Qatar Mail: ಮೊದಲ ವಿಶುವಿನ ಮೊದಲ ಕೈನೀಟಂ ಅನ್ನೂ ಜೋಪಾನವಾಗಿ ಕಾಪಿಟ್ಟುಕೊಂಡಿದ್ದೇನೆ

Vishu 2022 : ಅಣ್ಣನಿಲ್ಲದ ಕೊರತೆಯನ್ನು ನೀಗಿಸಿದ ಪತಿಯ ಆ ಗೆಳೆಯ, ನಮ್ಮ ಮದುವೆಯಾದ ಬಳಿಕದ ಮೊದಲ ವಿಶುವಿನ ದಿನ ದಂಪತಿಗಳಿಬ್ಬರನ್ನೂ ತನ್ನ ಮನೆಗೆ ಊಟಕ್ಕೆ ಕರೆದೊಯ್ದು, ವಿಶು ಕೈನೀಟಂ ಎಂದು ಒಂದು ತೋಲದ ಚಿನ್ನದ ನಾಣ್ಯವನ್ನು ಕೈಗಿಟ್ಟಾಗ ಬೆಚ್ಚಿ ಬಿದ್ದಿದ್ದೆ.

Qatar Mail: ಮೊದಲ ವಿಶುವಿನ ಮೊದಲ ಕೈನೀಟಂ ಅನ್ನೂ ಜೋಪಾನವಾಗಿ ಕಾಪಿಟ್ಟುಕೊಂಡಿದ್ದೇನೆ
Follow us
ಶ್ರೀದೇವಿ ಕಳಸದ
|

Updated on:Apr 15, 2022 | 3:24 PM

ಕತಾರ್ ಮೇಲ್ | Qatar Mail : ಕುಟುಂಬದ ಅತಿ ಕಿರಿಯರಿಗೆ ಈ ದಿನವೆಂದರೆ ಎಲ್ಲಿಲ್ಲದ ಸಡಗರ. ಕಿರಿಯ ಮಕ್ಕಳಿಗೆ ಕುಟುಂಬದ ಎಲ್ಲಾ ಹಿರಿಯರಿಂದಲೂ ಉಡುಗೊರೆಯ ರೂಪದಲ್ಲಿ ಹಣ ದೊರಕುತ್ತದೆ. ನನಗೆ ನನ್ನ ಪತಿರಾಯನಿಂದ ಹಣ ಸಿಕ್ಕರೆ, ನನ್ನ ಮಗನಿಗೆ ನನ್ನಿಂದ ಮತ್ತು ನನ್ನ ಪತಿಯಿಂದ ಇಬ್ಬರಿಂದಲೂ ಉಡುಗೊರೆ ದೊರಕುತ್ತದೆ. ಮದುವೆಯಾದ ಮೇಲೆ ಪತಿಯಿಂದ ದೊರೆತ ಮೊದಲ ಕೈನೀಟಂ ಮಾತ್ರವಲ್ಲದೆ, ಮಗ ಬೆಳೆದು ದೊಡ್ಡವನಾದ ಮೇಲೆ ಅವನ ಕೈಗೇ ಕೊಡುವುದಕ್ಕಾಗಿ ಅವನ ಮೊದಲ ವಿಶುವಿನ ಮೊದಲ ಕೈನೀಟಂ ಅನ್ನೂ ಜೋಪಾನವಾಗಿ ಕಾಪಿಟ್ಟುಕೊಂಡಿದ್ದೇನೆ. ನಮ್ಮ ಮದುವೆ ನಿಶ್ಚಿತಾರ್ಥದ ದಿನ ನಿಗದಿಯಾದ ಮೇಲೆ ನನ್ನ ಪತಿಯ ಬಾಲ್ಯದ ಗೆಳೆಯ ನನ್ನನ್ನು ಮುಖಾಮುಖಿ ನೋಡಲು ಕೇರಳದಿಂದ ಬೆಂಗಳೂರಿಗೆ ಬಂದಿದ್ದ. ಸೇಂಟ್ ಮಾರ್ಕ್ಸ್ ಎಲ್.ಐ.ಸಿ. ಕಟ್ಟಡದ ಮೆಟ್ಟಿಲುಗಳ ಮೇಲೆ ಕುಳಿತು ಪ್ರಶ್ನೆಗಳ ಸುರಿಮಳೆಗರೆದು ಹೊರಡುವ ಮುನ್ನ, ‘ಕುಟ್ಟಿ, ಇದು ನಿನ್ನ ಏಟನಿಂದ (ಅಣ್ಣನಿಂದ) ನಿನಗೆ ಮೊದಲ ವಿಶು ಕೈನೀಟಂ,’ ಎನ್ನುತ್ತಾ 501 ರೂಪಾಯಿ ಕೊಡಲು ಬಂದಾಗ ನಾನು ತಬ್ಬಿಬ್ಬಾಗಿದ್ದೆ. ಇನ್ನೆರಡು ದಿನಗಳಲ್ಲಿ ಮಲಯಾಳಿಗಳ ಹೊಸ ವರ್ಷ ವಿಶುವಿದೆಯೆಂದೂ, ಆ ಹಣ ಹಬ್ಬದ ದಿನ ಹಿರಿಯರು ಕಿರಿಯರಿಗೆ ಕೊಡುವ ಉಡುಗೊರೆಯೆಂದೂ ಹೇಳಿ, ‘ನಿನಗಿಷ್ಟ ಬಂದದ್ದನ್ನು ತೆಗೆದುಕೋ,’ ಎಂದಾಗ ನಾನು ಅಳುಕುತ್ತಲೇ ಹಣವನ್ನು ಪರ್ಸಿನಲ್ಲಿಟ್ಟುಕೊಂಡಿದ್ದೆ.

ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್ (Chaitra Arjunpuri)

(ಪತ್ರ 8, ಭಾಗ 2)

ನಿಧಾನವಾಗಿ ಮಲಯಾಳಿಗಳ ಜಗತ್ತು ನನ್ನ ಮುಂದೆ ತೆರೆದುಕೊಳ್ಳುತ್ತಾ ಹೋಯಿತು. ಅಣ್ಣನಿಲ್ಲದ ಕೊರತೆಯನ್ನು ನೀಗಿಸಿದ ಪತಿಯ ಆ ಗೆಳೆಯ, ನಮ್ಮ ಮದುವೆಯಾದ ಬಳಿಕದ ಮೊದಲ ವಿಶುವಿನ ದಿನ ದಂಪತಿಗಳಿಬ್ಬರನ್ನೂ ತನ್ನ ಮನೆಗೆ ಊಟಕ್ಕೆ ಕರೆದೊಯ್ದು, ವಿಶು ಕೈನೀಟಂ ಎಂದು ಒಂದು ತೋಲದ ಚಿನ್ನದ ನಾಣ್ಯವನ್ನು ಕೈಗಿಟ್ಟಾಗ ಬೆಚ್ಚಿ ಬಿದ್ದಿದ್ದೆ. ಆ ಗೆಳೆಯನಿಗೆ ಹೆಣ್ಣು ಮಕ್ಕಳು ಹುಟ್ಟಿದಾಗ ಅವರಿಗೆ ನಾನು ನೀಡಿದ ಚಿನ್ನದ ನಾಣ್ಯಗಳಿಂದ ಅವರು ಒಡವೆ ಮಾಡಿಸಿಕೊಂಡರಾದರೂ, ಅವನು ನೀಡಿದ ನಾಣ್ಯವನ್ನು ನಾನಿನ್ನೂ ಜೋಪಾನವಾಗಿರಿಸಿಕೊಂಡಿದ್ದೇನೆ.

ಹಬ್ಬದ ದಿನ ಯಾರು ಎಷ್ಟು ಹಣ ನೀಡಿದರು ಎನ್ನುವುದಕ್ಕಿಂತ ಹೆಚ್ಚು ಸವಲತ್ತು ಹೊಂದಿರುವವರು ಮುಕ್ತ ಮನಸ್ಸಿನಿಂದ ತಮ್ಮಲ್ಲಿರುವ ಹಣವನ್ನು ಇಲ್ಲದವರಿಗೆ ವಿತರಿಸುವ, ಹಿರಿಯರೆಂದು ಅವರು ನೀಡುವ ಹಣವನ್ನು ಗೌರವದಿಂದ ಇಲ್ಲದವರು ಸ್ವೀಕರಿಸುವ ಸಂಕೇತಕ್ಕೆ ಮಲಯಾಳಿಗಳಲ್ಲಿ ಬಹಳ ಮಹತ್ವವಿದೆ. ಆ ದಿನ ಮನೆಗೆ ಬರುವ ಯಾವುದೇ ಕಿರಿಯರಿಗೆ, ಮನೆ ಕೆಲಸದವರಿಗೆ ತಮ್ಮ ಕೈಲಾದ ಹಣವನ್ನು ನೀಡಿ ಮುಂಬರುವ ವರ್ಷವನ್ನು ಸಂತೋಷದಿಂದ ಬರ ಮಾಡಿಕೊಳ್ಳುತ್ತಾರೆ.

