BS Yediyurappa Profile: ಕರ್ನಾಟಕ ರಾಜಕಾರಣದಲ್ಲಿ ‘ಬ್ರ್ಯಾಂಡ್’ ಹುಟ್ಟುಹಾಕಿದ ಯಡಿಯೂರಪ್ಪ ವ್ಯಕ್ತಿಚಿತ್ರ

BS Yediyurappa Birthday: ಫೆಬ್ರವರಿ 27ನೇ ತಾರೀಕು ಬೂಕನಹಳ್ಳಿ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ಜನ್ಮದಿನ. ರಾಜ್ಯ ರಾಜಕಾರಣದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಹೆಸರು ಯಡಿಯೂರಪ್ಪ ಅವರಿಗಿದೆ. ಯಡಿಯೂರಪ್ಪ ಅವರ ಹೋರಾಟಗಳು, ಪಕ್ಷ ಸಂಘಟನೆಯ ತಾಕತ್ತು, ಹೇಗಾದರೂ ಅಧಿಕಾರ ಹಿಡಿಯಬೇಕು ಎಂಬ ಪಟ್ಟು ಎಲ್ಲವೂ ಸರಿ. ಆದರೆ...

  • Srinivasa Mata
  • Published On - 15:18 PM, 27 Feb 2021
BS Yediyurappa Profile: ಕರ್ನಾಟಕ ರಾಜಕಾರಣದಲ್ಲಿ 'ಬ್ರ್ಯಾಂಡ್' ಹುಟ್ಟುಹಾಕಿದ ಯಡಿಯೂರಪ್ಪ ವ್ಯಕ್ತಿಚಿತ್ರ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಕರ್ನಾಟಕ ರಾಜಕಾರಣದಲ್ಲಿ ಇವತ್ತಿಗೆ ಉದಾಹರಣೆಯಾಗಿ ನೀಡಬಹುದಾದ ಮೂರು ಮಾದರಿಗಳಿವೆ. ಎಸ್ಸೆಂ ಕೃಷ್ಣ ಮಾಡೆಲ್, ಎಚ್.ಡಿ. ದೇವೇಗೌಡ ಮಾಡೆಲ್ ಹಾಗೂ ಬಿ.ಎಸ್. ಯಡಿಯೂರಪ್ಪ ಮಾಡೆಲ್. ಈ ಮೂವರ ವೈಶಿಷ್ಟ್ಯ ಏನೆಂದರೆ, ತಮ್ಮ ರಾಜಕೀಯ ಜೀವನದುದ್ದಕ್ಕೂ ಅಧಿಕಾರ ಅನುಭವಿಸಿದವರು ಎಸ್ಸೆಂ ಕೃಷ್ಣ. ಇನ್ನು ನೀರಾವರಿ ಸಚಿವ, ಮುಖ್ಯಮಂತ್ರಿ, ಈ ದೇಶದ ಪ್ರಧಾನಿ ಹೀಗೆ ಎಲ್ಲ ಸೇರಿಸಿಕೊಂಡರೂ ಐದು ವರ್ಷ ಅಧಿಕಾರ ನಡೆಸದ ದೇವೇಗೌಡ, ಅಧಿಕಾರವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಭಯಂಕರ ಹೋರಾಟ, ರಣತಂತ್ರ ಹೊಸೆದು, ಬೆವರನ್ನು ಬಸಿದರೂ ಈ ಹಿಂದೆ ಇಷ್ಟೆಲ್ಲ ಹೋರಾಟ ಮಾಡಿದ್ದು ಇವರೇನಾ ಎಂದು ಅಧಿಕಾರ ಸಿಕ್ಕ ತಕ್ಷಣ ಬದಲಾಗಿ ಬಿಡುವ ಯಡಿಯೂರಪ್ಪ. ಈ ಮೂರು ಮಾಡೆಲ್​ಗಳನ್ನು ಇಂದು ನೆನಪು ಮಾಡಿಕೊಳ್ಳುವುದಕ್ಕೆ ಕಾರಣ ಇದೆ. ಫೆಬ್ರವರಿ 27ನೇ ತಾರೀಕು ಬೂಕನಹಳ್ಳಿ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ಜನ್ಮದಿನ. 78 ವರ್ಷ ಪೂರ್ಣಗೊಳಿಸಿದ ಬಿಎಸ್​ವೈ ಇನ್ನು ಒಂಬತ್ತು ದಿನಕ್ಕೆ ಕರ್ನಾಟಕ ಬಜೆಟ್ ಕೂಡ ಮಂಡಿಸಬೇಕಿದೆ. ಈ ಸಂದರ್ಭದಲ್ಲಿ ತಮ್ಮದೊಂದು ಮಾಡೆಲ್ ನಿಗದಿ ಮಾಡಿದ ಯಡಿಯೂರಪ್ಪನವರ ವ್ಯಕ್ತಿ ಚಿತ್ರ ನೋಡೋಣ.

