Future Journalists : ‘ಅಮ್ಮ ಕೂಲಿಗೆ ಅಪ್ಪ ಆಟೋ ಚಾಲನೆಗೆ, ನಾನು ಮಾಧ್ಯಮಲೋಕಕ್ಕೆ’
Media : ‘ನಮ್ಮ ಜನರಿಗೂ ಮನರಂಜನೆ ಎಂದರೆ ಇದೇ, ಸುದ್ದಿ ಎಂದರೆ ಇದೇ, ಜೀವನವೆಂದರೆ ಇದೇ ಎಂಬ ಭ್ರಮೆಗೆ ಬೀಳುವುದೇ ಬೇಕಾಗಿದೆ. ಯಾವಾಗ ನಾವು ನಮಗೆ ಏನು ಬೇಕು ಎನ್ನುವುದನ್ನು ಸಶಕ್ತವಾಗಿ ವ್ಯಕ್ತಪಡಿಸಲು ಮತ್ತು ಬೇಡವಾಗಿದ್ದನ್ನು ವಿರೋಧಿಸಲು ಕಲಿಯುತ್ತೇವೋ ಆಗಲೇ ಬದಲಾವಣೆಯ ಬೀಜ ಮೊಳಕೆಯೊಡೆಯಲು ಸಾಧ್ಯ.’ ವೇದಶ್ರೀ ಜಿ.ಎಂ.
Future Journalists : ಜೀವನೋಪಾಯಕ್ಕೆಂದು ಮಾಡುವ ಕೆಲಸದ ವಿಧಾನ ಬೇರೆ. ಇಷ್ಟಪಟ್ಟು ತೊಡಗಿಕೊಳ್ಳುವ ಕೆಲಸದ ಗತಿಯೇ ಬೇರೆ. ಎರಡನೇ ಆಯ್ಕೆ ತುಸು ಕಷ್ಟದ್ದು, ನಿರಂತರ ಸವಾಲಿನದು. ಅಲ್ಲಿ ತನ್ನ ಹೊಟ್ಟೆ, ಬಟ್ಟೆ, ನೆತ್ತಿಗೂ ಮೀರಿದ ಆಲೋಚನೆಗಳು, ಆಶಯಗಳು ಸದಾ ಮಿಸುಕಾಡುತ್ತಿರುತ್ತವೆ. ಅಂಥ ಕ್ಷೇತ್ರಗಳಲ್ಲಿ ಪ್ರಮುಖವಾದುದು ಪತ್ರಿಕೋದ್ಯಮ. ಪತ್ರಕರ್ತರು ತಮ್ಮನ್ನು ಆವರಿಸುವ ಅಣುಅಣುವಿನ ಬಗ್ಗೆಯೂ ಸದಾ ಜಾಗೃತರಾಗಿರಲು ತಮ್ಮೊಳಗೊಂದು ತಿದಿಯನ್ನು ಹಗಲು ರಾತ್ರಿಯೂ ಒತ್ತಿಕೊಳ್ಳುತ್ತಲೇ ಇರಬೇಕಾಗುತ್ತದೆ. ಆಗುಹೋಗುಗಳನ್ನು ಯಾವೆಲ್ಲ ರೀತಿಯಲ್ಲಿ ತೆರೆದಿಡಬೇಕು, ಯಾವೆಲ್ಲ ದೃಷ್ಟಿಕೋನದಿಂದ ಗಮನಿಸಬೇಕು, ಹೇಗೆಲ್ಲ ಚಿಕಿತ್ಸಕ ನೋಟದಿಂದ ವಿಷಯವನ್ನು ಪರಾಮರ್ಶಿಸಬೇಕು ಮತ್ತು ಪ್ರಸ್ತುತಪಡಿಸಬೇಕು ಎಂಬ ತಯಾರಿಗೆ ಕೊನೆಮೊದಲಿಲ್ಲ. ಮುದ್ರಣ, ಎಲೆಕ್ಟ್ರಾನಿಕ್ ಜೊತೆಗೆ ಡಿಜಿಟಲ್ ಮಾಧ್ಯಮ ಇಂದು ಅತಿ ವೇಗದಲ್ಲಿ ಹಲವಾರು ಸಾಧ್ಯತೆಗಳ ಮೂಲಕ ಚಾಚಿಕೊಳ್ಳುತ್ತಿರುವಂಥ ಈ ಸಂದರ್ಭದಲ್ಲಿ ತಾಂತ್ರಿಕ ಸ್ವರೂಪದಲ್ಲಷ್ಟೇ ಬದಲಾವಣೆ, ಉಳಿದಂತೆ ಪತ್ರಕರ್ತರಿಗಿರಬೇಕಾದ ಒಳಗಣ್ಣು, ಆಸ್ಥೆ, ತುಡಿತ, ಪ್ರಾಮಾಣಿಕತೆ, ಸಾಮಾಜಿಕ ಕಾಳಜಿಯನ್ನೇ ಈ ಕ್ಷೇತ್ರ ಬೇಡುತ್ತದೆ. ಹಾಗಾಗಿ ಈ ವೃತ್ತಿ ಅಂಕಪಟ್ಟಿ, ಪದಕಗಳನ್ನು ಮೀರಿದ ಚಲನಶೀಲ, ವಿಶೇಷ ಪ್ರಜ್ಞೆಯುಳ್ಳ ವ್ಯಕ್ತಿತ್ವವನ್ನು ನಿರೀಕ್ಷಿಸುತ್ತದೆ. ಜೀವಪರತೆಯೇ ಇದಕ್ಕೆ ಮೂಲಾಧಾರ.
ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಭವಿಷ್ಯದ ಪತ್ರಕರ್ತರು’ ಇದರಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಪತ್ರಿಕೋದ್ಯಮದಲ್ಲಿ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದಾರೆ. ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವರನ್ನು ಪ್ರೇರೇಪಿಸಿದ ವಿಚಾರಗಳು ಯಾವುವು ಎನ್ನುವುದನ್ನು ಆಗಾಗ ಇಲ್ಲಿ ಹಂಚಿಕೊಳ್ಳಲಿದ್ದಾರೆ. ಪ್ರತಿಕ್ರಿಯೆಗಾಗಿ : tv9kannadadigital@gmail.com
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಎರಡನೇ ಸೆಮಿಸ್ಟರ್ ಓದುತ್ತಿರುವ ನಾಪೋಕ್ಲುವಿನ ವೇದಶ್ರೀ ಜಿ.ಎಂ. ಪತ್ರಕರ್ತೆಯಾಗಬೇಕೆನ್ನುವ ಕನಸು ಕಾಣುತ್ತಿರುವುದೇಕೆ?
*
ನನ್ನೂರು ಮಳೆರಾಯನ ತವರೂರಾದ ಕೊಡುಗು. ಹೇಗೋ ನನ್ನ ಪಿಯುಸಿ ವರೆಗಿನ ವಿದ್ಯಾಭ್ಯಾಸ ಸ್ಥಳೀಯ ಸರ್ಕಾರಿ ಶಾಲೆ – ಕಾಲೇಜುಗಳಲ್ಲಿ ಮುಗಿದು ಹೋಯಿತು. ನನಗೋ ಪತ್ರಿಕೋದ್ಯಮ ಓದಬೇಕೆಂಬ ಆಸೆ. ಆದರೆ ಕಾಲೇಜು 45 ಕಿ. ಮೀ. ದೂರವಿತ್ತು. ಬೆಳಗ್ಗೆ ಹೊರಟರೆ ಮನೆ ತಲುಪಲು ಸಂಜೆ 6ರಿಂದ 8 ಗಂಟೆಯಾಗುತಿತ್ತು, ಅದರಲ್ಲಿ ಕಾಲ್ನಡಿಗೆಯಲ್ಲಿ 1 ಕಿ. ಮೀ. ಬರಬೇಕಿತ್ತು. ಈ ಕಾರಣದಿಂದಲೋ ಏನೋ ನನ್ನ ಅನೇಕ ಗೆಳತಿಯರು ಮುಂದೆ ಓದಲೇ ಇಲ್ಲ. ನನ್ನ ಮನೆಯಲ್ಲೂ ಓದ್ದಿದು ಸಾಕು ಎಂದರು. ನಾನು ಅತ್ತು ಕರೆದು ಹೇಗೋ ತಂದೆಯನ್ನು ಒಪ್ಪಿಸಿ ಕಾಲೇಜು ಸೇರಿಕೊಂಡೆ.
