Literature : ಅಭಿಜ್ಞಾನ : ‘ಡೈಮಂಡ್ ಸರ್ಕಸ್ಸಿನಲ್ಲಿ ಒಂದು ಹೆರಿಗೆ’

Jayanth Kaikini : ಆ ರಾತ್ರಿ ಡಂಪಿ ತನ್ನ ಕಬ್ಬಿಣದ ಟ್ರಂಕಿನೊಡನೆ ನೇರವಾಗಿ ಶಫಿಯ ಡೇರೆಗೆ ಹೋಗಿ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡು ಮಲಗಿಬಿಟ್ಟಳು. ಅಂದಿನಿಂದ ಶಫಿ ಮತ್ತು ಡಂಪಿಯ ಜತೆ ಸಂಸಾರ ಆರಂಭವಾಯಿತು. ತಾನಾಗೇ ಮೈಮೇಲೆ ಬಂದು ಬಿದ್ದ ಹೆಂಗಸನ್ನು ತಳ್ಳುವಷ್ಟು ಹುತಾತ್ಮ ಶಫಿ ಇರಲಿಲ್ಲವಾದ್ದರಿಂದ ಮತ್ತು ಇದಕ್ಕೆ ಜೆರ್ರಿಯ  ಅನುಮೋದನೆಯೂ ಇದ್ದಿದ್ದರಿಂದ ಶಫಿ ನಿರ್ವಿಕಾರವಾಗಿ ಡಂಪಿಯನ್ನು ಇಟ್ಟುಕೊಂಡುಬಿಟ್ಟ.

Literature : ಅಭಿಜ್ಞಾನ : ‘ಡೈಮಂಡ್ ಸರ್ಕಸ್ಸಿನಲ್ಲಿ ಒಂದು ಹೆರಿಗೆ’
ಕವಿ, ಕಥೆಗಾರ ಜಯಂತ ಕಾಯ್ಕಿಣಿ
Follow us
|

Updated on: Jan 09, 2022 | 10:14 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿಯ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಜಯಂತ ಕಾಯ್ಕಿಣಿ ಅವರ ‘ಡೈಮಂಡ್ ಸರ್ಕಸ್ಸಿನಲ್ಲಿ ಒಂದು ಹೆರಿಗೆ’ ಕಥೆಯ ಆಯ್ದ ಭಾಗ ಜಯಂತ ಕಾಯ್ಕಿಣಿ ಕಥೆಗಳು ಕೃತಿಯಿಂದ.

