Poetry: ಅವಿತಕವಿತೆ; ನನ್ನ ಪುಟ್ಟತಂಗಿಯ ಪುಟ್ಟಪುಟ್ಟ ಪಾದಗಳನ್ನೂ ಹೊತ್ತೊಯ್ದರು ಅವರು

Translation : ‘ಅನುವಾದವು ಬರಿದೇ ಕನ್ನಡಿಗಳು, ಭಾರತೀಯಳು ಎನ್ನುವ ಪರಿಧಿಯ ಆಚೆ ನಿಂತು ಅನ್ಯಭಾಷಿಕ, ಅನ್ಯಸಾಂಸ್ಕೃತಿಕ ಸನ್ನಿವೇಶದ ಎದುರಿನಲ್ಲಿ ನಿರಪೇಕ್ಷ ಸ್ಥಿತಿಯಿಂದ ನನ್ನನ್ನು ನಾನು ನೋಡುವಂತೆ ಒತ್ತಾಯಿಸುವ ಕೆಲಸ.’ ಜ. ನಾ. ತೇಜಶ್ರೀ

Poetry: ಅವಿತಕವಿತೆ; ನನ್ನ ಪುಟ್ಟತಂಗಿಯ ಪುಟ್ಟಪುಟ್ಟ ಪಾದಗಳನ್ನೂ ಹೊತ್ತೊಯ್ದರು ಅವರು
ಕವಿ ಜ. ನಾ. ತೇಜಶ್ರೀ ಮತ್ತು ಪಾಕಿಸ್ತಾನಿ ಕವಿ ಝೆಹ್ರಾ ನಿಗಾಹ್
Follow us
ಶ್ರೀದೇವಿ ಕಳಸದ
|

Updated on: Mar 06, 2022 | 8:31 AM

ಅವಿತಕವಿತೆ | AvithaKavithe : ನಾನು ನನ್ನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಭಾಷಿಕ ಸಂದರ್ಭದ ಫಲವಾದ ಸಂವೇದನೆಯ ಮೂಲಕವೇ ಮತ್ತೊಂದು ಬರಹ, ಕೃತಿಯನ್ನು ಓದುವುದು. ಆದರೆ ಅನುವಾದವು ಬರಿದೇ ಕನ್ನಡಿಗಳು, ಭಾರತೀಯಳು ಎನ್ನುವ ಪರಿಧಿಯ ಆಚೆ ನಿಂತು ಅನ್ಯಭಾಷಿಕ, ಅನ್ಯಸಾಂಸ್ಕೃತಿಕ ಸನ್ನಿವೇಶದ ಎದುರಿನಲ್ಲಿ ನಿರಪೇಕ್ಷ ಸ್ಥಿತಿಯಿಂದ ನನ್ನನ್ನು ನಾನು ನೋಡುವಂತೆ ಒತ್ತಾಯಿಸುವ ಕೆಲಸ. ಭಾಷೆಯ ಅಂತರದಿಂದ ಆರಂಭವಾಗುವ ಈ ಪ್ರಕ್ರಿಯೆಯು ಕ್ರಮೇಣ ಭಾವ, ವಿಚಾರ, ನಾಗರಿಕತೆ, ಸಂಸ್ಕೃತಿ ಮತ್ತು ಪ್ರಜ್ಞೆಯ ವಲಯಗಳಿಗೆ ವಿಸ್ತರಿಸಿಕೊಳ್ಳುವುದನ್ನು ಗಮನಿಸುವುದು ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಕುತೂಹಲಕರ. ಒಂದರ ಮುಖಾಂತರ ಮತ್ತೊಂದು ತೆರೆದುಕೊಳ್ಳುವ, ಒಂದಕ್ಕೆ ಮತ್ತೊಂದು ಅನುವಾಗುವ ಕ್ರಿಯೆ ಇದು. ಮೂಲದ ಸೃಷ್ಟಿಯನ್ನು ‘ಅನುಸರಿಸಿ’ ನಡೆಯುವ ಈ ಪ್ರಕ್ರಿಯೆಯು ‘ಅನುಸೃಷ್ಟಿ’ ಆಗಿದ್ದರೂ, ಮೂಲ ಪಠ್ಯವನ್ನು ‘ಅನುಸರಿಸಿ’ ಹೇಳುವುದರ ಜೊತೆಗೆ ಒಂದು ‘ಪಠ್ಯ’ದ ಒಳಗಿರುವ ಹಲವು ಪದರಗಳ ಅರ್ಥವಿನ್ಯಾಸಗಳನ್ನು ಹುಡುಕುವುದಕ್ಕೆ ಭಾಷಾಂತರಕಾರ ‘ಅನು’ವಾಗುವ ಕ್ರಿಯೆಯೂ ಹೌದು. ಎಂದರೆ, ಭಾಷಾಂತರಕಾರನು ಮೂಲದ ನೆರವಿನಿಂದ ಹೊಸದೊಂದು ‘ಪಠ್ಯ’ವನ್ನು ನಿರ್ಮಿಸುತ್ತಿರುತ್ತಾನೆ; ಅದು ಮೂಲದ ಸಾಧ್ಯತೆಗಳನ್ನು ವಿಸ್ತರಿಸುತ್ತದೆ, ಕೆಲವೊಮ್ಮೆ ಬದಲಿಸುತ್ತದೆ. ಜ. ನಾ. ತೇಜಶ್ರೀ, ಕವಿ, ಅನುವಾದಕಿ (Ja. Na. Tejashree)