ಅಲ್ಲಿಗೆ ನನ್ನ ಓದುವ ಕನಸು ನನಸಾಯಿತು ಎಂದು ಭಾವಿಸಿದ್ದೆ. ಆದರೆ ಪ್ರತೀ ದಿನ ಅಷ್ಟು ದೂರ ಪ್ರಯಾಣಿಸುವುದು ನಿಜವಾಗಿಯೂ ಕಷ್ಟವಾಗಿತ್ತು. ಗಂಡುಮಕ್ಕಳು ತಡವಾಗಿ ಬಂದರೆ ಯಾರೂ ಕೇಳುವುದಿಲ್ಲ, ಆದರೆ ಹೆಣ್ಣು ತಡವಾಗಿ ಬಂದರೆ ಇಡೀ ಊರೇ ಯಾಕೆ ಲೇಟ್ ಎಂದು ಕೇಳುತ್ತದೆ. ಯಾಕೆ ಲೇಟ್ ಎಂಬ ಪದವನ್ನು ದಿನವೂ ಕೇಳಿ ಕೇಳಿ, ಲೇಟ್ ಎಂಬ ಪದವೇ ಬೈಗುಳ ಎನಿಸಿಬಿಟ್ಟಿತ್ತು. ಪುಂಡ ಪೋಕರಿಗಳು ಇರುವ ರಸ್ತೆಯಲ್ಲಿ ಒಂಟಿಯಾಗಿ ನಡೆದು ಬರುವಾಗ ಮುಳ್ಳಿನ ಮೇಲೆ ನಡೆದ ಅನುಭವ. ಅವರ ಛೇಡಿಕೆಯ ಮಾತಿಗೆ ಓದುವುದೇ ಬೇಡ ಎನಿಸಿಬಿಟ್ಟಿತ್ತು. 21ನೇ ಶತಮಾನವೆಂದರೂ ಹೊರಜಗತ್ತಿಗೆ ಹೆಣ್ಣುಮಗಳೊಬ್ಬಳು ಕಾಲಿಡುವಾಗ ಎದುರಾಗುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಒಂದೆಡೆ ಬಡತನ, ಮನೆಯ ಸಂಕಷ್ಟಗಳು ವಿದ್ಯಾಭ್ಯಾಸಕ್ಕೆ ತೊಡಕಾದರೆ ಮತ್ತೊಂದು ಕಡೆ ಸಮಾಜಕ್ಕೆ, ಅದರ ಕಠೋರ ಮಾತುಗಳಿಗೆ ಹೆದರಿ ಅನೇಕ ಹೆಣ್ಣುಮಕ್ಕಳು ಉನ್ನತ ಶಿಕ್ಷಣದ ಕಡೆ ಮುಖ ಮಾಡುತ್ತಿಲ್ಲ.
ಆದರೂ ನಾನು ಓದುವುದನ್ನು ನಿಲ್ಲಿಸಲಿಲ್ಲ. ‘ಪತ್ರಿಕೋದ್ಯಮ’ ಅದೊಂದು ಹೊಟ್ಟೆಪಾಡಿನ ವೃತ್ತಿ ಅಲ್ಲ. ವೃತ್ತಿಯ ಮೂಲಕ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಸಮಸ್ಯೆಗಳಿಗೆ ಸ್ಪಂದಿಸುವುದು ಎಂದೇ ನನ್ನ ಬಲವಾದ ನಂಬಿಕೆ.
ಹೀಗೆ ಒಂದು ದಿನ ರೇಷನ್ ಕಾರ್ಡ್ನಲ್ಲಿ ನನ್ನ ಹೆಸರು ಸರಿ ಮಾಡಿಸಲು ಹೋದಾಗ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು. ಆ ದಿನದ ತರಗತಿಗೆ ಗೈರು ಹಾಕಿ ಬಂದಿದ್ದೆ. ಕಾರಿನಲ್ಲಿ ಬಂದ ವ್ಯಕ್ತಿ 200 ರೂಪಾಯಿಯನ್ನು ಕೊಟ್ಟು ಸಾಲಿನಲ್ಲಿ ನಿಲ್ಲದೆ, ಅತಿ ವೇಗವಾಗಿ ತನ್ನ ಕಾರ್ಡನ್ನು ಸರಿ ಮಾಡಿಸಿಕೊಂಡು ಹೋಗಿಬಿಟ್ಟ. ಅಂದು ಮನಸ್ಸಿಗೆ ಬಹಳ ನೋವಾಯಿತು. ಈ ಸಮಾಜದಲ್ಲಿ ನಿಯಮಗಳಿಗೆ, ಕಾಯುವಿಕೆಗೆ ಬೆಲೆ ಎಲ್ಲಿದೆ ಎನಿಸತೊಡಗಿತ್ತು. ನನ್ನ ಕೈಯಲ್ಲಿ ಹಣವಿದ್ದಿದ್ದರೆ ನಾನೂ ಬೇಗ ಕೆಲಸ ಮುಗಿಸಿಕೊಂಡು ತರಗತಿಗೆ ಹೋಗಬಹುದಿತ್ತು ಅನಿಸಿತ್ತು. ಆದರೆ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳಲು ಮನಸ್ಸು ಒಪ್ಪದು.
