಲಿ ಚಿತ್ರ ತೆಗೆಯಲು ನನ್ನ ಬಳಿ ಪರ್ಮಿಟ್ ಲೆಟರ್ ಇದೆಯೇ ಎಂದು ಕೇಳಿದ. ನಾನು ಇಲ್ಲವೆಂದು ತಿಳಿಸಿದೆ. ಹಾಗಿದ್ದಲ್ಲಿ ಚಿತ್ರ ತೆಗೆಯಲು ಕ್ಯಾಮೆರಾ ಬಳಸುವಂತಿಲ್ಲ, ಬೇಕಿದ್ದರೆ ಫೋನ್ ಬಳಸಿ ಚಿತ್ರ ತೆಗೆಯಬಹುದು ಎಂದು ಹೇಳಿದ. ಅವನ ಮಾತು ಕೇಳಿ ನನಗೆ ಅಚ್ಚರಿಯಾಯಿತು. ಈ ಮುಂಚೆಯೂ ಸಾಕಷ್ಟು ಬಾರಿ ಅಲ್ಲಿ ಕ್ಯಾಮೆರಾದಲ್ಲಿ ಚಿತ್ರಗಳನ್ನು ತೆಗೆದಿದ್ದೇನೆಂದೂ, ಟ್ರೈಪಾಡ್ ಬಳಸಲು ಮಾತ್ರವೇ ಪರ್ಮಿಟ್ ಲೆಟರ್ ಅವಶ್ಯಕತೆಯಿರುವುದೆಂದೂ ಆತನಿಗೆ ಹೇಳಿದರೂ ಆತ ಸಮ್ಮತಿಸಲಿಲ್ಲ. ಸರಿಯೆಂದು, ಕ್ಯಾಮೆರಾವನ್ನು ಬ್ಯಾಗಿನಲ್ಲಿರಿಸಿ, ಬ್ಯಾಗಿನಲ್ಲಿದ್ದ ಫೋನನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ ತೆಗೆದು ಕೆಲವು ಚಿತ್ರಗಳನ್ನು ತೆಗೆಯಲು ಪ್ರಾರಂಭಿಸಿದೆ.

ಸೆಲ್ಫಿ ಮತ್ತು ಅಪರೂಪಕ್ಕೆ ಟೈಂಲ್ಯಾಪ್ಸ್ ಗಲ್ಲದೆ ಮತ್ತೆ ಯಾವ ಚಿತ್ರಗಳಿಗೂ ಫೋನನ್ನು ಬಳಸದ ನಾನು ಆ ರಾತ್ರಿ ನಡೆಯುತ್ತಾ ಆ ಲೈಟುಗಳ ಸಾಲಿನ ಒಂದು ಪುಟ್ಟ ವಿಡಿಯೋ ಮಾಡೋಣವೆಂದು ಟೈಂಲ್ಯಾಪ್ಸ್ ಮೋಡಿಗೆ ಹಾಕಿ ನಡೆದುಕೊಂಡು ಹೋಗುತ್ತಿದ್ದೆ. ಇನ್ನೇನು ಲೈಟುಗಳ ಸಾಲು ಮುಗಿಯಲು ಎರಡು ಮೀಟರ್ ದೂರವೂ ಇಲ್ಲವೆನ್ನುವಾಗ ಹಿಂದಿನಿಂದ “ಹಲೋ, ಹಲೋ,” ಎನ್ನುವುದು ಕೇಳಿಸಿತು. ಕಣ್ಣು ಫೋನಿನ ರೆಕಾರ್ಡಿಂಗ್ ಮೇಲೆ ನೆಟ್ಟಿದ್ದುದ್ದರಿಂದ ನಾನು ನಿಲ್ಲದೆ ಹಾಗೇ ಮುಂದೆ ನಡೆಯತೊಡಗಿದೆ. ಮತ್ತೆ, “ಏ ಹಲೋ, ಏ ಗರ್ಲ್ ಹಲೋ,” ಎನ್ನುವ ಏರು ದನಿ ನನ್ನನ್ನೇ ಹಿಂಬಾಲಿಸಿಕೊಂಡು ಬರುತ್ತಿರುವುದು ಅರಿವಿಗೆ ಬಂದು, ಅಲ್ಲೇ ನಿಂತು ಹಿಂದಕ್ಕೆ ನೋಡಿದೆ.