*

ಝೆಹ್ರಾ ನಿಗಾಹ್ (Zehra Nigah) : ಪಾಕಿಸ್ತಾನದ ಉರ್ದು ಕವಿ, ಸಂಭಾಷಣೆಗಾರ್ತಿ ಮತ್ತು ಕತೆಗಾರ್ತಿ. 1950ರ ದಶಕದಲ್ಲಿ ಬಹುಪಾಲು ಪುರುಷ ಬರಹಾರರಿಂದಲೇ ತುಂಬಿದ್ದ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಕಾವ್ಯಶಕ್ತಿಯಿಂದ ಗುರುತಿಸಿಕೊಂಡ ಮುಖ್ಯ ಲೇಖಕಿ. ಹಲವು ಗೌರವ ಪುರಸ್ಕಾರಕ್ಕೆ ಪಾತ್ರರಾಗಿರುವ ಝೆಹ್ರಾ ಹುಟ್ಟಿದ್ದು, ಬಾಲ್ಯ ಕಳೆದದ್ದು ಹೈದರಾಬಾದಿನಲ್ಲಿ. ಇವರು ಟಿವಿಗಳಿಗಾಗಿ ಸಾಕಷ್ಟು ಧಾರಾವಾಹಿ ನಾಟಕಗಳನ್ನು ಬರೆದಿದ್ದಾರೆ. ಅವರ ಒಂದು ಕವಿತೆಯನ್ನು ತೇಜಶ್ರೀ ಅನುವಾದಿಸಿದ್ದಾರೆ.

*

ಗುಲ್‌ಬಾದಶಾ ಕಥೆ

ನನ್ನ ಹೆಸರು ಗುಲ್ ಬಾದಶಾ: ವಯಸ್ಸು ಹದಿಮೂರು ವರ್ಷ, ನನ್ನ ವಯಸ್ಸಿನಂತೆಯೇ ನನ್ನ ಕಥೆಯೂ ಬಿಡಿಬಿಡಿಯಾಗಿದೆ, ಪುಟ್ಟದಾಗಿದೆ.

ಹೆಸರಿಲ್ಲದ, ತನ್ನದೇ ಅಸ್ತಿತ್ವವಿಲ್ಲದ ನನ್ನಮ್ಮನದು ಔಷಧಿಯಿಲ್ಲದ, ಸದ್ದಿಲ್ಲದ ಸಾವು. ಬುರ್ಖಾ ಸಮೇತ ಸಂಸ್ಕಾರ ಮಾಡಿದ ನನ್ನಪ್ಪ ಅವಳನ್ನು.

ಮುಂಕಿರ್ ಅಥವಾ ನಕೀರ್ (1) ನೋಡಿಬಿಟ್ಟಾರು ಅವಳ ಮುಖವನ್ನು ಎಂಬ ಭಯ ಅಪ್ಪನಿಗೆ, ಬದುಕಿದ್ದಾಗಲೂ ಅವಳು ಹೀಗೇ ಇದ್ದವಳು ತನ್ನ ಗೋರಿಯೊಳಗೇ.