ನಮ್ಮ ದೇಶದಲ್ಲಿ ಹಣವಿರುವವರಿಗೆ ಎಲ್ಲವೂ ಸುಲಭ. 200 ರೂಪಾಯಿ ಆಗಲಿ ಅಥವಾ ಲಕ್ಷ ರೂಪಾಯಿ ಆಗಲಿ ಅದು ಲಂಚವೇ. ದೇವಾಲಯಗಳಲ್ಲಿ ದುಡ್ಡು ಕೊಟ್ಟರೆ ದೇವರ ದರ್ಶನ ಬೇಗ ಸಿಗುತ್ತದೆ, ದೇವರೂ ಪಕ್ಷಪಾತಿಯಾಗಿಬಿಟ್ಟಿದ್ದಾನೆಯೆ? ದೊಡ್ಡ ಮಹಲುಗಳಲ್ಲಿ ಇರುವವರು ಮಹಲುಗಳಲ್ಲಿಯೇ. ಗುಡಿಸಲುಗಳಲ್ಲಿ ಇರುವವರು ಗುಡಿಸಲುಗಳಲ್ಲಿಯೇ. ಬಡವರು ಕಾಣುವ ಆಸೆಗಳಲ್ಲಿ ತೊಡಕಾಗುತ್ತಿರುವ ಸಮಸ್ಯೆಗಳನ್ನು ಯಾರು ಹೇಗೆ ಬಿಡಿಸಬೇಕು? ಶಿಕ್ಷಣ ಇಲ್ಲದೆ ಏನೂ ಸಾಧಿಸಲು ಸಾಧ್ಯವಿಲ್ಲ. ಆದರೆ, ಸಣ್ಣ ಸಣ್ಣ ಊರುಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಕೊಡುವ ಊಟ, ಬಟ್ಟೆ, ಸಮವಸ್ತ್ರದಲ್ಲಿಯೂ ಹಗರಣವಾಗುತ್ತಿದೆ. ಉಚಿತ ಲಸಿಕೆ, ಔಷಧಗಳಲ್ಲೂ ಕಾಳದಂಧೆ ನಡೆಯುತ್ತಿದೆ. ಹೀಗಿರುವಾಗ ಅನೇಕ ಬಾರಿ ಬಡವರಿಗೆ ಎಂದು ಸರ್ಕಾರ ರೂಪಿಸಿದ ಸವಲತ್ತುಗಳು ಅವರಿಗೆ ಸಿಗುವುದೇ ಇಲ್ಲ, ಅದನ್ನು ತಿಳಿಸಿ ಹೇಳುವವರು ಯಾರೂ ಇಲ್ಲ. ಮಾಹಿತಿ ಗೊತ್ತಿರುವವರು ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ನನ್ನದೇ. ಯಾವುದೋ ಒಂದು ಯೋಜನೆಯಲ್ಲಿ ಸರ್ಕಾರ ಒಂದು ಲ್ಯಾಪ್ಟಾಪ್ ನೀಡಿತ್ತು. ಕೇವಲ ಆರು ತಿಂಗಳುಗಳಲ್ಲಿಯೇ ಲ್ಯಾಪ್ಟಾಪ್ ಹಾಳಾಗಿ ಹೋಯಿತು. ಅದೇ ಸ್ವಂತ ದುಡ್ಡು ಹಾಕಿ ಖರೀದಿ ಮಾಡಿದರೆ ಕನಿಷ್ಟ ಪಕ್ಷ ಎರಡು ವರ್ಷವಾದರೂ ಬಾಳಿಕೆ ಬರುತ್ತಿತ್ತು ಎನ್ನುವುದು ಎರಡನೇ ಮಾತು. ಆದರೆ, ಸರ್ಕಾರ ಉಚಿತವಾಗಿ ಕೊಡುವ ಅನೇಕ ವಸ್ತುಗಳು ಹೀಗೆ ಕಳಪೆ ಗುಣಮಟ್ಟದ್ದಾಗಿರಲು ಕಾರಣವೇನು? ಪರದೆಯ ಹಿಂದೆ ನಡೆಯುವ ವಿದ್ಯಮಾನಗಳ ಬಗ್ಗೆ ಅದೆಷ್ಟು ಜನರಿಗೆ ಅರಿವಿದೆ? ಅನುಸರಿಕೊಂಡು ಹೋಗು ಎನ್ನುತ್ತದೆ ಸಮಾಜ. ಇದು ಇನ್ನೂ ಎಷ್ಟು ವರ್ಷ?
