Literature : ಅಭಿಜ್ಞಾನ ; ನನ್ನ ಮನ್ಯಾಗ ಸಿದಿಗಿ ಕಟ್ಟೂದಿಲ್ಲ, ಚಟ್ಟಕ್ಕ ಗಳಾ ಮಾರೂದಿಲ್ಲ, ಕಸಬರಿಗಿ ಕೇಳ್ರಿ, ಲಗ್ನದ ಉಂಡಿ ಬುಟ್ಟಿ ಕೇಳ್ರಿ

Literature : ಅಭಿಜ್ಞಾನ ; ನನ್ನ ಮನ್ಯಾಗ ಸಿದಿಗಿ ಕಟ್ಟೂದಿಲ್ಲ, ಚಟ್ಟಕ್ಕ ಗಳಾ ಮಾರೂದಿಲ್ಲ, ಕಸಬರಿಗಿ ಕೇಳ್ರಿ, ಲಗ್ನದ ಉಂಡಿ ಬುಟ್ಟಿ ಕೇಳ್ರಿ
ಲೇಖಕಿ ಸುನಂದಾ ಬೆಳಗಾಂವಕರ

Kannada Short Story : ಸಾಂತಮ್ಮ ಹರೇಮಿ ಹೆಂಗಸು. ಗಂಡನಿಗೆ ಎದುರುತ್ತರಿಲ್ಲ. ನಾದಿನಿಯೊಡನೆ ವಿರಸವಿಲ್ಲ. ಸಮಯ ಸಾಧಕಳು. ಧರ್ಮವ್ವನಂತೆ ಪಾಪ ಪುಣ್ಯಗಳ ಅರಿವು, ಜೀವನದ ತಿಳಿವಳಿಕಿದ್ದ ಸೂಕ್ಷ್ಮ ಮನಸ್ಸಿನವಳಲ್ಲ. ಅವಳ ಪ್ರತಿಯೊಂದು ನಡೆನುಡಿಯಲ್ಲಿ ಸ್ವಾರ್ಥದ ಪ್ರಖರತೆಯಿರುತ್ತಿತ್ತು.

ಶ್ರೀದೇವಿ ಕಳಸದ | Shridevi Kalasad

|

Jan 26, 2022 | 2:33 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಲೇಖಕಿ ಸುನಂದಾ ಬೆಳಗಾಂವಕರ ಅವರ ಮೃದ್ಗಂಧ ಕಥಾಸಂಕಲನದಿಂದ ‘ಬಿದಿರು ಹೂ’ ಕಥೆಯ ಆಯ್ದ ಭಾಗ.

*

ಹೀಗೆ ರಾತ್ರಿ ಸರಿದು ಸೂರ್ಯ ಮೂಡುವುದೇ ತಡ, ಮಲ್ಲಪ್ಪನ ಗುಡಿಸಲಿಗೆ ಗಿರಾಕಿಗಳು ಬರಲು ಪ್ರಾರಂಭಿಸುತ್ತಾರೆ. ಧರ್ಮವ್ವ ಬಯ್ಯಲಿ ಅನ್ನಲಿ ಜನ ಅವಳು ಹೆಣೆದ ಬುಟ್ಟಿ, ಮೊರ, ತೊಟ್ಟಿಲು, ಚಾಪೆ ಬೇಡುತ್ತಾರೆ. ಕಾರಣ ಅವಳು ಹೆಣೆದ ಪ್ರತಿಯೊಂದು ವಸ್ತು ಸುಂದರ ಮತ್ತು ತಾಳಿಕೆ ಬರುವಂತಹದು. ಮೇಲಾಗಿ ಮಲ್ಲಪ್ಪ ಮಾದವರ ಸಾತ್ವಿಕ ಸ್ವಭಾವ. ಅತಿ ದುಡ್ಡಿನಾಸೆಯಿಲ್ಲ. ಹೆಚ್ಚಿನ ಮಾತಿಲ್ಲದೇ ವ್ಯಾಪಾರ, ಅವನ ಬಾಗಿಲಿಗೆ ಬರುವ ಗಿರಾಕಿಗಳಿಗೆ ಅತಿ ನಮ್ರನಾಗಿ ವಿನಂತಿಸುತ್ತಾನೆ.

