Ukraine Crises: ವೈಶಾಲಿಯಾನ; ಭಾರತೀಯ ವಿದ್ಯಾರ್ಥಿಗಳ ಸಹಾಯದಲ್ಲಿ ತೊಡಗಿರುವ ಕನ್ನಡತಿ ಡಾ ಆರತಿ ಕೃಷ್ಣ

Ukraine Crises: ವೈಶಾಲಿಯಾನ; ಭಾರತೀಯ ವಿದ್ಯಾರ್ಥಿಗಳ ಸಹಾಯದಲ್ಲಿ ತೊಡಗಿರುವ ಕನ್ನಡತಿ ಡಾ ಆರತಿ ಕೃಷ್ಣ
ಸಮಾಜ ಸೇವಕಿ ಡಾ. ಆರತಿ ಕೃಷ್ಣ

Rescue : ಉಕ್ರೇನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳಲ್ಲಿ ಅನೇಕರು ಆರತಿಯವರ ಸಂಪರ್ಕದಲ್ಲಿದ್ದಾರೆ. ಕಳೆದ ನಾಲ್ಕೈದು ದಿನಗಳಲ್ಲಿ ರಾಯಭಾರಿ ಕಚೇರಿಗೆ ಇವರು ಸುಮಾರು ಐದುಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿವರಗಳನ್ನು ರವಾನಿಸಿದ್ದಾರೆ.

ಶ್ರೀದೇವಿ ಕಳಸದ | Shridevi Kalasad

|

Mar 05, 2022 | 2:46 PM

ವೈಶಾಲಿಯಾನ | Vaishaliyaana: ನಮ್ಮ ಇತಿಹಾಸದ ಪುಟಗಳಲ್ಲಿ ಅನೇಕ ಖಳನಾಯಕರು ಬಂದು ಹೋಗಿದ್ದಾರೆ. ತಮ್ಮ ರಾಜ್ಯದಾಹ, ರಕ್ತದಾಹಕ್ಕಾಗಿ ಕೋಟ್ಯಾನುಗಟ್ಟಲೆ ಮುಗ್ಧ ಜನರನ್ನು ನಿರ್ದಯವಾಗಿ ಬಲಿತೆಗೆದುಕೊಂಡ ಅದೆಷ್ಟು ಮುಖಂಡರು, ರಾಜರು, ಚಕ್ರವರ್ತಿಗಳು, ಅಧ್ಯಕ್ಷರು, ದಂಡನಾಯಕರು, ಪ್ರಧಾನಮಂತ್ರಿಗಳ ಉದಾಹರಣೆಗಳಿಲ್ಲ? ಅವರ ಪಟ್ಟಿಯನ್ನು ತಯಾರಿಸಲು ಹೊರಟರೆ ಸಾವಿರಾರು ಪುಟಗಳನ್ನೂ ದಾಟಿ, ಅದೊಂದು ದುಸ್ಸಾಹಸವೇ ಆಗಿ ಪರಿಣಮಿಸಬಹುದು. ಆದರೆ ನಾವು ಗಮನಿಸಲೇಬೇಕಾದ ಮತ್ತೊಂದು ಮಹತ್ವದ ಸಂಗತಿಯಿದೆ. ಯುದ್ಧ ಪಿಪಾಸಿಗಳಲ್ಲಿ ಪುರುಷರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಎಲ್ಲೆಡೆಯೂ ಮಹಿಳೆಯರು ಯುದ್ಧ, ಹಿಂಸೆಗಳ ವಿರುದ್ಧ, ಕ್ರಿಯಾತ್ಮಕವಾಗಿ ಪ್ರತಿಭಟಿಸಿ, ಶಾಂತಿ ಸ್ಥಾಪನೆಗಾಗಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಮಹಿಳೆಯರ ‘ಸಂರಕ್ಷಣಾತ್ಮಕ ಪ್ರೀತಿ’, ಮಾತೃಸ್ಪರ್ಶದ ಮಾನವೀಯತೆಯ ಬಗ್ಗೆ ಸ್ತ್ರೀವಾದಿ ನೆಲೆಗಳಲ್ಲಿ ಸಾಕಷ್ಟು ಚಚೆಗಳಾಗಿವೆ. ಡಾ. ಕೆ. ಎಸ್. ವೈಶಾಲಿ (Dr. K. S. Vaishali)

*

(ಯಾನ 5, ಭಾಗ 3)

ಪ್ರಸ್ತುತ ಉಕ್ರೇನ್ ದೇಶದಲ್ಲಿ ಅನೇಕ ಅಮಾಯಕ ನಾಗರೀಕರು ರಷ್ಯನ್ ಸೈನಿಕರ ಬಾಂಬ್ ದಾಳಿಗೆ ಬಲಿಯಾಗುತ್ತಿದ್ದಾರೆ. ಹದಿನೈದು ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಿಯೆವ್, ಖಾರ್ಕಿವ್ ನಗರಗಳಲ್ಲಿ, ನೆಲಮಾಳಿಗೆಗಳಲ್ಲಿ ಅವಿತುಕೊಂಡು, ಆಹಾರ-ನೀರಿನ ಅಭಾವದಲ್ಲಿ, ಕಿವಿಗಡಚಿಕ್ಕುವ ಭಯಾನಕ ಬಾಂಬುಗಳ ಮೊರೆತ, ಸೈನ್ಯದ ಟ್ಯಾಂಕರ್‌ಗಳ ಸದ್ದಿನಲ್ಲಿ ತಮ್ಮ ಜೀವವನ್ನು ಕೈಯಲ್ಲಿಟ್ಟಕೊಂಡು, ಉಕ್ರೇನಿನ ಗಡಿರಾಷ್ಟ್ರಗಳಾದಿ ಹಂಗೆರಿ, ಸ್ಲೊವಾಕಿಯಾ, ರೊಮೇನಿಯಾ, ಪೋಲೆಂಡುಗಳನ್ನು ಸೇರಿಕೊಂಡು, ಮರಳಿ ತಮ್ಮ ತಾಯ್ನಾಡಿಗೆ ವಾಪಾಸಾಗಲು ಸಹಾಯ ಹಸ್ತಕ್ಕಾಗಿ ಪರಿಪರಿಯಾಗಿ ಮೊರೆಯಿಡುತ್ತಿದ್ದಾರೆ.

