Literature : ಅಭಿಜ್ಞಾನ : ಅವಳು ಮುಟ್ಟಿದ ಅನ್ನ ಊಟ ಮಾಡಕೂಡದೆಂಬುದು ಅವನ ಗಮನಕ್ಕೆ ಬಂದಿರಲಿಲ್ಲ

sarat chandra chattopadhyay : ಇನ್ನು ಚಂದ್ರನಾಥನಿಂದ ತಡೆಯಲಾಗಲಿಲ್ಲ. ಅವನು ಕೂಡಲೆ ಎರಡು ಕೈಗಳನ್ನೂ ಚಾಚಿ ಅವಳನ್ನು ಹಿಡಿದುಕೊಂಡು ಎದೆಗಪ್ಪಿ ಹೇಳಿದ “ಅವಳಿಗೇ ಕೊಟ್ಟಿದ್ದೇನಲ್ಲ ಸರಯೂ! ನನಗೆ ಇಬ್ಬರು ಹೆಂಡತಿಯರಿಲ್ಲ. ಇರುವವಳು ಒಬ್ಬಳೇ, ಅವಳು ಹಳಬಳಲ್ಲ, ಯಾವಾಗಲೂ ಅವಳು ಹೊಸಬಳಾಗುತ್ತಾಳೆ.’’

Literature : ಅಭಿಜ್ಞಾನ : ಅವಳು ಮುಟ್ಟಿದ ಅನ್ನ ಊಟ ಮಾಡಕೂಡದೆಂಬುದು ಅವನ ಗಮನಕ್ಕೆ ಬಂದಿರಲಿಲ್ಲ
ಬೆಂಗಾಲಿ ಲೇಖಕ ಶರತ್ಚಂದ್ರ ಚಟ್ಟೋಪಾಧ್ಯಾಯ
Follow us
ಶ್ರೀದೇವಿ ಕಳಸದ
|

Updated on:Jan 08, 2022 | 1:58 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿಯ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಬಂಗಾಳಿ ಲೇಖಕ ಶರತ್ಚಂದ್ರ ಚಟ್ಟೋಪಾಧ್ಯಾಯ ಅವರ ‘ಚಂದ್ರನಾಥ’ ಕಾದಂಬರಿಯ ಆಯ್ದ ಭಾಗ. ಅನುವಾದಿಸಿದವರು ಡಾ. ಎಚ್. ಕೆ. ವೇದವ್ಯಾಸಾಚಾರ್ಯ.

*

ಸರಯೂ ಅವನ ಎದೆಯ ಮೇಲೆ ಕೈಯಿಟ್ಟು ಕೇಳಿದಳು- ‘‘ಮೈಯಲ್ಲಿ ನಿಶ್ಯಕ್ತಿ ಎಂದು ತೋರುತ್ತೆ. ಖಾಯಿಲೆಯಾಗಿತ್ತೇ ?”

“ಇಲ್ಲ, ಖಾಯಿಲೆಯೇನೂ ಇರಲಿಲ್ಲ!”

(“ಹಾಗಾದರೆ ಬಹಳ ಕೊರಗನ್ನು ಹಚ್ಚಿಕೊಂಡಿದ್ದಿರೇನು?” ಚಂದ್ರನಾಥ ಅವಳ ಮುಖವನ್ನು ನೋಡಿ ಹೇಳಿದ- “ ನಿನಗೆ ಹೇಗೆ ಅನಿಸುತ್ತದೆ?)

ಸರಯೂ ಇದಕ್ಕೆ ಉತ್ತರ ಕೊಡದೆ ಬೇರೆ ಮಾತು ತೆಗೆದು

‘‘ಏಳಿ ಸ್ನಾನಮಾಡಿ ಹೊತ್ತಾಯಿತು” ಎಂದಳು

‘‘ಮನೆಯ ಯಜಮಾನರೆಲ್ಲಿ ?” ಚಂದ್ರನಾಥ ಕೇಳಿದ.

“ ಅವರಿವತ್ತು ವಿಶ್ವನಾಥನ ಪೂಜೆಗೆ ಹೋಗಿದ್ದಾರೆ. ಸಂಜೆಯಾದ ಮೇಲೆ ಬರುತ್ತಾರೆಂದು ತೋರುತ್ತೆ.

“ನೀನು ಅವರನ್ನು ಏನೆಂದು ಕರೆಯುತ್ತೀ?

