- Kannada News Photo gallery Cricket photos Rohit Sharma returning to the Ranji Trophy after almost 10 years
ದಶಕದ ಬಳಿಕ ರಣಜಿ ಟೂರ್ನಿಗೆ ರೋಹಿತ್ ಶರ್ಮಾ ಎಂಟ್ರಿ
Team India: ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳ ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ಬಿಸಿಸಿಐ ಇದೀಗ ಟೀಮ್ ಇಂಡಿಯಾ ಆಟಗಾರರಿಗೆ ರಣಜಿ ಟೂರ್ನಿ ಆಡುವಂತೆ ಸೂಚಿಸಿದೆ. ಅದರಂತೆ ಇದೀಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಕೆಲ ಆಟಗಾರರು ಜನವರಿ 23 ರಿಂದ ಶುರುವಾಗಲಿರುವ ರಣಜಿ ಟೂರ್ನಿಯ 2ನೇ ಸುತ್ತಿನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
Updated on: Jan 19, 2025 | 12:54 PM

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ದೇಶೀಯ ಅಂಗಳದಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅದು ಕೂಡ ಬರೋಬ್ಬರಿ 10 ವರ್ಷಗಳ ಬಳಿಕ ಎಂಬುದು ವಿಶೇಷ. ಅಂದರೆ ಈ ಬಾರಿಯ ರಣಜಿ ಟೂರ್ನಿಯ ದ್ವಿತೀಯ ಹಂತದ ಪಂದ್ಯದಲ್ಲಿ ಹಿಟ್ಮ್ಯಾನ್ ಮುಂಬೈ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ಜನವರಿ 23 ರಿಂದ ಮುಂಬೈ ಮತ್ತು ಜಮ್ಮು ಕಾಶ್ಮೀರ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಕಣಕ್ಕಿಳಿಯುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ. ಅದರಂತೆ ದಶಕದ ಬಳಿಕ ಮತ್ತೆ ರೋಹಿತ್ ಶರ್ಮಾ ರಣಜಿ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರೋಹಿತ್ ಶರ್ಮಾ ಕೊನೆಯ ಬಾರಿ ರಣಜಿ ಟೂರ್ನಿ ಪಂದ್ಯವಾಡಿದ್ದು 2015 ರಲ್ಲಿ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಉತ್ತರ ಪ್ರದೇಶ ವಿರುದ್ಧ ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಹಿಟ್ಮ್ಯಾನ್ 113 ರನ್ ಬಾರಿಸಿ ಮಿಂಚಿದ್ದರು. ಇದೀಗ 10 ವರ್ಷಗಳ ಬಳಿಕ ಮತ್ತೆ ತವರು ಮೈದಾನದಲ್ಲೇ ರಣಜಿ ಪಂದ್ಯವಾಡಲು ನಿರ್ಧರಿಸಿದ್ದಾರೆ.

ಮತ್ತೊಂದೆಡೆ 7 ವರ್ಷಗಳ ಬಳಿಕ ರಣಜಿ ಪಂದ್ಯವಾಡಲು ರಿಷಭ್ ಪಂತ್ ಕೂಡ ಸಜ್ಜಾಗಿದ್ದಾರೆ. 2017 ರಲ್ಲಿ ಕೊನೆಯ ಬಾರಿ ದೇಶೀಯ ಅಂಗಳದಲ್ಲಿ ಕಾಣಿಸಿಕೊಂಡಿದ್ದ ಪಂತ್ ಇದೀಗ ಮತ್ತೆ ದೆಹಲಿ ಪರ ವೈಟ್ ಜೆರ್ಸಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಇದಾಗ್ಯೂ ಈ ರಣಜಿ ಟೂರ್ನಿಯ ದ್ವಿತೀಯಾರ್ಧದ ಮೊದಲ ಪಂದ್ಯಕ್ಕೆ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅಲಭ್ಯರಾಗಲಿದ್ದಾರೆ. ಕಿಂಗ್ ಕೊಹ್ಲಿ ಕತ್ತು ನೋವಿನಿಂದ ಬಳಲುತ್ತಿದ್ದು, ಹೀಗಾಗಿ ರಣಜಿ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಹಾಗೆಯೇ ಮೊಣಕೈ ಗಾಯದ ಸಮಸ್ಯೆಗೆ ಒಳಗಾಗಿರುವ ಕೆಎಲ್ ರಾಹುಲ್ ಕೂಡ ರಣಜಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.



















