Sign In

By signing in or creating an account, you agree with Associated Broadcasting Company's Terms & Conditions and Privacy Policy.

Poetry; ಅವಿತಕವಿತೆ: ರೆಕ್ಕೆಗಳು ಮಾತ್ರ ನಿನ್ನ ಆತ್ಮಸಂಗಾತ

‘ಇನ್ನಿಲ್ಲದಂತೆ ನನ್ನನ್ನು ಯಾವುದು ಒಳಗೊಳ್ಳುತ್ತದೆಯೋ ಆ ಅನುಭವದ ಇಡಿಯಾದ ಆಕೃತಿಯ ಜೊತೆ ಸಂವಹಿಸುವುದು ಸಾಧ್ಯವಾಗಬೇಕು. ಆ ಸಾಧ್ಯತೆಯನ್ನು ಸಾಧಿಸುವುದೇ ಇಡೀ ಜೀವಮಾನ ಬರೆಯಬಹುದಾದ ಒಂದೇ ಒಂದು ಕವಿತೆ. ಆ ಕವಿತೆಯನ್ನು ಪೂರ್ಣಗೊಳಿಸಲು ಆರಂಭವಾದ ಸಾಲಿನ ಹಾಗೆ ಪ್ರತಿ ಹೊಸ ಬರಹವೂ ಮೈ ಪಡೆಯುತ್ತದೆ. ಒಂದು ಸ್ಪಷ್ಟತೆಯನ್ನು ಕಂಡುಕೊಳ್ಳಲು ಹಲವು ಅಸ್ಪಷ್ಟತೆಗಳನ್ನು ಹಾಯಬೇಕಾಗುತ್ತದೆ. ಈ ನೀರಿನ ಮೇಲನ ನಡಿಗೆಯನ್ನು ಕಲಿಯುವುದಕ್ಕೆ ನಾನು ಮತ್ತೆ ಮತ್ತೆ ಬರಹದ ಮುಖಾಮುಖಿಯಾಗುತ್ತೇನೆ.‘ ಕೃಷ್ಣ ದೇವಾಂಗಮಠ

Poetry; ಅವಿತಕವಿತೆ: ರೆಕ್ಕೆಗಳು ಮಾತ್ರ ನಿನ್ನ ಆತ್ಮಸಂಗಾತ
ಕೃಷ್ಣ ದೇವಾಂಗಮಠ
Follow us
ಶ್ರೀದೇವಿ ಕಳಸದ
|

Updated on:Mar 07, 2021 | 1:07 PM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ಅವಿತಕವಿತೆ. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ಕೃಷ್ಣ ದೇವಾಂಗಮಠ ಅವರ ಕವನಗಳು ನಿಮ್ಮ ಓದಿಗೆ.

