ಹೃದಯವಿದ್ರಾವಕ ಘಟನೆ: ಸೈಬರ್ ವಂಚಕರ ಬಲೆಗೆ ಬಿದ್ದ ವೃದ್ಧ ದಂಪತಿ ದುರಂತ ಸಾವು
ನೀವು ಯಾರಿಗಾದ್ರೂ ಕರೆ ಮಾಡಿದ್ರೇ ಸೈಬರ್ ವಂಚಕರಿಂದ ಎಚ್ಚರಿಕೆಯಿಂದ ಇರೀ ಅನ್ನೋ ಸಂದೇಶ ಕೇಳ್ತಿರೀ, ಸರ್ಕಾರ, ಪೊಲೀಸ್ ಇಲಾಖೆ ಕೂಡ ಸೈಬರ್ ವಂಚನೆ ಕುರಿತು ಅರಿವು ಮೂಡಿಸುವ ಕೆಲಸ ಮಾಡ್ತಿದೆ. ಇಷ್ಟಾದರೂ ರಾಜ್ಯದಲ್ಲಿ ಸೈಬರ್ ವಂಚನೆಗಳು ನಡೆಯುತ್ತಿವೆ, ಆದ್ರೇ ಇದೇ ವಿಚಾರಕ್ಕೆ ಎರಡು ಜೀವ ಬಲಿಯಾಗಿದ್ದು ಬೆಚ್ಚಿ ಬೀಳಿಸಿದೆ. ದೆಹಲಿ ಕ್ರೈಂ ಬ್ಯೂರೋ ಹೆಸರು ಹೇಳಿಕೊಂಡು ವಿಡಿಯೋ ಕಾಲ್ ಮಾಡಿದವರ ಬಲೆಗೆ ಬಿದ್ದ ವೃದ್ದ ದಂಪತಿ ಸಾವಿನ ಹಾದಿ ಹಿಡಿದಿದ್ದು ಯಾಕೆ? ಡೆತ್ ನೋಟ್ ನಲ್ಲಿ ಏನಿದೆ? ಎನ್ನುವ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಬೆಳಗಾವಿ, (ಮಾರ್ಚ್ 28): ನನಗೆ ನೀನು ನಿನಗೆ ನಾನು ಎಂದು ಮುಪ್ಪಿನ ಜೀವನವನ್ನೂ ಬಹಳ ಸುಂದರವಾಗಿ ಕಳೆಯುತ್ತಿದ್ದ ಜೋಡಿ ಸೈಬರ್ ವಂಚಕರಿಂದ ದುರಂತ ಅಂತ್ಯಕಂಡಿದೆ. ಹೌದು.. ಸೈಬರ್ ವಂಚಕರ ಕಿರುಕುಳಕ್ಕೆ ವೃದ್ಧ ದಂಪತಿ ಬಲಿಯಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಡಿಯಾಂಗೋ ನಜರತ್ (83) ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಪತ್ನಿ ಪ್ಲೇವಿಯಾನಾ ನಜರತ್ (79) ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಿಯಾಂಗೋ ನಜರತ್(83), ಪ್ಲೇವಿಯಾನಾ ನಜರತ್(79) ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದ ನಿವಾಸಿಗಳು. ನಿನ್ನೆ (ಮಾರ್ಚ್ 28) ಸಂಜೆ ತಮ್ಮ ಮನೆಯಲ್ಲೇ ಗಂಡ ಡಿಯಾಂಗೋ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ್ರೇ ಇದನ್ನ ನೋಡಿದ ಹೆಂಡತಿ ಕೂಡ ಸಕ್ಕರೆ ಕಾಯಿಲೆಯ ಮಾತ್ರೆಗಳೆಲ್ಲವನ್ನೂ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳೇ ಇಲ್ಲದ ದಂಪತಿಗೆ ತಮಗೆ ತಾವೇ ಎಲ್ಲವೂ ಆಗಿದ್ದರು. ಆದ್ರೆ, ಸೈಬರ್ ಕಿರಾತಕರ ಕಿರುಕುಳಕ್ಕೆ ವೃದ್ಧ ದಂಪತಿ ದುರಂತ ಸಾವುಕಂಡಿದೆ.
ಇದನನ್ನೂ ಓದಿ: ಬೆಳಗಾವಿ: ಮನೆಯಲ್ಲಿ ಕೂಡಿಹಾಕಿದ್ದಕ್ಕೆ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ವ್ಯಕ್ತಿ!
