Poetry: ಅವಿತಕವಿತೆ: ಪಾವು ಚಟಾಕನ್ನು ಅನುವಾದಿಸಬಹುದು ಹತ್ತುಪೈಸೆಯನ್ನು ಇಂದಿಗೆ ಅನುವಾದಿಸಲಿ ಹೇಗೆ…
Poem : ‘ಕೆಲವು ಅನುಭೂತಿಗಳೇ ಹಾಗೆ, ಅದಕ್ಕೆ ಮಾತಿನ ಅಂಗಿ ತೊಡಿಸಿದ ಮೇಲೆ ಮಾತಿನ ಭಾರಕ್ಕೆ ಅದು ಕುಸಿಯತೊಡಗುತ್ತದೆ, ಒಡಲನ್ನು ಕಳೆದುಕೊಂಡ ಅಂಗಿ ಸಡಿಲವಾಯಿತೇನೋ ಅನ್ನಿಸತೊಡಗುತ್ತದೆ. ಆದರೆ ಅಂತಹ ಅನುಭೂತಿಗಳನ್ನು ಕವನ ಬಿಟ್ಟು ಬೇರೆ ರೀತಿಯಲ್ಲಿ ಹೇಳುವುದು ಹೇಗೆ? ಇದು ನನ್ನ ಗೊಂದಲ!’ ಎನ್. ಸಂಧ್ಯಾರಾಣಿ
Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕವಿ ಎನ್. ಸಂಧ್ಯಾರಾಣಿ ಸದ್ಯ ಕಥೆಗಳ ಕಟ್ಟನ್ನು ಸಿದ್ಧಮಾಡಿಟ್ಟುಕೊಂಡು ಖಲೀಲ್ ಗಿಬ್ರಾನ್ ಕುರಿತಾದ ಪುಸ್ತಕವೊಂದನ್ನು ಅನುವಾದಿಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ ತೇಲಿಬಂದ ಕವನಗಳು ಇಲ್ಲಿವೆ.
*
ಡಿಜಿಟಲ್ ಮಾಧ್ಯಮದಲ್ಲಿ ಇವರ ಕವನದ ಸಾಲುಗಳು ಕಾಣಿಸಿಕೊಂಡಾಗ ಸ್ಕ್ರೋಲ್ ಮಾಡುವ ಕೈ ಮತ್ತು ಕಣ್ಣು ಗಕ್ಕನೆ ನಿಂತು, ಕುತೂಹಲ ಮತ್ತು ನಿರೀಕ್ಷೆ ಒಮ್ಮೆಗೇ ಆವರಿಸಿಕೊಂಡುಬಿಡಲು ಏನಿರಬಹುದು ಕಾರಣ? ಎಷ್ಟು ಬೇಕೋ ಅಷ್ಟನ್ನೇ ಹೇಳುವ ಚಂದವೇ? ಕಣ್ಮುಂದೆಯೇ ಅಭಿನೀತಗೊಳ್ಳುವ Imageryಯೇ? ಆ ಸಾಲುಗಳು ಯಾವ ಪರಿಯ ಸೌಂದರ್ಯ ಪ್ರಜ್ಞೆಯತ್ತ ಅಸ್ಪಷ್ಟವಾಗಿ ಬೊಟ್ಟು ಮಾಡುತ್ತವೆಯೋ ಆ ಪರಿ ನನಗೂ ಇಷ್ಟ ಎಂದೇ? ವ್ಯಕ್ತಿಗತ ಅನುಭವವನ್ನು ವಿಶಿಷ್ಟವಾಗಿ ನಿರೂಪಿಸುತ್ತಲೇ ಅದು ಇತರರನ್ನೂ ತಲುಪಿ ಅವರಿಗೆ ಇದು ನನ್ನದೂ ಹೌದು ಎನಿಸುವಂತೆ ಮಾಡುವ ಕೌಶಲವೇ? ಸೂಕ್ಷ್ಮತೆಯನ್ನು ಉಳಿಸಿಕೊಂಡೇ ಹೇಳಬೇಕಾಗಿರುವುದನ್ನು ಆಹಾ ಎನಿಸುವಂತೆ ಹೇಳುವ ದಿಟ್ಟತನವೇ? ಯಥೇಚ್ಛ ತಾದಾತ್ಮ್ಯಗುಣವೇ? “ಕವನದೆದುರಿಗೆ ಮಾತ್ರ ನಾನು ಮೊಣಕಾಲೂರಿ ಕೂರುತ್ತೇನೆ, ಅದರ ಕರುಣೆಗೆ ಕಾಯುತ್ತೇನೆ” ಎನ್ನುತ್ತಾರಿವರು ತಮ್ಮ ಪ್ರಕಟಿತ ಕವನ ಸಂಕಲನದ ಆರಂಭದಲ್ಲಿ. “ಲೋಕ ಹಾಸಿದ ಚದುರಂಗದ ಹಾಸನ್ನು” ಕವನಗಳ ಮೂಲಕ ದಾಟುವ ಈ “ಆರ್ದ್ರ ಗರ್ವದ ಹುಡುಗಿ ನಮ್ಮ” ಸಂಧ್ಯಾ ಎನ್ನುವುದೇ ನಮಗೆ ಹೆಮ್ಮೆ. ಅಹಲ್ಯಾ ಬಲ್ಲಾಳ್, ಲೇಖಕಿ, ರಂಗಕರ್ಮಿ, ಮುಂಬಯಿ
