New Book : ಅಚ್ಚಿಗೂ ಮೊದಲು ; ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ನಾಗೇಶ ಹೆಗಡೆ ಕೃತಿ ಇಂದು ಬಿಡುಗಡೆ

Journalist : ‘ಈ ಸಂಕಲನದ ಶೀರ್ಷಿಕೆಯಲ್ಲಿ "ನಡು ಬಾಗದ ಪತ್ರಕರ್ತ' ಎಂದಿದ್ದನ್ನು ನೀವು ತುಸು ಬದಲಿಸಿಕೊಂಡು "ನಡುಭಾಗದ" ಎಂದು ಓದಿಕೊಂಡರೂ ಆದೀತು. ಈಚಿನ ದಿನಗಳಲ್ಲಿ ಬಲಭಾಗದವರು ಮತ್ತು ಎಡಭಾಗದವರು ಎಂಬ ದ್ವಿಮಾನ ಪದ್ಧತಿ ಬಂದಿದ್ದರಿಂದ ಮಧ್ಯಭಾಗಕ್ಕೆ ನಿಂತಿರುವವ ನಾಲಾಯಕ್ ಎಂಬಂತಾಗಿದೆ.’ ನಾಗೇಶ ಹೆಗಡೆ

New Book : ಅಚ್ಚಿಗೂ ಮೊದಲು ; ‘ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ’ ನಾಗೇಶ ಹೆಗಡೆ ಕೃತಿ ಇಂದು ಬಿಡುಗಡೆ
ಪತ್ರಕರ್ತ, ಲೇಖಕ ನಾಗೇಶ ಹೆಗಡೆ
Follow us
ಶ್ರೀದೇವಿ ಕಳಸದ
|

Updated on:Jan 09, 2022 | 2:07 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

* ಕೃತಿ : ನಡು ಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ (ಪ್ರಬಂಧಗಳು) ಲೇಖಕರು : ನಾಗೇಶ ಹೆಗಡೆ ಪುಟ : 268 ಬೆಲೆ : ರೂ. 240 ಪ್ರಕಾಶನ : ಭೂಮಿ ಬುಕ್ಸ್​, ಬೆಂಗಳೂರು

*

ಈ ಕೃತಿ ಈ ದಿನ (ಭಾನುವಾರ) ಸಂಜೆ 5 ಗಂಟೆಗೆ ಆನ್​ಲೈನ್​ ಮೂಲಕ ಬಿಡುಗಡೆಯಾಗಲಿದೆ.

*

ಅಜ್ಞಾನಸಾಗರದ ಆಳ ಅಗಲಗಳನ್ನು ಅರಿಯಲೆಂದೇ “ಅಜ್ಞಾನಾಲಜಿ” ಎಂಬ ಜ್ಞಾನಶಾಖೆ ಉಗಮವಾಗಿದೆ ಗೊತ್ತೆ? ಜಗತ್ತಿನ 352 ‘ಸಾವಿನಂಚಿನ ಭಾಷೆ’ಗಳಲ್ಲಿ ನಿಕರಾಗುವಾ ದೇಶದ ‘ರಾಮಾ’ ಭಾಷೆ ಕೂಡ ಒಂದಾಗಿತ್ತು. ಈಗ ಅದನ್ನು ಅಳಿವಿನ ಪ್ರಪಾತದಿಂದ ಮೇಲಕ್ಕೆತ್ತಿದ್ದಾರೆ, ಅದೆಂಥ ಪಾತಾಳಗರಡಿ ಹಾಕಿ ಎತ್ತಿರಬಹುದು? ಆರು ಕೋಟಿ ವರ್ಷಗಳ ಹಿಂದೆ ತಾಂಜಾನಿಯಾ ದೇಶ ಭಾರತದ ಜೊತೆ ಬೆಸೆದುಕೊಂಡಿತ್ತು. ಅಲ್ಲಿನ ಈಗಿನ ಜನರೂ ಪಿಲಾವ್ ತಿನ್ನುತ್ತಾರೆ, ನಮಗೂ ಇಲ್ಲಿ ಪಲಾವ್ ಅಂದರೆ ಇಷ್ಟ; ಏನಿದ್ದೀತು ಸಂಬಂಧ? ಜಗತ್ತಿನಲ್ಲೇ ಅತಿ ಹೆಚ್ಚು ಶೇಕಡಾವಾರು ನೀರಾವರಿ ಪ್ರದೇಶವುಳ್ಳ ಪಂಜಾಬಿನಲ್ಲೇ ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳಿರುವುದೇಕೆ? ತಮ್ಮೂರಿಗೆ ಟ್ಯಾಂಕರ್‌ಗಳಲ್ಲಿ ನೀರು ತರಿಸಿಕೊಳ್ಳುತ್ತಿದ್ದ ಮಹಾರಾಷ್ಟ್ರದ ಗ್ರಾಮವೊಂದು ಈಗ ನಗರದ ಜನರಿಗೆ ತಾನೇ ಕೋಟಿಗಟ್ಟಲೆ ಟ್ಯಾಂಕರ್ ನೀರನ್ನು ಉಚಿತ ಕೊಡುವುದಾಗಿ ಘೋಷಿಸಿತು ಹೇಗೆ? ಇಂತಹ ವಿಶಿಷ್ಟ ಕಥನಮಾಲಿಕೆಗಳ ಜೊತೆಜೊತೆಗೇ ಪತ್ರಕರ್ತ ನಾಗೇಶ ಹೆಗಡೆ ತಾನು ಹೇಗೆ ‘ಗೆರಿಲ್ಲಾ ಜರ್ನಲಿಸ್ಟ್’ ಆಗಿದ್ದೆ ಎಂಬುದನ್ನೂ ಇಲ್ಲಿ ಬಿಚ್ಚಿಟ್ಟಿದ್ದಾರೆ.