ಯಡಿಯೂರಪ್ಪನವರ ರಾಜಕೀಯ ಜೀವನದ ಆರಂಭದ ದಿನಗಳಿಂದಲೂ ಬಲ್ಲಂಥ ಬಿಜೆಪಿಯ ಹಿರಿಯ ಮುಖಂಡರು ಯುವ ಬಿಎಸ್​ವೈ ಹೇಗಿದ್ದರು ಅನ್ನೋದನ್ನು ನೆನಪಿಸಿಕೊಳ್ಳುವುದು ಹೀಗೆ: “ಈಗ ಯಡಿಯೂರಪ್ಪನವರಲ್ಲಿ ನೋಡುವ ಅಥವಾ ಆಗಾಗ ಪ್ರಕಟ ಆಗುವ ಸಿಟ್ಟು ಏನೇನೂ ಅಲ್ಲ. ಅವರ ರಾಜಕೀಯ ಜೀವನದ ಆರಂಭದ ದಿನಗಳಲ್ಲಿ ಅಧಿಕಾರಿಗಳ ಮೇಲೆ ಸಿಟ್ಟಿಗೆದ್ದರೆ ಹೊಡೆಯುವುದಕ್ಕೆ ಅಂತ ಮುನ್ನುಗ್ಗಿ ಬಿಡುತ್ತಿದ್ದರು. ಅವರಿಗಿಂತ ವಯಸ್ಸಿನಲ್ಲಿ ಹಾಗೂ ಪಕ್ಷದೊಳಗಿನ ಹಿರಿತನದಲ್ಲಿ ಹೆಚ್ಚಿನವನಾಗಿದ್ದ ನಾನು ತಡೆಯಲು ಹೋದರೆ ನನ್ನನ್ನೂ ಪಕ್ಕಕ್ಕೆ ತಳ್ಳಿಬಿಡುತ್ತಿದ್ದರು. ಆ ಸಂದರ್ಭಗಳಲ್ಲಿ ಎಷ್ಟೋ ಸಲ ನನಗೆ ಪೆಟ್ಟು ಬಿದ್ದಿದೆ. ಕೆಲಸ ಮಾಡದ ಅಧಿಕಾರಿಯ ಮೇಲೆ ಯಡಿಯೂರಪ್ಪ ಅವರಿಗೆ ಆ ಕ್ಷಣಕ್ಕೆ ವಿಪರೀತ ಸಿಟ್ಟಿರುತ್ತಿತ್ತೇ ಹೊರತು ತಾನು ಏನು ಮಾಡುತ್ತಿದ್ದೇನೆ ಎಂಬ ಪರಿವೇ ಇರುತ್ತಿರಲಿಲ್ಲ. ಆದರೆ ಅವರ ಸಿಟ್ಟು ಪ್ರಾಮಾಣಿಕವಾಗಿ ಇರುತ್ತಿತ್ತು, ಕೆಲಸ ಆಗಲಿಲ್ಲ ಎಂಬ ಕಾರಣಕ್ಕೆ ಆಗಿರುತ್ತಿತ್ತು, ತೋರಿಕೆಯದ್ದಾಗಿರುತ್ತಿರಲಿಲ್ಲ.”

