Poetry : ಅಚ್ಚಿಗೂ ಮೊದಲು ; ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಮತ್ತು ‘ಬಣ್ಣಗಳು ಮಾತಾಡಲಿ’ ಕವನ ಸಂಕಲನಗಳು ಸದ್ಯದಲ್ಲೇ ಓದಿಗೆ

Poetry : ಅಚ್ಚಿಗೂ ಮೊದಲು ; ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಮತ್ತು ‘ಬಣ್ಣಗಳು ಮಾತಾಡಲಿ’ ಕವನ ಸಂಕಲನಗಳು ಸದ್ಯದಲ್ಲೇ ಓದಿಗೆ
ಲೇಖಕರಾದ ಬನವಾಸಿ ಶ್ರೀಧರ ಜಿ.ಸಿ (ಫಕೀರ) ಮತ್ತು ಮಲರ್ ವಿಳಿ ಕೆ.

Writing : ‘ಫಕೀರರ ಬರವಣಿಗೆಯಲ್ಲಿ ವಸ್ತುನಿಷ್ಠ ಚಿಂತನೆಯನ್ನು ಕಾಣಬಹುದು. ಕಾವ್ಯದ ಪ್ರೀತಿಯೊಂದಿಗೆ ಸಾಮ ಮಾರ್ಗದ ಮೂಲಕ ಮನುಷ್ಯ ಬದುಕಿಗೂ ಸಮಾಜಕ್ಕೂ ಸ್ವಾಸ್ಥ್ಯ ತರುವ ವಿವೇಕ ತುಂಬಿದ್ದರೂ ಎಲ್ಲಿಯೂ ಕ್ರಾಂತಿಕಾರಕ ನುಡಿಗಳಿಲ್ಲದ ರೀತಿಯನ್ನು ಕಾಣಬಹುದು.’ ಡಾ. ಮಲರ್ ವಿಳಿ ಕೆ.

ಶ್ರೀದೇವಿ ಕಳಸದ | Shridevi Kalasad

|

Jan 16, 2022 | 12:45 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ಪೂರ್ಣಚಂದ್ರನಿಗೆ ಮುಖವಾಡವಿಲ್ಲ (ಕವನಗಳು)
ಲೇ : ಫಕೀರ (ಶ್ರೀಧರ ಬನವಾಸಿ ಜಿ. ಸಿ.)
ಪುಟ : 120
ಬೆಲೆ : ರೂ. 120
ಮುಖಪುಟ ವಿನ್ಯಾಸ : ಸೌಮ್ಯಾ ಕಲ್ಯಾಣ್​ಕರ್
ಪ್ರಕಾಶನ : ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್​, ಬೆಂಗಳೂರು

*

ಕೈಗೆ ಸಿಕ್ಕಿದ್ದೆಷ್ಟು?
ಒಳಗೆ ದಕ್ಕಿದ್ದೆಷ್ಟು?
ಬಯಸಿದ್ದು ಬೆಟ್ಟದಷ್ಟು!
ಸಿಕ್ಕಿದ್ದು ಹಿಡಿಯಷ್ಟು!

ಇವು ಫಕೀರ ಅಂಕಿತನಾಮದ ಶ್ರೀಧರ ಬನವಾಸಿ ಅವರ ಕವಿತೆಯ ಕೆಲವು ಸಾಲುಗಳು. ಅವರ ಕಾವ್ಯವನ್ನು ಈ ನಾಣ್ನುಡಿ ಮಾದರಿಯ ಮಾತುಗಳ ಮೂಲಕ ಅರಿಯಬಹುದು. ಆದರೆ, ಸಿಕ್ಕಿದ್ದು ಮತ್ತು ದಕ್ಕಿದ್ದು ಎರಡು ತುದಿಗಳಾದರೆ ಅವುಗಳ ನಡುವಿನ ತೊಳಲಾಟವೇ ಕಾವ್ಯದ ದರ್ದು, ದಂದುಗ. ಈ ಅಂತರದ ಬಗ್ಗೆ ಶ್ರೀಧರರು ನಿಗಾವಹಿಸಿರುವುದು ಅವರ ಕಾವ್ಯ ಚಿಂತನೆಯ ವಿಶೇಷ. ತಾನು, ಹೆಣ್ಣು, ನಿಸರ್ಗ, ಮುಂತಾದ ಲಾಗಾಯ್ತಿನ ಕಾವ್ಯದ ವಸ್ತುಗಳ ಬಗ್ಗೆ ಶ್ರೀಧರರು ಕವಿತೆ ಬರೆಯುತ್ತಿದ್ದಾರೆ. ನವೋದಯ, ನವ್ಯ, ಬಂಡಾಯ ವಿವಾದಗಳ ತಂಟೆಗೆ ಹೋಗದೆ ಇರುವುದರಿಂದ ಅವರಿಗೆ ಅನುಭವದ್ರವ್ಯಗಳು ಬೇರೆ ರೀತಿಯಲ್ಲೇ ಕಾಣುತ್ತಿವೆ. ಇದೇ ಇವರ ಕಾವ್ಯದ ಭಿನ್ನತೆಯಾಗಿದೆ.

