New Book; ಅಚ್ಚಿಗೂ ಮೊದಲು: ಬಸಪ್ಪನ ಪ್ರಪಂಚವೇ ಆ ಬೇರೆಯವರು…

‘ಪತ್ತೇದಾರಿ ಕತೆಯೋ ಎಂಬಂತೆ ತೊಡಗುವ ಈ ಕಾದಂಬರಿ ಕ್ರಮೇಣ ಒಂದು ಥ್ರಿಲ್ಲರ್ ಆಗುವ ಎಲ್ಲ ಲಕ್ಷಣಗಳನ್ನೂ ಮೈಗೂಡಿಸಿಕೊಂಡು ಓದುಗನನ್ನು ಕುತೂಹಲದ ಸೆಳೆತಕ್ಕೆ ಒಡ್ಡಿ, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಇತ್ತೀಚೆಗಷ್ಟೇ ಬಂದು ಹೆಸರು ಮಾಡಿದ ರಿಯಾ ಮುಖರ್ಜಿಯವರ ‘ಬಾಡಿ ಮಿಥ್’ ಕಾದಂಬರಿಯ ಒಳಗುದಿಯನ್ನೇ ತೀರ ವಿಭಿನ್ನ ನೆಲೆಯಿಂದ ನಿರೂಪಿಸುವ ಪೂರ್ಣಿಮಾ ಅವರ ಈ ಕಾದಂಬರಿ ಓದುಗನಲ್ಲಿ ಹುಟ್ಟಿಸುವ ಸೂಕ್ಷ್ಮ ತಲ್ಲಣ ಕನ್ನಡಕ್ಕೆ ಹೊಸದು.‘

New Book; ಅಚ್ಚಿಗೂ ಮೊದಲು: ಬಸಪ್ಪನ ಪ್ರಪಂಚವೇ ಆ ಬೇರೆಯವರು...
ಪೂರ್ಣಿಮಾ ಮಳಗಿಮನಿ
Follow us
ಶ್ರೀದೇವಿ ಕಳಸದ
|

Updated on:Mar 01, 2021 | 2:22 PM

ಈಗೀಗ ಓದುವವರು ಕಡಿಮೆ, ಬರೆಯುವವರೇ ಹೆಚ್ಚು; ದಶಕಗಳಿಂದ ಸಾಹಿತ್ಯ ವಲಯದಿಂದ ಕೇಳಿಬರುತ್ತಿರುವ ಪುನರಾವರ್ತಿತ ಸಾಲು ಇದು. ಹಾಗಿದ್ದರೆ ನಾವೇಕೆ ಓದುತ್ತೇವೆ, ನಾವೇಕೆ ಬರೆಯುತ್ತೇವೆ? ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಇಂದಿನಿಂದ ಶುರುವಾಗುವ ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಹೊಸ ಪುಸ್ತಕಗಳ ಆಯ್ದ ಭಾಗವನ್ನು ‘ಟಿವಿ9 ಕನ್ನಡ ಡಿಜಿಟಲ್​’ ಪ್ರಕಟಿಸಲಿದೆ. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com ಪರಿಕಲ್ಪನೆ : ಶ್ರೀದೇವಿ ಕಳಸದ

ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರ ಮೊದಲ ಕಾದಂಬರಿ ‘ಇಜಯಾ’ ಆಯ್ದ ಭಾಗ ಇಲ್ಲಿದೆ. ಗೋಮಿನಿ ಪ್ರಕಾಶನ ಹೊರತರುತ್ತಿರುವ ಈ ಕಾದಂಬರಿಯ ಬಗ್ಗೆ ಕಥೆಗಾರ ನರೇಂದ್ರ ಪೈ ಅವರ ಒಕ್ಕಣೆ ಹೀಗಿದೆ;  

‘ಪತ್ತೇದಾರಿ ಕತೆಯೋ ಎಂಬಂತೆ ತೊಡಗುವ ಈ ಕಾದಂಬರಿ ಕ್ರಮೇಣ ಒಂದು ಥ್ರಿಲ್ಲರ್ ಆಗುವ ಎಲ್ಲ ಲಕ್ಷಣಗಳನ್ನೂ ಮೈಗೂಡಿಸಿಕೊಂಡು ಓದುಗನನ್ನು ಕುತೂಹಲದ ಸೆಳೆತಕ್ಕೆ ಒಡ್ಡಿ, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸ್ವಲ್ಪ ಹದತಪ್ಪಿದರೂ ಕೇವಲ ಮೊನಲಾಗ್ ಆಗಿಬಿಡಬಹುದಾಗಿದ್ದ ಉತ್ತಮ ಪುರುಷ ನಿರೂಪಣೆಯ ಅಪಾಯಗಳಿಂದ ನಾಜೂಕಾಗಿ ತಪ್ಪಿಸಿಕೊಂಡು, ದೈನಂದಿನ ಬದುಕಿಗೇ ಸಂಬಂಧಿಸಿದ ಸತ್ಯದ ಶೋಧಕ್ಕಿಳಿಯುವಲ್ಲಿ ಜನಪ್ರಿಯ ಮಾದರಿಯ ಕಥಾನಕ ಸಾಧಿಸಬಹುದಾದ ಒಂದು ಲೀಪ್‌ನ್ನು ಇಲ್ಲಿ ಪೂರ್ಣಿಮಾ ಅವರು ನಮಗೆ ತೋರಿಸಿಕೊಡುತ್ತಾರೆ. ನಮ್ಮ ಅಸ್ತಿತ್ವ, ಅದನ್ನು ದೃಢೀಕರಿಸುವ ಮನುಷ್ಯ ಸಂಬಂಧಗಳು; ಅದರ ಅಸ್ಮಿತೆ, ಅದನ್ನು ದೃಢೀಕರಿಸುವ ನಮ್ಮ ಕ್ರಿಯಾಶೀಲ ಸಾಧನೆಗಳು; ಅಸ್ತಿತ್ವ ಮತ್ತು ಅಸ್ಮಿತೆಯ ಮೂರ್ತರೂಪವಾದ ದೇಹ ಹಾಗೂ ಅಮೂರ್ತರೂಪವಾದ ಮನಸ್ಸು ಎರಡರಲ್ಲಿ ಯಾವುದು ನಮ್ಮ ಒಡನಾಡಿಗಳ ಮಟ್ಟಿಗೆ ರಿಲವಂಟ್ ಆಗಿ ಉಳಿಯುತ್ತದೆ, ಎರಡೂ ಮುಖ್ಯ ಯಾರಿಗೆ, ಎರಡೂ ಮುಖ್ಯವಲ್ಲ ಯಾರಿಗೆ, ಇವುಗಳಲ್ಲಿ ಒಂದರ ಹೊರತು ಇನ್ನೊಂದಕ್ಕೆ ಇರುವ ಪರಿಕಲ್ಪನೆ ಎಷ್ಟರಮಟ್ಟಿಗೆ ನಿಜ ಎನ್ನುವುದೆಲ್ಲ ಸೈಕಲಾಜಿಕಲ್/ಫಿಲಾಸಫಿಕಲ್ ಜಿಜ್ಞಾಸೆ ಎನ್ನುವುದು ನಿಜ. ಆದರೆ ಒಂದು ಸುಂದರ ಕಥನದ ಓಘದಲ್ಲಿ ಪೂರ್ಣಿಮಾ ಅವರು ಇದನ್ನು ಓದುಗನ ಮನಸ್ಸಿನಲ್ಲಿ ‘ಹುಳ’ ಬಿಟ್ಟಂತೆ ಬಿಡುವಲ್ಲಿ ಯಶಸ್ವಿಯಾಗಿರುವುದು ಮೆಚ್ಚುಗೆಗೂ ಅಚ್ಚರಿಗೂ ಕಾರಣವಾಗುತ್ತದೆ. ಇತ್ತೀಚೆಗಷ್ಟೇ ಬಂದು ಹೆಸರು ಮಾಡಿದ ರಿಯಾ ಮುಖರ್ಜಿಯವರ ‘ಬಾಡಿ ಮಿಥ್’ ಕಾದಂಬರಿಯ ಒಳಗುದಿಯನ್ನೇ ತೀರ ವಿಭಿನ್ನ ನೆಲೆಯಿಂದ ನಿರೂಪಿಸುವ ಪೂರ್ಣಿಮಾ ಅವರ ಈ ಕಾದಂಬರಿ ಓದುಗನಲ್ಲಿ ಹುಟ್ಟಿಸುವ ಸೂಕ್ಷ್ಮ ತಲ್ಲಣ ಕನ್ನಡಕ್ಕೆ ಹೊಸದು.’

achchigoo modhalu

ಇಲ್ಲಸ್ಟ್ರೇಷನ್: ಎಸ್​. ವಿಷ್ಣುಕುಮಾರ್

ಸತ್ತವರೊಂದಿಗೆ ಅತ್ತವರೂ ಹೋಗುವರೇ?

ಆ ದಿನ ಏಕತಾನತೆಯ ಸಾಧಾರಣವಾದ ದಿನದಂತೆ ವೇಶ ಮರೆಸಿಕೊಂಡು ಬಂದಿದ್ದರೂ, ಬಹುಬೇಗ ಅದರ ಬಣ್ಣ ಬಯಲಾಗಿತ್ತು!

ಎಂದಿನಂತೆ ನಮ್ಮ ಬ್ಯಾಂಕಿನಲ್ಲಿ ಸುಮಾರು ನಲವತ್ತರಿಂದ ಐವತ್ತು ಜನ ಗ್ರಾಹಕರು ಕೌಂಟರುಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ನಮ್ಮ ಬ್ಯಾಂಕಿನ ಜವಾನ ಬಸಪ್ಪ ಹೇಳುವಂತೆ, ಕುಂಡಿ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದೆ ನಾನು, ಮಾಲಿನಿ ಮತ್ತು ಹರೀಶ ಮೂರೂ ಕೌಂಟರುಗಳಲ್ಲಿ ಕಾರ್ಯನಿರತರಾಗಿದ್ದೆವು. ಮರುದಿನ ಪ್ರಾದೇಶಿಕ ವ್ಯವಸ್ಥಾಪಕರು ಭೇಟಿ ನೀಡುವವರಿದ್ದದರಿಂದ ನಮ್ಮ ಶಾಖೆಯ ಮ್ಯಾನೇಜರು ಸಂಪೂರ್ಣವಾಗಿ ತಯ್ಯಾರಿಯಲ್ಲಿ ತೊಡಗಿದ್ದರು. ಆದರೂ ಯಾವುದೋ ಕಡತದ ಸಲುವಾಗಿ ನಮ್ಮ ಹಿರಿಯ ಕ್ಲರ್ಕ್​ ವೆಂಕಟ್ ಅವರನ್ನು ತಮ್ಮ ಕೋಣೆಗೆ ಕಳುಹಿಸುವಂತೆ ಬಸಪ್ಪನಿಗೆ ಪದೇ ಪದೆ ಕೂಗಿ ಹೇಳುತ್ತಿದ್ದರು. ಹಿಂದಿನ ದಿನವೇ ಆಫೀಸಿಗೆ ಮುಂಚಿತವಾಗಿ ಬರಲು ಹೇಳಿದ್ದರೂ, ವೆಂಕಟ್ ಬಂದಿರಲಿಲ್ಲ. ಶಿಸ್ತಿನ ಮನುಷ್ಯ, ತಾವಾಯಿತು, ತಮ್ಮ ಕೆಲಸವಾಯಿತು ಎಂದುಕೊಂಡು ಇರುತ್ತಿದ್ದ ವೆಂಕಟ್ ಬರದಿದ್ದುದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

“ಅಲ್ಲಾ ಇಜಯಾ, ಯಾವುದೋ ಅನಿವಾರ್ಯ ಕಾರಣದಿಂದ ವೆಂಕಟ್ ಬಂದಿರಲಿಕ್ಕಿಲ್ಲ. ಅಷ್ಟಕ್ಕೇ ಈ ಮ್ಯಾನೇಜರ ಇಷ್ಟೊಂದು ಸಿಟ್ಟು ಮಾಡಿಕೊಳ್ಳೋದೇ? ಅಷ್ಟಕ್ಕೂ ಇನ್ನೊಂದು ವರ್ಷಕ್ಕೆ ರಿಟೈರ್ಡ್ ಆಗ್ತಾರೆ. ದೊಡ್ಡೋರನ್ನು ಮೆಚ್ಚಿಸಿದ್ರೂ ಮತ್ತೊಂದು ಪ್ರಮೋಷನ್ ಏನೂ ಸಿಗೋಲ್ಲವಲ್ಲ ಈ ಮುದುಕಪ್ಪನಿಗೆ. ಇನ್ನಾದರೂ ನೆಮ್ಮದಿಯಾಗಿರಬಾರದೇ?” ಮಾಲಿನಿ ಗೊಣಗಿದಳು.