ಮುಖ ಮಾತ್ರ ಕಾಣುವಂತೆ ಮೈ ತುಂಬಾ ಬುರ್ಖಾ ತೊಟ್ಟಿದ್ದ ಹದಿನೇಳು-ಹದಿನೆಂಟು ವರ್ಷದ ಇಬ್ಬರು ಅರಬ್ಬೀ ಹುಡುಗಿಯರು ದುರುಗುಟ್ಟಿಕೊಂಡು ನೋಡುತ್ತಾ ನನ್ನನ್ನೇ ಕೂಗುತ್ತಿದ್ದರು. ನಾನು ಏನು ಎಂಬಂತೆ ತಲೆಯಾಡಿಸಿದೆ, ಕೈಯಲ್ಲಿದ್ದ ಫೋನಿನತ್ತ ಬೊಟ್ಟು ಮಾಡಿ ತೋರಿಸುತ್ತಾ ಒಬ್ಬಾಕೆ ಗುಡುಗಿದಳು, “ನೀನು ನಮ್ಮಿಬ್ಬರ ವಿಡಿಯೋ ತೆಗೆದಿದ್ದೀಯೆ. ಮೊದಲು ಅಳಿಸಿ ಹಾಕು ಆ ವಿಡಿಯೋವನ್ನು.” ಆಕೆಯ ಮಾತು ಕೇಳಿ ನಾನು ತಬ್ಬಿಬ್ಬಾದೆ. ನಾನು ತೆಗೆಯುತ್ತಿರುವುದು ರಸ್ತೆ ಬದಿಗಿದ್ದ ಲೈಟುಗಳ ಸಾಲನ್ನು ಎಂದರೂ ಆಕೆ ಒಪ್ಪಲಿಲ್ಲ. ಮೊದಲು ವಿಡಿಯೋವನ್ನು ಅಳಿಸಿ ಹಾಕು ಎಂದು ಆಕೆ ಮತ್ತವಳ ಜೊತೆಗಿದ್ದವಳು ಪಟ್ಟು ಹಿಡಿದರು. ನಾನು ಫೋನಿನ ಫೋಟೋ ಫೋಲ್ಡರ್ ತೆಗೆಯುತ್ತಿದ್ದಂತೆಯೇ, ನನ್ನ ಕೈಯಿಂದ ಫೋನನ್ನು ಕಸಿದುಕೊಂಡವಳೇ ಇಡೀ ವಿಡಿಯೋ ಫೋಲ್ಡರ್ ಅನ್ನೇ ಡಿಲೀಟ್ ಮಾಡಿಬಿಟ್ಟಳು. ನಾನು ಅರೆ, ನೀವಿರುವ ಒಂದು ವಿಡಿಯೋ ಅನ್ನುತ್ತಿರುವಾಗಲೇ, ಆಕೆಯ ಪಕ್ಕದಲ್ಲಿದ್ದವಳು ಬಿನ್ ಕ್ಲೀನ್ ಮಾಡುವಂತೆ ಸೂಚಿಸಿದಳು. ಕಣ್ಮುಚ್ಚಿ ಬಿಡುವಷ್ಟರಲ್ಲಿ ಆಕೆ ರಿಸೈಕಲ್ ಬಿನ್ ಗೆ ಹೋಗಿದ್ದ ಎಲ್ಲಾ ವಿಡಿಯೋಗಳನ್ನು ಅಳಿಸಿ ಹಾಕಿ ಫೋನನ್ನು ನನ್ನ ಕೈಗಿಟ್ಟಳು.

