Poetry; ಅವಿತಕವಿತೆ: ನೇಗಿಲ ಚೂಪಿಗೆ ಸಿಕ್ಕಿದ್ದಕ್ಕೆ ಸೀತೆ ಎಂದವರೇ…

‘ಕಾವ್ಯ ಯಾವತ್ತೂ ಕೆಲವೇ ಜನರಿಗೆ ಬೇಕಾದದ್ದು. ಸಂಪೂರ್ಣ ಹಸಿದಿರುವವರಿಗೆ ಮತ್ತು ಪೂರ್ಣ ಹೊಟ್ಟೆ ತುಂಬಿದವರಿಗೆ-ಹಸಿವನ್ನು, ಅವಮಾನವನ್ನು ಕಾವ್ಯ ಮರೆಸಬಲ್ಲ ಶಕ್ತಿಯುಳ್ಳದ್ದು. ಹಾಗೆಯೇ ಮೆರೆಸಬಲ್ಲ ತಾಕತ್ತಿರುವಂಥದು. ಈ ಎರಡೂ ಅತಿಗಳ ನಡುವೆ ಇರುವ ಕಂದಕದೊಳಗೇ ಹೆಚ್ಚಿನ ಜನಸಮುದಾಯ ಇರುವುದರಿಂದ ಕಾವ್ಯ ಯಾವತ್ತೂ ಸಾಮಾನ್ಯರಿಗೆ ಸಹ್ಯವಾಗುವುದೇ ಇಲ್ಲ. ಹಾಗಾಗಿ ಕಾವ್ಯ ಈ ಕಾಲದ ಮಾಧ್ಯಮವಲ್ಲ ಎಂಬ ಹೇಳಿಕೆ ಅವಸರದ್ದಾಗುತ್ತದೆ, ರದ್ದಾಗುತ್ತದೆ.’ ಡಿ. ಎಸ್​. ರಾಮಸ್ವಾಮಿ

Poetry; ಅವಿತಕವಿತೆ: ನೇಗಿಲ ಚೂಪಿಗೆ ಸಿಕ್ಕಿದ್ದಕ್ಕೆ ಸೀತೆ ಎಂದವರೇ...
ಡಿ. ಎಸ್​. ರಾಮಸ್ವಾಮಿ
Follow us
|

Updated on:Feb 28, 2021 | 3:32 PM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ಅವಿತಕವಿತೆ. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ಡಿ.ಎಸ್. ರಾಮಸ್ವಾಮಿ ಅವರ ಕವನಗಳು ನಿಮ್ಮ ಓದಿಗೆ.

ಪರಿಕಲ್ಪನೆ : ಶ್ರೀದೇವಿ ಕಳಸದ

ರಾಮಸ್ವಾಮಿ ತನಗೆ ನಿಗೂಢವಾಗಿ ಹೊಳೆದದ್ದನ್ನು ನಮಗೂ ಹೊಳೆಯಬಲ್ಲಂತೆ ಬರೆಯಬಲ್ಲ ಕವಿ. ಏನನ್ನೂ ಓದಿಕೊಳ್ಳದೆ, ತನಗೆ ತೋಚಿದ್ದನ್ನು ತೊಚಿದಂತೆ, ಯಾವ ಎಗ್ಗಿಲ್ಲದೆ ಬರೆಯುವವರೇ ಹೆಚ್ಚಾಗಿರುವ, ಕಿವಿ ಕಣ್ಣುಗಳ ಸೂಕ್ಷ್ಮವಿಲ್ಲದವರ ನಡುವೆ ನಮ್ಮ ಒಳ ಬದುಕಿನ ಅರಿವನ್ನೂ ಹೊರಲೋಕದ ಸಂದಿಗ್ಧಗಳನ್ನೂ ಅನ್ಯೋನ್ಯವೆನ್ನಿಸುವಂತೆ ಬರೆಯುವ ಅಪರೂಪದ ಕವಿ. ಬ್ಲೇಕ್ ತನ್ನ ಕಾವ್ಯದ ಬಗ್ಗೆ ‘ಇದು ನನ್ನದು; ಆದರೆ ನನ್ನದು ಮಾತ್ರವಲ್ಲ’ ಎನ್ನುತ್ತಾನೆ. ಹೀಗೆನ್ನುವುದು ಸಾಧ್ಯವಾಗುವಂತೆ, ಈವರೆಗೆ ಸಾಧಿಸಿದಕ್ಕಿಂತ ಹೆಚ್ಚಿನ ಒಳನೋಟಗಳನ್ನು ಸಾಧಿಸಬಲ್ಲ ಭರವಸೆಯನ್ನು ನಮ್ಮಲ್ಲಿ ಹುಟ್ಟಿಸುವ ಕವಿ ರಾಮಸ್ವಾಮಿ. -ಡಾ. ಯು. ಆರ್. ಅನಂತಮೂರ್ತಿ

ಹೆಣ್ಣು ಮತ್ತು ಹಾಡು

ನೇಗಿಲ ಚೂಪಿಗೆ ಸಿಕ್ಕಿದ್ದಕ್ಕೆ ಸೀತೆ ಎಂದವರೇ ಇವಳು ಜನಕನ ಮಗಳು ಜಾನಕಿ ಎಂದಿರಿ. ಇವಳದಲ್ಲದ ತಪ್ಪಿಗೆ ಬೆಂಕಿಗೆ ಹಾಯುವಾಗಲು ತಡೆಯದವನನ್ನು ಪುರುಷೋತ್ತಮನೆಂದಿರಿ. ತ್ರೇತಾಯುಗದ ತಪ್ಪನ್ನು ದ್ವಾಪರಕ್ಕೂ ಮುಟ್ಟಿಸಿ

ಪಾಂಚಾಲದಲ್ಲಿ ಹುಟ್ಟಿದುದಕ್ಕೇ ಪಾಂಚಾಲಿ. ದೃಪದನ ಮಗಳಿಗೆ ದ್ರೌಪದಿಯ ಠಸ್ಸೆಯೊತ್ತಿದಿರಿ ಯಾರ ಮೇಲೆ ಯಾರಿಗೂ ಹಕ್ಕೇ ಇಲ್ಲದಿದ್ದರೂ ಜೂಜು ಕಟ್ಟೆಯ ಸ್ವತ್ತಾಗಿಸಿ ಲಿಲಾವಿಗಿಟ್ಟು ದ್ವಾಪರದ ತಪ್ಪನ್ನು ಕಲಿಗಾಲಕ್ಕೂ ತಂದಿರಿಸಿದಿರಿ.

ಸೀತೆಯನ್ನು ಗೆಲ್ಲುವ ಮೊದಲೇ ದಾಶರಥಿ ಕಲ್ಲಂತಾಗಿದ್ದ ಅಹಲ್ಯೆಯನ್ನು ಹೂವಾಗಿಸಿದ್ದನ್ನು ಸ್ವತಃ ಮರೆತದ್ದಕ್ಕೇ ಇರಬೇಕು, ಕಿಡಿಗೇಡಿಯ ಸಣ್ಣ ಮಾತಿಗೇ ಮತ್ತೆ ಕಾಡಿಗಟ್ಟಿದ ಅವಿವೇಕ ಹಾಡಂತೆ ಹಾಡುತ್ತಲೇ ಕುಶಲವರು ಗೆದ್ದದ್ದು.

