Women’s Day 2021: ಕೊರೊನಾ ಸೋಂಕು ವಿಜಯಪುರಕ್ಕೆ ಕಾಲಿಡುವುದಕ್ಕೂ ಮೊದಲೇ ಹೋರಾಟಕ್ಕೆ ಸಜ್ಜಾಗಿದ್ದರು ಡಾ.ಚೆನ್ನಮ್ಮಾ ಕಟ್ಟಿ..
International Women's Day 2021: ವಿಜಯಪುರ ಜಿಲ್ಲೆಗೆ ಇನ್ನೂ ಕೊರೊನಾ ಕಾಲಿಟ್ಟಿರಲಿಲ್ಲ. ಆದರೆ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಅದಾಗಲೇ ಸೋಂಕು ವ್ಯಾಪಿಸಿತ್ತು. ಆಗಲೇ ಎಚ್ಚೆತ್ತುಕೊಂಡ ಡಾ. ಚೆನ್ನಮ್ಮಾ ಕಟ್ಟಿ ತಮ್ಮ ಆಸ್ಪತ್ರೆಯಲ್ಲೂ ಕೊರೊನಾ ಪರೀಕ್ಷೆಗಾಗಿ ಸಿದ್ಧತೆ ಶುರುಮಾಡಿದರು.
‘ಸ್ತ್ರೀ’ ಇದು ಬರೀ ಪದವಲ್ಲ. ಶಕ್ತಿ, ಮನಸ್ಥಿತಿ, ಸಾಧ್ಯತೆ, ಮಮತೆ, ಸ್ಫೂರ್ತಿ, ಸಂಭ್ರಮ. ಸಮತೆಯೂ. ಪೂಜ್ಯನೀಯ ಪಟ್ಟದಿಂದಾಚೆಯೂ ಆಕೆ ತನ್ನನ್ನು ತಾನೀವತ್ತೂ ನಿಭಾಯಿಸಿಕೊಳ್ಳುವಷ್ಟು ಸ್ವತಂತ್ರ ಮನೋಭಾವವನ್ನು ಹೊಂದಿದ್ದಾಳೆ. ಹಾಗಂತ ಪೂರ್ತಿಯಾಗಿ ಶೋಷಣೆಯಿಂದ ಹೊರಗಾಗಿದ್ದಾಳೆ ಎನ್ನುವುದನ್ನೂ ಒಪ್ಪಲಾಗದು. ಕೂಲಿಯಿಂದ ಸೇನೆಯವರೆಗೂ ಆಕೆ ಶಕ್ತಿಯಾಗಿ ಚಿಮ್ಮಿದ್ದಾಳೆಂದರೆ ಆಕೆಯ ದಿಟ್ಟತೆಗೆ ದೊಡ್ಡ ಇತಿಹಾಸವೇ ಇದೆ. ಅವಳು ಕಾಲಿಟ್ಟಲ್ಲೆಲ್ಲ ಹೊಳಹಿನ ಛಾಯೆ ಆವರಿಸುತ್ತದೆಯೆಂದರೆ ಒಡಲೊಳಗೆ ಕಟ್ಟಿಟ್ಟುಕೊಂಡ ತಾಳ್ಮೆ ಇದೆ, ವಿವೇಚನೆ ಇದೆ, ಸ್ವಾವಲಂಬೀ ಮನೋಭಾವವಿದೆ. ಹೀಗೆ ಅವಳ ಆತ್ಮಗೌರವವನ್ನು ದ್ವಿಗುಣಗೊಳಿಸುತ್ತಿರುವ ಬೆನ್ನಲ್ಲೇ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅವಳನ್ನಪ್ಪಿದೆ (International Women’s Day 2021). ನಮ್ಮನಿಮ್ಮ ನಡುವೆಯೇ ಇರುವ ಸಾಧಕ ಮನಸ್ಥಿತಿಗಳನ್ನು ಈ ಸಂದರ್ಭದಲ್ಲಿ ನಾವು ನಿಮಗೆ ಪರಿಚಯಿಸುತ್ತಿದ್ದೇವೆ.