ಐದು ನಿಮಿಷ ತಡವಾಗಿ ಬಂದರೂ, ಹೆಂಗಸರು ಎಂದು ಸಹ ಯಾವ ರಿಯಾಯತಿ ಕೊಡದೆ ಬೈದು ಬಿಡುತಿದ್ದ ಮ್ಯಾನೇಜರ್ ಬಗ್ಗೆ ಮಾಲಿನಿಗೆ ಬಹಳ ಅಸಹನೆಯಿತ್ತು. ಅಡಿಗೆ, ಮನೆಕೆಲಸ, ಮಕ್ಕಳು ಎಲ್ಲವನ್ನೂ ಚಕಚಕನೆ ನಿಭಾಯಿಸುತಿದ್ದ ಮಾಲಿನಿಗೆ ಅಲಂಕಾರ ಮಾಡಿಕೊಳ್ಳುವುದಕ್ಕೆ ಸಮಯ ಸಿಗುತ್ತಿರಲಿಲ್ಲ. ನನಗಿಂತ ಸ್ವಲ್ಪ ಎತ್ತರ ಕಮ್ಮಿ ಆದರೂ, ನನಗಿಂತ ಬೆಳ್ಳಗೆ, ಬೆಣ್ಣೆ ಮುದ್ದೆಯಂತಿದ್ದ ದುಂಡನೆ ಮುಖ, ಕಡುಗಪ್ಪು ಗುಂಗುರು ಕೇಶರಾಶಿ, ತುಸು ಹೆಚ್ಚು ಎನ್ನುವಂತ ದೇಹಸಿರಿ ಹೊಂದಿದ್ದ ಮಾಲಿನಿ ಎದುರಿಗೆ ನಿಂತ ಗ್ರಾಹಕರಿಗೆ ಮಾತೇ ಮರೆತುಹೋಗುವಷ್ಟು ಆಕರ್ಷಕವಾಗಿದ್ದಳು. ಅವಳು ಎಂದಾದರೂ ರಜೆ ಹಾಕಿದಾಗ, ಕೆಲವು ತರಲೆ ಗ್ರಾಹಕರು, ‘ಅದೇ ಬೆಳ್ಳಗಿದಾರಲ್ಲ ಆ ಮೇಡಂ ಬಂದಿಲ್ವಾ?’ ಎಂದು ಕೇಳಿದಾಗ ನನಗೆ ಹೊಟ್ಟೆಕಿಚ್ಚು ಆಗುತ್ತಿದ್ದುದು ಸುಳ್ಳಲ್ಲ. ನಾನು ರಜೆ ಹಾಕಿದ ದಿನ ಮಾತ್ರ, ‘ಅವರ ಹೆಸರಲ್ಲಿ ವಿ ಮಿಸ್ ಆಗಿದೆ ಅಲ್ವಾ?’ ಎಂದು ಕೇಳಿ, ಮಾಲಿನಿ ಕೈಲಿ ‘ಏನೂ ಮಿಸ್ ಆಗಿಲ್ಲಾ, ಅದು ಇಜಯಾನೇ, ವಿಜಯಾ ಅಲ್ಲ ನಿಮಗೆ ಗೊತ್ತಿಲ್ಲಾ ಅಂದ್ರೆ ಆ ಹೆಸರೇ ಇಲ್ಲಾ ಅಂತಲಾ?’ ಎಂದು ಬೈಸಿಕೊಳ್ಳುತ್ತಿದ್ದರು. ಆಗೆಲ್ಲಾ ನನ್ನ ಅಪ್ಪ ವಿಜಯಾ ಅಂತಲೇ ಹೆಸರು ಇಟ್ಟಿದ್ರೆ ಚೆನ್ನಾಗಿತ್ತು ಅಂದುಕೊಳ್ಳುತ್ತಿದ್ದೆ. ಏನಾದ್ರೂ ವಿಶೇಷವಾದ ಹೆಸರು ಇಡಿ ಅಂತ ಜೋಯಿಸರನ್ನು ಕಾಡೀ ಬೇಡೀ ಇಟ್ಟಿದ್ದಂತೆ! ಮೊದಲೆಲ್ಲಾ ಅದರ ಅರ್ಥ ತ್ಯಾಗ, ಅರ್ಪಣೆ, ಬಲಿದಾನ ಎಂದೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಅಪ್ಪನಿಗೆ ನಾನು ದೊಡ್ಡವಳಾದಂತೆಲ್ಲಾ ತಾವೇ ಯಾವುದಾದ್ರೂ ಸರಳವಾದ ಹೆಸರು ಇಡಬೇಕಿತ್ತು ಅನಿಸಿತ್ತು.

ಮಾಲಿನಿ ನನ್ನಂತೆಯೇ ನಲವತ್ತರ ಆಸುಪಾಸಿನಲ್ಲಿದ್ದರೂ ಮೂವತ್ತರ ಹರೆಯ ಎನ್ನುವಂತಿದ್ದಳು. ಮೇಕ್ ಅಪ್ ಮಾಡಿಕೊಂಡು ಇಪ್ಪತ್ತು ಸೆಲ್ಫೀ ತೆಗೆದುಕೊಂಡರೇನೇ ಅವಳಿಗೆ ಸಮಾಧಾನ. ಮಾಡೆಲ್ಲಿಂಗ್ ಮಾಡಬೇಕೆನ್ನುವ ಅವಳ ಆಸೆಗೆ ಮೊಬೈಲಿನಲ್ಲಿ ಸೆಲ್ಫೀ ತೆಗೆದು, ವೀಡಿಯೋ ಮಾಡುವುದರ ಮೂಲಕ ರೆಕ್ಕೆ ಬಂದಿತ್ತು. ಕೆಲವು ಎನ್ ಜಿ ಓ ಸಂಸ್ಥೆಗಳು ಚಂದಾ ಸಂಗ್ರಹಿಸಲು ಏರ್ಪಡಿಸಿದ್ದ ಫ್ಯಾಶನ್ ಶೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಳು ಕೂಡ. ಆದರೆ ಅವರು ಬಹುಮಾನವಾಗಿ ಪುಸ್ತಕಗಳನ್ನು ಕೊಟ್ಟಿದ್ದಕ್ಕೆ ಬೇಸರಿಸಿಕೊಂಡು, ಅವನ್ನು ತಂದು ನನಗೆ ಕೊಟ್ಟು, “ಎಂತಾ ಕಂಜೂಸುಗಳು ಇಜಯಾ, ಕಾಸ್ಮೆಟಿಕ್ಸ್ ಅದರೂ ಕೊಡಬಹುದಿತ್ತು” ಎಂದು ಮನಸಾರೆ ಬೈದುಕೊಓಡಿದ್ದಳು. ಬಸ್ಸಿನಲ್ಲಿ ತಿಂಡಿ ತಿನ್ನುತ್ತಾ, ಮಾತಿನ ಜೊತೆಯಲ್ಲೇ ಶುರುವಾಗುವ ಅವಳ ಮೇಕ್ ಅಪ್ ಆಫೀಸ್ ತಲುಪಿದ ಮೇಲೂ, ಅವಳ ಕೌಂಟರ್ ಮೇಲೆ ಕುಳಿತು ತನ್ನ ಬಂಗಾರದ ಬಳೆಗಳು, ವಾಚು, ಉಂಗುರ ಎಲ್ಲಾ ತೆಗೆದು ಕೋಲ್ಡ್ ಕ್ರೀಮ್ ಹಚ್ಚಿಕೊಂಡು ಮತ್ತೆ ಅವನ್ನೆಲ್ಲಾ ಧರಿಸಿದ ಮೇಲೆ ಬಾತ್ ರೂಮಿನಲ್ಲಿ ಮುಂದುವರೆದು ಒಂದು ವೀಡಿಯೋ ಮಾಡಿ ಅಪ್ಲೋಡ್ ಮಾಡಿದ ಮೇಲೆ ಪರಾಕಾಷ್ಠೆಗೊಳ್ಳುತ್ತಿತ್ತು. ಗಂಟುಮುಖದ ಮ್ಯಾನೇಜರ್ಗೆ ಇದೆಲ್ಲ ಹಿಡಿಸುತ್ತಿರಲಿಲ್ಲ. ಆದ್ದರಿಂದ ಮ್ಯಾನೇಜರನ್ನು ಬೈಯ್ಯುವ ಯಾವ ಅವಕಾಶವನ್ನೂ ಅವಳು ಕಳೆದುಕೊಳುತ್ತಿರಲಿಲ್ಲ.

“ಅದೂ ಸರಿ ಮಾಲಿನಿ.” ನಾನೂ ಸಣ್ಣಗೆ ನಗುತ್ತಾ ಕೆಲಸ ಮುಂದುವರೆಸಿದೆ.

“ರಿಟೈರ್ ಆಗುವವರೆಗೂ ನಮಗೆ ಇವರ ಕಾಟ ತಪ್ಪಿದ್ದಲ್ಲ ರೀ. ಅಲ್ಲೀತನಕ ತಪ್ಪಿಸ್ಕೊಂಡು ಎಲ್ಲಾದರೂ ಹೋಗಬೇಕು ಅನಿಸುತ್ತೆ ಒಮ್ಮೊಮ್ಮೆ.”

“ಹುಮ್ಮ್, ನನಗೂ ಒಮ್ಮೊಮ್ಮೆ ಒಂದು ತಿಂಗಳು ರಜೆ ತಗೊಂಡು ಜನ ಸಂಪರ್ಕವೇ ಇಲ್ದಿರೋ, ಫೋನ್ ನೆಟ್ವರ್ಕ್ ಕೂಡ ಇಲ್ದಿರೋ ಯಾವುದಾದರೂ ದ್ವೀಪದ ಮೇಲೆ ಹೋಗಿ ಇದ್ದು ಬಿಡಬೇಕು ಅನಿಸುತ್ತೆ.”

“ಎಂತ ಐಡಿಯಾ ಇಜಯಾ ನಿಮ್ಮದು? ವ್ಹಾ.”

“Tell me one thing,” ನಾನು ಸುತ್ತ ನೋಡಿ ನಮ್ಮ ಮಾತನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ ಎಂದು ಖಚಿತ ಪಡಿಸಿಕೊಂಡು, “ಒಂದು ವೇಳೆ ಅಂತಹ ಜಾಗಕ್ಕೆ ಹೋದರೆ ನೀವು ಅದನ್ನೂ ತಗೊಂಡು ಹೋಗ್ತೀರಾ?”

“ಅದನ್ನೂ ಅಂದ್ರೆ?” ಮಾಲಿನಿ ಕೆನ್ನೆಗಳು ನಾಚಿ ಕೆಂಪಾಗುತ್ತಿದ್ದುವು.

“ನಿಮ್ಮ ಮೇಕ್ ಅಪ್ ಕಿಟ್.” ಎಂದು ನಾನು ಜೋರಾಗಿ ನಕ್ಕು ಬಿಟ್ಟೆ.

“ಇಜಯಾ … ” ಮಾಲಿನಿ ಹುಸಿಮುನಿಸು ತೋರಿದಳು.