ಅವರಿಬ್ಬರೂ ಮುಸಿ ಮುಸಿ ನಗುತ್ತಾ, ನನಗೆ ಬೆನ್ನು ಹಾಕಿ ಹೈ ಹೀಲ್ಸ್ ನಲ್ಲಿ ಬಳುಕುತ್ತಾ ನಡೆದು ಹೋಗುವುದನ್ನೇ ನೋಡುತ್ತಾ ನಿಂತು ಬಿಟ್ಟೆ. ಅಸಲಿಗೆ, ಆ ಇಬ್ಬರೂ ಹುಡುಗಿಯರು ನಾನು ತೆಗಿದಿದ್ದ ವಿಡಿಯೋದಲ್ಲಿ ಬಂದಿದ್ದರೋ ಇಲ್ಲವೋ, ಒಂದು ವೇಳೆ ಬಂದಿದ್ದರೂ ಹತ್ತದಿನೈದು ಸೆಕೆಂಡುಗಳ ಆ ಟೈಂಲ್ಯಾಪ್ಸ್​ನಲ್ಲಿ ಅವರು ಕಾಣುತ್ತಿದ್ದರೋ ಇಲ್ಲವೋ ಅದೂ ಅನುಮಾನವೇ! ಆದರೆ ಆ ದಿನ, ಅದರ ಹಿಂದಿನ ಎರಡು ದಿನಗಳಲ್ಲಿ ತೆಗೆದಿದ್ದ ಹತ್ತನ್ನೆರಡು ವಿಡಿಯೊಗಳೂ ಆ ಹುಡುಗಿಯ ಕೈಯಲ್ಲಿ ಶಾಶ್ವತವಾಗಿ ಕಣ್ಮರೆಯಾದವು. ಇಂತಹ ಕೆಟ್ಟ ಅನುಭವಗಳು ಇತರರಿಗಾಗಿದ್ದರೂ, ನನಗೆ ಅದೇ ಮೊದಲ ಬಾರಿಯಾಗಿದ್ದುದ್ದರಿಂದ ಮನಸ್ಸಿಗೆ ಬಹಳ ಕಿರಿಕಿರಿ ಎನಿಸಿತು. ಪುಣ್ಯಕ್ಕೆ ಎರಡು ದಿನಗಳ ಹಿಂದೆಯಷ್ಟೇ ಫೋನಿನಲ್ಲಿದ್ದ ವಿಡಿಯೋ ಮತ್ತು ಚಿತ್ರಗಳನ್ನೆಲ್ಲ ಹಾರ್ಡ್ ಡಿಸ್ಕಿಗೆ ಡೌನ್ಲೋಡ್ ಮಾಡಿಟ್ಟಿದ್ದೆ, ಹಾಗಾಗಿ ಹಳೆಯ ವಿಡಿಯೋಗಳು ಆ ಪುಣ್ಯಾತಗಿತ್ತಿಯ ಕೈಯಲ್ಲಿ ಡಿಲೀಟ್ ಆಗಲಿಲ್ಲ.

Qatar Mail Column by Journalist Night Photographer Chaitra Arjunpuri

ಸೂಖ್ ವಾಖಿಫ್ ನ ಪಕ್ಷಿಗಳ ಮಾರುಕಟ್ಟೆಯಲ್ಲಿ ಖರೀದಿದಾರರಿಗೆ ಕಾಯುತ್ತಿರುವ ಪಾರಿವಾಳಗಳ ಮಾರಾಟಗಾರ

ಎಲ್ಲಾ ಡಿಲೀಟ್, ಡಿಲೀಟ್ ಕ್ಯಾಮೆರಾ ಮೆಮೊರಿ ಕಾರ್ಡಿನಲ್ಲಿರುವ ಚಿತ್ರಗಳನ್ನು ಹಾರ್ಡ್ ಡಿಸ್ಕಿಗೆ ಕಾಪಿ ಮಾಡದೇ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಕ್ಯಾಮೆರಾ ಕೈಗೆ ಬಂದ ದಿನದಿಂದಲೂ ನಾನು ರೂಢಿಸಿಕೊಂಡಿರುವ ಒಳ್ಳೆಯ ಅಭ್ಯಾಸಗಳಲ್ಲಿ ಇದೂ ಒಂದು. ಅದಕ್ಕೆ ಕಾರಣ, ಎರಡು. ನಾನು ಬಹುತೇಕ ಸಮಯದಲ್ಲಿ ತೆಗೆಯುವುದು ಲಾಂಗ್ ಎಕ್ಸ್ಪೋಷರ್ ಚಿತ್ರಗಳನ್ನು, ಕಾರ್ಡ್ ಖಾಲಿಯಿಲ್ಲದಿದ್ದರೆ ಚಿತ್ರ ತೆಗೆದ ಮೇಲೆ ಕಾರ್ಡಿಗೆ ರೀಡ್ ಆಗಲು ಸಮಯ ತೆಗೆದುಕೊಳ್ಳುತ್ತದೆ, ಮತ್ತೊಂದು ಏನಾದರೂ ಹೆಚ್ಚುಕಡಿಮೆಯಾಗಿ ಕಾರ್ಡ್ ಕರಪ್ಟ್ ಆದರೆ ಎನ್ನುವ ಭಯದ ಜೊತೆಯಲ್ಲಿ, ಅಕಸ್ಮಾತ್ ನನಗೇ ಅರಿವಿಲ್ಲದೆ ಯಾವುದಾದರೂ ನಿಷೇಧಿತ ಕಟ್ಟಡದ ಚಿತ್ರ ತೆಗೆದು ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ, ಕಾರ್ಡಿನಲ್ಲಿರುವ ಎಲ್ಲ ಚಿತ್ರಗಳನ್ನೂ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಮುನ್ನೆಚ್ಚರಿಕೆಯಿಂದ. ಕೆಲವು ವರ್ಷಗಳ ಹಿಂದೆ, ಪರಿಚಯದ ಫೋಟೋಗ್ರಾಫರ್ ಒಬ್ಬ ಅರಿವಿಲ್ಲದೆ ಡಿಪ್ಲೊಮ್ಯಾಟಿಕ್ ಏರಿಯಾ ಎಂದೇ ಕರೆಯಲ್ಪಡುವ ವೆಸ್ಟ್ ಬೇಯಲ್ಲಿನ ರಸ್ತೆಯೊಂದರ ಚಿತ್ರ ತೆಗೆಯುವಾಗ ವಿದ್ಯುತ್ ಮಂಡಳಿಯ ಕಟ್ಟಡವೂ ಫ್ರೇಮ್ ನಲ್ಲಿತ್ತು. ಅಲ್ಲಿಯೇ ಇದ್ದ ಟ್ರಾಫಿಕ್ ಪೊಲೀಸ್ ಆತನನ್ನು ತಡೆದು, ಚಿತ್ರಗಳನ್ನೆಲ್ಲಾ ಅಳಿಸಿ, ಕಾರ್ಡನ್ನು ಫಾರ್ಮ್ಯಾಟ್ ಮಾಡಿ ಕೈಗಿಟ್ಟಿದ್ದರ ನೆನಪು ಇನ್ನೂ ಹಸಿಯಾಗಿದೆ.

