ತುಂಗಭದ್ರಾ ನದಿ ನೀರು ಕುಡಿಯಲು ಯೋಗ್ಯವಲ್ಲ: ಸ್ಫೋಟಕ ವರದಿ ಬಹಿರಂಗ
ಸಕ್ಕರೆ ಕಾರ್ಖಾನೆಯಿಂದ ಬಿಡುಗಡೆಯಾದ ರಾಸಾಯನಿಕಗಳು ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ನದಿ ನೀರು ಕುಡಿದ ಜನರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅಧಿಕಾರಿಗಳು ನೀರಿನ ಪರೀಕ್ಷೆ ನಡೆಸಿದ್ದು, ಸದ್ಯ ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನು ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿಯಿಂದ ತಿಳಿದುಬಂದಿದ್ದು, ಇದನ್ನು ಗದಗ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
ಗದಗ, (ಜನವರಿ 19): ತುಂಗಭದ್ರಾ ಆರು ಜಿಲ್ಲೆಯ ಜನರ ಪಾಲಿನ ಜೀವ ನದಿ. ಈಗ ಆ ಜೀವನದಿ ತುಂಗಭದ್ರಾ ನೀರು ಫುಲ್ ಡೇಂಜರ್.. ಡೇಂಜರ್.. ಡೇಂಜರ್ ಆಗಿದೆ. ಹೀಗಂತ ನಾವು ಹೇಳುತ್ತಿಲ್ಲ. ಸರ್ಕಾರಿ ಇಲಾಖೆಗಳು ನೀಡಿರುವ ವರದಿಗಳು ಹೇಳುತ್ತಿವೆ. ಈ ನದಿ ನೀರು ಕುಡಿಯಲು ಯೋಗ್ಯನೇ ಇಲ್ಲ ಎಂದು ಎರಡು ವರದಿಗಳಲ್ಲಿ ಬಹಿರಂಗವಾಗಿದೆ. ಹೀಗಾಗಿ ನೀರು ಕುಡಿಯದಂತೆ ಜಿಲ್ಲಾಡಳಿತ ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ. ತುಂಗಭದ್ರೆಯ ಒಡಲು ಕಲುಷಿತ ಆಗಲು ಕಾರಣ ಅದೊಂದು ಸಕ್ಕರೆ ಕಾರ್ಖಾನೆ ಎನ್ನುವ ದಟ್ಟ ಅನುಮಾನ ರೈತರಲ್ಲಿ ಮೂಡಿದೆ. ಹೀಗಾಗಿ ಆ ಸಕ್ಕರೆ ಕಾರ್ಖನೆಯ ಹರಿದು ಹೋಗುವ ನೀರು ಕೂಡ ತಪಾಸಣೆಗೆ ಕಳಿಸಲಾಗಿದೆ. ಇನ್ನೂ ನದಿ ತೀರದ ಗ್ರಾಮಗಳ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಬೆಳ್ಳಗೆ ಹಾಲಿನಂತೆ ಹರಿಯುತ್ತಿದ್ದ ತುಂಗಭದ್ರೆ ಈಗ ಸಂಪೂರ್ಣ ಹಸಿರು ಬಣಕ್ಕೆ ತಿರುಗಿ ಹರಿಯುತ್ತಿದ್ದಾಳೆ. ಕಳೆದ 15 ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ ನದಿ ನೀರು ನೋಡಿ ನದಿ ತೀರದ ಜನರು ಕಂಗಾಲಾಗಿದ್ದಾರೆ. ಹೊಲ, ಗದ್ದೆಗಳು, ಕುಡಿಯವ ನೀರಿನ ಟ್ಯಾಂಕ್ ಗಳ ಪೈಪ್ ಗಳಲ್ಲೂ ಹಸಿರು ಬಣ್ಣದ ನೀರು ನೋಡಿ ಬೆಚ್ಚಿ ಹೋಗಿದ್ದಾರೆ. ಇಂಥ ನೀರು ನಾವೂ ಎಂದಿಗೂ ನೋಡಿಲ್ಲ. ಇದೆಂಥಾ ನೀರು ಅಂತಿದ್ದಾರೆ. ಇದೇ ನೀರು ಹತ್ತಾರು ಹಳ್ಳಿಗೆ ಪೂರೈಕೆ ಆಗಿದೆ. ಈ ನೀರು ಕುಡಿದ ಜನರು ಹೊಟ್ಟೆ ನೋಡು, ವಾಂತಿ, ಜ್ವರದಿಂದ ಬಳಲುತ್ತಿದ್ದಾರೆ.