ನಾವಿಬ್ಬರೂ ಕೆಲಸದ ನಡುವೆಯೂ ಹರಟುತ್ತಿದ್ದಾಗ, ಹನ್ನೊಂದು ಗಂಟೆಯ ಸುಮಾರಿಗೆ ಮ್ಯಾನೇಜರ್ ಬಸಪ್ಪನಿಗೆ ವೆಂಕಟ್ ಮನೆಗೆ ಹೋಗಿ ವಿಚಾರಿಸಿಕೊಂಡು ಬರಲು ತಿಳಿಸಿದರು. ಬಸಪ್ಪ ಸಿಕ್ಕಿದ್ದೇ ಚಾನ್ಸು ಎಂದು ನೇರವಾಗಿ ಹರೀಶನ ಬಳಿ ಬಂದು, “ಸರ, ನಿಮ್ ಬೈಕ್ ಕೊಡ್ರಲಾ, ಒಂದು ಐದು ನಿಮಿಟ್ ನಾ ಹಿಂಗ್ ಹೋಗಿ ಹಂಗ್ ಬಂದ್ ಬಿಡ್ತೀನಿ” ಎಂದು ಹಲ್ಲು ಗಿಂಜಿದ. ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿದ್ದರೂ ಬಸಪ್ಪ ಎಲ್ಲರಿಗೂ ಪ್ರಿಯನಾದ ಜವಾನ, ಅದರಲ್ಲೂ ಹರೀಶನ ಗಂಟೆಗೊಮ್ಮೆ ಚಹಾ ಕುಡಿಯುವ ಅಭ್ಯಾಸಕ್ಕೆ, ಬಸಪ್ಪನ ಜೊತೆ ಸ್ನೇಹದಿಂದ ಇರಲೇಬೇಕಾಗಿತ್ತು. ಅಲ್ಲದೆ ವೆಂಕಟ್ ಬರುವುದು ಇನ್ನೂ ತಡವಾದರೆ ಮ್ಯಾನೇಜರ ಅವನ ಕೆಲಸವನ್ನೂ ತನಗೆ ವಹಿಸಬಹುದು ಎಂದು ಎಚ್ಚೆತ್ತುಕೊಂಡು ಹರೀಶ ಹೆಚ್ಚು ತಂಟೆ ಮಾಡದೆ ಗಾಡಿಯ ಕೀಲಿ ಕೊಟ್ಟು, “ಲೇ ಬಸಪ್ಪ, ಪೆಟ್ರೋಲ್ ಇನ್ನೇನು ಮುಗಿಯೋ ಹಾಗಿದೆ. ಅಲ್ಲಿ ಇಲ್ಲಿ ತಿರುಗದೆ ನೇರ ವಾಪಸ್ ಬಂದುಬಿಡು” ಎಂದು ತಾಕೀತು ಮಾಡುವುದು ಮರೆಯಲಿಲ್ಲ. ಬಸಪ್ಪ ತನ್ನ ಕೆಂಚನೆಯ ಕೊಳೆತ ಹಲ್ಲುಗಳನ್ನು ಪ್ರದರ್ಶಿಸುತ್ತ, ಐವತ್ತು ದಾಟಿದ್ದರೂ, ಹುಲುಸಾಗಿ ಬೆಳೆದು ಕಪ್ಪಗಿದ್ದ ತನ್ನ ಕೂದಲನ್ನು ಹಿಂದೆ ಸರಿಸಿ, ಅಷ್ಟೇ ಕಪ್ಪಗಿದ್ದ ಒರಟು ಕೆನ್ನೆಯನ್ನು ಉಜ್ಜಿಕೊಳ್ಳುತ್ತಾ, “ಅಯ್ಯೋ ಸರ, ಇವತ್ತು ನನ್ನ ಕೈಗೆ ನೀವು ಬಿ. ಎಮ್. ಡಬ್ಲ್ಯೂ ಕಾರಿನ ಕೀಲಿ ಕೊಟ್ರೂ ಸೈತ ನಾ ಒಂದ್ ಮೈಲಿ ಕೂಡ ಎಕ್ಸ್ಟ್ರಾ ಹೋಗಾದಿಲ್ ತಗೋರಿ. ನೋಡೀರಿಲ್ಲೋ ಅವ್ರು ಮುಸುಡಿ? ಆ ವೆಂಕಟ್ ಸಾಹೇಬ್ರಿಗೆ ಭೇದಿ ಕಿತ್ಕೊಂಡು ಹರೀತಿದ್ರು ಬಿಡಂಗಿಲ್ರಿ ನಾ. ಎಳಕೊಂಡು ಬರಾವನೇ.” ಎಂದು ಮ್ಯಾನೇಜರ್ ಕೋಣೆಯ ಕಡೆ ಸಂಜ್ಞೆ ಮಾಡಿ ನಗತೊಡಗಿದ.

achchigoo modhalu

ಇಲ್ಲಸ್ಟ್ರೇಷನ್: ಎಸ್​. ವಿಷ್ಣುಕುಮಾರ್

ಭಿಕ್ಷೆನೂ ಬೇಕು, ಬಿಗುಮಾನನೂ ಬೇಕು ಅನ್ನೋ ಹಾಗೆ ಬಸಪ್ಪ ತನ್ನ ಬೈಕನ್ನು ಹೀಯಾಳಿಸಿದ್ದನ್ನು ಹರೀಶ ಬಲವಂತವಾಗಿ ನಿರ್ಲಕ್ಷಿಸಿ ಕೆಲಸದಲ್ಲಿ ಮುಳುಗಿದ. ಸುಮಾರು ಅರ್ಧ ಗಂಟೆಯೊಳಗೆ ಬಸಪ್ಪ ಎದುರುಸಿರು ಬಿಡುತ್ತಾ ಓಡಿ ಬಂದು, ಮ್ಯಾನೇಜರ್ ಕೋಣೆಯ ಬಾಗಿಲಲ್ಲೇ ಕುಸಿದು ಕುಳಿತುಬಿಟ್ಟ. ನಾವೆಲ್ಲರೂ ಕೆಲಸ ನಿಲ್ಲಿಸಿ ಗಾಬರಿಯಿಂದ ಅವನೆಡೆಗೆ ಓಡಿದೆವು.

“ಮೇಡಂ, ಪ್ಲೀಸ್ ನನ್ನದೊಂದು ಚೆಕ್ಕು ಹಾಕಿಸಿಕೊಂಡು ಬಿಡಿ” ಎಂದು ಗ್ರಾಹಕನೊಬ್ಬ ಕೂಗುತ್ತಿದ್ದರೂ ನಾನು ನಿಲ್ಲಲಿಲ್ಲ.

ಮ್ಯಾನೇಜರ್ ಕುಳಿತಲ್ಲಿಂದಲೇ, “ಲೇ ಬಸಪ್ಪ ಏನಾಯಿತೋ? ಮತ್ತೆ ಯಾವದಾದ್ರೂ ದೆವ್ವ -ಭೂತ ನೋಡಿದೆ ಅಂತ ಕತೆ ಹೇಳಿದ್ರೆ ಬಾಗಿಲಲ್ಲೇ ಹೂತು ಹಾಕಿಬಿಡ್ತೀನಿ ಮಗನೆ. ನಾನೆಷ್ಟು ಟೆನ್ಶನ್ನಲ್ಲಿದ್ದೀನಿ ಅಂತ ಸ್ವಲ್ಪನಾದ್ರೂ ಗೊತ್ತಾ ನಿಂಗೆ? ಏನಾಯ್ತು ಹೇಳು ಬೇಗ? ಎಲ್ಲಿ ವೆಂಕಟ್?” ಎಂದು ಅರಚಿದರು.

“ವೆಂ …ವೆಂಕ್ …ವೆಂಕಟ್ ಸಾರು… ” ಬಸಪ್ಪನ ಬಾಯಿಂದ ದ್ವನಿ ಹೊರಡುತ್ತಲೇ ಇರಲಿಲ್ಲ. ಅವನ ಮುಖ ಪಿಶಾಚಿಯನ್ನು ಕಂಡಂತೆ ಬಿಳಿಚಿಕೊಂಡಿತ್ತು.

ನಾನು ತಕ್ಷಣವೇ ಒಂದು ಲೋಟದಲ್ಲಿ ನೀರು ತಂದುಕೊಟ್ಟೆ. ಆದರೆ ಅವನ ಕೈ ಲೋಟ ಹಿಡಿದುಕೊಂಡು ನಡುಗುತ್ತಿದ್ದುದು ನೋಡಿ ಹರೀಶ ತೆಗೆದುಕೊಂಡು ತಾನೇ ಕುಡಿಸಿದ. ನಂತರ ಬಸಪ್ಪನ ಭುಜದ ಮೇಲೆ ಕೈ ಇಟ್ಟು, ಅವನ ಕೈ ಹಿಡಿದುಕೊಂಡು ಅದುಮಿ, “ಬಸಪ್ಪ ಏನಾಯ್ತು ಹೇಳು? ಬೈಕ್… ”

ಬಸಪ್ಪ ಬೈಕಿಗೆ ಏನೂ ಆಗಿಲ್ಲವೆಂದು ತಲೆ ಅಲ್ಲಾಡಿಸಿದನು. ಹರೀಶ ಸಮಾಧಾನವನ್ನು ತೋರಗೊಡದೆ, ತನ್ನ ಕಾಳಜಿ ನಿಜವಾಗಿಯೂ ಬಸಪ್ಪನ ಮೇಲಿನದು ಎಂಬಂತೆ, “ಏನಾದ್ರೂ ಹೇಳು ಬಸಪ್ಪ” ಎಂದನು.

ಮ್ಯಾನೇಜರ್ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಎದ್ದು ಬಂದು ಪ್ರಶ್ನಾರ್ಥಕವಾಗಿ ಬಸಪ್ಪನನ್ನು ನೋಡಿದರು. ಎಲ್ಲರ ಮುಖದ ಮೇಲಿನ ಕೌತುಕ, ಅಸಹನೆ ಮತ್ತು ಅಂಜಿಕೆಯನ್ನು ನೋಡಿ ಬಸಪ್ಪ ಮಾತಾಡಿದನು.

“ವೆಂಕಟ್ ಸಾ… ಸಾರು ಬಿದ್ ಬಿಟ್ಟಾರ … ರಕ್ತ… ತಲೆ … ಸಂಡಾಸ …”

“ಅಯ್ಯೋ ದೇವ್ರೇ!” ಮಾಲಿನಿ ಉದ್ಗರಿಸಿ ನನ್ನ ಕೈ ಹಿಡಿದುಕೊಂಡು, “ನಿಜವಾಗ್ಲೂ ರಕ್ತಾ ಏನೋ? ಸರಿಯಾಗಿ ನೋಡಿದೆಯಾ?”

“ಅವರ ಮನೇಲಿ ಯಾರಿದ್ರು? ಏನಾದ್ರೂ ವಿಷಯ ಗೊತ್ತಾಯ್ತ?” ಮ್ಯಾನೇಜರ್ ರೇಗಿದರು.

“ಅವ್ರು ಒಬ್ರೇ ಇದ್ರು ಸರ್” ಎಂದ, ಏನೋ ರಹಸ್ಯ ಬಿಚ್ಚಿಟ್ಟವನಂತೆ.

“ಒಳಗಿನಿಂದ ಬಾಗಿಲು ಚಿಲಕ ಹಾಕಿತ್ತಾ? ನೀನು ತೆರೆಯೋಕೆ ಪ್ರಯತ್ನ ಪಟ್ಯ?”

“ಎಷ್ಟು ದೂರ ಬಿದ್ದಿದ್ರು ಬಾಗಿಲಿನಿಂದ?”

“ಏನಾದ್ರೂ ಡ್ರಿಂಕ್ಸ್ ಮಾಡೋ ಅಭ್ಯಾಸ ಇತ್ತಾ?”

“ಮಾತಾಡಿಸಿದ್ಯಾ? ಕೈ-ಕಾಲು ಅಲುಗಾಡ್ತಾ ಇತ್ತಾ?”

“ಕಿಟಕಿಯಿಂದ ಕೋಲು ತೂರಿಸಿ ಅಲುಗಾಡಿಸಬೇಕಿತ್ತು!”