ಡಾ. ಎಚ್.ಎಸ್. ಶಿವಪ್ರಕಾಶ್, ಕವಿ, ನಾಟಕಕಾರ

ಫಕೀರ ಅವರ ಬರವಣಿಗೆಯಲ್ಲಿ ವಸ್ತುನಿಷ್ಠ ಚಿಂತನೆಯನ್ನು ಕಾಣಬಹುದು. ಕಾವ್ಯದ ಪ್ರೀತಿಯೊಂದಿಗೆ ಸಾಮ ಮಾರ್ಗದ ಮೂಲಕ ಮನುಷ್ಯ ಬದುಕಿಗೂ ಸಮಾಜಕ್ಕೂ ಸ್ವಾಸ್ಥ್ಯ ತರುವ ವಿವೇಕ ತುಂಬಿದ್ದರೂ ಎಲ್ಲಿಯೂ ಕ್ರಾಂತಿಕಾರಕ ನುಡಿಗಳಿಲ್ಲದ ರೀತಿಯನ್ನು ಕಾಣಬಹುದು. ಇಲ್ಲಿ ಕವಿ ತನ್ನ ಸುತ್ತಲಿನ ವಿದ್ಯಮಾನಗಳನ್ನು ಅವಲೋಕಿಸುವ ರೀತಿ ಅದರ ಬಗ್ಗೆ ತಾಳುವ ನಿಲುವು, ಅಂತರ್ದೃಷ್ಟಿ, ವಿಶಿಷ್ಟ ಆಲೋಚನಾಕ್ರಮ ಢಾಳಾಗಿ ಕಾಣುತ್ತದೆ ಹಾಗೂ ಕಾವ್ಯ ರಸಿಕರಿಗೆ ಚಿಂತಿಸಲು ಪ್ರೇರೇಪಿಸುತ್ತದೆ. ಸಹೃದಯರ ಹೃದಯವನ್ನು ತಟ್ಟುತ್ತದೆ. ಇವರ ಅನೇಕ ಕವನಗಳು ಅದು ಪ್ರೇಮವಿರಲಿ, ಪರಿಸರ ಪ್ರಜ್ಞೆಯಾಗಲಿ, ರಾಜಕೀಯವಾಗಲಿ ಸಮಾಜದ ಒಳಿತಿಗಾಗಿ ಪ್ರಾಮಾಣಿಕತನ, ಸತ್ಯ, ಪ್ರೀತಿ ಹಾಗೂ ಒಳಿತಿನ ದಾರಿಯಲ್ಲಿ ಸಾಗಬೇಕು ಎಂಬುದನ್ನು ಸಾರುತ್ತವೆ. ಓದುಗರ ಮನದ ಒಳದನಿಯಾಗಿ ಇವರ ಕವಿತೆಗಳು ಪುಟಿದೇಳುತ್ತವೆ. ದೈನಂದಿನ ಬದುಕನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ ಸಾಮಾಜಿಕ ಕಾಳಜಿಯಿಂದಲೇ ಬರೆದಿರುವುದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಬಿತ್ತಿದ ಬೆಂಕಿ ಸಂಕಲನ ಇಂತಹ ಹಲವು ವೈಶಿಷ್ಟತೆಯನ್ನೊಳಗೊಂಡ ಕೃತಿ.

