Netflix Anthology : ‘ಅನ್​ಕಹಿ ಕಹಾನಿಯಾ’ದಲ್ಲಿ ಜಯಂತ ಕಾಯ್ಕಿಣಿ ಅವರ ‘ಮಧ್ಯಂತರ’

OTT : ಮೂವತ್ತೈದು ವರ್ಷಗಳ ಹಿಂದೆ ಬರೆದ ಕನ್ನಡದ ಕಥೆಯೊಂದು ಮೊದಲ ಬಾರಿಗೆ ಅನ್ಯಭಾಷೆಯ ಒಟಿಟಿ ವೇದಿಕೆಯನ್ನು ಪ್ರವೇಶಿಸಿರುವುದು ಕನ್ನಡ ಸಾಹಿತ್ಯ ವಲಯಕ್ಕೆ ಮತ್ತು ಕನ್ನಡಿಗರ ಸಂತೋಷಕ್ಕೆ ಕಾರಣವಾಗಿದೆ. 

Netflix Anthology : ‘ಅನ್​ಕಹಿ ಕಹಾನಿಯಾ’ದಲ್ಲಿ ಜಯಂತ ಕಾಯ್ಕಿಣಿ ಅವರ ‘ಮಧ್ಯಂತರ’
ಖ್ಯಾತ ಕಥೆಗಾರ, ಕವಿ, ಜಯಂತ ಕಾಯ್ಕಿಣಿ
Follow us
ಶ್ರೀದೇವಿ ಕಳಸದ
|

Updated on:Aug 21, 2021 | 10:04 PM

Ankahi Kahaniya – Netflix Anthology : ಅನ್​ಕಹಿ ಕಹಾನಿಯಾ- ನೆಟ್​ಫ್ಲಿಕ್ಸ್​ ಕಥಾಗುಚ್ಛದಲ್ಲಿ  ಕನ್ನಡದ ಖ್ಯಾತ ಕಥೆಗಾರ, ಕವಿ ಜಯಂತ ಕಾಯ್ಕಿಣಿ ಅವರು 35 ವರ್ಷಗಳ ಹಿಂದೆ ಬರೆದ ಕಥೆಯೊಂದು ದೃಶ್ಯರೂಪ ಪಡೆದಿದ್ದು ಸೆಪ್ಟೆಂಬರ್ 17ರಂದು ಬಿಡುಗಡೆಗೊಳ್ಳಲಿದೆ. ಈ ಕಥಾಗುಚ್ಛದ ವಸ್ತು ಪ್ರೇಮಕಥಾಕೇಂದ್ರಿತವಾಗಿದ್ದು,​ ಮೂವರು ಲೇಖಕರ ಮೂರು ಕಥೆಗಳನ್ನು ಒಳಗೊಂಡಿದೆ. ಬಾಲಿವುಡ್ ನಿರ್ದೇಶಕರುಗಳಾದ ಅಶ್ವಿನಿ ಅಯ್ಯರ್ ತಿವಾರಿ, ಅಭಿಷೇಕ್ ಚೌಬೆ ಮತ್ತು ಸಾಕೇತ್ ಚೌಧರಿ ಇದನ್ನು ನಿರ್ದೇಶಿಸಿದ್ಧಾರೆ. ಜಯಂತ ಅವರ ಕಥೆಯನ್ನು ಬಾಲಿವುಡ್ ನಿರ್ದೇಶಕ ಅಭಿಷೇಕ್ ಚೌಬೆ ನಿರ್ದೇಶಿಸಿದ್ದಾರೆ. ಬೇರೆ ಭಾಷೆಯ ಒಟಿಟಿ ವೇದಿಕೆಗೆ ಕನ್ನಡ ಕಥೆಯೊಂದು ಮೊದಲ ಬಾರಿಗೆ ಪ್ರವೇಶ ಪಡೆದಿರುವುದು ಕನ್ನಡ ಸಾಹಿತ್ಯ ವಲಯಕ್ಕೆ ಮತ್ತು ಕನ್ನಡಿಗರ ಸಂತೋಷಕ್ಕೆ ಕಾರಣವಾಗಿದೆ. 

