AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

A different principal in US: ಕೆಲವು ಶಾಲೆಯ ಪ್ರಿನ್ಸಿಪಾಲ್​ಗಳು ಹೀಗೂ ಇರುತ್ತಾರೆ!

ಅಂತೋನಿ ಟೋಪಿ ಧರಿಸಿಯೇ ಒಳಗೆ ಪ್ರವೇಶಿಸಿದ್ದನ್ನು ನೋಡಿದ ಶಾಲೆಯ ಪ್ರಿನ್ಸಿಪಾಲ್ ಜೇಸನ್ ಸ್ಮಿತ್ ಅವನನ್ನು ತಮ್ಮ ಚೇಂಬರಿಗೆ ಕರೆಸಿ ಶಾಲೆಯೊಳಗೆ ಹ್ಯಾಟ್​ ಧರಿಸುವಂತಿಲ್ಲ, ಅದನ್ನು ತೆಗೆದು ಬ್ಯಾಗ್​ನಲ್ಲಿ ಇಟ್ಟುಕೊಳ್ಳಲು ನಯವಾಗಿ, ಅನುನಯದ ಧ್ವನಿಯಲ್ಲಿ ಹೇಳಿದರು. ಆದರೆ ಅಂತೋನಿ ತನ್ನ ತಲೆ ಮೇಲಿಂದ ಟೋಪಿ ತೆಗೆಯಲು ಸುತಾರಾಂ ಒಪ್ಪಲಿಲ್ಲ.

A different principal in US: ಕೆಲವು ಶಾಲೆಯ ಪ್ರಿನ್ಸಿಪಾಲ್​ಗಳು ಹೀಗೂ ಇರುತ್ತಾರೆ!
ಅಂತೋನಿಯ ಕ್ಷೌರ ಮಾಡುತ್ತಿರುವ ಜೇಸನ್ ಸ್ಮಿತ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 27, 2021 | 7:13 PM

ಈಗಿನ ಜನಾಂಗದ ಮಕ್ಕಳು ತಮ್ಮ ಲುಕ್ಸ್ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ ಅನ್ನೋದು ನಿಮಗೂ ಗೊತ್ತಿದೆ. ಲಭ್ಯವಿರುವ ಟೆಕ್ನಾಲಜಿ ಮತ್ತು ಸಾಮಾಜಿಕ ಜಾಲತಾಣಗಳ ನೆರವಿನಿಂದ ಮಕ್ಕಳ ಅದರಲ್ಲೂ ವಿಶೇಷವಾಗಿ ಹದಿಹರೆಯದ ಮಕ್ಕಳು ತಾವು ಬೇರೆಯವರಿಗೆ ಕಣ್ಣಿಗೆ ಹೇಗೆ ಕಾಣಬೇಕು ಅನ್ನುವುದನ್ನು ತಾವೇ ನಿರ್ಧರಿಸಿಕೊಳ್ಳುತ್ತಾರೆ. ನಾವಿಲ್ಲಿ ನಿಮಗೆ ಹೇಳುತ್ತಿರುವ ಕತೆ ಒಬ್ಬ ಹದಿಹರೆಯದ ಮಗುವಿನ ಬಗ್ಗೆಯಾದರೂ ಇದು ಸ್ವಲ್ಪ ಭಿನ್ನವಾಗಿದೆ. ಈ ಕತೆಯಲ್ಲಿ ಒಬ್ಬ ಹುಡುಗ ತನ್ನ ಲುಕ್ಸ್ ಬಗ್ಗೆ ಕೀಳರಿಮೆ, ವ್ಯಥೆಪಟ್ಟಿರುವುದಕ್ಕಿಂತ ಜಾಸ್ತಿ ಅವನು ಓದುತ್ತಿರುವ ಶಾಲೆಯು ಪ್ರಿನ್ಸಿಪಾಲ್ ಅವನ ಸಂಕಟವನ್ನು ದೂರ ಮಾಡಲು ತಾನೇ ಕ್ಷೌರಿಕನಾಗಿ ಮಾನವೀಯ ಕಳಕಳಿಯ ಮತ್ತೊಂದು ಮುಖವನ್ನು ಪರಿಚಯಿಸಿದ್ದು ಓದುಗರ ಮನಸ್ಸನ್ನು ಮುದಗೊಳಿಸಿ ಆ ಪ್ರಿನ್ಸಿಪಾಲ್​ಗೆ ಒಂದು ಸಲಾಂ ಹೇಳುವಂತೆ ಪ್ರೇರೇಪಿಸಲಿದೆ.