ಅದು ಹೊರಪ್ರಪಂಚ, ಒಳಪ್ರಪಂಚ ಯಾವುದೇ ಆಗಿರಲಿ, ನಿಯಮಿತವಾಗಿ ಸುತ್ತುತ್ತಲೇ ಇರುವ ಅವರ ಅಂಗಾಲ ರೇಖೆಗಳ ಮೇಲೆ ನನಗೆ ಸದಾ ಹೊಟ್ಟೆಕಿಚ್ಚು, ಖುಷಿ. ಕೋಶ ಓದುತ್ತಲೇ ದೇಶ ಸುತ್ತುವಾಗಿನ ಎಷ್ಟೊಂದು ಕತೆಗಳು ಇವರಿಗೆ ತಂದುಕೊಟ್ಟಿರಬಹುದಾದ ಆತ್ಮವಿಶ್ವಾಸ, ಘನಗಾಂಭೀರ್ಯ, ಮುಕ್ತತೆಯಿಂದ ಬರೆಯುವ, ಬದುಕುವ, ಎಲ್ಲದರ ನಡುವೆಯೂ ಪಟ್ಟನೆ ನಗುತ್ತಲೇ ಮರೆಮಾಚುವ ಸಂಕೋಚ, ಮುಜುಗರದ ಪುಟ್ಟಾಣಿ ಹುಡುಗಿಯನ್ನ ಒಳಗುಳಿಸಿಕೊಂಡಿರುವುದಕ್ಕೇ ಕವಿತೆಗಳು ಎಲ್ಲರನ್ನೂ ತಾಕುತ್ತವೆ. ಈ ಎಲ್ಲವುಗಳ ಜೊತೆಗೆ ಇವರು ಬಳಸುವ ಭಾಷೆ, ರೂಪಕಗಳು ತಾಜಾ ಮತ್ತು ನವಿರಾಗಿ ನೆನಪಿಗೋ, ಯೋಚನೆಗೂ ಹಚ್ಚುತ್ತವೆ. ಬರೆಯುವುದಕ್ಕೇನು? ಎಲ್ಲರೂ ಬರೆಯಬಹುದಾದ ಈ ಕಾಲದಲ್ಲಿ ಬದುಕಿದ್ದನ್ನೇ ಬರೆಯುವ, ಕನಸಿದ್ದನ್ನೇ ಬದುಕುವ ಪ್ರಾಮಾಣಿಕತೆ- ವ್ಯಾಕರಣಕ್ಕಿಂತಲೂ ಬಹಳ ಮುಖ್ಯವಾಗುತ್ತದೆ. ಅವೆರಡಕ್ಕೂ ಕೊರತೆಯಿಲ್ಲದ ಹಾಗೇ ಭರಪೂರ ಇವರು ಕವಿತೆಯನ್ನು, ಕವಿತೆ ಇವರನ್ನೂ ಪರಸ್ಪರ ಪೊರೆಯುತ್ತಿದ್ದಾರೆ, ಹೀಗೆ ಪೊರೆಯುತ್ತಲೇ ಇರಲಿ. ಭವ್ಯ ನವೀನ್, ಕವಿ, ಹಾಸನ
*
ಹತ್ತು ಪೈಸೆ ಎಳೆ ಕರಿಬೇವು
ಅಮ್ಮನಿಗೆ ಅಡಿಗೆ ಎಂದರೆ ವಿಶೇಷ ಪ್ರೀತಿ ಏನೂ ಇರಲಿಲ್ಲ, ಕರ್ತವ್ಯದಂತೆ ಒಲೆ ಹಚ್ಚುತ್ತಿದ್ದ ಆಕೆ ಸಾರು ಕುದಿಸುವಾಗ ಮಾತ್ರ ಥೇಟ್ ದೇವತೆ! ಧಗ ಧಗ ಬೆಳಕಿನ ನಡುವೆ, ಕಮ್ಮಗಿನ ಘಮ ಯಾವುದೇ ಔತಣದಲ್ಲಿ ಊಟ ಕೆದಕಿ ಬಂದ ಅಪ್ಪ ತಪ್ಪದೆ ಕೇಳುತ್ತಿದ್ದರು ‘ಸಾರೇನಾದರೂ ಉಳಿದಿದೆಯಾ?’ ಅದ್ಯಾವ ಮಾಂತ್ರಿಕ ಬೇರು ಅಡಗಿತ್ತೋ ಕುದ್ದಷ್ಟೂ ರುಚಿ ಅನ್ನ, ಮುದ್ದೆ, ಚಪಾತಿ ಎಲ್ಲಕ್ಕೂ ಸೈ ಕೇಳಿದಾಗೆಲ್ಲಾ ಅಮ್ಮಾ ಅಜ್ಜಿಯ ಸಾರಿನ ಪುಡಿ ಜಾಡಿ ತೋರಿಸುತ್ತಿದ್ದಳು ಸಾರಿನ ಪುಡಿ ಎಂದರೆ ತಮಾಷೆಯೆ? ಅಜ್ಜಿಯ ಕಣ್ಗಾವಲು, ಅಮ್ಮನ ಉಸ್ತುವಾರಿ, ಚಿಕ್ಕಮ್ಮ ಅತ್ತೆ ಸರೋಜಕ್ಕ ಎಲ್ಲರೂ ಸೇರಿದರೆ ಅದೀಗ ಎಂಥ ಸಮಯ ಎಂಥ ಸಮಯ ಎಂಥ ಸಮಯವು! ಅಮಾವಾಸ್ಯೆ ಇರಬಾರದು, ಗ್ರಹಣದ ಹಿಂದೆ ಮುಂದೆ ಸಲ್ಲ ಚಳಿ ಇರಿಯುವಾಗ, ಮಳೆ ಸುರಿಯುವಾಗ ಯೋಚಿಸಲೂ ಕೂಡದು ಅಕ್ಕಿ, ಬೇಳೆ, ಕಾಳು, ಕರಿಮೆಣಸು ಎಲ್ಲವೂ ಹದವಾಗಿ ಬೆರೆಯಬೇಕು ಮೆಣಸಿನ ಕಾಯಿ ಹಸಿಯಾಗಿದ್ದಾಗ ತೊಟ್ಟು ಬಿಡಬಾರದು ಒಣಗಿದ ಮೇಲೆ ಕಳಚಬಾರದು ಆಯಾ ಕಾಲಕ್ಕೆ ಒಂದೊಂದು ಸರಿ ಅಜ್ಜಿ ಎಚ್ಚರಿಸುತ್ತಿದ್ದಳು ಥಂಡಿಕಟ್ಟಲು ಬಿಡಲೇಬಾರದು ‘ಹಿಮಗಟ್ಟಿದ್ದೆಲ್ಲಾ ಸಾಯುತ್ತದೆ ನಿಧಾನವಾಗಿ’ ಸರೋಜಕ್ಕ ನಿಟ್ಟುಸಿರಿಡುತ್ತಿದ್ದಳು ಹುರಿಯುವಾಗ ಬಿಡಿಬಿಡಿಯಾಗೇ ಹುರಿಯಬೇಕು ಬೇಳೆಯ ಜೊತೆ ಜೀರಿಗೆ ಮೆಣಸಿನ ಜೊತೆ ಕೊತ್ತಂಬರಿ ಬೀಜ ಬೆರೆಸಬಾರದು ಒಂದು ಬೆಚ್ಚಗಾಗುವಾಗ ಇನ್ನೊಂದು ಕರಕಲಾಗಿರುತ್ತದೆ ತಾಳಿಕೆಯ ಮಿತಿ ಒಂದೊಂದ್ದಕ್ಕೆ ಒಂದೊಂದು ರೀತಿ ಪದಾರ್ಥಗಳ ಜೊತೆ ಅಮ್ಮ ಕಿವಿಮಾತುಗಳನ್ನೂ ಬೆರೆಸುತ್ತಿದ್ದಳು ಜಾಸ್ತಿ ಬಿಸಿ ಇರುವಾಗ ಕುಟ್ಟಬಾರದು, ಮೊದಲು ತಣಿಯಬೇಕು, ಆಮೇಲೆ ನುರಿಯಬೇಕು ಚಿಕ್ಕಮ್ಮನ ನಗು ಶುರುವಾದರೆ ಮುಗಿಯುತ್ತಲೇ ಇರಲಿಲ್ಲ ಹುರಿದು, ಕುಟ್ಟಿ, ಜರಡಿಯಾಡಿ ನಿಟ್ಟುಸಿರಿಟ್ಟ ಅಜ್ಜಿಯ ಹಣೆಯಮೇಲೆ ಇನ್ನೊಂದು ಗೆರೆ ಸಾಲಾಗಿ ನಿಂತ ಜಾಡಿಗಳಲ್ಲಿ ಸಾರಿನ ಪುಡಿಯ ಜೊತೆಜೊತೆ ಅಜ್ಜಿ, ಅಮ್ಮ, ಚಿಕ್ಕಮ್ಮ, ಅತ್ತೆಯ ಕೈ ಘಮಲು ಮಗಳಿಗೆ ಮದುವೆ ಸೀರೆ ಕೊಳ್ಳುವುದಕ್ಕೂ ಮೊದಲೇ ಅಮ್ಮ ಅಡಿಗೆ ಪುಸ್ತಕ ಬರೆಯುತ್ತಿದ್ದಳು ತವರಿಗೂ ಮಗಳಿಗೂ ಸೇತುವೆ ಕಟ್ಟುತ್ತಿದ್ದಳು. ಬಾಸಿಂಗ ಕಳಚಿಟ್ಟರೂ ಹಣೆಯ ಮೇಲಿನ ಭಾರ ಕಳಚಲಾಗದೆಂದು ಅರಿವಾಗುವಾಗ ಸಪ್ಪೆಗೆ ಸಾರ ತುಂಬಬಹುದೆಂದು ಆರಡಿ ಅಡಿಗೆಮನೆಯಲಿ ಒಬ್ಬಳೇ ನಿಂತು ಅಮ್ಮನ ಅಡಿಗೆ ಪುಸ್ತಕ ತೆರೆಯುತ್ತಿದ್ದೆ ಮಾಯಾಬಜಾರ್ ಚಿತ್ರದಲ್ಲಿ ಬಯಸಿದ್ದನ್ನೇ ತೋರಿಸುವ ಮಾಯಾಪೆಟ್ಟಿಗೆಯಲ್ಲಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೆ ಅಚ್ಚೇರು, ಪಾವು, ಸೊಲಿಗೆ ಲೆಕ್ಕ ಹುಡುಕುತ್ತಾ ಒಂದು ಹಿಡಿ ಮೆಣಸೆಂದರೆ ಯಾರ ಹಿಡಿ, ಮಕ್ಕಳೆಲ್ಲರ ಹೆಸರು ಕೊರೆದ ಅಜ್ಜಿಯ ಒರಟು ಕೈ ಮೂರು ಚುಕ್ಕೆಗಳ ಹಚ್ಚೆಯ ಅಮ್ಮನ ಬೆಚ್ಚನೆ ಕೈ ನೀಟಾಗಿ ಮೆಹಂದಿ ಹಚ್ಚಿದ ಚಿಕ್ಕಮ್ಮನ ಕೈ ಯಾರ ಅಂಗೈ ಹಿಡಿದರೆ ಲೆಕ್ಕ ಸರಿಯಾಗಬಹುದು? ಆದರೂ ಕೈಚೆಲ್ಲಿ ಬಿಡುವವಳೇ ನಾನು? ಜಾಡಿ ತುಂಬಾ ಸಂಬಂಧಗಳನ್ನು ಊರಿಸಿ ಕಾಪಿಡುತ್ತಿದ್ದ ಅಜ್ಜಿಯ ಮೊಮ್ಮಗಳು ಪದಾರ್ಥಗಳನ್ನು ಒಂದೊಂದೆ ಒಂದೊಂದೆ ಜೋಡಿಸುತ್ತಾ ಕೆಲವನ್ನು ಆರಿಸುತ್ತಾ, ಕೆಲವನ್ನು ಪೇರಿಸುತ್ತಾ ಆಯುತ್ತಾ, ಕೇರುತ್ತಾ, ಬಿಡಿಸುತ್ತಾ; ಕಡೆಯಲ್ಲಿ ಅಮ್ಮ ಬರೆದಿದ್ದಳು ಹತ್ತು ಪೈಸೆ ಎಳೆ ಕರಿಬೇವು… ಕಣ್ಣುಗಳು ಎಡವಿ ನಿಲ್ಲುತ್ತಾವೆ ಪ್ರತಿಸಲ ಪಾವು ಚಟಾಕನ್ನು ಅನುವಾದಿಸಬಹುದು ಹತ್ತು ಪೈಸೆಯನ್ನು ಇಂದಿಗೆ ಅನುವಾದಿಸಲಿ ಹೇಗೆ ನಿನ್ನೆಗಳ ಅಳತೆಯಲಿ ಇಂದಿನ ಪಾತ್ರಗಳನ್ನು ತುಂಬಲಿ ಹೇಗೆ ಏನೇ ಮಾಡಿದರೂ ಅಮ್ಮನ ಆ ಹತ್ತು ಪೈಸೆಯ ಕರಿಬೇವಿನ ಲೆಕ್ಕ ತಾಳೆಯಾಗುವುದೇ ಇಲ್ಲ ಅ ನಿನ್ನೆಗಳು ಇಂದಿಗೆ ತರ್ಜುಮೆಯಾಗುವುದೇ ಇಲ್ಲ