*

ಈ ಸಂಕಲನದ ಶೀರ್ಷಿಕೆಯಲ್ಲಿ “ನಡು ಬಾಗದ ಪತ್ರಕರ್ತ’ ಎಂದಿದ್ದನ್ನು ನೀವು ತುಸು ಬದಲಿಸಿಕೊಂಡು “ನಡುಭಾಗದ” ಎಂದು ಓದಿಕೊಂಡರೂ ಆದೀತು. ಈಚಿನ ದಿನಗಳಲ್ಲಿ ಬಲಭಾಗದವರು ಮತ್ತು ಎಡಭಾಗದವರು ಎಂಬ ದ್ವಿಮಾನ ಪದ್ಧತಿ ಬಂದಿದ್ದರಿಂದ ಮಧ್ಯಭಾಗಕ್ಕೆ ನಿಂತಿರುವವ ನಾಲಾಯಕ್ ಎಂಬಂತಾಗಿದೆ. ಐವತ್ತು ವರ್ಷಗಳ ಹಿಂದೆ ನಾನು ದಿಲ್ಲಿಯ ಜೆಎನ್‌ಯು ಸೇರಿದಾಗ ಅಲ್ಲಿ ಎಡಪಂಥೀಯರ ಗಣಸಂಖ್ಯೆ ಜಾಸ್ತಿ ಇತ್ತು. ಕ್ಯಾಂಟೀನಿನಲ್ಲಿ, ಕಾರಿಡಾರಿನಲ್ಲಿ, ಕೂತಲ್ಲಿ, ನಿಂತಲ್ಲಿ ಡಾಸ್ ಕ್ಯಾಪಿಟಲ್ಲಿನದೇ ಪದಪುಂಜಗಳು ಕಿವಿಗೆ ಬೀಳುತ್ತಿದ್ದವು. ಅದರ ತಲೆಬುಡ ಗೊತ್ತಿರದ ನನ್ನಂಥ ಕೆಲವು ವಿಜ್ಞಾನದ ವಿದ್ಯಾರ್ಥಿಗಳು ಎಡವೂ ಬೇಡ, ಬಲವೂ ಬೇಡವೆಂದು “ಫ್ರೀ ಥಿಂಕರ್ಸ್” ಎಂಬ ಹೆಸರಿನಲ್ಲಿ ಬೇರೊಂದು ಸಂಘಟನೆಯನ್ನು ಕಟ್ಟಿದೆವು. ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಎರಡು ಬಾರಿ ಎಡಪಂಥೀಯರನ್ನು ಸೋಲಿಸಿ ಜೈ ಎಂದು ಮೆರೆದೂಬಿಟ್ಟೆವು. ಆದರೆ ನಮ್ಮ ಜೊತೆಗಿನ ಅನೇಕ ಫ್ರೀ ಥಿಂಕರ್ಸ್ ಗೆಳೆಯರು ಕಟ್ಟಾ ಬಲಪಂಥೀಯರು ಎಂಬುದು ಗೊತ್ತಾದಾಗ ನಾವು ಕೆಲವರು ಅಲ್ಲಿಗೂ ಸಲ್ಲದ, ಇಲ್ಲಿಯೂ ಇರಲಾಗದ ಬೆಪ್ಪು ಅಬ್ಬೇಪಾರಿಗಳಾಗಿ ಎರಡೂ ಕಡೆಯವರಿಗೆ ಅಸ್ಪೃಶ್ಯರಾದೆವು. ಇಂದು ಮತ್ತೆ ಅದೇ ಸ್ಥಿತಿ ನನ್ನದಾಗಿದೆ.

