ವೈಶಾಲಿಯಾನ : ಎಂಟನೇ ವಯಸ್ಸು ಬಾಲಿಕೆಯ ಮದುವೆಗೆ ಸೂಕ್ತ ಎಂದಿದ್ದ ಮನು ಮತ್ತವನ ಸ್ಮೃತಿಯ ಪರಿಣಾಮಗಳು

ವೈಶಾಲಿಯಾನ : ಎಂಟನೇ ವಯಸ್ಸು ಬಾಲಿಕೆಯ ಮದುವೆಗೆ ಸೂಕ್ತ ಎಂದಿದ್ದ ಮನು ಮತ್ತವನ ಸ್ಮೃತಿಯ ಪರಿಣಾಮಗಳು
ಬಂಗಾಳದ ರಸಸುಂದರೀ ದೇವಿ ಮತ್ತು ಅವರ ಕೃತಿ ಅಮರ್ ಜೀಬನ್ (ನನ್ನ ಜೀವನ)

Rasasundhari Devi : ‘ಅವಿಭಕ್ತ ಕುಟುಂಬದ ಸೊಸೆಯಾಗಿ, ಹದಿನೆಂಟು ಬಾರಿ ಬಸಿರು, ಪ್ರಸವ, ಗರ್ಭಪಾತಗಳನ್ನು ಎದುರಿಸಿ, ಕಗ್ಗತ್ತಲೆಯ ಅಡುಗೆ ಕೋಣೆಯಲ್ಲಿ ಕುಳಿತು, ಗುಟ್ಟಾಗಿ, ಪುಟ್ಟ ಮಗನ ಚೈತನ್ಯ ಭಾಗವತದ ಪುಸ್ತಕದಿಂದ ಪುಟವೊಂದನ್ನು ಹರಿದು ಒಂದೊಂದೇ ಅಕ್ಷರವನ್ನು ಗುರುತಿಸುತ್ತಾ, ಸಾಕ್ಷರಸ್ಥೆಯಾಗುತ್ತಾಳೆ.’ ಡಾ. ಕೆ. ಎಸ್. ವೈಶಾಲಿ

ಶ್ರೀದೇವಿ ಕಳಸದ | Shridevi Kalasad

|

Feb 05, 2022 | 2:22 PM

ವೈಶಾಲಿಯಾನ | Vaishaliyaana : ಸುಮಾರು 30-35 ವರ್ಷಗಳ ಕೆಳಗೆ ನನಗೆ ನಮ್ಮ ಸಾಗರ ಸೀಮೆಯ ಹವ್ಯಕ ಬ್ರಾಹ್ಮಣರ ಅವಿಭಕ್ತ ಕುಟುಂಬಗಳಲ್ಲಿ ನಾನು ಕಂಡ ಸುಮಾರು ಕೆಂಪು ಸೀರೆಯನ್ನುಟ್ಟ, ಕೇಶಮುಂಡನ ಮಾಡಿಸಿ ತಲೆ ಮೇಲೆ ಕೆಂಪು ಸೀರೆಯ ಸೆರಗನ್ನು ಹೊದ್ದ ವಯಸ್ಕ ವಿಧವೆಯರು ನೆನಪಾಗಿ ಅತೀವ ಸಂಕಟವಾಗುತ್ತದೆ. ಆಗ ನಾನು 12-13 ವರ್ಷಗಳ ಹುಡುಗಿ. ಸಂಬಂಧಿಕರ ಹಳ್ಳಿ ಮನೆಯೊಂದರಲ್ಲಿ, ಉಪ್ಪರಿಗೆಯಲ್ಲಿ ನಾನು ಮತ್ತು ನನ್ನ ತಂಗಿ ಕೂತು ಉಗುರಿಗೆ ಕೆಂಪು ಬಣ್ಣದ ನೇಲ್ ಪಾಲಿಷ್ ಹಾಕಿಕೊಳ್ಳುತ್ತ ಮೆಲ್ಲಗೆ ಹಾಡುತ್ತ, ಏನೋ ತಮಾಶೆ ಮಾಡುತ್ತ ನಗುತ್ತಿದ್ದೆವು. ಅಕಸ್ಮಾತ್ ಅಲ್ಲಿ ಅಡಿಕೆ ಸುಲಿಯುವ ಹೆಂಗಸರನ್ನು ಕೆಳಗೆ ಬರಲು ಹೇಳಲು ಅಲ್ಲಿಗೆ ಬಂದ ಆ ಮನೆಯ ಅಜ್ಜಿ, ಕೆಂಪು ಸೀರೆಯನ್ನುಟ್ಟು, ತಲೆಯ ಮೇಲೆ ಸೆರಗು ಹೊದ್ದ ವಿಧವೆ, ನಮ್ಮ ಬಳಿ ಕೂತು ನಸುನಗುತ್ತ, ಕುತೂಹಲದಿಂದ “ಇದೆಂಥಾ ಕೆಂಪು ಶಾಯಿ ಮಗಾ? ಇದ್ನೆಲ್ಲ ಕೈಗೆ-ಕಾಲಿಗೆ ಎಂತಕ್ಕೆ ಹಚ್ಚಿಕೊಳ್ತ್ವೇ? ತುಟಿಗೂ ಶಾಯಿ ಬಳೀತ್ವಪ್ಪ” ಎಂದು ನಮ್ಮೊಟ್ಟಿಗೆ ಎಲ್ಲಾ ಅಲಂಕಾರಿಕ ಪ್ರಸಾದನ ಸಾಮಗ್ರಿಗಳ ಬಗ್ಗೆ ಅತ್ಯಾಸಕ್ತಿಯಿಂದ ಪಟ್ಟಾಂಗ ಹೊಡೆದದ್ದನ್ನು ನೆನೆಸಿಕೊಂಡಾಗ ನನ್ನ ಕಣ್ಣುಗಳು ತೇವಗೊಳ್ಳುತ್ತವೆ.