ಗೊತ್ತೇ ಇದೆ ಕಳೆದೊಂದು ವರ್ಷದಿಂದ ಕೊವಿಡ್-19 ಮಹಾಮಾರಿ ಇಡೀ ಜಗತ್ತನ್ನು ಅದೆಷ್ಟು ಹೈರಾಣಾಗಿಸಿತು ಎಂದು.. ಈ ಹೊತ್ತಲ್ಲಿ ಕೊವಿಡ್ ವಿರುದ್ಧ ಹೋರಾಟಕ್ಕೆ ನಿಂತವರು ಬರೀ ಪುರುಷರಷ್ಟೇ ಅಲ್ಲ.. ಅದೆಷ್ಟೋ ಕೋಟ್ಯಂತರ ಮಹಿಳೆಯರೂ ಟೊಂಕಕಟ್ಟಿ ನಿಂತು-ಮನೆ, ಪತಿ, ಮಕ್ಕಳನ್ನೆಲ್ಲ, ನೋವಾದರೂ ಸಹಿಸಿಕೊಂಡು ದೂರವೇ ಇಟ್ಟು ಹೋರಾಡಿದ್ದಾರೆ. ಹಾಗೇ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸಹ ಕೆಲವು ಮಹಿಳಾ ವೈದ್ಯರು, ಆರೋಗ್ಯ ಇಲಾಖೆ, ಜಿಲ್ಲಾಡಳಿತದ ಮಹಿಳಾ ಅಧಿಕಾರಿಗಳು ಕೊರೊನಾ ವಾರಿಯರ್ಸ್ ಆಗಿ ಜನಮನ ಗೆದ್ದಿದ್ದಾರೆ. ಅಂಥ ಕೊರೊನಾ ವಾರಿಯರ್ಸ್ಗಳನ್ನು ಈ ಮಹಿಳಾ ದಿನಾಚರಣೆಯಂದು ಟಿವಿ9 ಕನ್ನಡ ಡಿಜಿಟಲ್ ನಿಮಗೆ ಪರಿಚಯಿಸುತ್ತಿದೆ. ಪ್ರಸ್ತುತ ಲೇಖನ ವಿಜಯಪುರದ ವೈದ್ಯೆ ಡಾ. ಚೆನ್ನಮ್ಮಾ ಕಟ್ಟಿಯವರ ಕುರಿತು..
ವಿಶ್ವದ ಒಂದೊಂದೇ ದೇಶಕ್ಕೆ ವ್ಯಾಪಿಸುತ್ತ ಬಂದ ಕೊರೊನಾ ಭಾರತಕ್ಕೂ ಕಾಲಿಟ್ಟ ಘಳಿಗೆ ಈಗಲೂ ನೆನಪಿದೆ. ಭಾರತಕ್ಕೆ ಬಂದ ಕೊರೊನಾ ನಮ್ಮ ರಾಜ್ಯಕ್ಕೆ ಬರಲು ತುಂಬ ದಿನ ತಡಮಾಡಲಿಲ್ಲ. ಅದಾದ ಬಳಿಕ ಒಂದೊಂದೇ ಜಿಲ್ಲೆಯಲ್ಲಿ ಸೋಂಕಿತರು ಪತ್ತೆಯಾಗಲು ಶುರುವಾದರು. ವೈದ್ಯಕೀಯ ಸಿಬ್ಬಂದಿ, ಸ್ಥಳೀಯ ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಸಿಬ್ಬಂದಿ ಈ ಕೊರೊನಾ ವಿರುದ್ಧ ಹೋರಾಟದಲ್ಲಿ ಸಕ್ರಿಯರಾದರು. ಈ ಸಾಲಿಗೆ ವಿಜಯಪುರ ಜಿಲ್ಲಾಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ. ಚೆನ್ನಮ್ಮಾ ಕಟ್ಟಿ ಸಹ ಸೇರ್ಪಡೆಯಾಗುತ್ತಾರೆ. ಒಂದು ವಿಶೇಷವೆಂದರೆ, ವಿಜಯಪುರಕ್ಕೆ ಕೊರೊನಾ ಬರುವುದಕ್ಕೂ ಮೊದಲೇ ಡಾ. ಚೆನ್ನಮ್ಮಾ ಅದರ ವಿರುದ್ಧ ಹೋರಾಟಕ್ಕೆ ಸಜ್ಜಾಗಿಬಿಟ್ಟರು.. ಉಳಿದ ಜಿಲ್ಲೆಗಳನ್ನು ನೋಡಿಕೊಂಡು ತಮ್ಮ ಜಿಲ್ಲೆಯಲ್ಲೂ ಎಲ್ಲ ತಯಾರಿ ಮಾಡಿಕೊಳ್ಳಲು ಶುರು ಮಾಡಿಕೊಂಡರು.