ನಾನು ಆ ಹುಡುಗಿ ವಿಡಿಯೋ ಅಳಿಸಲು ಜೋರು ಮಾಡಿದಾಗ ಏಕೆ ಪ್ರತಿಭಟಿಸಲಿಲ್ಲ, ಸುತ್ತಮುತ್ತಲಿದ್ದ ಜನರ ನೆರವನ್ನು ಏಕೆ ಪಡೆಯಲಿಲ್ಲ, ಅಲ್ಲಿದ್ದ ಕಾವಲುಗಾರನನ್ನು ಏಕೆ ಕರೆಯಲಿಲ್ಲ ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಕಾರಣವೂ ಇದೆ.

“ಸಾರ್ವಜನಿಕ ಸ್ಥಳಗಳಲ್ಲಿ ಕ್ಯಾಮೆರಾಗಳು ಅಥವಾ ಮೊಬೈಲ್ ಫೋನ್‌ ಗಳೊಂದಿಗೆ ಅನಧಿಕೃತ ಛಾಯಾಗ್ರಹಣ ಮಾಡಿ ಖಾಸಗಿ ಜೀವನದ ಪಾವಿತ್ರ್ಯತೆಯನ್ನು ಉಲ್ಲಂಘಿಸಿದರೆ ಹತ್ತು ಸಾವಿರ ರಿಯಾಲ್ ದಂಡವನ್ನೂ ಮತ್ತು ಕಾನೂನಿನ ಪ್ರಕಾರ (Law No. 4 of 2017) ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಲಾಗುವುದು,” ಎಂದು ಆಂತರಿಕ ಸಚಿವಾಲಯ 2021ರ ಪ್ರಾರಂಭದಲ್ಲಿಯೇ ಪುನರುಚ್ಚರಿಸಿತ್ತು. ಇಲ್ಲಿನ ಕಾನೂನು ಇಷ್ಟು ಕಠಿಣವಾಗಿರುವಾಗ ಯಾರಿಗೆ ತಾನೇ ಆ ಹುಡುಗಿಯನ್ನು ಪ್ರತಿಭಟಿಸಲು ಧೈರ್ಯ ಬರುತ್ತದೆ? “ಹೆಣ್ ಮಕ್ಳೇ ಸ್ಟ್ರಾಂಗು ಗುರು” ಅಂತ ಗಂಡು ಹೈಕ್ಳು ಮಾತ್ರ ಅಲ್ಲ, ನನ್ನಂಥಾ ಮಂಡ್ಯ ಹೆಣ್ಣು ಹೈಕ್ಳುಗಳೂ ಹಾಡಬಹುದು ಎಂದುಕೊಂಡು ಗುನುಗುತ್ತಾ ಮುಂದಕ್ಕೆ ಹೆಜ್ಜೆ ಹಾಕಿದೆ.

