Women’s Day Special: ಮಹಾಮಾರಿ ಕೊರೊನಾವನ್ನು ಹತ್ತಿಕ್ಕಲು ನಿರಂತರವಾಗಿ ಶ್ರಮಿಸಿದ ಮಹಿಳಾ ಅಧಿಕಾರಿ ಡಾ. ಪದ್ಮಾ
ಡಾ. ಪದ್ಮಾ ಅವರು, ಮಹಿಳಾ ಆರೋಗ್ಯ ಸಹಾಯಕರು ಹಾಗೂ ಪುರುಷ ಆರೋಗ್ಯ ಸಹಾಯಕರ ಮೂಲಕ ಮನೆಗಳಿಗೆ ಭೇಟಿ ನೀಡಿ, ಆರೋಗ್ಯದ ಬಗ್ಗೆ ಅರಿವು ಮೂಡಿಸತೊಡಗಿದರು. ತಮ್ಮದೇ ಆದ ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡು, ಆರೋಗ್ಯ ಸಹಾಯಕರು ಮನೆಗಳಿಗೆ ಭೇಟಿ ನೀಡಿದ ವಿಷಯದ ಬಗ್ಗೆ ಮಾಹಿತಿ ಪಡೆದುಕೊಳ್ಳತೊಡಗಿದರು.
‘ಸ್ತ್ರೀ’ ಇದು ಬರೀ ಪದವಲ್ಲ. ಶಕ್ತಿ, ಮನಸ್ಥಿತಿ, ಸಾಧ್ಯತೆ, ಮಮತೆ, ಸ್ಫೂರ್ತಿ, ಸಂಭ್ರಮ. ಸಮತೆಯೂ. ಪೂಜ್ಯನೀಯ ಪಟ್ಟದಿಂದಾಚೆಯೂ ಆಕೆ ತನ್ನನ್ನು ತಾನಿವತ್ತೂ ನಿಭಾಯಿಸಿಕೊಳ್ಳುವಷ್ಟು ಸ್ವತಂತ್ರ ಮನೋಭಾವವನ್ನು ಹೊಂದಿದ್ದಾಳೆ. ಹಾಗಂತ ಪೂರ್ತಿಯಾಗಿ ಶೋಷಣೆಯಿಂದ ಹೊರಗಾಗಿದ್ದಾಳೆ ಎನ್ನುವುದನ್ನೂ ಒಪ್ಪಲಾಗದು. ಕೂಲಿಯಿಂದ ಸೇನೆಯವರೆಗೂ ಆಕೆ ಶಕ್ತಿಯಾಗಿ ಚಿಮ್ಮಿದ್ದಾಳೆಂದರೆ ಆಕೆಯ ದಿಟ್ಟತೆಗೆ ದೊಡ್ಡ ಇತಿಹಾಸವೇ ಇದೆ. ಅವಳು ಕಾಲಿಟ್ಟಲ್ಲೆಲ್ಲ ಹೊಳಹಿನ ಛಾಯೆ ಆವರಿಸುತ್ತದೆಯೆಂದರೆ ಒಡಲೊಳಗೆ ಕಟ್ಟಿಟ್ಟುಕೊಂಡ ತಾಳ್ಮೆ ಇದೆ, ವಿವೇಚನೆ ಇದೆ, ಸ್ವಾವಲಂಬೀ ಮನೋಭಾವವಿದೆ. ಹೀಗೆ ಅವಳ ಆತ್ಮಗೌರವವನ್ನು ದ್ವಿಗುಣಗೊಳಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅವಳನ್ನಪ್ಪಿದೆ (International Women’s Day 2021). ನಮ್ಮನಿಮ್ಮ ನಡುವೆಯೇ ಇರುವ ಸಾಧಕ ಮನಸ್ಥಿತಿಗಳನ್ನು ಈ ಸಂದರ್ಭದಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ.