“ಯಾವಾಗಲೂ ದೊಡ್ಡಪ್ಪನೆಂದು ಕರೆಯುತ್ತಿದ್ದೆ. ಈಗಲೂ ಹಾಗೇ ಕರೆಯುತ್ತೇನೆ.’’

ಚಂದ್ರನಾಥ ಮತ್ತೇನೂ ಕೇಳಲಿಲ್ಲ.

“ ಜೊತೆಗೆ ಇನ್ನಾರು ಬಂದಿದ್ದಾರೆ?” ಸರಯೂ ಕೇಳಿದಳು.

“ಹರಿ, ಮಧು, ಇಬ್ಬರು ಆಳುಗಳು ಬಂದಿದ್ದಾರೆ. ಅವರನ್ನು ಪೋಸ್ಟಾಫೀಸಿನ ಬಳಿ ಇರುವಂತೆ ಹೇಳಿ ಬಂದಿದ್ದೇನೆ. ”

“ ಅವರನ್ನು ಇಲ್ಲಿಯವರೆಗೂ ಕರೆತರುವಷ್ಟು ಧೈರ್ಯವಾಗಲಿಲ್ಲವೇ?”

ಚಂದ್ರನಾಥ ಇದಕ್ಕೇನೂ ಉತ್ತರ ಕೊಡಲಿಲ್ಲ. ಅವನು ಊಟಕ್ಕೆ ಕುಳಿತಾಗ ಎದುರಿಗೆ ಪೂರಿಯ ತಟ್ಟೆಯನ್ನು ನೋಡಿ ಆಶ್ಚರ್ಯಪಟ್ಟು, ಅದನ್ನೊಂದು ಕಡೆಗೆ ತಳ್ಳಿ ಕೇಳಿದ- “ಇದೇನಿದು? ನೀನು ವಿಶ್ವಾಸ ತೋರಿಸುತ್ತಿದ್ದೀಯೋ? ಹಾಸ್ಯ ಮಾಡುತ್ತಿದ್ದೀಯೋ?”

“ಏಕೆ ತಿನ್ನುವುದಿಲ್ಲವೇ? ” ಸರಯೂ ಬಾಡಿದ ಮುಖದಿಂದ ಕೇಳಿದಳು.

“ನಾನು ಯಾವಾಗಲೂ ಮಧ್ಯಾನ್ನದ ಹೊತ್ತಿನಲ್ಲಿ ಪೂರೀ ತಿನ್ನುತ್ತೇನೆಯೇ? ” ಚಂದ್ರನಾಥ ಸ್ವಲ್ಪ ಹೊತ್ತು ಅವಳ ಮುಖವನ್ನು ನೋಡುತ್ತಾ ಕೇಳಿದ.

ಸರಯೂ ಮನಸ್ಸಿನಲ್ಲೇ ದುಃಖಪಟ್ಟು ಸುಮ್ಮನಾದಳು.

“ಇವತ್ತೇ ಮೊದಲು ನೀನು ಬಡಿಸುತ್ತಿಲ್ಲ. ನಾನೇನು ಊಟ ಮಾಡುತ್ತೇನೆಂಬುದೂ ನಿನಗೆ ಮರೆತಿರಲಾರದು.

ಸರಯೂಳ ಕಣ್ಣಲ್ಲಿ ನೀರೂರಿತು. ಈಗ ಆ ದಿನಗಳು ಕಳೆದು ಹೋದುವು, ಬಹಳದೂರ ಹೋಯಿತೆಂದು ಅವಳು ಯೋಚಿಸಿ ಹೇಳಿದಳು- “ಊಟ ಮಾಡುತ್ತೀರಿ? ಆದರೆ….”

“ ಆದರೇನು, ಆರಿಹೋಗಿದೆಯೇ ?”

ಇಲ್ಲ. ಆರಿಲ್ಲ. ನಾನು ಇಲ್ಲೂ ಅಡಿಗೆ ಮಾಡುತ್ತೇನೆ. ”

“ಮನೆಯಲ್ಲೂ ಮಾಡುತ್ತಿದ್ದಿ”

“ನಾನು ಮಾಡಿದ ಅಡಿಗೆಯನ್ನು ನೀವು ಊಟ ಮಾಡುತ್ತೀರಾ?” ಸರಯೂ ಸ್ವಲ್ಪ ತಡೆದು ಕೇಳಿದಳು.

