New Novel : ಅಚ್ಚಿಗೂ ಮೊದಲು ; ಕಾದಂಬರಿಕಾರ ಗುರುಪ್ರಸಾದ ಕಾಗಿನೆಲೆಯವರ ‘ಕಾಯಾ‘ ನಾಳೆ ಬಿಡುಗಡೆ
Sound Body Sound Mind : ‘ದೇಹದಲ್ಲಿದ್ದ ಎಲ್ಲ ಕೊಬ್ಬೂ ಕರಗಿಹೋಗಿ ನಾನು ಜೋಲಾಡುತ್ತಿದ್ದೇನೆ. ಮೂರೂ ಮಕ್ಕಳಿಗೂ ನಾಲ್ಕು ವರ್ಷದ ತನಕ ಹಾಲು ಕುಡಿಸಿರುವ ಮೊಲೆಗಳಿವು. ಇಷ್ಟಿರೋದೇ ಹೆಚ್ಚು. ನನ್ನ ಗುರುತ್ವಕೇಂದ್ರವೇ ಏರುಪೇರಾಗಿದೆ. ನನ್ನ ಶಕ್ತಿಚಕ್ರ ಸರಿಹೋಗಬೇಕಾದಲ್ಲಿ ನನ್ನ ಮೈ ಅನುಪಾತ ಪ್ರಮಾಣಬದ್ಧವಾಗಿರಬೇಕು. ಗೊತ್ತಲ್ಲ ಸೌಂಡ್ ಬಾಡಿ, ಸೌಂಡ್ ಮೈಂಡ್' ಎಂದು ಮಲೀಕನಿಗೇ ಇಷ್ಟುದ್ದಾ ಉಪದೇಶ ಮಾಡಿದ್ದಳು.’
New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಕೃತಿ : ಕಾಯಾ (ಕಾದಂಬರಿ) ಲೇಖಕರು : ಡಾ. ಗುರುಪ್ರಸಾದ ಕಾಗಿನೆಲೆ ಪುಟ : 344 ಬೆಲೆ : ರೂ. 350 ಮುಖಪುಟ ವಿನ್ಯಾಸ : ಸೌಮ್ಯ ಕಲ್ಯಾಣಕರ್ ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು
ಕಥೆಗಾರ, ಕಾದಂಬರಿಕಾರ ಡಾ. ಗುರುಪ್ರಸಾದ್ ಕಾಗಿನೆಲೆ ಅವರು ಮಿನೆಸೊಟಾದ ರಾಚೆಸ್ಟರ್‌ನಲ್ಲಿ ವಾಸವಾಗಿದ್ದು, ನಾರ್ತ್ ಮೆಮೊರಿಯಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ನಾಲ್ಕನೇ ಕಾದಂಬರಿ ‘ಕಾಯಾ’ ಮತ್ತು ಕಥಾಸಂಕಲನ ‘ಲೋಲ’ ನಾಳೆ ಭಾನುವಾರ (ಸೆ.12) ಬಿಡುಗಡೆಯಾಗಲಿವೆ.
ನಾವು ನಮ್ಮನ್ನು ಜಗತ್ತಿಗೆ ಅಭಿವ್ಯಕ್ತಿಸಿಕೊಳ್ಳುವುದು ನಮ್ಮ ದೇಹದಿಂದ. ನಮ್ಮ ದೇಹದ ಸೌಂದರ್ಯ ನಮ್ಮ ದೇಹವನ್ನು ಈ ಜಗತ್ತಿಗೆ ಪ್ರಸ್ತುತಿಪಡಿಸಿಕೊಳ್ಳುವುದಕ್ಕೆ, ಪ್ರಚುರಪಡಿಸಿಕೊಳ್ಳುವುದಕ್ಕೆ ಮಾತ್ರ ಬೇಕೋ ಅಥವಾ ಆ ಸೌಂದರ್ಯವೇನೆಂದು ನಾವು ನಂಬಿದ್ದೇವೋ ಅದನ್ನು ಪೋಷಿಸುವುದೇ ನಮ್ಮ ಕಾಯಕವಾದಲ್ಲಿ, ಅದು ನಮ್ಮ ಇರವು, ಅರಿವುಗಳನ್ನು ವಿವರಿಸಿದಲ್ಲಿ, ಅದೇ ದೇಹದ ಆರೈಕೆ, ಪೋಷಣೆ ಒಂದು ವ್ಯಸನವಾಗಬಹುದೇ, ಹಾಗಾದಲ್ಲಿ ಅದು ನಮ್ಮ ಇರವಿನ ಮೂಲವನ್ನೇ ಬದಲಿಸಬಹುದೇ-ಇವೇ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನನ್ನ ಪ್ರಯತ್ನದಲ್ಲಿ ನನಗೆ ದೊರಕಿದ್ದು ಶುದ್ಧಿ ಎಂಬ ಆಧ್ಯಾತ್ಮ. ಈ ಹುಡುಕಾಟಕ್ಕೆ ನನ್ನನ್ನು ನಾನು ತೊಡಗಿಸಿಕೊಳ್ಳಲು ಬಿಟ್ಟ ಈ ಕಾದಂಬರಿಯೆಂಬ ಪ್ರಕಾರಕ್ಕೆ ನಾನು ವಿನೀತನಾಗಿದ್ದೇನೆ. ಡಾ. ಗುರುಪ್ರಸಾದ ಕಾಗಿನೆಲೆ, ಕಾದಂಬರಿಕಾರರು
*
ಕುಚೋನ್ನತಿ
‘ತಾನು ಮುಳುಗುವುದಲ್ಲದೇ ತನ್ನ ಜತೆ ದೊಡ್ಡದೊಡ್ಡ ಕುಳಗಳನ್ನು ಕೂಡ ಮುಳುಗಿಸುತ್ತಾಳೆ ಈಕೆ’ ಅನಿಸಿಬಿಟ್ಟಿತ್ತು, ಮಲೀಕನಿಗೆ.
