Mysore Ananthaswamy Death Anniversary : ಅವರು ಸಂಗೀತ ಹುಡುಕುತ್ತಿರಲಿಲ್ಲ, ಸಂಗೀತವೇ ಅವರನ್ನು ಹುಡುಕುತ್ತಾ ಇತ್ತು
Cassette : ‘ಕನ್ನಡದಲ್ಲಿ ಕ್ಯಾಸೆಟ್‌ಯುಗ ಆರಂಭವಾದಾಗ ಅವರು ರೂಪಿಸಿದ ‘ನಿತ್ಯೋತ್ಸವ’ ಧ್ವನಿಸುರಳಿ ಒಂದು ರೀತಿಯಲ್ಲಿ ಕ್ರಾಂತಿಯನ್ನೇ ಮಾಡಿತು. ಮಧ್ಯಮ ವರ್ಗದ ಬಹುತೇಕ ಮನೆಗಳಲ್ಲಿ ಭಾವಗೀತೆಗಳ ಧ್ವನಿಸುರಳಿಗಳು ಕಂಡುಬಂದವು. ಚಿತ್ರಗೀತೆಗಳನ್ನು ಮೀರಿ ಭಾವಗೀತೆಗಳು ಜನಪ್ರಿಯಗೊಂಡ ಕಾಲ ಅನಂತಸ್ವಾಮಿಯವರಿಂದ ಪ್ರಾಪ್ತವಾಯಿತು.’ ಎನ್. ಎಸ್. ಶ್ರೀಧರಮೂರ್ತಿ
Mysore Ananthaswamy Death Anniversary : ಅಂದು ಬೆಂಗಳೂರಿನ ಎಚ್.ಎನ್. ಕಲಾಕ್ಷೇತ್ರದಲ್ಲಿ ಅವರಿಗೆ ಸನ್ಮಾನ. ಅದ್ದೂರಿ ಕಾರ್ಯಕ್ರಮ, ಜನ ಎಂದಿನಂತೆಯೇ ಕಿಕ್ಕಿರಿದು ಸೇರಿದ್ದರು. ಅವತ್ತು ಯೋಜಿತವಾಗಿದ್ದು ಅನಂತ ಸ್ವಾಮಿಯವರ ಸಂಯೋಜನೆಗಳನ್ನು ಅವರ ಮಕ್ಕಳು ಮತ್ತು ಶಿಷ್ಯರು ಹಾಡಬೇಕು ಎಂದು. ಆದರೆ ಆಗಿದ್ದೇ ಬೇರೆ ನೆರೆದಿದ್ದ ಜನಸ್ತೋಮವನ್ನು ಕಂಡು ಅನಂತಸ್ವಾಮಿಯವರು ತಾವೇ ಹಾಡಲು ಶುರು ಮಾಡಿದರು. ಅನೇಕ ಹಾಡುಗಳನ್ನು ಹೇಳಿದರು. ಅವರನ್ನು ತಡೆಯುವುದು ಯಾರಿಂದಲೂ ಸಾಧ್ಯವಾಗಲಿಲ್ಲ. ಕೊನೆಯ ಹಾಡು ‘ಎದೆ ತುಂಬಿ ಹಾಡುವೆನು’ ಹಾಡಿದಾಗ ಸಭೆಯಲ್ಲಿದ್ದ ಬಹುತೇಕ ಜನ ಅಳುತ್ತಿದ್ದರು. ಅಷ್ಟು ಅದ್ಭುತವಾಗಿ ಅನಂತ ಸ್ವಾಮಿಯವರು ಹಾಡಿದ್ದನ್ನು ನಾನು ಎಂದಿಗೂ ಮರೆಯಲಾರೆ. ಈ ಘಟನೆ ಕುರಿತು ಎಚ್.