AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಡಾ. ನಾ. ಸೋಮೇಶ್ವರ

'ನಮ್ಮ ಸಮಾಜದಲ್ಲಿ ಎರಡು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಪರಿಸರವಿನ್ನೂ ನಿರ್ಮಾಣವಾಗಿಲ್ಲ. ಅವು ಲೈಂಗಿಕತೆ ಮತ್ತು ಸಾವು. ಜಾತಸ್ಯ ಮರಣಂ ಧ್ರುವಂ. ಹುಟ್ಟಿದವನು ಸಾಯಲೇ ಬೇಕು. ಆದರೂ ಸಹ ನಮಗೆ ಸಾವು ಎಂದರೆ ಏನೋ ಒಂದು ಭೀತಿ. ಒಬ್ಬ ವೈದ್ಯನಾಗಿ ಸಾವು ಎಂದರೆ ಏನು ಎನ್ನುವುದರ ಬಗ್ಗೆ ಯಥಾಮತಿ ತಿಳಿಯಲೆತ್ನಿಸಿರುವೆನಾದರೂ ಅದು ಅಪೂರ್ಣ.' ಎನ್ನುತ್ತಾರೆ ಡಾ. ನಾ. ಸೋಮೇಶ್ವರ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಡಾ. ನಾ. ಸೋಮೇಶ್ವರ
ಲೇಖಕ, ನಿರೂಪಕ ಡಾ. ನಾ. ಸೋಮೇಶ್ವರ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Dec 30, 2020 | 11:14 AM

Share

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಈಗಿಲ್ಲಿ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ. ನಾ. ಸೋಮೇಶ್ವರ ಅವರ ಆಯ್ಕೆಗಳು ಇಲ್ಲಿವೆ.

ಕೃ: ಹರಿದಾಸರ ೧೦,೦೦೦ ಹಾಡುಗಳು

ಸಂ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಪ್ರ: ಅರಳುಮಲ್ಲಿಗೆ ಪ್ರಕಾಶನ

ಮಹಾಭಾರತವನ್ನು ‘ಮಹತ್ವಾತ್ ಭಾರತ್ವಾತ್ ಚ ಮಹಾಭಾರತ’ ಎಂದಂತೆ, ಹರಿದಾಸರ ಹಾಡುಗಳು ತನ್ನ ವಿಷಯ ಮಹತ್ವದಿಂದ ಹಾಗೂ ತನ್ನ ತೂಕದಿಂದ (ಸುಮಾರು 4 ಕೆಜಿ) ಆಧುನಿಕ ಮಹಾಭಾರತವಾಗಿದೆ ಎನ್ನಬಹುದು. ಅರಳುಮಲ್ಲಿಗೆಯವರು ಸುಮಾರು ನಾಲ್ಕು ದಶಕಗಳ ಕಾಲ, ಕರ್ನಾಟಕದ ವಿವಿಧ ಹಳ್ಳಿಗಳಿಗೆ ಹೋಗಿ, ಅಲ್ಲಿ ಜನಸಾಮಾನ್ಯರ ಬಾಳಿಗೆ ಸಾಂತ್ವನ ಹಾಗೂ ಮಾರ್ಗದರ್ಶನವನ್ನು ನೀಡುತ್ತಿದ್ದ ಹರಿದಾಸರ ಹಾಡುಗಳನ್ನು ಬಹಳ ಮುತುವರ್ಜಿ ವಹಿಸಿ ಸಂಗ್ರಹಿಸಿ, ಅದನ್ನು ಈ ಬೃಹತ್ ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದು ಅವರ ಜೀವಮಾನದ ಸಾಧನೆ. ಸಮಗ್ರ ವಚನ ಸಾಹಿತ್ಯವು ಈಗಾಗಲೇ ಕನ್ನಡಿಗರಿಗೆ ದೊರೆತಿರುವಂತೆ, ಸಮಗ್ರ ಕೀರ್ತನ ಸಾಹಿತ್ಯವು ಮೊದಲ ಬಾರಿಗೆ ಕನ್ನಡದಲ್ಲಿ ದೊರೆಯುತ್ತಿರುವುದು ಶ್ಲಾಘನೀಯ ಕಾರ್ಯ.

ಈ ಪುಸ್ತಕವು ಹಿಂದೆಂದಿಗಿಂತಲೂ ಇಂದಿಗೆ ಹೆಚ್ಚು ಪ್ರಸ್ತುತ. ಇದು ಹರಿದಾಸರ ಜೀವನಾನುಭವದಡುಗೆಯ ಸಾರ. ಜನಸಾಮಾನ್ಯರಲ್ಲಿ ಸಂಸ್ಕಾರ, ಸಂಸ್ಕೃತಿ, ವಿವೇಕಗಳನ್ನು ಬಿತ್ತಿ, ಸಾಮಾಜಿಕ ಕಳಕಳಿಯನ್ನು ಹೆಚ್ಚಿಸಿ, ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿ, ಅರಿಷಡ್ವರ್ಗಗಳನ್ನು ಅಂಕೆಯಲ್ಲಿಟ್ಟುಕೊಂಡು, ನೊಂದವರಿಗೆ ಭರವಸೆ ನೀಡಬಲ್ಲ ಉದಾತ್ತ ಭಾವವು ಬೆಳೆಯಲು ಮಾರ್ಗದರ್ಶನವನ್ನು ನೀಡಬಲ್ಲಂತಹ ಕೃತಿ. ಇದು ಒಂದುಸಲ ಓದಿ ಮುಗಿಸುವಂತಹ ಕೃತಿಯಲ್ಲ. ಜೀವಮಾನ ಪೂರ್ಣ ಪಾರಾಯಣ ಯೋಗ್ಯ. ದಿನಕ್ಕೆ ಒಂದು ಕೀರ್ತನೆಯನ್ನು ಮನನ ಮಾಡುವಂತಾದರೆ ನಮ್ಮ ಬದುಕು ಬಂಗಾರವಾಗುವುದರಲ್ಲಿ ಅನುಮಾನವಿಲ್ಲ.