ಡಾ. ಭೀಮ್ ಮಲೀಕ್, ಪ್ಲಾಸ್ಟಿಕ್ ಸರ್ಜನ್, 114 ಈಸ್ಟ್ ಒಂಭತ್ತನೇ ಅವೆನ್ಯೂ, ನ್ಯೂಯಾರ್ಕ್, ನ್ಯೂಯಾರ್ಕ್ ಎಂಬ ವಿಳಾಸವಿದ್ದ ಬ್ರೆಂಡಾ ಸಿಗಾಲ್ ಎಂಬ ವಕೀಲೆಯ ಕಚೇರಿಯಿಂದ ಬಂದ ಬಿಳೀ ಓಲೆಯನ್ನು ಸಪೂರವಾಗಿ ತನ್ನ ಡೆಸ್ಕಿನ ಮೇಲಿದ್ದ ಲೋಹದ ಕಡ್ಡಿಯಿಂದ ಗೀರಿ ತೆರೆದಿದ್ದ, ಮಲೀಕ. ಒಳಗಿದ್ದ ಪತ್ರದಲ್ಲೇನಿರಬಹುದು ಎಂಬ ಅಂದಾಜಿದ್ದರೂ ಅಂತದ್ದೇನೂ ಇಲ್ಲದಿದ್ದರೂ ಇರಬಹುದೆಂಬುದೊಂಬ ಹಾರೈಕೆ ಮನಸಿನಾಳದಲ್ಲಿತ್ತು. ಲಕೋಟೆಯನ್ನು ಹರಿಯುವಾಗ ಕೊಂಚ ಕೈ ನಡುಗಿದಂತಾಗಿತ್ತು. ಮನಹಾಟನ್ನಿನ ಅತ್ಯುತ್ತಮ ಪ್ಲಾಸ್ಟಿಕ್ ಸರ್ಜನು ತಾನು, ತಾನೇಕೆ ಹೆದರಬೇಕು ಎಂದನ್ನಿಸಿ ಪತ್ರವನ್ನು ತೆರೆದು ಓದಿದ್ದ.
ಈತ ಆಪರೇಷನ್ ಮಾಡಿದ ಲಾಂಗ್ ಐಲಂಡಿನ ಲೀಸಾ ಸಾಲಿಂಜರ್ ಎಂಬ ನಲವತ್ತಾರು ವರ್ಷದ ಮೂರು ಮಕ್ಕಳ ತಾಯಿ ತನ್ನ ಸ್ತನಗಳು ಈತ ಭರವಸಿಸಿದ ಮಟ್ಟಕ್ಕೆ ದುಂಡಾಗಿಲ್ಲವೆಂದೂ, ಸಮರೂಪ ಇಲ್ಲವೆಂದೂ, ಬ್ರಾ ಹಾಕದೇ ಜಾಗ್ ಮಾಡಿದರೂ ತೊನೆದಾಡುವುದಿಲ್ಲವೆಂದೂ ಇವನ ಮೇಲೆ ಕೇಸು ಹಾಕಿದ್ದಳು. ಕೊನೆಯ ಅಂಶ ಮಲೀಕನಂತ ಮಲೀಕನಿಗೂ ಸರಿಯಾಗಿ ಅರ್ಥವಾಗಲಿಲ್ಲ. ಈ ಬ್ರಾ ಹಾಕದೇ ಓಡಿದರೂ ತೊನೆದಾಡುವುದಿಲ್ಲವೆಂದರೇನೆಂದು ಕೊಂಚ ಗೊಂದಲಗೊಂಡ. ತನ್ನದು ಕಸ್ಟಮ್ ಆರ್ಡರ್ ಕೆಲಸ. ತೊನೆದಾಡಬೇಕೆಂದರೆ ತೊನೆದಾಡಿಸುತ್ತೇನೆ. ಬೇಡವೆಂದರೆ ಇಲ್ಲ. ಆಕಾರವೂ ಅಷ್ಟೇ; ಗೋಲ, ಅಂಡ ಬೇಕಿದ್ದರೆ ಚಚ್ಚೌಕ; ಹಾಗೇ ಊಧ್ರ್ವ, ನಿಮ್ನ, ಎಡ, ಬಲ, ಆಗ್ನೇಯೀಷಾನ್ಯ, ವಾಯುವ್ಯ ನೈಋತ್ಯಾದಿ ದಶದಿಕ್ಕುಗಿಳಿಗೂ ಮುಖಾಮುಖಿಯಾಗುವ ಪೆಡಸು, ಉರುಟು, ಮೃದುಕುಸುಮದ ಬಿಸುಪಿರುವ ತುದಿಗಳು, ಅವುಗಳ ಬಣ್ಣವೋ ಕೆಂಪು, ಕಂದು, ಕಡುಕಪ್ಪು, ನೇರಳೇ- ಹೀಗೆ ಹೋಟೆಲಿನ ಮೆನುಕಾರ್ಡಿನಲ್ಲಿದ್ದ ಹಾಗೆ ಆರ್ಡರು ಮಾಡಬಹುದಿತ್ತು ಮಲೀಕನ ಕ್ಲಿನಿಕ್ಕಿನಲ್ಲಿ. ಅಂತದ್ದರಲ್ಲಿ ಈಕೆ ಬಯಸಿದ್ದು ಸಿಗಲಿಲ್ಲವೇ? ಈತನ ನೆನಪಿನಲ್ಲಿದುದೇನೆಂದರೆ ಈಕೆ ಕೇಳಿದ್ದು ಸುಸ್ಥಿರ, ಅಚಲ, ವಿಗ್ರಹಕ್ಕಿರುವಂತ ಬಂಡೆಮೊಲೆಗಳು. ಈಗ ತೊನೆದಾಡುವುದಿಲ್ಲವೆಂದರೆ.
ನಂತರದ ಭಾಗ ಇದಕ್ಕಿಂತ ಹೆದರಿಸಿದ್ದರಿಂದ ಈ ತೊನೆದಾಟ, ಕುಣಿದಾಟವನ್ನು ನಂತರ ಅರ್ಥ ಮಾಡಿಕೊಳ್ಳೋಣ ಎಂದು ಮುಂದುವರೆದು ಓದಿದ.
ತಾನು ಇನ್ನೂ ಅರಿವಳಿಕೆ ಮದ್ದಿನ ಮಂಪರಿನಲ್ಲಿದ್ದಾಗ ತನ್ನ ಸಿಲಿಕಾನು ಭರಿತ ಹೊಚ್ಚಹೊಸಾ ಸ್ತನಗಳನ್ನು ಪರೀಕ್ಷಿಸುವ ನೆವದಲ್ಲಿ ಮತ್ತೆ ಮತ್ತೆ ಮುಟ್ಟಿನೋಡಿ ಆ ಸ್ಪರ್ಶ ಒಂದು ಘಟ್ಟದಲ್ಲಿ ಅಸಭ್ಯ ಎನ್ನುವ ಮಟ್ಟಿಗೆ ಹೋಗಿತ್ತು ಎಂದು ಮಿಟೂ ಮಟ್ಟಿನ ದೂರಿತ್ತಿದ್ದಳು. ‘ಮುಟ್ಟದೇ ಅಳೆಯದೇ ನಿಖರವಾದ ಮೂವತ್ತಾರಳತೆಯ ಸಿಲಿಕಾನನ್ನು ಅಂತಹ ಸಡಿಲ ಚರ್ಮದ ಚೀಲದೊಳಗೆ ಅನುಸರಿಸಿಡುವುದು ಹೇಗೆ? ಕೇಳಿದ ಅಳತೆಗೆ ಮಾಡಿಕೊಟ್ಟಿದ್ದಕ್ಕೆ ತಾನೆ ಅವು ಇರೋ ಜಾಗದಲ್ಲಿ ಭದ್ರವಾಗಿ ಕೂತಿರುವುದು? ತೊನೆದಾಡಬೇಕು ಎಂದರೆ ಗಾತ್ರ ಕೊಂಚ ಕಮ್ಮಿ ಆಗಬೇಕು ಅಥವಾ ಇನ್ನೊಂದು ಆಪರೇಷನ್ ಮಾಡಿ ಹೊರಗಿನ ಚರ್ಮದ ಚೀಲವನ್ನು ಹಿಗ್ಗಿಸಬೇಕು. ಅದನ್ನೂ ಮುಟ್ಟದೇ ಹಿಗ್ಗಿಸುವುದು ಹೇಗೆ?’ ಎಂದು ಮನದಲ್ಲಿ ಬಯ್ದುಕೊಂಡು ತನ್ನ ಲಾಯರ್ ಸಿದ್ದಿಕಿಗೆ ಫೋನು ಮಾಡಿದ.