ಪತ್ರಿಕೋದ್ಯಮ ಎಂಬ ಪವಿತ್ರ ವೃತ್ತಿಯಲ್ಲಿದ್ದವರು ಯಾವುದೇ ಪಂಥಕ್ಕೂ ಅಂಟಿಕೊಳ್ಳಬಾರದೆಂಬ ಅಲಿಖಿತ ನಿಯಮವಿದೆ. ನಾನು ಈ ನಿಯಮಕ್ಕೂ ಅಂಟಿಕೊಳ್ಳಲಾರದೆ ಇಲ್ಲಿನ ಕೆಲವು ಗಡಿರೇಖೆಗಳನ್ನು ದಾಟಿದ ಉದಾಹರಣೆಗಳು ಈ ಕೃತಿಯಲ್ಲಿವೆ. ಅವೆಲ್ಲ ನನಗೆ ಅನ್ನ ಕೊಟ್ಟ ವೃತ್ತಿಯ ಗಡಿವಿಸ್ತರಣೆ ಎಂದೇ ಈಗಲೂ ಭಾವಿಸುತ್ತೇನೆ. ನಮಗೆ ತೋಚಿದ ಸತ್ಯವನ್ನು ನಿರ್ಭಿಡೆಯಿಂದ ಹೇಳುವುದು, ನಮ್ಮ ಒಳದನಿಗೆ ನಾವೇ ಬದ್ಧರಾಗಿರುವುದು ಸುಲಭದ ಮಾತಲ್ಲ. ಆದರೆ ನನ್ನ ಅದೃಷ್ಟ ಚೆನ್ನಾಗಿದೆ. ತುಂಬ ಮಂದಿ ಮಾಧ್ಯಮ ಮಿತ್ರರು, ಸಂಪಾದಕರು ನನ್ನಿಂದ ಈಗಲೂ ಅಂಕಣ, ಲೇಖನಗಳನ್ನು ಬರೆಸುತ್ತಿದ್ದಾರೆ. ಈ ಸಂಕಲನದ ಪ್ರತಿ ಲೇಖನವೂ ಅಂಥ ಸಹಚಿಂತಕರ ಒತ್ತಾಯದ ಪ್ರತೀಕವಾಗಿದೆ.

‘ನಡುರಾತ್ರಿಯ ಸ್ವಗತ’ ಎಂಬುದಕ್ಕೆ ಕಾರಣವಿಷ್ಟೆ: ನನ್ನ ಬಹುತೇಕ ಬರೆವಣಿಗೆ ಆರಂಭವಾಗುವುದೇ ರಾತ್ರಿ 11ರ ನಂತರ. ಆಯಾ ಲೇಖನದ ಡೆಡ್‌ಲೈನ್‌ಗೆ ತಕ್ಕಂತೆ ಅದು ನಸುಕಿನ  2, 3 ಅಥವಾ ನಾಲ್ಕು ಗಂಟೆಯವರೆಗೂ ನಡೆಯುತ್ತಿರುತ್ತದೆ. ಯಾವ ಲೇಖನವೂ ಸ್ವಗತವಾಗೇನೂ ಉಳಿದಿಲ್ಲ.’ ನಾಗೇಶ ಹೆಗಡೆ, ಲೇಖಕ, ಪತ್ರಕರ್ತ