ಸೌಲಭ್ಯಗಳು ಸೂಕ್ತವಾಗಿ ಸಿಕ್ಕಾಗ ಯಾರೂ ಏನೂ ಸಾಧಿಸಬಹುದು. ಅದಕ್ಕಾಗಿ ಎಲ್ಲಡೆಯೂ ಸಮಾನತೆ ಸಾಧಿಸಬೇಕು. ಯಾವುದೋ ಜಾತಿ-ಧರ್ಮ-ಅಧಿಕಾರ-ಹಣದ ಹೆಸರಲ್ಲಿ ಪ್ರತಿಭೆ, ಜೀವಪರ ಕ್ಷೇತ್ರಗಳು ಮಣ್ಣು ಪಾಲಾಗಬಾರದು ಎಂಬ ಬಲವಾದ ಅನಿಸಿಕೆ ನನ್ನದು. ಈ ಅಸಮಾನತೆ ಮಾಧ್ಯಮಗಳ ಸುದ್ದಿ ಪ್ರಸಾರದಲ್ಲಿಯೂ ನಡೆಯುತ್ತದೆ ಎನ್ನುವುದು ಖೇದಕರ. ರೈತ ಸತ್ತರೆ ಆ ಸುದ್ದಿ ಅಬ್ಬಬ್ಬಾ ಎಂದರೆ ಅರ್ಧಗಂಟೆ ಪ್ರಸಾರ. ಪತ್ರಿಕೆಗಳಲ್ಲಿ ಒಂದು ವರದಿ. ಅದೇ ಚಿತ್ರರಂಗದ ನಾಯಕನಟರ ಮದುವೆ, ಹನಿಮೂನು, ಮಗುವಿನ ಕೆಮ್ಮು ಸೀನಿನಿಂದ ಹಿಡಿದು ಹುಟ್ಟುಹಬ್ಬದವರೆಗೆ ವಾರಗಟ್ಟಲೆ ಕವರೇಜ್ ಸಿಗುತ್ತದೆ. ನಮ್ಮ ಜನರಿಗೂ ಮನರಂಜನೆ ಎಂದರೆ ಇದೇ. ಸುದ್ದಿ ಎಂದರೆ ಇದೇ, ಜೀವನವೆಂದರೆ ಇದೇ ಎಂಬ ಭ್ರಮೆಗೆ ಬೀಳುವುದೇ ಬೇಕಾಗಿದೆ. ಯಾವಾಗ ನಮಗೇನು ಬೇಕು ಎನ್ನುವುದನ್ನು ಸಶಕ್ತವಾಗಿ ವ್ಯಕ್ತಪಡಿಸಲು ಮತ್ತು ಬೇಡವಾಗಿದ್ದನ್ನು ವಿರೋಧಿಸಲು ಕಲಿಯುತ್ತೇವೋ ಆಗಲೇ ಬದಲಾವಣೆಯ ಬೀಜ ಮೊಳಕೆಯೊಡೆಯಲು ಸಾಧ್ಯ. ಮಾಧ್ಯಮದ ಹಿರಿಯ ಮಿತ್ರರಲ್ಲಿ ಈ ಬಗ್ಗೆ ಚರ್ಚಿಸಿದಾಗ, ಅಂಥ ಸುದ್ದಿಗಳನ್ನು ಜನ ನೋಡುವುದಿಲ್ಲವೆಂಬ ಸಬೂಬು, ಮೇಲ್ನೋಟಕ್ಕೆ ಸಿಗುತ್ತದೆ.