ಡಾ. ಮಲರ್ ವಿಳಿ ಕೆ. ಅನುವಾದಕಿ

*

ತೂತು ಮಡಿಕೆಯ ದ್ರವ್ಯ

ಕಡಲು ಉರಿವ ಚಿತೆಯು
ಮರಳ ದೋಣಿಯ ಪಯಣವು
ಉಪ್ಪು ನೀರಿನ ಋಣವು
ಒಲವಿನ ಬದುಕು ಉಸಿರುವವರೆಗೂ

ನಿಂತ ನೆಲವು
ಮುಳ್ಳು ಹಾಸಿಗೆಯ ರೂಪಕವು
ಬಯಲು ಸೀಮೆಯ ಬಿರು ಬಿಸಿಲಿಗೆ ಸಮವು
ಕಾಡು ಕೊತ್ತಣ ಕ್ರೂರ ಜಂತುಗಳ ಜನನವು
ಅಂತರಂಗವಿಲ್ಲದ ಬದುಕು
ಸಾಗುತ್ತಿದೆ ಕಣ್ಣೀರ ನೆಪದಲಿ...

ಕಾಲ ಧರ್ಮವೆಂಬುದು ನೆಪವಷ್ಟೇ!
ಹಸಿದು ಹುಲ್ಲು ತಿನ್ನುವ ಬದಲು
ಮಾಂಸಭಕ್ಷಣೆಯ ವರದಾನವು
ತಿನ್ನುವ ಆಹಾರದ ಮೇಲೆ ನೂರೆಂಟು ಜಾತಿಗಳು

ಬಾನಿಗಿಲ್ಲದ ಅವಕಾಶವು
ನಾಲ್ಕುಗೋಡೆಗಳ ಮಧ್ಯೆ ನಡೆದಿರಲು
ಸಂಸಾರವೆಂಬುದು ಶಿಕ್ಷೆಯೋ ವರವೋ
ಒಲವು ಗೆಲವಿನ ಸಮಭಾವದ ಸಿದ್ಧಿಯಲಿ

ಸುಖ ಸಂಸಾರಕೆ ಹತ್ತು ಹಲವು ಮುಖಗಳು
ಒಳಗಿನ ವ್ಯಕ್ತಿ ಮಾತ್ರ ಸತ್ಯ!
ಸುತ್ತಣದ ಮುಖಚರ್ಯೆಗಳ ಭೇಟಿಯು
ತೂತು ಮಡಿಕೆಯೊಳಗಿನ ದ್ರವ್ಯದಂತೆ...

*

Acchigoo Modhalu excerpt of Kannada Poetry Poornachandranige Mukhavaadavilla by Fakeera Banavaasi Shridhar

ಫಕೀರರ ಕೃತಿಗಳು

ಕನ್ನಡದ ಹೊರತಾಗಿ ಇತರ ಭಾಷೆಯ ಕವಿತೆಗಳನ್ನು ಓದಿ ದಿನಗಟ್ಟಲೇ ಧ್ಯಾನಿಸಿದ್ದೇನೆ. ಅನುವಾದಿಸಿದ್ದೇನೆ. ಯಾವುದೇ ಭಾಷೆಯ ಕವಿತೆ ಒಂದು ನಿಲುವಿಗೆ ಹೆಚ್ಚು ಬದ್ಧವಾಗಿರುವುದಕ್ಕಿಂತ ಸಾರ್ವಕಾಲಿಕ ವಿಚಾರವನ್ನೊಳಗೊಂಡ ಕವಿತೆಗಳೇ ಹೆಚ್ಚು ನನ್ನನ್ನು ಕಾಡಿವೆ. ಒಟ್ಟಾರೆಯಾಗಿ ಸದ್ಯದ ಕೊರೊನಾ ಪರಿಸ್ಥಿತಿ ಮತ್ತು ಇಂದಿನ ಕಾವ್ಯಸ್ಫರ್ಧೆಯ ಭರಾಟೆಯ ಸದ್ದುಗದ್ದಲದ ನಡುವೆ ಮೌನಕ್ಕೆ ಶರಣಾಗಿ ಕಾವ್ಯದ ಧ್ಯಾನದಲ್ಲಿ ಮಗ್ನರಾಗುವುದು ನನ್ನನ್ನು ಸೇರಿಕೊಂಡಂತೆ ಅನೇಕ ಸೃಜನಶೀಲ ಲೇಖಕರಿಗೆ ಸವಾಲಾಗಿರಬಹುದು ಎಂದು ನಾನು ಭಾವಿಸುವೆ. ಕಾವ್ಯದ ಚೌಕಟ್ಟು, ಅದರ ಅಂತರಂಗ, ವಿಸ್ತಾರತೆ, ವಸ್ತು ವಿಷಯ, ಅದರ ಪ್ರಚುರಪಡಿಸುವಿಕೆ ಇಂತಹ ಹಲವು ವಿಚಾರಗಳಲ್ಲಿ ನನ್ನ ಹಾಗೂ ಕೆಲವು ಕವಿಗಳ ಅಭಿಮತದ ವಿಚಾರಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಒಟ್ಟಾರೆಯಾಗಿ ಕಾವ್ಯದ ಶರಧಿಯಲ್ಲಿ ನಾವೆಲ್ಲಾ ಬೇರೆ ಬೇರೆ ದೋಣಿಗಳಲ್ಲಿ ಸಾಗುವ ಪಯಣಿಗರೇ ಆಗಿದ್ದೇವೆ ಎನ್ನಿಸುತ್ತದೆ.