*

ನನ್ನ ವೃತ್ತಿಯ ಅನೂಚಾನ ನೈತಿಕತೆಯ ಗಡಿದಾಟುವ ಪ್ರಸಂಗವೂ ಬಂತು. ಡಾ. ಶಿವರಾಮ ಕಾರಂತರನ್ನು ಪರಿಸರ ಅಭ್ಯರ್ಥಿಯಾಗಿ, ಚುನಾವಣೆಗೆ ನಿಲ್ಲಿಸಿದೆವು. ಅದಕ್ಕೆ ಬೇಕಿದ್ದ ಸಾಹಿತ್ಯ, ದೇಣಿಗೆ ಎತ್ತುವ ಬಿಲ್‌ಪಟ್ಟಿ, ಪ್ರಚಾರ ಪರಿಕರಗಳ ಸಿದ್ಧತೆಯಲ್ಲಿ ಪಾಲ್ಗೊಂಡಿದ್ದಂತೂ ಆಯಿತು. ಕೊನೆಗೆ ಕಚೇರಿಗೆ ರಜೆ ಹಾಕಿ ಚುನಾವಣಾ ಪ್ರಚಾರಕ್ಕೆ ನೇರವಾಗಿ ಪಾಲ್ಗೊಳ್ಳಲೇಬೇಕಾಯಿತು. ನಾಗತಿಹಳ್ಳಿ, ನಾನು ಮತ್ತು ಸುರೇಶ್ ಹೆಬ್ಳೀಕರ್ ತಂಡ ಕೆನರಾ ಕ್ಷೇತ್ರದ ಊರೂರಿಗೆ ಹೋಗಿ ಭಾಷಣ ಕುಟ್ಟಿದ್ದೇ ಕುಟ್ಟಿದ್ದು. ವೇದಿಕೆಯೇ ಸಿಗದ ಕೆಲವು ಕಡೆ ನಟ ಹೆಬ್ಳೀಕರರ ಅಂಬಾಸಡರ್ ಕಾರಿನ ಮೇಲೆ ನಿಂತೇ ಕುಟ್ಟಬೇಕಾಯಿತು. ಕಾರಂತರು ಬರೆದ ಪ್ರಮುಖ ಕಾದಂಬರಿಗಳ ಪಟ್ಟಿ, ಅವರಿಗೆ ಲಭಿಸಿದ ಗೌರವ ಡಾಕ್ಟರೇಟ್‌ಗಳ ಪಟ್ಟಿ ನಮ್ಮ ಭಾಷಣಗಳಲ್ಲಿ ಉದ್ದವಾಗುತ್ತ ಹೋದಷ್ಟೂ ಸಾಮಾನ್ಯ ಮತದಾರರು ನಮ್ಮಿಂದ ದೂರವಾಗುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿತ್ತು. ‘ಕಾರಂತ ಹೊಟೆಲ್’ ಹೆಸರಿನ ಜನಪ್ರಿಯ ಖಾನಾವಳಿ ಇದ್ದ ಊರುಗಳಲ್ಲಂತೂ ಈ ಕಾರಂತರು ಹೊಟೆಲ್ ಮಾಲಿಕರಲ್ಲ ಎಂದು ಬಿಂಬಿಸುವುದೇ ಕಷ್ಟಕರವಾಗಿತ್ತು. ಇಂಗ್ಲಿಷ್ ಪತ್ರಿಕೆಗಳಲ್ಲಿ ನಮ್ಮ ಅಭ್ಯರ್ಥಿಯ ಪರ ಮೂರಂಗುಲ ಉದ್ದದ ವರದಿ ಬರುವಂತೆ ಮಾಡುವುದು ಇನ್ನೂ ಕಷ್ಟವಿತ್ತು. ಅಂತೂ ನಾವೆಲ್ಲ ಸೇರಿ ಕಾರಂತರನ್ನು ಬೀಳಿಸಿದೆವು. ಅವರ ವಿರುದ್ಧ ಸ್ಪರ್ಧಿಸಿದ್ದ ಅನಂತನಾಗ್ ಕೂಡ ಬಿದ್ದರು. ನಾಗೇಶ ಹೆಗಡೆಯೂ (ಕೆಲಸ ಕಳೆದುಕೊಂಡು) ಬೀಳುತ್ತಾನೆ ಎಂಬೆಲ್ಲ ಮಾತುಗಳು ಆಗ ಚಾಲ್ತಿಯಲ್ಲಿದ್ದವು. ಆಳುವ ಪಕ್ಷದ ಅಭ್ಯರ್ಥಿಯಾಗಿದ್ದ ಅನಂತನಾಗ್ ವಿರುದ್ಧವೇ ಬಹಿರಂಗ ಪ್ರಚಾರಕ್ಕೆ ಹೋಗಿದ್ದ ಪತ್ರಕರ್ತ ‘ಮನೆಗೆ ಹೋಗುವುದು ಗ್ಯಾರಂಟಿ’ ಎಂದು ಶಾಮರಾಯರ ಗರಡಿಯಲ್ಲಿ ಕೆಲಸಕ್ಕಿದ್ದವರು ಹೇಳಿದ್ದರು.