*
‘ಒಳ್ಳೆಯ ಕವಿತೆ ಎಂದರೆ ಯಾವುದು?’ ಮಾತಿನ ನಡುವೆ ಸ್ನೇಹಿತ ಈ ಪ್ರಶ್ನೆ ಕೇಳಿದ ಕೂಡಲೇ, ಅಯ್ಯೋ ಅಷ್ಟೇನಾ ಎನ್ನುವಂತೆ ಉತ್ತರಿಸಲೆಂದು ಬಾಯಿ ತೆಗೆದೆ. ನಿಜಕ್ಕೂ ಹೇಳುತ್ತೇನೆ, ಒಳ್ಳೆಯ ಕವಿತೆಯನ್ನಿರಲಿ, ಕವಿತೆಯನ್ನು ಹೇಗೆ ವ್ಯಾಖ್ಯಾನಿಸಬಹುದೆಂದು ಕೂಡಾ ಹೊಳೆಯಲಿಲ್ಲ. ಆಹಾ ಎಷ್ಟೊಳ್ಳೆಯ ಕವಿತೆ ಎಂದು ಹೇಳುವಷ್ಟು ಸುಲಭವೆ ಅದು ಹೇಗೆ ಒಳ್ಳೆಯ ಕವಿತೆ ಎಂದು ವಿವರಿಸುವುದು? ಕೆಲವು ಅನುಭೂತಿಗಳೇ ಹಾಗೆ, ಅದಕ್ಕೆ ಮಾತಿನ ಅಂಗಿ ತೊಡಿಸಿದ ಮೇಲೆ ಮಾತಿನ ಭಾರಕ್ಕೆ ಅದು ಕುಸಿಯತೊಡಗುತ್ತದೆ, ಒಡಲನ್ನು ಕಳೆದುಕೊಂಡ ಅಂಗಿ ಸಡಿಲವಾಯಿತೇನೋ ಅನ್ನಿಸತೊಡಗುತ್ತದೆ. ಆದರೆ ಅಂತಹ ಅನುಭೂತಿಗಳನ್ನು ಕವನ ಬಿಟ್ಟು ಬೇರೆ ರೀತಿಯಲ್ಲಿ ಹೇಳುವುದು ಹೇಗೆ? ಇದು ನನ್ನ ಗೊಂದಲ!
ಕಾಲೇಜು ದಿನಗಳಲ್ಲಿ ನಾವೆಲ್ಲರೂ ಕವನ ಬರೆದವರೆ, ಅವರಲ್ಲಿ ಬಹುಮಂದಿ ಸ್ಪಷ್ಟವಾಗಿ ಹೇಳಬೇಕೆಂದರೆ ಇದು ಕವನ ಎನ್ನುವ ಅಗಾಧ ಆತ್ಮವಿಶ್ವಾಸದಲ್ಲಿ ಬರೆದವರೇ! ಅವರಲ್ಲಿ ನಾನೂ ಒಬ್ಬಳು. ಆದರೆ ಹಾಗೆ ಬರೆಯುವ ಕವನಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ಯಾರು? ಯಾವಾಗ? ಹೇಗೆ? ಯಾಕೆ? ಎಂದು ಕೇಳಲಾರಂಭಿಸಿದಾಗ ನನ್ನಲ್ಲಿನ ಕವನಗಳನ್ನು ಕಟಕಟೆಯಿಂದ ನೇರೆ ಕತ್ತಲಕೋಣೆಗೆ ದೂಡಲಾಗಿತ್ತು. ಆಮೇಲೆ ಬದುಕಿನ ಬವಣೆ, ಸವಾಲು ಜವಾಬಿನ ಹಾದಿಯಲ್ಲಿನ ಪಯಣ, ಬದುಕು ಕಟ್ಟಿಕೊಳ್ಳುವ ಪಡಿಪಾಟಲು… ಕಡೆಗೆ ಬರವಣಿಗೆ ಎಂದರೆ ಬರೀ ವರ್ಷಕ್ಕೊಮ್ಮೆ ಗ್ರೀಟಿಂಗ್ಗಳಿಗೆ ಬರೆದ ಸಾಲುಗಳು ಮಾತ್ರ. ಆದರೆ ಈ ಎಲ್ಲಾ ಕಾಲದಲ್ಲೂ ನನ್ನನ್ನು ಪೊರೆದದ್ದು, ಪುಡಿಪುಡಿಯಾಗದಂತೆ ಹಿಡಿದಿಟ್ಟಿದ್ದು ಓದು. ಓದುವುದು ಎಂದರೆ ಆಯ್ಕೆಯಲ್ಲ, ಅನಿವಾರ್ಯವಾಗಿತ್ತು. ಕಥೆ, ಕಾದಂಬರಿ, ಕಾವ್ಯ, ನಾಟಕ, ಫಿಕ್ಷನ್, ನಾನ್ ಫಿಕ್ಷನ್ ಯಾವುದಾದರೂ ಸರಿ. ಕೆಲವೊಮ್ಮೆ ಆ ದಿನವನ್ನು, ಕೆಲವೊಮ್ಮೆ ಆ ಕ್ಷಣಗಳನ್ನು ದಾಟಲು ದೋಣಿಯಾಗುತ್ತಿದ್ದ ಯಾವುದೇ ಪುಸ್ತಕವನ್ನು ಆತುಗೊಳ್ಳುತ್ತಿದ್ದೆ. ಬರವಣಿಗೆ ದೂರವಾದಾಗಲೂ ಓದು ಮಾತ್ರ ಜೊತೆಗೇ ಇತ್ತು.