ಪರಿಕಲ್ಪನೆ : ಶ್ರೀದೇವಿ ಕಳಸದ

ಕೃಷ್ಣ ಶ್ರೀಕಾಂತ ದೇವಾಂಗಮಠ, ನಾನು ಈಚೆಗೆ ಓದಿದ ಅತ್ಯಾಕರ್ಷಕ ಜೀವಂತ ಕವಿ. ಅವರ ಕಾವ್ಯವು ಗಹನವಾದ ಸಂಗತಿಗಳ ಅನ್ವೇಷನೆಗೆ ಅಂಜುತ್ತಿಲ್ಲ. ಸಣ್ಣ ಸಣ್ಣ ಹೊಳಹುಗಳಲ್ಲಿ ಮುದುಡಿಕೊಳ್ಳುತ್ತಿಲ್ಲ. ಕಾವ್ಯದ ನುಡಿಗಟ್ಟು ಗಟ್ಟಿಯಾಗಿದೆ. ಲಯದ ಒಳ ಮುರಿತಗಳು ಅನಾಯಾಸವಾಗಿ ಅವರಿಗೆ ದಕ್ಕುತ್ತಿವೆ. ಇದು ಆಸೆ ಹುಟ್ಟಿಸುವ ಸಂಗತಿ. ಜಗನ್ಮಾತೆಗೆ ಮೈಯೆಲ್ಲಾ ಮೊಲೆ ನನ್ನನ್ನು ಕಾಡಿದ ಕೃಷ್ಣನ ಕವಿತೆ. ಓದಿದಷ್ಟೂ ಅದರ ಅರ್ಥವಲಯ ಹಿಗ್ಗುವಂತಿದೆ. ಘನವಾದ ಒಂದು ಪದ್ಯವನ್ನು ರಚಿಸುವ ಸಂಕಲ್ಪ ಇಲ್ಲಿ ಸಾರ್ಥಕವಾಗಿದೆ. ಕೃಷ್ಣ ತುಳಸಿಯ ಜಿಗಿತದ ಲಯ ಮತ್ತು ಆನಾಯಾಸವಾಗಿ ಒದಗಿ ಬರುವ ಪ್ರಾಸಗಳ ರಿಂಗಣ ಮೆಚ್ಚುಗೆ ಗಳಿಸುವಂತಿವೆ. ಬಹು ಉತ್ಸಾಹದಿಂದ ನಾವು ಈ ಕವಿಯನ್ನು ಕನ್ನಡ ಕಾವ್ಯವಲಯಕ್ಕೆ ಸ್ವಾಗತಿಸಬೇಕಿದೆ. ಎಚ್. ಎಸ್. ವೆಂಕಟೇಶಮೂರ್ತಿ

ಕೃಷ್ಣ ದೇವಾಂಗಮಠರ ಕವಿತೆಗಳು ಎಲ್ಲಿ ಗೆಲ್ಲುತ್ತವೋ ಅಲ್ಲಿ ಒಗಟಿನ ಬೆರಗು, ಬೆಡಗಿನ ಗೂಢತೆ, ಕೌತುಕದ ಕೈಚಳಕ ಮುಪ್ಪುರಿಯಾಗಿವೆ. ಈ ತೆರನ ಬರವಣಿಗೆ ಅಪರೂಪ. ಅಪರೂಪವಾಗಿ ಈ ಹಾದಿ ತುಳಿದವರು ಅತಿ ಗಾಂಭೀರ್ಯದ ಅಮಲಿನಲ್ಲಿ ಅರ್ಥದ ಮೇಲಿನ ಹಿಡಿತ ಕಳೆದುಕೊಳ್ಳುತ್ತಾರೆ. ಆದರೆ ಇವರ ಕವಿತೆಗಳು ಗೆಲ್ಲುವ ಕಾರಣ ಅವರ ಪ್ರತಿಮಾ ಸಂಕೇತಗಳ ಚಮತ್ಕಾರ ಮತ್ತು ಲವಲವಿಕೆ. ಈ ರಚನೆಗಳ ರೀತಿ ಅಲ್ಲಮನ ಬೆಡಗಿನ ವಚನಗಳನ್ನು ನೆನಪಿಸುತ್ತವಾದರೂ ಇದರ ಬಗೆ ಬೇರೆ. ಯಾಕಂದರೆ ಅಲ್ಲಮನ ಬೆಡಗಿನಲ್ಲಿ ಸಂಕೇತಗಳಿಗೆ ಪರಂಪರೆಯಲ್ಲಿ ನಿರ್ಧಿಷ್ಟ ಅರ್ಥಗಳುಂಟು ಆದರೆ ಈ ಸಂಕಲನದಲ್ಲಿ ಅರ್ಥಗಳು ಕವಿತೆಯ ಸಂದರ್ಭದಲ್ಲೇ ಹೊಳೆಯುವಂಥವು. ಕೆಲವು ಕವಿತೆಗಳಲ್ಲಿ ಸರೀಕರ ಸೋಂಕಿನಿಂದ ಬಂದಿರುವ ವಾಚಾಳಿತನದಿಂದ ಹಿಡುಗಡೆ ಪಡೆದುಕೊಂಡರೆ ದೇವಾಂಗಮಠ ಹೊಸಬಗೆಯ ಕವಿತೆಗಳನ್ನು ಕನ್ನಡಕ್ಕೆ ಕೊಡಬಲ್ಲರೆಂಬುದಕ್ಕೆ ಈ ಸಂಕಲನ ಸಾಕ್ಷಿ . ಎಚ್. ಎಸ್. ಶಿವಪ್ರಕಾಶ ***