ಉಟ್ಟ ಸೀರೆಗೆ ಕೈಯಿಟ್ಟವನನ್ನು ಸುಸ್ತಾಗಿಸಿದ್ದು ಕಟ್ಟಿಕೊಂಡವರೇನಲ್ಲ, ಮಾತು ತಪ್ಪದ ಸಖನೇ, ಮುಡಿ ಕಟ್ಟುವುದಿಲ್ಲ ತೊಡೆಮುರಿದ ಹೊರತೂ ಎಂದವಳು ಅವಳೇನಲ್ಲ,ಯಾರದೋ ಶಪಥಕ್ಕೆ ಪಗಡೆಯ ದಾಳವಾದದ್ದೂ ಆಕಸ್ಮಿಕವೇನಲ್ಲ,

ಯುಗ ಯುಗಗಳ ಆವರ್ತದಲ್ಲೂ ಮತ್ತೆ ವ್ಯಥೆ ನೆಲವಲ್ಲದೇ ನೇಗಿಲ ಮೊನೆ ಸೀಳೀತೆ ಕಲ್ಲನ್ನು ಬಂಡೆಗೆ ತಾಗಿದರೆ ಹಲದ ಹಲ್ಲೂ ಮುರಿದೀತು ಅದಕ್ಕೇ ಯಾವತ್ತೂ ಮಿಗದ ಬೇಟೆಯ ನೆವಕ್ಕೆ ಈ ಇವನ ಕೈಯ ಭರ್ಜಿ,ಈಟಿ, ತಲವಾರುಗಳು.

ಯಾವುವೂ ರಕ್ಷಣೆಗೆ ಸ್ವತಃ ನಿಲ್ಲುವುದಿಲ್ಲ ರಕ್ತದ ಹನಿ ನೆಲಕ್ಕೆ ಬಿದ್ದರೆ ಮತ್ತೆ ಅಸುರ ಶಕ್ತಿ ಎದ್ದೀತೆಂಬ ಎಚ್ಚರಿಕೆಯಲ್ಲೇ ನಾಲಿಗೆಯ ಹಾಸಿ ಶಕ್ತಿ ರೂಪಿಣಿಯ ಕೈಯಲ್ಲಿ ಆಯುಧದ ಸಾಲು ಬರಿಯ ತೋರಿಕೆಗಲ್ಲ, ಅತ್ಯಗತ್ಯದ ವೇಷ.

ತೊಡದೇ ಇದ್ದರೆ ಗೊತ್ತೇ ಆಗುವುದಿಲ್ಲ ಈ ಅವಿವೇಕಿಗಳಿಗೆ. ಇವಳು ತಾಯಿ, ಮಗಳು ಅಕ್ಕ ತಂಗಿಯರ ಸಂಬಂಧದಲ್ಲಿ ಸೂಕ್ಷವಾಗಿ.

avitha kavithe

ಕೈಬರಹದೊಂದಿಗೆ ರಾಮಸ್ವಾಮಿ

ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ . ‘ನಾನೇಕೆ  ಬರೆಯುತ್ತೇನೆ?’ ಎನ್ನುವ ಪ್ರಶ್ನೆಗೆ ಉತ್ತರ ಕೊಡುವುದು ಎಣಿಸಿದಷ್ಟು ಸುಲಭವಲ್ಲವಲ್ಲವೆಂಬುದು ಎಲ್ಲ ಬರಹಗಾರರಿಗೂ ಅರಿವಾಗುವುದೇ ಅವರು ಇಂಥ ಪ್ರಶ್ನೆಗೆ ಉತ್ತರ ಕೊಡಲು ಕೂತಾಗ ಮಾತ್ರ! ಹೇಗೆ ಬರೆದರೆ ತನ್ನ ಬರಹಗಳಿಗೂ ಪತ್ರಿಕೆಗಳಲ್ಲಿ ಒಂದಿಷ್ಟು ಜಾಗ ಸಿಕ್ಕಬಹುದೆನ್ನುವ ಯೋಚನೆಯಲ್ಲೇ ಬರೆಯುತ್ತಿದ್ದ ದಿನಗಳು ಹೋಗಿ ಅನ್ನಿಸಿದ್ದೆಲ್ಲವನ್ನೂ ಫೇಸ್ಬುಕ್ಕಲ್ಲೋ ವಾಟ್ಸಪ್ಪಿನ ಗುಂಪಲ್ಲೋ ಬರೆದು ಬಿಸಾಕುತ್ತಿರುವ ಈ ಹೊತ್ತಿನ ಬರಹಗಾರ ಹೊಳೆದದ್ದನ್ನು ಬರೆಯುವದಕ್ಕಿಂತಲೂ ಅನ್ಯರನ್ನು ಮೆಚ್ಚಿಸಲು ಬರಹದ ಹಿಂದೆ ಬಿದ್ದ ಅಕ್ಷರ ಬೇಟೆಗಾರನ ಹಾಗೆ ನನಗೆ ಕಾಣುತ್ತಿದ್ದಾನೆ.