*

ಆ ರಾತ್ರಿ ಡಂಪಿ ತನ್ನ ಕಬ್ಬಿಣದ ಟ್ರಂಕಿನೊಡನೆ ನೇರವಾಗಿ ಶಫಿಯ ಡೇರೆಗೆ ಹೋಗಿ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡು ಮಲಗಿಬಿಟ್ಟಳು. ಅಂದಿನಿಂದ ಶಫಿ ಮತ್ತು ಡಂಪಿಯ ಜತೆ ಸಂಸಾರ ಆರಂಭವಾಯಿತು. ತಾನಾಗೇ ಮೈಮೇಲೆ ಬಂದು ಬಿದ್ದ ಹೆಂಗಸನ್ನು ತಳ್ಳುವಷ್ಟು ಹುತಾತ್ಮ ಶಫಿ ಇರಲಿಲ್ಲವಾದ್ದರಿಂದ ಮತ್ತು ಇದಕ್ಕೆ ಜೆರ್ರಿಯ  ಅನುಮೋದನೆಯೂ ಇದ್ದಿದ್ದರಿಂದ ಶಫಿ ನಿರ್ವಿಕಾರವಾಗಿ ಡಂಪಿಯನ್ನು ಇಟ್ಟುಕೊಂಡುಬಿಟ್ಟ. ಸರ್ಕಸ್ಸಿನ ಎಲ್ಲರಿಗೂ ಸಾಮೂಹಿಕ ಊಟ ತಿಂಡಿ ಕಾಫಿ ಇದ್ದರೂ ಇಂಥ ಉಪಸಂಸಾರಗಳು ತಮ್ಮ ತಮ್ಮ ಡೇರೆಯಲ್ಲಿ ಸೀಮೆಎಣ್ಣೆ ಸ್ಟೋವು ಇಟ್ಟುಕೊಂಡು ಬೇಕಾದಾಗ ಬೋಂಡ, ಆಮ್ಲೆಟ್ಟು, ಚಹಾ ಮಾಡಿಕೊಳ್ಳುತ್ತಿದ್ದರು. ಏಕೆಂದರೆ ಹಾಗೆ ಮಾಡಿದ ಹೊರತು ತಮ್ಮದೊಂದು ಸಂಸಾರವಾಯಿತು ಅಂತ ಅವರಿಗೆ ಅನ್ನಿಸುತ್ತಲೇ ಇರಲಿಲ್ಲ. ಇದ್ದಬಿದ್ದ ಒಂದೆರಡು ಬಟ್ಟೆಯನ್ನೇ ಟ್ಯಾಂಕರಿನ ನಲ್ಲಿಯ ಕೆಳಗೆ ಹುಸ್ ಹುಸ್ ಅಂತ ಒಗೆಯುವದು, ಗುಟ್ಟಾಗಿ ಬೋಂಡ ಮಾಡಿಕೊಳ್ಳುವದು, ಆಗಾಗ ಜಗಳಾಡುವದು ಮಾಡಿದಾಗಲೇ ಒಂದು ಬಗೆಯ ಸಂಸಾರಸ್ಥರಾದ ಸಮಾಧಾನ ಅವರಿಗಾಗುತ್ತಿತ್ತು. ಇದಕ್ಕೆ ಡಂಪಿ ಹೊರತಾಗಿರಲಿಲ್ಲ. ಎರಡನೆಯ ದಿನವೇ ಬತ್ತಿ ಸ್ಟೋವ್ ತಂದು ಬಾಣಲೆ ಇಟ್ಟು ಭಜಿ ಮಾಡಿಬಿಟ್ಟಳು. ಇವಳ ಭಜಿಯ ರುಚಿಗೆ ಮರುಳಾದ ಶಫಿ ಆಗ ಟ್ರಂಕಿನ ಮೇಲೆ ಕಾಲು ಹಾಕಿ ಎರಡೂ ಕೈಗಳನ್ನು ತಲೆಯ ಹಿಂದೆ ಕೊಟ್ಟು ಅಡ್ಡಾಗಿ ಭಜಿ ತಯಾರಾಗುವುದನ್ನು ಅಭಿಮಾನದಿಂದ ನೋಡುತ್ತಿದ್ದ. ಎದ್ದು ಕೈ ಹಾಕಿ ತೆಗೆದುಕೊಳ್ಳುವಾ ಅನಿಸಿದರೂ ಕಂಟ್ರೋಲ್ ಮಾಡಿಕೊಂಡು ಡಂಪಿಯೇ ಕಾಗದದಲ್ಲಿ ಭಜಿಯನ್ನು ಇಟ್ಟು ಎಣ್ಣೆ ತೆಗೆದು ಪ್ಲೇಟಿನಲ್ಲಿ ತಂದು ತನ್ನೆದುರು ಇಡುವುದನ್ನೇ ಕಾಯುತ್ತಿದ್ದ. ಆಗ ತನ್ನದೂ ಒಂದು ಸಂಸಾರ ಆಯಿತು ಅಂತ ಸಮಾಧಾನ ಪಡುತ್ತಿದ್ದ. ಅವನು ತನ್ನ ಕೂದಲುಗಳಿಗೆ ಬಣ್ಣ ಬಳಿಯುವಾಗ ಮೀಸೆ ಚೂಪಾಗಿ ಕತ್ತರಿಸುವಾಗ ಡಂಪಿ ಅವನನ್ನೇ ನೋಡುತ್ತಿದ್ದಳು. ಅವಳ ಟ್ರೆಪೀಜ್ ನಡೆಯುವಾಗ ಯಾವಾಗಲೂ ಶಫಿ ಕೆಳಗೆ ಬಂದು ಬಲೆಯ ಸಮೀಪ ನಿಲ್ಲುತ್ತಿದ್ದ. ತಮ್ಮ ಗಾಂಧರ್ವ ವಿವಾಹದ ನೆನಪಿಗೆಂಬಂತೆ ಹುಲಿಯ ಬಾಯಲ್ಲಿ ಉಳಿದಿದ್ದ ಕೆಂಪು ಪ್ಲಾಸ್ಟಿಕ್ ಹೂವನ್ನು ತನ್ನ ಟ್ರಂಕಿನಲ್ಲಿಟ್ಟುಕೊಂಡಿದ್ದ.