ಚಂದ್ರನಾಥ ತಲೆ ತಗ್ಗಿಸಿದ. ಅವಳೀಗ ಪರಕೀಯಳು. ಅವಳು ಮುಟ್ಟಿದ ಅನ್ನ ಊಟ ಮಾಡಕೂಡದೆಂಬುದು ಅವನ ಗಮನಕ್ಕೆ ಬಂದಿರಲಿಲ್ಲ. ಆದರೆ ಸರಯೂಳ ಮಾತಿನಲ್ಲಿ ಒಂದು ಜ್ವಾಲೆ ಇತ್ತು. ಅವನು ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ ನಿಧಾನವಾಗಿ ಹೇಳಿದ- “ಸರಯೂ, ಈ ಮಧ್ಯಾನ್ಹದ ಹೊತ್ತಿನಲ್ಲಿ ನನ್ನ ಕಣ್ಣಿನಲ್ಲಿ ನೀರನ್ನು ನೋಡದ ಹೊರತು ನಿನಗೆ ಸಮಾಧಾನವಿಲ್ಲೇನು?”

“ಸರಿ. ಹಾಗಾದರೆ ನಾನೀಗಲೇ ತರುತ್ತೇನೆ.” ಸರಯೂ ಗಡಿಬಿಡಿಯಿಂದ ಎದ್ದು ಹೇಳಿದಳು.

ಅವಳು ಅಡಿಗೆ ಮನೆಗೆ ಹೋಗಿ ಬಹಳ ಅತ್ತಳು. ಆಮೇಲೆ ಕಣ್ಣೊರೆಸಿಕೊಂಡು ನೀರಿನಿಂದ ಮುಖ ತೊಳೆದುಕೊಂಡಳು. ಆದರೂ ಕಣ್ಣೀರನ್ನು ತಡೆಯಲಾಗಲಿಲ್ಲ. ಮತ್ತೆ ಮತ್ತೆ ಕಣ್ಣೊರೆಸಿಕೊಳ್ಳುತ್ತಿದ್ದಳು. ಆದರೆ ಸಮಾಧಾನಕ್ಕೆ ಬರುತ್ತಿರಲಿಲ್ಲ. ಗಂಡ ಹಸಿದು ಕುಳಿತಿದ್ದಾನೆಂದು ಯೋಚಿಸಿ ಅವಳು ಅನ್ನದ ತಟ್ಟೆಯನ್ನು ತೆಗೆದುಕೊಂಡು ಎದುರಿಗೆ ಬಂದಳು. ಬಹುದಿನಗಳ ಹಿಂದೆ ಹತ್ತಿರ ಕುಳಿತು ಜೋಕೆಯಿಂದ ಬಡಿಸುತ್ತಿದ್ದಂತೆ, ಇಂದೂ ಬಹಳ ಹತ್ತಿರದಿಂದ ಬಡಿಸಹತ್ತಿದಳು. ಅವನ ಊಟವಾದ ಮೇಲೆ ಆ ಎಂಜಲು ತಟ್ಟೆಯನ್ನು ತೆಗೆದುಕೊಂಡು ಇನ್ನೊಮ್ಮೆ ಚೆನ್ನಾಗಿ ಅಳುವುದಕ್ಕೆ ಒಳಕ್ಕೆ ಹೋದಳು.

ಮಧ್ಯಾಹ್ನ ಎರಡು ಬಡಿಯಿತು. ಚಂದ್ರನಾಥನ ತೊಡೆಯ ಮೇಲೆ ವಿಶೂ ಹಾಯಾಗಿ ಮಲಗಿದ್ದ. ಅಷ್ಟರಲ್ಲೇ ಸರಯೂ ಬಂದಳು. ಕೆಲಸವೆಲ್ಲ ಆಯಿತೇ?

“ಕೆಲಸವೇನೂ ಇರಲಿಲ್ಲ. ಇನ್ನೂ ದೊಡ್ಡಪ್ಪ ಬಂದಿಲ್ಲ.”

