IND vs ENG: ಒಂದಲ್ಲ, ಎರಡಲ್ಲ… ಭಾರತದ 5 ವಿಭಿನ್ನ ತಂಡಗಳ ಇಂಗ್ಲೆಂಡ್ ಪ್ರವಾಸ
India vs England Cricket: ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಐದು ಭಾರತೀಯ ಕ್ರಿಕೆಟ್ ತಂಡಗಳು ಇಂಗ್ಲೆಂಡ್‌ನಲ್ಲಿ ವಿವಿಧ ಸರಣಿಗಳಲ್ಲಿ ಆಡಲಿವೆ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ, ಮಹಿಳಾ ಕ್ರಿಕೆಟ್ ಸರಣಿ, U19 ಸರಣಿ ಮತ್ತು ಅಂಗವಿಕಲ ಕ್ರಿಕೆಟ್ ಸರಣಿಗಳು ಆಂಗ್ಲರ ನಾಡಿನಲ್ಲಿ ನಡೆಯಲ್ಲಿವೆ. ವೈಭವ್ ಸೂರ್ಯವಂಶಿ ಅವರಂತಹ ಯುವ ಪ್ರತಿಭೆಗಳೂ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಜೂನ್-ಜುಲೈ ತಿಂಗಳು ಭಾರತ ಮತ್ತು ಇಂಗ್ಲೆಂಡ್ (IND vs ENG) ಕ್ರಿಕೆಟ್‌ಗೆ ಬಹಳ ವಿಶೇಷವಾಗಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Rohit Sharma) ಅವರಂತಹ ಅನುಭವಿ ಆಟಗಾರರಿಲ್ಲದೆ ಟೀಂ ಇಂಡಿಯಾ (Team India) ಹೇಗೆ ಪ್ರದರ್ಶನ ನೀಡಲಿದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಆದರೆ ಈ ಟೆಸ್ಟ್ ಸರಣಿ ಮಾತ್ರವಲ್ಲ, ಈ 2 ತಿಂಗಳುಗಳಲ್ಲಿ, ಭಾರತದ 5 ವಿಭಿನ್ನ ತಂಡಗಳು ಇಂಗ್ಲೆಂಡ್‌ನಲ್ಲಿ ಕ್ರಿಕೆಟ್ ಆಡಲಿವೆ, ಇದರಲ್ಲಿ 19 ವರ್ಷದೊಳಗಿನವರ ಮತ್ತು ಮಹಿಳಾ ಕ್ರಿಕೆಟ್ ಕೂಡ ಸೇರಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಜೂನ್ 20 ರಿಂದ ಆರಂಭವಾಗಲಿದೆ. ಈ ಸರಣಿಗೆ ಟೀಂ ಇಂಡಿಯಾವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಇದನ್ನು ಹೊರತುಪಡಿಸಿ, ಇತರ ಸರಣಿಗಳಿಗೆ ತಂಡವನ್ನು ಘೋಷಿಸಲಾಗಿದೆ. ಇತ್ತೀಚಿಗೆ ಅಂಡರ್-19 ತಂಡವನ್ನು ಪ್ರಕಟಿಸಲಾಗಿದ್ದು, 14 ವರ್ಷದ ಐಪಿಎಲ್ ಸ್ಟಾರ್ ವೈಭವ್ ಸೂರ್ಯವಂಶಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗಿದ್ದರೆ ಇಂಗ್ಲೆಂಡ್‌ನಲ್ಲಿ ಆಡಲಿರುವ ಆ 5 ಭಾರತೀಯ ತಂಡಗಳು ಯಾವುವು ಎಂಬುದನ್ನು ನೋಡುವುದಾದರೆ..
ಭಾರತ ಎ vs ಇಂಗ್ಲೆಂಡ್ ಲಯನ್ಸ್
ಮೊದಲನೆಯದಾಗಿ, ಭಾರತ-ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ಎರಡು ಪ್ರಥಮ ದರ್ಜೆ ಪಂದ್ಯಗಳ ಸರಣಿ ಪ್ರಾರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಮೇ 30 ರಿಂದ ಕ್ಯಾಂಟರ್ಬರಿಯಲ್ಲಿ ನಡೆಯಲಿದ್ದು, ನಂತರ ಮುಂದಿನ ಪಂದ್ಯ ಜೂನ್ 6 ರಿಂದ ನಾರ್ಥಾಂಪ್ಟನ್ಶೈರ್ನಲ್ಲಿ ನಡೆಯಲಿದೆ. ಈ ಸರಣಿಗೆ ಎರಡೂ ತಂಡಗಳನ್ನು ಘೋಷಿಸಲಾಗಿದೆ. ಭಾರತ ಎ ತಂಡದ ನಾಯಕತ್ವವನ್ನು ಅಭಿಮನ್ಯು ಈಶ್ವರನ್ ಅವರಿಗೆ ಹಸ್ತಾಂತರಿಸಲಾಗಿದೆ. ಇದರ ನಂತರ, ಈ ತಂಡವು ಹಿರಿಯ ಭಾರತೀಯ ತಂಡದೊಂದಿಗೆ ಪಂದ್ಯವನ್ನು ಆಡಲಿದೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ
ಜೂನ್ 20 ರಿಂದ ಆರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯು ಬಹುನಿರೀಕ್ಷಿತವಾಗಿದೆ. ಲೀಡ್ಸ್ನಿಂದ ಪ್ರಾರಂಭವಾಗಲಿರುವ ಈ ಸರಣಿಯಲ್ಲಿ 5 ಟೆಸ್ಟ್ ಪಂದ್ಯಗಳು ನಡೆಯಲಿವೆ. ಇದರ ನಂತರ, ಸರಣಿಯ ಉಳಿದ ಟೆಸ್ಟ್‌ಗಳು ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ಓವಲ್‌ನಲ್ಲಿ ನಡೆಯಲಿವೆ. ಇದರೊಂದಿಗೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಹೊಸ ಸೀಸನ್ ಕೂಡ ಪ್ರಾರಂಭವಾಗಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಹೊಸ ನಾಯಕನ ನಾಯಕತ್ವದಲ್ಲಿ ಆಡಲಿದ್ದು, ಆ ಹೊಸ ನಾಯಕ ಯಾರು ಎಂಬುದು ಕೂಡ ಕುತೂಹಲ ಮೂಡಿಸಿದೆ.