ಪ್ರಶ್ನೆಗಳ ಸುರಿಮಳೆಗೆ ಮತ್ತಷ್ಟು ಗಲಿಬಿಲಿಗೊಂಡ ಬಸಪ್ಪನನ್ನ ನೋಡಿ ಮ್ಯಾನೇಜರ್ ಬಹುಶಃ ನಡೆದಿರಬಹುದಾದುದನ್ನು ಊಹಿಸಿದರು. ಆದರೆ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲೂ ಆಗದೆ, ಬಿಡಲೂ ಆಗದೆ ಒದ್ದಾಡಿದರು.

“ಕಣ್ ತೆರಕಂಡೇ ಇದ್ವು. ಕೈ ಕಾಲು ಒಂದೀಟೂ ಮಿಸುಕಾಡ್ತಿರ್ಲಿಲ್ಲ” ಬಸಪ್ಪ ಎಲ್ಲರ ಭಯವನ್ನು ನಿಜವಾಗಿಸಿದ.

“ಏನು ಹೇಳ್ತಾ ಇದಿಯೋ? ನಿಜವಾಗ್ಲೂ ಏನೋ?” ಹರೀಶ ಮಂಕು ಹಿಡಿದವನಂತೆ ಕುಳಿತುಬಿಟ್ಟ.

“ಅಯ್ಯೋ ದೇವರೇ, ಏನಪ್ಪಾ ಇದು ಹಿಂಗಾಯ್ತು,” ಮಾಲಿನಿ ಅಳುತ್ತಾ, “ಎಂಥಾ ಒಳ್ಳೆ ಮನುಷ್ಯರು” ಎಂದಳು.

“ನಂಗೇನೋ ನಂಬಿಕೇನೇ ಬರ್ತಾ ಇಲ್ಲ. ನೆನ್ನೆ ಸಂಜೆ ನಾನು ಹೊರಡೋವಾಗ ಮ್ಯಾನೇಜರ್ ಜೊತೆ ಇನ್ನೂ ಬಾಕಿ ಕೆಲಸದ ಬಗ್ಗೆ ಮಾಡ್ತಾನೇ ಇದ್ರು” ನಾನು ನೆನೆಸಿಕೊಂಡೆ. ಗ್ರಾಹಕರೆಲ್ಲಾ ನಮ್ಮ ಕಡೆಗೇ ಕುತೂಹಲದಿಂದ ನೋಡ್ತಾ ಇದ್ದರು. ಏನೂ ಮಾಡಲು ತೋಚದೆ ಮ್ಯಾನೇಜರ್ ಅತ್ತಿಂದಿತ್ತ ಅಲೆದರು. ಕೊನೆಗೆ, “ಹರೀಶ, ನೀವು ಬಸಪ್ಪನನ್ನು ಕರ್ಕೊಂಡು ಹೋಗಿ, ಪೊಲೀಸ್ ಕಂಪ್ಲೇಂಟ್ ಕೊಡಿ. ಮಾಲಿನಿ ನೀವು ಅವರ ಸರ್ವಿಸ್ ರೆಕಾರ್ಡ್ಸ್​ ನೋಡಿ ಫ್ಯಾಮಿಲಿ ಡೀಟೇಲ್ಸ್ ಹುಡುಕಿ ಅವರಿಗೆ ತಿಳಿಸಿ. ಇಜಯಾ ಇವತ್ತು ಡೇಟ್ ಎಷ್ಟು … ಹಾಂ ಹನ್ನೊಂದು ಅಕ್ಟೋಬರ, ಇವತ್ತಿನವರೆಗೆ ಅವರ ಸರ್ವಿಸ್ ಬುಕ್ ಅಪ್ಡೇಟ್ ಮಾಡಿ ಬಿಡಿ. ಆಮೇಲೆ ನೀವೇ ಇನ್ಶೂರೆನ್ಸ್ ಅವರನ್ನೂ ಕರೆದುಬಿಡಿ.” ಎಂದು ಹೇಳಿ ತಮ್ಮ ಕೋಣೆಗೆ ಹೋಗಿ ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟರು. ನಾನು, ಮಾಲಿನಿ ಇಬ್ಬರೂ ನಮಗೆ ವಹಿಸಿದ ಕೆಲಸಗಳನ್ನು ಮುಗಿಸಿ, ಅಸಹನೆಯಿಂದ ನಮ್ಮನ್ನೇ ನೋಡುತ್ತಿದ್ದ ಗ್ರಾಹಕರ ಕಡೆಗೆ ಗಮನಹರಿಸಿದೆವು.

achchigoo modhalu

ಇಲ್ಲಸ್ಟ್ರೇಷನ್: ಎಸ್​. ವಿಷ್ಣುಕುಮಾರ್

“ಏನಾಯ್ತು ಮ್ಯಾಡಮ್?”

“ಇವತ್ತು ಬ್ಯಾಂಕ್ ರಜೆ ಮಾಡ್ತಾರಾ?”

“ಏನಾದ್ರೂ ಖಾಯಿಲೆ ಇತ್ತಾ?”

“ಯಾರಾದ್ರೂ ಆಗ್ದೇ ಇದ್ದೋರು ಕೊಲೆ ಮಾಡಿರಬಹುದಾ?”

“ಎಂಥಾ ಕೊಲೀಗ್ಸ್ ಅಪ್ಪಾ ಇವರು, ಯಾರಿಗೂ ಏನೂ ಗೊತ್ತಿಲ್ಲವಂತೆ! ಎಲ್ಲಾ ಸ್ವಾರ್ಥಿಗಳು ಈಗಿನ ಕಾಲದವರು.”

ಜನ ತಲೆಗೊಂದು ಮಾತಾಡುತ್ತಿದ್ದುದನ್ನು ಕೇಳಿಸಿಕೊಂಡು ದುಃಖ ತಡೆಯಲಾರದೆ ಮಾಲಿನಿ, ಕೌಂಟರಿನ ಮೇಲೆ ತನ್ನ ಕೈಯಲ್ಲಿ ಮುಖ ಮುಚ್ಚಿಕೊಂಡು ಅಳತೊಡಗಿದಳು.

“ಈಯಮ್ಮ ನೋಡು ಹೆಂಗೆ ಅಳ್ತಾ ಅವಳೆ. ಯಾರಿಗೆ ಗೊತ್ತು ಅವ್ರ ಜೊತೆ ಏನು ಸಂಬಂಧ ಇತ್ತೋ?”

“ಮೇಡಮ್, ಪೊಲೀಸ್ ಕೇಸ್ ಆದರೆ ನೀವೆಲ್ಲಾ ಸ್ಟೇಷನ್ನಿಗೆ ಹೋಗ್ಬೇಕಾ?”

“ಆತ್ಮಹತ್ಯೆ ಮಾಡಿಕೊಂಡಿರಬಹುದು. ಅದಿಕ್ಕೇ ಹೇಳೋದು ಒಬ್ಬರೇ ಇರಬಾರದು ಅಂತ”

“ಏನೇ ಅಂದ್ರು ಹೆಂಗಸ್ರು ಇರೋ ಕೌಂಟರುಗಳು ಯಾವಾಗಲೂ ಸ್ಲೋ ಮಾರಾಯ.”

ಸಂಬಂಧವಿಲ್ಲದವರೆಲ್ಲಾ ತಲೆಗೊಂದು ಮಾತಾಡುತ್ತಿದ್ದುದು ನೋಡಿ ನನಗಂತೂ ರೇಗಿಹೋಯ್ತು. ಹಾಗಂದವನ ಕಡೆ ಒಮ್ಮೆ ದುರುಗುಟ್ಟಿ ನೋಡಿದೆ. ಆದರೆ ಬುದ್ಧಿಗೇಡಿಗಳಿಗೆ ತಿಳಿ ಹೇಳುವಷ್ಟು ಸಹನೆಯಾಗಲೀ, ಶಕ್ತಿಯಾಗಲೀ ಇರಲಿಲ್ಲ. ನುಗ್ಗಿ ಬರುತ್ತಿದ್ದ ಕಣ್ಣೀರನ್ನು ತಡೆಯುತ್ತ, ಕೆಲಸ ಮಾಡತೊಡಗಿದೆ.

ಸುಮಾರು ಎರಡು ಗಂಟೆಯ ಹೊತ್ತಿಗೆ ಹರೀಶ ಫೋನು ಮಾಡಿದ. “ಇಜಯಾ ಮೇಡಂ,” ಅವನ ಗದ್ಗದಿತ ಧ್ವನಿಯಿಂದಲೇ ವೆಂಕಟ್ ಸತ್ತು ಹೋಗಿರುವುದು ಖಚಿತವಾಗಿತ್ತು. “ಬಸಪ್ಪ ಹೇಳಿದ್ದು ಸತ್ಯ ಮೇಡಂ, ಬಹುಶಃ ಅರ್ಧರಾತ್ರಿಯಲ್ಲಿ ಬಚ್ಚಲುಮನೆಗೆ ಹೋದವನು ಹಾರ್ಟ ಅಟ್ಯಾಕ್ ಆಗಿ ನೆಲಕ್ಕೆ ಬಿದ್ದಿದ್ದಾನೆ. ಬಸಪ್ಪ ಬಂದು ನೋಡೋ ತನಕ ಹಾಗೆ ಬಿದ್ದಿದ್ದ ಅನಿಸತ್ತೆ. ಪೊಲೀಸ್ ಬಂದಿದಾರೆ. ಬಾಡೀನ ಆಸ್ಪತ್ರೆಗೆ ತಗೊಂಡು ಹೋಗ್ತಾರಂತೆ. ಪೋಸ್ಟ್​ ಮಾರ್ಟಮ್​ ಅಂತೆಲ್ಲಾ ನಡೆಯತ್ತೆ. ಜೀವನ ಎಷ್ಟು ಕ್ಷಣಿಕ ನೋಡಿ, ಯಾರು ಯಾವಾಗ ಹೋಗ್ತಾರೆ ಅಂತ ಹೇಳೋಕಾಗಲ್ಲ. ಇದೆಲ್ಲಾ ಆ ಮುದುಕ ಮ್ಯಾನೇಜರ್ ಕಡೆಯಿಂದನೇ ಆಗಿದ್ದು. ಅನಾವಶ್ಯಕವಾಗಿ ಪ್ರೆಷರ್ ಹಾಕಿಬಿಟ್ಟ. ಅವನಿಗೆ… “ಎಂದೆಲ್ಲಾ ದುಃಖ, ಕೋಪದಿಂದ ಮಾತಾಡತೊಡಗಿದ.

“ಸಮಾಧಾನ ಮಾಡಿಕೊಳ್ಳಿ ಹರೀಶ್. ಬೇಗ ಬನ್ನಿ.” ಎಂದಷ್ಟೇ ಹೇಳಿ ಫೋನು ಇಟ್ಟು ತಾಳ್ಮೆಗೆಡುತ್ತಿದ್ದ ಗ್ರಾಹಕರ ಕಡೆ ಗಮನ ಹರಿಸಿದೆ.

ವೆಂಕಟ್ ಬಹಳ ಸರಳ ಜೀವಿ. ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಸದಾ ಹಸನ್ಮುಖಿ. ವರ್ಷಗಳಿಂದ ನಮ್ಮೊಡನೆ ಇದ್ದರೂ ಯಾರಿಗೂ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲವೂ ಇರಲಿಲ್ಲ. ನಿಜ ಹೇಳಬೇಕೆಂದರೆ ಸಮಯ, ತಾಳ್ಮೆ ಕೂಡ ಇರಲಿಲ್ಲ. ಬಸ್ಸಿನಲ್ಲಿ ನನಗೆ ಮತ್ತು ಮಾಲಿನಿಗೆ ಒಟ್ಟಿಗೇ ಸೀಟು ಸಿಕ್ಕರೆ ಮಾತ್ರವೇ ಕಾಡು ಹರಟೆ ಹೊಡೆಯಲು ನಮಗೆ ಸಮಯ ಸಿಗುತ್ತಿದ್ದುದು. ಆದರೆ ಇಂದು ಕೆಲಸದಲ್ಲಿ ಮುಳುಗಿ ಸಹೋದ್ಯೋಗಿಗಳ ಪರಿಚಯವೇ ಮಾಡಿಕೊಳ್ಳದೆ ಎಂತಹ ದೊಡ್ಡ ತಪ್ಪು ಮಾಡಿದೆವೆಂದು ಅರಿವಾಯಿತು.