ಫೋನೆತ್ತಿದ ಸಿದ್ದಿಕಿ ‘ಡಾಕ್ಟರ್ ಸಾಬ್, ಅಸ್ಸಲಾಮ್ ವಾಲೇ ಖುಂ. ಇನ್ನೊಂದು ಕೇಸಾ? ನೀವು ಸುಮ್ಮನೆ ವಿವರಗಳನ್ನು ಕಳಿಸಿ. ನಾನು ನೋಡಿಕೊಳ್ಳುತ್ತೀನಿ’ ಎಂದ. ‘ಇಲ್ಲಿ ವಿಷಯ ಕೊಂಚ ಕಿರಿಕಿರಿ ಇದೆ ಕಣಯ್ಯ. ಸುಮ್ಮಸುಮ್ಮನೆ ಎಲ್ಲೆಲ್ಲೋ ಮುಟ್ಟಿದೆ ಎಂದು ದೂರು ಕೊಟ್ಟಿದಾಳೆ.’ ಎಂದ.
‘ಡಾಕ್ಟರ್ ಸಾಬ್, ನೀವು ಹೇಳೀಕೇಳಿ ಪ್ಲಾಸ್ಟಿಕ್ ಸರ್ಜನು. ನೀವು ಮುಟ್ಟೋದೇ ಎಲ್ಲೆಲ್ಲೋ’ ಎಂದು ಕೆಟ್ಟ ಜೋಕು ಹೊಡೆದ. ‘ಸಿದ್ದಿಕಿ, ನಾನು ಕೆಲಸದಲ್ಲಿ ಎಂದೂ ಸಭ್ಯತೆಯ ಮಿತಿಯನ್ನು ಮೀರಿಲ್ಲ. ಫೋನಲ್ಲಿ ಮಾತಾಡಬೇಕಾದರೂ ಇಂಥ ವಿಷಯ ಮಾತಾಡಬೇಡ, ಅದೂ ಫೋನಲ್ಲಿ’ ಎಂದು ಒತ್ತಿಹೇಳಿದ.
‘ತಾವು ಹೇಳಿದ ಹಾಗೆ, ಮಾಲಿಕ್’ ಎಂದ, ನಾಟಕೀಯವಾಗಿ, ಸಿದ್ದಿಕಿ.
‘ನನ್ನ ಹೆಸರು ಮಲೀಕ್ ಕಣಯ್ಯ. ಸಾಯಿಬಾಬನ ಭಜನೆಯಲ್ಲಿ ಕೂಗೋ ಹಾಗೆ ಮಾಲಿಕ್ ಅಂತೀಯಲ್ಲ?’ ಎಂದು ಮತ್ತೊಮ್ಮೆ ಸಿಟ್ಟುಗಯ್ದ.
‘ತಾವು ಮಲೀಕ್ ಅದರೂ ಮಲಖೇಡ ಆದರೂ ನಮಗೆ ತಾವೇ ಮಾಲಿಕರು’ ಎಂದ, ಸಿದ್ದಿಕಿ.
‘ಆಹ, ಇದಕ್ಕೇನೂ ಕಮ್ಮಿಯಿಲ್ಲ. ಮೊದಲು ನಮ್ಮ ಕಡೆಯಿಂದ ಆಕೆಗೆ ಒಂದು ಸರಿಯಾದ ಉತ್ತರ ಕಳಿಸು. ಮತ್ತೆ ಈಗಿನ ಈ ಪುಟಗೋಸಿ ಮಾತುಕತೆಗೆ ಬಿಲ್ ಜಡೀಬೇಡ’ ಎಂದ.
‘ಅದೆಂಗಾಗುತ್ತೆ ಮಾಲಿಕ್, ವ್ಯವಹಾರ ಅಂದರೆ ವ್ಯವಹಾರ ಅಲ್ಲವಾ?’
‘ಎಷ್ಟು ನಿನ್ನ ಫೀಸು? ಈಗೇನಾದರೂ ಜಾಸ್ತಿ ಮಾಡಿದ್ದೀಯಾ, ಇಲ್ಲ ಮಾಮೂಲಿಯೋ?’
‘ಗಂಟೆಗೆ ಬರೇ ಏಳುನೂರು ಡಾಲರು, ಮಾಲೀಕ್. ಏನು ಮಾಡೋದು, ಹೊಟ್ಟೆಪಾಡು’ ಎಂದು ಹಲ್ಲುಹಲ್ಲುಗಿರಿದ.
‘ಥತ್ ಸೂಳೆಮಗನೇ. ನನಗೇ ರೇಟು ಹೇಳ್ತೀಯ, ನಾನ್ಕೊಡೋದು ನನ್ನ ಮಾಮೂಲಿ ಮಾತ್ರ. ಸುಮ್ಮನೆ ಇಸ್ಕೊ. ಈ ಕೇಸು ಇಲ್ಲಿಗೇ ನಿಂತರೆ ಸಿಂಗಲ್ ಮಾಲ್ಟ್ ಮನೇಗೆ ಕಳಿಸ್ತೀನಿ’ ಎಂದು ಫೋನಿಕ್ಕಿದ.