‘ಮಧ್ಯಂತರ’; 1986 ರಲ್ಲಿ ಜಯಂತ ಅವರು ಬರೆದ ಕಥೆ, ‘ದಗಡೂ ಪರಬನ ಅಶ್ವಮೇಧ’ ಸಂಕಲನದಲ್ಲಿ ಇದು ಪ್ರಕಟವಾಗಿದೆ. 2017ರಲ್ಲಿ ಬಿಡುಗಡೆಗೊಂಡ ಜಯಂತ ಅವರ ಮುಂಬೈ ಆಧಾರಿತ ಕಥೆಗಳನ್ನು ಲೇಖಕಿ ತೇಜಸ್ವಿನಿ ನಿರಂಜನ ಅವರು ಇಂಗ್ಲಿಷಿಗೆ ಅನುವಾದಿಸಿದ ‘ನೋ ಪ್ರೆಸೆಂಟ್ ಪ್ಲೀಸ್ -No Present Please’ ಕಥಾ ಸಂಕಲನದಲ್ಲಿಯೂ ಈ ಕಥೆ ಅಡಕವಾಗಿದೆ. ಇದೀಗ ನೆಟ್​ಫ್ಲಿಕ್ಸ್ ಕಥಾಗುಚ್ಛ – ‘ಅನ್​ಕಹಿ ಕಹಾನಿಯಾ’ ಮೂಲಕ  ವೆಬ್​ ವೀಕ್ಷಕರನ್ನು ತಲುಪುತ್ತಿರುವುದು ಕನ್ನಡದ ಹೆಗ್ಗಳಿಕೆ.

ಮೂವತ್ತೈದು ವರ್ಷಗಳ ಹಿಂದೆ ಬರೆದ ಕಥೆಯೊಂದು ಹೀಗೆ ಮರುಜೀವ ಪಡೆಯುತ್ತಲೇ ಇರುತ್ತದೆ ಎಂದರೆ ಅದಕ್ಕಿರುವ ಸಮಕಾಲೀನ ಸ್ಪರ್ಶ ದಟ್ಟವಾಗಿದೆ ಎಂದರ್ಥ. ಜಯಂತ ಕಾಯ್ಕಿಣಿ, ‘ಬಾಲಿವುಡ್ ನಿರ್ದೇಶಕ ಅಭಿಷೇಕ್ ಚೌಬೆ ಅವರು ರಂಗಭೂಮಿ, ಸಾಹಿತ್ಯ, ಸಿನೆಮಾ, ಸಂಸ್ಕೃತಿಯ ಬಗ್ಗೆ ಸಾಕಷ್ಟು ಆಸಕ್ತಿ ಮತ್ತು ಸೂಕ್ಷ್ಮತೆಯನ್ನು ಉಳ್ಳವರು. ‘ನೋ ಪ್ರೆಸೆಂಟ್ ಪ್ಲೀಸ್’ ಮೂಲಕ ಮಧ್ಯಂತರ – Interval ಕಥೆ ಅವರ ಗಮನಕ್ಕೆ ಬಂದಿತು. ನಂತರ ಸ್ಕ್ರಿಪ್ಟ್​ ಕೂಡ ಕಳುಹಿಸಿಕೊಟ್ಟು, ಮೂಲಕಥೆಯ ಆಶಯಕ್ಕೆ ಧಕ್ಕೆ ಬರುವಂತಿದ್ದರೆ ತಿಳಿಸಿ ಎಂಬ ಸೌಜನ್ಯವನ್ನೂ ತೋರಿದರು. ಈಗಷ್ಟೇ ಟ್ರೇಲರ್ ಬಿಡುಗಡೆಯಾಗಿದೆ, ತೆರೆಯ ಮೇಲೆ ಇದು ಹೇಗೆ ಅನಾವರಣಗೊಳ್ಳುತ್ತದೆ ಎನ್ನುವುದರ ಬಗ್ಗೆ ನನಗೂ ಕುತೂಹಲವಿದೆ’ ಎಂದರು.

