ಮೋದಿ ಮಾತು ಸೇರಿಸಿ: ‘ಸಿತಾರೆ ಜಮೀನ್ ಪರ್’ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಸೂಚನೆ
‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಕೆಲವು ಬದಲಾವಣೆ ಮಾಡುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ. ಆಮಿರ್ ಖಾನ್, ಜೆನಿಲಿಯಾ ದೇಶಮುಖ್ ಮುಂತಾದವರು ನಟಿಸಿರುವ ಈ ಸಿನಿಮಾ ಜೂನ್ 20ಕ್ಕೆ ರಿಲೀಸ್ ಆಗುತ್ತಿದೆ. ‘ಸಿತಾರೆ ಜಮೀನ್ ಪರ್’ ಚಿತ್ರವನ್ನು ಸ್ವತಃ ಆಮಿರ್ ಖಾನ್ ಅವರೇ ನಿರ್ಮಾಣ ಮಾಡಿದ್ದಾರೆ.

ಒಂದಷ್ಟು ಕಾರಣಗಳಿಂದಾಗಿ ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾ ನಿರೀಕ್ಷೆ ಮೂಡಿಸಿದೆ. ಜೂನ್ 20ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ನಟ ಆಮಿರ್ ಖಾನ್ (Aamir Khan) ಅವರು ಈ ಸಿನಿಮಾದ ಮೂಲಕ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಹಾಗಾಗಿ ಫ್ಯಾನ್ಸ್ ನಿರೀಕ್ಷೆ ಜಾಸ್ತಿ ಇದೆ. ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾ ಯು/ಎ ಪ್ರಮಾಣಪತ್ರ ಪಡೆದುಕೊಂಡಿದೆ. ಆದರೆ ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಸೂಚಿಸಲಾಗಿದೆ. ಆ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ. ನರೇಂದ್ರ ಮೋದಿ (Narendra Modi) ಅವರ ಒಂದು ಮಾತನ್ನು ಸಿನಿಮಾದಲ್ಲಿ ಸೇರಿಸುವಂತೆ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಸೂಚಿಸಿದೆ ಎಂದು ಹೇಳಲಾಗುತ್ತಿದೆ.
ಸಿನಿಮಾದ ಆರಂಭದಲ್ಲಿ ಕೆಲವು ಸೂಚನೆಗಳನ್ನು ಬಿತ್ತರಿಸಲಾಗುತ್ತದೆ. ಆ ಬಳಿಕ ನರೇಂದ್ರ ಮೋದಿಯವರ ಒಂದು ಮಾತನ್ನು ಸೇರಿಸುವಂತೆ ಚಿತ್ರತಂಡಕ್ಕೆ ತಿಳಿಸಲಾಗಿದೆ. ಆದರೆ ಆ ಮಾತು ಯಾವುದು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಅಲ್ಲದೇ, ‘ಸಿತಾರೆ ಜಮೀನ್ ಪರ್’ ಸಿನಿಮಾದ ಕಥೆಗೂ ನರೇಂದ್ರ ಮೋದಿ ಅವರ ಮಾತನ್ನು ಸೇರಿಸುವುದಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಪ್ರೇಕ್ಷಕರ ಮನದಲ್ಲಿ ಮೂಡಿದೆ.
ಆರ್.ಎಸ್. ಪ್ರಸನ್ನ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಜೆನಿಲಿಯಾ ದೇಶಮುಖ್ ಅವರು ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಆಮಿರ್ ಖಾನ್ ಅವರು ಬಾಸ್ಕೆಟ್ ಬಾಲ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಹೊಸ ನಟರಿಗೆ ಈ ಚಿತ್ರದಲ್ಲಿ ಅವಕಾಶ ನೀಡಲಾಗಿದೆ. ಟ್ರೇಲರ್ ಗಮನ ಸೆಳೆದಿದೆ.
ಬಿಡುಗಡೆಗೂ ಮುನ್ನವೇ ಕೆಲವು ಸೆಲೆಬ್ರಿಟಿಗಳು ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ನೋಡಿದ್ದಾರೆ. ಸುಧಾಮೂರ್ತಿ, ಸಚಿನ್ ತೆಂಡೂಲ್ಕರ್ ಮುಂತಾದವರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಸಚಿನ್ ತೆಂಡುಲ್ಕರ್ ಅವರಿಗೆ ಈ ಸಿನಿಮಾ ತುಂಬಾ ಇಷ್ಟ ಆಗಿದೆ. ಇಡೀ ತಂಡಕ್ಕೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ಆಸಕ್ತಿ ಹೆಚ್ಚುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಮಗಳು, ಸಹೋದರಿ ಮದುವೆ ಆಗಿದ್ದು ಹಿಂದೂಗಳನ್ನೇ; ಲವ್ ಜಿಹಾದ್ ಆರೋಪಕ್ಕೆ ಆಮಿರ್ ಖಾನ್ ಉತ್ತರ
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸೋತ ಬಳಿಕ ಆಮಿರ್ ಖಾನ್ ಅವರು ಒಂದು ಗ್ಯಾಪ್ ತೆಗೆದುಕೊಂಡಿದ್ದರು. ಬಹಳ ಎಚ್ಚರಿಕೆಯಿಂದ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಂಡರು. ‘ಸಿತಾರೆ ಜಮೀನ್ ಪರ್’ ಸಿನಿಮಾಗೆ ಅವರೇ ಬಂಡವಾಳ ಹೂಡಿದ್ದಾರೆ. ಸಿನಿಮಾ ಗೆಲ್ಲಲಿದೆ ಎಂಬ ಭರವಸೆಯಲ್ಲಿ ಅವರಿದ್ದಾರೆ. ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