ಸೆಲ್ಫಿ ಫಜೀತಿ ವಿಲ್ಲಾಜಿಯೋ ಮಾಲ್ ರಾಜಧಾನಿ ದೋಹಾ ನಗರದ ಆಸ್ಪೈರ್ ವಲಯದಲ್ಲಿರುವ ಇಟಾಲಿಯನ್ ಥೀಮ್ ಮೇಲೆ, ನಿರ್ದಿಷ್ಟವಾಗಿ ಹೇಳುವುದಾದರೆ ಉತ್ತರ ಇಟಲಿಯ ಜನಪ್ರಿಯ ಕಾಲುವೆ ನಗರವಾದ ವೆನಿಸ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು, ನಿರ್ಮಿಸಲಾಗಿರುವ ಜನಪ್ರಿಯ ಮಾಲ್. ಮಾಲಿನ ನಟ್ಟ ನಡುವಿನಲ್ಲಿರುವ ಸುಮಾರು 150 ಮೀಟರ್ ಉದ್ದದ ಕಾಲುವೆಯಲ್ಲಿ ಕೆಂಪು ಮತ್ತು ಬಿಳಿ ಪಟ್ಟೆಯುಳ್ಳ ಶರ್ಟ್‌ಗಳನ್ನು ಧರಿಸಿರುವ ಗೊಂಡೋಲಿಯರ್ ವೆನೆಷಿಯನ್-ಪ್ರೇರಿತ ಗೊಂಡೊಲಾದಲ್ಲಿ ಮಾಲ್‌ನ ಸುತ್ತಲೂ ಜನರನ್ನು ಕೊಂಡೊಯ್ಯುವ ದೃಶ್ಯ ಇಲ್ಲಿನ ಪ್ರಮುಖ ಹೈಲೈಟ್. ಫೋನ್​ನಲ್ಲಿ ಸೆಲ್ಫಿ ತೆಗೆಯುವುದು ಇಲ್ಲಿನ ಸಾಮಾನ್ಯ ದೃಶ್ಯ.

ಕತಾರಿಗೆ ಬಂದ ಹೊಸದರಲ್ಲಿ ನನ್ನ ಪತಿರಾಯ ಈ ಮಾಲ್​ಗೆ ಭೇಟಿ ನೀಡಿ, ಗೊಂಡೊಲಾದ ಮುಂದೆ ತನ್ನ ಗೆಳೆಯರೊಡನೆ ಒಂದು ಸೆಲ್ಫಿ ತೆಗೆದುಕೊಂಡು ಮುಂದೆ ಹೋಗಿದ್ದಾನೆ. ಹಿಂದಿನಿಂದ ಬಂದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ತಡೆದು, ಅವನ ಫೋನ್ ಚೆಕ್ ಮಾಡಿ ಅವನ ಸೆಲ್ಫಿಯ ಒಂದು ಮೂಲೆಯಲ್ಲಿ ಒಬ್ಬ ಕತಾರಿ ಮಹಿಳೆಯಿರುವುದನ್ನು ತೋರಿಸಿ ಆ ಚಿತ್ರವನ್ನು ಫೋನಿನಿಂದ ಸಂಪೂರ್ಣವಾಗಿ ಅಳಿಸಿ ಹಾಕಿ, ಫೋನ್ ಮರಳಿಸಿದರು. ಮಹಿಳೆಯರ ಚಿತ್ರಗಳನ್ನು ಅವರ ಅನುಮತಿಯಿಲ್ಲದೆ ತೆಗೆಯುವುದು ಅಪರಾಧವೆಂದು ತಿಳಿಸಿ, ಫೋಟೋ ತೆಗೆಯುವಾಗ ಮಹಿಳೆಯರು ಫ್ರೆಮ್​ನಲ್ಲಿ ಬರದಂತೆ ಎಚ್ಚರ ವಹಿಸಬೇಕೆಂದು ಹೇಳಿದ ಮೇಲೆ ಅವನು ಮಹಿಳೆಯರಿದ್ದರೆ ತನ್ನ ಫೋನಿನಲ್ಲಿ ಸೆಲ್ಫಿ ಇರಲಿ, ಸಾರ್ವಜನಿಕ ಸ್ಥಳಗಳಲ್ಲಿ ನನ್ನ ಮತ್ತು ಮಗನ ಚಿತ್ರ ತೆಗೆಯಲೂ ಎರಡೆರಡು ಬಾರಿ ಯೋಚಿಸುತ್ತಾನೆ. ಆ ದಿನ ಯಾರಾದರೂ ಕಟ್ಟುನಿಟ್ಟಾದ ಅಧಿಕಾರಿಯಾಗಿದ್ದಿದ್ದರೆ ತನ್ನ ಫೋನನ್ನು ವಶಪಡಿಸಿಕೊಳ್ಳುತ್ತಿದ್ದರು, ಅದನ್ನು ಹಿಂಪಡೆಯಲು ಎಷ್ಟು ಕಷ್ಟ ಪಡಬೇಕಾಗುತ್ತಿತ್ತೋ ಎಂದು ಆಗಾಗ ನೆನಪಿಸಿಕೊಳ್ಳುತ್ತಿರುತ್ತಾನೆ.