ಮಹಾರಾಷ್ಟ್ರ ಸರ್ಕಾರದ ಸೆಕ್ರಟ್ರಿ ಕಚೇರಿಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಡಿಯಾಂಗೋ ನಿವೃತ್ತಿಯಾದ ಬಳಿಕ ಬೀಡಿಗೆ ಬಂದು ಇಲ್ಲೇ ಗಂಡ ಹೆಂಡತಿ ಸೆಟ್ಲ್ ಆಗಿದ್ದರು. ಎರಡು ಎಕರೆ ಜಮೀನು ಮತ್ತು ಮನೆ ಹಾಗೂ ನಿವೃತ್ತಿಯಾದ ಬಳಿಕ ಬರುವ ಪೆನ್ಷನ್ ನಲ್ಲಿ ಸುಂದರವಾಗಿ ಜೀವನ ನಡೆಸುತ್ತಿದ್ದ ವೃದ್ದ ದಂಪತಿ ನಿನ್ನೆ ಆತ್ಮಹತ್ಯೆ ದಾರಿ ಹಿಡಿದಿದ್ದು ಎಲ್ಲರಿಗೂ ಶಾಕ್ ಆಗುವಂತೆ ಮಾಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ನಂದಗಡ ಠಾಣೆ ಪೊಲೀಸರು ಮಾಹಿತಿ ಪಡೆದು ರೂಮ್ ನಲ್ಲಿ ಹುಡುಕಾಟ ನಡೆಸಿದಾಗ ಎರಡು ಪುಟದ ಒಂದು ಡೆತ್ ನೋಟ್ ಕೂಡ ಸಿಕ್ಕಿದ್ದು ಅದರಲ್ಲಿ ಬರೆದ ವಿಷಯ ಪೊಲೀಸರನ್ನೂ ಬೆಚ್ಚಿ ಬೀಳಿಸಿದೆ.
ಇನ್ನೂ ವಿಚಾರ ಗೊತ್ತಾಗುತ್ತಿದ್ದಂತೆ ಶವಗಳನ್ನ ಖಾನಾಪುರದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದು ಬೇಡಾ ಅಂತಾ ಹೇಳಿ ಇಂದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಖುದ್ದು ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಮಾಹಿತಿ ಪಡೆದು ಒಂದು ತಂಡ ರಚನೆ ಮಾಡಿ ತನಿಖೆಗೆ ಸೂಚನೆ ನೀಡಿದರು.
ವೃದ್ಧ ದಂಪತಿ ಆತ್ಮಹತ್ಯೆಗೆ ಕಾರಣವೇನು?
ಅಷ್ಟಕ್ಕೂ ಇಲ್ಲಿ ಡೆತ್ ನೋಟ್ ನಲ್ಲಿ ಬರೆದ ಅಂಶ ಏನು? ಇವರ ಸಾವಿಗೆ ಕಾರಣ ಏನು ಎನ್ನುವುದ ನ್ನು ನೋಡೊದಾದ್ರೇ ಸೈಬರ್ ವಂಚನೆಗೆ ಒಳಗಾಗಿರುವುದು. ಹೌದು ಇಲ್ಲಿ ಸೈಬರ್ ವಂಚಕರು ಕೆಲ ದಿನಗಳ ಹಿಂದೆ ವೃದ್ಧ ಡಿಯಾಂಗೋಗೆ ವಿಡಿಯೋ ಕಾಲ್ ಮಾಡಿದ್ದಾರೆ. ನಿಮ್ಮ ಫೋಟೊಗಳನ್ನ ಬಳಿಸಿಕೊಂಡು ಯಾರೋ ಸೈಬರ್ ವಂಚನೆ ಮಾಡಿದ್ದು ನಿಮ್ಮ ಮೇಲೆ ಕೇಸ್ ಆಗಿದೆ ಎಂದು ಹೇಳಿ ಹೆದರಿಸಿದ್ದಾರೆ. ಬಳಿಕ ತಮ್ಮ ಮೇಲಾಧಿಕಾರಿಗಳು ಮಾತಾಡ್ತಾರೆ ಎಂದು ಕರೆಯನ್ನ ಬೇರೆಯವರಿಗೆ ಟ್ರಾನ್ಸ್ಪರ್ ಮಾಡಿದ್ದು, ಅವರು ಕೂಡ ಆರಂಭದಲ್ಲಿ ಇವರಿಗೆ ಹೆದರಿಸಿದ್ದಾರೆ.