ಭಾರತ-ಇಂಗ್ಲೆಂಡ್ ಮಹಿಳಾ ಸರಣಿ
ಭಾರತೀಯ ಮಹಿಳಾ ಕ್ರಿಕೆಟ್ ತಂಡ ಜೂನ್ ಅಂತ್ಯದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಅವಧಿಯಲ್ಲಿ ಭಾರತ ತಂಡವು ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಜೂನ್ 28 ರಿಂದ ಟಿ20 ಸರಣಿ ಆರಂಭವಾಗಲಿದ್ದು, 5 ಪಂದ್ಯಗಳು ನಡೆಯಲಿವೆ. ಇದಾದ ನಂತರ, ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 16 ರಿಂದ ಪ್ರಾರಂಭವಾಗಲಿದೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಮುನ್ನ ಸಿದ್ಧತೆಗಾಗಿ ಈ ಏಕದಿನ ಸರಣಿಯು ಮಹತ್ವದ್ದಾಗಿದೆ. ಈ ಎರಡೂ ಸರಣಿಗಳಿಗೆ ತಂಡವನ್ನು ಪ್ರಕಟಿಸಲಾಗಿದೆ.
IND vs PAK: ಸಂಪ್ರದಾಯಕ್ಕೆ ಬ್ರೇಕ್; ಇನ್ಮುಂದೆ ಐಸಿಸಿ ಈವೆಂಟ್ನಲ್ಲೂ ಭಾರತ- ಪಾಕ್ ದೂರ ದೂರ..!
19 ವರ್ಷದೊಳಗಿನವರ ಪ್ರವಾಸ
ಹಿರಿಯರ ತಂಡದ ಜೊತೆಗೆ, ಜೂನಿಯರ್ ತಂಡವೂ ಇಂಗ್ಲೆಂಡ್ ನೆಲದಲ್ಲಿ ತನ್ನ ಪರಾಕ್ರಮ ಪ್ರದರ್ಶಿಸಲು ಸಿದ್ಧವಾಗಿದೆ. ಐಪಿಎಲ್‌ನಲ್ಲಿ ಹಿಟ್ ಆಗಿರುವ ವೈಭವ್ ಸೂರ್ಯವಂಶಿ ಮತ್ತು ಆಯುಷ್ ಮ್ಹಾತ್ರೆ ಅವರಂತಹ ಯುವ ತಾರೆಗಳನ್ನು ಒಳಗೊಂಡ ಅಂಡರ್-19 ತಂಡವು ಜೂನ್‌ನಲ್ಲಿಯೇ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಮ್ಹಾತ್ರೆ ಈ ತಂಡದ ನಾಯಕರಾಗಿರುತ್ತಾರೆ. ಜೂನ್ 24 ರಂದು ಅಭ್ಯಾಸ ಏಕದಿನ ಪಂದ್ಯದೊಂದಿಗೆ ಪ್ರವಾಸ ಆರಂಭವಾಗಲಿದೆ. ನಂತರ ಜೂನ್ 27 ರಿಂದ 5 ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ. ಈ ಪ್ರವಾಸವು ಜುಲೈ 12 ರಿಂದ ಪ್ರಾರಂಭವಾಗುವ ತಲಾ 4 ದಿನಗಳ ಎರಡು ಪಂದ್ಯಗಳೊಂದಿಗೆ ಕೊನೆಗೊಳ್ಳುತ್ತದೆ.
ಇಂಗ್ಲೆಂಡ್‌ಗೆ ಅಂಗವಿಕಲ ತಂಡದ ಪ್ರವಾಸ
ಇದೆಲ್ಲದರ ಜೊತೆಗೆ, ಭಾರತ ಮತ್ತು ಇಂಗ್ಲೆಂಡ್‌ನ ಅಂಗವಿಕಲ ತಂಡಗಳ ನಡುವೆ ಕ್ರಿಕೆಟ್ ಸರಣಿಯೂ ನಡೆಯಲಿದೆ. ಜೂನ್ 21 ರಿಂದ ಟಿ20 ಪಂದ್ಯದೊಂದಿಗೆ ಸರಣಿ ಆರಂಭವಾಗಲಿದ್ದು, ಎರಡೂ ದೇಶಗಳ ಮಿಶ್ರ ಅಂಗವಿಕಲ ತಂಡಗಳು ಆಡಲಿವೆ. ಮಿಶ್ರ ಅಂಗವಿಕಲ ತಂಡದಲ್ಲಿ, ದೈಹಿಕವಾಗಿ ಅಂಗವಿಕಲರು, ಮಾನಸಿಕ ಅಂಗವಿಕಲರು ಮತ್ತು ಶ್ರವಣದೋಷವುಳ್ಳ ಆಟಗಾರರನ್ನು ಒಟ್ಟುಗೂಡಿಸಿ ತಂಡಗಳನ್ನು ರಚಿಸಲಾಗುತ್ತದೆ. ಎರಡೂ ತಂಡಗಳ ನಡುವೆ 7 ಟಿ20 ಪಂದ್ಯಗಳು ನಡೆಯಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