ಆಮೇಲೆ ಸರಯೂ ಸಂಸಾರದ ವಿಷಯ ತೆಗೆದಳು. ತನ್ನ ಮನೆಯ ಒಂದೊಂದು ಕೋಣೆ, ಒಂದೊಂದು ಸಾಮಾನು, ಅತ್ತೆ-ಮಾವ, ಆಳು ಕಾಳುಗಳು, ಸಖೀ ಹರಿಬಾಲ, ನೆರೆಹೊರೆಯವರೆಲ್ಲರ ವಿಚಾರ ಕೇಳಿದಳು. ಈ ಮಾತಾಡುವಾಗ ಸರಯೂಗೆ ಏನು ಲಾಭವೆಂದಾಗಲಿ ಇದನ್ನೆಲ್ಲ ಹೇಳಲು ಚಂದ್ರನಾಥನಿಗೆ ಕಷ್ಟ, ಲಜ್ಜೆ, ವಿಷಾದ, ಸಂಕೋಚವಾಗುತ್ತಲ್ಲ ಎಂಬುದಾಗಲೀ ಇಬ್ಬರಲ್ಲಿ ಯಾರಿಗೂ ತೋರಲಿಲ್ಲ. ಅವಳು ಕುತೂಹಲದಿಂದ ಪ್ರಶ್ನೆ ಕೇಳುತ್ತಿದ್ದಳು. ಅವನು ಉತ್ಸಾಹದಿಂದ ಉತ್ತರ ಹೇಳುತ್ತಿದ್ದ. ಇಬ್ಬರ ಸ್ನೇಹಿತರು ಬಹಳ ದಿನಗಳಾದ ಮೇಲೆ ಸೇರಿದಂತೆ ಅವರು ವರ್ತಿಸುತ್ತಿದ್ದರು.

Abhijnana excerpt of Chandranatha Novel by Sarat chandra Chattopadhyay Translated by Dr HK Vedavyasacharya Published by DVK Murthy

1949ರಲ್ಲಿ ಪ್ರಕಟವಾದ ಕನ್ನಡ ಅನುವಾದ

‘‘ನೀವೆಲ್ಲಿ ಮದುವೆ ಮಾಡಿಕೊಂಡಿರಿ?” ಸರಯೂ ಇದ್ದಕಿದ್ದಂತೆ ಕೇಳಿದಳು. ಇದೊಂದು ಹಾಸ್ಯವಾದ ಮಾತಿನಂತೆ ತೋರಿತು. ಪಶ್ಚಿಮದ ಕಡೆ” ಚಂದ್ರನಾಥ ಹೇಳಿದ.

‘‘ನಿನ್ನ ಹಾಗೆ ಇದ್ದಾಳೆ.”

“ಹುಡುಗಿ ಹೇಗಿದ್ದಾಳೆ?”

ಇದರಿಂದ ಸರಯೂಳ ಮನಸ್ಸಿಗೆ ಕಷ್ಟವಾಯಿತು. ಅವಳಿಗೆ ಸಮಾಧಾನವಾಗಲಿಲ್ಲ. ಕುಳಿತಿದ್ದವಳು ಮಲಗಿಬಿಟ್ಟಳು. ಅವಳ ಮುಖದ ಬಣ್ಣವೇ ಇಳಿದುಹೋಯಿತು.

ಚಂದ್ರನಾಥ ಮಂಚದಿಂದ ಕೆಳಗಿಳಿದು ಹತ್ತಿರ ಹೋಗಿ ಅವಳನ್ನು ಕೈಹಿಡಿದು ಎಬ್ಬಿಸುವ ಪ್ರಯತ್ನ ಮಾಡಿದ. ಆದರೆ ಸರಯೂ ಬಹಳ ದಣಿದುಹೋಗಿದ್ದಳು. ಅವಳ ತಲೆಯನ್ನು ತನ್ನ ತೊಡೆಯಮೇಲಿಟ್ಟು ಕೊಂಡು ಕಣ್ಣೀರಿಡುತ್ತಾ ಸರಯೂ, ಸರಯೂ’ ಎಂದು ಚಂದ್ರನಾಥ ಕೂಗಿದ.

ಸರಯೂ ಕಣ್ಣುಬಿಟ್ಟು ಗಂಡನ ಮುಖನೋಡಿ, ಮತ್ತೆ ಕಣ್ಣು ಮುಚ್ಚಿದಳು. ಅವಳ ತುಟಿ ಅದುರಿತು. ಅವಳೇನೋ ಹೇಳಿದಳು, ಒಂದೂ ಅರ್ಥವಾಗಲಿಲ್ಲ. ಚಂದ್ರನಾಥ ಬಹಳ ಭಯದಿಂದ ನೀರು ತನ್ನಿರೆಂದು ಕೂಗಿದ. ಲಖಿಯಳ ತಾಯಿ ಹತ್ತಿರದಲ್ಲೇ ಇದ್ದಳು. ಅವಳು ನೀರು ತಂದಳು. ಆದರೆ ಗಾಬರಿಯನ್ನೇನೂ ತೋರಿಸಲಿಲ್ಲ. “ಬಾಬು ಸ್ವಲ್ಪ ಹೊತ್ತಿನಲ್ಲೇ ಸರಿ ಹೋಗುತ್ತೆ. ಅವರಿಗೆ ಆಗಾಗ್ಗೆ ಹೀಗೆ ಆಗುತ್ತಿರುತ್ತೆ” ಎಂದು ಅವಳು ಹೇಳಿದಳು.