ಸೋಂಕು ಪತ್ತೆಯಾಗುವ ಮುನ್ನವೇ ಪರೀಕ್ಷೆಗೆ ಸಿದ್ಧತೆ ವಿಜಯಪುರ ಜಿಲ್ಲೆಗೆ ಇನ್ನೂ ಕೊರೊನಾ ಕಾಲಿಟ್ಟಿರಲಿಲ್ಲ. ಆದರೆ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಅದಾಗಲೇ ಸೋಂಕು ವ್ಯಾಪಿಸಿತ್ತು. ಆಗಲೇ ಎಚ್ಚೆತ್ತುಕೊಂಡ ಡಾ. ಚೆನ್ನಮ್ಮಾ ಕಟ್ಟಿ ತಮ್ಮ ಆಸ್ಪತ್ರೆಯಲ್ಲೂ ಕೊರೊನಾ ಪರೀಕ್ಷೆಗಾಗಿ ಸಿದ್ಧತೆ ಶುರುಮಾಡಿದರು. ವಿಜಯಪುರದಲ್ಲಿ ವೈರಾಲಜಿ ಲ್ಯಾಬ್ ಇಲ್ಲದ ಕಾರಣ ಬೆಂಗಳೂರು ಅಥವಾ ಬಳ್ಳಾರಿಗೆ ಹೋಗಿ ತರಬೇತಿ ಪಡೆಯುವುದು ಅನಿವಾರ್ಯವಾಗಿತ್ತು. ಹಾಗಾಗಿ ಡಾ. ಚೆನ್ನಮ್ಮಾ ಏಪ್ರಿಲ್20-22ಎರಡು ದಿನ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಸಂಸ್ಥೆಯಲ್ಲಿ ಕೊರೊನಾ ಟೆಸ್ಟ್ ತರಬೇತಿ ಪಡೆದರು.
ಹೀಗೆ ತರಬೇತಿ ಪಡೆದು ಬಂದ ಡಾ. ಚೆನ್ನಮ್ಮಾ ವಿಜಯಪುರ ಜಿಲ್ಲಾಸ್ಪತ್ರೆ ಮೈಕ್ರೋಬಯಾಲಜಿ ಲ್ಯಾಬ್ನಲ್ಲಿ CBNAAT (ಸಿಬಿ ನ್ಯಾಟ್) ತಪಾಸಣೆ ಮೂಲಕ ಕೊರೊನಾ ಟೆಸ್ಟ್ ಪ್ರಾರಂಭ ಮಾಡಿದರು. ಅದರೊಂದಿಗೆ Truenat (ಟ್ರುನ್ಯಾಟ್) ಕೂಡ ಅಳವಡಿಸಿಕೊಂಡರು. CBNAAT ಮತ್ತು Truenat ಮೂಲಕ ಸುಮಾರು 2000 ಕ್ಕೂ ಅಧಿಕ ಜನರಿಗೆ ಕೊರೊನಾ ಟೆಸ್ಟ್ ಮಾಡಿದ ಕೀರ್ತಿ ಇವರಿಗೆ ಸಲ್ಲಬೇಕು. ಇನ್ನು ಟ್ರುನ್ಯಾಟ್ ಮತ್ತು ಸಿಬಿನ್ಯಾಟ್ ಮೂಲಕ ಕೊರೊನಾ ಟೆಸ್ಟ್ ಮಾಡುವುದು ತೀರ ಕಷ್ಟವಾಗುತ್ತಿತ್ತು. ದಿನಕ್ಕೆ 40-45 ಟೆಸ್ಟ್ ಮಾತ್ರ ಮಾಡಲು ಸಾಧ್ಯವಾಗುತ್ತಿತ್ತು. ಆಗ ಡಾ. ಚೆನ್ನಮ್ಮಾ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಹಗಲು-ರಾತ್ರಿ ಆಸ್ಪತ್ರೆಯಲ್ಲೇ ಕುಳಿತು ಸಾಮಾನ್ಯ ಜನರಿಗೆ ತಪಾಸಣೆ ಮಾಡುತ್ತಿದ್ದರು.