“ಅಪ್ಪಾರ, ಅವ್ವಾರ, ಅಣ್ಣಾರ, ಅಕ್ಕಾರ ನಮ್ಮವ್ವನ ಮಾತು ಮನಸ್ಸಿಗೆ ಹಚಿಕೋ ಬ್ಯಾಡ್ರಿ, ಶಿವಾ ತಂದ ಕಷ್ಟಕ್ಕೆ ತಲೀ ನಾಜೂಕ ಆಗೇತಿ. ಯಾವಾಗ ನಮ್ಮಲ್ಲಿ ಬಂದ್ರೂ ಲಗ್ನದ ಉಂಡಿ ಬುಟ್ಟಿ ಬೇಡ್ರಿ, ದೇವರ ಹೆಸರಾಗ ಕಸಬರಗಿ ಕೇಳ್ರಿ, ಕೂಸಿನ್ನ ಮಲಗಸಾಕ, ಬಾಗಿನು ಕೊಡಾಕ, ಕಾಳ ಹಸನ ಮಾಡಾಕ ಮೊರ ಬೇಕಾ, ನಾವು ಸಿದಿಗಿ ಹೆಣಿಯೋದು ಬಿಟ್ಟ ಬಿಟ್ಟೇವಿ” ಕೈ ಮುಗಿದು ಬೀಳ್ಕೊಡುತ್ತಾನೆ.

ಇಂದು ಧರ್ಮವ್ವನ ಧರ್ಮದ ಕರ್ಮದಿಂದ ಮಲ್ಲಪ್ಪ ಮಾದವ್ವರ ಸಂಸಾರ ಸುಖದಿಂದ ಸಾಗಿದೆ. ಕೈಯಲ್ಲಿ ನಾಲ್ಕು ದುಡ್ಡಿದೆ. ಮೂವರು ಗಂಡುಮಕ್ಕಳು ಸದೃಢವಾಗಿವೆ. ಜಾಣ ಮಕ್ಕಳು ತಪ್ಪದೇ ಶಾಲೆಗೆ ಹೋಗುತ್ತವೆ. ಧರ್ಮವ್ವನಿಗೆ ಮೊಮ್ಮಕ್ಕಳೆಂದರೆ ಪಂಚಪ್ರಾಣ. ಅವರೊಡನೆ ಆಡುತ್ತಾಳೆ. ಅವರ ಕುಚೇಷ್ಟೆಗೆ ಹೊಟ್ಟೆ ತುಂಬ ನಗುತ್ತಾಳೆ. ಒಮ್ಮೊಮ್ಮೆ ಅವಳಿಗೆ ತನ್ನ ಈ ಪ್ರಪಂಚದ ಅರಿವೇ ಇರುವುದಿಲ್ಲ ಗತಕಾಲದ ನೆನಪುಗಳು ಅವಳನ್ನು ಹರಿದು ತಿಂದು ಬಿಡುತ್ತವೆ. ತೊಟ್ಟಿಲು ಹೆಣೆಯುತ್ತ ಬರಿ ಜೋಗುಳ ಹಾಡುತ್ತಾಳೆ.

“ಚೆನ್ನಿ ಲಗ್ಗಣ ಉಂಡಿ ಬುಟ್ಟಿ,” ಕೈಯಲ್ಲಿಯ ಬುಟ್ಟಿ ಎತ್ತಿ ಎತ್ತಿ ತೂರಿ ನಗುತ್ತಾಳೆ. ಧಿಗ್ಗನೆ ಎದ್ದು ಮೂರು ಬಿದಿರು ಗಣಿಕೆಗಳನ್ನು ಸಾಲಾಗಿ ಇಟ್ಟು, ಮತ್ತೊಂದು ಬಿದಿರು ಗಣಿಕೆ ತೊಡೆಯ ಮೇಲಿಟ್ಟುಕೊಂಡು, ಸೆರಗು ಮುಸುಕು ಹಾಕಿ ಮೊಲೆ ಕುಡಿಸುವಂತೆ ನಟಿಸುತ್ತಾಳೆ.

ನಂತರ ಎಲ್ಲ ಗಣಿಕೆಗಳನ್ನು ಒಂದರ ಮೇಲೊಂದು ಹೇರಿ “ನನ್ನ ಮಕ್ಕಳ ಹೆಣಾ-ಸೋಮು, ಶಿವು, ಬೈರು, ಚೆನ್ನಿ-ನನ್ನ ಮಕ್ಕಳು ಮಣ್ಣಾಗಿ ಹ್ವಾದ್ದು” ಎಂದು ಗೋಳಿಟ್ಟು ಅಳುತ್ತಾಳೆ.

“ನನ್ನ ಮನ್ಯಾಗ ಸಿದಿಗಿ ಕಟ್ಟುವುದಿಲ್ಲ. ಚಟ್ಟಕ್ಕ ಗಳಾ ಮಾರೂದಿಲ್ಲ- ಹೇಲಾಕ ಬುಟ್ಟಿ ಬೇಕ, ಮಂಗ್ಯಾನ ಮಗನ ಧ್ವಾತರದಾಗ ಮಾಡಿಕೋ, ಇನ್ನೊಮ್ಮೆ ಬೇಡೀದಿ ಅಂದ್ರ ನನ್ನ ಮಗ್ಗ ಹೇಳಿ ಮುಸುಡಿ ಬಾಯಿಸತೇನಿ” ಎಂದೆಲ್ಲಾ ಹುಚ್ಚಿಯಂತೆ ಕೂಗುತ್ತಾಳೆ.