ಯಡಿಯೂರಪ್ಪನವರ ಸಿಟ್ಟು ಅವರ ಪಾಲಿಗೆ ಬಹಳ ಸಂದರ್ಭಗಳಲ್ಲಿ ಬಲಹೀನತೆ ಆಗಿದೆ. ಅವರಿಂದ ಉಪಕೃತರಾದವರು ಸಹ ಇದೊಂದು ಕಾರಣಕ್ಕೆ ದೂರುವುದಿದೆ. ಎಲ್ಲರೆದುರು ಎಗಾದಿಗಾ ರೇಗುವ, ಸಟಕ್ಕನೆ ಸಿಟ್ಟಿಗೇಳುವ ಯಡಿಯೂರಪ್ಪನವರ ನಗುಮುಖ ಕಂಡರೆ ಅದು ಅಪರೂಪದ ಚಿತ್ರವೇ ಸರಿ. ಇನ್ನು ಅಂತಹ ಫೋಟೋ ತೆಗೆದವರ ಪಾಲಿನ ಜೀವಿತಾವಧಿ ಸಾಧನೆ ಕೂಡ ಹೌದು.

ಶಿಕಾರಿಪುರ ಪಟ್ಟಣ ಪಂಚಾಯಿತಿಯಿಂದ:
ಇನ್ನು ಬಿಜೆಪಿಯಲ್ಲಿ ಹಿಂದುತ್ವದ ಬಗ್ಗೆ ಅಷ್ಟಾಗಿ ಮಾತಾಡದ ಅಥವಾ ಯಾವುದೇ ಸಮುದಾಯ ಅಥವಾ ವ್ಯಕ್ತಿಗತ ನಿಂದೆಗೆ ಇಳಿಯದ ಅಪರೂಪದ ವ್ಯಕ್ತಿತ್ವ ಬಿಎಸ್​ವೈದು. ಅವರ ಬಗ್ಗೆ ನಾನಾ ಆರೋಪಗಳನ್ನು ಮಾಡಲಾಗುತ್ತದೆ. ಆದರೆ ಕೋಮುವಾದಿ ಅನಿಸಿಕೊಂಡವರಲ್ಲ. ಅವರಿಗೆ ಕಾಲೇಜು ದಿನಗಳಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜತೆಗೆ ನಂಟಿದೆ. 1970ರಲ್ಲಿ ಶಿಕಾರಿಪುರ ಘಟಕದ ಕಾರ್ಯವಾಹ ಎಂದು ನೇಮಕಗೊಂಡ ಅವರು, 1972ರಲ್ಲಿ ಶಿಕಾರಿಪುರ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದರು. ಅಲ್ಲಿಂದ ಆರಂಭವಾದ ಅವರ ರಾಜಕೀಯ ಪಯಣ ಕರ್ನಾಟಕದ ಮುಖ್ಯಮಂತ್ರಿ ಗಾದಿ ತನಕ ತಂದು ನಿಲ್ಲಿಸಿದೆ.