* ಸಿದ್ದಿಕಿಗೆ ಫೋನಿನಲ್ಲಿ ತಾನು ತನ್ನ ಕೆಲಸದಲ್ಲಿ ಎಂದೂ ಸಭ್ಯತೆಯ ಮಿತಿಯನ್ನು ಮೀರಿರಲಿಲ್ಲ ಎಂದು ಹೇಳಿದ್ದೇನೋ ಹೇಳಿದ್ದ. ನಂತರ ಒಂದು ಕ್ಷಣ ತಾನು ನಿಜ ಹೇಳುತ್ತಿದ್ದೇನೇ ಎದು ತನ್ನ ಬಗ್ಗೆಯೇ ಅನುಮಾನವಾಯಿತು. ಮಲೀಕನಿಗೆ ಕೋರ್ಟ್ ಕೇಸುಗಳೇನೂ ಹೊಸದಲ್ಲ. ಒಂದು ರೀತಿಯ ಔದ್ಯೋಗಿಕ ಅಪಾಯ. ತಾನು ಮಾಡುವುದೇ ಕುಸುರಿಕೆಲಸ. ಸೊಟ್ಟ ತುಟಿಗೆ ಕಾರ್ಟಿಲೇಜೆಂಬ ಮೃದ್ವಸ್ಥಿ, ಸುಕ್ಕು ಹಣೆಗೆ ಬೋಟಾಕ್ಸೆಂಬ ಸುಕ್ಕುಸಪಾಟು, ಬೊಜ್ಜಿಳಿಸಿದವರ ಹೆಚ್ಚುವರಿ ಚರ್ಮಸಪಾಟು, ಕತ್ತು, ಎದೆ, ಕಂಕುಳು, ತೊಡೆ, ಪೃಷ್ಠ ಎಲ್ಲೆಲ್ಲಿ ಚರ್ಮ ಜೋತಾಡುತ್ತಿದ್ದರೂ ಮಲೀಕನ ಚಾಕುವಿಗೆ ಮಣಿಯಲೇಬೇಕು. ಮಣಿಸುತ್ತಿದ್ದ. ಶತ ಪ್ರತಿಶತ ಪರಿಪೂರ್ಣತೆಯನ್ನು ಬಯಸುತ್ತಿತ್ತು ಅವನ ಕೆಲಸ. ತುಟಿಯ ಕೊಂಕು ಹೆಚ್ಚಾದಲ್ಲಿ, ನಕ್ಕಾಗ ಕೆನ್ನೆಯ ಗುಳಿಯ ಆಳ ಮಿಲಿಮೀಟರುಗಳಷ್ಟು ಹೆಚ್ಚುಕಮ್ಮಿಯಾಯಿತೆಂದು, ಹುಬ್ಬು ಹಾರಿಸಿದಾಗ ಹಣೆಯ ನೆರಿಗೆ ಒಪ್ಪಿತ ಸಂಖ್ಯೆಗಿಂತ ಹೆಚ್ಚಾಯಿತೆಂದು ಕೋರ್ಟಿಗೆ ಹೋದವರೆಷ್ಟೋ ಜನ. ಹಾಗಾಗಿ ಮಲೀಕ ಖಾಯಂ ಆಗಿ ಸಿದ್ದಿಕಿಯನ್ನು ತನ್ನ ಲಾಯರಾಗಿ ಇಟ್ಟುಕೊಂಡುಬಿಟ್ಟಿದ್ದ. ಎಂತದೇ ಸಣ್ಣ ಆಪರೇಷನ್ ಇದ್ದರೂ ಅದರಿಂದ ಆಗಬಹುದಾದ, ಆಗಬಾರದ, ಆಗಬೇಕಾದ ಅಡ್ಡ ಪರಿಣಾಮಗಳು-ಸೌಂದರ್ಯವರ್ಧನೆಯಿರಲಿ, ಮಲೀಕನ ಕೈಕೆಲಸದ ದೆಸೆಯಿಂದಲೇ ಕುರೂಪಿಯಾಗುವ ಸಂಭವನೀಯತೆಯನ್ನು ಕೂಡ ಬರೆದು ಅದಕ್ಕೆ ಸಹಿ ಹಾಕಿಸಿಕೊಂಡಿರುತ್ತಿದ್ದ, ಸಿದ್ದಿಕಿ. ಆದ್ದರಿಂದ ತನ್ನ ಕೆಲಸ ಸರಿಯಿಲ್ಲವೆಂದು ಕಾನೂನಿನ ಕೈಯಿಂದ ಎಂದೂ ಶಿಕ್ಷೆಯಾಗಿರಲಿಲ್ಲ, ಮಲೀಕನಿಗೆ. ಆದರೆ, ಈ ಲೀಸಾಳ ಕೇಸು ಕೈಕೊಡಬಹುದೇನೋ ಎಂಬ ಅನುಮಾನ ಸುಮ್ಮಸುಮ್ಮನೆ ಬಂದು ಬಿಟ್ಟಿತ್ತು, ಮಲೀಕನಿಗೆ.