ಶ್ರೀಧರ ಬನವಾಸಿ (ಫಕೀರ), ಕವಿ, ಲೇಖಕ 

*

ಕೃತಿ : ಬಣ್ಣಗಳು ಮಾತಾಡಲಿ (ಅನುವಾದಿತ ಕವನಗಳು)
ತಮಿಳು : ಪಿಚ್ಚಿನಿಕ್ಕಾಡು ಇಳಂಗೋ
ಕನ್ನಡಕ್ಕೆ : ಡಾ. ಮಲರ್ ವಿಳಿ ಕೆ. ಮತ್ತು ದಿವ್ಯದರ್ಶಿನಿ
ಪುಟ : 160
ಬೆಲೆ : ರೂ. 160
ಮುಖಪುಟ ವಿನ್ಯಾಸ : ಸೌಮ್ಯಾ ಕಲ್ಯಾಣ್​ಕರ್
ಪ್ರಕಾಶನ : ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್​, ಬೆಂಗಳೂರು

*

ಈ ಕೃತಿಯಿಂದ ಡಾ. ಮಲರ್​ ವಿಳಿ ಕೆ. ಅನುವಾದಿಸಿದ ಎರಡು ಕವನಗಳು ಇಲ್ಲಿವೆ.

ಅಶರೀರವಾಣಿ

“ಈ ಮನುಷ್ಯರು...
ಮುಂದೊಂದು
ಹಿಂದೊಂದು
ಮುಖವಾಡದ ಗೋಸುಂಬೆಗಳು”
ಹೀಗೆ ಒಬ್ಬ ಕವಿ
ಕನಲಿದನು

“ಈ ಮನುಷ್ಯರು
ನಯವಂಚಕರು
ನರಿಬುದ್ಧಿಯ ಗುಂಪುಗಳು”

ಮತ್ತೊಬ್ಬ ಕವಿ
ಚೆನ್ನಾಗಿ ಜಾಡಿಸಿದನು

“ಇವರನ್ನು ನಂಬೋದಕ್ಕಿಂತ
ಯಮನನ್ನೇ ನಂಬಬಹುದು”
ವಿರಕ್ತಿಯ ಅಂಚಿನಲ್ಲಿ
ಬಿಕ್ಕಿದನು
ಮಗದೊಬ್ಬ ಕವಿ
ಹೊಟ್ಟೆಕಿಚ್ಚಿನಿಂದ
ಉದ್ರೇಕಗೊಳ್ಳುವವರು
ಇವರ ಹಾಗೆ
ಯಾರೂ ಇಲ್ಲ”
ಹೀಗೆ ಉದ್ರೇಕಗೊಂಡವನೂ
ಒಬ್ಬ ಕವಿಯೇ!