ಒತ್ತಡದ ಮಧ್ಯೆ ತಾಳ್ಮೆಯಿಂದ ಕೆಲಸ ನಂತರದ ದಿನಗಳಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತ ಸಾಗಿತು. ಈ ಸಂದರ್ಭದಲ್ಲಿ ಡಾ. ಚೆನ್ನಮ್ಮಾ ಅವರಿಗೆ ಒತ್ತಡವೂ ಜಾಸ್ತಿಯಾಗುತ್ತ ಹೋಗಿತ್ತು. ಒಂದೆಡೆ ಸೋಂಕಿತರ ಸಂಪರ್ಕಕ್ಕೆ ಬಂದವರ ಗಂಟಲುದ್ರವ ಮಾದರಿಯನ್ನು ಟೆಸ್ಟ್ ಮಾಡಬೇಕಿತ್ತು.. ಮತ್ತೊಂದೆಡೆ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರ ಗಂಟಲುದ್ರವದ ಮಾದರಿಯನ್ನೂ ಆಗಾಗ ಟೆಸ್ಟ್ ಮಾಡಬೇಕಿತ್ತು. ಕೊರೊನಾ ವರದಿ ನೆಗೆಟಿವ್ ಬಂದ ತಕ್ಷಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬೇಕಿದ್ದರಿಂದ ಆ ಒತ್ತಡವೂ ಇವರ ಮೇಲಿತ್ತು. ಆದರೆ ಇವೆಲ್ಲ ತಪಾಸಣೆಯನ್ನೂ ಸಿಬಿ ನ್ಯಾಟ್ ಮತ್ತು ಟ್ರು ನ್ಯಾಟ್ ಮೂಲಕವೇ ಮಾಡಬೇಕಿದ್ದ ಕಾರಣ ಕೆಲಸ ವಿಳಂಬವಾಗುತ್ತಿತ್ತು. ಆದರೆ ತಾಳ್ಮೆಯನ್ನು ಕಳೆದುಕೊಳ್ಳದೆ, ಉಳಿದ ಸಿಬ್ಬಂದಿ ಸಹಕಾರದಿಂದ ಹಗಲಿರುಳೂ ದುಡಿದು ಅಚ್ಚುಕಟ್ಟಾಗಿ ಕೆಲಸ ಮುಗಿಸುತ್ತಿದ್ದರು.
CBNAAT ಮತ್ತು Truenat ಮೂಲಕ ಕೊರೊನಾ ಟೆಸ್ಟ್ ಮಾಡುವುದು ಕಷ್ಟವಾಗಿತ್ತು. ಅಲ್ಲದೆ ತುಂಬ ವಿಳಂಬವೂ ಆಗುತ್ತಿತ್ತು. ಈ ಕಾರಣಕ್ಕೆ ವಿಜಯಪುರಕ್ಕೆ RTPCR ಲ್ಯಾಬ್ನ ಅವಶ್ಯಕತೆ ತುಂಬ ಇತ್ತು. ನಂತರ 2020ರ ಜುಲೈ 22ರಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಆರ್ಟಿಪಿಸಿಆರ್ ಟೆಸ್ಟ್ ಲ್ಯಾಬ್ ಉದ್ಘಾಟನೆ ಮಾಡಿದರು. ನಂತರ ಕೊವಿಡ್-19 ಟೆಸ್ಟ್ನ ವೇಗ ಗಣನೀಯವಾಗಿ ಹೆಚ್ಚಾಯಿತು. ಅಲ್ಲಿಂದ ಇಂದಿನವರೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದಲ್ಲಿ ನಿತ್ಯವೂ 2000 ಕೊರೊನಾ ಟೆಸ್ಟ್ ಮಾಡಿಕೊಂಡು ಬರಲಾಗಿದೆ. ಈವರೆಗೆ 2 ಲಕ್ಷಕ್ಕೂ ಅಧಿಕ ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.