ಎಸ್. ವೆಂಕಟೇಶಮೂರ್ತಿಯವರು ಬರೆದ ‘ಅವತ್ತು ಅನಂತ ಸ್ವಾಮಿ ಹಾಡುತ್ತಾ ಇರಲಿಲ್ಲ, ತಮ್ಮ ಅಂತರಂಗವನ್ನೇ ಹೊರಗೆ ಹಾಕುತ್ತಿದ್ದರು’ ಎನ್ನುವುದು ಅಕ್ಷರಶಃ ಸತ್ಯ. ಎನ್. ಎಸ್. ಶ್ರೀಧರ ಮೂರ್ತಿ, ಲೇಖಕ, ಪತ್ರಕರ್ತ
*
ಸುಗಮ ಸಂಗೀತ ಕ್ಷೇತ್ರದ ಅನಭಿಷಿಕ್ತ ದೊರೆ ಎಂದು ಕರೆಸಿ ಕೊಂಡಿರುವ ಮೈಸೂರು ಅನಂತ ಸ್ವಾಮಿಯವರನ್ನು ನಾನು ನೋಡಿದ್ದು ಅವರ ಕೊನೆಯ ದಿನಗಳಲ್ಲಿ ಅದರಲ್ಲಿಯೂ ದೂರದಿಂದಲೇ. ಒಡನಾಟ ಎನ್ನುವುದು ಎಂದಿಗೂ ಇರಲಿಲ್ಲ. ಎಂ.ಎಸ್.ಸತ್ಯು ಅವರು ‘ಗಳಿಗೆ’ ಎನ್ನುವ ಸಿನಿಮಾ ನಿರ್ದೇಶಿಸಿದ್ದರು. ಈ ಚಿತ್ರದ ಬೇರೆ ಬೇರೆ ಹಂತಗಳಲ್ಲಿ ನಾನು ತೊಡಗಿಸಿ ಕೊಂಡಿದ್ದೆ, ಅದು ಒಂದು ರೀತಿಯ ಕಲಿಕೆಯ ಕಾಲ. ಇದಕ್ಕೆ ಮೈಸೂರು ಅನಂತಸ್ವಾಮಿಯವರದು ಸಂಗೀತ ನಿರ್ದೇಶನ. ಈ ವೇಳೆಗಾಗಲೇ ಅವರ ಆರೋಗ್ಯ ಹದಗೆಟ್ಟಿತ್ತು, ಅವರ ಮಗ ರಾಜು ಅನಂತಸ್ವಾಮಿಯವರೇ ಬಹುತೇಕ ಚಿತ್ರದ ಕೆಲಸಗಳನ್ನು ನಿರ್ವಹಿಸಿದ್ದರು. ಇದರ ಟೈಟಲ್ ಸಾಂಗ್ ಆಗಿ ಕೆ. ಎಸ್. ನಿಸಾರ್ ಅಹಮದ್ ಅವರ ‘ಎಲ್ಲಿಲ್ಲಿಯೂ ಬರಿಯ ಗುರುತು ಬರಿಯ ಚಿಹ್ನೆ ಲಾಂಛನ’ವನ್ನು ಬಳಸಿಕೊಳ್ಳಲು ಕೊನೆ ಗಳಿಗೆಯಲ್ಲಿ ನಿರ್ಧಾರ ಮಾಡಲಾಯಿತು. ಈ ಸಂಯೋಜನೆಯನ್ನು ಅನಂತಸ್ವಾಮಿಯವರೇ ಮಾಡಿದರು. ಬಿ. ಜಯಶ್ರೀಯವರು ಹಾಡಿದರು. ಅವರ ಸಂಯೋಜನೆಯ ಸೊಬಗನ್ನು ನಾನು ನೋಡಿದ್ದು ಅದೊಂದೇ ಸರಿ, ಅದು ನಿಜಕ್ಕೂ ಸ್ವರ್ಗಸದೃಶ ದೃಶ್ಯ.