ಜಗತ್ತಿನ ಯಾವುದೇ ಭಾಷೆಯ ಸಿನೆಮಾಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿವೆ ಎಂದರೆ ಅವುಗಳ ಅಡಿಪಾಯ ಕಥೆ-ಕಾದಂಬರಿ. ಸಾಹಿತ್ಯದ ಅಭಿರುಚಿಯುಳ್ಳ ನಿರ್ದೇಶಕರುಗಳು ತೆರೆಗೆ ಒಗ್ಗಬಹುದಾದ ಕಥೆ-ಕಾದಂಬರಿಗಳನ್ನು ಹುಡುಕಿ ಚಿತ್ರಕಥೆ ಸಂಭಾಷಣೆಯ ಮೂಲಕ ಅವುಗಳಿಗೆ ಮತ್ತೊಂದು ಸ್ತರದಲ್ಲಿ ಜೀವ ತುಂಬುತ್ತ ಬಂದಿದ್ದಾರೆ. ಸದ್ಯದ ಒಟಿಟಿ ಮಾಧ್ಯಮ ಪ್ರಾಧಾನ್ಯ ಕೊಡುತ್ತ ಬಂದಿರುವುದು ಉತ್ತಮ ಕಥಾವಸ್ತುವಿಗೇ ಎನ್ನುವುದು ಸಿನೆಮಾ ಜಗತ್ತಿನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದೇ. ‘ಸಣ್ಣಕಥೆಗಳಿಗೆ ಈಗ ಪರ್ವಕಾಲ. ಬಹುಶಃ ನಮ್ಮ ದೇಶದಲ್ಲಿರುವಷ್ಟು ಸಣ್ಣ ಕಥೆಗಳ ಭಂಡಾರ ಬೇರೆಡೆ ಇಲ್ಲವೆಂದೇ ಹೇಳಬಹುದು. ಒಟಿಟಿ ಇದಕ್ಕೊಂದು ಒಳ್ಳೆಯ ವೇದಿಕೆ. ಪ್ರತೀ ಮಾಧ್ಯಮಕ್ಕೂ ಅದರದೇ ಆದ ಅನನ್ಯತೆ ಇದೆ. ನಾಟಕವಾಗುವ ವಸ್ತು ಬೇರೆ, ಸಿನೆಮಾ ಆಗುವ ವಸ್ತು ಬೇರೆ. ಈಗ ಕಥೆಯೊಂದು ದೃಶ್ಯಮಾಧ್ಯಮಕ್ಕೆ ಒಳಗೊಂಡಾಗ ಇಷ್ಟು ತಾಸು ಅಥವಾ ಕಂತಿನ ಲೆಕ್ಕದಲ್ಲಿ ಪ್ರದರ್ಶನಗೊಂಡರೂ, ಕಥೆ ಎನ್ನುವುದು ಒಬ್ಬರ ಮನಸ್ಸಿನಲ್ಲಿ ಹುಟ್ಟಿ, ರೈಟಿಂಗ್​ ಟೇಬಲ್ಲಿನ ಮೇಲೆ ಏಕಾಂತದಲ್ಲಿ ರೂಪುಗೊಳ್ಳುವಂಥದ್ದು. ಕಥೆಗಳನ್ನು ಬರೆಯಲು ಹೇಗೆ ಓದು, ಹುಡುಕಾಟ, ಸಂಯಮ ಎಲ್ಲವೂ ಬೇಕಾಗುತ್ತದೆಯೋ ಹಾಗೆ ಒಂದು ಕಥೆ ಅಥವಾ ಕಾದಂಬರಿಯನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸಲೂ ಆ ಗುಣಗಳು ಬೇಕಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಮೂರು ನಾಲ್ಕು ಜನರು ಒಟ್ಟಾಗಿ ತೊಡಗಿಕೊಂಡಾಗ ಕಥೆಯು ಅನುಭವದ ನೆಲೆಯನ್ನು ಕಳೆದುಕೊಂಡು ಸಂವಹನದ ನೆಲೆಗೆ ರೂಪಾಂತರಗೊಳ್ಳುವಾಗ ಇಸ್ತ್ರಿ ಹಾಕಿದ ಅಂಗಿಯಂತೆ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನನ್ನ ಕಥೆಗಳನ್ನು ತೆರೆಗೆ ಅಳವಡಿಸಲು ಯಾರಾದರೂ ಆಸಕ್ತಿ ತೋರಿದಾಗ, ನಾನು ತುಸು ಹೆಚ್ಚೇ ಜತನ ವಹಿಸುತ್ತೇನೆ’ ಎನ್ನುತ್ತಾರೆ ಜಯಂತ.