ಅವನಿಗೆ ಖಯಾಲಿ ಬಂದಾಗೆಲ್ಲ ಕಚಗುಳಿ ಮಾಡಿಸಿಕೊಳ್ಳಲು ಬರುತ್ತಿದ್ದ ಸೈಕ್ಲಿಸ್ಟ್ ಸುಶೀಲಳಾಗಲಿ ಮದ್ರಾಸ್‌ ಮೋಹಿನಿಯಾಗಲಿ ಈಗ ಅವನ ಬಳಿ ನೋಡಲೂ ಹಿಂಜರಿಯುವಷ್ಟು ಗೃಹಸ್ಥನಂತೆ ಕಾಣುತ್ತಿದ್ದ. ಡಂಪಿ ಇದ್ದ ಎರಡೇ ಪ್ಲೇಟು, ಬಾಣಲೆಯನ್ನೇ ಎಲ್ಲರೂ ನೋಡುವಂತೆ ಡೇರೆಯ ಹೊರಗೆ ಎಷ್ಟೋ ಹೊತ್ತಿನ ತನಕ ತಿಕ್ಕುತ್ತಿದ್ದಳು. “ನಿನ್ನ ಮೋಹಪಾಶದಲ್ಲಿ ಅವಳನ್ನು ಇಡು” ಎಂಬ ಜೆಗ್ರಿಯ ಕುಮ್ಮಕ್ಕನ್ನೂ ಮೀರಿ ಡಂಪಿಯ ಮೇಲೆ ಕರುಣೆ ಪ್ರೇಮ ಜಾಸ್ತಿ ಆದಂತೆ ಶಫಿಗೆ ಭಾಸವಾಗತೊಡಗಿತು. ಬಾಲ್ಯದಿಂದಲೂ ಅವಳನ್ನ, ದಪ್ಪ ಗುಂಡನೆಯ ಅಂಗಸೌಷ್ಠವದಿಂದಾಗಿ ಎಲ್ಲರೂ ಡಂಪಿ ಅಂತ ಕರೆದಿದ್ದರೂ ಅವನು ಆ ಹೆಸರಿನಿಂದ ಕರೆದಾಗ ಅವಳಿಗೆ ಆನಂದವಾಗುತ್ತಿತ್ತು. ಶಫಿ ಈಗ ಜೆರಿಯ ಬಳಿ ಸಣ್ಣ ವಾದ ಮಾಡಿ ಹುಲಿಯ ಬಾಯಿಯ ಐಟಂನಿಂದ ಅವಳನ್ನು ಬಿಡುಗಡೆ ಮಾಡಿದ. ಅದಕ್ಕೆ ಬೇರೊಬ್ಬಳನ್ನು ತರಬೇತಿ ಮಾಡಿದ. ಒಂದು ದಿನ ಗುಟ್ಟಾಗಿ ಮಟನ್ ತಂದು ತನಗೆ ಗೊತ್ತಿದ್ದ ರೀತಿಯಲ್ಲಿ ಗರಂ ಮಸಾಲೆ ಹಾಕಿ ಬೇಯಿಸಿದ. ಅದು ಫೈನಲ್ ಹಂತಕ್ಕೆ ಬಂದಾಗ ಅದರ ಬಳಿ ಡಂಪಿಯನ್ನು ಕೂಡ್ರಿಸಿ ಅದನ್ನು ತಾನು ಮಾಡಿದ್ದೇ ಅಲ್ಲ ಅನ್ನುವ ರೀತಿ ಟ್ರಂಕಿನ ಮೇಲೆ ಕಾಲು ಹಾಕಿ ಅಡ್ಡಾಗಿ “ಎಷ್ಟು ಹೊತ್ತಿದು, ಆದ ತಕ್ಷಣ ಬಡಿಸು” ಎಂದೆಲ್ಲ ಊರಿನ ಗಂಡಂದಿರ ಹಾಗೆ ಕಿರುಗುಡುತ್ತಿದ್ದ. ಒಮ್ಮೊಮ್ಮೆ ಕಾಸ್ಟ್ಯೂಮ್ ಡೇರೆಯಲ್ಲಿ ಮದ್ರಾಸ್‌ ಮೋಹಿನಿ ಇತ್ಯಾದಿಯರು ತನ್ನ ಎದುರೇ ಎದೆ ಕುಲುಕಿಸಿ ಜರಿಯ ಬ್ರಾ ಬದಲಿಸುವಾಗ ತನ್ನ ಗೃಹಸ್ಥತನ ಜಾಸ್ತಿಯೇ ಆಯಿತೇನೋ ಎಂಬ ಅರಿವಾದವನಂತೆ ಮಗುವಿನ ಗಲ್ಲ ಚೂಟುವಂತೆ ಕೈ ಹಾಕುತ್ತಿದ್ದ. ಆಗೆಲ್ಲ ಡಂಪಿ ಜೆರ್ರಿಯ ಬಳಿ ಕಂಪ್ಲೇಂಟು ಮಾಡಿದಳು. ಜೆರ್ರಿ ತಕ್ಷಣ ಶಫಿಗೆ ಒಂದು ಪೆಗ್ಗು ಕೊಟ್ಟು “ನೀನು ಹೀಗೆಲ್ಲ ಮಾಡಿ ನಾಳೆ ಅವಳು ಡೈಮಂಡ್ ಬಿಟ್ಟು ಹೋದರೆ ಟ್ರೆಪೀಜಿನಲ್ಲಿ ಚಡ್ಡಿ ಹಾಕಿಕೊಂಡು ಯಾರು ಹಾರಬೇಕು. ನೀನೋ ನಾನೋ ?” ಎಂದು ತಲೆಯ ಮೇಲೆ ಕೈಯಾಡಿಸಿ ಕಳಿಸಿದ.

