Qatar Mail: ಇಲ್ಲಿ ಹೆಣ್ಣನ್ನು ಕೆಣಕಿದರೆ ಕಾಳಿಂಗ ಸರ್ಪವನ್ನು ಮೆಟ್ಟಿದಂತೆ!
Family : ಈ ಆರೋಪ-ಪ್ರತ್ಯಾರೋಪಗಳು ದುರುಪಯೋಗವಾಗಿ ಯಾವ ಮಟ್ಟ ತಲುಪುತ್ತವೆ, ಒಬ್ಬ ವ್ಯಕ್ತಿ ಮತ್ತವನ ಕುಟುಂಬವನ್ನು ಹೇಗೆ ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ ಎನ್ನುವುದಕ್ಕೆ ಒಬ್ಬ ಗೆಳೆಯನ ಜೀವನದಲ್ಲಾದ ಏರುಪೇರುಗಳನ್ನು ಇಂದು ಹಂಚಿಕೊಳ್ಳುತ್ತೇನೆ.
ಕತಾರ್ ಮೇಲ್ | Qatar Mail : ಕಳೆದ ವಾರ ಗೆಳೆಯನೊಬ್ಬನ ಮನೆಗೆ ಪಾರ್ಟಿಗೆ ಹೋದಾಗ ಆತನ ಹೆಂಡತಿ ಕಚೇರಿಯಲ್ಲಿ ಸಹೋದ್ಯೋಗಿಯೊಬ್ಬ ಸುಖಾಸುಮ್ಮನೆ ತನಗೆ ಕಿರಿಕಿರಿ ಮಾಡುತ್ತಿರುವ ವಿಚಾರವನ್ನು ಹೇಳಿದಳು. ಯಾವ ಕೆಲಸವನ್ನೂ ಒಪ್ಪದ, ಸದಾ ಎಲ್ಲದರಲ್ಲೂ ತಪ್ಪು ಹುಡುಕುವ ಆತ ಪ್ರತಿ ತಿಂಗಳೂ ಒಂದಲ್ಲ ಒಂದು ಕಾರಣಕ್ಕೆ ಸಂಬಳವನ್ನೂ ಮುರಿದುಕೊಂಡೇ ಕೊಡುತ್ತಾನೆ ಎಂದಳು. ರಜೆ ಹಾಕದೆ ಸಂಬಳವನ್ನು ಏಕೆ ಕತ್ತರಿಸುತ್ತಾನೆ ಎಂದು ಕೇಳಿದಾಗ, ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಒಂದು ದಿನ ಆಫೀಸಿನಿಂದ ಎರಡು ಗಂಟೆ ಬೇಗ ಹೋಗಬೇಕಾಯಿತು. ಮಾರನೇ ದಿನ ಮೈಕೈ ನೋವಿದ್ದರೂ ಕೆಲಸಕ್ಕೆ ಬಂದು, ಕಂಪ್ಯೂಟರ್ ಕೀಲಿಮಣೆಯನ್ನು ಕುಟ್ಟಲಾಗದಿದ್ದರೂ ಕುಟ್ಟಿ ಮಧ್ಯಾಹ್ನವಾಗುವಷ್ಟರಲ್ಲಿ ಜ್ವರ ಬಂದು ಮನೆಗೆ ಹೋರಾಡಬೇಕಾಯಿತು ಎಂದು ಅವಲತ್ತುಕೊಂಡಳು. ಇಲ್ಲಿ ಆಫೀಸಿನಲ್ಲಿ ಕನಿಷ್ಠ ಎಂಟು ಗಂಟೆ ಕೆಲಸ ಕಡ್ಡಾಯ, ಅದರಲ್ಲಿ ಒಂದು ಗಂಟೆ ಕಡಿಮೆಯಾದರೂ ಸಂಬಳ ಕಡಿತ ಮಾಮೂಲು ಎಂದು ಅವಳಿಗೆ ಸಮಾಧಾನಮಾಡಿದೆ. ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್ (Chaitra Arjunpuri)