‘ವಿಶು ಸದ್ಯ’

ವಿಶು ಕಣಿ ನೋಡಿದ ಬಳಿಕ ಸಾಮಾನ್ಯವಾಗಿ ರಾಮಾಯಣ ಅಥವಾ ಭಗವದ್ಗೀತೆಯ ಪದ್ಯಗಳನ್ನು ಓದುತ್ತಾರೆ, ಆದರೆ ನಮ್ಮ ಮನೆಯಲ್ಲಿ ಆ ಅಭ್ಯಾಸವಿಲ್ಲ. ಅಪ್ಪ-ಮಗ ಮತ್ತೆ ಮಲಗಲು ಹೊರಟರೆ, ನಾನು ಮಧ್ಯಾಹ್ನದ ಹಬ್ಬದೂಟ, ‘ವಿಶು ಸದ್ಯ’ದ ತಯಾರಿಗಾಗಿ ಅಡುಗೆಮನೆ ಸೇರಿಕೊಳ್ಳುತ್ತೇನೆ.

ಕುದಿಸಿದ ಕೆಂಪಕ್ಕಿಯ ಜೊತೆ ಸಾಂಬಾರ್, ರಸಂ, ಮೋರು ಕರಿ, ಕೂಟನ್ ಎಂದು ಕರೆಯಲ್ಪಡುವ ವಿವಿಧ ಬಗೆಯ ಪಲ್ಯಗಳು – ಅವಿಯಲ್, ಕಾಳನ್, ಓಳನ್, ತೋರನ್, ಪಚಡಿ, ಕಿಚಡಿ, ಕೂಟುಕರಿ, ಎರಿಷೆರಿ – ಚಕ್ಕ ಎರಿಷೆರಿ ಮತ್ತು ಮತ್ತನ್ ಎರಿಷೆರಿ – ಪುಳಿಂಜಿ, ಮೂರ್ನಾಲ್ಕು ಬಗೆಯ ಪಾಯಸಗಳು – ಪಾಲ್ ಅಡ, ಅಡ ಪ್ರಧಮನ್, ಪರಿಪ್ಪು ಪಾಯಸಂ, ಚಕ್ಕ ಪ್ರಧಮನ್ – ಮುಗಿಸಿ, ಮಾವಿನ ಮತ್ತು ನಿಂಬೆಯ ಉಪ್ಪಿನಕಾಯಿಗಳಿಗೆ ಒಂದಷ್ಟು ಒಗ್ಗರಣೆ ಹಾಕಿ, ಹಪ್ಪಳ-ಸಂಡಿಗೆ ಕರೆಯುವಷ್ಟರಲ್ಲಿ ಮಧ್ಯಾಹ್ನವಾಗಿರುತ್ತದೆ.

ಇದನ್ನೂ ಓದಿ : Qatar Mail: ಇಲ್ಲಿ ಹೆಣ್ಣನ್ನು ಕೆಣಕಿದರೆ ಕಾಳಿಂಗ ಸರ್ಪವನ್ನು ಮೆಟ್ಟಿದಂತೆ!

ಉಪ್ಪು, ಬಾಳೆಕಾಯಿ ಚಿಪ್ಸ್, ಶರ್ಕರ ಉಪ್ಪೇರಿ, ಬಾಳೆಹಣ್ಣು, ಮೊಸರು, ಮಜ್ಜಿಗೆಗಳು ಬಾಳೆ ಎಲೆಯೇರಲು ಸಜ್ಜಾಗಿ ನಿಲ್ಲುತ್ತವೆ. ಆ ಕಾಲದಲ್ಲಿ ದೊರಕುವ ವಿವಿಧ ಬಗೆಯ ಹಣ್ಣು ಮತ್ತು ತರಕಾರಿಗಳನ್ನು ಬಳಸಿ ತಯಾರಿಸುವ ವಿಶು ಸದ್ಯದಲ್ಲಿ ಉಪ್ಪು, ಹುಳಿ, ಕಹಿ ಮತ್ತು ಸಿಹಿ ಸಮ ಪ್ರಮಾಣದಲ್ಲಿ ಬಳಕೆಯಾಗುತ್ತವೆ. ಜಿಲ್ಲೆಯಿಂದ ಜಿಲ್ಲೆಗೆ ಸದ್ಯದ ಖಾದ್ಯಗಳಲ್ಲಿ ವ್ಯತ್ಯಾಸವಿರುತ್ತದೆ. ಉದಾಹರಣೆಗೆ, ತಿರುವನಂತಪುರದ ಕೆಲವು ಭಾಗಗಳಲ್ಲಿ ಸದ್ಯದಲ್ಲಿ ಎರಿಷೆರಿ ಮತ್ತು ಓಲನ್ ಇರುವುದಿಲ್ಲ, ಆದರೆ ಉತ್ತರ ಭಾಗದ ಇತರೆ ಜಿಲ್ಲೆಗಳಲ್ಲಿ ಇರುತ್ತವೆ.