Qatar Mail Column by Journalist Night Photographer Chaitra Arjunpuri

ಸೂರ್ಯೋದಯದ ಸಂದರ್ಭದಲ್ಲಿ ಸೂಖ್ ವಾಖಿಫ್​ನಲ್ಲಿರುವ ಫನಾರ್ ಮಸೀದಿ

ಅನುಮತಿ ಇದೆಯೇ? ಇಲ್ಲಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಅವರ ಒಪ್ಪಿಗೆಯಿಲ್ಲದೆ, ಸರ್ಕಾರಿ ಕಟ್ಟಡಗಳನ್ನು, ರಾಯಭಾರಿ ಕಟ್ಟಡಗಳನ್ನು, ಪಾರ್ಲಿಮೆಂಟ್ ಕಟ್ಟಡವನ್ನು ಪೂರ್ವ ಅನುಮತಿಯಿಲ್ಲದೆ, ಆಕ್ಸಿಡೆಂಟ್ ದೃಶ್ಯಗಳನ್ನು, ಕ್ಯಾಮೆರಾ ಮತ್ತು ಮೊಬೈಲಿನಲ್ಲಿ ಚಿತ್ರಿಸುವುದು ಮಾತ್ರವಲ್ಲದೆ ಅವುಗಳನ್ನು ಹಂಚಿಕೊಳ್ಳುವುದೂ ಸಹ ಅಪರಾಧವೇ.

ಇಲ್ಲಿ ಸ್ಟ್ರೀಟ್ ಫೋಟೋಗ್ರಫಿ ಮಾಡಲು ಪ್ರತಿಯೊಬ್ಬ ಫೋಟೋಗ್ರಾಫರ್ ಭೇಟಿ ನೀಡುವ ಸ್ಥಳಗಳಲ್ಲಿ ಪ್ರಮುಖವಾದ್ದದ್ದು ದೋಹಾ ಸೂಖ್ ವಾಖಿಫ್. ಶತಮಾನದಷ್ಟು ಹಳೆಯದಾದ ಈ ಸಾಂಪ್ರದಾಯಿಕ ಕತಾರಿ ವಾಸ್ತುಶಿಲ್ಪ ಶೈಲಿಯಲ್ಲಿರುವ ಮಾರುಕಟ್ಟೆಯಲ್ಲಿ ಫೋಟೋ ತೆಗೆಯದೆ ಇರುವ ಫೋಟೋಗ್ರಾಫರ್ ಕತಾರ್ ನಲ್ಲಿರಲಿಕ್ಕೆ ಸಾಧ್ಯವೇ ಇಲ್ಲ ಎನ್ನುವಷ್ಟು ಛಾಯಾಗ್ರಾಹಕರಿಗೆ ಪ್ರಿಯವಾದ ಸ್ಥಳವಿದು.