ಸಾಮಾನ್ಯವಾಗಿ ಮಕ್ಕಳು; ಅವರು ಯಾವ ದೇಶದವರೇ ಆಗಿರಲಿ, ಹೇರ್​ಕಟ್ ಮಾಡಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಅಮೆರಿಕ ಇಂಡಿಯಾನಾ ರಾಜ್ಯದ ಇಂಡಿಯಾನಾಪೊಲಿಸ್ ಹೆಸರಿನ ಪಟ್ಟಣದಲ್ಲಿರುವ ಸ್ಟೋನಿಬ್ರೂಕ್ ಇಂಟರ್​ಮೀಡಿಯೆಟ್ ಮತ್ತು ಮಿಡ್ಲ್ ಸ್ಕೂಲ್​ನ ವಿದ್ಯಾರ್ಥಿಯಾಗಿರುವ ಅಂತೋನಿ ಮೂರ್ ಎಂಬ ಸುಮಾರು 14 ವರ್ಷದ ಕಪ್ಪು ಸಮುದಾಯವನ್ನು ಪ್ರತಿನಿಧಿಸುವ ಹುಡುಗನಿಗೆ ತನ್ನ ಪಾಲಕರು ಮಾಡಿಸಿದ ಹೇರ್​ಕಟ್ ಸ್ವಲ್ಪವೂ ಇಷ್ಟವಾಗಿರಲಿಲ್ಲ. ಅದು ತುಂಬಾ ಕೆಟ್ಟದ್ದಾಗಿದೆ, ತನ್ನ ಲುಕ್ಸ್ ಅದು ಹಾಳು ಮಾಡಿದೆ, ತನ್ನನ್ನು ಕುರೂಪಿಯನ್ನಾಗಿಸಿದೆ ಅಂತ ಅಂದುಕೊಂಡಿದ್ದ ಅವನು ಶಾಲೆಗೆ ಹ್ಯಾಟ್​ ಧರಿಸಿ ಹೋಗವುದು ನಿಷಿದ್ಧವಾಗಿದ್ದರೂ ಅದನ್ನು ಧರಿಸಿ ಹೋಗಿದ್ದ. ಮಕ್ಕಳು ಟೋಪಿ ಧರಿಸಿ ಬರುವುದು ಆ ಶಾಲೆಯ ಡ್ರೆಸ್​ಕೋಡ್​ಗೆ ವಿರುದ್ಧವಾಗಿದೆ.

ಅಂತೋನಿ ಟೋಪಿ ಧರಿಸಿಯೇ ಒಳಗೆ ಪ್ರವೇಶಿಸಿದ್ದನ್ನು ನೋಡಿದ ಶಾಲೆಯ ಪ್ರಿನ್ಸಿಪಾಲ್ ಜೇಸನ್ ಸ್ಮಿತ್ ಅವನನ್ನು ತಮ್ಮ ಚೇಂಬರಿಗೆ ಕರೆಸಿ ಶಾಲೆಯೊಳಗೆ ಹ್ಯಾಟ್​ ಧರಿಸುವಂತಿಲ್ಲ, ಅದನ್ನು ತೆಗೆದು ಬ್ಯಾಗ್​ನಲ್ಲಿ ಇಟ್ಟುಕೊಳ್ಳಲು ನಯವಾಗಿ, ಅನುನಯದ ಧ್ವನಿಯಲ್ಲಿ ಹೇಳಿದರು. ಆದರೆ ಅಂತೋನಿ ತನ್ನ ತಲೆ ಮೇಲಿಂದ ಟೋಪಿ ತೆಗೆಯಲು ಸುತಾರಾಂ ಒಪ್ಪಲಿಲ್ಲ.

 Principal Jason Smith

ಪ್ರಿನ್ಸಿಪಾಲ್ ಜೇಸನ್ ಸ್ಮಿತ್

ಅವನ ಹಠ ಕಂಡು ಬೆರಗಾದ ಸ್ಮಿತ್ ಅವನ ಪಕ್ಕದಲ್ಲೇ ಕೂತುಕೊಂಡು, ‘ಯಾಕೆ ಮಗು, ಹ್ಯಾಟ್​ ತೆಗೆಯಲು ಯಾಕಿಷ್ಟು ಹಟ, ನಾನು ಬೇರೆ ಏನಾದರೂ ಕೇಳಿದೆನೇ, ಕೇವಲ ನಿನ್ನ ಹ್ಯಾಟ್​ ತೆಗೆದು ಬ್ಯಾಗಲ್ಲಿ ಇಟ್ಟುಬಿಡು ಅಂತಷ್ಟೇ ಹೇಳುತ್ತಿದ್ದೇನೆ, ಇದೊಂದು ಚಿಕ್ಕ ವಿನಂತಿ ಅಷ್ಟೇ, ಪ್ಲೀಸ್ ತೆಗೆದುಬಿಡು,’ ಅಂತ ಮತ್ತೇ ಅಷ್ಟೇ ಓಲೈಕೆಯ ಸ್ವರದಲ್ಲಿ ಅವನಿಗೆ ಹೇಳಿದರು.