ಡಾ. ಕೆ. ಎಸ್. ವೈಶಾಲಿ, ಹಿಂದೂಸ್ತಾನಿ ಗಾಯಕಿ, ಪ್ರಾಧ್ಯಾಪಕಿ

(ಯಾನ – 3)

“ಪಂಡಿತಾ ರಮಾಬಾಯಿ ಸರಸ್ವತಿಯವರ ಬದುಕು ಯಾವ ರೀತಿಯಲ್ಲಿ ಆದರ್ಶಪ್ರಾಯವಾಗಿತ್ತು? ಲೇಖನದಲ್ಲಿ ಹಿಂದೂ ಧರ್ಮದ ಪರೋಕ್ಷ ದೂಷಣೆ ಮಾತ್ರ ಕಂಡುಬಂದಿತು. ವೇದ –ಉಪನಿಷತ್ತುಗಳ ಅಧ್ಯಯನ ಮಹಿಳೆಯರಿಗೆ ನಿಷಿದ್ಧವಲ್ಲ, ಮಹಿಳೆಯರಿಗೂ ವ್ಯಾಸಂಗದಲ್ಲಿ ನಿರತರಾಗಿ, ಬೌದ್ಧಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಹಕ್ಕಿದೆ ಎನ್ನುವ ಅಚಲ ನಂಬಿಕೆ –ವಿಶ್ವಾಸದಿಂದ ತನ್ನ ಮಡದಿ ಲಕ್ಷ್ಮೀಬಾಯಿಬಾಯಿ ಮತ್ತು ಮಗಳಾದ ರಮಾಬಾಯಿಯನ್ನು ಅಧ್ಯಯನಶೀಲರಾಗುವಂತೆ ಪ್ರೋತ್ಸಾಹಿಸಿ, ಹುರಿದುಂಬಿಸಿದ ಅವರ ತಂದೆ ಅನಂತಶಾಸ್ತ್ರೀ ಡೋಂಗ್ರೆಯವರು ಮಗಳಿಗಿಂತ ಹೆಚ್ಚು ಪ್ರಗತಿಪರ ನಿಲುವಿನವರಂತೆ ಕಂಡುಬರುತ್ತಾರಲ್ಲವೇ? ರಮಾಬಾಯಿಯವರೇಕೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು?” ಎಂಬ ಕೆಲವು ವಿವೇಚನಾರಹಿತ, ಕುಹಕದ ಪ್ರತಿಕ್ರಿಯೆಗಳು ನನಗೆ ಎದುರಾದಾಗ, ವಸಾಹತುಶಾಹಿ ಭಾರತದ ಹಿಂದೂ ಮಹಿಳೆಯರ ಸ್ಥಿತಿ-ಗತಿಗಳ ಬಗ್ಗೆ ಇನ್ನಷ್ಟು ಗಮನ ಹರಿಸುವ ಅಗತ್ಯವಿದೆ ಎಂದು ನನಗೆ ತೀವ್ರವಾಗಿ ಅನಿಸಿತು.

ಹಿಂದೂ ಧರ್ಮದಲ್ಲಿ ನಿರೀಶ್ವರವಾದಿಗಳು, ತರ್ಕಶಾಸ್ತ್ರ ಪಂಡಿತರು, ಆಜ್ಞೇಯತಾವಾದಿಗಳು, ನಾಸ್ತಿಕರು, ಮೂರ್ತಿ ಪೂಜೆಯನ್ನು ಖಂಡಿಸಿ ನಿರ್ಗುಣ ಬ್ರಹ್ಮನನ್ನು ಆರಾಧಿಸುವವರು, ಒಟ್ಟಿನಲ್ಲಿ ಬಹಳ ರ‍್ಯಾಡಿಕಲ್ ಆಗಿ ಚಿಂತಿಸುವವರು ಇದ್ದರು ನಿಜ , ಅನೇಕ ಉದಾರವಾದಿ, ಪ್ರಗತಿ ಪರ ನಿಲುವುಗಳು ಧರ್ಮದ ಜಿಜ್ಞಾಸೆಯ ಬಗ್ಗೆ ಪ್ರಚಲಿತವಿದ್ದದ್ದೂ ನಿಜವೇ. ಆದರೆ ಧಾರ್ಮಿಕ ವಿಧಿಗಳು, ಆಚರಣೆಗಳು- ಸಂಪ್ರದಾಯಗಳ ಬಗ್ಗೆ ಷರಾ ಬರೆಯುವ ವ್ಯಾಖ್ಯಾನಕಾರರೆಲ್ಲರೂ ಪುರುಷರೇ ಆಗಿದ್ದರಲ್ಲವೇ? ಪುರುಷಕೇಂದ್ರಿತ ದೃಷ್ಟಿಕೋನದಿಂದಲೇ ರೂಪುಗೊಂಡ ವ್ಯವಸ್ಥೆಯಲ್ಲಿ ಅನೇಕ ಮಹಿಳಾ ವಿರೋಧಿ, ಅಮಾನುಷವಾದ ಆಚರಣೆಗಳು, ಸಾಂಪ್ರದಾಯಿಕ ರಿವಾಜುಗಳಾಗಿ ಮಾರ್ಪಟ್ಟಿದ್ದವು. ಅವುಗಳಲ್ಲಿ ಪ್ರಮುಖವಾಗಿ ನಾವು ಗಮನಿಸಬೇಕಾದವು ವಿಧವೆಯರನ್ನು ಹಿಂದೂ ಸಮಾಜದಲ್ಲಿ ನಡೆಸಿಕೊಂಡ ರೀತಿ. ಇದಲ್ಲದೇ ಇನ್ನಿತರ ಅನಿಷ್ಠ ಸಂಪ್ರದಾಯಗಳಾದ ಸಹಗಮನ, ಬಾಲ್ಯ ವಿವಾಹ, ಮಹಿಳೆಯರ ಶಿಕ್ಷಣದ ಬಗ್ಗೆ ತೀವ್ರ ಅನಾದರ, ಅಸಡ್ಡೆ ಇತ್ಯಾದಿ. 19 ನೇ ಶತಮಾನದ ಹಲವಾರು ಮಹಿಳಾ ಆತ್ಮಕಥನಗಳನ್ನು ಓದಿದಾಗ ನಮ್ಮನ್ನು ತುಂಬಾ ಬಾಧಿಸುವ ಸಂಗತಿಗಳಿವು.