ನನ್ನಪ್ಪನ ಹೆಸರು ಜರತಾಜ್ ಗುಲ್ ಅವನಿಗೆ ಮೂವತ್ತೆರಡು ವರ್ಷ ವಯಸ್ಸು. ಹುತಾತ್ಮನಾಗಲು ಬಯಸಿದ್ದ ಮುಜಾಹಿದ್ ಅವನು, ಸತ್ಯದ ಹಾದಿಯ ಪ್ರಯಾಣಿಕ. ನನ್ನ ಚಿಕ್ಕಪ್ಪನ ಕೈಯ್ಯಲ್ಲಿದ್ದ ಬಟ್ಟಲಿನಿಂದ ಬಲಿಯನ್ನು ಎತ್ತಿಕುಡಿದ, ಆ ಚಿಕ್ಕಪ್ಪ ಉತ್ತರ ಅಫ್ಘನ್ ಮುಜಾಹಿದ್ದನಾಗಿದ್ದವ ದಿನಕ್ಕೆ ಐದು ಬಾರಿ ನಮಾಝ್ ಮಾಡುತ್ತಿದ್ದವ.

ಈ ಹುತಾತ್ಮರ ವಿಷಯವಿದೆಯಲ್ಲ… ಬಲು ಸೂಕ್ಷ್ಮದ್ದು, ಸಂಕೀರ್ಣದ್ದು ಹಾಗಾಗಿ ಇಲ್ಲಿಯೇ, ಈಗಲೇ ಆ ಮಾತನ್ನು ಕೈಬಿಡುವುದು ಒಳ್ಳೆಯದು. ಆ ಮಾತು ಏನೇ ಇರಲಿ, ಈಗ ಅಪ್ಪ ಸ್ವರ್ಗದಲ್ಲಿದ್ದಾನೆ. ಅವನ ಕೈಯಲ್ಲಿ ಪಾವಿತ್ರ್ಯದ ಬಟ್ಟಲಿದೆ ತೋಳುಗಳಲ್ಲಿ ಸ್ವರ್ಗದ ಅಪ್ಸರೆಯರು. (2) ಆದರೆ ಇಲ್ಲಿ ನನ್ನ ಹಣೆಬರಹದಲ್ಲಿ ಬಾಂಬುಗಳು, ಸ್ಪೋಟಗಳು, ಹೊಗೆ, ಚೂರುಚೂರಾಗುತ್ತಿರುವ ಈ ಭೂಮಿ ಮತ್ತು ಕರಗುತ್ತಿರುವ ಆ ಆಕಾಶವಿದೆ. ಸಾವಿನ ನಂತರವೂ, ನನ್ನಪ್ಪ ಜೀವಂತವಿದ್ದಾನೆ ಆದರೆ ನಾನು ಬದುಕಿಯೂ ಜೀವಂತವಾಗಿಲ್ಲ.

ನಿನ್ನೆ ಸಂಜೆ, ಹಿಂದಿರುಗುವಾಗ ಮನೆಗೆ ಶತ್ರು ಕಡೆಯವನು ಮಳೆಗರೆದ ನನ್ನ ಮೇಲೆ ಒಂದಿಷ್ಟು ಹಳದಿ ಬ್ಯಾಗುಗಳ, ಉರುಟು ಬ್ರೆಡ್ ತುಂಡುಗಳೂ ಇದ್ದವು ಅದರಲ್ಲಿ ಸ್ವಲ್ಪ ಬೆಣ್ಣೆಯಿತ್ತು ಬಾಟಲ್‌ನಲ್ಲಿ ಸಿಹಿನೀರು, ಜೊತೆಗೆ ಒಂದು ಟಿನ್‌ನಲ್ಲಿ ಸಂರಕ್ಷಿಸಿದ ಆಹಾರ.