(ಪತ್ರ 7, ಭಾಗ 1)
ಆತನ ಬಗ್ಗೆ ಮೇಲಿನವರಿಗೆ ದೂರು ಕೊಡು ಎಂದು ಸಲಹೆ ನೀಡಿದಾಗ, ಆತ ಮಾಲೀಕನ ಸಂಬಂಧಿಯೆಂದೂ, ಆಫೀಸಿನಲ್ಲಿ ಇತರರೂ ಆತನಿಗೆ ಹೆದರುತ್ತಾರೆಂದು ಮುಖ ಪೆಚ್ಚು ಮಾಡಿಕೊಂಡಳು. ಯಾಕಾದರೂ ಈ ಕೆಲಸಕ್ಕೆ ಸೇರಿದೆನೋ, ಬೇರೆಲ್ಲಾದರೂ ನೌಕರಿ ಸಿಕ್ಕಿದ್ದರೆ ಇದನ್ನು ಬಿಟ್ಟುಬಿಡುತ್ತಿದ್ದೆ ಎಂದು ನಿಟ್ಟುಸಿರುಬಿಟ್ಟು ಮೇಲೆದ್ದವಳನ್ನು ಮತ್ತೊಬ್ಬ ಗೆಳೆಯನ ಹೆಂಡತಿ ತಡೆದು ನಿಲ್ಲಿಸಿದಳು. ಆಕೆಯ ಸಮಸ್ಯೆಗೆ ತನ್ನ ಬಳಿ ಉತ್ತರವಿದೆಯೆಂದು ಮುಗುಳ್ನಕ್ಕಳು. ಆತ ಮೈ ಕೈ ಸವರಿ ಮಾತಾನಾಡಿಸುತ್ತಾನೆ ಎಂದು ಒಂದು ದೂರು ಕೊಟ್ಟು ನೋಡು, ಅವನಲ್ಲ ಯಾರೂ ನಿನ್ನ ಸಹವಾಸಕ್ಕೆ ಬರುವುದಿಲ್ಲ ಎಂದಳು. ಅವಳ ಮಾತು ಕೇಳಿ ನಾನೂ, ಗೆಳೆಯನ ಹೆಂಡತಿಯೂ ಅವಾಕ್ಕಾದೆವು. ಅಷ್ಟರಲ್ಲಿ ಅಲ್ಲಿಗೆ ಬಂದ ಗೆಳೆಯ, ಆತ ಹಾಗೇನೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ, ಕೆಲಸದ ವಿಷಯದಲ್ಲಿ ಕಿರಿಕಿರಿಯಷ್ಟೆ ಎಂದು ತಿಳಿಸಿದ. ಮಾತ್ರವಲ್ಲ, ತನ್ನ ಹೆಂಡತಿ ತಿಂಗಳಿಗೆ ಮೂರ್ನಾಲ್ಕು ಸಲ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಆಫೀಸಿನಲ್ಲಿ ಮೈಗಳ್ಳತನ ತೋರಿಸಿದರೆ ಯಾರು ತಾನೇ ಸುಮ್ಮನೆ ಸಂಬಳ ಕೊಡುತ್ತಾರೆ ಎಂದು ಗೊಳ್ಳನೆ ನಕ್ಕ.