ಗೊತ್ತೇ ಇದೆ ಕಳೆದೊಂದು ವರ್ಷದಿಂದ ಕೊವಿಡ್-19 ಮಹಾಮಾರಿ ಇಡೀ ಜಗತ್ತನ್ನು ಅದೆಷ್ಟು ಹೈರಾಣಾಗಿಸಿತು ಎಂದು.. ಈ ಹೊತ್ತಲ್ಲಿ ಕೊವಿಡ್ ವಿರುದ್ಧ ಹೋರಾಟಕ್ಕೆ ನಿಂತವರು ಬರೀ ಪುರುಷರಷ್ಟೇ ಅಲ್ಲ.. ಅದೆಷ್ಟೋ ಕೋಟ್ಯಂತರ ಮಹಿಳೆಯರೂ ಟೊಂಕಕಟ್ಟಿ ನಿಂತು-ಮನೆ, ಪತಿ, ಮಕ್ಕಳನ್ನೆಲ್ಲ, ನೋವಾದರೂ ಸಹಿಸಿಕೊಂಡು ದೂರವೇ ಇಟ್ಟು ಹೋರಾಡಿದ್ದಾರೆ. ಹಾಗೇ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸಹ ಕೆಲವು ಮಹಿಳಾ ವೈದ್ಯರು, ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಮಹಿಳಾ ಅಧಿಕಾರಿಗಳು ಕೊರೊನಾ ವಾರಿಯರ್ಸ್ ಆಗಿ ಜನಮನ ಗೆದ್ದಿದ್ದಾರೆ. ಅಂಥ ಕೊರೊನಾ ವಾರಿಯರ್ಸ್ಗಳನ್ನು ಈ ಮಹಿಳಾ ದಿನಾಚರಣೆಯಂದು ಟಿವಿ9 ಕನ್ನಡ ಡಿಜಿಟಲ್ ನಿಮಗೆ ಪರಿಚಯಿಸುತ್ತಿದೆ. ಪ್ರಸ್ತುತ ಲೇಖನ ರಾಮನಗರದ ಮಹಿಳಾ ಅಧಿಕಾರಿ ಡಾ. ಪದ್ಮಾ ಜಿ.ಎಲ್ ಅವರ ಕುರಿತು..
ಕೊವಿಡ್ 19 ಎಂಬ ಈ ಹೆಸರು ಕೇಳಿದರೆ ಸಾಕು, ಎಲ್ಲರೂ ಬೆಚ್ಚಿ ಬೀಳುತ್ತಾರೆ. ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ಅಲ್ಲೋಲ್ಲ ಕಲ್ಲೋಲ್ಲ ಮಾಡಿತ್ತು. ಆದರೆ ಇಂತಹ ಕೊರೊನಾ ಸಂದರ್ಭದಲ್ಲಿ ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಯಾವುದಕ್ಕೂ ಬಗ್ಗದೇ, ಕೊರೊನಾಗೆ ಸೆಡ್ಡು ಹೊಡೆದು ಧೈರ್ಯವಾಗಿ ನಿಂತಿದ್ದು ಅದೊಬ್ಬ ಮಹಿಳಾ ಅಧಿಕಾರಿ.. ಅವರು ಬೇರಾರೂ ಅಲ್ಲ ಡಾ. ಪದ್ಮಾ. ಜಿ ಎಲ್.
