Literature : ಅಭಿಜ್ಞಾನ ; ‘ನೆನಪಿಟ್ಟುಕೋ, ಯಾರೇ ಕರೆದ ಹಾಗೆ ಅನಿಸಿದರೂ ತಪ್ಪಿ ಕೂಡ ತಿರುಗಿ ನೋಡಬಾರದು’

Literature : ಅಭಿಜ್ಞಾನ ; ‘ನೆನಪಿಟ್ಟುಕೋ, ಯಾರೇ ಕರೆದ ಹಾಗೆ ಅನಿಸಿದರೂ ತಪ್ಪಿ ಕೂಡ ತಿರುಗಿ ನೋಡಬಾರದು’
ಕಥೆಗಾರ, ವಿಮರ್ಶಕ ನರೇಂದ್ರ ಪೈ

Short Story of Narendra Pai : “ಅಲ್ಲಿಗೆಲ್ಲ ಈಗ ಯಾರು ಕರೆದುಕೊಂಡು ಹೋಗುವವರು ಮಾರಾಯ, ಅಪ್ಪಾಭಟ್ಟರು ಸತ್ತು ಐದು ವರ್ಷವೇ ಆಯಿತು, ಅವರ ಮಕ್ಕಳೆಲ್ಲ ಈಗ ಎಲ್ಲೆಲ್ಲಿಗೋ ಹೋಗಿ ಸೆಟಲ್ ಆಗಿದ್ದಾರೆ. ಒಬ್ಬ ಇದ್ದಾನೆ ಊರಲ್ಲಿ. ಅವನ್ನೇ ಕೇಳಿ ನೋಡೋಕು. ನೀನು ಹೀಗೆ ನಿಂತ ಕಾಲಲ್ಲಿ ಹೋಗ್ತೇನೆಂದರೆ ಆಗ್ಲಿಕ್ಕಿಲ್ಲ ಮಾತ್ರ” ಎಂದುಬಿಟ್ಟ ದೊಡ್ಡಪ್ಪ.

ಶ್ರೀದೇವಿ ಕಳಸದ | Shridevi Kalasad

|

Jan 27, 2022 | 1:45 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡವರ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಕಥೆಗಾರ, ವಿಮರ್ಶಕ ನರೇಂದ್ರ ಪೈ ಅವರ ಕನಸುಗಳು ಖಾಸಗಿ ಕಥಾಸಂಕಲನದ ‘ಭೇಟಿ’ ಕಥೆಯಿಂದ ಆಯ್ದ ಭಾಗ.

*

“ಹೇಗೆ ಹೊರಡಬಹುದೋ ಅಂವ?” ದೊಡ್ಡಪ್ಪ ತನ್ನ ಕೃಶವಾದ ಶರೀರವನ್ನು ಬಗ್ಗಿಸಿ ಹೊರಗಿಣುಕಿ ಕೇಳಿದ. ನಾನು ಮೊಣಕಾಲೂರಿ ಕುಳಿತೇ ಇದ್ದೆ. ಅಷ್ಟು ದೂರದಲ್ಲಿ ಹಣೆ ತುಂಬ ನೆರಿಗೆ ತುಂಬಿ ಅಕ್ಕ ಕುಳಿತಿದ್ದಳು.

ಹೊರಗಿನಿಂದ ಉತ್ತರವಿಲ್ಲ. ಬಹುಶಃ ದೊಡ್ಡಪ್ಪನಿಗೆ ಹೊರಗಿನಿಂದ ಏನೋ ಸನ್ನೆಮಾಡಿರಬೇಕು, ಕಣ್ಣು ಪಿಳಿಪಿಳಿ ಮಾಡುತ್ತ ನಿಂತ. ನಂತರ ನಿಧಾನವಾಗಿ ಬಾಗಿಲಿನ ದಾರಂದವನ್ನೇ ಬಿಗಿಯಾಗಿ ಹಿಡಿದು ನಡುಗುವ ಹೆಜ್ಜೆಯಿಡುತ್ತ ತಾನೇ ಹೊರಗೆ ಹೋದ. ಹೊರಗೆ ತಗ್ಗಿಸಿದ ದನಿಯಲ್ಲಿ ಅಸ್ಪಷ್ಟವಾಗಿ ಏನೋ ಮಾತನಾಡಿಕೊಂಡ ಶಬ್ದವಷ್ಟೇ ಕೇಳಿ ಬರುತ್ತಿತ್ತು. ಚಿಕ್ಕಪ್ಪ, ಅವನ ಮಕ್ಕಳು ಎಲ್ಲ ಇರಬೇಕು ಅಲ್ಲಿ ತುಂಬ ಹೊತ್ತಿನ ನಂತರ ಒಳಬಂದ ದೊಡ್ಡಪ್ಪ, ತೀರಾ ಹತ್ತಿರ ಬಂದು, “ನೀನು ಹೊಟ್ಟೆಗೆ ಏನಾದರೂ ತಗೊಳ್ಳುವುದು ಒಳ್ಳೇದು, ಅಲ್ಲಿ ತುಂಬ ತಡವಾಗಬಹುದು, ದೂರವಿದೆ ಅದು” ಎಂದ. ನಾನು “ಏನೂಬೇಡ, ನಂಗೇನೂ ತಿನ್ನಬೇಕು ಅನಸ್ತಿಲ್ಲ” ಎಂದೆ. ಒಂದು ಕ್ಷಣ ಹಾಗೇ ನಿಂತ ದೊಡ್ಡಪ್ಪ ನಿಧಾನವಾಗಿ ಅಕ್ಕ ಕುಳಿತಲ್ಲಿಗೆ ಹೋದ.