ಪ್ರತಿಯೊಬ್ಬರಿಗೂ ಎರಡು ಬದುಕುಗಳಿರುತ್ತವಂತೆ, ಎರಡನೆಯದು ಶುರುವಾಗುವುದು ಮೊದಲನೆಯದನ್ನು ಮುಗಿಸಿದಾಗ ಎಂದೇನೋ ಓದಿದ ನೆನಪು. ಹಾಗೆ ನನ್ನ ಎರಡನೆಯ ಬದುಕು ಶುರುವಾಗಿದ್ದು ಕವಿತೆಯ ಮೂಲಕವೇ. ಹೀಗೆ ಬರೆಯುತ್ತ ಬರೆಯುತ್ತ ಅಂಕಣ ಬರಹವನ್ನೂ ಶುರುಮಾಡಿದೆ. ಅಂಕಣ ಬರೆಯಲು ಮೂಡ್ಗಾಗಿ ಕಾಯಬೇಕಿಲ್ಲ. ಬರೆಯಬೇಕು ಎಂದಾಗ ಬರೆಯಬೇಕು ಅಷ್ಟೆ. ಈಗಲೂ ಡೆಡ್ಲೈನ್ ಎದುರಿಗಿದ್ದರೆ ರಾತ್ರಿ ಎಷ್ಟು ಹೊತ್ತಾದರೂ ಕೂತು ಬರೆಯಬಲ್ಲೆ. ಆದರೆ ಕವಿತೆ ಹಾಗಲ್ಲ. ವಸ್ತುವೊಂದನ್ನು ಧೇನಿಸಿ, ಬರೆಯಬೇಕೆಂದುಕೊಂಡು ಕೂತು ಕವನ ಬರೆಯುವುದು ನನ್ನಿಂದ ಸಾಧ್ಯವಿಲ್ಲ. ಕೆಲವೊಮ್ಮೆ ಒಂದಾದ ನಂತರ ಒಂದರಂತೆ ಕವಿತೆಗಳನ್ನು ಬರೆದಿದ್ದಿದೆ, ಕೆಲವೊಮ್ಮೆ ತಿಂಗಳುಗಳ ಕಾಲ ಬರಡು ದಿನಗಳನ್ನು ಕಳೆದದ್ದೂ ಇದೆ. ಆಗೆಲ್ಲಾ ಕವಿತೆಗಳಿಗಾಗಿ ಕಾಯುವುದರ ಹೊರತು ಮತ್ತೇನೂ ಮಾಡಲಾಗದ ಅಸಹಾಯಕತೆ ನನ್ನದು.
ಕವಿತೆ ನನ್ನ ಪಾಲಿಗೆ ಏನು? ಮತ್ತೆ ಪದವಾಗಿಸಲಾರದ ಗೊಂದಲ. ಆದರೆ ಇಷ್ಟು ಮಾತ್ರ ಹೇಳಬಲ್ಲೆ. ಕವಿತೆ ನನ್ನಲ್ಲಿನ ಮಳೆಗಾಲ, ನನ್ನ ಮಳೆಗಾಲ…
*
ಸಿರಿಗೌರಿಯ ಶಿವ
ಜಂಗಮನಿಗಾಗಿ ಹಂಬಲಿಸಿದವಳು ಸ್ಥಾವರವನ್ನು ಬಯಸಬಹುದೆ? ಕಾಲು ಕಟ್ಟಿಹಾಕಿದ ಮರುಕ್ಷಣ ಶಿವ ಶಿವನಲ್ಲ, ಮುಷ್ಟಿ ಬಿಗಿಯಬಾರದು, ಚಿಟ್ಟೆಯನ್ನು ಬೊಗಸೆಯಲ್ಲೇ ಹಿಡಿಯಬೇಕು ಓಂಕಾರ ಬಿತ್ತುತ್ತಾನೆ, ಗೋಧೂಳಿ ಎಬ್ಬಿಸುತ್ತಾನೆ ಹಣೆ ಮೇಲೆ ಚಂದಿರ ಕಾಣುತ್ತಾನೆ ಮುಚ್ಚಿದ ಕಣ್ಣೆವೆಗಳ ಮರೆಯಲ್ಲಿ ನಿಗಿನಿಗಿ ಕೆಂಡ ಸುಲಭವಲ್ಲ ಅವನನ್ನು ಅರಿಯುವುದು ಅಲೆಮಾರಿ ಹೆಜ್ಜೆ ಊರಿದ ಕಡೆ ಕೈಲಾಸ ಅವನ ಕೊರಳ ನಾಗ ಎದೆ ಚುಂಬಿಸಿದ ಕ್ಷಣದಿಂದ ಕಾತ್ಯಾಯನಿ ಕಾಯುವುದನ್ನು ಕಲಿತಿದ್ದಾಳೆ ನಿಟ್ಟುಸಿರು ಹಾದಿಕಟ್ಟುತ್ತದೆ ಅಲ್ಲಿಂದ ಇಲ್ಲಿಗೂ ಅರ್ಧದೇಹವನ್ನೇ ಕೊಟ್ಟವನಿಗಾಗಿ ಕಾಯುವುದು ಹೊರೆಯಲ್ಲ, ಕಾಯುವಿಕೆಯೊಂದು ನಂಬಿಕೆ, ಭರವಸೆ ಕಾಯುವವರಿಗೂ, ಬರುವವರಿಗೂ ಕಾದುಕಾದು ಪಡೆದವನ್ನು, ಕಾಯುತ್ತಲೇ ಉಳಿಸಿಕೊಳ್ಳಬೇಕು ಶಿವನ ಒಂದೊಂದು ಉಸಿರೂ ಉಮೆಯ ಮೈಮೇಲೆ ರುದ್ರಾಕ್ಷಿಯಾಗಿ ಅರಳುತ್ತದೆ ಸ್ಪರ್ಶಕ್ಕೆ ಕೊರಳ ಶಂಖದಿಂದ ಓಂಕಾರ ನಾದವಾಗುತ್ತದೆ ಅಗ್ನಿನೇತ್ರನು ಕೈಬೀಸಿ ಮುತ್ತಿಟ್ಟ ಹಣೆಮೇಲೆ ಕಣ್ಣೊಂದು ಮೂಡಿ ಉರಿಯುತ್ತದೆ ಹಗಲೂ ಇರುಳೂ ಕಾಯುತ್ತಾಳೆ ಕಾತ್ಯಾಯಿನಿ ಒಂದು ಹುಣ್ಣಿಮೆಯಿಂದ ಮತ್ತೊಂದು ಹುಣ್ಣಿಮೆಗೆ ಅವಳ ಉಸಿರಿನಲ್ಲಿ ಈಗ ಅವನ ಪರಿಮಳ
*
ಸಂಧ್ಯಾರಾಣಿ ಕೃತಿಗಳು
*
ಕಶ್
ಪ್ರೀತಿಯ ಅಚ್ಚರಿ ಎಂದರೆ ನನ್ನನ್ನು ದಿಟ್ಟಿಸುವಾಗೆಲ್ಲಾ ಅವನ ಕಣ್ಣುಗಳಿಗೆ ಬೆರಳು ಮೂಡುವುದು ಮತ್ತು ಕಡುಕತ್ತಲಲ್ಲೂ ಅವನ ಬೆರಳು ಹುಡುಕಲು ನನ್ನ ಬೆರಳುಗಳಲ್ಲಿ ಕಣ್ಣು ಅರಳುವುದು ಕಾಲಕ್ಕೊಂದು ಮುಡಿಪು ಕಟ್ಟಿ ಅವನಿಗೆ ಕದ ತೆಗೆಯುತ್ತೇನೆ ಕಿಡಿ ಬೆಂಕಿಯಾಗಿ ಹೊತ್ತಿ ಉರಿಯುತ್ತದೆ ಹೊರಗೂ, ಒಳಗೂ ಅವನಾಡಿದ ಮಾತುಗಳ ಅಕ್ಷರ ಅಕ್ಷರವನ್ನೂ ಎದೆಗಿಳಿಸಿಕೊಳ್ಳುತ್ತೇನೆ ನಡುವಿನ ಮೌನದಲ್ಲಿ ಕವನಗಳನ್ನು ನೇಯ್ದು ಗಡಿಯಾರದ ಮುಳ್ಳುಗಳಿಗೆ ತೂಗಿಬಿಡುತ್ತೇನೆ ಮುಳ್ಳುಗಳ ಹೆಜ್ಜೆ ತೊಡರಿ ಕಾಲ ನಿಲ್ಲುವಂತೆ ಬಿರುಮಳೆಯಲ್ಲಿ ನೆನಪುಗಳು ಕೆಲಡಿಯೋಸ್ಕೋಪಿನ ಚಿತ್ರಗಳು ಮೋಹಕ ಆದರೆ ವಿವರಗಳು ಸದಾ ಅಸ್ಪಷ್ಟ ಒಂದು ಬಾಗಿಲು, ನಾಲ್ಕು ಗೋಡೆಗಳ ನಡುವೆ ಹಚ್ಚಿಟ್ಟ ಹಣತೆ ಬಾಗಿಲು ತೆರೆದೊಡನೆ ಓಲಾಡುತ್ತದೆ ತೊಯ್ದಾಟದಲ್ಲೇ ಬೆಳಕು ಮಂಕಾಗುತ್ತದೆ ಕಿಡಕಿಯ ನೆರಳುಗಳು ದೀರ್ಘವಾಗುತ್ತವೆ ಹೆಜ್ಜೆಗೆ ಅಡ್ಡವಾಗಿ ಕಣ್ಣುಗಳನ್ನಿಡುತ್ತೇನೆ ಕಣ್ಣುಗಳೆದುರಲ್ಲಿ ಮನವಿಯನ್ನಿಡುತ್ತೇನೆ ಒಂದು ನಿಮಿಷ, ಒಂದು ಸ್ಪರ್ಶ, ಒಂದು ಬಿಸಿಉಸಿರು, ಒಂದೇ ಅಪ್ಪುಗೆ ಒಂದು ಕ್ಷಣವನ್ನು ಲಂಬಿಸಲು ಅದೆಷ್ಟು ಒಂದುಗಳು ಬದುಕಿನ ಕಡೆಯ ‘ಕಶ್’ ಹೀರುವಂತೆ ಅವನ ತುಟಿಯಲ್ಲಿ ಬಾಕಿ ಉಳಿದ ಮಾತುಗಳನ್ನು ಹೀರಿಕೊಳ್ಳುತ್ತೇನೆ ಕಾಲವೆನ್ನುವ ಸಿಗರೇಟು ಹೀಗೆ ಬೂದಿಯಾಗುತ್ತದೆ
ಕಶ್ – कश – puff
*
ಇರ್ಫಾನ್, ಲಂಚ್ ಬಾಕ್ಸ್ ಮತ್ತು…