ಶುಕ್ರವಾರ ಬಂತೆಂದರೆ ಪಕ್ಷಿಗಳ ಮಾರುಕಟ್ಟೆಯಲ್ಲಿ ಜರುಗುವ ಹರಾಜು ಮತ್ತು ಮಾರಾಟದ ಚಿತ್ರಗಳನ್ನು ಸೆರೆ ಹಿಡಿಯಲು ನಾ ಮುಂದು ತಾ ಮುಂದು ಎಂದು ದೋಹಾದ ಫೋಟೋಗ್ರಾಫರ್​ಗಳು ಮುಗಿಬೀಳುತ್ತೇವೆ. ಅಲ್ಲೂ ಅಷ್ಟೇ, ಸರಕುಗಳನ್ನು ಮಾರಾಟ ಮಾಡುವವರಿಂದ ಹಿಡಿದು, ಸರಕುಗಳನ್ನು ಮಾಲೀಕರ ಹಿಂದೆ ತಳ್ಳು ಗಾಡಿಗಳಲ್ಲಿ ಕೊಂಡೊಯ್ಯುವ ಹಮಾಲಿಗಳ ಚಿತ್ರ ತೆಗೆಯುವಾಗಲೂ ಅವರ ಚಿತ್ರ ತೆಗೆಯಬಹುದೇ ಎಂದು ಕೇಳಿಯೇ ಫೋಟೋ ತೆಗೆಯುವುದನ್ನು, ಅವರ ನಡುವೆ ಯಾರಾದರೂ ಕತಾರಿ ಮಹಿಳೆ ಬಂದರೆ, ಅಷ್ಟೇ ಚಕ್ಕನೆ ಕ್ಯಾಮೆರಾವನ್ನು ಕೆಳಗಿಳಿಸುವುದನ್ನೂ ಅಭ್ಯಾಸ ಮಾಡಿಕೊಂಡಿದ್ದೇನೆ. ಕೆಲವು ಬಾರಿ ಕತಾರಿ ಪುರುಷರೂ “ಲಾ ಲಾ”, ಬೇಡ ಬೇಡ, ಎಂದು ಕೈಯಾಡಿಸಿದರೆ, ಓಕೆ, ಸಾರಿ ಎನ್ನುತ್ತಾ ವಿನಯದಿಂದಲೇ ಮುಂದಕ್ಕೆ ಹೆಜ್ಜೆ ಹಾಕುತ್ತೇನೆ, ಅವರ ಒಪ್ಪಿಗೆಯಿಲ್ಲದೆ ಅವರ ಚಿತ್ರವನ್ನು ಕದ್ದು ಮುಚ್ಚಿ ತೆಗೆಯುವ ದುಸ್ಸಾಹಸಕ್ಕೆಂದೂ ಕೈಹಾಕುವುದಿಲ್ಲ.

ಸ್ಟ್ರೀಟ್ ಫೋಟೋಗ್ರಫಿ? ಸಾರ್ವಜನಿಕವಾಗಿ ಚಿತ್ರ ತೆಗೆಯುವುದು ಇಷ್ಟು ಕಷ್ಟವಿರುವಾಗ ಜನ ಹೇಗೆ ಇಲ್ಲಿ ಸ್ಟ್ರೀಟ್ ಫೋಟೋಗ್ರಫಿ ಮಾಡುತ್ತಾರೆ ಎಂದು ಯೋಚಿಸುತ್ತಿದ್ದೀರಾ? ನೂರಕ್ಕೆ ಶೇ. 95ರಷ್ಟು ಚಿತ್ರಗಳಲ್ಲಿ ಬರುವ ವ್ಯಕ್ತಿ ಫೋಟೋಗ್ರಾಫರ್​ನ ಕುಟುಂಬಕ್ಕೆ ಸೇರಿದವನೋ/ಳೋ ಅಥವಾ ಗೆಳೆಯ/ತಿಯೋ ಇಲ್ಲವೇ ಜೊತೆಗೆ ಬರುವ ಮಾಡೆಲ್​ಗಳಾಗಿರುತ್ತಾರೆ. ನನ್ನ ಸ್ಟ್ರೀಟ್ ಫೋಟೋಗ್ರಫಿಯಲ್ಲಿ ಬಹುತೇಕ ಸಬ್ಜೆಕ್ಟ್ಸ್ ನನ್ನ ಪತಿಯೋ, ಮಗನೋ ಆಗಿರುತ್ತಾರೆ.