ಮೈಸೂರು ಅನಂತಸ್ವಾಮಿಯವರು ಹುಟ್ಟಿದ್ದು 1936 ರ ಅಕ್ಟೋಬರ್ 25 ರಂದು. ಅಂದು ನಾಡಹಬ್ಬ ವಿಜಯದಶಮಿ. ಅಂದೇ ನಾಡಸಂಗೀತ ದೊರೆ ಜನಿಸಿದ್ದು ವಿಧಿ ಸಂಕಲ್ಪ. ತಂದೆ ಸುಬ್ಬರಾವ್ ಖಜಾನೆಯ ಸೇವೆಯಲ್ಲಿ ಇದ್ದರು, ತಾಯಿ ಕಮಲಮ್ಮ, ತಾಯಿಯ ತಂದೆ ಎಂದರೆ ತಾತ ಚಿಕ್ಕ ರಾಮರಾಯರು ಸಂಗೀತ ವಿದ್ವಾಂಸರು. ಬಾಲ್ಯದಿಂದಲೂ ಅನಂತಸ್ವಾಮಿಯವರಿಗೆ ತಾತನಿಂದ ಸಂಗೀತದ ಪ್ರೇರಣೆ ದೊರಕಿತ್ತು. ನಾದವಂತೂ ಅವರಿಗೆ ನ್ಯಾಸ ರೂಪದಲ್ಲಿ ಹುಟ್ಟಿನಿಂದಲೇ ಬಂದಿತ್ತು. ಕೃಷ್ಣಮೂರ್ತಿ, ನಾಗರಾಜ ರಾಯರಿಂದ ಸಂಗೀತದ ಅಭ್ಯಾಸವೂ ನಡೆಯಿತು. ಮೊದಲು ಕೊಳಲು ಸೆಳೆಯಿತು, ಮುಂದೆ ಮ್ಯಾಂಡೋಲಿನ್ ಕೈ ಹಿಡಿಯಿತು. ಸುಗಮ ಸಂಗೀತದ ಕಡೆ ಸೆಳೆದವರು ಕಾಳಿಂಗರಾಯರು. ‘ಇಳಿದು ಬಾ ತಾಯಿ’ ಎನ್ನುವ ರಾಯರ ಅದ್ಭುತ ಸಂಯೋಜನೆ ಅನಂತಸ್ವಾಮಿಯವರನ್ನು ಸೆಳೆಯಿತು. ಅವರು ಅದನ್ನು ಅದ್ಭುತವಾಗಿ ಹಾಡುತ್ತಾ ಇದ್ದರು.
ಕಾಳಿಂಗರಾಯರು ‘ಅಬ್ಬಾ ಆ ಹುಡುಗಿ’ ಚಿತ್ರಕ್ಕೆ ಸ್ವರ ಸಂಯೋಜನೆ ಮಾಡುವಾಗ ಅನಂತ ಸ್ವಾಮಿಯವರನ್ನು ಸಹಾಯಕರಾಗಿ ಇಟ್ಟುಕೊಂಡರು. ‘ಹೃದಯ ದೇವಿಯೇ ನಿನ್ನ ಅಧರ ರಸವನು ಪೀರೆ’ ಎನ್ನುವ ಅದ್ಭುತ ಗೀತೆಯಲ್ಲಿ ಕೇಳಿ ಬರುವ ಮ್ಯಾಂಡೋಲಿನ್ ಅನಂತಸ್ವಾಮಿಯವರದ್ದೇ! ಜಿ.ಕೆ.ವೆಂಕಟೇಶ್ ಅವರ ಜೊತೆಗೂ ಅನಂತಸ್ವಾಮಿ ಕೆಲಸ ಮಾಡಿದರು. ‘ಗೌರಿ’ ಚಿತ್ರಕ್ಕೆ ಅವರೊಡನೆ ಮಧುರತೆಗೆ ತುಡಿದರು. ಕನ್ನಡದಲ್ಲಿ ಕವಿ ಗೀತೆಯ ಪರಂಪರೆ ಆರಂಭಿಸಿದ ಚಿತ್ರ ಎನ್ನುವ ಹೆಗ್ಗಳಿಕೆಯ ಈ ಚಿತ್ರದ ‘ಯಾವ ಜನ್ಮದ ಮೈತ್ರಿ’ ಗೀತೆಯ ಹಿಂದೆ ಅನಂತಸ್ವಾಮಿಯವರ ಪರಿಶ್ರಮವಿತ್ತು. ಈ ಕುರಿತು ನನ್ನೊಡನೆ ಒಮ್ಮೆ ಮಾತನಾಡುತ್ತಾ ಜಿ.ಕೆ.ವೆಂಕಟೇಶ್ ಹೇಳಿದ್ದರು, ‘ಅವರು ಸಂಗೀತ ಹುಡುಕುತ್ತಾ ಇರಲಿಲ್ಲ, ಸಂಗೀತವೇ ಅವರನ್ನು ಹುಡಕಿಕೊಂಡು ಬರುತ್ತಾ ಇತ್ತು.’