ಭಾರತದಲ್ಲಿ ಹೆಣ್ಣನ್ನು ವಸ್ತುವನ್ನಾಗಿ ನೋಡಿ, ಕಾಲಲ್ಲಿ ಹೊಸಕಿ ಹಾಕುವ, ಅತ್ಯಾಚಾರ ಮಾಡಿ, ದಬ್ಬಾಳಿಕೆ ಮಾಡಿ ರಾಜಾರೋಷವಾಗಿ ಓಡಾಡುವ ಗಂಡಸರಿದ್ದಾರೆ. ಆದರೆ ಇಲ್ಲಿ ಹೆಣ್ಣನ್ನು ಕೆಣಕಿದರೆ ಕಾಳಿಂಗ ಸರ್ಪವನ್ನು ಮೆಟ್ಟಿದಂತೆ ಎನ್ನುವುದು ಮಾತ್ರ ಅಕ್ಷರಶಃ ನಿಜ. ಒಂದು ವೇಳೆ ಹಾವನ್ನು ಮೆಟ್ಟಿ ಅದರ ಕೋಪದಿಂದ ಬಚಾವಾದರೂ ಬಚಾವಾಗಬಹುದು, ಆದರೆ ಮಹಿಳೆಯನ್ನು ಕೆಣಕಿ ಶಿಕ್ಷೆಯಿಂದ ತಪ್ಪಿಸಿಕೊಂಡವರನ್ನು ನೋಡುವುದು ವಿರಳ. ಆದರೆ ಈ ವಿಚಾರವನ್ನು ದುರುಪಯೋಗ ಪಡಿಸಿಕೊಳ್ಳುವ ಹೆಣ್ಣುಮಕ್ಕಳು ಎಲ್ಲ ಕಡೆಯ ಹಾಗೆ ಇಲ್ಲಿಯೂ ಸಿಗುತ್ತಾರೆ ಎನ್ನುವುದಕ್ಕೆ ಗೆಳೆಯನ ಹೆಂಡತಿ ನೀಡಿದ ಐಡಿಯಾ ಕೇಳಿದ ಮೇಲೆ ನಿಮಗೆ ಅರ್ಥವಾಗಿರಬೇಕಲ್ಲವೇ? ಈ ಆರೋಪ-ಪ್ರತ್ಯಾರೋಪಗಳು ದುರುಪಯೋಗವಾಗಿ ಯಾವ ಮಟ್ಟ ತಲುಪುತ್ತವೆ, ಒಬ್ಬ ವ್ಯಕ್ತಿ ಮತ್ತವನ ಕುಟುಂಬವನ್ನು ಹೇಗೆ ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ ಎನ್ನುವುದಕ್ಕೆ ಒಬ್ಬ ಗೆಳೆಯನ ಜೀವನದಲ್ಲಾದ ಏರುಪೇರುಗಳನ್ನು ಇಂದು ಹಂಚಿಕೊಳ್ಳುತ್ತೇನೆ.
ನನ್ನ ಗಂಡ ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಸಜಿ (ಹೆಸರನ್ನು ಬದಾಲಾಯಿಸಲಾಗಿದೆ)ಯ ಬಗ್ಗೆ ಗೆಳೆಯರಿಂದ ಸಾಕಷ್ಟು ಕೇಳಿದ್ದೆ. ನಾನು ಅವನನ್ನು ಮೊದಲ ಬಾರಿ ಭೇಟಿ ಮಾಡಿದಾಗ ಅವನ ವಯಸ್ಸು 22. ಅಷ್ಟರಲ್ಲೇ ಅವನಿಗೆ ಒಂದು ವರ್ಷದ ಮಗುವಿತ್ತು. ನಿನ್ನದು ಬಾಲ್ಯವಿವಾಹವೇನೋ ಎಂದು ನಾನು ಆಗಾಗ ಅವನನ್ನು ರೇಗಿಸುತ್ತಿದ್ದದ್ದೂ ಇದೆ.