ಪದ್ಮಾ ಅವರು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಅಧಿಕಾರಿಯಾಗಿ (ಆರ್ಸಿಎಚ್) ಕಳೆದ ಒಂದೂವರೆ ವರ್ಷದಿಂದ ರಾಮನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ಕೊರೊನಾ ಕಾಲದಲ್ಲಿ ಜಿಲ್ಲಾ ಕೊವಿಡ್ ರೆಫೆರಲ್ ಆಸ್ಪತ್ರೆಯ ನೊಡೆಲ್ ಅಧಿಕಾರಿಯಾಗಿ ನೇಮಕವಾಗಿದ್ದರು. ಪ್ರಾರಂಭದಲ್ಲಿ ರೇಷ್ಮೆ ನಗರಕ್ಕೆ ಅಷ್ಟಾಗಿ ಕೊರೊನಾ ಅಪ್ಪಳಿಸಿರಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಡಾ. ಪದ್ಮಾ ಕಂದಾಯಭವನವನ್ನೇ ಜಿಲ್ಲಾ ಕೊವೀಡ್ ಆಸ್ಪತ್ರೆಯಾಗಿ ಮಾರ್ಪಡು ಮಾಡಲು ಮುಂದಾಗುತ್ತಾರೆ. ನೂರರಿಂದ ನೂರೈವತ್ತು ಕೊರೊನಾ ರೋಗಿಗಳನ್ನ ದಾಖಲಿಸಿಕೊಂಡು ಉತ್ತಮ ಚಿಕಿತ್ಸೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಕೊರೊನಾ ಸಂದರ್ಭದಲ್ಲಿ ದಿನದ 24 ಗಂಟೆಗಳ ಕಾಲವೂ ಕೆಲಸ ಮಾಡಿದ್ದ ಡಾ. ಪದ್ಮಾ, ಕೊವಿಡ್ ಆಸ್ಪತ್ರೆಯ ಸ್ಟಾಫ್ ನರ್ಸ್ ರಘು ಎಂಬುವವರಿಗೆ ಸೋಂಕು ಕಾಣಿಸಿಕೊಂಡ ಕೂಡಲೇ, ಅದೇ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಾರೆ. ಅಷ್ಟೇ ಅಲ್ಲ ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಲು, ಆಸ್ಪತ್ರೆಯಲ್ಲಿಯೇ ರಘು ಅವರ ಹುಟ್ಟುಹಬ್ಬವನ್ನ ಕೊರೊನಾ ರೋಗಿಗಳ ಸಮ್ಮುಖದಲ್ಲೇ ಆಚರಣೆ ಮಾಡುತ್ತಾರೆ.
ಇನ್ನು ಪ್ರಾರಂಭದಲ್ಲಿ ಕೊರೊನಾ ಕಾಣಿಸಿಕೊಂಡ ಕೂಡಲೇ ಕಾರ್ಯಪ್ರವೃತ್ತರಾದ ಡಾ. ಪದ್ಮಾ, ಕೊರೊನಾದ ಬಗ್ಗೆ ಜಾಗೃತಿ ಮೂಡಿಸಲು ಮುಂದಾದರು. ಅಲ್ಲದೇ ಜಿಲ್ಲೆಯಾದ್ಯಂತ ಮೈಕ್, ಬ್ಯಾನರ್, ಫೋಸ್ಟರ್ಗಳ ಮೂಲಕ ಕೊರೊನಾದ ಬಗ್ಗೆ ಅರಿವು ಮೂಡಿಸಿದ್ದು, ಇದರ ಜೊತೆಗೆ ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ, ಕೊರೊನಾದ ಬಗ್ಗೆ ಮಾಹಿತಿ ನೀಡಿ, ಅವರಿಂದ ಪ್ರತಿ ಗ್ರಾಮ, ನಗರ ಪ್ರದೇಶಗಳಲ್ಲಿ ಹಾಗೂ ಜನಸಂದಣಿ ಇರುವ ಸ್ಥಳಗಳಲ್ಲಿ ಕೊರೊನಾದ ಬಗ್ಗೆ ಅರಿವು ಮೂಡಿಸಲು ತೊಡಗಿಕೊಂಡರು.
ಇನ್ನು ಮಹಿಳಾ ಆರೋಗ್ಯ ಸಹಾಯಕರು ಹಾಗೂ ಪುರುಷ ಆರೋಗ್ಯ ಸಹಾಯಕರ ಮೂಲಕ ಮನೆಗಳಿಗೆ ಭೇಟಿ ನೀಡಿ, ಆರೋಗ್ಯದ ಬಗ್ಗೆ ಅರಿವು ಮೂಡಿಸತೊಡಗಿದರು. ತಮ್ಮದೇ ಆದ ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡು, ಆರೋಗ್ಯ ಸಹಾಯಕರು ಮನೆಗಳಿಗೆ ಭೇಟಿ ನೀಡಿದ ವಿಷಯದ ಬಗ್ಗೆ ಮಾಹಿತಿ ಪಡೆದುಕೊಳ್ಳತೊಡಗಿದರು. ಇದರ ಜೊತೆಗೆ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೂ ಕೂಡ ಸಾಕಷ್ಟು ಸಲಹೆ, ಮಾಹಿತಿಗಳನ್ನ ನೀಡಿ ಹೇಗೆಲ್ಲ, ಕೊರೊನಾವನ್ನ ಮಟ್ಟಹಾಕಬೇಕು ಎಂದೂ ತಿಳಿಸಿಕೊಟ್ಟರು.