ಯಾನದ ಆರಂಭ : Vaishaliyaana : ಲೇಖಕಿ ಡಾ. ಕೆ. ಎಸ್. ವೈಶಾಲಿಯವರ ಅಂಕಣ ‘ವೈಶಾಲಿಯಾನ’

Vaishaliyaana column Dr KS Vaishali discussed Hindu Nationalists agenda and their effects on Indian woman

ರಸಸುಂದರೀ ದೇವಿ ಮತ್ತು ಪಂಡಿತಾ ರಮಾಬಾಯಿ

ತಮ್ಮ ಕೃತಿ The High Caste Hindu Woman ಪಂಡಿತಾ ರಮಾಬಾಯಿಯವರು ಹಿಂದೂ ಮಹಿಳೆಯರ ವೈವಾಹಿಕ ಜೀವನದ ಬಗ್ಗೆ ದೀರ್ಘವಾಗಿ ಬರೆಯುತ್ತಾರೆ. ಮನುಸ್ಮೃತಿಯ ಪ್ರಕಾರ 8 ವರ್ಷ, ಬಾಲಿಕೆಯ ಮದುವೆಗೆ ಸರಿಯಾದ ವಯಸ್ಸಾಗಿತ್ತು. ಒಬ್ಬ ಕುಲೀನ ಮನೆತನದ ಮೇಲ್ಜಾತಿಯ ಹೆಣ್ಣುಮಗಳ ವಿವಾಹವನ್ನು 12 ನೇ ವಯಸ್ಸಿನಿಂದಾಚೆಗೆ ಮುಂದೂಡುವಂತಿರಲಿಲ್ಲ. ಹೆಣ್ಣುಕೂಸಿನ ವ್ಯಕ್ತಿತ್ವದ ವಿಕಸನಕ್ಕಿಂತ, ತೊಟ್ಟಿಲಿನ ಕೂಸಿನ ಮದುವೆ ನಿಶ್ಚಿತಾರ್ಥವೇ ಮುಖ್ಯವಾಗಿತ್ತು. 1910ರಲ್ಲಿ ಪ್ರಕಟಗೊಂಡ ರವೀಂದ್ರನಾಥ ಟಾಗೋರರ ಗೋರಾ ಕಾದಂಬರಿಯಲ್ಲಿ ಈ ಲಿಂಗ ಅಸಮಾನತೆಯನ್ನು ಅವರು ಸೂಕ್ಷ್ಮವಾಗಿ ಪ್ರಸ್ತಾಪಿಸುತ್ತಾರೆ. ಹತ್ತು ವರ್ಷದ ವಯಸ್ಸಿನ ಹುಡುಗ ಮತ್ತು ಹುಡುಗಿಯನ್ನು ಕೌಟುಂಬಿಕ ವಲಯದಲ್ಲಿ ನೋಡುವ ದೃಷ್ಟಿಕೋನವೇ ಬಹಳ ಭಿನ್ನವಾಗಿದೆ. ಈ ಕಾದಂಬರಿಯಲ್ಲಿ ನಾವು ಕಾಣುವ ಪೊರೇಶ್ ಬಾಬುರವರ ಬ್ರಹ್ಮೋ ಕುಟುಂಬಕ್ಕೆ ಸೇರಿದ ಬಾಲಕ ಸತೀಶ ಇನ್ನೂ ಹತ್ತು ವರ್ಷದ ಎಳೆಯ ಪೋರ. ತನ್ನ ಆಟ-ಪಾಠಗಳಲ್ಲಿ ಮಗ್ನನಾಗಿ, ತನ್ನ ವಯೋಸಹಜವಾದ ತುಂಟಾಟಗಳಲ್ಲಿ ಮುಳುಗಿರುವ ಬಾಲಕ. ಆದರೆ ಗೋರಾನ ಸಹೋದರನ ಮಗಳಾದ 10 ವರ್ಷದ ಶಶಿಮುಖಿ ಎಂಬ ಬಾಲಕಿಯನ್ನು ಬೆಳೆಸಿರುವ ರೀತಿ ಇದಕ್ಕೆ ತದ್ವಿರುದ್ಧವಾಗಿದೆ. ಅವಳ ಮದುವೆಯ ಬಗ್ಗೆ, ಯೋಗ್ಯ ವರನನ್ನು ನಿಕ್ಕಿ ಮಾಡುವುದರ ಸಲುವಾಗಿ ಮನೆಯಲ್ಲಿ ಬಿರುಸಿನ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ಆ ಬಡಪಾಯಿ ಹೆಣ್ಣು ಮಗುವಿಗೆ ಏನನ್ನೂ ಮಾತನಾಡುವ ಸ್ವಾತಂತ್ರ್ಯವೇ ಇಲ್ಲ. ಆಕೆ ಸದ್ದಿಲ್ಲದೇ ಅಡುಗೆ ಕೋಣೆಯಲ್ಲಿ ತಾಯಿಯೊಂದಿಗಿರುತ್ತಾಳೆ. ಬಂಗಾಳಿ ಭಾಷೆಯಲ್ಲಿ ಎರಡು ಭಾಗಗಳಲ್ಲಿ 1876 ಮತ್ತು 1906ರಲ್ಲಿ ಪ್ರಕಟಗೊಂಡ ತನ್ನ ಆತ್ಮಕಥೆ ಅಮರ್ ಜೀಬನ್ ( ನನ್ನ ಜೀವನ) ನಲ್ಲಿ ಗೃಹಿಣಿ ರಸಸುಂದರೀ ದೇವಿ ತಾನು ಹನ್ನೆರಡರ ಬಾಲಕಿಯಾಗಿದ್ದಾಗ ನಡೆದ ತನ್ನ ವಿವಾಹವನ್ನು ಪ್ರಸ್ತಾಪಿಸುತ್ತ, ತಾಯಿಯನ್ನು ಅಗಲಿ ಗಂಡನ ಮನೆಗೆ ಹೋಗುವುದನ್ನು ಕಾರಾಗೃಹವಾಸವೆಂದು ವರ್ಣಿಸುತ್ತಾಳೆ.