ಈ ವಾರ್ತೆಗಳನ್ನು ಭಾರವಾದ ಹೃದಯದಿಂದ ಓದುತ್ತಿದ್ದ ನನ್ನನ್ನು ಸೆಳೆದದ್ದು ಯುದ್ಧ ಪೀಡಿತ ಉಕ್ರೇನಿನಿಂದ ನಮ್ಮ ಭಾರತದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಅಹೋರಾತ್ರಿ ಸ್ಪಂದಿಸುತ್ತಿರುವ, ಅಂತಃಕರಣದಿಂದ ಸ್ವಯಂಪ್ರೇರಿತರಾಗಿ, ಅವರ ನೋವು, ಆಕ್ರಂದನಗಳನ್ನಾಲಿಸಿ, ದೂತಾವಾಸ ಕಚೇರಿಗಳನ್ನು ತಾವೇ ಖದ್ದಾಗಿ ದೂರವಾಣಿಯ ಮೂಲಕ ಸಂಪರ್ಕಿಸಿ, ಅವರ ಪ್ರಯಾಣವನ್ನು ಸುಲಲಿತಗೊಳಿಸುವುದಕ್ಕಾಗಿ ಪಣ ತೊಟ್ಟಿರುವ ಒಬ್ಬ ಸಂವೇದನಾಶೀಲ ಕನ್ನಡತಿಯ ಪಾತ್ರದ ಬಗ್ಗೆ. ಅವರೇ ಕರ್ನಾಟಕದ ಅನಿವಾಸಿ ಭಾರತೀಯರ ಸಂಘದ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ.

ಭಾಗ 1 : Ukraine Invasion: ವೈಶಾಲಿಯಾನ; ಮಹಾಕೃತಿಗಳು ಕಟ್ಟಿಕೊಟ್ಟ ಮೌಲ್ಯಗಳನ್ನು ವಿಸ್ಮೃತಿಗೊಳಗಾಗಿ ನಿರ್ಲಕ್ಷಿಸುತ್ತಿದ್ದೇವೆ

ಪ್ರಸ್ತುತ ಆರತಿಯವರು ಮಾಜಿ ಉಪಾಧ್ಯಕ್ಷೆಯಾಗಿದ್ದರೂ, ಉಕ್ರೇನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳಲ್ಲಿ ಅನೇಕರು ಆಕೆಯ ಸಂಪರ್ಕದಲ್ಲಿದ್ದಾರೆ. ಮೊಬೈಲಿನಲ್ಲಿ ಜೀವಭಯದಿಂದ ತತ್ತರಿಸುತ್ತಿರುವ ವಿದ್ಯಾರ್ಥಿಗಳು, ಆರತಿಯವರಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬೇಕೆಂದು ವಿನಂತಿಸುವ ವಾಕ್‌ಸಂದೇಶಗಳನ್ನು ಆಲಿಸಿ ನಾನು ಹೌಹಾರಿದೆ. ಕಳೆದ ನಾಲ್ಕೈದು ದಿನಗಳಲ್ಲಿ ರಾಯಭಾರಿ ಕಚೇರಿಗೆ ಆರತಿ ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ವಿವರಗಳನ್ನು ರವಾನಿಸಿದ್ದಾರೆ.

ಹಗಲಿರುಳೆನ್ನದೆ ಅವರ ನೋವಿಗೆ ಸ್ಪಂದಿಸುತ್ತ, ತ್ವರಿತವಾಗಿ ಅವರ ಸಹಾಯ ಒದಗಿಸಲು ಕಾರ್ಯೋನ್ಮುಖರಾಗಿರುವ ಡಾ. ಆರತಿ ಈ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ, ಕಳಕಳಿಯಿಂದ ಮಾಡುತ್ತಿದ್ದಾರೆ. ಕೇರಳದಿಂದ, ಪಂಜಾಬಿನಿಂದ, ಕರ್ನಾಟಕದ ಮೂಲೆ- ಮೂಲೆಗಳಿಂದ, ಉತ್ತರ ಪ್ರದೇಶದಿಂದ, ಉಕ್ರೇನ್‌ನಲ್ಲಿ ಆಪತ್ತಿನಲ್ಲಿರುವ ವಿದ್ಯಾರ್ಥಿಗಳ ಕುಟುಂಬದವರು ಸತತವಾಗಿ ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 2 : Literature: ವೈಶಾಲಿಯಾನ; ಸಾಹಿತ್ಯಕ್ಕೆ ಮನಸ್ಸನ್ನು ಪರಿವರ್ತಿಸುವಂಥ ಅಪರಿಮಿತ ಶಕ್ತಿಯಿದೆ

Follow us on

Related Stories

Most Read Stories

Click on your DTH Provider to Add TV9 Kannada