ಅನಂತಸ್ವಾಮಿಯವರಿಗೆ ಚಿತ್ರರಂಗದ ನಂಟಿದ್ದರೂ ಅದರ ಕುರಿತು ಆಕರ್ಷಿತರಾಗಲಿಲ್ಲ. ಅವರು ಸ್ವತಂತ್ರವಾಗಿ ಸಂಗೀತ ಸಂಯೋಜನೆ ಮಾಡಿದ ಚಿತ್ರಗಳ ಪಟ್ಟಿ ಚಿಕ್ಕದು. ಕೆ.ಎಂ. ಶಂಕರಪ್ಪ ಅವರ ‘ಮಾಡಿ ಮಡಿದವರು’ ಚಿತ್ರಕ್ಕೆ ಅವರು ವಿಶಿಷ್ಟವಾದ ಸ್ವರ ಸಂಯೋಜನೆ ಮಾಡಿದ್ದರು. ಇದರಲ್ಲಿ ಕಂಬಾರರು ಹಾಡಿದ ಹಾಡೊಂದು ಬಹಳ ಭಿನ್ನವಾಗಿ ಮೂಡಿ ಬಂದಿತ್ತು. ಅವರು ಹೆಚ್ಚಾಗಿ ಸಂಗೀತ ನೀಡಿದ್ದು ಪ್ರಯೋಗಶೀಲ ಚಿತ್ರಗಳಿಗೇ! ನನಗೆ ಗೊತ್ತಿದ್ದ ಮಟ್ಟಿಗೆ ಅವರು ಸಂಗೀತ ನೀಡಿದ ಕಮರ್ಷಿಯಲ್ ಚಿತ್ರ ‘ಯಾರು ಹಿತವರು’ ಮಾತ್ರ.
ಅನಂತಸ್ವಾಮಿ ಕಾಳಿಂಗರಾಯರ ಪರಂಪರೆಯನ್ನು ಸುಗಮ ಸಂಗೀತದಲ್ಲಿ ಸಮರ್ಥವಾಗಿ ಮುಂದುವರೆಸಿದರು. ಕನ್ನಡದಲ್ಲಿ ಕ್ಯಾಸೆಟ್‌ಯುಗ ಆರಂಭವಾದಾಗ ಅವರು ರೂಪಿಸಿದ ‘ನಿತ್ಯೋತ್ಸವ’ ಧ್ವನಿಸುರಳಿ ಒಂದು ರೀತಿಯಲ್ಲಿ ಕ್ರಾಂತಿಯನ್ನೇ ಮಾಡಿತು. ಮಧ್ಯಮ ವರ್ಗದ ಬಹುತೇಕ ಮನೆಗಳಲ್ಲಿ ಭಾವಗೀತೆಗಳ ಧ್ವನಿಸುರಳಿಗಳು ಕಂಡುಬಂದವು. ಚಿತ್ರಗೀತೆಗಳನ್ನು ಮೀರಿ ಭಾವಗೀತೆಗಳು ಜನಪ್ರಿಯಗೊಂಡ ಕಾಲ ಅನಂತಸ್ವಾಮಿಯವರಿಂದ ಪ್ರಾಪ್ತವಾಯಿತು. ಭಾವಸಂಗಮ, ಕೆಂದಾವರೆ, ನಾಕುತಂತಿ, ದುಂದುಭಿ, ತಾರಕ್ಕೆ ಬಿಂದಿಗೆ, ಹೇಳ್ತೀನಿ ಕೇಳಿ, ದೀಪೋತ್ಸವ, ಸುಮಧುರ ಹೀಗೆ ಅವರ ಕ್ಯಾಸೆಟ್‌ಗಳು ಇಲ್ಲದ ಮನೆಗಳು ಆ ಕಾಲದಲ್ಲಿ ಇರಲಿಲ್ಲವೆಂದೇ ಹೇಳ ಬೇಕು.. ತನವು ನಿನ್ನದು, ಓ ನನ್ನ ಚೇತನ, ಎದೆ ತುಂಬಿ ಹಾಡಿದೆನು, ನಾ ಕೋಳಿಗೆ ರಂಗ ಮೊದಲಾದ ಗೀತೆಗಳನ್ನು ಅನಂತ ಸ್ವಾಮಿಯವರ ಕಂಠದಲ್ಲಿ ಕೇಳುವುದೇ ಒಂದು ದಿವ್ಯಾನುಭವ.
ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಒಂದು ಕಾರ್ಯಕ್ರಮ… ಕಿಕ್ಕಿರಿದು ಸೇರಿದ ಜನ, ಅಪರೂಪಕ್ಕೆ ಮಾತಾಡಿದ ಅನಂತಸ್ವಾಮಿ ಹೇಳಿದರು, ‘ಕವಿ ನಿಲ್ಲಿಸಿದಲ್ಲಿಂದ ಸಂಗೀತ ಸಂಯೋಜಕ ಮುಂದುವರೆಸಬೇಕು’ ಜನಸಂದಣಿ ನಡುವೆ ತೂರಿಕೊಂಡು ನಿಂತಿದ್ದ ನನ್ನನ್ನು ಈ ಮಾತು ಹಿಡಿದಿಟ್ಟಿತು. ಎಂತಹ ಕಲ್ಪನೆ… ನಾವೆಲ್ಲ ಮೂರ್ತ, ಅಮೂರ್ತ ಹೀಗೆ ಉದ್ದುದ್ದ ಸಿದ್ದಾಂತಗಳನ್ನು ಮಾತಾಡ್ತೀವಿ. ಅದನ್ನೇಅನಂತ ಸ್ವಾಮಿ ಎಷ್ಟು ಸರಳವಾಗಿ ಸರಿಯಾಗಿ ಹೇಳಿಬಿಟ್ಟರು. ನಾಡಗೀತೆಯ ಅವರ ಸ್ವರ ಸಂಯೋಜನೆ ಕೂಡ ಅಷ್ಟೇ. ತನ್ನದೇ ಆದ ವಿಶಿಷ್ಟತೆಯನ್ನು ಪಡೆದಿತ್ತು. ನನಗೆ ಗೊತ್ತಿದ್ದ ಹಾಗೆ ನಾಡಗೀತೆ ‘ಜೈ ಭಾರತ ಜನನಿ’ ಗೆ ಮೊದಲು ಟ್ಯೂನ್ ಹಾಕಿದ್ದವರು ಪದ್ಮಚರಣ್ ಇದು 1958ರ ಸುಮಾರಿಗೆ, ನಂತರ ವಿಜಯಭಾಸ್ಕರ್ ‘ಮನ ಮೆಚ್ಚಿದ ಮಡದಿ’ ಚಿತ್ರಕ್ಕೆ1963ರಲ್ಲಿ ಸಂಯೋಜನೆ ಮಾಡಿದರು. ಮೂರನೇ ಸಂಯೋಜನೆ ಕೇಶವ ಗುರಂ ಎನ್ನುವವರದ್ದು ಇದು 1973ರಲ್ಲಿ ಧಾರವಾಡ ಆಕಾಶವಾಣಿಗೆ ಮಾಡಿದ್ದು, ನಾಲ್ಕನೇ ಸಂಯೋಜನೆ ಎಚ್. ಆರ್. ಲೀಲಾವತಿಯವರದ್ದು, ಬಹುಷಃ ಇದೇ ವೇಳೆಯಲ್ಲಿ ಅನಂತಸ್ವಾಮಿಯವರೂ ಸಂಯೋಜನೆ ಮಾಡಿರಬೇಕು, 1985 ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅದು ಮೊಳಗಿದಾಗ ಎಲ್ಲರ ಗಮನಕ್ಕೆ ಬಂದಿತು. ಅದು ‘ಮಿಂಚು’ ಕ್ಯಾಸೆಟ್‌ನಲ್ಲಿ ಸೇರಿತು. 1993ರಲ್ಲಿ ಸಿ.ಅಶ್ವತ್ಥ್ ಸಂಯೋಜನೆ ಮಾಡಿದರು, ಅದು ‘ಹಚ್ಚೇವು ಕನ್ನಡದ ದೀಪ’ ಕ್ಯಾಸೆಟ್‌ನಲ್ಲಿ ಸೇರಿದೆ. ವಿವಾದದ ಕುರಿತು ಗಮನ ಹರಿಸದೆ ಹೇಳುವುದಾದರೆ ಆರೂ ಸಂಯೋಜನೆಗಳನ್ನು ನಾನು ಕೇಳಿದ್ದೇನೆ. ಅನಂತಸ್ವಾಮಿಯವರ ಸಂಯೋಜನೆ ಥಟ್ಟನೆ ಮನಕ್ಕೆ ಬರುವುದು ಕವಿತೆಯಲ್ಲಿನ ಅಮೂರ್ತವನ್ನು ತುಂಬಿ ಕೊಂಡ ರೀತಿಗೆ.