Acchigoo Modhalu excerpt from Nadubaagada Patrakartana Naduraatriya Swagata By Senior Journalist Nagesh Hegde Published by Bhoomi Books

ನಾಗೇಶ ಹೆಗಡೆ ಅವರ ಕೃತಿಗಳು

ನಿರ್ಜನ ರಸ್ತೆಯಲ್ಲಿ ರೋಡ್ ಶೋ

ಈಗೇನೋ ಚುನಾಣೆಯ ಸಂದರ್ಭದ ಎಲ್ಲ ಮೆರವಣಿಗೆಗಳಿಗೆ ‘ರೋಡ್‌ಶೋ’ ಎಂತಲೇ ಹೇಳುತ್ತಿದ್ದಾರೆ. ‘ರೋಡ್‌ಶೋ’ ಪದವನ್ನು ಈ ಭಾಗದಲ್ಲಿ ಮೊದಲು ಬಳಕೆಗೆ ತಂದಿದ್ದು ಈ ಬರಹಗಾರನೇ. ಪ್ರಜಾವಾಣಿಯ ಲೈಬ್ರರಿಗೆ ಬರುತ್ತಿದ್ದ ನ್ಯೂಯಾರ್ಕ್ ಟೈಮ್ಸ್ ಮತ್ತು ಗಾರ್ಡಿಯನ್‌ನಂಥ ಪತ್ರಿಕೆಗಳಲ್ಲಿ ಈ ಪದಗಳು ಕಂಡುಬರುತ್ತಿದ್ದವು. ‘ನಾವೂ ರೋಡ್ ಶೋ ಮಾಡೋಣ’ ಎಂದು ಹೋರಾಟದ ಗೆಳೆಯರಿಗೆ ನಾನು ಸೂಚಿಸಿದ್ದೆ. ರಸ್ತೆಯ ಮೇಲೆ ನಿಜವಾಗಿಯೂ ‘ಶೋ’ ಕೊಡಲೆಂದು ಕಿರು ನಾಟಕವನ್ನೂ ರೂಪಿಸಿದ್ದೆ. ಅದನ್ನು ನಾವೆಲ್ಲ ಸೇರಿ ರಸ್ತೆಗೂ ಇಳಿಸಿದ್ದೂ ಆಯಿತು. ಪರಮಾಣು ಸ್ಥಾವರದ ಆಸ್ಫೋಟದ ನಂತರ ಕಾಣಬಹುದಾದ ವಿಕಾರ ರೂಪದ ಮುಖವಾಡಗಳನ್ನು ರಚಿಸಿ, ಧರಿಸಿ, ನಾವು ಘೋಷಣೆ ಕೂಗುತ್ತ ವಿಧಾನ ಸೌಧ, ಬಸವೇಶ್ವರ ವೃತ್ತದ ಮೂಲಕ ರೇಸ್‌ಕೋರ್ಸ್ ರಸ್ತೆಗೆ ಹೋಗುತ್ತಿದ್ದೆವು. ಪ್ರತಿ ನೂರಿನ್ನೂರು ಮೀಟರಿನ ನಂತರ ಸಣ್ಣ ಸಿಳ್ಳೆ ಹಾಕಿದಾಗ ಮುಂದಿದ್ದ ಮುಕುಟಧಾರಿಗಳೆಲ್ಲ ಧೊಪ್ಪನೆ ಕೆಳಕ್ಕೆ ಬೀಳುವ ನಾಟಕ ಆಡುತ್ತಿದ್ದೆವು. ಚಣಕಾಲ ಹಾಗೇ ಮೂರ್ಛೆ ಬಿದ್ದಂತಿದ್ದು ಆಮೇಲೆ ಮತ್ತೆ ಜಾಥಾ ಮುಂದಕ್ಕೆ ಹೋಗುತ್ತಿತ್ತು. ನಿಜವಾದ ಅರ್ಥದಲ್ಲಿ ರೋಡ್-ಶೋ ಅದಾಗಿತ್ತು. ಬಹಳಷ್ಟು ದಿನಪತ್ರಿಕೆಗಳಲ್ಲಿ ಚಂದದ ಫೋಟೊ ಪ್ರಕಟವಾದವು.