ಕವಿ ಮತ್ತು ಅನುಭಾವಿ

ನಿರಾಯಾಸ ಹಾರುವ ಹಕ್ಕಿ ಕಂಡು ಆಮೆಗೆ ಏನು ಆಗಬೇಕಿದೆ ತಾನು ದೂರದ ದಾರಿಯನ್ನು ಕಲ್ಲುಗಳ ಸಮುದ್ರ ದಾಟಿ ಹೋಗುವವನು ಗಾಳಿಯಲ್ಲಿ ಸುತ್ತು ಹೊಡೆಯುವುದು ತನಗಿಷ್ಟವಿಲ್ಲ

ಮಿಡತೆಯ ರೆಕ್ಕೆ ಶಬ್ಧಕ್ಕೆ ಗೋಣು ಕುಣಿಸುತ್ತ ಹುಡುಕತ್ತಲೇ ಅಲೆವೆ ಎಂದೂ ಸಿಗದವನಿಗಾಗಿ ಪ್ರತೀದಿನದ ನಡಿಗೆ ತಂದುನಿಲ್ಲಿಸುತ್ತದೆ ಮತ್ತದೇ ಕತ್ತಲಿಗೆ

ಚಳಿಗಾಲದ ಗಾಳಿಗೆ ಬೀಳುವ ಮರಗಳಲ್ಲಿನ ನಿನ್ನ ಗೂಡನ್ನು ಕಾಪಾಡಿಕೋ ಪುಟ್ಟ ಜೀವವೇ ನೀನು ಸೀಳಿ ನುಗ್ಗುವ ಈ ಗಾಳಿ ನಿನ್ನ ಗೆಳೆಯನಲ್ಲ ರೆಕ್ಕೆಗಳು ಮಾತ್ರ ನಿನ್ನ ಆತ್ಮ ಸಂಗಾತ

ಮೈಮೇಲಿನ ಹಿಮ ಕರಗುವುದಿಲ್ಲ ಅಷ್ಟು ಬೇಗ ಒಳಗೆ ಅಗ್ಗಿಷ್ಟಿಕೆ ಹೊತ್ತುವವರೆಗೂ ಸುಮ್ಮನೆ ಸುತ್ತಬೇಕು ಕದ ಕಿಟಕಿ ಮುಚ್ಚಿದ ಮನೆಯಲ್ಲಿ ಎಲ್ಲಾದರೂ ಚೂರು ಬೆಳಕು ಹಾಯುವವರೆಗು

ಮಳೆ ಸುರಿಯುವ ಮೋಡವನ್ನೇ ಕೇಳು ನೆತ್ತಿಗೆ ನೀರುಣ್ಣಿಸಿಕೊಳ್ಳುವುದು ಸಾಧ್ಯವೇ ಎಂದು ಪರ್ವತಗಳಲ್ಲಿ ಹರಿವ ಝರಿಗಳಂತೆ ಸುಖಾಸುಮ್ಮನೆ ಉದುರಿ ಬೀಳುವ ಎಲೆಗಳಂತೆ ತಣ್ಣಗೆ ಸರಿದು ಹೋಗು

avithakavithe

ಪುಸ್ತಕದೊಂದಿಗೆ ಕೃಷ್ಣ

ಕವಡೆ ಜೋಳಿಗೆ

ಗೋರಿಗಳ ಕಟ್ಟಲು ಗುತ್ತಿಗೆ ಹಿಡಿದವರು ಕೂಡಾ ಮಸಣಕ್ಕೆ ನೇರ ಮುಖಮಾಡಿ ಸ್ಥಾವರ ಕಟ್ಟಿ ನಿಶ್ಯಬ್ಧ ಅನುರಣಿಸುವಲ್ಲಿ ರೊಟ್ಟಿ ಬಡೆಯುತ್ತಾರೆ