ಇದನ್ನೂ ಓದಿ: ಬದಲಾದ ತುಂಗಭದ್ರೆ ನೀರಿನ ಬಣ್ಣ: ಜೀವನಾಡಿ ನದಿಗೆ ಏನಾಯ್ತು?
ಹಸಿರು ಬಣ್ಣದ ನದಿ ಅಂತ ಡಿಸೆಂಬರ್ 17ರಂದು ಟಿವಿ9ನಲ್ಲಿ ವರದಿ ಪ್ರಸಾರ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ನದಿ ತೀರದ ಗ್ರಾಮಗಳು ಹಾಗೂ ನದಿಗೆ ಭೇಟಿ ನೀಡಿ ನದಿ ನೀರು ಪರೀಕ್ಷೆಗೆ ಕಳುಹಿಸಿಕೊಟ್ಟಿತ್ತು. ಆದ್ರೆ, ಈಗ ಎರಡು ಇಲಾಖೆಗಳು ವರದಿ ನೀಡಿದ್ದು, ತುಂಗಭದ್ರಾ ನದಿ ನೀರು ಕುಡಿಯಲು ಯೋಗ್ಯವೇ ಇಲ್ಲ ಎಂದು ವರದಿ ನೀಡಿವೆ. ಇದು ನದಿ ತೀರದ ಜನರನ್ನು ಬೆಚ್ಚಿಬಿಳಿಸಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಗಂಗಾಪೂರ, ಹೆಸರೂರು ಗ್ರಾಮದ ಬಳಿ ತುಂಗಭದ್ರೆಯ ಬಣ್ಣ ಹಸಿರಾಗಿದೆ. ನದಿ ಏಕಾಏಕಿ ಹಸಿರಾಗಲೂ ಕಾರಣ ಏನು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ತುಂಗಭದ್ರಾ ನದಿ ನೀರಿನ ವರದಿ ಭಹಿರಂಗವಾಗಿದೆ. ಗದಗ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾಥಮಿಕ ವರದಿಯಲ್ಲಿ ಕುಡಿಯಲು ಈ ನೀರು ಯೋಗ್ಯ ಇಲ್ಲ ಅಂತ ವರದಿ ಬಂದಿದೆ ಎಂದು ಗದಗ ಎಸಿ ಗಂಗಪ್ಪ ಎಂ ಟಿವಿ9ಗೆ ಹೇಳಿದ್ದಾರೆ.
ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣು
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದಿಂದ ಕಳೆಭಾಗದ ನದಿಯಲ್ಲಿ ಮಾತ್ರ ಈ ನದಿ ಹಸಿರು ಬಣ್ಣಕ್ಕೆ ತಿರುಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಗದಗ, ವಿಜಯನಗರ, ಕೊಪ್ಪಳ ಜಿಲ್ಲೆಯ ಹಲವು ಗ್ರಾಮಗಳಿಗೆ ಈ ಹಸಿರು ನದಿಯ ಎಫೆಕ್ಟ್ ಆಗಲಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಗಂಗಾಪುರ, ಕೊರ್ಲಹಳ್ಳಿ, ಸೀರನಳ್ಳಿ, ಹೆಸರೂರು, ಕಕ್ಕೂರ ಗ್ರಾಮದ ಬಳಿಯ ನೀರು ಸಂಪೂರ್ಣ ಕಲುಷಿತವಾಗಿದೆ. ಈಗಾಗಲೇ ನೀರು ಕುಡಿದ ಜನ್ರು ಹೊಟ್ಟೆನೋವು, ಜ್ವರ, ವಾಂತಿಯಿಂದ ಬಳಲಿದ್ದಾರೆ. ಹೀಗಾಗಿ ಈ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣು ಇಟ್ಟಿದ್ದು, ಆರೋಗ್ಯ ಸಮಸ್ಯೆ ಇರೋರಿಗೆ ಚಿಕಿತ್ಸೆ ನೀಡಿದ್ದಾರೆ.