*

ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ಪೈರು ಬೆಳೆದು ನಿಂತಿತ್ತು. ದೂರದಲ್ಲಿ ಎತ್ತರದ ದಿನ್ನೆಗಳು, ಅಲ್ಲಿ ಒಂದೆರಡು ಮರ, ಮೇಯುತ್ತಿರುವ ದನಗಳು ಕಾಣಿಸುತ್ತಿದ್ದವು. ಗದ್ದೆಯ ಅಂಚುಕಟ್ಟಿನ ಉದ್ದಕ್ಕೂ ಭಟ್ಟರ ಹಿಂದೆ ಮಾತಿಲ್ಲದೆ ಸಾಗುತ್ತಿದ್ದೆ. ಮೇಲೆ ಸುಡುವ ಬಿಸಿಲು, ಇನ್ನೆಲ್ಲೋ ಮೋಡದ ನೆರಳು ಹಾಸಿದಂತಿರುವುದು ಕಂಡರೂ ಅದು ನಮಗೆ ಸಿಗಲಿಲ್ಲ. ಗದ್ದೆ ಮುಗಿದದ್ದೇ ಅಡಿಕೆ ಮರ ಹಾಸಿದ ಸಂಕವನ್ನು ಹೆದರುತ್ತಲೇ ದಾಟಿ ಆಚೆ ಸೇರಿಕೊಂಡೆ. ಅಲ್ಲಿಂದ ಏರುಹಾದಿ. ಸಾಕಷ್ಟು ಮರಗಳು ಬೆಳೆದುನಿಂತಿದ್ದರೂ ನಮ್ಮ ಹಾದಿಗೆ ನೆರಳು ಬೀಳುತ್ತಿರಲಿಲ್ಲ. ಎರಡು ದಿನಗಳ ಹಿಂದೆ ನಾನೂ, ಅಕ್ಕ ಇಲ್ಲಿಗೆ ಹೊರಟಾಗಿನಿಂದ ಸರಿಯಾಗಿ ನಿದ್ದೆ, ಆಹಾರವಿಲ್ಲದೆ ಬಳಲಿದ್ದೆ. ಇಲ್ಲಿಗೆ ಒಂದು ಭೇಟಿ ಸಲ್ಲಲೇಬೇಕು ಎಂದು ಯಾರೋ ಒತ್ತಾಯ ಮಾಡಿ ಹೇಳಿದ್ದನ್ನು ಅಕ್ಕ ತುಂಬ ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಬರಲೇಬೇಕಾಯ್ತು. ಬಸ್ಸಿಳಿದ ಮೇಲೂ ಎರಡು ಗಂಟೆಯಷ್ಟು ನಡಿಗೆ, ಹೋಗಲಿ ಎಂದರೆ ಒಂದು ಮರದ ನೆರಳಿಲ್ಲದ ಬೋಳು ಗುಡ್ಡೆ, ಇಲ್ಲವೇ ಗದ್ದೆಗಳ ಸಾಲು. ನಡೆದೂ ನಡೆದು ಇಲ್ಲಿಗೆ ತಲುಪಿದರೆ, “ಅಲ್ಲಿಗೆಲ್ಲ ಈಗ ಯಾರು ಕರೆದುಕೊಂಡು ಹೋಗುವವರು ಮಾರಾಯ, ಅಪ್ಪಾ ಭಟ್ಟರು ಸತ್ತು ಐದು ವರ್ಷವೇ ಆಯಿತು, ಅವರ ಮಕ್ಕಳೆಲ್ಲ ಈಗ ಎಲ್ಲೆಲ್ಲಿಗೋ ಹೋಗಿ ಸೆಟಲ್ ಆಗಿದ್ದಾರೆ. ಒಬ್ಬ ಇದ್ದಾನೆ ಊರಲ್ಲಿ. ಅವನ್ನೇ ಕೇಳಿ ನೋಡ್ಬೇಕು. ನೀನು ಹೀಗೆ ನಿಂತ ಕಾಲಲ್ಲಿ ಹೋಗ್ತೇನೆಂದರೆ ಆಗ್ಲಿಕ್ಕಿಲ್ಲ ಮಾತ್ರ” ಎಂದು ಬಿಟ್ಟ ದೊಡ್ಡಪ್ಪ.