ಒಂದಿನವೂ ರಜೆ ಇಲ್ಲದೆ ಕೆಲಸ ಮಾಡಿದ ಡಾ. ಚೆನ್ನಮ್ಮಾ ಏಪ್ರಿಲ್ನಲ್ಲಿ ಕೊರೊನಾ ಟೆಸ್ಟ್ ತರಬೇತಿ ಪಡೆಯಲು ಎರಡು ದಿನ ರಜೆ ಪಡೆದ ಡಾ. ಚೆನ್ನಮ್ಮಾ ಅದಾದ ಬಳಿಕ ಇಂದಿನವರೆಗೆ ಒಂದು ದಿನವೂ ರಜೆ ಪಡೆಯಲಿಲ್ಲ. ರವಿವಾರ ಸರ್ಕಾರಿ ರಜೆ ಇದ್ದರೂ ಇವರಿಗೆ ರಜೆ ಇಲ್ಲ. 9 ತಿಂಗಳಿಂದಲೂ ಸತತವಾಗಿ ಕೊರೊನಾ ಟೆಸ್ಟ್ ಮಾಡುತ್ತಿದ್ದಾರೆ. ಇವರಿಗೆ ಅನಾರೋಗ್ಯ ಉಂಟಾದಾಗಲೂ ರಜೆ ಪಡೆದು, ವಿಶ್ರಾಂತಿ ಮಾಡಲಿಲ್ಲ. ಹಾಗೇ ಯಶಸ್ಸಿನ ಕ್ರೆಡಿಟ್ನ್ನು ತಾವೊಬ್ಬರೇ ಪಡೆದಿಲ್ಲ. ತಮ್ಮೊಂದಿಗೆ ಕೆಲಸ ಮಾಡುವ ಐವರು ಹಿರಿಯ ಹಾಗೂ ಏಳುಮಂದಿ ಕಿರಿಯ ತಂತ್ರಜ್ಞರ ಸಹಕಾರದೊಂದಿಗೆ ಅತ್ಯುತ್ತಮ ರೀತಿಯಲ್ಲಿ ಕೊರೊನಾ ಟೆಸ್ಟ್ ಮಾಡಲು ಸಾಧ್ಯವಾಯಿತು. ಈ ತಂಡದಲ್ಲಿ ಬಹುತೇಕರು ಒಂದಿನವೂ ರಜೆ ಪಡೆದಿಲ್ಲ. ಅವರೆಲ್ಲರ ಸಹಕಾರ ಸದಾ ಸ್ಮರಣೀಯ ಎಂಬುದು ಡಾ. ಚೆನ್ನಮ್ಮಾರ ಮಾತು.