ಅನಂತಸ್ವಾಮಿ ಸಕ್ರಿಯರಾಗಿ ಇನ್ನೂ ಅನೇಕ ಅದ್ಭುತಗಳನ್ನು ಸೃಷ್ಟಿ ಮಾಡುತ್ತಾ ಇದ್ದ ಕಾಲದಲ್ಲಿಯೇ ಅವರನ್ನು ಅನಾರೋಗ್ಯ ಆವರಿಸಿತು. ಅದು ಕನ್ನಡ ನಾಡಿನ ದುರಾದೃಷ್ಟ. ಮೊದಲು ಗಂಟಲು ನೋವು ಎಂದು ಆರಂಭವಾಗಿದ್ದಕ್ಕೆ ಕ್ಯಾನ್ಸರ್ ಎಂಬ ಹೆಸರು ಬಂದಿತು. ಹಾಡು ಹಕ್ಕಿಯ ಗಂಟಲಿಗೇ ಬರಸಿಡಿಲು ಬಡಿದಿತ್ತು. ಅವರ ಇಂತಹ ಅನಾರೋಗ್ಯ ಕಾಲದಲ್ಲಿಯೇ ಎಚ್.ಎನ್. ಕಲಾಕ್ಷೇತ್ರದಲ್ಲಿ ಅವರಿಗೆ ಸನ್ಮಾನ. ಅದ್ದೂರಿ ಕಾರ್ಯಕ್ರಮ, ಜನ ಎಂದಿನಂತೆಯೇ ಕಿಕ್ಕಿರಿದು ಸೇರಿದ್ದರು. ಅವತ್ತು ಯೋಜಿತವಾಗಿದ್ದು ಅನಂತ ಸ್ವಾಮಿಯವರ ಸಂಯೋಜನೆಗಳನ್ನು ಅವರ ಮಕ್ಕಳು ಮತ್ತು ಶಿಷ್ಯರು ಹಾಡಬೇಕು ಎಂದು. ಆದರೆ ಆಗಿದ್ದೇ ಬೇರೆ ನೆರೆದಿದ್ದ ಜನಸ್ತೋಮವನ್ನು ಕಂಡು ಅನಂತಸ್ವಾಮಿಯವರು ತಾವೇ ಹಾಡಲು ಶುರು ಮಾಡಿದರು. ಅನೇಕ ಹಾಡುಗಳನ್ನು ಹೇಳಿದರು. ಅವರನ್ನು ತಡೆಯುವುದು ಯಾರಿಂದಲೂ ಸಾಧ್ಯವಾಗಲಿಲ್ಲ. ಕೊನೆಯ ಹಾಡು ‘ಎದೆ ತುಂಬಿ ಹಾಡುವೆನು’ ಹಾಡಿದಾಗ ಸಭೆಯಲ್ಲಿದ್ದ ಬಹುತೇಕ ಜನ ಅಳುತ್ತಿದ್ದರು. ಅಷ್ಟು ಅದ್ಭುತವಾಗಿ ಅನಂತ ಸ್ವಾಮಿಯವರು ಹಾಡಿದ್ದನ್ನು ನಾನು ಎಂದಿಗೂ ಮರೆಯಲಾರೆ. ಈ ಘಟನೆ ಕುರಿತು ಎಚ್.ಎಸ್. ವೆಂಕಟೇಶಮೂರ್ತಿಯವರು ಬರೆದ ‘ಅವತ್ತು ಅನಂತ ಸ್ವಾಮಿ ಹಾಡುತ್ತಾ ಇರಲಿಲ್ಲ, ತಮ್ಮ ಅಂತರಂಗವನ್ನೇ ಹೊರಗೆ ಹಾಕುತ್ತಿದ್ದರು’ ಎನ್ನುವುದು ಅಕ್ಷರಶಃ ಸತ್ಯ.
ಅದು ದೀಪ ಆರುವ ಮುನ್ನ ಪ್ರಜ್ವಲಿಸಿದ ಬೆಳಕಾಗಿತ್ತು. ನಾನು ಬಲ್ಲ ಹಾಗೆ ಮುಂದೆ ಅನಂತ ಸ್ವಾಮಿಯರು ಹಾಡಲೇ ಇಲ್ಲ. 1995ರ ಜನವರಿ 9ರಂದು ಸಾವಿರಾರು ಹಾಡುಗಳನ್ನು ನಮ್ಮ ಪಾಲಿಗೆ ಬಿಟ್ಟು ಗಂಧರ್ವ ಲೋಕಕ್ಕೆ ತೆರಳಿದರು.
ಇದನ್ನೂ ಓದಿ : Singer Vani Jairam Birthday : ಮೂಲೆಯಲ್ಲಿ ಕುಳಿತಿದ್ದ ವಾಣಿಯವರನ್ನು ಯಾರೂ ಗುರುತು ಹಿಡಿದಿರಲಿಲ್ಲ!
Published On - 4:16 pm, Sun, 9 January 22