Abhijnana excerpt from Kannada Short Story Diamond Circusnalli Ondu Herige by Jayanth Kaikini Published by Ankita Pustaka

ಜಯಂತ ಕಾಯ್ಕಿಣಿ ಕಥೆಗಳು

ವರುಷಗಳಾದರೂ ದೊಡ್ಡಮ್ಮನ ಪತ್ತೆ ಸಿಕ್ಕಿರಲಿಲ್ಲ. ಆದರೆ ಕೊಲ್ಲಾಪುರ ಜಾತ್ರೆಯಲ್ಲಿ ಡೈಮಂಡಿನ ಕ್ಯಾಂಪು ನಡೆದಿದ್ದಾಗ ದೊಡ್ಡಮ್ಮನ ಕೈಕೆಳಗಿನ ಹುಡುಗಿಯೊಬ್ಬಳು ಪ್ರಚಾರದ ಹುಡುಗನಿಗೆ ಸಿಕ್ಕಿದ್ದಳಂತೆ. ಅವನಿಂದ ದೊಡ್ಡಮ್ಮ ಮತ್ತು ಸಂಗಡಿಗರು ಹೆಚ್ಚಿನ ವರ್ಣಮಯ ಧಂದೆಯಲ್ಲಿ ಯಶಸ್ಸು ಗಳಿಸುತ್ತಿದ್ದಾರೆ ಎಂಬ ವದಂತಿ ಸರ್ಕಸ್ಸಿನ ವಾಸನೆಯಲ್ಲಿ ಸೇರಿಕೊಂಡಿತು. ಇದು ಕಿವಿಗೆ ಬಿದ್ದಾಗ ಡಂಪಿಯ ಬಾಯಿ ಬಿದ್ದುಹೋಯಿತು. ಬಹುಶಃ ತನ್ನನ್ನು ಯಾಕೆ ಜತೆಗೊಯ್ಯಲಿಲ್ಲ ಎಂಬುದನ್ನು ಅರಿತವಳಂತೆ ಬಿಕ್ಕಿ ಬಿಕ್ಕಿ ಅತ್ತಳು. ಡೈಮಂಡ್ ಸರ್ಕಸ್ಸು ಸಣ್ಣ ಶಹರಗಳಲ್ಲಿ ಹೆಚ್ಚು ಜನಪ್ರಿಯವಾದರೆ ದೊಡ್ಡ ಶಹರಗಳಲ್ಲಿ ಪೇಲವವಾಗುತ್ತಿತ್ತು. ಆದರೆ ಸಣ್ಣ ಶಹರಗಳಲ್ಲಿ ಕ್ಯಾಂಪುಗಳ ಅವಧಿ ಸಣ್ಣದಾದ್ದರಿಂದ ಲುಕ್ಸಾನೇ ಜಾಸ್ತಿ ಆಗಿ ಜೆರ್ರಿ ಕಂಗಾಲಾಗುತ್ತಿದ್ದ. ಮಳೆಗಾಲದಲ್ಲಿ ಬಿಸಿನೆಸ್ಸೇ ಇರುತ್ತಿರಲಿಲ್ಲ. ಆಗ ಎಷ್ಟೋ ದಿನ ಡೈಮಂಡ್ ಬಂದಾಗುತ್ತಿತ್ತು. ಕೆಲವರು ತಮ್ಮ ತಮ್ಮ ಊರು ಗೀರು ಅಂತ ಹೋಗುತ್ತಿದ್ದರು. ಡೈಮಂಡಿನಲ್ಲೇ ಹುಟ್ಟಿ ಬೆಳೆದಿದ್ದ ಡಂಪಿಯಂಥವರಿಗೆ ತುಂಬ ಬೇಜಾರಿನ ದಿನಗಳವು. ಎಲ್ಲೂ ಹೋಗದೇ ಸರ್ಕಸ್ಸಿನಲ್ಲೇ ಉಳಿಯಬೇಕಾಗುತ್ತಿತ್ತು.