ವೈರಾಗ್ಯದ ಕಾಗೆಗಳು ಸುಡುವ ಚಿತೆಗೆ ಕೊಕ್ಕಿಟ್ಟು ಅಸ್ತಿ ಆಯ್ದು ನಿಲುಕದ ಎತ್ತರಕ್ಕೇರಿ ಮುಗಿಲ ಹೊಸ್ತಿಲಿಗೆ ಎಡೆ ಇಟ್ಟು ರೆಕ್ಕೆ ಬಡಿದರೆ ಆತ್ಮ ಪರಮಾತ್ಮವಾಗಿ ಅಡಿಅಡಿಗೆ ಹೆಜ್ಜೆ ಬ್ರಹ್ಮಾಂಡ

ಆದಿಶಕ್ತಿ ಬಿಚ್ಚಿ ಹರವಿಕೊಂಡ ನೀಳ ಕೂದಲು ತಾಯಿ ಮರ ನೆಲದ ಬಿಳಿಲು

ಹೆಣದ ಬೊಗಸೆಯಲಿಷ್ಟು ಅಕ್ಕಿ ದೂರ ಊರೊಳಗೆ ಹೆಂಗಸ ಸೆರಗ ಗಂಟಲ್ಲಷ್ಟಕ್ಕಿ ಸ್ವರ್ಗದ ಕೊಪ್ಷರಿಗೆಯಲ್ಲಿ ಹದ ಬೆಂದ ಅನ್ನ ಬಸಿದ ಗಂಜಿ ಧರೆಗೆ ಸುರಿದು ಗರಿಕೆ ಚಿಗುರು

ಹಣೆಗೆ ಒತ್ತಿದ ನಾಣ್ಯ ಸಿಂಧೂರ ಮಾಯೆ ಒಳತೂರಿದ ಕಿಡಿ ಉರಿವ ದೇಹದ ಸುಕ್ಕು ರಕ್ತ ಕಣಕಣ ಕುಡಿದ ಅಸ್ತಿಪಂಜರ ರೂಪ

ಊರಿಗೆ ವಾಪಸ್ಸಾದ ಕಾಲುಗಳ ಸಾವಿರ ಗುರುತು ತೊಗಲು ಸುಲಿದಂತೆ ಸಲೀಸು ಮೂಡುವ ಚರ್ಮ

***

ಗೋಧಿಕಾಳು ಜೊತೆ ಇರುವೆಗಳು

ಮನೆಯ ಯಾವ ಮೂಲೆ ಯಾವ ವಾಸ್ತು ಎಲ್ಲೆಡೆ ಇರುತ್ತವೆ ಇರುವೆಗಳು

ಕೆಂಪು ಕಟ್ಟಿರ್ವೆ ಕರಿ ಇನ್ನೂ ಎಷ್ಟೋ ಬಗೆಯವು ಬಿಸಿ ಬಿಸಿ ಅನ್ನದ ಅಗಳಿಗೂ ಮುತ್ತುತ್ತವೆ ಚೆಲ್ಲಿದ ಚಹಾ ಕಾಫಿ ಹನಿಗೂ ತಮ್ಮವರನ್ನೆ ಎತ್ತಿಕೊಂಡು ಗೂಡಿಗೆ ನುಗ್ಗಿಬಿಡುತ್ತವೆ ಗಾಯಾಳುವೋ ಇಲ್ಲಾ ಮರಣೋತ್ತರವೋ