ದ್ವಂದ್ವ

ಮಗ ಎತ್ತರಕ್ಕೆ ಬೆಳೆದಿದ್ದಾನೆ ಅಂತ ಮೊನ್ನೆ ಅವನು ನನ್ನ ಯಾವುದೋ ಮಾತಿಗೆ ಉಚಾಯಿಸಿ ಗುರಾಯಿಸಿ ಎದುರಾಡಿದಾಗ ಅರ್ಥವಾಯಿತು,

ನನ್ನಪ್ಪ ನನ್ನನ್ನು ಪ್ರಶ್ನಿಸಿದಾಗಲೆಲ್ಲ ಹೀಗೇ ಉಚಾಯಿಸಿ ಗುರಾಯಿಸುತ್ತಿದ್ದೆನಾ ಅಪ್ಪನನ್ನು ಕೇಳೋಣವೆಂದರೆ ಈಗ ಅವನು ಗೋಡೆಯಲ್ಲಿ ನೇತಾಡುವ ಪಟ.

ನನಗೂ ಅಪ್ಪನಿಗೂ ಸಣ್ಣ ಪುಟ್ಟದ್ದಕ್ಕೆಲ್ಲ ಹತ್ತಿ ಬರುತ್ತಿರಲಿಲ್ಲವಾದರೂ ಯಾರದೋ ಮನೆಯ ಯಾರೋ ಹುಡುಗ ಏನನ್ನೋ ಸಾಧಿಸಿದ ಅಂತ ಅಪ್ಪ ಹೇಳಿದಾಗೆಲ್ಲ ನಾನು ಮುನಿಯುತ್ತಿದ್ದೆ.

ಮತ್ತು ಆ ಅಂಥ ಸಾಧನೆ ನೀನೂ ಮಾಡಬಹುದಿತ್ತಲ್ಲ ಎಂದು ಹೇಳಿ ಅಪ್ಪನ ಸಿಟ್ಟನ್ನು ಹೆಚ್ಚಿಸುತ್ತಿದ್ದೆ. ರೂಮುಗಳೇ ಇರದ ಅಂಗಡಿ ಬೀದಿಯಂಥ ಮನೆಯಲ್ಲಿ ಆ ರಾತ್ರಿಯಿಡೀ ಅಪ್ಪ ಎದ್ದೆದ್ದು ಮೂತ್ರಕ್ಕೆ ಹೋಗುತ್ತಿದ್ದ

ವಿಷಯ ಇವತ್ತು ನೆನಪಾಗಿ ಹೊಟ್ಟೆ ತುಂಬಾ ಸಂಕಟ. ಪ್ರಹ್ಲಾದನನ್ನು ತಿದ್ದದೇ ಕಯಾದುವನ್ನು ದೂರಿದ ಅವನಪ್ಪ ಅಪ್ಪನಿದ್ದರೂ ಇಲ್ಲದ ಹಾಗೆ ಬೆಳೆದ ರಾಹುಲ ಹರಿಲಾಲನನ್ನು ಎದುರಿಸದೇ ಸೋತ ಮೋಹನದಾಸ

ನರಸಿಂಹನೇ ಪ್ರತ್ಯಕ್ಷನಾಗಿ ಹೊಟ್ಟೆ ಬಗೆಯುವಾಗಲೂ ಅಥವ ದಾರಿಗೆಟ್ಟ ಹರಿಲಾಲ ಕತ್ತಿ ಝಳುಪಿಸಿ ನಿಂತರೂ ಆಸೆಯೇ ದುಃಖಕ್ಕೆ ಮೂಲವೆಂದವನ ಮಗನ ಅಳಲ ಮೆಟ್ಟಿ ಗಾಂಧಿಯೊಳಗಿನ ಗಾಂಧಿ ಗಾಂಧಿಯೇ ಆಗಿ ನಿಂತನೆಂದರೆ