1992ರಲ್ಲಿ ಎಂಬಿಬಿಎಸ್ ಪದವಿ ಡಾ.ಚೆನ್ನಮ್ಮಾ ವಿಜಯಪುರದ ತಾಳಿಕೋಟೆ ಪಟ್ಟಣದ ನಿವಾಸಿ. ತಂದೆ ಮುರಿಗೆಪ್ಪ ಕಟ್ಟಿ ಮತ್ತು ತಾಯಿ ಗಂಗಮ್ಮಾ. ತಂದೆ ಹತ್ತಿ ವ್ಯಾಪಾರಸ್ಥರಾಗಿದ್ದರು. ತಾಳಿಕೋಟೆ ಕನ್ನಡ ಮಾಧ್ಯಮ ಹೆಣ್ಣು ಮಕ್ಕಳ ಶಾಲೆಯಲ್ಲಿ 1-7 ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಪಟ್ಟಣದ ಖಾಸ್ಗತೇಶ್ವರ ವಿದ್ಯಾಸಂಸ್ಥೆಯಲ್ಲಿ ಪಿಯುಸಿವರೆಗೆ ಓದಿ, ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 1992 ರಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಮಂಗಳೂರಿನ ಕಸ್ತೂರ ಬಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೈಕ್ರೋ ಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅದಾದ ಬಳಿಕ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಸೇವೆ ಆರಂಭಿಸಿದರು. 1994 ರಲ್ಲಿ ತಾಳಿಕೋಟೆ ಸಮೀಪದ ಲಕ್ಕುಂಡಿ ಗ್ರಾಮದ ಸಿವಿಲ್ ಇಂಜೀನಿಯರ ಆಗಿದ್ದ ಪ್ರಭುಗೌಡ ಪಾಟೀಲ್ ಅವರೊಂದಿಗೆ ವಿವಾಹವಾಯಿತು. ಇವರಿಗೆ ಇಬ್ಬರು ಪುತ್ರರು. ಅದರಲ್ಲಿ ಹಿರಿಯ ಮಗ ಅಕ್ಷಯ್ ವೈದ್ಯಕೀಯ ಕ್ಷೇತ್ರದ ದಾರಿ ಹಿಡಿದಿದ್ದರೆ, ಇನ್ನೊಬ್ಬ ಮಗ ಅರವಿಂದ್ ಉದ್ಯಮದ ಕಡೆ ಮುಖಮಾಡಿದ್ದಾರೆ.
ಮಂಗಳೂರಿನ ಕಸ್ತೂರ ಬಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ 2009ರಲ್ಲಿ ವಿಜಯಪುರ ಜಿಲ್ಲಾ ಆಸ್ಪತ್ರೆಯ ಮೈಕ್ತೋ ಬಯಾಲಜಿ ವಿಭಾಗದ ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ. 13 ವರ್ಷಗಳಿಂದ ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅಪ್ಪ-ಪತಿಯ ಪ್ರೋತ್ಸಾಹದಿಂದಲೇ ಬೆಳೆದೆ ನಾನಿಷ್ಟು ಬೆಳೆಯಲು ನನ್ನ ಅಪ್ಪ, ಮದುವೆಯಾದ ನಂತರ ಪತಿ ನೀಡಿದ ಪ್ರೋತ್ಸಾಹವೇ ಕಾರಣ. ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿನಿ. ಪಿಯುಸಿವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದ್ದೇನೆ. ನನ್ನ ಅಕ್ಕ-ತಂಗಿ ನನ್ನಷ್ಟು ಓದಿಲ್ಲ. ಆದರೆ ನನ್ನ ಓದಿಗೆ ಯಾವುದೇ ಕಷ್ಟವೂ ಬಾರದಂತೆ ನನ್ನ ಅಪ್ಪ ನೋಡಿಕೊಂಡರು. ವಿವಾಹದ ಬಳಿಕ ಪತಿ ಪ್ರಭುಗೌಡ ಪಾಟೀಲ್ ನನಗೆ ಬೆನ್ನೆಲುಬಾಗಿ ನಿಂತರು. ತವರು ಮನೆಯವರು ಹಾಗೂ ಗಂಡನ ಮನೆಯವರ ಸಹಕಾರ ನನ್ನ ಸಾಧನೆಗೆ ಪೂರಕ. ಕೊರೊನಾ ಮಹಾಮಾರಿಯ ಸಮಯದಲ್ಲಿ ನಾವೆಲ್ಲ ಒತ್ತಡದಲ್ಲಿ ಕೆಲಸ ಮಾಡಿದ್ದೇವೆ. ನಮ್ಮ ಆಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ತಂಡ ಉತ್ತಮವಾಗಿ ಕೆಲಸ ಮಾಡಿದೆ. ಇನ್ನೂ ಹೆಚ್ಚಿನ ಸೇವೆ ಹಾಗೂ ಕೆಲಸ ಮಾಡಲು ಸಿದ್ಧ ಎಂಬ ಉತ್ಸಹಾ ಭರಿತ ಮಾತುಗಳನ್ನಾಡುತ್ತಾರೆ ಡಾ. ಚೆನ್ನಮ್ಮಾ ಕಟ್ಟಿ.
(ನಿರೂಪಣೆ ಅಶೋಕ ಯಡಳ್ಳಿ, ವಿಜಯಪುರ)