ankahi kahaniya netflix series jayanth kaikini

ಜಯಂತ ಅವರ ಕೃತಿಗಳು

‘ಮಧ್ಯಂತರ’ ಕಥೆಯ ಆಯ್ದ ಭಾಗ 

‘ಓಡಿ ಹೋಗೋಣ’ ಎಂದು ಮೊದಲು ಹೇಳಿದವರು ಯಾರು-ಗೊತ್ತಿಲ್ಲ. ಆದರೆ ಹೇಳಿದ್ದು ಖರೇ. ‘ಆದಷ್ಟು ಬೇಗ’ ಎಂದಿದ್ದೂ ಖರೇ. ಅದನ್ನು ಹೇಳುವಾಗಲೇ ನಿರ್ಧಾರ ಗಟ್ಟಿಗೊಂಡಂತೆ ಆ ಕ್ಷಣದಿಂದಲೇ ಇಬ್ಬರಲ್ಲೂ ಹೊಸ ಹುಟ್ಟಿನ ಹುರುಪು ಮೂಡಿತು. ನಾಳೆ ಮುಂಜಾನೆ ಜಾಂಬಳಿನಾಕಾದ ಬಳಿ ಅವಳು ಭೆಟ್ಟಿ ಆಗುವುದು. ನಂತರ ಅಲ್ಲಿಂದ ಹೋಗುವುದು. ಎಲ್ಲಿ? ಅದು ಅಲ್ಲೇ ನಾಳೆ ಮುಂಜಾನೆ ನೋಡಿದರಾಯಿತು. ಆ ನಾಳೆಯ ಮುಂಜಾನೆಯ ತನಕ ಈಗೊಂದು ಸುದೀರ್ಘ ರಾತ್ರಿಯುಂಟು ಇಬ್ಬರಿಗೂ. ಮಂಜರಿಗೆ ಹೊಸ ಬದುಕಿನ ಬಾಗಿಲೆಂಬಂಥ ರಾತ್ರಿ. ನಂದೂಗೆ ಕೈಕಾಲಿನೊಳಗಿನ ಬಲವನ್ನೇ ಎಬ್ಬಿಸುವಂಥ ರಾತ್ರಿ. ಇದ್ದ ಎರಡೇ ಒಳ್ಳೆಯ ಬಟ್ಟೆ ಒಂದು ಸೀರೆ ಚೀಲದಲ್ಲಿ ಹಾಕಿ ಮೋರಿಯ ಮೇಲಿನ ಮೊಳೆಗೆ ತೂಗು ಹಾಕುತ್ತಾಳೆ- ಮುಂಜಾನೆ ಹಾಲಿನ ನೆಪದಲ್ಲಿ ಹೊರ ಬೀಳುವಾಗ ಒಯ್ಯಲು. ಸೋಡಾ ಸ್ಟಾಲಿನ ಹುಡುಗ ಇಸಕೊಂಡಿದ್ದ ಹತ್ತು ರೂಪಾಯಿಯನ್ನು ವಸೂಲಿ ಮಾಡಲು ಶತಪ್ರಯತ್ನ ಮಾಡುತ್ತಾನೆ ನಂದೂ. ನಿನ್ನೆ ಸಿಕ್ಕ ಪಗಾರು ಭದ್ರವಾಗಿದೆ. ಹೊರಬೀಳಲು ಮುನ್ನೂರು ಸಾಕಲ್ಲ. ನಂತರ ಹೊಸ ಆಹ್ವಾನಗಳಲ್ಲಿ ದುಡಿಯುವುದು- ಕಪಾಟಿನಲ್ಲಿಯ ಸ್ಥಿರ ಚಿತ್ರಗಳು ಖಾಲಿ ಖಾಲಿ ವರಾಂಡದಲ್ಲಿ ಮಿಕಿ ಮಿಕಿ ನೋಡುತ್ತಿವೆ. ನಾಳೆ ಮುಂಜಾನೆಯ ಅಸಾಧ್ಯ ಸಾಧ್ಯತೆಗಳು ಕೆರಳಿ ನಂದು ಚಡಪಡಿಸುತ್ತಿದ್ದಾನೆ. ಮಂಜರಿ, ನಾಳೆಯಿಂದ ಇಲ್ಲ ಎಂಬ ಕಳವಳದಲ್ಲಿ ಎಲ್ಲಾ ಕಾರ್ಯಕ್ರಮವನ್ನೂ ಟಿ.ವಿ.ಯಲ್ಲಿ ನೋಡಿ ಮನೆಗೆ ಮರಳುತ್ತಾಳೆ.

ಇದನ್ನೂ ಓದಿ : ಅಚ್ಚಿಗೂ ಮೊದಲು : ‘ಅನಾರ್ಕಲಿಯ ಸೇಫ್ಟಿ ಪಿನ್​‘ ಬಿಡಿಸಿಕೊಂಡು ಬಂದ ‘ಎವರ್​ಗ್ರೀನ್​‘ನ ಒಂದು ಎಸಳು

Published On - 5:43 pm, Sat, 21 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