ಗೋಡೆಗೆ ಅಂಟಿ ಒಂದು ಡಬ್ಬಿ ಇದೆ ಡಬ್ಬದ ತುಂಬಾ ಗೋಧಿಕಾಳು ಒಂದೊಂದು ಕಾಳೂ ಗಲಿವರ ರೂಪಿ ಇವಕ್ಕೆ ಎಷ್ಟೋ ಮೈಲಿ ದೂರದ ಹುತ್ತದ ಗೂಡು ಗೋದಾಮು ಶಸ್ತ್ರಾಸ್ತ್ರಗಾರ

ಒಂದು ಗೋಧಿಕಾಳು ಸಾಗುವ ದಾರಿ ಹೆಣದ ಯಾತ್ರೆಯಂತೆ ಎಷ್ಟು ಭಾರ ಅಲ್ಲವೆ ಎಲ್ಲ ಒಮ್ಮೊಮ್ಮೆ ಹೀಗೆ ಹೊತ್ತು ಸಾಗುವುದು ಭುಜ ಬದಲಿಸುತ್ತವೆ ಎಷ್ಟೋ ಸಾರಿ ಒಂದರ ನಂತರ ಒಂದರಂತೆ ಜೀವನ ಇದೇ ಅಲ್ಲದೇ ಮತ್ತೇನೂ ಅಲ್ಲ ಸಾಗುವುದು ಅಷ್ಟೆ

ಒಕ್ಕಲೆಬ್ಬಿಸುತ್ತಾರೆ ಮನೆಮನೆಗಳಲ್ಲೂ, ಅಲೆಮಾರಿಗಳಂತೆ ಗುಳೆಹೋಗುತ್ತೀರಿ ಎಷ್ಟು ದೂರ ದುರ್ಗಮ, ಎಂಥ ಹಾದಿ, ಸುಮ್ಮನೆ ಸಾಲುಗಟ್ಟಿ ರೈಲು ಭೋಗಿಗಳ ಹಾಗೆ ಜಾಥಾ ಹೋಗುವುದು

ನೆಲದಿಂದಲೇ ಆಕಾಶಕ್ಕೆ ಚಿಮ್ಮುವುದನರಿತ ರೆಕ್ಕೆ ಇರುವೆಗಳೇ ನೀವು ಜಗತ್ತಿನ ಮೊದಲ ದೈವಗಳು ಗೋಧಿಕಾಳು ಒಂದು ದೀರ್ಘ ಜೀವನ ಅನ್ನುವುದ ಕೊಂಚ ಕಲಿಸಿ ಕಾಲ ಬುಡದಲ್ಲೇ ನಿಮ್ಮನ್ನು ಅಮುಕುವ ದೈತ್ಯರಿಗೆ

ಸದಾ ದುಡಿಮೆಯ ಶ್ರಮಜೀವಿಗಳೇ ನಿಮ್ಮ ಹೆಜ್ಜೆಗುರುತುಗಳ ದಾಖಲಿಸಬೇಕು ಕಾಪಿಟ್ಟುಕೊಳ್ಳಬೇಕು ನಿಮ್ಮ ಸಹನೆ ಛಲ ನಿರ್ಭಯತೆ ಇತ್ಯಾದಿಗಳನ್ನು ಬೆವರು ತೊಟ್ಟಿಕ್ಕುವ ಹನಿಯಷ್ಟೇ ಇರುವ ಜೀವದ್ರವ್ಯವನ್ನು ಮುಖ್ಯವಾಗಿ ಬದುಕುವ ಅನನ್ಯ ಪರಿಯನ್ನು ಅಪಾರ ಪ್ರೀತಿಯನ್ನು

avithakavitheಕತ್ತಲು ಸತ್ತ ದಿನ

ಕತ್ತಲು ಸತ್ತ ದಿನದ ಹಗಲು ಇದ್ದೂ ಸತ್ತಂತೆ ನರಳುತ್ತದೆ ನಿನ್ನೆ ಇದ್ದವರು ಇಂದು ಇಲ್ಲವಾಗುವ ನೋವಿದೆಯಲ್ಲ ಅದು ನರಕಯಾತನೆ ಮೀರಿದಂಥದ್ದು