ಕೃ: Death An Inside Story

ಲೇ: ಸದ್ಗುರು

ಪ್ರ: ಪೆಂಗ್ವಿನ್ ಪ್ರಕಾಶನ.

ನಮ್ಮ ಸಮಾಜದಲ್ಲಿ ಎರಡು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಪರಿಸರವಿನ್ನೂ ನಿರ್ಮಾಣವಾಗಿಲ್ಲ. ಅವು ಲೈಂಗಿಕತೆ ಮತ್ತು ಸಾವು. ಜಾತಸ್ಯ ಮರಣಂ ಧ್ರುವಂ. ಹುಟ್ಟಿದವನು ಸಾಯಲೇ ಬೇಕು. ಆದರೂ ಸಹ ನಮಗೆ ಸಾವು ಎಂದರೆ ಏನೋ ಒಂದು ಭೀತಿ. ಒಬ್ಬ ವೈದ್ಯನಾಗಿ ಸಾವು ಎಂದರೆ ಏನು ಎನ್ನುವುದರ ಬಗ್ಗೆ ಯಥಾಮತಿ ತಿಳಿಯಲೆತ್ನಿಸಿರುವೆನಾದರೂ ಅದು ಅಪೂರ್ಣ. ಸಾವಿನ ಧಾರ್ಮಿಕ ಆಯಾಮವನ್ನು ಒಪ್ಪಲು ಮನಸ್ಸು ಸಿದ್ಧವಿಲ್ಲ. ಸಾವಿನ ಹಲವು ಮುಖಗಳಿಗೆ ಉತ್ತರ ದೊರೆತಿಲ್ಲ. ಜಡವಸ್ತುಗಳಿಂದಾದ ಈ ದೇಹದಲ್ಲಿ ಚೈತನ್ಯವು ಹೇಗೆ ಪ್ರವೇಶಿಸುತ್ತದೆ, ಸಾಯುವಾಗ ಆ ಚೈತನ್ಯವು ಎಲ್ಲಿಗೆ ಹೋಗುತ್ತದೆ, ಹೇಗೆ ಹೋಗುತ್ತದೆ, ಯಾಕೆ ಹೋಗುತ್ತದೆ, ಸಹಜ ಸಾವಿಗೂ ಆತ್ಮಹತ್ಯೆಗೂ ಏನು ವ್ಯತ್ಯಾಸ, ಸಲ್ಲೇಖನ ಮರಣವನ್ನು ಒಪ್ಪುವ ನಾವು ದಯಾಮರಣವನ್ನು ಏಕೆ ಒಪ್ಪುವುದಿಲ್ಲ, ಸಾವಿಗೆ ಮೋಸ ಮಾಡಲು ಸಾಧ್ಯವೆ ಅಂದರೆ ಚಿರಂಜೀವಿಗಳಾಗಲು ಸಾಧ್ಯವೆ (ಏಕೆಂದರೆ ಚಿರಂಜೀವತ್ವವು ಜೀವಜಗತ್ತಿನಲ್ಲಿದೆ. ಉದಾ: ಟುರ್ರಿಟಾಪ್ಸಿಸ್ ನ್ಯೂಟ್ರಿಕ್ಯುಲ) ಅಪರಕರ್ಮಗಳು ನಿಜಕ್ಕೂ ಮೃತನಿಗೆ ಅಗತ್ಯವೆ, ಅರ್ಧಾಯಸ್ಸಿನಲ್ಲಿ ಸತ್ತವರು ದೆವ್ವಗಳಾಗುತ್ತಾರೆಯೆ, ಪುನರ್ಜನ್ಮ ಎನ್ನುವುದು ಇದೆಯೆ… ಹೀಗೆ ಹಲವು ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ. ಈ ಪ್ರಶ್ನೆಗಳಿಗೆ ಎಲ್ಲರೂ ಒಪ್ಪುವಂತಹ ಉತ್ತರವನ್ನು ಇದುವರೆಗೂ ಯಾರೂ ನೀಡಿಲ್ಲ. ಈ ಪುಸ್ತಕವೂ ನೀಡುತ್ತಿಲ್ಲ. ಆದರೂ ಈ ಪುಸ್ತಕವು ಆ ವಿಷಯಗಳ ಬಗ್ಗೆ ಮತ್ತೆ ಮತ್ತೆ ಯೋಚಿಸುವಂತೆ ಮಾಡುತ್ತದೆ ಎನ್ನುವುದಂತೂ ನಿಜ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಎಚ್​.ಎ. ಅನಿಲಕುಮಾರ; ‘ರೊಯಾಲ್ಡ್ ದಾಲ್ ಕಥೆಗಳು‘ ಮತ್ತು ‘ಪ್ಯಾಲೆಸ್ತಿನ್‘

Published On - 10:19 am, Tue, 29 December 20

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್