ಆಗ ಅಂತೋನಿ, ತನ್ನ ತಂದೆತಾಯಿ ಬಲವಂತವಾಗಿ ಹೇರ್​ಕಟ್​ ಮಾಡಿಸಿದ್ದನ್ನು ವಿವರಿಸಿ ಕ್ಷೌರಿಕ ಮಾಡಿರುವ ಹೇರ್​ಕಟ್ ತುಂಬಾ ಕೆಟ್ಟದ್ದಾಗಿದೆ, ತಾನು ಕುರೂಪಿಯಾಗಿ ಕಾಣಿತ್ತಿದ್ದು ಅದೇ ಕಾರಣಕ್ಕೆ ಹ್ಯಾಟ್​ ತೆಗೆಯುತ್ತಿಲ್ಲ ಅಂತ ಹೇಳಿದ್ದಾನೆ.

‘ಸರಿ ನನಗೆ ನಿನ್ನ ಹೇರ್​ಕಟ್​ ತೋರಿಸು, ಹೇಗೆ ಕಾಣುತ್ತಿದೆ ಅಂತ ನಾನು ನೋಡ್ತೇನೆ,’ ಅಂತ ಸ್ಮಿತ್ ಹೇಳಿದಾಗ ಅಂತೋನಿ ಒಲ್ಲದ ಮನಸ್ಸಿನಿಂದ ತಲೆ ಮೇಲಿನ ಟೋಪಿ ತೆಗೆದಿದ್ದಾನೆ. ಸ್ಮಿತ್​ಗೆ ಅಂಥೋನಿಯ ಹೇರ್​ಕಟ್​ನಲ್ಲಿ ಅಂಥ ದೋಷವೇನೂ ಕಂಡಿಲ್ಲ, ಅದು ಚೆನ್ನಾಗಿಯೇ ಇತ್ತು. ಆದರೆ ಹದಿಹರೆಯದ ಮಕ್ಕಳಿಗೆ ತಮ್ಮ ಲುಕ್ಸ್ ಹಿರಿಯರು ಮೆಚ್ಚಿಕೊಳ್ಳುವುದಕ್ಕಿಂತ ಜಾಸ್ತಿ ಸಮಾಜ ಮತ್ತು ತಮ್ಮ ವಯೋಮಾನದ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹುಡುಗಿಯರಿಗೆ ಇಷ್ಟವಾಗುವುದು ಮುಖ್ಯವಾಗಿರುತ್ತದೆ ಎಂಬ ಅಂಶವನ್ನು ಅರಿತಿದ್ದ ಸ್ಮಿತ್​ಗೆ ಒಂದು ಉಪಾಯ ಹೊಳೆದಿದೆ.

ಅಂಥೋನಿಗೆ ಅವರು ಪುನಃ ಅನುನಯದ ಧ್ವನಿಯಲ್ಲಿ, ‘ ಅಂತೋನಿ, ನಾನು ನಿನ್ನ ವಯಸ್ಸಿನವನಾಗಿದ್ದಾಗಿನಿಂದ ಹೇರ್​ಕಟ್ ಮಾಡುತ್ತಿದ್ದೇನೆ, ನನ್ನ ಮಗನ ಕ್ಷೌರವನ್ನೂ ನಾನೇ ಮಾಡುತ್ತೆನೆ, ನಾನು ಕಾಲೇಜು ಓದುತ್ತಿದ್ದಾಗಲೂ ಬೇರೆಯವರ ಹೇರ್​ಕಟ್ ಮಾಡಿದ ಅನುಭವ ಇದೆ, ನನ್ನ ಫೋನಲ್ಲಿ ಅ ಫೋಟೋಗಳೆಲ್ಲ ಇವೆ, ನೀನೇ ನೋಡು,’ ಅಂತ ಹೇಳಿ ತಮ್ಮ ಮೊಬೈಲ್​ನಲ್ಲಿದ್ದ ಇಮೇಜುಗಳನ್ನು ತೋರಿಸಿದ್ದಾರೆ.