“ಮೇಡಂ,” ಚೆಕ್ ಹಿಡಿದು ಆಜ್ಞೆ ಮಾಡುವವನಂತೆ ಗ್ರಾಹಕನೊಬ್ಬ ನೋಡಿದ. ಒಮ್ಮೆ ಅವನ ಹಿಂದೆ ನಿಂತಿದ್ದ ಜನರ ಉದ್ದನೆಯ ಸಾಲನ್ನು ಗಮನಿಸಿದೆ. ವೆಂಕಟ್ ಬರಲಿ, ಬಿಡಲಿ; ಇಷ್ಟೊಂದು ಜನರ ಜೀವನದಲ್ಲಿ, ಅಷ್ಟೇ ಅಲ್ಲ, ಇಂದಿನ ದಿನಚರಿಯಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ. ಒಂದು ಕ್ಷಣ ಬೆಚ್ಚಿ ಬಿದ್ದೆ. ಇದೆಲ್ಲದರ ನಡುವೆ ದಿನ ಕಳೆದದ್ದೇ ತಿಳಿಯಲಿಲ್ಲ. ಎಲ್ಲರೂ ಭಾರವಾದ ಮನಸ್ಸಿನಿಂದ ಮನೆಗೆ ತೆರಳಿದೆವು.

achchigoo modhalu

ಇಲ್ಲಸ್ಟ್ರೇಷನ್: ಎಸ್​. ವಿಷ್ಣುಕುಮಾರ್

ಮರುದಿನ ರೀಜನಲ್ ಮ್ಯಾನೇಜರ್ ಬಂದರು. ಎಲ್ಲವೂ ಪೂರ್ವನಿಯೋಜಿತವಾಗಿ ನಡೆದು, ಸಂಜೆಯ ವೇಳೆಗೆ ದೊಡ್ಡ ತಲೆಭಾರ ಇಳಿದಂತೆ ನಮ್ಮ ಮ್ಯಾನೇಜರ್ ಒಂದು ನಿಟ್ಟುಸಿರು ಬಿಟ್ಟರು. ಎಲ್ಲರನ್ನೂ ಕರೆದು ವೆಂಕಟನ ಸಾವಿಗೆ ಸಂತಾಪ ಸೂಚಿಸಿದರು. ಅವನ ಬಂಧು ಬಳಗದವರ ಬಗ್ಗೆ ಯಾವ ಮಾಹಿತಿಯೂ ಸಿಗಲಿಲ್ಲ. ಅವನು ವಾಸವಿದ್ದ ಬಾಡಿಗೆ ಮನೆಯ ಮಾಲೀಕರಿಗೂ, ಅವನೊಬ್ಬ ಬ್ಯಾಂಕ್ ಉದ್ಯೋಗಿ ಎಂದು ಬಿಟ್ಟರೆ ಬೇರೆ ಯಾವ ವಿಷಯವೂ ತಿಳಿದಿರಲಿಲ್ಲ. ಬಸಪ್ಪನಿಂದ ತಿಳಿಯಿತು, ಮಾಲೀಕರ ಹೆಂಡತಿ, ‘ಬ್ಯಾಚಲರ್ಗೆ ಮನೆ ಕೊಡಬೇಡಿ ಅಂದ್ರೂ ಕೊಟ್ಟಿರಿ’ ಅಂತ ತನ್ನ ಗಂಡನೊಂದಿಗೆ ಜೋರಾಗಿ ಜಗಳ ಮಾಡುತ್ತಿದ್ದಳಂತೆ. ‘ಮನೆ ಎಲ್ಲಾ ಕೆಟ್ಟ ವಾಸನೆ ಬರ್ತಾ ಇದೆ, ಹಾಳಾದೋನು ಹೋಗ್ತಾ ಹೋಗ್ತಾ ನಮಗೆಲ್ಲಾ ಎಷ್ಟು ತೊಂದರೆ ಕೊಟ್ಟು ಹೋದ.’ ಎಂತಲೂ ಗೊಣಗುತ್ತಿದ್ದಳಂತೆ. ಹೆಂಡತಿ ಬಾಯಿಗೆ ಹೆದರುತ್ತಿದ್ದ ಮಾಲೀಕ, ಇದೇ ಸರಿಯಾದ ಸಮಯ ಎಂದು, ವೆಂಕಟ್ ಆರು ತಿಂಗಳಿಂದ ಬಾಡಿಗೆ ಕೊಟ್ಟಿಲ್ಲ ಎಂದು ಸುಳ್ಳು ಹೇಳಿ, ಹೆಂಡತಿಗೆ ಗೊತ್ತಾಗದಂತೆ ಬಾಡಿಗೆ ಹಣ ನುಂಗಿದನಂತೆ. ಎಲ್ಲರಿಗೂ ಅವರವರದೇ ಚಿಂತೆ! ಎಲ್ಲರೂ ವೆಂಕಟ್ ಆತ್ಮಕ್ಕೆ ಶಾಂತಿ ಸಿಗಲೆಂದು ಎರಡು ನಿಮಿಷ ಮೌನಾಚರಣೆ ಮಾಡಿ, ಮನೆಗೆ ಹೊರಟೆವು. ಮರುದಿನ ಎರಡನೇ ಶನಿವಾರ ಆದ್ದರಿಂದ, ಎರಡು ದಿನ ರಜೆ ಒಟ್ಟಿಗೆ ಸಿಕ್ಕಿದ್ದರೂ ಯಾರಿಗೂ ಮನೆಗೆ ಹೋಗುವ ಉತ್ಸಾಹವಿರಲೇ ಇಲ್ಲ. ಮಾಲಿನಿ ಮತ್ತು ನಾನು ಬಸ್ಸಿನಲ್ಲಿಯೂ ಮಂಕಾಗಿಯೇ ಕುಳಿತಿದ್ದೆವು. ಇಡೀ ದಿನದ ಕೆಲಸದ ಆಯಾಸ ಕಳೆಯಲು, ಹರಟಲು, ಜೋರಾಗಿ ನಕ್ಕು ಬಿಡಲು ಕೂಡ ನಮಗೆ ಸಿಗುತ್ತಿದ್ದ ಸಮಯವೆಂದರೆ ಇಪ್ಪತ್ತು ನಿಮಿಷದ ಆ ಬಿಎಂಟಿಸಿ ಬಸ್ಸು ಪಯಣ. ಅಂದು ನಾವು ಮೌನಿಗಳಾಗಿ ಕೂತಿದ್ದು ನೋಡಿ ಕಂಡಕ್ಟರ್ ಕೂಡ ಪೆಚ್ಚಾದ. ನಮ್ಮಿಬ್ಬರಿಗೂ ಮಾತು ಬೇಡವಾಗಿತ್ತು. ಆದರೆ ಮನೆಗೆ ಹೋದೊಡನೆ ಇಂತಹ ಸಣ್ಣ ಬೇಡಿಕೆ ಈಡೇರುವುದೂ ಒಮ್ಮೊಮ್ಮೆ ಕಷ್ಟ ಎಂದು ತಿಳಿದಿತ್ತು. ನನಗಾಗಿ ಕಾದಿರುತಿದ್ದ ಮುದ್ದು ಮಕ್ಕಳು ಶರ್ವಾರಿ ಮತ್ತು ಅವನಿ, ಅತ್ತೆ-ಮಾವಂದಿರು, ತಡವಾಗಿ ದಣಿದು ಬರುವ ಪತಿ, ಸುಧೀರ್, ಎಲ್ಲರನ್ನೂ ನಿಭಾಯಿಸಬೇಕು. ಇವತ್ತು ರಾತ್ರಿ ಮರೆಯದಂತೆ ಇಡ್ಲಿ ಹಿಟ್ಟು ರುಬ್ಬಿ ಇಡಬೇಕು, ನಾಳೆ ಬೇಗ ಎದ್ದು ಮಾರ್ಕೆಟ್ಟಿಗೆ ಹೋಗಿ ತರಕಾರಿ ತರಬೇಕು… ಹೀಗೇ ನನ್ನ ಮನಸ್ಸು ಆಗಲೇ ತನ್ನದೇ ಗೋಳು ಶುರು ಮಾಡಿತ್ತು.

ಮನೆ ಸೇರಿ ಮಕ್ಕಳನ್ನು ಮುದ್ದಿಸಿ, ಅತ್ತೆ ಮಾವಂದಿರಿಗೆ ಕಾಫಿ ಕೊಟ್ಟು, ನಾನೂ ಒಂದು ಕಪ್ಪಿನಲ್ಲಿ ಸುರಿದುಕೊಂಡು ಬಾಗಿಲ ಬಳಿ ಬಂದು ಕುಳಿತೆನು. ಸುಧೀ ಬಂದಾಗಲೇ ಗೊತ್ತಾಗಿದ್ದು ರಾತ್ರಿ ಎಂಟಾಗಿದೆ ಎಂದು. ಗಡಿಬಿಡಿಯಿಂದ ಅಡಿಗೆ ಮನೆ ಸೇರಿ, ಇಡ್ಲಿ ಹಿಟ್ಟು ರುಬ್ಬಲು ತಯಾರಿ ಮಾಡಿಕೊಂಡು ನೋಡಿದರೆ ಬೆಳಗ್ಗೆ ಇಡ್ಲಿಗೆ ಅಕ್ಕಿ, ಉದ್ದಿನ ಬೇಳೆಯನ್ನು ನೆನೆಸಿ ಇಡುವುದನ್ನೇ ಮರೆತಿದ್ದೆ. ‘ಅಯ್ಯೋ ಇನ್ನು ಬೆಳಿಗ್ಗೆ ತಿಂಡಿ ಏನು ಮಾಡುವುದು? ರಜ ಇದ್ದಾಗಲೂ ಅವಲಕ್ಕಿ, ಉಪ್ಪಿಟ್ಟು ಮಾಡುತ್ತೀಯಾ ಎಂದು ಮಕ್ಕಳು ಮೂಗು ಮುರಿಯುತ್ತಾರಲ್ಲ. ಸರಿ ನಾಳೆ ಚಿಂತೆ ನಾಳೆಗೆ ಎನ್ನುತ್ತಾ ಬೇಗನೆ ಅಡಿಗೆ ಮಾಡಿ, ಎಲ್ಲರಿಗೂ ಬಡಿಸಿ, ನಾನೂ ಬಲವಂತವಾಗಿ ಎರಡು ತುತ್ತು ತಿಂದು, ಪಕ್ಕದ ರೂಮಿನಲ್ಲಿ ಮಲಗಿದ್ದ ಮಕ್ಕಳ ಮೇಲೆ ಹೊದಿಕೆ ಹೊದಿಸಿ ಹೊರಬಂದಾಗ ಮಾವ, “ಏನಮ್ಮಾ ಇಜಯಾ, ನನ್ನ ಟ್ಯಾಕ್ಸ್ ರಿಟರ್ನ ಫೈಲ್ ಮಾಡಿದೆಯಾ?” ಎಂದು ಕೇಳಿದರು.

“ನಾಳೆ ಮಾಡ್ತೀನಿ ಮಾವ, ಇನ್ನೂ ಟೈಮ್ ಇದೆ.” ಎಂಪ್ಲಾಯ್ಮೆಂಟ್ ಆಫೀಸರ್ ಆಗಿದ್ದ ಮಾವ ರಿಟೈರ್ಡ ಆದಾಗಿನಿಂದ ನಿಲ್ ರಿಟರ್ನ ತುಂಬುವುದಿರುತ್ತದೆ ಅಷ್ಟೇ, ಆದರೂ ಅದಕ್ಕಾಗಿ ನನಗೇ ಕಾಯುವುದು ನೋಡಿದಾಗ ನಗು ಬರುತಿತ್ತು.