ವಂಚನೆಯಾದ ಹಣವನ್ನ ನೀವು ಕಟ್ಟಿದ್ರೇ ನಿಮ್ಮನ್ನ ನಾವು ಸೇಪ್ ಮಾಡುತ್ತೇವೆ ಎಂದು ಹೇಳಿ ಆರಂಭದಲ್ಲಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಂದು ಬ್ಯಾಂಕ್ ಅಕೌಂಟ್ ನಂಬರ್ ನೀಡಿ ಅದಕ್ಕೆ ಆರ್ ಟಿ ಜಿಎಸ್ ಮಾಡಿಸಿಕೊಂಡಿದ್ದಾರೆ. ಹೀಗೆ ಸುಮಾರು ಬಾರಿ ಕರೆ ಮಾಡಿ ಹೆದರಿಸಿ ಸುಮಾರು 50 ಲಕ್ಷ ರೂ. ವರೆಗೂ ಹಣವನ್ನ ಹಾಕಿಸಿಕೊಂಡಿದ್ದಾರೆ. ಗೋಲ್ಡ್ ಅಡವಿಟ್ಟು ಏಳು ಲಕ್ಷ, ನಿವೃತ್ತಿಯಾದಾಗ ಬಂದಿದ್ದ ಸುಮಾರು ನಲವತ್ತು ಲಕ್ಷ ಸೇರಿ ಐವತ್ತು ಲಕ್ಷ ಹಣವನ್ನ ಸೈಬರ್ ವಂಚಕರು ಹೇಳಿದ ಹಾಗೇ ಹಾಕುತ್ತಾ ಹೋಗಿದ್ದಾರೆ. ಇದಾದ ಬಳಿಕ ಮೊನ್ನೆ ಖುದ್ದು ಡಿಯಾಂಗೋ ಕರೆ ಬಂದ ನಂಬರ್ ಗೆ ಕಾಲ್ ಮಾಡಿದ್ದಾರೆ/ ಆದ್ರೆ, ಅವರು ರಿಸೀವ್ ಮಾಡದಿದ್ದಾಗ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಸೇಜ್ ಹಾಕಿದ್ದಾರೆ. ಆದರೂ ರಿಪ್ಲೈ ಬಾರದಿದ್ದಾಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೂ ಈ ಘಟನೆಯನ್ನ ಬಹಳ ಗಂಭೀರವಾಗಿ ತೆಗೆದುಕೊಂಡಿರುವ ಎಸ್ಪಿ ನಂದಗಡ ಠಾಣೆಯಿಂದ ಜಿಲ್ಲಾ ಸಿಇಎನ್ ಠಾಣೆಗೆ ಕೇಸ್ ವರ್ಗಾಯಿಸಿದ್ದಾರೆ. ಸಿಇಎನ್ ಡಿವೈಎಸ್ಪಿ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಿ ಕಾಲ್ ಬಂದಿರುವ ನಂಬರ್ ಹಾಗೂ ಬ್ಯಾಂಕ್ ಅಕೌಂಟ್ ನಂಬರ್ ಆಧಾರದ ಮೇಲೆ ಹುಡುಕಾಟ ಶುರು ಮಾಡಿದ್ದಾರೆ.
ಅದೇನೆ ಇರಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೈಬರ್ ವಂಚಕರ ಬಗ್ಗೆ ಜಾಗೃತಿ ಮೂಡಿಸುತ್ತಿದ್ರೂ ಓದಿದವರೇ ಇದರಲ್ಲಿ ಮತ್ತೆ ಮತ್ತೆ ಮೋಸಕ್ಕೆ ಸಿಲುಕುತ್ತಿರುವುದು ವಿಪರ್ಯಾಸ ಆದ್ರೇ ಇಲ್ಲಿ ಉನ್ನತ ಮಟ್ಟದ ಹುದ್ದೆಯಲ್ಲಿದ್ದು ನಿವೃತ್ತಿಯಾಗಿ ಬಂದವರು ಕೂಡ ಮೋಸ ಹೋಗಿ ಜೀವ ಕಳೆದುಕೊಂಡಿದ್ದು ದುರಂತವೇ ಸರಿ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.