ಇದಕ್ಕೆ ಬದಲಾಗಿ, ವಾಪಸ್ ಹೋಗುವಾಗ ಅವರು ಕೆಲಸದಲ್ಲಿ ತಲ್ಲೀನನಾಗಿದ್ದ ನನ್ನ ತಮ್ಮನ ದುಡಿಯುವ ಕೈಯನ್ನು ಕೊಂಡೊಯ್ದರು, ಕೆಟ್ಟದೃಷ್ಟಿ ತಗುಲದಿರಲೆಂದು ಕಪ್ಪುದಾರ ಕಟ್ಟಿದ್ದೆ ಅವನ ಆ ತೋಳುಗಳ ಮೇಲೆ, ನನ್ನ ಪುಟ್ಟತಂಗಿಯ ಪುಟ್ಟಪುಟ್ಟ ಪಾದಗಳನ್ನೂ ಹೊತ್ತೊಯ್ದರು ಅವರು, ಆ ಪಾದಗಳಲ್ಲಿ ಮೆಹೆಂದಿಯ ಕೆಂಪು ನಿಗಿನಿಗಿ ಹೊಳೆಯುತ್ತಿತ್ತು.

ಜನರು ಹೇಳುತ್ತಾರೆ ಈ ಯುದ್ಧವು ಶಾಂತಿಗೆಂದು. ಇಂಥಾ ಶಾಂತಿ ಯುದ್ಧದಲ್ಲಿ ಮೇಲೆರಗುವ ಶತ್ರು ಕೈಯ್ಯಿಲ್ಲದ, ಕಾಲಿಲ್ಲದ ಮಕ್ಕಳನ್ನು ಬಿಟ್ಟು ಹೋಗುತ್ತಾನೆ, ಆದರೆ ಅವರ ಖಾಲಿಹೊಟ್ಟೆಗೆ ಏನನ್ನಾದರೂ ಕೊಟ್ಟೇ ಕೊಡುತ್ತಾನೆ. ಮಾನವೀಯತೆ ಎಲ್ಲರ ಪಾಲಿಗೂ ಸತ್ತಿಲ್ಲ ಅಲ್ಲವೆ?

ನಿಂತಿದ್ದೇನೆ ನಾನು ಒಬ್ಬಂಟಿಯಾಗಿ ಸುಡುವ ಬೆಟ್ಟಗಳ ನಡುವೆ ಪೂರ್ವಾರ್ಜಿತವಾಗಿ ನನಗೆ ಬಂದ ಗನ್ನು ಹಿಡಿದು, ದಯಾಮಯವಾದ ನಿರುಪದ್ರವಿಯಾದ ನಿಸರ್ಗವನ್ನು ನೋಡುತ್ತ ದಯಾಮಯವಾದ ನಿರುಪದ್ರವಿಯಾದ ನಿಸರ್ಗವನ್ನು ನೋಡುತ್ತಾ.

ನನ್ನ ಹೆಸರು ಗುಲ್ ಬಾದಶಾ ವಯಸ್ಸು ಹದಿಮೂರು.

*

1. ಮುಂಕಿರ್ ಮತ್ತು ನಕೀರ್: ಇವರು ಸತ್ತವರೊಂದಿಗೆ ಸಮಾಧಿಗೆ ಹೋಗುವ ದೇವದೂತರು, ಗಂಡಸರು. 2. ಇಸ್ಲಾಮಿಕ್ ಸಂಪ್ರದಾಯದ ಅಪ್ಸರೆಯರು 3. ಮುಜಾಹಿದ್: ಒಂದು ನಂಬಿಕೆ/ಮುಸಲ್ಮಾನ ಸಮುದಾಯಕ್ಕಾಗಿ ಹೋರಾಡುವವ

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Poetry: ಅವಿತಕವಿತೆ; ಕವಿತೆ ನನಗೆ ಬಿಕ್ಕುವ ಆಗಸದಿ ಬೆಳಕ ಹೊತ್ತು ಬರುವ ಸೂರ್ಯ

ತೇಜಶ್ರೀಯವರ ಈ ಬರಹವನ್ನೂ ಓದಿ : Art and Entertainment : ಬೆದೆಯೊಳು ಕುರುಡಪ್ಪ ಪ್ರಕೃತಿ ಒಲವೊಳು ಕಣ್ತೆರೆವಳು

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್