ಇರ್ಫಾನ್ – ಕಡಲಿನ ತಲ್ಲಣದ ಕಣ್ಣುಗಳ, ಆದಿಮದ ಭಾರವನ್ನು ಹೊತ್ತ ಕಣ್ಣೆವೆಗಳ ಕೈಜಾರಿ ಹೋದ ಗಾಳಿಪಟದ ಮಾಂಜ. ‘ಪ್ರೀತಿ ಇತ್ತು ಅದಕ್ಕೇ ಬಿಟ್ಟುಕೊಟ್ಟೆ ಹಠ ಮಾಡುವುದಾಗಿದ್ದರೆ ಮುಷ್ಟಿ ಬಿಗಿಯುತ್ತಿದ್ದೆ’ ಅನ್ನುತ್ತಾನೆ.. ಖಾಲಿಖಾಲಿ ಅಂಗೈ, ಕಣ್ಣೆದುರಲ್ಲಿ ಖಾಲಿ ಮಧುಪಾತ್ರೆ ಖಾಲಿ ಕಣ್ಣುಗಳ ಹಿಂದೆ ಹಗಲಿರುಳೂ ಕುದಿಯುತ್ತದೆ ತುಂಬಿದ ಸುಣ್ಣದ ಭಟ್ಟಿ ಮುಚ್ಚಿದ ಊಟದ ಡಬ್ಬಿಯಲ್ಲೂ ಬರಬಹುದು ಎಂದೂ ಅಂಚೆಗೆ ಹಾಕದ ಪತ್ರಕ್ಕೆ ಉತ್ತರ, ಹೆಸರಿಟ್ಟು ಹಾಡಿದ ಹಾಡಿಗೆ ಮಾತ್ರ ವಿಳಾಸ ಕಳೆದುಹೋಗಿಬಿಡುತ್ತದೆ ಹಾಡಿನ ತುಣುಕುಗಳು ಚೆಲ್ಲಾಡುತ್ತವೆ ನದಿಯ ಎರಡೂ ದಂಡೆಗಳಲ್ಲೂ ದಂಡೆಗಳಿಗೆ ತೋಳುಗಳಿದ್ದರೆ ಸಾಕೆ ಓಗೊಡಲು ಬೇಡವೆ ಕಿವಿ ಮತ್ತು ಕೊರಳು? ಪ್ರೀತಿ ಎನ್ನುವುದೊಂದು ಲೋಬಾನದ ಅಲೆ ಕೈಗೆ ದಕ್ಕುವುದಿಲ್ಲ, ಪದಕ್ಕೆ ಸಿಕ್ಕುವುದಿಲ್ಲ. ಹೆಚ್ಚಿಗೇನೂ ಅಲ್ಲ ಮಾತಾಡಲು, ಮಾತುಕೇಳಲು ಒಂದು ಜೊತೆ ಕಣ್ಣು ಕಿವಿ ಸಿಕ್ಕಿದರೂ ಮಹಾಪ್ರಸಾದ ಹಂಚಿಕೊಳ್ಳದ ನೆನಪುಗಳು, ಮಾತುಗಳು ಸತ್ತುಹೋಗಿಬಿಡುವುದಂತೆ ನಿನ್ನೆಗಳ ತುಣುಕೂ ಗೋಡೆಯ ಮೇಲಿಲ್ಲದ ಖಾಲಿ ಖಾಲಿ ಮನೆ ಕಾಣುತ್ತದೆ ಯಾರದೋ ಮನೆಯ ಕಿಟಕಿ ಫ್ರೇಮಿನಿಂದ ಹೆರಳಲ್ಲಿ ಘಮಗುಡುವ ಮಲ್ಲಿಗೆ ತೋಳಲ್ಲಿ ನಗುವ ಕಂದ, ಡೈನಿಂಗ್ ಟೇಬಲ್ಲಿನ ಖುರ್ಚಿಗಳ ತುಂಬಾ ನಗುವ ಮುಖಗಳು ಮುಚ್ಚಿಕೊಳ್ಳುತ್ತವೆ ಕಿಟಕಿಗಳು ಕಣ್ಣೋಟ ಬಂಧವನ್ನು ಸ್ಪರ್ಷಿಸುವುದಕ್ಕೂ ಮೊದಲೇ. ಇರ್ಫಾನ್ ಚಿತ್ರದುದ್ದಕ್ಕೂ ಫ್ರೇಮುಗಳ ಆಚೆಗೇ ನಿಲ್ಲುತ್ತಾನೆ ಕಿಟಕಿ, ಬಾಗಿಲು, ಫೋಟೋಗಳಲ್ಲಿ. ಪತ್ರಗಳಲ್ಲಿ ನಗುತ್ತವೆ ಚೌಕಟ್ಟಿಗೆ ಸಿಗದ ಅಕ್ಷರಗಳು. ಈ ದೇಶದಾಚೆಗೊಂದು ದೇಶವಿದೆಯಂತೆ, ಅಲ್ಲಿ ಊರ ಸಂಪತ್ತನ್ನು ಜನಗಳ ಸಂತಸದಲ್ಲಿ ಅಲೆಯುವರಂತೆ ನಮ್ಮ ಒಂದು ರೂಪಾಯಿಗೆ ಅಲ್ಲಿ ಐದು ರೂಪಾಯಿ ಬೆಲೆಯಂತೆ ದೇವರೇ ಒಂದು ರೂಪಾಯಿಗೆ ಒಂದು ರೂಪಾಯಿ ದಕ್ಕುವ ಲೆಕ್ಕವನ್ನು ಕರುಣಿಸು ಸಾಕು, ಕೈ ದಾಟಿದ ಕೂಡಲೆ ಇಲ್ಲಿ ಎಲ್ಲವೂ ಬೆಲೆ ಕಳೆದುಕೊಳ್ಳುತ್ತದೆ. ‘ಕೆಲವೊಮ್ಮೆ ತಪ್ಪಿ ಹತ್ತಿದ ರೈಲು ಸರಿಯಾದ ಸ್ಥಳಕ್ಕೆ ತಲುಪಿಸುತ್ತದೆ’ ನಂಬುವ ವಯಸ್ಸು ದಾಟಿದೆ, ಸುಮ್ಮನೆ ನಗುತ್ತಾನೆ ಒಮ್ಮೆಯಾದರೂ ರೈಲು ನಂಬಿಕೆ ಸುಳ್ಳಾಗಿಸಿ ತಲುಪಿಸಿ ಬಿಡಲಿ ಆ ಊರಿಗೆ, ಈಗೀಗ ನಂಬಲು ಹೆದರುತ್ತೇನೆ ನಾನು ಪ್ರತಿ ಸಲ ತಪ್ಪಿಹೋಗುತ್ತದೆ ಭೂತಾನ್ ರೈಲು ಅಂದಹಾಗೆ, ಇಂದು ತಾರೀಖು ಫೆಬ್ರವರಿ 14
*
ಸಂಧ್ಯಾರಾಣಿ : ಮೂಲ ಕೋಲಾರಜಿಲ್ಲೆ. ಓದಿದ್ದು ಇತಿಹಾಸ ಎಂಎ. ವೃತ್ತಿ : ಟೀಚಿಂಗ್, ಟ್ರೇನಿಂಗ್, ಸಾಫ್ಟ್ ವೇರ್, ಆಡ್ಮಿನ್, ಸೇಲ್ಸ್, ಅನುವಾದ, ವೆಬ್ ಮ್ಯಾಗಜೀನ್ ಸಂಪಾದನೆ, ಟಿವಿ ಚಾನೆಲ್ ಒಂದಕ್ಕೆ ಕಾರ್ಯಕ್ರಮ ನಿರ್ಮಾಣ ಇತ್ಯಾದಿ. ಈಗ ಫ್ರೀಲ್ಯಾನ್ಸ್ ಬರಹಗಾತಿ ಮತ್ತು ಅನುವಾದಕಿ.
ಪುಸ್ತಕಗಳು : ‘ಜೋಗಿ ರೀಡರ್’ (ಸಂಪಾದನೆ), ‘ಹೇಳತೇವ ಕೇಳ’ (ಸಂಯೋಜನೆ), ‘ಯಾಕೆ ಕಾಡುತಿದೆ ಸುಮ್ಮನೆ ನನ್ನನು’ (ಪ್ರಬಂಧಗಳ ಪುಸ್ತಕ), ‘ತುಂಬೆ ಹೂ’ (ಕರ್ನಾಟಕದ ಮೊದಲ ನ್ಯೂರೋಸರ್ಜನ್ ಡಾ. ನಾರಾಯಣ ರೆಡ್ಡಿಯವರ ಜೀವನ ಚರಿತ್ರೆ), ‘ಆನು ನಿನ್ನನು ಹಾಡದೆ ಸೈರಿಸಲಾರೆನಯ್ಯ’ (ಬಿವಿ ಭಾರತಿ ಮತ್ತು ಸಂಧ್ಯಾರಾಣಿ ಬರೆದ ಕವನಗಳು), ‘ಸಿನಿಮಾಯಾಲೋಕ’ (ಸಿನಿಮಾಗಳನ್ನು ಕುರಿತ ಬರಹಗಳು), ‘ಪಾಂಡಿ ಎನ್ನುವ ರಂಗೋಲಿ’ (ಪ್ರವಾಸ ಕಥನ). ನಾಟಕಗಳು : ‘ಪೂರ್ವಿ ಕಲ್ಯಾಣಿ’, ‘ಕ್ಯೂಬಾ ಎನ್ನುವ ಮಿಣಿಮಿಣಿ ಹಣತೆ’. ಸಿನಿಮಾ ಕಥೆ, ಸಂಭಾಷಣೆ : ‘ನಾತಿಚರಾಮಿ’, ‘ಹೆಲಿಕಾಪ್ಟರ್ ಚಿಟ್ಟೆ’ ಮತ್ತು ನಿರ್ಮಾಣದಲ್ಲಿರುವ ಇನ್ನೆರಡು ಚಿತ್ರಗಳು.
ಇದನ್ನೂ ಓದಿ : Poetry : ಅವಿತಕವಿತೆ : ದಕ್ಕಿದ ಕವಿತೆಯೊಂದು ಎಲ್ಲ ಸಂಕಟಗಳಿಂದ ಮುಕ್ತಿ ಕೊಡುತ್ತದೆಯೆಂಬ ಭ್ರಮೆಗಂತೂ ಬೀಳಲಾರೆ
ಭವ್ಯ ನವೀನ್ ಕವಿತೆಗಳು : Poetry : ಅವಿತಕವಿತೆ ; ‘ಮದುವೆಗೆ ಪುರಾವೆ ಸಿಕ್ಕ ಹಾಗೆ ಸುಖಕ್ಕೆ ಖಾತ್ರಿ ಸಿಗಬಹುದಾ?’
Published On - 8:20 am, Sun, 9 January 22