ಖಾದ್ಯಗಳನ್ನು ಬಡಿಸುವ ಕ್ರಮ

ಈ ನಡುವೆ ಸ್ನಾನ, ಪೂಜೆ ಮುಗಿಸಿ ಹೊಸ ಕಸುವು ಸೀರೆ ಧರಿಸಿ ನಿಲ್ಲುವಷ್ಟರಲ್ಲಿ, ಗಂಟೆ ಮಧ್ಯಾಹ್ನ ಒಂದಾಗುತ್ತದೆ, ಗೆಳೆಯರು ಊಟಕ್ಕೆ ಬರಲು ತೊಡಗುತ್ತಾರೆ. ಅಡುಗೆ ಮಾಡುವುದು ನನ್ನ ಕೆಲಸವಾದರೆ, ಅವುಗಳನ್ನು ಬಾಳೆ ಎಲೆಯ ಮೇಲೆ ಬಡಿಸುವುದು ನನ್ನ ಪತಿ ಮತ್ತವನ ಗೆಳೆಯರ ಪಾಲಿನ ಕೆಲಸ. ಅಡುಗೆ ಮಾಡಿದವಳಿಗೆ ಬಡಿಸಿವುದು ಕಷ್ಟವೇ ಎನ್ನಬೇಡಿ.

ಸಾಮಾನ್ಯವಾಗಿ, ಸದ್ಯದ ಬಾಳೆ ಎಲೆಯಲ್ಲಿ ಸುಮಾರು 24ರಿಂದ 28 ಖಾದ್ಯಗಳನ್ನು ಎಲೆಯ ಮೇಲೆ ನಿರ್ದಿಷ್ಟ ಸ್ಥಳಗಳಲ್ಲಿ ನಿರ್ದಿಷ್ಟ ಕ್ರಮದಲ್ಲಿ ಬಡಿಸಬೇಕು. ಉಪ್ಪನ್ನು ಎಲೆಯ ಮೇಲಿನ ಎಡಮೂಲೆಯಲ್ಲಿ ಬಡಿಸಿ, ಪಕ್ಕದಲ್ಲಿ ಉಪ್ಪಿನಕಾಯಿಗಳನ್ನು ಬಡಿಸಬೇಕು, ಇನ್ನು ಬಾಳೆಹಣ್ಣನ್ನು ಎಳೆಯ ಕೆಳ ಭಾಗದ ಬಲ ಮೂಲೆಯಲ್ಲಿ ಬಡಿಸಬೇಕು. ಹಾಗಾಗಿ ಬಡಿಸುವ ಕೆಲಸವನ್ನು ಮಲಯಾಳಿ ಗಂಡನಿಗೆ ಬಿಟ್ಟು ಕೊಟ್ಟು ಪಕ್ಕದಲ್ಲಿ ನಿಲ್ಲುತ್ತೇನೆ.

ಹಬ್ಬದೂಟ ಮುಗಿಸಿದ ಗೆಳೆಯರು, ಮಾರನೆಯ ದಿನ ಸವಿಯಲು ಒಂದಿಷ್ಟು ಪಾಯಸವನ್ನೂ, ಒಂದಷ್ಟು ಸಂತಸದ ಕ್ಷಣಗಳನ್ನೂ ತಮ್ಮ ಮನೆಗೂ ಕೊಂಡೊಯ್ಯುತ್ತಾರೆ. ಓಣಂ ಹಬ್ಬದೂಟಕ್ಕೆ ಮತ್ತೆ ಸಿಗೋಣ ಎಂದು ಅವರೆಲ್ಲಾ ಕೈಬೀಸಿ ಸಂಜೆ ಮನೆಯಿಂದ ಹೊರಟಾಗ ಎಲ್ಲರ ಮನದಲ್ಲೂ ತೃಪ್ತಿ ತುಂಬಿ ತುಳುಕುತ್ತಿರುತ್ತದೆ.