“ಏಡಿಗಳಾಗಿ
ಏರೆತ್ತರಕ್ಕೇರದಂತೆ
ನಂಜಾಗಿ
ಬಾಳ ಬಿಡದಂತೆ
ತಾಪವಾಗಿ ಕುದಿದು
ಬೆವತು ಒಸರುವ
ಇವರುಗಳು
ಮನುಷ್ಯರಾ?”
ಹೀಗೆಯೇ…..
ಎಲ್ಲ ಕವಿಗಳೂ
ಈ ಮನುಕುಲವನ್ನು
ಮಾತಿನ ಚಾಟಿಯಲಿ ಜಾಡಿಸಿದರು

ಆದರೆ
ನನ್ನ ಕಿವಿಗೊಂದು ಸಂಗತಿ
ಗಾಳಿಯಂತೆ ಬಂತು
ಇವೆಲ್ಲಕ್ಕೂ
ವಾರಸುದಾರರು
ಮನುಷ್ಯರಲ್ಲ
ಈ ಕವಿಗಳೇ!

ಹೌದು
ನನ್ನ
ಒಳ ಮನದ
ಆಗಸದಲ್ಲಿ
ಹಾಗೆಂದೇ
ಅಶರೀರವಾಣಿ
ಕೇಳಿಸಿತು

*

ಕಾಲ

ಪ್ರತಿ ಬಾರಿಯೂ
ಹುಟ್ಟುತ್ತಿದೆ
ಹುಟ್ಟಿದೆ
ಮತ್ತೆ ಮತ್ತೆ
ಹುಟ್ಟುತ್ತದೆ

ಇದು
ಕಾಲವ ವಿಂಗಡಿಸುವ
ಕಾರ್ಯ

ಕಾಲ
ನಿದ್ರಿಸಿದ್ದೂ ಇಲ್ಲ
ಎಚ್ಚೆತ್ತದ್ದೂ ಇಲ್ಲ

ಕಾಲ
ವಾಯುವಾಗಿ
ಬಾನಾಗಿ
ಬಾಳುತ್ತಿದೆ

ಕಾಲದ ಕಾಲುಗಳಲ್ಲಿ
ನೂಪುರವ ತೊಡಿಸುವುದೂ
ಕಾಲದ ಶಿರದಲ್ಲಿ
ಮುಕುಟವನು ತೊಡಿಸುವುದೂ
ನಾವೇ

ಕಾಲದ ಹಿರಿಮೆ
ನಮ್ಮ ಕರದಲಿ
ಕಿರಿಮೆಯೂ ಹಾಗೆಯೇ

ಅಲ್ಲದಿದ್ದಲ್ಲಿ
ಶಿಲಾಯುಗವೂ
ಸುವರ್ಣ ಯುಗವೂ ಉಂಟೇ?

ಕಾಲ
ಪಥವಾಗಿದೆ
ನಡೆದು ಹೋಗೋಣ

ಕಾಲ
ಬಾನಾಗಿದೆ
ತಾರೆಗಳಾಗೋಣ

ಕಾಲ
ನದಿಯಾಗಿ ಹರಿವುದು
ಪೈರು ಬೆಳೆಸೋಣ

ಕಾಲ
ಕಡಲೆಂಬುದಾದರೆ
ಮುತ್ತುಗಳೂ ಹವಳಗಳೂ
ಉಸಿರು ಬಿಗಿ ಹಿಡಿಯುವುದು ನಾವೇ

ಕಾಲದಲ್ಲಿ ನಾಟಿ ನೆಟ್ಟರೂ
ನಮ್ಮನ್ನು
ಕಾಲವೇ ಕೊಯ್ಲಿಡುವುದು

ಕಾಲ ಉಡುಗೊರೆ
ಕಾಲ ನಿಶ್ಚಿತ ಠೇವಣಿ
ಕಾಲ ಚಿನ್ನದ ಗಣಿ
ಕಾಲ ಸಂಚಾರಿ ವಾಹನ

ಕಾಲ-ಸೆರೆಯೆಂಬುದಾದರೆ
ಮುರಿದು ಹಾಕೋಣ
ಕಾಲ- ಬಲೆಯೆಂಬುದಾದರೆ
ಹರಿದು ಹಾಕೋಣ

ಕಾಲ ವಿಧಿಯೆಂಬುದಾದರೆ
ಗೆದ್ದು ತೋರಿಸೋಣ
ಅದಕ್ಕಾಗಿ ಇಂದೇ
ಶಂಕುಸ್ಥಾಪನೆ ಮಾಡೋಣ

*

(ಈ ಪುಸ್ತಕಗಳ ಖರೀದಿಗೆ ಸಂಪರ್ಕಿಸಿ : 9739561334)