ಇದನ್ನೂ ಓದಿ : Qatar Mail: ‘ನ್ಯಾಷನಲ್ ಜಿಯಾಗ್ರಫಿಕ್’ ರೇಂಜ್ನಲ್ಲಿರುವ ನಿನ್ನ ಫೋಟೋಗಳಿಗೆ ನಾವು ಸಲಹೆ ಕೊಡಲಾಗುವುದಿಲ್ಲ
ನೋಡಲು ಚಿತ್ರನಟರ ಹಾಗೆ ಸುಂದರವಾಗಿದ್ದ ಆತ ವಯಸ್ಸಿಗೆ ತಕ್ಕನಾಗಿ ಬಹಳ ಶೋಕಿಲಾಲ. ಓದಿದ್ದು ಮೊದಲ ಪಿಯುಸಿ ಮಾತ್ರವಾದರೂ, ಯಾವ ಪದವೀಧರರಿಗೂ ಕಡಿಮೆಯಿಲ್ಲದಂತೆ ಅರಳು ಹುರಿದಂತೆ ಇಂಗ್ಲೀಷ್ ಮಾತನಾಡುತ್ತಿದ್ದ. ಪಾಶ್ಚಾತ್ಯರ ಹಾಗೆ ಅವನ ಉಚ್ಛಾರಣೆ ಕೇಳಿದರೆ ಬಹುಶಃ ಆತ ವಿದೇಶದಲ್ಲಿ ಹುಟ್ಟಿ ಬೆಳೆದು, ಅಲ್ಲೇ ವ್ಯಾಸಂಗ ಮಾಡಿರಬೇಕು ಎಂದು ಜನರು ತಪ್ಪು ತಿಳಿದುಕೊಳ್ಳುತ್ತಿದ್ದರು. ಆತನ ಭಾಷಾ ಮೋಡಿಗೆ ಬಿದ್ದೇ ಅವನನ್ನು ಕಂಪನಿಗೆ ಸೇರಿಸಿಕೊಂಡರು ಎಂದು ಗೆಳೆಯರು ಗೇಲಿ ಮಾಡುತ್ತಿದ್ದರು. ಓದಿದ್ದು ಕಡಿಮೆಯಾಗಿದ್ದರಿಂದ, ತಾಂತ್ರಿಕ ವಿಷಯಗಳ ಜ್ಞಾನವೂ ಇಲ್ಲದಿದ್ದರಿಂದ ವಾಹನ ಚಾಲಕನಾಗಿ ಅವನನ್ನು ನೌಕರಿಗೆ ಸೇರಿಸಿಕೊಂಡಿದ್ದರು.
ಪಾಶ್ಚಿಮಾತ್ಯರ ಮಾಲೀಕತ್ವದ ಕಂಪನಿಯಲ್ಲಿ, ಅಗತ್ಯವಾದ ವಿದ್ಯಾಭ್ಯಾಸವೂ ಇಲ್ಲದೆ ಕೆಲಸ ಗಿಟ್ಟಿಸುವುದು, ಅದು ಚಾಲಕನ ನೌಕರಿಯಾದರೂ, ಇಲ್ಲಿ ಸುಲಭದ ಮಾತಲ್ಲ. ಚಾಲಕನಾದ ಮೇಲೆ ಕ್ಯಾಮೆರಾಗಳನ್ನು, ಲೈಟುಗಳನ್ನು ಶೂಟಿಂಗ್ ಸ್ಥಳಕ್ಕೆ ಸಾಗಿಸುವುದು, ಅವುಗಳನ್ನು ಬೇಕಾದ ಸ್ಥಳಗಳಿಗೆ ಎತ್ತಿರಿಸಿಕೊಡುವುದು ಇದ್ದೇ ಇರುತ್ತದೆ. ವರ್ಷಗಟ್ಟಲೆ ಅದನ್ನೇ ದಿನನಿತ್ಯ ಮಾಡುತ್ತಾ ತಾನೇ ಕ್ಯಾಮೆರಾಮ್ಯಾನ್ ಆಗಬಲ್ಲೆ ಎನ್ನುವ ವಿಶ್ವಾಸ ಅವನಿಗೆ ಹುಟ್ಟಿತು. ಹಾಗೆ ಕ್ಯಾಮೆರಾಮ್ಯಾನ್ಗಳಾದ ಕೆಲವು ಗೆಳೆಯರನ್ನೂ ಇಲ್ಲಿ ನೋಡಿದ್ದೇನೆ.