ಇನ್ನು ಡಾ. ಪದ್ಮಾ, ಕೊರೊನಾ ಸಂದರ್ಭದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದು, ಕೊರೊನಾ ರೋಗಿಗಳಿಗೆ ಯಾವೆಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಬೇಕು ಎಂಬ ಬಗ್ಗೆ ಕ್ರಮವಹಿಸಿದ್ದರು. ಮುಖ್ಯವಾಗಿ ಕೆಲವಷ್ಟು ಕೊರೊನಾ ರೋಗಿಗಳಿಗೆ ಕೊರೊನಾದ ಜೊತೆಗೆ ಬೇರೆ ಬೇರೆ ರೋಗಗಳು ಕೂಡ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೇ ಕೆಲ ವಯಸ್ಕ ರೋಗಿಗಳಿಗೂ ಕೂಡ ಸಾಕಷ್ಟು ಸಮಸ್ಯೆಗಳು ಇದ್ದವು. ಹೀಗಾಗಿ ಅಂತಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಜಿಲ್ಲಾ ಕೊವೀಡ್ ಆಸ್ಪತ್ರೆ ಹಾಗೂ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆರ್ಸಿಹೆಚ್ ಅಧಿಕಾರಿಯಾಗಿದ್ದ ನನ್ನನ್ನ, ಕೊರೊನಾ ಸಂದರ್ಭದಲ್ಲಿ ಕೊವಿಡ್ ಆಸ್ಪತ್ರೆಯ ನೊಡೆಲ್ ಅಧಿಕಾರಿಯಾಗಿ ನೇಮಕ ಮಾಡಿದ್ದರು. ಈ ಸಂದರ್ಭದಲ್ಲಿ ಯಾವುದಕ್ಕೂ ಹೆದರದೇ ಧೈರ್ಯವಾಗಿ ಕೆಲಸ ಮಾಡಲು ಅನುಕೂಲವಾಯಿತು. ಡಿಸಿ, ಸಿಇಒ ಹಾಗೂ ಡಿಎಚ್ಒ ಅವರ ಸಹಾಯದಿಂದ ಉತ್ತಮವಾಗಿ ಕೆಲಸ ಮಾಡಲು ಸಹಾಯವಾಯಿತು ಎಂದು ಆರ್ಸಿಎಚ್ ಡಾ. ಪದ್ಮಾ ಹೇಳಿದ್ದಾರೆ.
ಈ ಎಲ್ಲಾ ಕೆಲಸಗಳ ಜೊತೆಗೆ ತಮ್ಮ ಮೂಲ ಕೆಲಸಕ್ಕೆ ಧಕ್ಕೆ ಆಗದಂತೆ ಸಹ ಕೆಲಸ ಮಾಡಿದ್ದಾರೆ ಡಾ. ಪದ್ಮಾ. ಕೊರೊನಾ ಸಂದರ್ಭದಲ್ಲೂ ಕೂಡ ಜನನಿ ಸುರಕ್ಷಾ ಯೋಜನೆಯಲ್ಲಿ, ರಾಮನಗರ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನಕ್ಕೆ ಬರುವಂತೆ ನೋಡಿಕೊಂಡಿದ್ದಾರೆ. ಅಲ್ಲದೇ ಹುಟ್ಟಿದ ಮಗುವಿನಿಂದ ಹಿಡಿದು 9 ತಿಂಗಳ ಮಗುವರೆಗೂ ಎಲ್ಲಅ ತರಹದ ಲಸಿಕೆಯನ್ನ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಕೊರೊನಾ ಸಂದರ್ಭದಲ್ಲಿ ಶಾಲೆಗಳು ಇಲ್ಲದೇ ಇದ್ದರು 5, 10, 16 ವರ್ಷದ ಮಕ್ಕಳಿಗೆ ಡಿಪಿಟಿ, ಟಿಡಿ ಲಸಿಕೆಗಳನ್ನ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಹಗಲಿರುಳು ಕೆಲಸ ಮಾಡಿದ ಡಾ. ಪದ್ಮಾ ಅವರಿಗೆ ನಮ್ಮದೊಂದು ಸಲಾಮ್.