ಅವಿಭಕ್ತ ಕುಟುಂಬದ ಸೊಸೆಯಾಗಿ, ಹದಿನೇಳು-ಹದಿನೆಂಟು ಬಾರಿ ಬಸಿರು, ಪ್ರಸವ, ಗರ್ಭಪಾತಗಳನ್ನು ಎದುರಿಸಿ, ಕಗ್ಗತ್ತಲೆಯ ಇಜ್ಜಲು ಒಲೆಯಿದ್ದ ಅಡುಗೆ ಕೋಣೆಯಲ್ಲಿ ಕುಳಿತು, ಗುಟ್ಟಾಗಿ, ಸದ್ದಿಲ್ಲದೇ, ಪುಟ್ಟ ಮಗನ ಚೈತನ್ಯ ಭಾಗವತದ ಪುಸ್ತಕದಿಂದ ಪುಟವೊಂದನ್ನು ಹರಿದು ಒಂದೊಂದೇ ಅಕ್ಷರವನ್ನು ಗುರುತಿಸುತ್ತಾ, ಸಾಕ್ಷರಸ್ಥೆಯಾಗುವ ರಸಸುಂದರಿದೇವಿಯ ಆತ್ಮವೃತ್ತಾಂತ ನಮ್ಮ ಕರುಳನ್ನು ಹಿಂಡುತ್ತದೆ. ಸುದೀರ್ಘ ದಾಂಪತ್ಯ ಜೀವನದ ಬಳಿಕ, ಅಷ್ಟು ಮಕ್ಕಳ ತಾಯಿಯಾಗಿ, ಅನೇಕ ಮೊಮ್ಮಕ್ಕಳ ಅಜ್ಜಿಯಾದ ಬಳಿಕವೂ, ತನ್ನ ಗಂಡ ನಿಧನ ಹೊಂದಿದಾಗ ತನಗೆ ಕೇಶ ಮುಂಡನ ಮಾಡಿ, ತನ್ನ ಬಳೆಗಳನ್ನು ಒಡೆದು, ಕುಂಕುಮವನ್ನು ಅಳಿಸಿ ಹಾಕಿದ ರಿವಾಜುಗಳನ್ನು ಭಾರವಾದ ಹೃದಯದಿಂದ ವರ್ಣಿಸುತ್ತಾಳೆ. 12ನೇ ವಯಸ್ಸಿಗೆ ತೌರುಮನೆ ಬಿಟ್ಟು ಬಂದಬಳಿಕ ತನ್ನ ಪ್ರೀತಿಯ ತಾಯಿ ಹಾಸಿಗೆ ಹಿಡಿದು ಮರಣ ಶಯ್ಯೆಯಲ್ಲಿದ್ದಾಗಲೂ ತನ್ನನ್ನು ತವರುಮನೆಗೆ ಕಳುಹಿಸದ ಗಂಡನ ಮನೆಯವರು, ತನ್ನ ಅಸಹಾಯಕತೆಯನ್ನು ನನೆದು ಕಣ್ಣೀರಿಡುವ ರಸಸುಂದರಿದೇವಿ ತಾನು ಗಂಡಸಾಗಿದ್ದರೆ ತಾನು ಇಷ್ಟರ ಮಟ್ಟಿಗೆ ಅಸಹಾಯಕಳಾಗಿರಬೇಕಿತ್ತೇ? ಎಂದು ನಿಡುಸುಯ್ಯುತ್ತಾಳೆ. ಈ ಬಗೆಯ ಅನೇಕ ವಿಧವೆಯರ ಆಕ್ರಂದನಕ್ಕೆ ಕಿವಿಯಾಗಿದ್ದ ಪಂಡಿತಾ ರಮಾಬಾಯಿ ಹಿಂದೂ ಸನಾತನಿಗಳ ಮಹಿಳಾ ವಿರೋಧಿ ನಿಲುವುಗಳಿಂದ ಬೇಸತ್ತು, ಕ್ರೈಸ್ತಧರ್ಮಕ್ಕೆ ಮತಾಂತರ ಹೊಂದಿದ್ದು ಅಚ್ಚರಿಯ ಸಂಗತಿಯೇನಲ್ಲ.