ಯಡಿಯೂರಪ್ಪ ತಮ್ಮ ಜೀವನದುದ್ದಕ್ಕೂ ಅಧಿಕಾರಕ್ಕಿಂತ ಹೋರಾಟದಲ್ಲೇ ಹೆಚ್ಚು ಸಮಯ ಕಳೆದವರು. ತುರ್ತು ಪರಿಸ್ಥಿತಿ ಘೋಷಣೆಯಾದಾಗ ಶಿವಮೊಗ್ಗ ಹಾಗೂ ಬಳ್ಳಾರಿ ಜೈಲಿನಲ್ಲಿ ಇದ್ದರು. ಆ ಸಂದರ್ಭದಲ್ಲಿ ಜೈಲಿನೊಳಗಿದ್ದ ಆರೆಸ್ಸೆಸ್​​ನ ಹಲವು ಸದಸ್ಯರು, ಅಂದಿಗೆ ಯಡಿಯೂರಪ್ಪನವರ ನಾಯಕತ್ವ ಗುಣ ಹೇಗಿತ್ತು, ಅದರಲ್ಲೂ ಬಳ್ಳಾರಿ ಜೈಲಿನಲ್ಲಿ ಬಿಎಸ್​ವೈ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆ ಇತ್ಯಾದಿಯನ್ನು ನೆನಪಿಸಿಕೊಳ್ಳುತ್ತಾರೆ.

ಶಿಕಾರಿಪುರ ಕ್ಷೇತ್ರದಿಂದ ಈ ತನಕ ಎಂಟು ಬಾರಿ ವಿಧಾನಸಭೆಗೆ ಹಾಗೂ ಒಮ್ಮೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸಂಸತ್​​ಗೆ ಆಯ್ಕೆಯಾಗಿರುವ ಯಡಿಯೂರಪ್ಪ, 1999ನೇ ಇಸವಿಯಲ್ಲಿ ಮಾತ್ರ ಸೋಲು ಕಂಡಿದ್ದರು. ಆಗ ಅವರನ್ನು ಬಿಜೆಪಿಯಿಂದ ಮೇಲ್ಮನೆ ಸದಸ್ಯರನ್ನಾಗಿ ಮಾಡಲಾಗಿತ್ತು. ಆದರೆ ಯಡಿಯೂರಪ್ಪ ತಮ್ಮ ಪ್ರಭಾವಳಿಯನ್ನು ವಿಸ್ತರಿಸಿಕೊಂಡಿದ್ದು ವಿರೋಧ ಪಕ್ಷದ ನಾಯಕರಾಗಿ. “ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ” ಎಂಬ ಮಾತು ಚಾಲ್ತಿಗೆ ಬಂದಿತು.

ಲಿಂಗಾಯತ ಸಮುದಾಯ ಬೆನ್ನಿಗೆ ನಿಂತಿತು:
ಯಡಿಯೂರಪ್ಪ ರಾಜಕೀಯ ಬದುಕಿನಲ್ಲಿ ಅತಿ ದೊಡ್ಡ ತಿರುವು ಸಿಕ್ಕ ಇಸವಿ 2006. ಏಕೆಂದರೆ ಅಲ್ಲಿಯ ತನಕ ವಿಪಕ್ಷ ನಾಯಕರಾಗಿ ಹೋರಾಟ, ಪಕ್ಷ ಸಂಘಟನೆ ಎಂದು ಶ್ರಮಿಸುತ್ತಿದ್ದ ಯಡಿಯೂರಪ್ಪ ಅವರಿಗೆ ಜೆಡಿಎಸ್​​ನ ಕುಮಾರಸ್ವಾಮಿ ಅವರ ಜತೆಗೂಡಿ ಸಮ್ಮಿಶ್ರ ಸರ್ಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತು. ಆ ವೇಳೆ ಯಡಿಯೂರಪ್ಪನವರು ಉಪ ಮುಖ್ಯಮಂತ್ರಿ ಆದರು. ಆ ಅವಧಿಯಲ್ಲಿ ಬಾಕಿ ಉಳಿದಿದ್ದ 40 ತಿಂಗಳಿಗೆ ಮೊದಲ 20 ತಿಂಗಳು ಕುಮಾರಸ್ವಾಮಿ ಹಾಗೂ ನಂತರದ 20 ತಿಂಗಳು ಯಡಿಯೂರಪ್ಪ ಮುಖ್ಯಮಂತ್ರಿ ಎಂಬ ಒಪ್ಪಂದ ಆಗಿತ್ತು. ಆದರೆ ಬಿಎಸ್​ವೈಗೆ ಅಧಿಕಾರ ಹಸ್ತಾಂತರ ಆಗಲೇ ಇಲ್ಲ. ಆ ಸರ್ಕಾರ ಬಿದ್ದುಹೋಗಿ, ನಂತರ ನಡೆದ 2008ರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಬೆನ್ನಿಗೆ ಲಿಂಗಾಯತ ಸಮುದಾಯ ದೊಡ್ಡ ಪ್ರಮಾಣದಲ್ಲಿ ನಿಂತುಕೊಂಡಿತು. ಆ ವರೆಗೆ ರಾಜ್ಯದಲ್ಲಿ ಕಂಡರಿಯದಷ್ಟು, ಅಂದರೆ 110 ಸ್ಥಾನಗಳಲ್ಲಿ ಜಯ ಗಳಿಸಿತು ಬಿಜೆಪಿ. ಆದರೆ ಸರ್ಕಾರ ರಚನೆಗೆ 3 ಸ್ಥಾನಗಳ ಕೊರತೆ ಬಿತ್ತು. ಇಷ್ಟೊತ್ತಿಗಾಗಲೇ ಬಿಜೆಪಿಗೆ ಜನಾರ್ದನ ರೆಡ್ಡಿಯ ಬಲ ಸಿಕ್ಕಿಯಾಗಿತ್ತು. ಆಪರೇಷನ್ ಕಮಲ ಮಾಡಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೇರಿತು, ಯಡಿಯೂರಪ್ಪ ಮುಖ್ಯಮಂತ್ರಿಯೂ ಆದರು.