ಲೀಸಾಳಿಗೆ ಸಹಜವಾಗಿಯೇ ಸುಂದರವಾದ ಮೈಮಾಟವಿತ್ತು. ಆಕೆ ತನ್ನ ಸ್ತನಗಳನ್ನು ಹಿಗ್ಗಿಸಬೇಕು ಎಂದು ಮಲೀಕನ ಕ್ಲಿನಿಕ್ಕಿಗೆ ಬಂದಾಗ ಆತನಿಗೆ ಆಶ್ಚರ್ಯವಾಗಿತ್ತು. ‘ಭಂಗಿ, ಡಾಕ್ಟರ್, ಭಂಗಿ. ಅದು ನನ್ನ ನಿಲುವಿನ ಭಂಗಿಯ ಮೇಲೆ ಪರಿಣಾಮ ಬೀರುತ್ತಿದೆ. ನಲವತ್ತನೇ ವಯಸ್ಸಿನ ತನಕ ಏನೇನೋ ವ್ಯಾಯಾಮ ಮಾಡಿ, ಸುಟ್ಟು ಸುಡುಗಾಡು ಕುಡಿದು, ಮೂರು ತಿಂಗಳಿಗೊಮ್ಮೆ ಇಡೀ ಜಠರಗರುಳುಗಳನ್ನು ಶುಚಿ ಮಾಡುವ ಆಹಾರ ತಿಂದು, ನನ್ನ ಭಂಗಿಯನ್ನು ಕಾಪಾಡಿಕೊಂಡಿದ್ದೆ. ಕೊಂಚ ಜಾಸ್ತಿಯಾಯಿತೇನೋ. ದೇಹದಲ್ಲಿದ್ದ ಎಲ್ಲ ಕೊಬ್ಬೂ ಕರಗಿಹೋಗಿ ನಾನು ಜೋಲಾಡುತ್ತಿದ್ದೇನೆ. ಮೂರೂ ಮಕ್ಕಳಿಗೂ ನಾಲ್ಕು ವರ್ಷದ ತನಕ ಹಾಲು ಕುಡಿಸಿರುವ ಮೊಲೆಗಳಿವು. ಇಷ್ಟಿರೋದೇ ಹೆಚ್ಚು. ನನ್ನ ಗುರುತ್ವಕೇಂದ್ರವೇ ಏರುಪೇರಾಗಿದೆ. ನನ್ನ ಶಕ್ತಿ ಚಕ್ರ ಸರಿಹೋಗಬೇಕಾದಲ್ಲಿ ನನ್ನ ಮೈ ಅನುಪಾತ ಪ್ರಮಾಣಬದ್ಧವಾಗಿರಬೇಕು. ಗೊತ್ತಲ್ಲ ಸೌಂಡ್ ಬಾಡಿ, ಸೌಂಡ್ ಮೈಂಡ್’ ಎಂದು ಮಲೀಕನಿಗೇ ಇಷ್ಟುದ್ದಾ ಉಪದೇಶ ಮಾಡಿದ್ದಳು.
ಲೀಸಾ ತನ್ನ ಕೈಯಿಂದ ದುಡ್ಡು ಕೊಡುತ್ತಿರಬೇಕಾದರೆ ಯಾಕಿಲ್ಲ ಎನ್ನಲಿ ಎಂದು ಮಲೀಕನೂ ಒಪ್ಪಿಕೊಂಡಿದ್ದ. ಸರ್ಜರಿ ಎಲ್ಲ ಮುಗಿದು ಕಟ್ಟಕಡೆಯ ಡ್ರೆಸಿಂಗ್ ಮುಗಿಸಿ, ಎಲ್ಲ ಸರಿಯಿದೆಯೇ ಎಂದು ಒಮ್ಮೆ ಕಣ್ಣಳತೆಯಲ್ಲಿ ನೋಡುತ್ತಿದ್ದ. ಲೇಸರ್ ಅಳತೆಪಟ್ಟಿಯಿದ್ದಾಗಲೂ ತನ್ನ ಕಣ್ಣಳತೆ, ಕೈಯಳತೆಯ ಮೇಲೆ ಏನೋ ನಂಬಿಕೆ ಭೀಮಸೇನನಿಗೆ. ಒಮ್ಮೆ ದೃಷ್ಟಿಸಿ ನೋಡಿದ. ಮೇಲಿನಿಂದ ಒಮ್ಮೆ ನೋಡಿದ. ಪಕ್ಕದಿಂದ ನೋಡಿದ. ಒಮ್ಮೆ ಎರಡೂ ಮೊಲೆಗಳನ್ನು ಮುಟ್ಟಿ ಎಲ್ಲಿಯೂ ಏನೂ ಹೆಚ್ಚುಕಮ್ಮಿಯಿಲ್ಲವೇ ಎಂದು ಪರೀಕ್ಷಿಸಿದ. ಇದು ಎಲ್ಲ ನಿತ್ಯಾರೂಢಿಯ ಕೆಲಸವಾಗಿದ್ದರಿಂದ ಅನೆಸ್ಥಿಶಯಾ ಕೊಟ್ಟವ ಹಾಗೂ ಆಪರೇಷನ್‍ಗೆ ಸಹಾಯ ಮಾಡಿದ ನರ್ಸು ಮೆಲಿಸ್ಸಾ ಹೊಸದೇನೂ ಆಗಿಲ್ಲದಂತೆ ಎಲ್ಲರೂ ಆರಾಮಾಗಿ ಅವರವರ ಕೆಲಸ ಮಾಡುತ್ತಿದ್ದರು.