ಇದನ್ನೂ ಓದಿ : Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ

Vaishaliyaana column Dr KS Vaishali discussed Hindu Nationalists agenda and their effects on Indian woman

ಗೋರಾ’ ಮತ್ತು  ‘Shadow Lives : Writings on Widowhood in India’  ಕೃತಿಗಳು

ಪ್ರೀತಿ ಗಿಲ್ ಮತ್ತು ಉಮಾ ಚಕ್ರವರ್ತಿಯವರ ಸಂಪಾದಕತ್ವದಲ್ಲಿ ‘Shadow Lives : Writings on Widowhood in India’ ವೈಧವ್ಯದ ಕುರಿತಾದ ಒಂದು ವೈಶಿಷ್ಟ್ಯಪೂರ್ಣ ಸಂಕಲನ. ಹತ್ತೊಂಭತ್ತು ಮತ್ತು ಇಪ್ಪತ್ತನೇ ಶತಮಾನಗಳ ಅನೇಕ ಐತಿಹಾಸಿಕ ದಾಖಲೆಗಳು, ಸೃಜನಶೀಲ ಬರಹಗಳು, ಆತ್ಮ ಚರಿತ್ರೆಗಳ ಭಂಡಾರವಾದ ಈ ಸಂಕಲನ ವೈಧವ್ಯದ ಹಲವಾರು ಸಂಕೀರ್ಣ ಮಜಲುಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದೊಂದು ಶ್ಲಾಘನೀಯವಾದ ಸ್ತ್ರೀವಾದಿ ವಿಮರ್ಶಾತ್ಮಕ ಪ್ರಯತ್ನವಾಗಿದ್ದು, ಹಿಂದೂ ವಿಧವೆ ಇಲ್ಲಿ ಕೇವಲ ಶೋಷಿತಳಾದ, ದಮನಿತ ಮಹಿಳೆಯಷ್ಟೇ ಆಗದೆ, ಪ್ರತಿರೋಧಕಾತ್ಮಕ ಶಕ್ತಿಯಾಗಿಯೂ ಹೊರಹೊಮ್ಮುತ್ತಾಳೆ. ಇಲ್ಲಿ ನಮ್ಮ ಮನಸ್ಸಿನ ಮೆಲೆ ಛಾಪನ್ನು ಒತ್ತುವ ಅನೇಕ ಬರಹಗಳಿವೆ. ಎಂ.ಕೆ. ಇಂದಿರಾರವರ ಫಣಿಯಮ್ಮ ಕಾದಂಬರಿ ಕೂಡ ಇಲ್ಲಿ ಪ್ರಸ್ತುತ. ಈ ಕಾದಂಬರಿ ಅರ್ಧ ಕಾಲ್ಪನಿಕವಾದರೆ ಮತ್ತು ಇನ್ನುಳಿದ ಅರ್ಧ ಸ್ವಲ್ಪ ಇತಿಹಾಸವೆಂದು ಹೇಳಬಹುದೇನೋ. ಈ ಭಾಗ ಇಂದಿರಾರವರ ಚಿಕ್ಕಜ್ಜಿಯೊಬ್ಬರ ಬದುಕನ್ನು ಆಧರಿಸಿ ಬರೆದದ್ದು. ಫಣಿಯಮ್ಮ ಬಾಲ ವಿಧವೆಯಾಗಿ ಕಠೋರವಾದ ಜೀವನ ಸವೆಸಿದರೂ ಎಂದೂ ಸಂಪ್ರದಾಯಗಳನ್ನು ಪ್ರಶ್ನಿಸುವುದಿಲ್ಲ, ವಿರೋಧ ವ್ಯಕ್ತ ಪಡಿಸುವುದಿಲ್ಲ. ಆದರೆ ಎಲ್ಲರೂ ಅಚ್ಚರಿ ಪಡುವಂತೆ , ಆಕೆ ಯುವ ವಿಧವೆಯೊಬ್ಬಳ ಕೇಶ ಮುಂಡನದ ಸಂದರ್ಭದಲ್ಲಿ , ಆಕೆ ತಲೆ ಬೋಳಿಸಿಕೊಳ್ಳುವುದಿಲ್ಲವೆಂದು ಪ್ರತಿಭಟಿಸಿದಾಗ ಅವಳನ್ನು ಬೆಂಬಲಿಸುತ್ತಾಳೆ. ಕೆಲವು ವಿಮರ್ಶಕಿಯರಿಗೆ ಇದು ವಿಧವೆಯ ಸಾಂಪ್ರದಾಯಿಕ ಬದುಕನ್ನು ಆದರ್ಶಪ್ರಾಯವೆಂದು ಪರಿಗಣಿಸಿ ವೈಭವೀಕರಿಸುತ್ತಿದೆಯೆಂದು ಕಂಡುಬಂದರೆ, ಇನ್ನು ಕೆಲವರು ಸಂಪ್ರದಾಯ, ಕಟ್ಟಳೆಗಳ ಸೋಗಿನಲ್ಲಿ ಅಮಾನವೀಯತೆಯನ್ನು ಸಮರ್ಥಿಸುವ ಸಮಾಜದ ಬೂಟಾಟಿಕೆಯನ್ನು ಲೇಖಕಿ ಬಯಲಿಗೆಳೆಯುತ್ತಾರೆಂಬ ಭಾವನೆಯನ್ನು ವ್ಯಕ್ತ ಪಡಿಸುತ್ತಾರೆ.

ಸುಮಾರು 30-35 ವರ್ಷಗಳ ಕೆಳಗೆ ನನಗೆ ನಮ್ಮ ಸಾಗರ ಸೀಮೆಯ ಹವ್ಯಕ ಬ್ರಾಹ್ಮಣರ ಅವಿಭಕ್ತ ಕುಟುಂಬಗಳಲ್ಲಿ ನಾನು ಕಂಡ ಸುಮಾರು ಕೆಂಪು ಸೀರೆಯನ್ನುಟ್ಟ, ಕೇಶಮುಂಡನ ಮಾಡಿಸಿ ತಲೆ ಮೇಲೆ ಕೆಂಪು ಸೀರೆಯ ಸೆರಗನ್ನು ಹೊದ್ದ ವಯಸ್ಕ ವಿಧವೆಯರು ನೆನಪಾಗಿ ಅತೀವ ಸಂಕಟವಾಗುತ್ತದೆ. ಆಗ ನಾನು 12-13 ವರ್ಷಗಳ ಹುಡುಗಿ . ಸಂಬಂಧಿಕರ ಹಳ್ಳಿ ಮನೆಯೊಂದರಲ್ಲಿ, ಉಪ್ಪರಿಗೆಯಲ್ಲಿ ನಾನು ಮತ್ತು ನನ್ನ ತಂಗಿ ಕೂತು ಉಗುರಿಗೆ ಕೆಂಪು ಬಣ್ಣದ ನೇಲ್ ಪಾಲಿಷ್ ಹಾಕಿಕೊಳ್ಳುತ್ತ ಮೆಲ್ಲಗೆ ಹಾಡುತ್ತ, ಏನೋ ತಮಾಶೆ ಮಾಡುತ್ತ ನಗುತ್ತಿದ್ದೆವು. ಅಕಸ್ಮಾತ್ ಅಲ್ಲಿ ಅಡಿಕೆ ಸುಲಿಯುವ ಹೆಂಗಸರನ್ನು ಕೆಳಗೆ ಬರಲು ಹೇಳಲು ಅಲ್ಲಿಗೆ ಬಂದ ಆ ಮನೆಯ ಅಜ್ಜಿ, ಕೆಂಪು ಸೀರೆಯನ್ನುಟ್ಟು, ತಲೆಯ ಮೇಲೆ ಸೆರಗು ಹೊದ್ದ ವಿಧವೆ, ನಮ್ಮ ಬಳಿ ಕೂತು ನಸುನಗುತ್ತ, ಕುತೂಹಲದಿಂದ “ಇದೆಂಥಾ ಕೆಂಪು ಶಾಯಿ ಮಗಾ? ಇದ್ನೆಲ್ಲ ಕೈಗೆ-ಕಾಲಿಗೆ ಎಂತಕ್ಕೆ ಹಚ್ಚಿಕೊಳ್ತ್ವೇ? ತುಟಿಗೂ ಶಾಯಿ ಬಳೀತ್ವಪ್ಪ” ಎಂದು ನಮ್ಮೊಟ್ಟಿಗೆ ಎಲ್ಲಾ ಅಲಂಕಾರಿಕ ಪ್ರಸಾದನ ಸಾಮಗ್ರಿಗಳ ಬಗ್ಗೆ ಅತ್ಯಾಸಕ್ತಿಯಿಂದ ಪಟ್ಟಾಂಗ ಹೊಡೆದದ್ದನ್ನು ನೆನೆಸಿಕೊಂಡಾಗ ನನ್ನ ಕಣ್ಣುಗಳು ತೇವಗೊಳ್ಳುತ್ತವೆ.