ಶಾಲೆಗೆ ಹೋಗುವ ಹೆಣ್ಣುಮಕ್ಕಳಿಗೆ ಸೈಕಲ್, ಮಹಿಳೆಯರಿಗೆ ಸೀರೆ, ಮಠ-ಮಾನ್ಯಗಳಿಗೆ ಅನುದಾನ ನಾನಾ ಯೋಜನೆಗಳು ಯಡಿಯೂರಪ್ಪನವರಿಗೆ ಹೆಸರು ತಂದುಕೊಟ್ಟವು. ಆದರೆ ಆ ಬಾರಿ ಪೂರ್ಣಾವಧಿ ಮುಗಿಸಲು ಆಗಲೇ ಇಲ್ಲ. 2011ರಲ್ಲಿ ಡಿ ನೋಟಿಫಿಕೇಷನ್ ಹಗರಣದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರುವಂತಾಯಿತು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರೊಬ್ಬರು ಭ್ರಷ್ಟಾಚಾರ ಹಗರಣದಲ್ಲಿ ಜೈಲು ಕಾಣುವಂತಾದ ಮೊದಲ ಪ್ರಕರಣ ಅದು. ಲೋಕಾಯುಕ್ತದಿಂದಲೂ ಪ್ರಕರಣ ದಾಖಲಾದವು. ಆ ನಂತರದಲ್ಲಿ ಅವರು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಎಂಬ ಹೆಸರಿನ ಪ್ರಾದೇಶಿಕ ಪಕ್ಷವನ್ನು ಆರಂಭಿಸಿದರು. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 203 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಆ ಪಕ್ಷ 8ರಲ್ಲಿ ಜಯ ಗಳಿಸಿತ್ತು. ಆದರೆ ಆ ಚುನಾವಣೆಯ ಆರಂಭದಲ್ಲೇ ಬಿಎಸ್​ವೈ ಹೇಳಿದ್ದಂತೆ, ಬಿಜೆಪಿ ಸೋಲಿಗೆ ಯಡಿಯೂರಪ್ಪ ಅವರ ನಡೆ ಕಾರಣ ಆಗಿತ್ತು. ಬಿಜೆಪಿಗೆ ಬಿಎಸ್​ವೈ ಹಾಗೂ ಬಿಎಸ್​ವೈಗೆ ಬಿಜೆಪಿ ಅಗತ್ಯ ಇದ್ದುದರಿಂದ ಅದೇ ವರ್ಷದ ಸೆಪ್ಟೆಂಬರ್​​ನಲ್ಲಿ ಮತ್ತೆ ಬಿಜೆಪಿಗೆ ಮರಳಿದರು ಬಿಎಸ್​ವೈ. 2014ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದರು.