ಮಲೀಕನಿಗೆ ತಾನು ಆಪರೇಷನ್ ಮಾಡುವ ಮುಂಚೆ ಒಮ್ಮೆ ರಾಯರನ್ನು ನೆನೆಸಿಕೊಳ್ಳುವ ರೂಢಿಯಿತ್ತು. ಅಂದಿನ ಆಪರೇಷನ್ ಕೂಡ ‘ಆಪಾದಮೌಳಿ ಪರ್ಯಂತಂ ಗುರೂನಾಮ್ ಆಕೃತಿಮ್ ಸ್ಮರೇತ್’ ಇಂತಹ ಪೂರ್ವ ವ್ಯಾಪಾರಗಳಿಂದಲೇ ಶುರುವಾಗಿತ್ತು. ಸರ್ಜರಿ ಆದಮೇಲೆ ಕೊನೆಯ ಹೊಲಿಗೆ ಹಾಕಿ ಮೇಲೆ ಡ್ರೆಸ್ಸಿಂಗನ್ನು ಹಾಕಿ, ಇನ್ನೊಮ್ಮೆ ದಿಟ್ಟಿಸಿ ನೋಡಿ ಒಮ್ಮೆ ಕೈಯಿಂದ ಸವರಿ ‘ಗುರುವೇ, ಶ್ರೀ ಹರೀ ಕಾಪಾಡಪ್ಪ’ ಎಂದು ಇನ್ನೊಮ್ಮೆ ಪ್ರಾರ್ಥಿಸಿ ಎಲ್ಲ ಮುಗಿಸಿದಾಗ ಅವಶ್ಯಕತೆಗಿಂತ ಹೆಚ್ಚಾಗಿ ಬೆರಳ ತುದಿಗಳು ಲೀಸಾಳ ಮೇಲಿದ್ದವೇನೋ, ಅದು ಅವನಿಗರಿವಾಗಿದ್ದು ಆತ ಮೆಲಿಸ್ಸಾ ವಿಡಿಯೋ ತೆಗೆಯುತ್ತಿದ್ದುದನ್ನು ಗಮನಿಸಿದಾಗ.
ನರ್ಸ್ ಮೆಲಿಸ್ಸಾ ‘ವಾಟ್ ದ ಹೆಕ್’ ಎಂದು ತನ್ನ ಫೋನ್ ಆಫ್ ಮಾಡಿಕೊಂಡಿದ್ದಳು. ಏನೂ ಆಗದಿದ್ದ ಹಾಗೆ ಮಲೀಕ ‘ಏನು ಮಾಡುತ್ತಿದ್ದೀಯ, ಯಾವುದೇ ಪೇಶೆಂಟಿನ ದೇಹದ ಯಾವುದೇ ಭಾಗದ ಫೋಟೋ ತೆಗೆಯುವುದು, ವಿಡಿಯೋ ತೆಗೆಯುವುದು ತಪ್ಪು ಎನ್ನುವ ವಿಷಯ ನಿನಗೆ ಗೊತ್ತಿದೆಯಷ್ಟೇ? ಮೊದಲು ಡಿಲೀಟ್ ಮಾಡು’ ಎಂದು ಗದರಿಕೊಂಡಿದ್ದ. ಆಕೆ ತಕ್ಷಣ ಡಿಲೀಟ್ ಮಾಡಿದ್ದಳು.
ತಾನು ಮಾಡಿದ್ದು ತಪ್ಪೇ? ಬಹಳ ಹೊತ್ತಿನ ನಂತರ ಅವನಿಗೆ ಯೋಚನೆಯಾಗಿತ್ತು. ತನ್ನ ಸೂಟು ಹೊಲೆಯುವ ಲಿಟಲ್ ಇಟಲಿಯ ದರ್ಜಿಗಳು ತೊಡೆಸಂದಿಯ ಅಳತೆ ಸರಿಯಿದೆಯಾ ಎಂದು ನೋಡುವಾಗ ಆತನ ಕೈಬೆರಳುಗಳು ತನ್ನ ತೊಡೆಯಮೇಲೆಲ್ಲ ಓಡಾಡುವಾಗ ಅದು ತಪ್ಪು ಎಂದು ಹೇಳಲಿಕ್ಕಾಗುತ್ತದಾ? ಒಂದು ಅತಿಸೂಕ್ಷ್ಮ ಸರ್ಜರಿ ಮಾಡಿ ಫಲಿತಾಂಶ ತಾನು ನಿರೀಕ್ಷಿಸಿದ್ದಕಿಂತ ಚೆನ್ನಾಗಿ ಆದಾಗ, ತನ್ನನ್ನು ತಾನೇ ಹೊಗಳಿಕೊಳ್ಳಬೇಕಾದ ಪರಿಸ್ಥಿತಿ ಆತನದು. ಆತನ ಈ ಕುಸುರಿತನವನ್ನು ಮೆಚ್ಚುವ ಕಣ್ಣನ್ನೂ ದೇವರು ಬಹಳ ಜನರಿಗೆ ಕೊಟ್ಟಿರಲಿಲ್ಲ. ಹಾಗಾಗಿ ತನ್ನ ಕೆಲಸಕ್ಕೆ ತಾನೇ ಚಪ್ಪಾಳೆ ಹೊಡಕೊಳ್ಳಬೇಕಾಗಿತ್ತು. ತನಗೆ ತಾನೇ ದೃಷ್ಟಿ ತೆಗೆದುಕೊಳ್ಳಬೇಕಾಗಿತ್ತು.