ಜೀವಂತ ಪರಂಪರೆ

ಕೇರಳದಲ್ಲಿ ವಿಶುವಿನ ರಾತ್ರಿ ನಮ್ಮ ದೀಪಾವಳಿಯ ಹಾಗೆ ವಿಶು ಪಡಕಂ ಎಂದು ಪಟಾಕಿಗಳನ್ನು ಹೊಡೆದು ದಿನವನ್ನು ಕೊನೆಗೊಳಿಸುತ್ತಾರೆ. ಹೊರದೇಶದಲ್ಲಿ ವಿಶುವಿಗೆ ಯಾವುದೇ ರಜೆಯಿಲ್ಲದ ಕಾರಣ, ವಾರದ ದಿನಗಳಲ್ಲಿ ಹಬ್ಬ ಬಂದರೆ, ಆ ದಿನ ಸದ್ಯ ತಯಾರಿ ಸಾಧ್ಯವಾಗುವುದಿಲ್ಲವೆಂದು ಕೇವಲ ಪಾಯಸದೊಂದಿಗೆ ಸರಳವಾಗಿ ಹಬ್ಬ ಆಚರಿಸಿ, ಹಬ್ಬದೂಟ ಮತ್ತು ಉತ್ಸವವನ್ನು ವಾರಾಂತ್ಯಕ್ಕೆ ಮುಂದೂಡಿಕೊಳ್ಳುತ್ತೇವೆ.

ಆದರೆ ಈ ಬಾರಿ ಹಬ್ಬದೂಟವನ್ನು ಮುಂದೂಡದೆ, ಕೈಗೆ ಸಿಗುವ ತರಕಾರಿಗಳನ್ನು ಬಳಸಿ, ಕಡಿಮೆ ಖಾದ್ಯಗಳನ್ನು ತಯಾರಿಸಿ ಗಂಡ ಮತ್ತು ಮಗನೊಡನೆ ಸರಳವಾಗಿ ಊಟವನ್ನು ಮುಗಿಸಿ ಬಿಡುವ ಯೋಜನೆ ಹಾಕಿಕೊಂಡಿದ್ದೇನೆ. ಇದಕ್ಕೆ ಕಾರಣ ಎರಡು: ಮೊದಲನೆಯದು, ರಂಜಾನ್ ಮಾಸವಾಗಿರುವುದರಿಂದ ಗೆಳೆಯರನ್ನು ಆಹ್ವಾನಿಸಲಾಗುವುದಿಲ್ಲ, ಮತ್ತು ಎರಡನೆಯದು, ಹನ್ನೊಂದು ತಿಂಗಳ ಹಿಂದೆ ಗಂಡನ ಸಂಬಂಧಿಕರ ಮನೆಯಲ್ಲಾದ ಎರಡು ಕರೋನಾ ಸಂಬಂಧಿತ ಸಾವುಗಳು (ತಮ್ಮ ಸಂಬಂಧಿಕರ ಮನೆಗಳಲ್ಲಿ ಸಾವುಗಳಾದರೂ ಮಲಯಾಳಿಗಳು ವರ್ಷದ ತಿಥಿಯಾಗುವವರೆಗೂ ಯಾವುದೇ ಹಬ್ಬಗಳನ್ನಾಚರಿಸುವುದಿಲ್ಲ).

ಹಬ್ಬದಾಚರಣೆ ಕೇರಳದಲ್ಲಿನ ಹಾಗಿಲ್ಲವಾದರೂ, ದೇಶನ ಹೊರಗಿರುವ ಪ್ರತಿಯೊಂದು ಮಲಯಾಳಿ ಕುಟುಂಬವೂ ಆದಷ್ಟು ಸಾಂಪ್ರದಾಯಿಕ ರೀತಿಯಲ್ಲಿ ವಿಶುವನ್ನು ಆಚರಿಸಿ, ತಮ್ಮ ಮುಂದಿನ ಪೀಳಿಗೆಗೆ ಜೀವಂತ ಪರಂಪರೆಯನ್ನು ಯಶಸ್ವಿಯಾಗಿ ರವಾನಿಸುತ್ತಿವೆ.

(ಮುಗಿಯಿತು)

ಮುಂದಿನ ಪತ್ರ : 29.4.2022

ಭಾಗ 1 : Qatar Mail: ಕನ್ನಡದ ಮಗಳಾಗಿ ಕೇರಳದ ಸೊಸೆಯಾಗಿ ಈ ವರ್ಷದ ‘ವಿಶುಬಿಸು’ವಿನೊಂದಿಗೆ

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/qatar-mail

Published On - 2:45 pm, Fri, 15 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