ಪ್ರಜಾಪ್ರಭುತ್ವದಲ್ಲಿ ಆಪರೇಷನ್ ಕಮಲ ಸರ್ವೇ ಸಾಮಾನ್ಯ:
ಆದರೆ, ಯಡಿಯೂರಪ್ಪನವರಿಗೆ ರಾಷ್ಟ್ರ ರಾಜಕಾರಣದಲ್ಲಿ ಎಂದಿಗೂ ಆಸಕ್ತಿ ಇರಲಿಲ್ಲ. ಬಹುಶಃ ಅವರಿಗೆ ಭಾಷೆ ತೊಡಕು ಎಂಬ ಕಾರಣಕ್ಕೂ ಇರಬಹುದು. ಅಥವಾ ಕರ್ನಾಟಕ ಬಿಜೆಪಿಯಲ್ಲಿ ಅವರಿಗಿರುವ ಹಿಡಿತ ಮತ್ತು ಸ್ವಾತಂತ್ರ್ಯವೂ ಕಾರಣ ಆಗಿರಬಹುದು. ಆದ್ದರಿಂದ ಕರ್ನಾಟಕ ಬಿಜೆಪಿ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಂಡ ಅವರು, 2018ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಮುನ್ನಡೆಸಿದರು. ಬಿಜೆಪಿ ಬಹುದೊಡ್ಡ ಪಕ್ಷವಾಗಿ 104 ಸ್ಥಾನ ಗಳಿಸಿತೇ ಹೊರತು ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿಯುವಂಥ ಬಹುಮತ ಪಡೆಯಲಿಲ್ಲ. ಅದಾದ ನಂತರ ಏನೆಲ್ಲ ನಡೆಯಿತು ಎಂಬುದು ರಾಜ್ಯದ ಜನರ ಕಣ್ಣೆದುರೇ ಇದೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದ್ದೇನೋ ನಿಜ. ಆದರೆ ಎರಡು ಬಾರಿ ಆಪರೇಷನ್ ಕಮಲದ ಮೂಲಕವೇ ಗದ್ದುಗೆಗೆ ಏರಿತು. ಪ್ರಜಾಪ್ರಭುತ್ವದಲ್ಲಿ ಆಪರೇಷನ್ ಕಮಲ ಸರ್ವೇ ಸಾಮಾನ್ಯ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವತಃ ಯಡಿಯೂರಪ್ಪ ಸಮರ್ಥನೆ ನೀಡಿದ್ದರು.