ಅಂದು ಆದದ್ದೂ ಅದೇ ಎಂದು ಆತ ನಂಬಿದ್ದ. ನಿಜವಾಗಿಯೂ ನಂಬಿದ್ದ. ಲೀಸಾಳಿಗೆ ತಾನು ಇಟ್ಟದ್ದು ಪರಿಪೂರ್ಣ ಕುಚಗಳು, ನಿಂತರೂ, ಕೂತರೂ, ಮಲಗಿದರೂ ದುಂಡು ದುಂಡು. ಅಕಳಂಕ ಗೋಳಗಳ ಜೋಡಿ. ಬೇಲೂರಿನ ದರ್ಪಣಸುಂದರಿಯನ್ನು, ಪದ್ಮಿನಿಯರನ್ನು ಕಟೆದ ಶಿಲ್ಪಿ ಅಂಗಾಗಗಳ ಪರಿಮಾಣವನ್ನು ಅನುಪಾತವನ್ನು ಮುಟ್ಟಿನೋಡದೇ ಕೆತ್ತಲಿಕ್ಕಾಗುತ್ತದಾ? ತನ್ನ ಕೆಲಸ ಆ ಶಿಲ್ಪಿಗಿಂತಾ ಏನು ಕಮ್ಮಿ? ನಾನು ಕಟೆಯುವುದು ಜೀವಂತ ಶಿಲ್ಪಗಳನ್ನು.
ವಿಡಿಯೋ ಡಿಲೀಟ್ ಆಗಿದೆ ಎಂದೇನೋ ಸಮಾಧಾನ ಮಾಡಿಕೊಂಡಿದ್ದ. ಆದರೆ, ಆಕೆ ತೆಗೆದ ವಿಡಿಯೋ ತನ್ನಂತಾನೇ ಗೂಗಲ್ ಫೋಟೋಸ್ ಆ್ಯಪ್‍ಗೆ ಬ್ಯಾಕ್ ಅಪ್ ಆಗಿದೆ ಎಂದು ಆತನಿಗೆ ಹೊಳೆದಿರಲಿಲ್ಲ.
ಕಾದಂಬರಿಯ ಖರೀದಿಗೆ ಸಂಪರ್ಕಿಸಿ : ಅಂಕಿತ ಪುಸ್ತಕ
ಪರಿಚಯ : ಗುರುಪ್ರಸಾದ ಕಾಗಿನೆಲೆ ಅವರು ಹುಟ್ಟಿದ್ದು ಶಿವಮೊಗ್ಗದಲ್ಲಿ, ಬೆಳೆದದ್ದು ಮೈಸೂರು ಮತ್ತು ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ. ಅವರ ಪ್ರಕಟಿತ ಕೃತಿಗಳು: ನಿರ್ಗುಣ, ಶಕುಂತಳಾ, ದೇವರರಜಾ, ಲೋಲ, ವೈದ್ಯ ಮತ್ತೊಬ್ಬ, ಬಿಳಿಯ ಚಾದರ, ಹಿಜಾಬ್, ಕಾಯಾ. ಹಿಜಾಬ್ ಕಾದಂಬರಿ ಇಂಗ್ಲಿಷಿಗೆ ಅನುವಾದಗೊಂಡಿದೆ. ಕೆಲ ಕಥೆಗಳು ಮರಾಠಿ, ಕೊಂಕಣಿ, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ.
ಡಾ. ಪಿ.ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಎಚ್.ಎಸ್. ಶಾಂತಾರಾಮ್ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭಿಸಿವೆ.
ಇದನ್ನೂ ಓದಿ : Installation Art : ತೈವಾನ್ಗೆ ಹೊರಡುವ ಮೊದಲೇ ‘ಸಕೀನಾಳ ಮುತ್ತು’ ಮುಖಪುಟದೊಳಗೆ ಈ ಕಲಾಕೃತಿ ಅಡಗಿದ್ದು ಹೇಗೆ?