ಸರಯೂಳ ಮುಖಕ್ಕೆ ನೀರು ಚಿಮುಕಿಸಿ, ಗಾಳಿ ಹಾಕಿದ. ವಿಶೂ ಒಮ್ಮೆ ಬಂದು ಅವಳ ಸೀರೆ ಕೂದಲನ್ನೆಲ್ಲ ಕಿತ್ತಿ ಅಮ್ಮ’ ಎಂದು ಕೂಗಿದ.

ಸರಯೂಗೆ ಎಚ್ಚರವಾಯಿತು. ಅವಳು ನಾಚಿಕೆಯಿಂದ ಎದ್ದು ತಲೆಯ ಮೇಲೆ ಸೆರಗು ಹೊದೆದುಕೊಂಡು ಕುಳಿತಳು. ಲಖಿಯಳ ತಾಯಿ ಮತ್ತೆ ತನ್ನ ಕೆಲಸಕ್ಕೆ ಮರಳಿದಳು. ಚಂದ್ರನಾಥನ ಮುಖ ಭಯದಿಂದ ಕಪ್ಪಿಟ್ಟಿತ್ತು.

ಸರಯೂ ಬಹಳ ಸೂಕ್ಷ್ಮವಾಗಿ, ಮಧುರವಾಗಿ ನಕ್ಕು ಹೇಳಿದಳು “ಏಕೆ ಹೆದರಿಬಿಟ್ಟಿರಾ? ”

ಕಣ್ಣಿನಲ್ಲಿ ನೀರೂರಿ, ಒಂದೆರಡು ತೊಟ್ಟು ಹೊರ ಹೊರಳಿತು. ಅವನದನ್ನು ಕೈಯಿಂದ ಒರೆಸುತ್ತಾ “ ಸರಿ, ಎಲ್ಲ ಮುಗಿದು ಹೋಯಿತೆಂದೇ ನಾನು ತಿಳಿದಿದ್ದೆ” ಎಂದ.

ಗಂಡನ ತೊಡೆಯಮೇಲೆ ತನ್ನ ತಲೆ ಇದ್ದಾಗ ಹೀಗಾಗುವ ಭಾಗ್ಯ ತನ್ನ ಹಣೆಯಲ್ಲಿ ಬರೆದಿದೆಯೆಂದು ಸರಯೂ ಮನಸ್ಸಿನಲ್ಲೇ ಅಂದುಕೊಂಡು ಬಾಯಲ್ಲಿ “ನನಗೆ ಆಗಾಗ್ಗೆ ಹೀಗೇ ಆಗುತ್ತಿರುತ್ತೆ” ಎಂದಳು.

“ಅದೇನೋ ನೋಡಿದೆನಲ್ಲ. ಮೊದಲು ಹೀಗಾಗುತ್ತಿರಲಿಲ್ಲ. ಈಚೆಗೆ ಹೀಗಾಗುತ್ತಿದೆ ” ಎಂದು ಚಂದ್ರನಾಥ ಬಹಳ ಹೊತ್ತು ಮೌನವಾಗಿದ್ದ ಆಮೇಲೆ ಜೇಬಿನಿಂದ ತುಕ್ಕು ಹಿಡಿದ ಒಂದು ಬೀಗದ ಕೈಗೊಂಚಲನ್ನು ತೆಗೆದು ಸರಯೂಳ ಸೆರಗಿಗೆ ಕಟ್ಟಿ ಹೇಳಿದ. “ತೆಗೆದುಕೊ ನಿನ್ನ ಬೀಗದ ಕೈ ಗೊಂಚಲು. ನನ್ನ ವಶಕ್ಕೆ ಕೊಟ್ಟು ಬಂದಿದ್ದೆ. ಈಗ ಅದನ್ನು ನಿನಗೆ ವಾಪಸು ಕೊಟ್ಟಿದ್ದೇನೆ. ಇದನ್ನು ಯಾವಾಗಲಾದರೂ ಉಪಯೋಗಿಸಿತ್ತೇ? …ನೋಡು.”