ನೀರು ಸೇವನೆ ಮಾಡದಂತೆ ಗ್ರಾಮಗಳಲ್ಲಿ ಡಂಗೂರ
ಇನ್ನೂ ಎರಡು ಇಲಾಖೆಗಳ ವರದಿ ಬಳಿಕ ಜಿಲ್ಲಾಡಳಿತ ತುಂಗಭದ್ರಾ ನದಿಯಿಂದ ನೇರವಾಗಿ ಗ್ರಾಮಗಳಿಗೆ ನೀರು ಸರಬರಾಜು ಮಾಡದಂತೆ ಸೂಚನೆ ನೀಡಿದೆ. ಜನ ಹಾಗೂ ಜಾನುವಾರುಗಳಿಗೆ ನೀರು ಸೇವನೆ ಮಾಡದಂತೆ ನದಿ ವ್ಯಾಪ್ತಿಯ ಗ್ರಾಮಗಳಲ್ಲಿ ಡಂಗೂರ ಮೂಲಕ ಗ್ರಾಮಸ್ಥರಿಗೆ ಕಟ್ಟುನಿಟ್ಟಿನ ಫರ್ಮಾನು ಹೊರಡಿಸಿದೆ. ನದಿ ಸ್ಥಿತಿಗೆ ಗಂಗಾಪುರ ಗ್ರಾಮದ ಬಳಿಯ ಸಕ್ಕರೆ ಕಾರ್ಖಾನೆ ಕಾರಣ ಅನ್ನೋ ಅನುಮಾನ ಜಿಲ್ಲಾಡಳಿತಕ್ಕೆ ಮೂಡಿದೆ. ಹೀಗಾಗಿ ವಿಜಯನಗರ ಶುಗರ್ಸ್ ಕಂಪನಿ ಮೇಲೆ ಅನುಮಾನ ಇದೆ ಅಂತ ಎಸಿ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡ ಕೂಡ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿದೆ. ನದಿ ನೀರು ಪರಿಶೀಲನೆ ಮಾಡಿದೆ.ಹೀಗಾಗಿ ಸಕ್ಕರೆ ಕಾರ್ಖಾನೆ ತ್ಯಾಜ್ಯವನ್ನು ಅಧಿಕಾರಿಗಳು ತಪಾಸಣೆಗೆ ಕಳುಹಿಸಿದ್ದಾರೆ. ಇನ್ನೂ ಕೆಲವು ಟೆಸ್ಟ್ ಬರಬೇಕಾಗಿದೆ. ಬಂದ ಮೇಲೆ ನಿಖರ ಕಾರಣ ಲಭ್ಯವಾಗಲಿದೆ ಎಂದಿದ್ದಾರೆ..
ಇನ್ನು ಸಕ್ಕರೆ ಕಾರ್ಖಾನ ತಪ್ಪು ಕಂಡು ಬಂದ್ರೆ ಕ್ರಮ ಕೈಗೊಳ್ಳುವುದಾಗಿ ಎಸಿ ಗಂಗಪ್ಪ ಹೇಳಿದ್ದಾರೆ. ಸಾಕಷ್ಟು ಜನ, ರೈತರು ಸಕ್ಕರೆ ಕಾರ್ಖಾನೆ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದು,. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದೆ. ನೀರಿನಲ್ಲಿ ಬೇರೆ ಯಾವುದಾದರು ಕೆಮಿಕಲ್ ಸೇರಿದೆಯಾ ಎನ್ನುವ ಬಗ್ಗೆ ಟೆಸ್ಟ್ ಗೆ ಕಳುಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಆ ವರದಿ ಬರಲಿದೆ. ಏನೇ ಇರಲಿ ಮೂರು ಜಿಲ್ಲೆಗಳ ನೂರಾರು ಗ್ರಾಮಗಳ ಜನ್ರ ಪಾಲಿನ ಜೀವನದಿ ಮಲೀನವಾಗಿದ್ದು, ಮೂರು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.