ನಾನೋ ಆ ಅಪ್ಪನ ಮಗ, ಈ ಮಗನ ಅಪ್ಪ ಆಗಿದ್ದೇನೆ. ಯಯಾತಿಗಾಯುಷ್ಯ ಧಾರೆಯೆರೆದ ಪುರುವಿನ ಜೊತೆಗೇ ಯಮನ ಬಾಗಿಲಲ್ಲೇ ಕಾದು ಸಾಧಿಸಿದ ನಚಿಕೇತ ನಗುತ್ತಾನೆ ದ್ವಂದ್ವಗಳಲ್ಲೇ ಇರುವ ಅರಿವ ಅರಿವೆಯ ಝಾಡಿಸುತ್ತಾನೆ.

avitha kavithe

ರಾಮಸ್ವಾಮಿಯವರ ಪುಸ್ತಕಗಳು

ಪರಿಚಯ: ಡಿ. ಎಸ್. ರಾಮಸ್ವಾಮಿ ಅವರು ವೃತ್ತಿಯಿಂದ ಭಾರತೀಯ ಜೀವವಿಮಾ ನಿಗಮದ ಅರಸೀಕೆರೆ ಶಾಖೆಯ ಆಡಳಿತಾಧಿಕಾರಿ. ಮೂಲತಃ ತರೀಕೆರೆಯವರಾದ ಇವರ ಮೊದಲ ಸಂಕಲನ ‘ಮರೆತ ಮಾತು’ ಕೃತಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಡಿ. ಸಿ. ಅನಂತಸ್ವಾಮಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ಸಂದಿವೆ. ೨೦೧೦ರಲ್ಲಿ ವಿಭಾ ಕಾವ್ಯಪ್ರಶಸ್ತಿ ‘ತೆರೆದರಷ್ಟೇ ಬಾಗಿಲು‘ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಸ್ಪರ್ಧೆಯಲ್ಲಿ ನಾಲ್ಕು ಬಾರಿ ಬಹುಮಾನ ಪಡೆದಿರುವ ಇವರು, ಕನ್ನಡಪ್ರಭದ ಸಂಕ್ರಾಂತಿ ಕಥಾ ಸ್ಪರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದುದಲ್ಲದೆ ‘ಸಂಚಯ‘ ಸಾಹಿತ್ಯ ಪತ್ರಿಕೆಯ ಕಾವ್ಯ ಸ್ಪರ್ಧೆಯಲ್ಲಿ ಐದು ಬಾರಿ ಬಹುಮಾನ ಪಡೆದಿದ್ದಾರೆ. ಹಾಸನ ಭದ್ರಾವತಿ ಮತ್ತು ಮೈಸೂರು ಆಕಾಶವಾಣಿಗಳಿಂದ ೧೫೦ಕ್ಕೂ ಹೆಚ್ಚು ಚಿಂತನಗಳು ಪ್ರಸಾರವಾಗಿವೆ. ಆಕಾಶವಾಣಿ ಬೆಂಗಳೂರು ಕೇಂದ್ರ‍ದ ಹೊಸ ದನಿ ಹೊಸ ಬನಿ ಭಾವಗೀತೆಗಳ ಕಾರ್ಯಕ್ರಮದಲ್ಲಿ ಎರಡು ಬಾರಿ ಇವರ ಗೀತೆಗಳು ತಿಂಗಳ ಹಾಡಾಗಿ ಪ್ರಸಾರವಾಗಿವೆ.

ಇದನ್ನೂ ಓದಿ: Poetry; ಅವಿತಕವಿತೆ: ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗತೊಡಗಿತು 

Published On - 3:31 pm, Sun, 28 February 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