ಶಫಿಯೂ ತನ್ನ ಊರು ಲಖನೌ ಗಿಖನೌ ಅಂತ ಉತ್ತರಭಾರತ ತಿರುಗಿ ಬರುತ್ತಿದ್ದ. ಕ್ಯಾಂಪು ತೆರೆಯುವುದನ್ನೇ ಕಾಯುತ್ತ ಸೋರುವ ಡೇರೆಯಲ್ಲಿ ಕೂತಿದ್ದ ಡಂಪಿಗೆ ಆಗೆಲ್ಲ ತನಗೆ ಮಗುವಾಗಿದ್ದರೆ ಆಡಿಸಿಕೊಂಡಾದರೂ ಇರುತ್ತಿದ್ದೆ ಅಂತನಿಸುತ್ತಿತ್ತು. ಶಫಿಯ ಬಳಿ ಆಡಿದಾಗ “ಛೆ ಛೆ ಟ್ರೆಪೀಜ್ ಆರ್ಟಿಸ್ಟ್​ಗೆ ಮಕ್ಕಳು? ನಿನ್ನ ಕಸುಬೇ ಮುಗಿದು ಹೋಗಬಹುದು” ಎಂದು ಟ್ರೆಪೀಜ್ ಆರ್ಟಿಸ್ಟ್ ಬಸಿರಾಗುವದು ಪಾಪವೋ ಎಂಬಂತೆ ನಾಲಿಗೆ ಹೊರಹಾಕಿ ತಲೆ ಅಲ್ಲಾಡಿಸಿದ್ದ. ಹೀಗಾಗಿ ಅವಳ ಮಳೆಗಾಲಗಳು ಹರಿದ ಕಾಸ್ಟ್ಯೂಮ್ ಹೊಲಿಯುವುದರಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳುವುದರಲ್ಲಿ ಕಳೆಯುತ್ತಿದ್ದವು. ರೋಗ ಹಿಡಿದ ಮೃಗಗಳು ಮಳೆಗಾಲದಲ್ಲಿ ಉಲ್ಬಣಗೊಂಡು ಸಾಯುತ್ತಿದ್ದವು. ಊರಿಗೆ ಹೋದ ಶಫಿ ಪ್ರತೀ ವರುಷ ಒಂದಲ್ಲಾ ಒಂದು ಪ್ರಾಣಿಯನ್ನು ತಕೊಂಡು ಬರುತ್ತಿದ್ದ. ಇಂಥ ಮಳೆಗಾಲದಲ್ಲೇ ಡಂಪಿ ಆ ಹುಲಿಯ ಜತೆ, ಯಾರ ಬಾಯಿಂದ ಬಚಾವಾಗಿದ್ದಳೊ ಆ ಹುಲಿಯ ಜತೆ ಹೆಚ್ಚಿನ ವೇಳೆ ಕಳೆಯುತ್ತಿದ್ದಳು.

