ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಹೆಸರಿನಲ್ಲಿ ನಿವೃತ್ತ ವಿಜ್ಞಾನಿಗೆ ಲಕ್ಷಾಂತರ ರೂ. ವಂಚನೆ
ಮುಂಬೈ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಹೆಸರಿನಲ್ಲಿ ಚಿಕ್ಕಬಳ್ಳಾಪುರದ ಸಬ್ಬೇನಹಳ್ಳಿಯ ನಿವೃತ್ತ ಭೂವಿಜ್ಞಾನಿ ಬಿ.ಕೆ. ರಾಮಚಂದ್ರಪ್ಪ ಅವರಿಗೆ ವಂಚಿಸಲಾಗಿದೆ. ಚಿಕ್ಕಬಳ್ಳಾಪುರ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಸೈಬರ್ ಅಪರಾಧ ಸಹಾಯವಾಣಿಯ ಸಂಖ್ಯೆ 1930 ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪರು, ಜುಲೈ 16: ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ (Daya Nayak) ಹೆಸರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿವೃತ್ತ ಹಿರಿಯ ಭೂ ವಿಜ್ಞಾನಿಗೆ ಸೈಬರ್ ವಂಚರು ವಂಚಿಸಿರುವ (Cyber Fraud) ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಸಬ್ಬೇನಹಳ್ಳಿಯಲ್ಲಿ ನಡೆದಿದೆ. ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಹೆಸರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿವೃತ್ತ ಹಿರಿಯ ಭೂ ವಿಜ್ಞಾನಿ ಬಿ.ಕೆ. ರಾಮಚಂದ್ರಪ್ಪ ಹಾಗೂ ಇವರ ಪತ್ನಿ ಸುಜಾತ ಅವರಿಗೆ ಸೈಬರ್ ವಂಚಕರು ಕರೆ ಮಾಡಿದ್ದಾರೆ.
“ಮುಂಬೈನ ಕೆನರಾ ಬ್ಯಾಂಕ್ನಲ್ಲಿ ನಿಮ್ಮ ಹೆಸರಿನ ಖಾತೆ ಇದೆ. ಕೆಲವರು ನಿಮ್ಮ ಖಾತೆಯನ್ನು ಮನಿ ಲಾಂಡರಿಂಗ್ಗೆ ಬಳಸಿಕೊಂಡಿದ್ದಾರೆ. ಇದರಿಂದ ನಿಮ್ಮ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ ಈ ಕೂಡಲೇ 12,65,000 ಹಣ ವರ್ಗಾವಣೆ ಮಾಡಿ, ಇಲ್ಲವಾದಲ್ಲಿ ನಿಮ್ಮ ಮನೆಯ ಮೇಲೆ ದಾಳಿ ಮಾಡಿ, ಬಂಧಿಸಬೇಕಾಗುತ್ತದೆ” ಎಂದು ಹೆದರಿಸಿದ್ದಾರೆ.
ಸೈಬರ್ ವಂಚಕರ ಮಾತಿನಿಂದ ಹೆದರಿದ ಬಿ.ಕೆ. ರಾಮಚಂದ್ರಪ್ಪ ಹಾಗೂ ಅವರ ಪತ್ನಿ ಮನೆಯಲ್ಲಿದ್ದ 200 ಗ್ರಾಂ ಚಿನ್ನಾಭರಣಗಳನ್ನು ಮುತ್ತೂಟ್ ಫೈನಾನ್ಸ್ನಲ್ಲಿ ಅಡ ಇಟ್ಟು, ಬಂದ ಹಣವನ್ನು ವಂಚಕರು ಹೇಳಿದ ಕೆನರಾ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮಾಡಿ ಮೋಸ ಹೋಗಿದ್ದಾರೆ. ಈಗ ನ್ಯಾಯಕ್ಕಾಗಿ ಚಿಕ್ಕಬಳ್ಳಾಪುರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಹೃದಯವಿದ್ರಾವಕ ಘಟನೆ: ಸೈಬರ್ ವಂಚಕರ ಬಲೆಗೆ ಬಿದ್ದ ವೃದ್ಧ ದಂಪತಿ ದುರಂತ ಸಾವು
ಚಿಕ್ಕಬಳ್ಳಾಪುರದ ಸೈಬರ್ ಠಾಣೆ ಪೊಲೀಸರು, ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿದರು. ಆರೋಪಿಗಳು ಕಾಂಬೋಡಿಯಾದಲ್ಲಿ ಕುಳಿತು ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಮುಂಬೈ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರ ಹೆಸರನ್ನು ದುರುಪಯೋಗ ಮಾಡಿಕೊಂಡಿರುವುದು ಬೆಳೆಕಿಗೆ ಬಂದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:20 pm, Wed, 16 July 25