ವಯಸ್ಸು ಏರಿದಂತೆ ಯಡಿಯೂರಪ್ಪ ಅವರಲ್ಲಿ ಮೊದಲಿನ ಬಿರುಸಿಲ್ಲ. ಎಲ್ಲ ಪಕ್ಷದವರೊಂದಿಗೂ ಸೌಹಾರ್ದವಾಗಿ ಇರುವುದಕ್ಕೆ ಎಲ್ಲರ ಕೆಲಸಗಳನ್ನೂ ಈ ಬಾರಿ ಮಾಡಿಕೊಡುತ್ತಿದ್ದಾರೆ. ಇವರು ಮೊದಲಿನ ಯಡಿಯೂರಪ್ಪರೇನಾ ಎಂಬಷ್ಟು ಬದಲಾಗಿದ್ದಾರೆ. ಆದರೆ ಈ ವಯಸ್ಸಿನಲ್ಲೂ ಅವರ ಮೊಂಡುತನ ಒಂಚೂರು ಕೂಡ ಕಡಿಮೆ ಆಗಿಲ್ಲ. ಇಂತಹದ್ದೊಂದು ಕೆಲಸ ಆಗಬೇಕು ಎಂದರೆ ಶತಾಯಗತಾಯ ಮಾಡಿ ಮುಗಿಸುವ ಜಗಮೊಂಡ ಅವರು. ವರ್ಷದ ಹಿಂದೆ ಬೇರೆ ಪಕ್ಷಗಳಿಂದ ಶಾಸಕರು ಬಿಜೆಪಿಗೆ ಬಂದರಲ್ಲ, ಅವರಿಗೆಲ್ಲ ಸೂಕ್ತ ಸ್ಥಾನಮಾನ ದೊರಕಿಸುವುದಕ್ಕೆ ಯಡಿಯೂರಪ್ಪ ಅವರಿಗಲ್ಲದೆ ಮತ್ತ್ಯಾರೇ ಇದ್ದರೂ ಅಸಾಧ್ಯ ಆಗಿರುತ್ತಿತ್ತು. ಇವೆಲ್ಲ ಅವರಿಂದ ಮಾತ್ರ ಸಾಧ್ಯ ಎನ್ನುತ್ತಾರೆ ಬಿಎಸ್​ವೈ ಆಪ್ತ ವಲಯದಲ್ಲಿ ಕೆಲಸ ಮಾಡುವವರು.

ವೈಯಕ್ತಿಕ ಬದುಕು:
ಬಿಎಸ್​ವೈ ಪತ್ನಿ ಮೈತ್ರಾದೇವಿ ಅವರು 2004ರಲ್ಲಿ ತೀರಿಕೊಂಡಿದ್ದಾರೆ. ಅರುಣಾದೇವಿ, ಪದ್ಮಾವತಿ, ಉಮಾದೇವಿ ಎಂಬ ಮೂವರು ಹೆಣ್ಣುಮಕ್ಕಳು ಹಾಗೂ ರಾಘವೇಂದ್ರ- ವಿಜಯೇಂದ್ರ ಎಂಬಿಬ್ಬರು ಗಂಡುಮಕ್ಕಳಿದ್ದಾರೆ. ಪಕ್ಷಾತೀತವಾಗಿ ಸ್ನೇಹಿತರಿದ್ದು, ಯಡಿಯೂರಪ್ಪ ಮಾತು ಕೊಟ್ಟರು ಅಂದರೆ ಅದಕ್ಕೆ ತಕ್ಕಂತೆ ಶತಾಯಗತಾಯ ನಡೆದುಕೊಳ್ಳುತ್ತಾರೆ ಎಂಬ ಬ್ರ್ಯಾಂಡ್ ನೇಮ್ ಇದೆ. ದೇವರು, ಜ್ಯೋತಿಷ್ಯ, ಹೋಮ- ಹವನ ಇತ್ಯಾದಿಗಳಲ್ಲಿ ವಿಪರೀತ ಶ್ರದ್ಧೆ ಇರುವ 78 ವರ್ಷದ ಯಡಿಯೂರಪ್ಪ ಅವರದು ಶಿಸ್ತಿನ ಜೀವನ. ಎಂಥ ಸಂದರ್ಭದಲ್ಲೂ ಬೆಳಗ್ಗೆ ವಾಕಿಂಗ್ ತಪ್ಪಿಸಲ್ಲ. ಶುದ್ಧ ಶಾಕಾಹಾರ ಸೇವನೆ. ಸಿಗರೇಟ್, ಮದ್ಯಪಾನದ ಅಭ್ಯಾಸ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಕೆಲವು ವಯೋಸಹಜ ಆರೋಗ್ಯ ಸಮಸ್ಯೆಗಳಿವೆ ಅನ್ನೋದು ಹೊರತುಪಡಿಸಿದರೆ ಫಿಟ್ ಅಂಡ್ ಫೈನ್.