ಒಮ್ಮೆ ಹೀಗಾಯಿತು

ಪ್ರಧಾನಿ ರಾಜೀವ ಗಾಂಧಿ ಬೆಂಗಳೂರಿಗೆ ಬರುವವರಿದ್ದರು. ಇಲ್ಲಿ ಕೈಗಾ ವಿರೋಧಿ ಕೂಗು ಅದೆಷ್ಟೇ ಜೋರಾಗಿದ್ದರೂ ಕೇಂದ್ರ ಸರಕಾರ ಕ್ಯಾರೇ ಅಂದಿರಲಿಲ್ಲ. ಕಾಳಿ ಕಣಿವೆಯ ದಟ್ಟ ಅರಣ್ಯದಲ್ಲಿ ಅಗೆತ ಕೆರೆತವನ್ನು ಮುಂದುವರೆಸಿತ್ತು. ರಾಜೀವ್ ಗಾಂಧಿಯವರಿಗೆ ಖುದ್ದಾಗಿ ಮನವಿಪತ್ರ ಕೊಡಬೇಕೆಂದು ಚಳವಳಿಗಾರರು ಬಯಸಿದ್ದರು. ಆದರೆ ಅವರ ಭೇಟಿಗೆ ಯಾರೂ ಅವಕಾಶವನ್ನೇ ಕೊಡಲಿಲ್ಲ. ಅವರು ಮರುದಿನ ದಿಲ್ಲಿಗೆ ಮರಳಿ ಹೋಗುವವರಿದ್ದರು. ನಸುಕಿನ ನಾಲ್ಕು ಗಂಟೆಗೆ ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ ಎಂಬ ಖಚಿತ ಸೂಚನೆ ನಮಗೆ ಸಿಕ್ಕಿತ್ತು. ಪತ್ರಕರ್ತರಿಗೆ ಅಂಥದ್ದೆಲ್ಲ ಮಾಹಿತಿ ಸಲೀಸಾಗಿ ಸಿಗತ್ತದೆ ತಾನೆ? ನಿಲ್ದಾಣದ ಬಳಿ ಬ್ಯಾನರ್ ಹಿಡಿದು ಶಾಂತವಾಗಿ ನಿಲ್ಲಲು ನಮಗೆ ಪೊಲೀಸರ ಅನುಮತಿ ಸಿಕ್ಕಿತು. ರಸ್ತೆ ತಡೆ ಮಾಡುವಂತಿಲ್ಲ, ಘೋಷಣೆ ಕೂಗುವಂತಿಲ್ಲ ಇತ್ಯಾದಿ ನಿರ್ಬಂಧ ಹೇರಲಾಯಿತು.