ಕತ್ತಲನ್ನು ಕುರಿತು ಮೂಗುಮುರಿದವರು ಕನಿ ಷ್ಠ ಕ್ಷಮೆ ಕೇಳಲು ಆಗದೆ ವಿಲವಿಲ ಒದ್ದಾಡುತ್ತಾರೆ ಮತ್ತೀಗ ಬೆಳಕಿನ ಸರದಿ ವಸ್ತು ಇಲ್ಲವಾಗುವುದರಿಂದಲೇ ಬೆಲೆ ಮತ್ತು ಜರೂರು ಹೆಚ್ಚುವುದು

ಈಗ ಜನ ಬೆಳಕಿಗೆ ಹಾತೊರೆಯುವುದಿಲ್ಲ ಕತ್ತಲ ಕುರಿತು ಮಂದಿರಗಳಲ್ಲಿ ಹಾಡುಗಳು ಹುಟ್ಟುತ್ತವೆ ಬೀದಿಗಳು ರಾತ್ರಿಗಳ ಕುರಿತು ಕನವರಿಸುತ್ತವೆ ಕಪ್ಪು ಮನುಷ್ಯರು ದೇವರುಗಳಂತೆ ತೋರುತ್ತಾರೆ ಜರಿದವರು ಅಪ್ಪುತ್ತಾರೆ ಕಪ್ಪು ಮಣ್ಣು

ಹೊಳಪುಗಳನ್ನು ತಡೆಯದ ಕಣ್ಣುಗಳು ಮುಚ್ಚಿಹೋಗಿ ಕೃತಕ ಕತ್ತಲು ಜಗತ್ತನ್ನು ಸೃಷ್ಟಿಸಿಕೊಳ್ಳುತ್ತವೆ ನಿದ್ದೆ ಕಡಿದ ಮೋಹಿನಿ ಹಗಲು, ಕಪ್ಪುಡುಪು ಧರಿಸಿ ಬೆತ್ತಲು ಮುಚ್ಚಿಕೊಳ್ಳುತ್ತಾ ಸಾವಿಗೆ ಕೈ ಚಾಚಿದರೆ ಕಾಡಿಗೆ ತೀಡಿಕೊಂಡ ದೇಹಗಳು ಕುಣಿಯುತ್ತವೆ ಬೆಳಕಿನಲೆಗಳ ಮೇಲೆ

***

ಹೊಸ ಪದ್ಯ

ಅವನೋ ಅವಳೋ ಗೊತ್ತಿಲ್ಲದೆಯೇ ನಿನ್ನಯ ಹುಡುಕಾಟದಲ್ಲಿ ತೊಡಗೇ ಇರುವ ಸಂಕ್ರಮಣ ಕಾಲ

ತಲೆಮಾರುಗಳ ಆನಾದಿ ಗಾಯದ ಗುರುತು ಈ ಶತಮಾನದ ಹೊರಗೇ ಅಲೆದ ನಾಯಿಯ ನೆರಳು ನಕ್ಷತ್ರವಾಗುವುದಾದರೆ ಭೂಮಿಯ ಹಂಗು ಬಿಡಬೇಕು ಎಂದೆ ಹೇಗೆ ತಾನೆ ಬಿಟ್ಟು ಬದುಕಬಲ್ಲೆ ಹೇಳು ಬೇರುಗಳನ್ನು

ದಶಾವತಾರಗಳ ತಾಯಿ ಅಟ್ಟದ ಮನೆಯ ಗುಬ್ಬಿಗೆ ಬುದ್ಧ ನಡಿಗೆ ಕಲಿಸಿ ದೂರದೂರ ಕ್ಕೆ ವಲಸೆ ಹಕ್ಕಿಯ ಹಾಗೆ ಸಾಗಿಬಿಡುವುದೇ?