ಇನ್ನು ರಾಜ್ಯ ರಾಜಕಾರಣದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ಹೆಸರು ಯಡಿಯೂರಪ್ಪ ಅವರಿಗಿದೆ. ಯಡಿಯೂರಪ್ಪ ಅವರ ಹೋರಾಟಗಳು, ಪಕ್ಷ ಸಂಘಟನೆಯ ತಾಕತ್ತು, ಹೇಗಾದರೂ ಅಧಿಕಾರ ಹಿಡಿಯಬೇಕು ಎಂಬ ಪಟ್ಟು ಎಲ್ಲವೂ ಸರಿ. ಆದರೆ ಅಧಿಕಾರಕ್ಕೆ ಬಂದ ಮೇಲೆ ಹೇಗೆ ಕೆಲಸ ಮಾಡಬೇಕು, ಏನು ಮಾಡಬೇಕು ಎಂಬ ಬಗ್ಗೆ ಅವರಲ್ಲಿ ಸ್ಪಷ್ಟತೆ ಕೊರತೆ ಇದೆಯೇನೋ ಅನಿಸುತ್ತದೆ. ಅಧಿಕಾರಕ್ಕೆ ಬಂದ ನಂತರ, ನಾನು ಹೇಳಿದ್ದೇ ಆಗಬೇಕು, ಇದು ಹೀಗೇ ಆಗಲಿ ಎಂಬ ನಿಲುವುಗಳಿಂದ ಆಗುವ ಡ್ಯಾಮೇಜ್ ದೊಡ್ಡ ಮಟ್ಟದಲ್ಲೇ ಇರುತ್ತದೆ. ಇಷ್ಟೆಲ್ಲ ಕಷ್ಟಪಟ್ಟು ಅಧಿಕಾರ ಪಡೆದ ಮನುಷ್ಯ ಇವರೇನಾ ಎಂಬಷ್ಟು ಬದಲಾಗಿ ಬಿಡುತ್ತಾರೆ ಯಡಿಯೂರಪ್ಪ.

ಇನ್ನು ಈ ಬಾರಿಯಂತೂ ಕೊರೊನಾ ಹೊಡೆತದಿಂದ ರಾಜ್ಯದ ಬೊಕ್ಕಸಕ್ಕೆ ಗುನ್ನಾ ಬಿದ್ದಿದೆ. ಈ ಸವಾಲನ್ನು ಅವರು ದಾಟಿ ಉತ್ತಮ ಬಜೆಟ್ ನೀಡಬೇಕಿದೆ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಅವಧಿ ಪೂರ್ಣ ಮಾಡಲು ಅವರಿಗೆ ಆಗಿರಲಿಲ್ಲ. ಈ ಬಾರಿ ಅವರ ಬಳಿ ಇನ್ನೆರಡು ವರ್ಷದ ಸಮಯ ಇದೆ. ಅವರ ಕನಸಿನ ಯೋಜನೆಗಳನ್ನು ಜಾರಿಗೊಳಿಸಲು, ಕರ್ನಾಟಕದ ಇತಿಹಾಸದಲ್ಲಿ ಹೆಸರು ಉಳಿಯುವಂತೆ ಮಾಡಲು ಅವಕಾಶ ಇದೆ. ಬಿಎಸ್​​​ವೈ ಅನ್ನು ಇತಿಹಾಸ ಹೇಗೆ ನೆನಪಿಸಿಕೊಳ್ಳಬೇಕು ಎಂದು ನಿರ್ಧರಿಸುವುದು ಈಗ ಅವರ ತೀರ್ಮಾನದ ಮೇಲಿದೆ.

ಇದನ್ನೂ ಓದಿ: BS Yediyurappa Birthday: 79ನೇ ವಸಂತಕ್ಕೆ ಕಾಲಿಟ್ಟ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ; ಟ್ವೀಟ್ ಮೂಲಕ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