ಇದನ್ನೂ ಓದಿ : ಜನಪ್ರತಿನಿಧಿಗಳೇ ಎಚ್ಚರವಿರಲಿ : ‘ಬಲಾತ್ಕಾರದ ಕುರಿತು ಹೊಸ ಮಹಿಳಾಪರ ವ್ಯಾಖ್ಯಾನದ ಅವಶ್ಯಕತೆಯಿದೆ’ ಡಾ. ಕೆ. ಎಸ್. ವೈಶಾಲಿ

Vaishaliyaana column Dr KS Vaishali discussed Hindu Nationalists agenda and their effects on Indian woman

ಶಾರದಾ ಸದನದಲ್ಲಿ ಆಶ್ರಯ ಪಡೆದ ವಿಧವೆಯರೊಂದಿಗೆ ರಮಾಬಾಯಿ

ಅವರಲ್ಲೆಲ್ಲ ನನಗೆ ಫಣಿಯಮ್ಮ ಕಂಡುಬರುತ್ತಿದ್ದಳು. ತನ್ನ ವಿಧವಾಶ್ರಮ ‘ಶಾರದಾ ಸದನ’ಕ್ಕಾಗಿ ಕ್ರೈಸ್ತಧರ್ಮ ದೀಕ್ಷೆ ಸ್ವೀಕರಿಸಿ, ಅಮೆರಿಕಾ- ಇಂಗ್ಲೆಂಡುಗಳಲ್ಲಿ ಸಂಚರಿಸಿ, ಅಲ್ಲಿನ ಕ್ರೈಸ್ತ ಸಮುದಾಯದಿಂದ ದೇಣಿಗೆ ಸಂಗ್ರಹಿಸಿ, ಬಾರತಕ್ಕೆ ಸ್ವಾತಂತ್ಯ ದೊರಕಿದ ಮೇಲೆ ಮಹಿಳಾ ಸ್ವಾತಂತ್ಯದ ಬಗ್ಗೆ ಯೋಚಿಸೋಣ ಎಂದು ತಮ್ಮನ್ನು ಅಪಹಾಸ್ಯ ಮಾಡಿದ ಹಿಂದೂ ಪುರುಷ ರಾಷ್ಟ್ರೀಯತಾವಾದಿಗಳಿಗೆ ಸೆಡ್ಡು ಹೊಡೆದಂತೆ ಮತಾಂತರಗೊಂಡ ರಮಾಬಾಯಿಯವರು ನಿಜಕ್ಕೂ ಎಂಥಾ ಆದರ್ಶಪ್ರಾಯದ ದಿಟ್ಟ ಮಹಿಳೆಯೆಂದು ಅವರ ಬಗ್ಗೆ ಅಭಿಮಾನ ಉಕ್ಕಿ ಬರುತ್ತದೆ. ಸುಮಾರು 1954-55ರಲ್ಲಿ ತಾನು ಹದಿಹರೆಯದ ಬಾಲಕನಾಗಿದ್ದಾಗ ತನ್ನ ಸಂಬಂಧಿಕರ ಹವ್ಯಕ ಬ್ರಾಹ್ಮಣ ವಿಧವೆಯೊಬ್ಬಳಿಗೆ ಕೇಶ ಮುಂಡನ ಮಾಡುವುದನ್ನು ತಾವು ಹುಡುಗರೆಲ್ಲ ಸೇರಿ ಗಲಾಟೆ ಮಾಡಿ ನಿಲ್ಲಿಸಿದ ಪ್ರಸಂಗವನ್ನು ಈಗಲೂ ನನ್ನ ತಂದೆ ಜ್ಞಾಪಿಸಿಕೊಳ್ಳುತ್ತಾರೆ. ಪಕ್ಕದ ಹಳ್ಳಿಯ ದೂರದ ಸಂಬಂಧಿಯೊಬ್ಬನು ಕಾಶಿಯಾತ್ರೆಗೆಂದು ಹೊರಟು, ಮನೆಯಲ್ಲಿ ಮಡಿಯಾದ ಕೆಂಪು ಸೀರೆಯನ್ನುಟ್ಟು, ಬೋಳುತಲೆಯ ಮೇಲೆ ಸೆರಗು ಹೊದ್ದ ವಯಸ್ಸಾದ ತಾಯಿಯನ್ನು ತೀರ್ಥಯಾತ್ರೆ ಮಾಡಿಸುತ್ತೇನೆಂದು ನಂಬಿಸಿ ಕರೆದುಕೊಂಡು ಹೋಗಿ ಕಾಶಿಯಲ್ಲಿ ಬಿಟ್ಟುಬಂದ ಹೃದಯವಿದ್ರಾವಕ ಘಟನೆಯನ್ನು ನನ್ನ ತಂದೆ ನಮಗೆ ಹೇಳಿದಾಗ, ಸಂಕಟ, ಅಸಹನೀಯ ವೇದನೆಯಿಂದ ತಲ್ಲಣಿಸಿದ್ದೆ.