ತನ್ನ ಶಫಿಯ ಸಂಬಂಧದ ಎಳೆಯಲ್ಲಿ ಆ ಹುಲಿಯೂ ಇದೆ ಎಂದವಳಿಗೆ ಅನಿಸುತ್ತಿತ್ತು. ಆ ಹುಲಿಗೊಂದು ವಿಲಕ್ಷಣ ಚರ್ಮರೋಗ ಹತ್ತಿತ್ತು. ಅಲ್ಲಲ್ಲಿ ರೋಮಗಳು ಉದುರಿ ಅದರ ಮೈ ಅರ್ಧಮರ್ಧ ಕಟಾವು ಮಾಡಿದ ಗದ್ದೆಯಂತೆ ಕಾಣುತ್ತಿತ್ತು. ಅದರ ಒಸಡಿನ ಗಾಯಗಳು ಮಾಯುತ್ತಲೇ ಇರಲಿಲ್ಲ. ಈ ಸಲ ಮಳೆಗಾಲದಲ್ಲಿ ಊರಿಗೆ ಹೋದ ಶಫಿ ಮರಳಿ ಬರುವಾಗ ಪ್ರಾಣಿಯನ್ನು ತರಲಿಲ್ಲ. ಬದಲಿಗೆ ಒಂದೇ ರೀತಿ ಕಾಣುವ ಹದಿಹರೆಯದ ಚಂದದ ಎರಡು ಪೋರಿಯರನ್ನು ಕರೆದುಕೊಂಡು ಬಂದ. ರಾಂಚಿಯಿಂದ ಬಂದ ಸೋದರಿಯರು ಅವರು. ಕಾನ್ಪುರದಲ್ಲಿದ್ದ ಅವರ ಸರ್ಕಸ್ಸಿನಿಂದ ಅವರನ್ನು ಹೆಚ್ಚಿನ ಆಸೆ ತೋರಿಸಿ ಎತ್ತಿಕೊಂಡು ಬಂದ ಶಫೀ ‘ರೇಖಾ ಸುರೇಖಾ’ ಎಂದು ಎಲ್ಲರಿಗೂ ಅವರನ್ನು ಪರಿಚಯಿಸಿದ. ತೆಳ್ಳಗಿನ ಸುಂದರಿಯರ ಕಣ್ಣುಗಳು ಮತ್ತು ಹೊಕ್ಕುಳುಗಳು ತೀರ ಚಿಕ್ಕದಾಗಿದ್ದವು. ರಾಂಚಿ ಸೋದರಿಯರ ಆಗಮನ ಡೈಮಂಡಿಗೇ ಒಂದು ಹೊಸ ಚೈತನ್ಯವನ್ನು ತಂದಂತಾಯಿತು. ಮಹಾಡ್ ಕ್ಯಾಂಪಿನ ಮೊದಲ ದಿನದ ಮುಂಜಾನೆ ಖಾಲಿ ತಂಬುವಿನಲ್ಲಿ ಸರ್ಕಸ್ಸಿನ ಎಲ್ಲರ ಎದುರು ರಾಂಚಿ ಸೋದರಿಯರು ತಮ್ಮ ಕಲೆಯನ್ನು ತೋರಿಸಿದರು. ಟ್ರೆಪೀಜ್​ನಲ್ಲಿ ಟ್ವಿಸ್ಟ್ ಜಂಪ್ ಅಂತ ಕತ್ತರಿಯಂತೆ ಹಾರುವ ಹೊಸ ನಮೂನೆಯನ್ನು ತೋರಿಸಿದಾಗ ಜೆರ್ರಿ ತೆರೆದ ಬಾಯಿ ಮುಚ್ಚಲೇ ಇಲ್ಲ. ರೇಖಾ ಕೋಲಿನ ಮೇಲೆ ಕಪ್ಪು ಬಸಿಗಳನ್ನು ಬ್ಯಾಲೆನ್ಸ್​ ಮಾಡಿ ಬೀಳದಂತೆ ತನ್ನ ತಲೆಗೆ ಎಸೆಯುತ್ತ ಹನ್ನೆರಡು ಕಪ್ಪುಬಸಿಗಳನ್ನು ಪೇರಿಸುತ್ತಿದ್ದಳು. ಸುರೇಖಾ ನಾಗಾಲೋಟದ ಕುದುರೆಯ ಬೆನ್ನಿನ ಮೇಲಿಂದ ಸರಕ್ಕನೆ ಹೊಟ್ಟೆಯಡಿ ಜಾರಿ ಇನ್ನೊಂದು ಬದಿಯಿಂದ ಏರಿ ಮತ್ತೆ ಬೆನ್ನಿನ ಮೇಲೆ ಕೂರುತ್ತಿದ್ದಳು. ಅವಳ ಉಡುಪು ವಿನ್ಯಾಸ ಬೇರೆಯದಿತ್ತು. ಶಫೀ ‘‘ತಂದದ್ದು ಯಾರು?’’ ಎನ್ನುವ ಠೀವಿಯಲ್ಲಿ ನಡೆದಾಡಿದ. ಹುಲಿಯ ಬಾಯಿಂದ ತಲೆ ಹೊರತೆಗೆದು ನೋಡಿದಾಗ ಕಂಡ ತನ್ನ ಜಗತ್ತು ಹಠಾತ್ತನೆ ಸಣ್ಣದಾದಂತೆ ಡಂಪಿಗೆ ತೋರಿತು.

ಸೌಜನ್ಯ : ಅಂಕಿತ ಪ್ರಕಾಶನ 

ಇದನ್ನೂ ಓದಿ : Netflix Anthology : ‘ಅನ್​ಕಹಿ ಕಹಾನಿಯಾ’ದಲ್ಲಿ ಜಯಂತ ಕಾಯ್ಕಿಣಿ ಅವರ ‘ಮಧ್ಯಂತರ’

ಇದನ್ನೂ ಓದಿ : Literature : ಅಭಿಜ್ಞಾನ : ಅವಳು ಮುಟ್ಟಿದ ಅನ್ನ ಊಟ ಮಾಡಕೂಡದೆಂಬುದು ಅವನ ಗಮನಕ್ಕೆ ಬಂದಿರಲಿಲ್ಲ

ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