ಆ ಬೀಗದ ಕೈಗೊಂಚಲು ತುಕ್ಕು ಹಿಡಿದದ್ದರಿಂದ ಬಹಳ ಕೊಳಕಾಗಿತ್ತು. ಅವಳದನ್ನು ಕೈಯಲ್ಲಿ ತೆಗೆದುಕೊಂಡು ಈ ಇದನ್ನು ಅವಳಿಗೇಕೆ ಕೊಡಲಿಲ್ಲ?” ಎಂದು ಕೇಳಿದಳು.

ಚಂದ್ರನಾಥನ ಬಾಡಿದ ಮುಖದಲ್ಲಿ ಅಕೃತ್ರಿಮ ಹಾಸ್ಯದ ರೇಖೆಯೊಂದು ಮೂಡಿತು. ಅವನ ಕಣ್ಣುಗಳೆರಡೂ ಸ್ನೇಹದಿಂದ ತೇವವಾದವು. ಆದರೂ ಅವನು ಸಮಾಧಾನದಿಂದ “ಅವಳಿಗೆ ಕೊಟ್ಟಿದ್ದೇನಲ್ಲ ಸರಯೂ!” ಎಂದು ಹೇಳಿದ.

ಸರಯೂಗೆ ಸರಿಯಾಗಿ ಅರ್ಥವಾಗಲಿಲ್ಲ.

ಸ್ವಲ್ಪ ಹೊತ್ತು ಸಂಶಯ ದೃಷ್ಟಿಯಿಂದ ಗಂಡನ ಮುಖವನ್ನು ನೋಡುತ್ತಿದ್ದು ಕೋಮಲ ಸ್ವರದಲ್ಲಿ ಹೇಳಿದಳು- “ನಾನು ಹೊಸ ಹೆಂಡತಿಯ ಮಾತನ್ನು ಹೇಳುತ್ತಿದ್ದೇನೆ. ನಿಮ್ಮ ಎರಡನೆಯ ಹೆಂಡತಿಗೇಕೆ ಕೊಡಲಿಲ್ಲ?”

ಇನ್ನು ಚಂದ್ರನಾಥನಿಂದ ತಡೆಯಲಾಗಲಿಲ್ಲ. ಅವನು ಕೂಡಲೆ ಎರಡು ಕೈಗಳನ್ನೂ ಚಾಚಿ ಅವಳನ್ನು ಹಿಡಿದುಕೊಂಡು ಎದೆಗಪ್ಪಿ ಹೇಳಿದ “ಅವಳಿಗೇ ಕೊಟ್ಟಿದ್ದೇನಲ್ಲ ಸರಯೂ! ನನಗೆ ಇಬ್ಬರು ಹೆಂಡತಿಯರಿಲ್ಲ. ಇರುವವಳು ಒಬ್ಬಳೇ, ಅವಳು ಹಳಬಳಲ್ಲ, ಯಾವಾಗಲೂ ಅವಳು ಹೊಸಬಳಾಗುತ್ತಾಳೆ. ಅವಳನ್ನು ವಿಶ್ವನಾಥದೇವರ ಪ್ರಸಾದ- ಪುಷ್ಪದಂತೆ ನಾನು ಇಲ್ಲಿಂದ ಸ್ವೀಕರಿಸಿಹೋದಂದು ಅವಳೆಷ್ಟು ನೂತನವಾಗಿದ್ದಳೋ, ಇಂದು ವಿಶ್ವನಾಥನ ಚರಣ ಸನ್ನಿಧಿಯಿಂದ ಕರೆದೊಯ್ಯಲು ಬಂದಿರುವ ದಿನವೂ, ಅವಳಷ್ಟೇ ನೂತನಳಾಗಿದ್ದಾಳೆ.

ಸೌಜನ್ಯ : ಡಿವಿಕೆ ಮೂರ್ತಿ, ಮೈಸೂರು

ಇದನ್ನೂ ಓದಿ : Chinghiz Aitmatova : ಅಭಿಜ್ಞಾನ ; ನಾನು ನೋಡುತ್ತಿದ್ದ ಮತ್ತು ಕೇಳುತ್ತಿದ್ದ ಎಲ್ಲದರಲ್ಲೂ ಅವನ ಹಾಡಿರುತ್ತಿತ್ತು

Published On - 1:50 pm, Sat, 8 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