“ಇನ್ನೂ ತುಂಬ ದೂರವಾ” ಎಂದೆ.

“ಇಲ್ಲೇ ಎಲ್ಲೋ ಕಾಣೆ, ನಾನೂ ಬಪ್ಪುದು ಭಾರೀ ಅಪ್ರೂಪ. ಹಾದಿ ತಪ್ಪಿತಾ ಅನ್ನಿಸ್ತು”

“ಅಯ್ಯೋ ಹೌದಾ…!”

“ಇಲ್ಲ, ಹಾಂಗೇನಿಲ್ಲ, ಇಲ್ಲೆ ಎಲ್ಲೊ ಇಪ್ಪುದದು”

ಅಂತೂ ಕೆರೆಯ ಬುಡ ತಲುಪಿದಾಗ ಸಾಕಷ್ಟು ಹೊತ್ತಾಗಿತ್ತು. ಪಾಚಿಗಟ್ಟಿದ ನೀರಿನಲ್ಲೇ ಭಟ್ಟರು ಕಾಲು ತೊಳೆದುಕೊಂಡರು. ನಾನು ಇಳಿಯಲು ಹೋದರೆ, “ಮಾರಾಯ್ರೆ, ನೀವು ಬರಬೇಡಿ, ಇದು ಎಲ್ಲಿ ಜಾರ್ತದೊ  ಹೇಳಲಾಗ, ನೀವು ಅಲ್ಲೆನಿಲ್ಲಿ” ಎಂದರು.

ಕುರುಚಲು ಕಾಡು ಮುಗಿದು ಗದ್ದೆ ಬಯಲು ತೊಡಗಿತ್ತು. ಒಂದು ಗದ್ದೆಯ ನಟ್ಟನಡುವೆ ಸುಮಾರು ಏಳೆಂಟು ಮೆಟ್ಟಿಲುಗಳ ಎತ್ತರದ ಪ್ರಾಂಗಣದ ಮೇಲೆ ತೀರಾ ಪುಟ್ಟ ದೇವಸ್ಥಾನ. ಭಟ್ಟರು ಮೆಟ್ಟಿಲು ಹತ್ತಿ, ಕಿಲುಬು ಹಿಡಿದ ಚಿಲಕ ಸರಿಸಿ ಕಿರ್ರೆನ್ನುವ ಬಾಗಿಲನ್ನು ಅಗಲಕ್ಕೆ ತೆರೆದು “ಬನ್ನಿ ಬನ್ನಿ” ಎಂದು ಕರೆದರು.

ನಾನೂ ಮೆಟ್ಟಿಲು ಹತ್ತಿ ಮೇಲೆ ಹೋದೆ. ಒಳಗೆ ಕವಿದ ಕತ್ತಲಲ್ಲಿ ಪುಟ್ಟ ದೇವರ ಮಂಟಪ, ಅಲ್ಲಿ ಇಂಥದೇ ಎಂದು ವಿವರಿಸಲಾಗದ ಆಕೃತಿಯ ಶಿಲೆ. ಅದರ ಮೇಲೆ ಕುಂಕುಮ, ಅರಿಶಿನ, ಬಳೆಗಳು, ಕೆಂಪು ಬಟ್ಟೆ, ಒಣಗಿದ ಹೂವುಗಳು.

ಸ್ಥಳಶುದ್ದಿ, ಒಂದು ದೀಪ, ಕ್ಷಣಕಾಲ ಪ್ರಾರ್ಥನೆ. ಹುಬ್ಬಿನಲ್ಲೇ ಹೊರಡು ಎಂದು ಭಟ್ಟರು ಎದ್ದರು.