ಅವನ ಮೊಗದಲ್ಲಿ ಪ್ರಸನ್ನತೆಯನ್ನು ಕಂಡ ಸ್ಮಿತ್, ‘ನೀನು ಇಲ್ಲೇ ಕೂತಿರು, ನಾನು ಮನೆಗೆ ಹೋಗಿ ಕ್ಷೌರದ ಬಾಕ್ಸ್​ ತಂದುಬಿಡುತ್ತೇನೆ, ನಿನ್ನ ಹೇರ್​ಡೂ ನಾನು ಸರಿಮಾಡುತ್ತೇನೆ,’ ಅಂತ ಅವರು ಹೇಳಿದಾಗ ಒಂದು ಕ್ಷಣ ತಡಬಡಾಯಿಸದ 14ರ ಪೋರ ನಂತರ, ‘ಓಕೆ’ ಅಂದಿದ್ದಾನೆ.

ಕೂಡಲೇ ತಮ್ಮ ಕಾರಿನಲ್ಲಿ ಮನೆಗೆ ಧಾವಿಸಿದ ಸ್ಮಿತ್, ಐದ್ಹತ್ತು ನಿಮಿಷಗಳಲ್ಲೇ ಬಾಕ್ಸ್​ನೊಂದಿಗೆ ವಾಪಸ್ಸು ಬಂದಿದ್ದಾರೆ. ಆಮೇಲೆ ಅಂತೋನಿ ತಂದೆತಾಯಿಗಳಿಗೆ ಫೋನ್ ಮಾಡಿ ವಿಷಯವನ್ನೆಲ್ಲ ತಿಳಿಸಿ, ತಾನು ಅವನ ಹೇರ್​ಕಟ್​ ಮಾಡಲು ಅನುಮತಿ ಕೇಳಿದ್ದಾರೆ. ಅವರು ಒಪ್ಪಿಗೆ ಕೊಟ್ಟ ನಂತರ ತಮ್ಮ ರೂಮಿನಲ್ಲಿ ಅಂತೋನಿಯನ್ನು ಕೂರಿಸಿ ಕೂದಲನ್ನು ಟ್ರಿಮ್ ಮಾಡಿದ್ದಾರೆ.

ಸುದ್ದಿ ಮಾಧ್ಯಮವೊಂದರ ಜೊತೆಗೆ ಈ ವಿಷಯವನ್ನು ಹಂಚಿಕೊಂಡಿರುವ ಸ್ಮಿತ್, ‘ಕಪ್ಪು ವರ್ಣದ ಸಮುದಾಯಗಳಲ್ಲಿ, ಯುವಕರು ತಮ್ಮ ಹೇರ್​ಕಟ್​ ಮತ್ತು ಲುಕ್ಸ್ ಬಗ್ಗೆ ಬಹಳ ಮುತುವರ್ಜಿ ವಹಿಸುತ್ತಾರೆ, ಅದು ಅವರ ಸಂಸ್ಕೃತಿಯ ಭಾಗವಾಗಿದೆ,’ ಎಂದು ಹೇಳಿದ್ದಾರೆ.

Stonybrook School

ಸ್ಟೋನಿಬ್ರೂಕ್ ಶಾಲೆ

ಅಂತೋನಿ ತನ್ನ ಲುಕ್ಸ್ ಹಾಳಾಗಿದೆ, ಹುಡುಗಿಯರು ತನ್ನತ್ತ ನೋಡಲಾರರೆನ್ನುವ ಅತಂಕದಿಂದ ಶಾಲೆಗೆ ಹ್ಯಾಟ್​ ಧರಿಸಿ ಬಂದಿದ್ದ. ಅವನ ತಲೆಗೂದಲು ಟ್ರಿಮ್ ಮಾಡಿ ಕ್ಲಾಸಿಗೆ ಕಳುಹಿಸಿದ ನಂತರ ಸ್ಮಿತ್ ದಿನವಿಡೀ ಅವನು ಪಾಠದ ಕಡೆ ಗಮನ ಕೊಡುತ್ತಿದ್ದಾನೆಯೇ, ಪುನಃ ಹ್ಯಾಟ್ ಧರಿಸುವ ಪ್ರಯತ್ನವೇನಾದರೂ ಮಾಡಿದನೇ ಅಂತ ಗಮನಿಸಿದ್ದಾರೆ. ಅಂತೋನಿ, ಪಾಠಗಳನ್ನು ತದೇಕಚಿತ್ತದಿಂದ ಕೇಳಿಸಿಕೊಳ್ಳುತ್ತಿದ್ದ ಮತ್ತು ತನ್ನ ಟೋಪಿಯನ್ನು ಮುಟ್ಟುವ ಪ್ರಯತ್ನ ಒಮ್ಮೆಯೂ ಮಾಡಲಿಲ್ಲ!