ಶ್ರೀಧರ ಬನವಾಸಿ ಜಿ. ಸಿ (ಫಕೀರ) : ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯವರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಜೊತೆಗೆ ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ ಅಧ್ಯಯನ ಮಾಡಿದ್ದಾರೆ. ಹಲವು ವರ್ಷಗಳ ಕಾಲ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ವಿದ್ಯಾರ್ಥಿ ದೆಸೆಯಿಂದಲೆ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡ ಇವರ ಕೆಲವು ಕಥೆಗಳು ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಇವರ ಕಥೆಗಳು ನಾಟಕ ಮತ್ತು ದೃಶ್ಯ ಮಾಧ್ಯಮಕ್ಕೂ ಅಳವಡಿಸಲ್ಪಟ್ಟಿವೆ. ಹಲವು ಕವಿತೆಗಳು ಇತರ ಭಾಷೆಗಳಿಗೂ ಅನುವಾದಗೊಂಡಿವೆ. 2018 ಮತ್ತು 2019ರಲ್ಲಿ ನವದೆಹಲಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡ ‘ಯುವಸಾಹಿತಿ: ದಿ ನ್ಯೂ ಹಾರ್ವೆಸ್ಟ್’ ಕಾರ್ಯಕ್ರಮದಲ್ಲಿ ಕಥಾವಾಚನ ಮತ್ತು ಸಂವಾದದಲ್ಲಿ ಭಾಗಿಯಾಗಿದ್ದಾರೆ. ಇವರ ‘ಬೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಕುವೆಂಪು ಪ್ರಶಸ್ತಿ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ಸೇರಿದಂತೆ ಒಂಬತ್ತು ಪ್ರಶಸ್ತಿಗಳು ಲಭಿಸಿವೆ.

ಕಥಾಸಂಕಲನ: ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ, ಬ್ರಿಟಿಷ್ ಬಂಗ್ಲೆ, ಕವನ ಸಂಕಲನ: ತಿಗರಿಯ ಹೂಗಳು, ಬಿತ್ತಿದ ಬೆಂಕಿ, ಪೂರ್ಣಚಂದ್ರನಿಗೆ ಮುಖವಾಡವಿಲ್ಲ. ಕಾದಂಬರಿ: ಬೇರು, ಜೀವನ ಕಥನ: ವೈಷ್ಣವ ಸಂತರು. ನಾಟಕ : ವೃಕ್ಷಮಾತೆ ತಿಮ್ಕಕ್ಕ. ಸಂಪಾದನೆ: ಅಪರೂಪದ ಕಥೆಗಾರ (ಸಂಪುಟ-೧ :ವೀರಭದ್ರರ ಸಮಗ್ರ ಕಥಾಸಾಹಿತ್ಯ ಮತ್ತು ಸಾಹಿತ್ಯಿಕ ಒಳನೋಟಗಳು), ಅಪರೂಪದ ಕಥೆಗಾರ(ಸಂಪುಟ-೨ : ವೀರಭದ್ರರು ಅನುವಾದಿಸಿದ ತೆಲುಗು ಶ್ರೇಷ್ಠ ಕಥೆಗಳು), ಅಗ್ನಿಶಿಖೆ (ಎಂ.ಎನ್.ವ್ಯಾಸರಾವ್ ಸಮಗ್ರ ಕವಿತೆಗಳು) ಪುಷ್ಟಗಂಧಿ (ಎಂ.ಎನ್. ವ್ಯಾಸರಾವ್ ಸಮಗ್ರ ಕಥೆಗಳು)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ನಾಗೇಶ ಹೆಗಡೆ ಕೃತಿ ಇಂದು ಬಿಡುಗಡೆ

Follow us on

Related Stories

Most Read Stories

Click on your DTH Provider to Add TV9 Kannada