Abhijnana excerpt of Kannada Short Story Bheti from Kanasugalu Khaasagi by Critic Narendra Pai Published by Manohara Granthamala

ಕನಸುಗಳು ಖಾಸಗಿ

ಹೊಸಿಲು ದಾಟುತ್ತಲೇ ಭಯವಾಗುವಷ್ಟು ಬಲ ಹಾಕಿ ರಟ್ಟೆ ಹಿಡಿದು “ನೆನಪಿಟ್ಟುಕೊ, ಯಾರೇ ಕರೆದ ಹಾಗೆ ಅನಿಸಿದರೂ ತಪ್ಪಿ ಕೂಡ ತಿರುಗಿ ನೋಡಬಾರದು. ನಿನ್ನ ಮುಂದೆ ನಾನಿರ್ತೇನೆ. ನನ್ನ ಬೆನ್ನನ್ನೇ ನೋಡುತ್ತ ಸರಸರ ಬಂದು ಬಿಡಬೇಕು. ನಿಲ್ಲಬೇಡ, ಅಲ್ಲಿ ನಿನ್ನ ಅಕ್ಕ ಕಾಯ್ತಾ ಇದ್ದಾಳೆ ನೆನಪಿಟ್ಕೋ!’’ ಎಂದು ರಟ್ಟೆ ಹಿಡಿದ ಜಾಗವನ್ನೇ ಮತ್ತೊಮ್ಮೆ ಬಿಗಿಯಾಗಿ ಹಿಂಡಿ ಕೈಬಿಟ್ಟರು. ಅದೇ ಯಾರೋ ಕರೆದರೋ ಎಂಬಂತೆ ಒಮ್ಮೆಗೇ ದಾಪುಗಾಲು ಹಾಕಿ ಕೆರೆಯ ಕಡೆ ನಡೆದೇ ಬಿಟ್ಟರು. ಹಿಂದೆಯೇ ನಾನು ಹಿಂದೆಯೂ ಕೆಲವು ಬಾರಿ ನನಗೆ ಹಿಂದಕ್ಕೆ ತಿರುಗಿ ನೋಡದೇ ನಡೆಯುವ ಆದೇಶ ಸಿಕ್ಕಿದ್ದಿದೆ. ಅದೇನೂ ಹೊಸದಲ್ಲ. ಆದರೆ ಎರಡು ಹೆಜ್ಜೆ ಇಟ್ಟಿದ್ದೆನೋ ಇಲ್ಲವೋ, ಅತ್ಯಂತ ಸನಿಹದಿಂದ ನನ್ನಮ್ಮ ಎಷ್ಟೊಂದು ಆರ್ತಳಾಗಿ ನನ್ನ ಹೆಸರು ಹಿಡಿದು ಕರೆದಳೆಂದರೆ ನಾನು ಅರೆಕ್ಷಣ ಹೆಜ್ಜೆ ತಡೆದೆ. ಭಟ್ಟರು ದೂರವಾದರು.

ಬಬಾ…

ಸಾವರಿಸಿಕೊಂಡು ಮತ್ತೆ ಹೆಜ್ಜೆ ಇಡಲಿಕ್ಕಿಲ್ಲ, ನನ್ನ ಕೊನೆಯ ಅಕ್ಕ. ಅನುಮಾನವೇ ಇಲ್ಲ, ಆ ಸ್ವರ ಅಷ್ಟೊಂದು ಪರಿಚಿತ ನನಗೆ. ಮತ್ತೆ ಎರಡು ಕ್ಷಣದಲ್ಲಿ ಅಮ್ಮಿ.

ಇನ್ನು ಸಾಧ್ಯವೇ ಇಲ್ಲ ನನ್ನಿಂದ ಎಂದು ಎದ್ದು ನಿಂತೆ. ನನ್ನ ಕಣ್ಣಿಂದ ದಳದಳನೆ ಕಣ್ಣೀರು ಸುರಿಯುತ್ತಿತ್ತು. ಪುಟ್ಟ ಅಮ್ಮಿ ಕೂಡಾ ನನ್ನ ಗುರುತು ಹಿಡಿದು ಮಾಮಾ ಎಂದು ಅಷ್ಟು ಪ್ರೀತಿಯಿಂದ ಕರೆಯುತ್ತಿದ್ದಾಳೆ. ಹೇಗೆ ಹೆಜ್ಜೆ ಇಡಲಿ?

ಸೌಜನ್ಯ : ಮನೋಹರ ಗ್ರಂಥಮಾಲಾ , ಧಾರವಾಡ

*

ಇದನ್ನೂ ಓದಿ : Literature : ಅಭಿಜ್ಞಾನ ; ನನ್ನ ಮನ್ಯಾಗ ಸಿದಿಗಿ ಕಟ್ಟೂದಿಲ್ಲ, ಚಟ್ಟಕ್ಕ ಗಳಾ ಮಾರೂದಿಲ್ಲ, ಕಸಬರಿಗಿ ಕೇಳ್ರಿ, ಲಗ್ನದ ಉಂಡಿ ಬುಟ್ಟಿ ಕೇಳ್ರಿ

Follow us on

Most Read Stories

Click on your DTH Provider to Add TV9 Kannada