“ಆಯ್ತಮ್ಮ. ಒಂದು ದಿನ ನನಗೆ ಎಲ್ಲಾ ಕಲಿಸಿಬಿಡು. ತುಂಬಾ ದಿನದಿಂದ ಒಂದು ಐಡಿಯಾ ಇದೆ. ನನ್ನ ಸ್ನೇಹಿತರು, ಬಂಧುಗಳು, ಅಕ್ಕ ಪಕ್ಕದವರು ಎಲ್ಲರಿಗೂ ಇಂತಹ ಫಾರ್ಮ್​ ತುಂಬುವ ಕೆಲಸ ಎಲ್ಲಾ ನಾನೇ ಮಾಡಬೇಕು ಅಂತ. ಸೋಸಿಯಲ್ ಸರ್ವಿಸ್ ಮಾಡೋದು ನನ್ನ ಕನಸು.”

ಪ್ರತಿ ದಿನ ಮಾವನಿಗೆ ಹೊಸ ಹೊಸ ಕನಸುಗಳು. ಯಾವುದನ್ನೂ ಸೀರಿಯಸ್ ಆಗಿ ತಗೊಳ್ಳಲ್ಲ. ನಾನು ನಕ್ಕು ಸುಮ್ಮನೆ ನಮ್ಮ ರೂಮಿಗೆ ಬಂದೆ. ಸುಧೀ ಎಂದಿನಂತೆ ತಮಗಿಷ್ಟವಾದ ಇಂಗ್ಲೀಷ್ ಹಾಡುಗಳನ್ನು ಕೇಳುತ್ತಿದ್ದರು.

“Nothing’s gonna change my love for you” ಎನ್ನುತ್ತಾ ತಾವೂ ಜೊತೆಯಲ್ಲಿ ಹಾಡುತ್ತಿದ್ದರು. ಮಿತಭಾಷಿಯಾಗಿದ್ದ, ಸುಧೀಗೆ ಮನದಲ್ಲಿರುವುದನ್ನು ಹೇಳಿಕೊಳ್ಳಲು ಹಾಡುಗಾರರ ದನಿಯೇ ಬೇಕಾಗುತಿತ್ತು. ಬೇರೆಯವರ ಮಾತುಗಳನ್ನು ಕೇಳಿಸಿಕೊಳ್ಳಲು ಅಷ್ಟು ಆಸಕ್ತಿ ತೋರದೆ ಕಿವಿಯಲ್ಲಿ ಇಯರ್ ಫೋನು ಚುಚ್ಚಿಕೊಳ್ಳುವುದು ಶಿಷ್ಟಾಚಾರದ ಲಕ್ಷಣವಲ್ಲ ಎಂದು ಎಂದೂ ಅನಿಸುತ್ತಿರಲಿಲ್ಲ. ಆದರೆ ಸದಾ ಹಾಡು ಕೇಳುತ್ತಾ ಮುಗುಳು ನಗುತ್ತಾ, ತಾಳ್ಮೆಯಿಂದಿರುವುದನ್ನು ರೂಢಿಸಿಕೊಂಡಿದ್ದರು.

ನಾನು ಬಾಗಿಲು ಮುಂದೆ ಮಾಡಿ, ದೀಪ ಆರಿಸಿ ಬಟ್ಟೆ ಬದಲಿಸತೊಡಗಿದೆ. ಆಗ ಸುಧೀ, “ಲೇ, ಒಂದು ದಿನಾನಾದ್ರೂ ದೀಪ ಇರಲಿ ಬಿಡೆ, ನೀನು ಹೇಗೆ ಬಟ್ಟೆ ಬದಲಿಸ್ತೀಯ ಅಂತ ನೋಡ್ತೀನಿ” ಎಂದು ತಮಾಷೆ ಮಾಡಿದರು. “ನಿಮಗೆ ಯಾವಾಗಲೂ ತಮಾಷೆನೇ.” ಎಂದು ನಾನು ರೇಗಿ, ಸರಸರನೆ ಒಂದು ನೈಟಿ ಮೈ ಮೇಲೆ ಇಳಿಸಿಕೊಂಡು ಬಂದು ಮಲಗಿದೆ. ಕೈಗೆ ಸಿಕ್ಕೊಡನೆ ಸುಧೀ ತಬ್ಬಿಕೊಂಡು ಮುದ್ದಿಸಿ, ಗಲ್ಲ, ತುಟಿಗಳ ಮೇಲೆಲ್ಲಾ ಲೊಚಲೊಚನೆ ಮುತ್ತಿಡುತ್ತಾ ಎದೆ ಮೇಲೆ ಕೈ ಆಡಿಸುತ್ತಾ, ಬ್ರಾ ಹುಕ್ಕು ಬಿಚ್ಚಲು ಹೆಣಗಿ, “ಮಲಗುವಾಗಲೂ ಇದೆಲ್ಲಾ ಹಾಕ್ಕೊಂಡಿರಬೇಕೇ?” ಎಂದು ಗೊಣಗಿದರು.

“ಸುಧೀ ಪ್ಲೀಸ್, ಇವತ್ತು ಬೇಡ.” ಮಂದ ಬೆಳಕಿನಲ್ಲೇ ನನ್ನ ಮಂಜಾದ ಕಣ್ಣುಗಳನ್ನು ಗಮನಿಸಿ ಎದ್ದು ಕುಳಿತರು. “ಏನಾಯಿತು ಇಜಯಾ?” ಎಂದು ಗಾಬರಿಯಿಂದ ಕೇಳಿದರು.

ಎಷ್ಟೋ ಹೊತ್ತು ಏನೂ ಮಾತಾಡದೆ ಅವರ ತೊಡೆಯ ಮೇಲೆ ತಲೆ ಇಟ್ಟು ಬಿಕ್ಕಳಿಸಿದೆ. ನಂತರ ನಿಧಾನವಾಗಿ ಬ್ಯಾಂಕಿನಲ್ಲಿ ನೆನ್ನೆಯಿಂದ ನಡೆದುದನ್ನೆಲ್ಲಾ ಹೇಳಿದೆ. ಇಂತಹ ಅನಿರೀಕ್ಷಿತ ಘಟನೆಯಿಂದ ಸುಧೀ ಕೂಡ ವಿಚಲಿತರಾದರು.

ಜೀವನದ ಅನಿಶ್ಚಿತತೆ ನಮ್ಮಿಬ್ಬರನ್ನೂ ಭಯಗೊಳಿಸಿ ಇರುವಷ್ಟು ಕ್ಷಣಗಳನ್ನು ಜೊತೆಯಲ್ಲಿಯೇ ಕಳೆಯಬೇಕೆಂದು ಮೌನವಾಗಿಯೇ ನಿರ್ಧರಿಸುವಂತೆ ಮಾಡಿತ್ತು. ಯಾವಾಗಲೋ ಇಬ್ಬರೂ ಅಪ್ಪಿಕೊಂಡೇ ನಿದ್ದೆ ಹೋಗಿದ್ದೆವು. ಆದರೆ ಮಧ್ಯರಾತ್ರಿ ಮತ್ತೆ ಕನಸಿನಲ್ಲಿ ವೆಂಕಟ್ ಬಂದು ಹೆದರಿ ಎದ್ದು ಕುಳಿತೆ. ಸುಧೀ ನಿದ್ದೆಯಿಂದ ಏಳಬಾರದೆಂದು ಮೆಲ್ಲಗೆ ಹಾಸಿಗೆಯಿಂದ ಇಳಿದು, ಹೊರಬಂದು ಕೋಣೆಯ ಬಾಗಿಲು ಹಾಕಿಕೊಂಡು ಹೊರಬಂದೆ. ಯಾವುದಾದರೂ ಪುಸ್ತಕ ಓದೋಣ ಎಂದು ಪುಸ್ತಕಗಳ ಕಪಾಟಿನ ಮುಂದೆ ನಿಂತಾಗ ಸುಧೀ ಕಪಾಟಿನಿಂದ ‘ಹು ವಿಲ್ ಕ್ರೈ ವೆನ್ ಯು ಡಯ್?’ ಎನ್ನುವ ಪುಸ್ತಕದ ಕಡೆಗೆ ತಾನಾಗಿಯೇ ಕೈ ಹೋಯಿತು. ಎರಡು ಪುಟ ಓದುವಷ್ಟರಲ್ಲಿ ಅದು ಸೆಲ್ಫ್ ಮ್ಯಾನೇಜ್ಮೆಂಟಿನ ಪುಸ್ತಕ ಎಂದು ಗೊತ್ತಾಗಿ ವಾಪಸ್ ಇಟ್ಟು ಬಿಟ್ಟೆ.

achchigoo modhalu

ಇಲ್ಲಸ್ಟ್ರೇಷನ್: ಎಸ್​. ವಿಷ್ಣುಕುಮಾರ್

ಸೋಮವಾರ ಎಂದಿನಂತೆ ಗಿಜಿಗಿಜಿ ಗ್ರಾಹಕರು ಬ್ಯಾಂಕಿನೊಳಗೆ ತುಂಬಿದ್ದರು. ವೆಂಕಟನನ್ನು ನೆನೆಸಿಕೊಳ್ಳಲು, ದುಃಖಿಸಲು ಬಿಡುವೇ ಇರಲಿಲ್ಲ. ಆದರೂ ಅವನ ಖಾಲಿಯಾದ ಟೇಬಲ್- ಕುರ್ಚಿಗಳು, ಮುಂದಿನ ದಿನಗಳಲ್ಲೆಲ್ಲಾ ಬಹಳವಾಗಿ ಕಾಡಿದುವು. ಕೆಲದಿನಗಳಲ್ಲಿ ಎಲ್ಲರೂ ವೆಂಕಟ್ ಮೃತನಾದದ್ದನ್ನು ವಾಸ್ತವ ಎಂದು ಒಪ್ಪಿಕೊಂಡು ಯಥಾಸ್ಥಿತಿಗೆ ಬಂದೆವು.

ಆದರೆ ಬಸಪ್ಪನ ಹೊರತು!

ದಿನವುರುಳಿದಂತೆ ಬಸಪ್ಪ ಮಂಕಾಗತೊಡಗಿದ. ನಾನು ಮತ್ತು ಮಾಲಿನಿ ಯಾವುದಾದರೂ ಸಿನಿಮಾ ಬಗ್ಗೆಯೋ, ಮಕ್ಕಳ ಬಗ್ಗೆಯೋ, ಅತ್ತೆ ಮಾವಂದಿರ ಕುರಿತೋ ಚಾಡಿ ಹೇಳಿದರೆ ಅಥವಾ ಹೊಸದಾಗಿ ಕೊಂಡ ಸೀರೆ ಉಟ್ಟುಬಂದರೆ ಸಾಕು ಮುಖ ಗಂಟಿಕ್ಕಿಕೊಂಡು ಆಕ್ಷೇಪಣೆಯಿಂದ ನೋಡುತ್ತಿದ್ದ. ಮಾಲಿನಿಗಂತೂ ಅವಳ ಮೇಕ್ ಅಪ್ ಬಗ್ಗೆ ಮ್ಯಾನೇಜರ್​ಗಿಂತ ಬಸಪ್ಪನ ವ್ಯಂಗ್ಯಭರಿತ ನೋಟವೇ ದೊಡ್ಡ ಕಾಟ ಅನಿಸತೊಡಗಿತು. ಅವನ ನೋಟದಲ್ಲಿ ನಾವೆಲ್ಲಾ ವೆಂಕಟನನ್ನು ಬಹಳ ಬೇಗ ಮರೆತುಬಿಟ್ಟಿವಿ ಎನ್ನುವ ದೂರಿತ್ತು. ಒಂದು ದಿನ ಊಟದ ಸಮಯದಲ್ಲಿ, ಬಸಪ್ಪನನ್ನು ಕರೆದು ಬುದ್ಧಿ ಹೇಳಲು ಪ್ರಯತ್ನಿಸಿದೆ.

“ಬಸಪ್ಪ, ಈ ಪ್ರಪಂಚಾನೇ ಹೀಗೆ. ಇದೇ ಇದರ ನಿಯಮ. ಮಾಗೀಲಿ ಬಿದ್ ಎಲೆಗಳನ್ನು ನೆನೆದು ಕೊರಗುತ್ತಾ ಯುಗಾದೀಲಿ ಚಿಗುರುವುದನ್ನು ಮರಗಳು ಮರೆಯುತ್ವಾ? ಇಲ್ಲಿ ಯಾರೂ ಅನಿವಾರ್ಯವಲ್ಲ. ಒಂದಲ್ಲ ಒಂದು ದಿನ ನಾನೂ ಸಾಯೋದೇ, ನೀನೂ …”

“ನಾನೂ ಹಿಂಗ ಒಂದಿನ ಸತ್ತನಂದ್ರ ನನ್ನೂ ಮರೀತೀರಲ್ಲಾ?” ಅವನ ಕಣ್ಣುಗಳಲ್ಲಿ ತಿರಸ್ಕಾರವಿತ್ತು. ನಾನು ಮುಂದೆ ಮಾತನಾಡಲಿಲ್ಲ.