ಈ ನಡುವೆ, ಅರಾಬಿಕ್ ಟಿವಿ ಚಾನೆಲ್ ಒಂದರಲ್ಲಿ ಉದ್ಯೋಗ ದೊರೆತು ನನ್ನ ಗಂಡ ಆ ಕಂಪನಿಯನ್ನು ತೊರೆದ. ಅದೇ ಸಮಯದಲ್ಲಿ ಸಜಿ ಸಹ ಅದೇ ಚಾನೆಲ್ಲಿನಲ್ಲಿ ನೌಕರಿಗೆಂದು ಅರ್ಜಿ ಹಾಕಿದ. ಸಂದರ್ಶನವೆಲ್ಲ ಮುಗಿದು ನೌಕರಿಯೂ ದೊರಕಿತು, ಚಾಲಕನಾಗಲ್ಲ, ಸಹಾಯಕ ಕ್ಯಾಮೆರಾಮ್ಯಾನ್ ಆಗಿ. ಸಂದರ್ಶನ ಮಾಡಿದ ಚಾನೆಲ್ ನವರು ಅವನ ಮಾತಿನ ಮೋಡಿಗೆ ಮರುಳಾಗಿ, ಜವಾಬ್ದಾರಿಯುತ ಕೆಲಸವನ್ನು ನೀಡಿದರು.
ಎಲ್ಲಾ ಸರಿಯಿದೆ, ಹ್ಯಾಪಿ ಎಂಡಿಂಗ್ ಎಂದುಕೊಳ್ಳೋಣ ಎಂದರೆ ಅದೂ ಸಾಧ್ಯವಿಲ್ಲ. ಕಾರಣ, ಸಜಿಯಲ್ಲಿಯೂ ಕೆಲವು ನೆಗೆಟಿವ್ ಅಂಶಗಳಿದ್ದವು. ಹಾಗೆಂದು ಅವನಿಗೆ ಕುಡಿತ, ಸಿಗರೇಟು, ಜೂಜು ಎಂದು ಯಾವ ದುರಭ್ಯಾಸಗಳೂ ಇರಲಿಲ್ಲ. ಇದ್ದದ್ದು ಶೋಕಿ ಮಾಡಬೇಕು, ಪಾರ್ಟಿ ಮಾಡಬೇಕು, ಎಲ್ಲರ ಮುಂದೆ ತಾನು ದೊಡ್ಡವನು ಎಂದು ಮೆರೆಯಬೇಕೆಂಬ ಹುಚ್ಚು ಮಾತ್ರ. ಪ್ರತಿ ಶುಕ್ರವಾರ ಮತ್ತು ಶನಿವಾರ ಗೆಳೆಯರೊಂದಿಗೆ ಪಾರ್ಟಿ ಮಾಡಲು ದೊಡ್ಡ ಪಂಚತಾರಾ ಹೋಟೆಲುಗಳಿಗೆ ಹೋಗುತ್ತಿದ್ದ. ಜೊತೆಯವರು ಮದ್ಯ ಸೇವಿಸುವಾಗ ಇವನು ಕೋಕಾ ಕೋಲ, ಪೆಪ್ಸಿ ಕುಡಿಯುತ್ತಿದ್ದ. ಗೆಳೆಯರು ಸಿಗರೇಟು ಸೇದುವಾಗ ಇವನು ಬಬ್ಬಲ್ ಗಮ್ ಜಗಿಯುತ್ತಿದ್ದ.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಹಿಂದಿನ ಪತ್ರ : Qatar Mail: ಆಫೀಸಿನ ಒಳಗೆ ಹೋಗುವಂತಿಲ್ಲ ಎಂದು ಆತ ಪರವಾನಗಿ ಪತ್ರವನ್ನು ಮಡಚಿ ನನ್ನ ಕೈಗಿಟ್ಟ
ಈ ಅಂಕಣದ ಎಲ್ಲಾ ಬರಹಗಳನ್ನೂ ಇಲ್ಲಿ ಓದಿ : https://tv9kannada.com/tag/qatar-mail
Published On - 3:33 pm, Fri, 1 April 22