ಕಲ್ಲಾದವರ ಮುಂದೆ ಕೊಕ್ಕರೆಯಂತೆ ನಿಲ್ಲದೆ ಎಲ್ಲಾ ನೀರಾಗುವ ಹೊತ್ತಲ್ಲಿ ಬುದ್ಧನ ಭಿಕ್ಷಾಪಾತ್ರೆ ತುಂಬಿ ಹೀಗೊಬ್ಬ ದೇವರು ನಿಲ್ಲಬಾರದೆ ಎದುರು!

ಬೈರಾಗಿಯ ಜಡೆ ಕಾಲುದಾರಿಯ ಹಾಗೆ ಧಿಕ್ಕರಿಸಿದವರನ್ನೂ ಮೇಲೆಳೆದುಕೊಂಡು ನಡೆಸುವ, ಮಗಳ ಚರಿತೆ ಹಾಡಿ ತೂಗುವ ಪುಟ್ಟ ಗೆಳತಿ

ಈ ಹೊತ್ತು ಬೀದಿದೀಪದ ರಾತ್ರಿ ಬೆಳಕನ್ನು ಹೇಗೆ ಪದ್ಯವಾಗಿಸಲಿ ಪ್ರಭುವೆ ಹೀಗೊಂದು ಧ್ಯಾನ ಜೀವದ ಒಲೆಯಲ್ಲಿ ಹೊತ್ತಿ ಶಿವರಾತ್ರಿಯಾಗಿ ಬೂದಿಸಿದ್ಧನಿಗೆ ಅಲೆಮಾರಿ ಮಗ ಅರಳಲಿ

ದಯಾನದಿಯ ತಟದಲ್ಲಿ ವಿಷಾದಗೀತೆ ಮುಗಿದು ಪಂಚಭೂತಗಳಲ್ಲಿ ಭಾವಗೀತೆಯ ಲಹರಿ ತೇಲಿ ಬರಲಿ ಬೆಳಕಿನ ಮಗು ದೀಪದ ಕಣ್ಣುಗಳಿಂದ ಹಂಗಿಲ್ಲದ ಅಂಗಳದಲ್ಲಿ ತಂಗಲಿ

ಜೀವಪಂಜರ ಕಾವ್ಯಾರ್ಥವಾಗಿ ತಿಳಿಬೆಳಕು ಮೂಡಿ ಮಂಗಳದ ಹಾಡು ಮೊಳಗಲಾರಂಭಿಸಿದೆ ನೀನು ಸಿಗುತ್ತಿ ಎಂದು ಎಲ್ಲರಂತೆ ನೀನು ಮೋಸಗಾರನಲ್ಲ ಎಂದು ನಂಬಿದ್ದೇನೆ

***

ಪರಿಚಯ: ಕೃಷ್ಣ ದೇವಾಂಗಮಠ ಬೆಳಗಾವಿಯ ರಾಮದುರ್ಗದರು. ೨೦೧೪ ರಲ್ಲಿ ಪುಸ್ತಕ ಪ್ರಾಧಿಕಾರದ ಸಹಾಯ ಧನ ಪಡೆದು ನಲ್ಮೆಯ ಭಾವ ಬುತ್ತಿ ಎಂಬ ಕವನ ಸಂಕಲನ ಪ್ರಕಟಣೆ.‌ ಈ ವರ್ಷ ಎರಡನೇಯ ಸಂಕಲನದ ತಯಾರಿಯಲ್ಲಿದ್ದಾರೆ. ಫೋಟೋಗ್ರಫಿ, ಪ್ರವಾಸ, ಸಂಗೀತ , ರಂಗಭೂಮಿ, ಸಿನಿಮಾ ಆಸಕ್ತಿಯ ಕ್ಷೇತ್ರಗಳು.

ಇದನ್ನೂ ಓದಿ: Poetry; ಅವಿತಕವಿತೆ: ನೇಗಿಲ ಚೂಪಿಗೆ ಸಿಕ್ಕಿದ್ದಕ್ಕೆ ಸೀತೆ ಎಂದವರೇ

Published On - 1:01 pm, Sun, 7 March 21

ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