‘ಸರಿ’ ಎಂದು ಒಪ್ಪಿದ ನಾವು ಚಿಂತೆಗೆ ಬಿದ್ದೆವು. ಪ್ರಧಾನಿಯೇನೋ ಬ್ಲ್ಯಾಕ್​ ಕ್ಯಾಟ್ ಕಮಾಂಡೊಗಳಿಂದ ಸುತ್ತುವರಿದ ಜೀಪಿನಲ್ಲಿ ರ‍್ರೆಂದು ಸಾಗಿ ಹೋಗುತ್ತಾರೆ. ಅದೂ ನಸುಕಿನ ನಾಲ್ಕುಗಂಟೆಯ ಅರೆಗತ್ತಲಲ್ಲಿ. ಅವರಿಗೆ ಕಾಣುವಂಥ ದೊಡ್ಡ ಬ್ಯಾನರ್ ಹೇಗಿರಬೇಕು? ನಮ್ಮ ಬಳಿ ಹಣವೂ ಇರಲಿಲ್ಲ. ಅಷ್ಟು ಸಮಯವೂ ಇರಲಿಲ್ಲ. ಏನು ಮಾಡೋಣ? ನನಗೊಂದು ಉಪಾಯ ಹೊಳೆಯಿತು. ಪ್ರಜಾವಾಣಿಯ ಮುದ್ರಣಕ್ಕೆಂದು ಬಳಸುವ ನ್ಯೂಸ್‌ಪ್ರಿಂಟ್‌ಗಳ ದೊಡ್ಡ ದೊಡ್ಡ ರೀಮ್‌ಗಳು ಆಗೆಲ್ಲ ಮಹಾತ್ಮಾಗಾಂಧಿ ರಸ್ತೆಯ ಕಚೇರಿಗೇ ಬರುತ್ತಿದ್ದವು. ಪ್ರತಿ ರೀಮ್‌ಗಳ ಎರಡೂ ಪಕ್ಕಗಳಿಗೆ ಜೋಡಿಸಿದ್ದ ದೊಡ್ಡ, ಮೂರಡಿ ವ್ಯಾಸದ ವೃತ್ತಾಕಾರದ ಬಿಳಿ ರಟ್ಟುಗಳನ್ನು ರದ್ದಿ ರೂಪದಲ್ಲಿ ತೂಕಕ್ಕೆ ಹಾಕುತ್ತಿದ್ದರು. ನಾನು ಗುತ್ತಿಗೆದಾರನಿಗೆ ಹತ್ತು ರೂಪಾಯಿ ಕೊಟ್ಟು ಹತ್ತು ರಟ್ಟುಗಳನ್ನು ಖರೀದಿಸಿದೆ. ಒಂದೊಂದು ರಟ್ಟಿನ ಮೇಲೆ ದೊಡ್ಡ ಗಾತ್ರದ ಒಂದೊಂದು ಇಂಗ್ಲಿಷ್ ಅಕ್ಷರವನ್ನು ನಾನೇ ಬರೆದೆ. ಎಸ್.ಟಿ.ಓ.ಪಿ ಕೆ.ಎ.ಐ.ಜಿ.ಎ (ಸ್ಟಾಪ್ ಕೈಗಾ) ಎಂಬ ಒಂಬತ್ತು ಅಕ್ಷರಗಳ ಒಂಬತ್ತು ಚಕ್ರಗಳು ತಯಾರಾದವು. ಅಲ್ಲೇ ಹಿಂಬದಿಯ ಚರ್ಚ್ ಬೀದಿಯ ಬದಿಯ ಗೋಡೆಯ ಮೇಲೆ ಅವನ್ನೆಲ್ಲ ಒರಗಿಸಿ ಇಟ್ಟು, ನಸುಕಿನ ಮೂರು ಗಂಟೆಗೆ ಚಳವಳಿಗೆ ಬಂದವರ ಮೂಲಕ ಆಟೊದಲ್ಲಿ ಹಾಕಿಸಿ ವಿಮಾನ ನಿಲ್ದಾಣದ ಸಮೀಪ, ದೊಮ್ಮಲೂರಿನ ರಸ್ತೆ ತಿರುವಿನ ಆಯಕಟ್ಟಿನ ಸ್ಥಾನದಲ್ಲಿ ಸಾಲಾಗಿ ಚಕ್ರ ಹಿಡಿದು ನಿಂತೆವು. ಒಂದಿಷ್ಟು ವಾಹನಗಳು ಭರ‍್ರನೆ ಸಾಗಿದವು. ಸಾಲಿನ ಮಧ್ಯೆ ಸಾಗುತ್ತಿದ್ದ ಒಂದು ಜೀಪಿನಲ್ಲಿ ನಾಲ್ಕು ಸಶಸ್ತ್ರ ಯೋಧರು ತಮ್ಮ ದೇಹವನ್ನು ವಿಚಿತ್ರ ಭಂಗಿಯಲ್ಲಿ ಹೊರಕ್ಕೆ ಚಾಚಿ ಕುಕ್ಕರಗಾಲಿನಲ್ಲಿ ಕೂತಿದ್ದರು…

(ಪುಸ್ತಕದ ಖರೀದಿಗೆ : 9449177628)

ಇದನ್ನೂ ಓದಿ : HS Doreswamy Obituary : ನಾಗೇಶ ಹೆಗಡೆಯವರು ಬರೆದ ದೊರೆಸ್ವಾಮಿಯವರ ‘ನಿಂಬಿ’ ಹೋರಾಟ

ಇದನ್ನು ಓದಿ : New Book : ಅಚ್ಚಿಗೂ ಮೊದಲು ; ಎಸ್ತರ್ ಅನಂತಮೂರ್ತಿಯವರ ‘ನೆನಪು ಅನಂತ’ ಸದ್ಯದಲ್ಲೇ ನಿಮ್ಮ ಓದಿಗೆ

Published On - 2:06 pm, Sun, 9 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