ಚಿಕ್ಕಂದಿನಿಂದಲೂ ನನ್ನ ಸುತ್ತಮುತ್ತ ಇಂಥ ಅಸಮಾನತೆ, ಅನ್ಯಾಯಗಳು ನಡೆದಾಗೆಲ್ಲ ಕಳವಳಕ್ಕೆ ಒಳಗಾಗುತ್ತ ಬಂದಿದ್ದೇನೆ. ಇದೆಲ್ಲವನ್ನೂ ಸರಿಮಾಡಬೇಕು ಎಂದೇ ಅಂದುಕೊಳ್ಳುತ್ತ ಬಂದಿದ್ದೇನೆ. ಆದರೆ ಒಂದು ಹಂತದಲ್ಲಿ ಇದೆಲ್ಲ ನಾನೊಬ್ಬಳಿಂದ ಸಾಧ್ಯವಿಲ್ಲ ಎನ್ನಿಸಿತು. ಬೆತ್ತಲೆ ಜಗತ್ತಿನ ಸತ್ಯಗಳು ಒಂದೊಂದಾಗಿ ಕಣ್ಣಿಗೆ ಬೀಳುತ್ತಿದ್ದಂತೆ ಮತ್ತು ನಾನು ಬೆಳೆದಂತೆ ಎಲ್ಲವನ್ನೂ ನಾನೊಬ್ಬಳೇ ಸರಿ ಮಾಡಲು ಸಾಧ್ಯವೇ ಇಲ್ಲ ಎಂಬುದು ಅರಿವಾಗತೊಡಗಿತು. ಹಾಗಾಗಿಯೇ ನನಗೆ ಪತ್ರಿಕೋದ್ಯಮ ಸೂಕ್ತ ಆಯ್ಕೆ ಎನ್ನಿಸಿತು. ಸಾಮಾನ್ಯರಿಗಿಂತ ಪತ್ರಕರ್ತರು ಹೆಚ್ಚು ತಿಳಿದುಕೊಂಡಿರುತ್ತಾರೆ. ತಿಳಿಯದೇ ಇರುವುದನ್ನು ತಿಳಿಯುವ ನಿರಂತರ ಪ್ರಯತ್ನ ಅವರದ್ದಾಗಿರುತ್ತದೆ.
ಇನ್ನು ಮಾಧ್ಯಮಕ್ಕಿರುವ ಶಕ್ತಿ ದೊಡ್ಡದು. ಆದ್ದರಿಂದಲೇ ಸಾಕಷ್ಟು ವಿಷಯವಾಗಿ ಸುದ್ದಿ ಪ್ರಸಾರವಾದ ಕೆಲ ಹೊತ್ತಿನಲ್ಲೇ ಫಲಶ್ರುತಿಗಳೂ ಪ್ರಸಾರವಾಗುತ್ತಿರುತ್ತವೆ. ಇಂಥ ಬೆಳವಣಿಗೆಗಳು ನನ್ನಲ್ಲಿ ಉತ್ಸಾಹ ತುಂಬುತ್ತದೆ. ಮಾಧ್ಯಮ ಅಂದರೆ ಜಗತ್ತಿನ ನೋಟವನ್ನು ಬದಲಾಯಿಸಬಲ್ಲ ದೊಡ್ಡ ಆಯುಧ ಎನ್ನಿಸುತ್ತದೆ. ಹರಿಯುವ ನೀರಿನಲ್ಲಿ ಕೆಟ್ಟದ್ದು ಒಳ್ಳೆಯದು ಯಾವ ಕಾಲಕ್ಕೂ ಹರಿಯುತ್ತಲೇ ಇರುತ್ತದೆ. ಆದರೆ ಆಯ್ಕೆ ಎನ್ನುವುದು ನಮ್ಮ ಕೈಯಲ್ಲಿದೆ. ಅಂದುಕೊಂಡ ಬದಲಾವಣೆಯನ್ನು ನಿಧಾನವಾಗಿಯಾದರೂ ತರಲು ಸಾಧ್ಯವಿದೆ ಎಂಬ ಭರವಸೆ ನನಗಿದೆ. ಹಾಗಾಗಿ ಓದು ಮುಗಿದ ತಕ್ಷಣ ಇಂಥ ಅವಕಾಶಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ.
ಇದನ್ನೂ ಓದಿ : Future Journalists : ‘ಜನ ಗುರುತಿಸುವುದು ಸಾಧಕರನ್ನು ಮಾತ್ರ, ಕಷ್ಟದಲ್ಲಿ ಸಾಯುತ್ತಿರುವವರನ್ನಲ್ಲ!’
Published On - 12:56 pm, Tue, 5 October 21