ಎಳೆಯ ವಯಸ್ಸಿನ ಬ್ರಾಹ್ಮಣ ವಿಧವೆಯರ ಪಾಡಂತೂ ಹೇಳತೀರದು. ಅಪಶಕುನದ ಅನಿಷ್ಠಗಳೆಂದೇ ಅವಹೇಳನಕಾರಿ ಬೈಗಳನ್ನು ಸಹಿಸಿಕೊಳ್ಳುತ್ತಾ, ಯಾವ ಮಂಗಲ ಕಾರ್ಯದಲ್ಲೂ ಪಾಲ್ಗೊಳ್ಳದೇ, ನಸುಕಿನಿಂದ ರಾತ್ರಿಯವರೆಗೆ ದುಡಿದರೂ, ಪುಷ್ಕಳವಾಗಿ ಊಟ ಮಾಡುವಂತಿಲ್ಲ. ದಿನವೂ ಒಪ್ಪತ್ತು, ವಾರಕ್ಕೊಮ್ಮೆ ಉಪವಾಸ, ಕೂದಲು ತಲೆಯ ಮೇಲೆ ಸ್ವಲ್ಪ ಚಿಗುರಲಾರಂಭಿಸಿದೊಡನೆಯೇ ನಾಪಿತನಿಗೆ ಹೇಳಿ ಕಳುಹಿಸಿಯಾಗುತ್ತಿತ್ತು. ಅದು ಮತ್ತೊಂದು ಬಗೆಯ ಯಾತನೆ – ಹೀಗೆ ಒಂದೇ? ಎರಡೇ? ವಿಧವೆಯರನ್ನು ಕಾಶಿಯಲ್ಲಿ ಬಿಟ್ಟು ಬರುವ, ದಿಕ್ಕು ದೆಸೆಯಿಲ್ಲದೆ ಕಂಗೆಟ್ಟು ಬಳಲಿದ ಈ ವಿಧವೆಯರು ನಿರ್ಗತಿಕರಾಗಿ, ದೇಹವನ್ನು ಮಾರಿಕೊಂಡು ಬದುಕುವ, ಕಟು ವಾಸ್ತವವನ್ನು ಬಿಂಬಿಸುವ ದೀಪಾ ಮೆಹ್ತಾರವರ ‘ವಾಟರ್’ ಚಿತ್ರೀಕರಣದ ಸಮಯದಲ್ಲಿ, 2000 ಇಸವಿಯ ಕಾಲಘಟ್ಟದಲ್ಲಿಯೂ ಕೂಡ ಹಿಂದೂ ರಾಷ್ಟ್ರೀಯತಾವಾದಿಗಳಿಂದ ಎಷ್ಟು ಬೆದರಿಕೆಗಳು ಬಂದವೆಂದರೆ , ಚಿತ್ರೀಕರಣವನ್ನೇ ಸ್ಥಗಿತಗೊಳಿಸಿ ದೀಪಾರವರು ಚಿತ್ರದ ತಂಡವನ್ನು ಶ್ರೀಲಂಕಾಗೆ ಸ್ಥಳಾಂತರಗೊಳಿಸಬೇಕಾಯಿತು. ಈ ಚಲನಚಿತ್ರ ನ್ಯೂಯಾರ್ಕ್​ನಲ್ಲಿ ಮೊದಲು ಪ್ರದರ್ಶನಗೊಂಡಿತು.

ಯಾನ – 1 : Vaishaliyaana : ವೈಶಾಲಿಯಾನ : ಮೂರನೇ ಅಲೆಯ ಹೊತ್ತಿನಲ್ಲಿ ನೆನಪಾಗುತ್ತಿರುವ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳು

Vaishaliyaana column Dr KS Vaishali discussed Hindu Nationalists agenda and their effects on Indian woman

ಎಂ. ಕೆ. ಇಂದಿರಾ ಮತ್ತು ಲತಾಮಣಿಯವರ ಕೃತಿಗಳು

ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಸಹಗಮನದ ಪ್ರಕರಣಗಳ ಬಗ್ಗೆ ಇತಿಹಾಸಜ್ಞೆ ಲತಾಮಣಿಯವರು ತಮ್ಮ Contentious Traditions ನಲ್ಲಿ ನೀಡುವ ಅಂಕಿ – ಅಂಶಗಳು ಆಘಾತಕಾರಿಯಾಗಿವೆ. ಸಹಗಮನವನ್ನು ನಿಷೇಧಿಸಿ ಬ್ರಿಟಿಷರು 1829 ರಲ್ಲಿ ಅದನ್ನು ಅಧಿಕೃತವಾಗಿ ಅಪರಾಧವೆಂದು ಘೋಷಿಸಿದಾಗ, ಕೇವಲ ಕಲ್ಕತ್ತಾ ನಗರದಲ್ಲಿಯೇ , ಮೇಲ್ಜಾತಿಯ ಹಿಂದೂ ಪರಿವಾರಗಳಲ್ಲಿ ಸುಮಾರು 8134ಕ್ಕೂ ಹೆಚ್ಚು ಸಹಗಮನದ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದರ ಬಗ್ಗೆಯೂ ನಾವು ಯೋಚಿಸಬೇಕು. ಮಹಿಳಾ ಸಬಲೀಕರಣ, ವಿಮೋಚನೆಯ ಕನಸುಗಳು ಸಾಕಾರಗೊಳ್ಳದಿದ್ದರೆ, ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ, ದೇಶದ ಸ್ವಾತಂತ್ರ್ಯದ ಬಗ್ಗೆ, ಮತಾಂತರದ ನಿಷೇಧದ ಬಗ್ಗೆ ನಾವು ಆಡುವ ಆದರ್ಶದ ಮಾತುಗಳೆಲ್ಲವೂ ಟೊಳ್ಳೆಂದು ಸಾಬೀತಾಗುವುದಿಲ್ಲವೇ?

(ಮುಂದಿನ ಯಾನ : 19.2.2022)

ಹಿಂದಿನ ಯಾನ : Pandita Ramabai : Vaishaliyaana : ಅತ್ತ ಪುರೋಹಿತಶಾಹಿಗಳ ಇತ್ತ ಪಾದ್ರಿಗಳ ಅಡಿಯಾಳಾಗದ ರಮಾಬಾಯಿ ಇಂದಿಗೂ ಪ್ರಸ್ತುತ

Follow us on

Related Stories

Most Read Stories

Click on your DTH Provider to Add TV9 Kannada