“ನಂಗ್ ಗೊತ್ತೈತಿ. ನೀವು ವೋಸ್ರು ಅವತ್ತಿಗೇ ನನ್ ದ್ಯಾಸ ಮರೀತೀರಿ. ನನ್ ಪಾಲಿನ್ ಇನ್ಶೂರೆನ್ಸ್ ರೊಕ್ಕದ್ ಸಲುವಾಗಿ ಅಲದಾಡೋ ನನ್ ಹೆಂಡ್ರು ಮಕ್ಕಳು ಎಲ್ಡಾ ದಿನಕ್ಕ ನಿಮಗೆ ತಲಿಬ್ಯಾನಿ ಆಗ್ಬಿಡ್ತಾರ. ನಿಮ್ ಊಟದ್ ಡಬ್ಬಿ ತೊಳಿಯಾಕ, ಚಾ ಮಾಡಿ ಕೊಡಾಕ ಬ್ಯಾರೆ ಯಾವನೋ ಚಪ್ರಾಸಿ ಬರ್ತಾನ. ಎಲ್ಲಾ ಮದ್ಲಿನಂಗ್ ನಡೀಲಿಕ್ ಶುರು ಆಕೇತಿ. ತಗಿರೀ ತಗೀರಿ.”

ಅವನು ತನ್ನ ಮನಸ್ಸಿನಲ್ಲಿರುವುದನ್ನೆಲ್ಲಾ ಹೇಳಿಕೊಂಡು ಹೊರಹಾಕಲಿ ಎಂದು ನಾನೂ ಸುಮ್ಮನಿದ್ದೆ. ಆದರೆ ಅಷ್ಟು ಹೇಳಿ ಬಿರ ಬಿರನೆ ನಡೆದು ಹೋದವನು ಮತ್ತೆಂದೂ ಯಾರೊಡನೆಯೂ ಮಾತನಾಡಲೇ ಇಲ್ಲ!

ಎಷ್ಟೋ ಬಾರಿ ವೆಂಕಟನ ಮೇಜಿನ ಎದುರು ಕುಕ್ಕರುಗಾಲಿನಲ್ಲಿ ಕುಳಿತು ಖಾಲಿ ಕುರ್ಚಿಯನ್ನು ದುರುದುರು ನೋಡುತ್ತಿರುತ್ತಿದ್ದ. ಒಂದು ದಿನ ವೆಂಕಟಗೆ ಬಾಡಿಗೆ ಕೊಟ್ಟವರ ಮನೆಗೆ ಹೋಗಿ, ‘ನೀವು ಆ ಯಪ್ಪನ ಜತಿಗ ಚೂರು ಮನುಷ್ಯತ್ವ ಇಟ್ಕೊಂಡು ನಡ್ಕಂಡಿದ್ರ ಹಿಂಗಾಗ್ತಿರ್ಲಿಲ್ಲ. ನೀವೆಲ್ಲಾ ಬರೀ ರೊಕ್ಕಕ್ಕಾಗಿ ಬದ್ಕಿರೋ ಪಿಶಾಚಿಗುಳು.’ ಎಂದೆಲ್ಲಾ ಬಾಯಿಗೆ ಬಂದಂತೆ ಬೈದು ಬಂದಿದ್ದಾನೆ ಎಂದು ಹರೀಶ ಹೇಳಿದ.

ಮತ್ತೊಂದು ದಿನ ಮಾಲಿನಿ ಗಾಬರಿಯಾಗಿ ಓಡಿ ಬಂದು ಆಫೀಸಿನ ಶೌಚಾಲಯದ ಬಾಗಿಲ ಮೇಲೆ, ‘ಸೂಳೆಮಗ ಮ್ಯಾನೇಜರ್ ಕೊಲೆಗಡುಕ, ವೆಂಕಟಪ್ಪ ನಿಮ್ನ ಬಿಡಲ್ಲ’ ಎಂದು ಬರೆದಿದೆ ಎಂದು ಹೇಳಿದಳು. ಅದು ಬಸಪ್ಪನ ಕೆಲಸ ಎಂದೇ ಎಲ್ಲರಿಗೂ ಅನುಮಾನವಾಯಿತು. ಮತ್ತೊಂದು ದಿನ ಮಾಲಿನಿ ಮುಟ್ಟಾಗಿದ್ದರಿಂದ ತೊಡೆ ನೋವು ಎಂದು ಕಾಲು ಚಾಚಿ ಕೊಳ್ಳಲು ಒಂದು ಸ್ಟೂಲ್ ತರಲು ಬಸಪ್ಪನಿಗೆ ಹೇಳಿದಳು. ಅವನು ಯಾವುದೂ ಸಿಗಲಿಲ್ಲ ಎಂದಾಗ, ವೆಂಕಟ್ ಕಂಪ್ಯೂಟರಿನ ಯೂಪಿಎಸ್ ತೆಗೆದುಕೊಂಡು ಬಾ ಎಂದುಬಿಟ್ಟಳು. ಅಷ್ಟಕ್ಕೇ ಬಸಪ್ಪ ಕೆಂಡಾಮಂಡಲವಾಗಿ ಬಿಟ್ಟಿದ್ದ. ದಿನಗಳುರುಳಿದಂತೆ ಬಸಪ್ಪನ ನಡವಳಿಕೆ ಎಲ್ಲರಿಗೂ ಕಸಿವಿಸಿಯುಂಟು ಮಾಡಿತು. ಹೇಳಲಾಗದೆ, ನೋಡಲಾಗದೆ ಎಲ್ಲರೂ ಪೇಚಾಡಿದೆವು. ನಮ್ಮ ನಡವಳಿಕೆಯೇ ನಮಗೆ ಅರ್ಥವಾಗದ ಹಾಗಾಗಿತ್ತು. ಹೆಜ್ಜೆ ಹೆಜ್ಜೆಗೂ ವೆಂಕಟ್ ಸತ್ತಿದ್ದಾನೆ, ಅವನನ್ನು ನೆನೆದು ದುಃಖಿಸಬೇಕು ಎಂದು ನಮಗೆ ನಾವೇ ನೆನಪು ಮಾಡಿಕೊಳ್ಳಬೇಕಾದ ಅಗತ್ಯ ಬೀಳುತ್ತಿದೆ ಎಂದರೆ ಇದಕ್ಕಿಂತ ಶೋಚನೀಯ ಸ್ಥಿತಿ ಬೇರೆ ಇಲ್ಲ ಅನಿಸಿತು. ನಿಜ ಹೇಳಬೇಕೆಂದರೆ ಬಸಪ್ಪನಿಗೆ ವೆಂಕಟ್ ಅಕಾಲ ಮರಣಕ್ಕೆ ತುತ್ತಾಗಿದ್ದಕ್ಕಿಂತ ಹೆಚ್ಚು ದುಃಖ ಆಗುತ್ತಿದ್ದುದು ಸೀನಿಯರ್ ಕ್ಲರ್ಕ್ ಆದ ವೆಂಕಟನನ್ನೇ ಇಷ್ಟು ಬೇಗ ಮರೆತಿದ್ದೇವೆ. ತಾನಾದರೋ ಆಫ್ಟರ್ ಆಲ್ ಚಪರಾಸಿ, ತನ್ನನ್ನು ನಾವುಗಳೆಲ್ಲ ಇನ್ನೂ ಬೇಗನೆ ಮರೆತು ಬಿಡುತ್ತೇವೆ ಎನ್ನುವುದು. ಎಲ್ಲೋ ಎಂದೋ ಓದಿದ ಮದರ್ ಥೆರೇಸಾ ಮಾತು ನೆನಪಾಗುತ್ತಿತ್ತು,

‘There is more hunger for love and affection than bread!’

ಬದುಕಿರುವವರಿಗೆ ಈ ಮಾತುಗಳು ಅನ್ವಯವಾಗುತಿದ್ದುವು. ಆದರೆ ಬಸಪ್ಪನ ಹಟ ಸತ್ತಮೇಲೂ ಜನ ನಮ್ಮನ್ನು ಪ್ರೀತಿಸಬೇಕು ಎನ್ನುವಂತಿತ್ತು. ಅದಕ್ಕೆ ಹಟವೊಂದೇ ಖಂಡಿತ ಸಾಕಾಗುವುದಿಲ್ಲ ಅಲ್ಲವೇ? ಏನನ್ನಾದರೂ ಗಳಿಸಲೇಬೇಕೆಂಬ ಕನಸು; ಅದಕ್ಕೆ ಬೇಕಾದ ಸಮರ್ಪಣೆ, ಪರಿಶ್ರಮ ಎಲ್ಲವೂ ಬೇಕೇಬೇಕು. ಕನಸು ಎಂದೊಡನೆ ನನಗೆ ನನ್ನ ಕನಸು ನೆನಪಾಯಿತು. ಚಿಕ್ಕಂದಿನಿಂದ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ನನಗೆ ಪುಸ್ತಕ ಪ್ರೇಮಿ ಅಪ್ಪನೇ ಪ್ರೇರಣೆ. ನಾನು ಹನ್ನೆರಡು ವರ್ಷದವಳಾಗಿದ್ದಾಗಲೇ ಅವರ ಎರಡು ತಿಂಗಳ ಸಂಬಳ ಖರ್ಚು ಮಾಡಿ ನನ್ನ ಮೊದಲ ಕವನ ಸಂಕಲನ ಪ್ರಕಟಿಸಿದ್ದರು. ಸ್ಕೂಲು, ಕಾಲೇಜಿನಲ್ಲಿ ಎಷ್ಟೊಂದು ಬರಹಗಳಿಗೆ ಬಹುಮಾನ ಬಂದಿದ್ದುವು. ಮುಂದೊಂದು ದಿನ ಅದ್ಭುತ ಲೇಖಕಿ ಎಂದು ನಿನ್ನನ್ನು ಕಾವ್ಯಾಸಕ್ತರು ಆರಾಧಿಸಬೇಕು, ಪ್ರೀತಿಸಬೇಕು ಎಂದೆಲ್ಲಾ ಅಪ್ಪ ಹೇಳುತ್ತಿದ್ದರು. ಅದಕ್ಕಾಗಿಯೇ ಕನ್ನಡದಲ್ಲಿ ಎಂ. ಎ ಮಾಡಿಸಿದರು ಕೂಡ. ಹಣದ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳಬೇಡ ಎಂದಿದ್ದರು. ಆದರೆ ಈಗ ಈ ಬ್ಯಾಂಕಿನಲ್ಲಿ ದಿನವೂ ನೋಟು ಎಣಿಸುವ ಕೆಲಸ!

ಕತೆ ಕವನ ಎಲ್ಲಾ ನನಗೂ ಇಷ್ಟವೇ ಎಂದು ಸುಧೀ ಹೇಳಿದ್ದರಾದರೂ, ಮದುವೆಯ ನಂತರ, ‘ಸರಳ ಜೀವನಕ್ಕೆ ಅದೆಲ್ಲಾ ಅವಶ್ಯಕವೇ? ಅಷ್ಟಕ್ಕೂ ಅದಕ್ಕೆಲ್ಲಾ ಸಮಯ ಎಲ್ಲಿದೆ?’ ಎಂದು ಕೇಳಿ ನಕ್ಕು ಬಿಟ್ಟಿದ್ದರು.