ಗೆಳೆಯ/ತಿ ಅಥವಾ ಪರಿಚಯಸ್ಥರನ್ನು ಹಾಕಿಕೊಂಡು ಚಿತ್ರ ತೆಗೆದರೂ ಕೆಲವೊಮ್ಮೆ ವಿಚಿತ್ರವಾದ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಫೋಟೋ ತೆಗೆಯುವಾಗ ಒಳ್ಳೆಯ ಬಾಂಧವ್ಯದಲ್ಲಿದ್ದ ವ್ಯಕ್ತಿ ಅನಿರೀಕ್ಷಿತವಾಗಿ ನಾಳೆ ನಮ್ಮ ಜೊತೆ ಯಾವುದೋ ಕಾರಣಕ್ಕೆ ಜಗಳವಾಡಿಕೊಂಡರು ಅಂದುಕೊಳ್ಳಿ, ಅಲ್ಲಿಗೆ ಶುರುವಾಗುತ್ತವೆ ಸಾಲು ಸಾಲಾಗಿ ತೊಂದರೆಗಳು. ಚಿತ್ರದಲ್ಲಿರುವ ವ್ಯಕ್ತಿಯ ಒಪ್ಪಿಗೆಯನ್ನು ಬಾಯಿ ಮಾತಿನಲ್ಲಿ ಕೇಳಿ ಪಡೆದಿರುತ್ತೇವೆ, ಅಥವಾ ಅವರೇ ನಮ್ಮ ಬಳಿ ಚಿತ್ರ ತೆಗೆಯುವಂತೆ ಹೇಳಿರುತ್ತಾರೆ. ಚಿತ್ರ ತೆಗೆದ ಸಂತಸದಲ್ಲಿ ಫೇಸ್​ಬುಕ್​,  ಇನ್ಸ್ಟಾಗ್ರಾಮ್, ಟ್ವಿಟ್ಟರ್ ಎಂದು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು ಲೈಕುಗಳು, ಕಮೆಂಟುಗಳು ಎಂದು ಬೀಗುತ್ತಿರುತ್ತೇವೆ. ಅವರ ಒಪ್ಪಿಗೆಯ ದಾಖಲೆ ಪತ್ರ ನಮ್ಮ ಬಳಿಯಿರುವುದಿಲ್ಲ. ಸಂಬಂಧ ಹಳಸಿದ ಸಮಯದಲ್ಲಿ, ಅವರು ಮನಸ್ಸು ಮಾಡಿದರೆ, ತಮ್ಮ ಒಪ್ಪಿಗೆಯಿಲ್ಲದೆ ಚಿತ್ರ ತೆಗೆದು ಸಾಮಾಜಿಕ ತಾಣಗಳಲ್ಲೂ ಹರಿದು ಬಿಡುತ್ತಿದ್ದಾರೆಂದು ದಾಖಲೆ ಸಮೇತ ನಮ್ಮನ್ನು ನ್ಯಾಯಾಲಯದ ಕಟಕಟೆ ಹತ್ತಿಸಿಬಿಡಬಹುದು, ನಮ್ಮಿಂದ ದಂಡವನ್ನು ಕಕ್ಕಿಸಬಹುದು, ಇಲ್ಲವಾದಲ್ಲಿ ಜೈಲುವಾಸವನ್ನು ಅನುಭವಿಸುವಂತೆಯೂ ಮಾಡಬಹುದು. ಇಂತಹ ಘಟನೆಗಳು ಇಲ್ಲಿ ಆಗಾಗ ಕಿವಿಗೆ ಬೀಳುತ್ತಲೇ ಇರುತ್ತವೆ.

ಯಾವುದೇ ಸ್ಥಳಕ್ಕೆ ಹೋದರೂ ಇತರೆ ಫೋಟೋಗ್ರಾಫರ್ ಗಳ ಹಾಗೆ ನನ್ನ ಕಣ್ಣುಗಳು ಕಂಪೋಸಿಷನ್ ಅಥವಾ ಸಬ್ಜೆಕ್ಟ್ ಹುಡುಕುವುದಿಲ್ಲ, ಬದಲಾಗಿ ಅವು ಸದಾ ಹುಡುಕುವುದು “ಇಲ್ಲಿ ಛಾಯಾಗ್ರಹಣ ನಿಷೇಧಿಸಲಾಗಿದೆ” ಎನ್ನುವ ಚಿಹ್ನೆ ಅಥವಾ ಬೋರ್ಡ್ ಇದೆಯೇ ಎನ್ನುವುದನ್ನು. ನಿಷೇಧಿತ ಪ್ರದೇಶದಲ್ಲಿ ಚಿತ್ರಗಳನ್ನು ತೆಗೆಯುವಾಗ ಸಿಕ್ಕಿಬಿದ್ದರೆ ಕ್ಯಾಮೆರಾ ಕಳೆದುಕೊಳ್ಳುವ ಭೀತಿಯೊಡನೆ, ದೊಡ್ಡ ಮೊತ್ತದ ದಂಡ ಮತ್ತು ಜೈಲುವಾಸದ ಭಯ ಬೆಂಬಿಡದ ಭೂತದ ಹಾಗೆ ಕಾಡುತ್ತಲೇ ಇರುತ್ತದೆ!

ಈ ಅಂಕಣದ ಆಶಯ ಓದಿ : Qatar Mail : ಚೈತ್ರಾ ಅರ್ಜುನಪುರಿಯವರ ಮರಳುಗಾಡಿನ ಪತ್ರಗಳು ‘ಕತಾರ್ ಮೇಲ್’ ಮೂಲಕ ನಾಳೆಯಿಂದ ನಿಮ್ಮ ಓದಿಗೆ

Published On - 12:59 pm, Fri, 7 January 22