‘ಅನೇಕ ಸಲ ನಮ್ಮ ನಡುವಳಿಕೆಯೇ ಮಾತಿನ ಸ್ವರೂಪ ಪಡೆಯುತ್ತದೆ. ವಿದ್ಯಾರ್ಥಿಯೊಬ್ಬ ತೊಂದರೆಯಲ್ಲಿದ್ದರೆ, ಅವನಿಗೇನಾಗಿರಬಹುದು ಅಂತ ನಮ್ಮನ್ನು ನಾವು ಮೊದಲು ಪ್ರಶ್ನಿಸಿಕೊಳ್ಳಬೇಕು. ಅವನಿಗೆ ಏನು ಬೇಕಾಗಿದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು, ನಗರ ಪದ್ರದೇಶಗಳಲ್ಲಿನ ಶಿಕ್ಷಣವು ಇಂಥ ಅಯಾಮಗಳ ಮೇಲೆ ನೆಲೆಗೊಂಡಿದೆ,’ ಎಂದು ಸ್ಮಿತ್ ಹೇಳಿದ್ದಾರೆ.

ಶಾಲೆಯ ಡ್ರೆಸ್​ಕೋಡ್ ಉಲ್ಲಂಘಿದ್ದಕ್ಕೆ ಅಂತೋನಿ ಶಾಲೆಯೊಳಗಿನ ಸಸ್ಪೆನ್ಷನ್​ಗೊಳಗಾಗಬಹುದಿತ್ತು ಇಲ್ಲವೇ ಅವರ ಪಾಲಕರಿಗೆ ಫೋನ್ ಮಾಡಿ ಅವನನ್ನು ಮನೆಗೆ ಕರೆದುಕೊಂಡು ಹೋಗಿ ಅಂತ ಶಾಲೆಯ ಮ್ಯಾನೇಜ್ಮೆಂಟ್ ಹೇಳಬಹುದಿತ್ತು. ಅವನನ್ನು ಆ ಶಿಕ್ಷೆಗಳಿಂದ ತಪ್ಪಿಸಲು ಮಾಡಿದ ಪ್ಲ್ಯಾನ್ ಫಲ ನೀಡಿತು ಅಂತ ಸ್ಮಿತ್ ಹೇಳಿದ್ದಾರೆ.

ನಂತರ, ಅಂತೋನಿಯ ತಾಯಿ ತಾವಂಡ ಜಾನ್ಸನ್, ತಮ್ಮ ಮಗ ಎದುರಿಸಿದ ಸ್ಥಿತಿಯನ್ನು ಅದ್ಭುತವಾಗಿ ನಿರ್ವಹಿದ ಸ್ಮಿತ್​ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ, ‘ನನ್ನ ಮಗ ಶಾಲೆಯಲ್ಲಿ ತೊಂದರೆಗೆ ಸಿಲುಕದಂತೆ ಪ್ರಿನ್ಸಿಪಾಲ್ ಸ್ಮಿತ್ ಅವರು ಪರಿಸ್ಥಿತಿಯನ್ನು ಹ್ಯಾಂಡಲ್ ಮಾಡಿದ ರೀತಿ ವಿವರಿಸಲು ನನಗೆ ಪದಗಳು ಸಿಗುತ್ತಿಲ್ಲ, ಅವರು ನನ್ನ ಮಗನಿಗೆ ಶಿಕ್ಷಯಾಗುವುದನ್ನು ತಪ್ಪಿಸಿದ್ದಕ್ಕೆ ತುಂಬು ಹೃದಯದಿಂದ ಧನ್ಯವಾದಗಳು ಹೇಳುತ್ತಿದ್ದೇನೆ,’ ಎಂದಿದ್ದಾರೆ.

ಇದನ್ನೂ ಓದಿ: Manya Singh: ಅಮ್ಮನ ಮುಡಿಗೆ ಮಿಸ್ ಇಂಡಿಯಾ ಕಿರೀಟ, ಅಪ್ಪನ ಆಟೋದಲ್ಲಿಯೇ ಸಂಚಾರ: ಹೆತ್ತವರ ತ್ಯಾಗಕ್ಕೆ ಮಗಳ ‘ಮಾನ್ಯ’ತೆ

Published On - 7:11 pm, Sat, 27 February 21