ನಿಜ ಹೇಳಬೇಕೆಂದರೆ ಲೇಖಕಿ ಆಗಬೇಕೆಂಬ ಹುಳವನ್ನು ಅಷ್ಟು ವರ್ಷಗಳು ತಲೆಯಲ್ಲಿ ಕೊರೆಯಲು ಬಿಟ್ಟಿದ್ದರೂ ಮದುವೆ, ಮಕ್ಕಳು, ಕೆಲಸ ಇತರೆ ಪ್ರಾಮುಖ್ಯತೆ ಪಡೆದಾಗ ಅದೆಷ್ಟು ನಿರ್ದಾಕ್ಷಿಣ್ಯವಾಗಿ ಹೊರ ಹಾಕಿದ್ದೆ. ನನಗೀಗ ನಾನು ಬದುಕಿರುವಾಗಾಗಲೀ ಅಥವಾ ಸತ್ತ ಮೇಲಾಗಲೀ ಯಾರು ಪ್ರೀತಿಸುತ್ತಾರೆ, ನೆನಸುತ್ತಾರೆ ಅಂತ ತಿಳಿದುಕೊಳ್ಳುವ ಯಾವ ಆಸಕ್ತಿಯೂ ಇಲ್ಲ. ನನ್ನನ್ನು ನಾಳೆಯೇ ಎಲ್ಲರೂ ಮರೆತು ಬಿಟ್ಟರೂ ಯಾವ ನೋವೂ ಆಗುವುದಿಲ್ಲ. ಇದೆಲ್ಲಾ ಈ ಬಸಪ್ಪನಿಗೆ ಹೇಗೆ ವಿವರಿಸುವುದು?

ಪ್ರತಿದಿನ ಹತ್ತರಿಂದ ಐದುಗಂಟೆವರೆಗೆ ತಾನಾಯಿತು ತನ್ನ ಕೆಲಸವಾಯಿತು ಎಂದು ಕೊಂಡು ತಮ್ಮ ಪಾಡಿಗೆ ತಾವು ಇದ್ದ ವೆಂಕಟ್ ಅಂತವರನ್ನು ಬಹುಶಃ ಅವರ ಮನೆಯ ಮುಂದೆ ರಾತ್ರಿ ಊಟದ ನಂತರ ಸಿಗುವ ಮುಸುರೆಗಾಗಿ ಬಾಲ ಅಲ್ಲಾಡಿಸುತ್ತ ಕಾಯುವ ನಾಯಿ ಅಷ್ಟೇ ಮಿಸ್ ಮಾಡಿಕೊಳ್ಳಬಹುದು ಅನಿಸಿತು. ಮರುಕ್ಷಣವೇ ನನ್ನ ಮನದ ನಿಷ್ಠುರತೆಗೆ ನನಗೇ ಬೇಸರವಾಯಿತು. ಒಂದು ವೇಳೆ ವೆಂಕಟ್ ಮರಳಿ ಬಂದು ತಮ್ಮ ಟೇಬಲ್ ಮುಂದೆ ನಿಂತು ತಾವು ಇದುವರೆಗೂ ಮಾಡುತಿದ್ದ ಕೆಲಸವನ್ನು ಬೇರೆಯವರು ತೊಂದರೆ ಇಲ್ಲದೆ ಮಾಡಿಕೊಂಡು ಹೋಗುತ್ತಿದ್ದಾರೆ ಎಂದರೆ ಬೇಸರ ಪಟ್ಟು ಕೊಳ್ಳಬಹುದೇ?

ಅದೆಷ್ಟು ಸಲ ಅನಿಸಿಲ್ಲ ನನಗೆ, ನಾನು ಮನೆಯಲ್ಲಿ ಮಾಡುವ ಕೆಲಸವನ್ನು ಒಂದು ದಿನವಾದರೂ ಒಬ್ಬರಾದರೂ ಮಾಡಿಕೊಳ್ಳಲಿ ಎಂದು. ‘ಕಿತನಾ ಸುಖ್ ಹೈ ಬಂಧನ್ ಮೇನ್’ ಎಂದು ಲತಾ ಮಂಗೇಶ್ಕರ ಹಾಡಿದಂತೆ ಎಂದಾದರೂ ಹಾಡುವೆನೋ ಇಲ್ಲವೋ ಎನ್ನುವ ಅನುಮಾನ ನನಗೆ ಯಾವಾಗಲೂ ಇರುವುದು. ಯಾವ ಬಂಧನವೂ ಬೇಡ ಎನ್ನುವ ಮನಸ್ಥಿತಿಯೂ ಬದಲಾಗಬಹುದು ಎಂದು ನನಗಂತೂ ಸದ್ಯಕ್ಕೆ ನಂಬಿಕೆ ಇರಲಿಲ್ಲ.

ಒಂದು ದಿನ ಸಂದರ್ಭ ನೋಡಿ ನಾನು ಮತ್ತು ಮಾಲಿನಿ ಬಸಪ್ಪನ ಹೆಂಡತಿಗೆ ಫೋನಾಯಿಸಿದೆವು. ಅವಳಂತೂ ಆ ಕಡೆಯಿಂದ ಗೊಳೋ ಅಂತ ಅಳಲು ಶುರು ಮಾಡಿದಳು, “ಯವ್ವಾ, ಇವ್ರ್ ಯಾವಾಗ್ಲೂ ನಾಳೀಕ್ ನಾನು ನೆಗುದ್ ಬಿದ್ರೆ, ನೀ ಅಳಾಕಿನಾ ಅಲ್ಲೋ? ಅಂತ ಕೇಳ್ತಾರ. ನನ್ ಇನ್ಶೂರೆನ್ಸ್ ರೊಕ್ಕದಾಗ ಬಂಗಾರ ತಗೋಳಾಕಿನಾ? ನನ್ ದಿನ ಆದ್ರೂ ಮಾಡಾಕಿನಾ ಅಲ್ಲೋ? ಮತ್ ಲಗ್ನ ಆಕೀ ಏನು? ಅಂತೆಲ್ಲಾ ಕೇಳಾಕ್ ಹತ್ತಾರ. ಒಮ್ಮೊಮ್ಮಿ ಮೂವರೂ ಮಕ್ಳು ಮುಂದ ಆಳಾಕ್ ಶುರು ಇಟ್ಕಂತಾರ. ಏನಾರ ಮಾಡ್ರಲಾ ಯವ್ವಾ.” ನನ್ನ ಕಣ್ಣುಗಳು ಅರಿವಿಲ್ಲದೇ ಮಂಜಾದುವು.

ನನಗೂ ಮಾಲಿನಿಗೂ ಬಸಪ್ಪ ಒಂದು ದೊಡ್ಡ ಯಕ್ಷ ಪ್ರಶ್ನೆಯಾಗಿಬಿಟ್ಟ. ವೆಂಕಟನ ಸಾವು ಬಸಪ್ಪನ ಮೇಲೆ ಇಷ್ಟು ಪರಿಣಾಮ ಬೀರಬಹುದು ಎಂದು ಕಲ್ಪನೆ ಕೂಡ ಮಾಡಿರಲಿಲ್ಲ.

ಒಮ್ಮೆ ಯಾರಾದರೂ ಮನಶಾಸ್ತ್ರಜ್ಞರ ಬಳಿ ಕರೆದೊಯ್ಯಬೇಕು ಎನಿಸಿತು. ಈ ವಿಷಯವಾಗಿ ಸುಧೀ ಜೊತೆಯೂ ಮಾತನಾಡಿದ್ದೆ. ಅವರೂ ಸಹಾಯ ಮಾಡಲು ಮುಂದಾಗಿದ್ದರು. ಆದರೆ ಇದಾದ ಒಂದೇ ವಾರದಲ್ಲಿ ಬಸಪ್ಪನ ಹೆಂಡತಿ ಫೋನು ಮಾಡಿದಳು, “ಯವ್ವಾ, ಇವ್ರು ಇನ್ನೂ ಮನೀಗ್ ಬಂದಿಲ್ಲ ನೋಡ್ರಿ, ನನಿಗ್ ಚಿಂತಿ ಆಗೈತಿ. ಏನಾರ ಮಾಡ್ರಿ ಯವ್ವಾ ನಿಮಿಗ್ ಕೈ ಮುಗಿತನಿ.” ಎಂದು ಅತ್ತಳು.

ಮತ್ತೆಂದೂ ಬಸಪ್ಪ ಸಿಗಲೇ ಇಲ್ಲ. ಏನಾದ? ಎಲ್ಲಿ ಹೋದ ಎಂದು ಯಾರಿಗೂ ತಿಳಿಯಲೇ ಇಲ್ಲ! ವೆಂಕಟ್ ಹೋದ ಒಂದೇ ತಿಂಗಳಿಗೆ ನಾವು ಬಸಪ್ಪನನ್ನೂ ಕಳೆದುಕೊಂಡಿದ್ದೆವು.

ಚಿಕ್ಕಂದಿನಿಂದ ಅಪ್ಪ ಅಮ್ಮ, ಮೇಷ್ಟ್ರು, ಅಜ್ಜಿ ಎಲ್ಲರೂ ಹೇಳುತ್ತಿದ್ದುದು, ‘ಬೇರೆಯವರು ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ ಅನ್ನುವುದು ಮುಖ್ಯ ಅಲ್ಲ, ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬಾರದು…ಇತ್ಯಾದಿ;’ ಆದರೆ ಬಸಪ್ಪನ ಪ್ರಪಂಚವೇ ಆ ಬೇರೆಯವರು, ದಯೆ ತೋರಿ ನಾಯಿಮರಿಗೆ ಬಿಸ್ಕೆಟ್ ಎಸೆದಂತೆ ಎಸೆಯುವ ಪ್ರೀತಿಯ ಮೇಲೆ ನಿಂತಿದೆ ಎಂದಾಗ, ಅಂತಹ ವಿಯೋಜಕತೆ ನರಮಾನವರಿಂದ ಸಾಧ್ಯವೇ ಎನ್ನುವ ಅನುಮಾನ ದಿನೇ ದಿನೇ ನನ್ನಲ್ಲಿ ಹೆಚ್ಚಾಗತೊಡಗಿತು.

achchigoo modhalu

ಇಲ್ಲಸ್ಟ್ರೇಷನ್: ಎಸ್​. ವಿಷ್ಣುಕುಮಾರ್

ಪರಿಚಯ : ಪೂರ್ಣಿಮಾ ಮಾಳಗಿಮನಿ ಶಿವಮೊಗ್ಗ ಜಿಲ್ಲೆಯ ಹನುಮಂತಾಪುರದಲ್ಲಿ ಜನಿಸಿ, ಮಂಡ್ಯ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ಶಾಲೆ ಕಲಿತು, ಚಿತ್ರದುರ್ಗದ ಎಸ್.ಜೆ.ಎಮ್.ಐ.ಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಭಾರತೀಯ ವಾಯುಸೇನೆಯಲ್ಲಿ ಆರು ವರ್ಷಗಳ ಕಾಲ ಶಾರ್ಟ ಸರ್ವೀಸ್ ಕಮಿಶನ್ಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರಿ ಸಂಸ್ತೆಯಲ್ಲಿ ಜಾಯಿಂಟ್ ಡೆಪ್ಯೂಟಿ ಡೈರೆಕ್ಟರ್ ಆಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಎನಿ ವನ್ ಬಟ್ ದಿ ಸ್ಪೌಸ್’ ಎನ್ನುವ ಹೆಸರಿನಲ್ಲಿ ಪ್ರಕಟವಾದ ಇಂಗ್ಲಿಷ್ ಕಥಾ ಸಂಕಲನ ಇವರ ಮೊದಲ ಪುಸ್ತಕ. ಸಂಗಾತ, ಸಮಾಜಮುಖಿ, ಸಂಗಾತಿ ಮುಂತಾದ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವರ ಹಲವಾರು ಕಿರುಗತೆಗಳು, ಕವನಗಳು, ತಾಂತ್ರಿಕ ವಿಷಯಗಳ ಕುರಿತ ಲೇಖನಗಳು, ಸಾಹಿತ್ಯಿಕ ಲೇಖನಗಳು ಪ್ರಕಟವಾಗಿವೆ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ಖಿನ್ನತೆಗೆ ಜಾರುವ ಅಂಜಿಕೆಯಲ್ಲಿದ್ದಾಗಲೇ ಬರವಣಿಗೆಗೆ ತೊಡಗಿಕೊಂಡೆ

Published On - 12:02 pm, Sun, 28 February 21

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