ಆದಿನ ಮಲ್ಲಪ್ಪ ಮಾದವ್ವರಿಗೆ ಅವಳನ್ನು ಸಮಾಧಾನ ಮಾಡುವದು ಬಲು ಕಷ್ಟವಾಗುತ್ತದೆ. ವಿಧಿ ತಂದ ಈ ದುರ್ದಶೆಯನ್ನು ತಪ್ಪಿಸುವದು ಯಾರಿಂದ ಸಾಧ್ಯ?

ಗಂಡ ತೀರಿಕೊಂಡಾಗ ಧರ್ಮವನಿಗೆ ಇಪ್ಪತ್ನಾಲ್ಕು ವರುಷ. ಆಗಲೇ ನಾಲ್ಕು ಜನ ಗಂಡುಮಕ್ಕಳು ಮಲ್ಲು, ಸೋಮು, ಶಿವು, ಬೈರು ಅಲ್ಲದೇ ಆರು ತಿಂಗಳ ಮೊಲೆಗೂಸು ಚಿನ್ನಿ, ಧರ್ಮವ್ವನ ಅಣ್ಣ ದ್ಯಾವಪ್ಪ ತಂಗಿ ಮಕ್ಕಳನ್ನು ಹಳ್ಯಾಳದಿಂದ ದಾಂಡೇಲಿಗೆ ತಮ್ಮ ಮನೆಗೆ ಕರೆದುಕೊಂಡು ಬಂದ.

ದ್ಯಾವಪ್ಪ ಆತನ ಹೆಂಡತಿ ಸಾಂತವ್ವರಿಗೆ ಸಿದ್ಧ ಮಾದಿ ಇಬ್ಬರು ಮಕ್ಕಳು. ಎರಡು ವರುಷ ಮೊದಲೇ ಮಲ್ಲು ಮಾದಿಯರ ಮದುವೆಯಾಗಿ ಅಣ್ಣತಂಗಿ ತಮ್ಮ ಕಳ್ಳಬಳ್ಳಿಯನ್ನು ಇನ್ನೂ ಹುರಿಯಾಗಿ ಹೊಸೆದುಕೊಂಡಿದ್ದರು. ದುಃಖದ ದಿನಗಳು ತೀರುವ ತನಕ ಧರ್ಮವ್ವ ಮಕ್ಕಳೊಂದಿಗೆ ಅಣ್ಣನ ಗುಡಿಸಲಿನಲ್ಲಿಯೇ ಇದ್ದಳು.

ಒಂದು ದಿನ, “ದ್ಯಾವಣ್ಣನನಗೊಂದು ಬ್ಯಾರೆ ಗುಡಿಸಿಲಾ ಹಾಕ್ಕೋಡೋಯಪ್ಪಾ. ಮಲ್ಲುಗ ಹನ್ನೆರಡ ವರ್ಷ ಆದವು. ಮಾದವ್ವ ಇನ್ನೂ ನೆರದಿಲ್ಲ. ಒಂದ ಮನ್ಯಾಗ ಇರೋದು ಚಂದ ಅಲ್ಲ ಯಪ್ಪಾ. ನೋಡಿದ ನಾಕ ಜನಾ ಏನ ಅಂದಾರು.”

Abhijnana excerpt of Bidiru hoo Kannada Short story collection from Mrudgandha by Sunanda Belgaonkar

ಮೃದ್ಗಂಧ

ದ್ಯಾವಣ್ಣ ಉತ್ತರಿಸಲಿಲ್ಲ. ಹರೆಯದ ತಂಗಿ ಗಂಡು ದಿಕ್ಕಿಲ್ಲದೇ ಪ್ರತ್ಯೇಕ ಸಂಸಾರ ಹೂಡುವದು ಆತನಿಗೆ ಇಷ್ಟವಾಗಲಿಲ್ಲ. ಆದರೆ ಸಾಂತವ್ವನಿಗೆ ನಾದಿನಿಯ ಮಾತು ಸಮಂಜಸವೆನಿಸಿತು. ಆ ದೊಡ್ಡ ಸಂಸಾರದಲ್ಲಿ ಮಧ್ಯಾಹ್ನದ ಅಡಿಗೆ ಮಾಡುವುದೆಂದರೆ ಅವಳಿಗೆ ತಲೆಚಿಟ್ಟು ತಲೆಬಿಸಿ. ಧರ್ಮವ್ವನಂತೆ ಬಿದಿರನ್ನು ಸೀಳಿ ವಸ್ತು ಹೆಣೆಯಲಾರಳು. ಬೇಗ ಮನೆ ಕೆಲಸ ಮುಗಿಸಿ ಅಕ್ಕಪಕ್ಕದ ಗುಡಿಸಲಿಗೆ ಇಲ್ಲದ ಸಲ್ಲದ ಮಾತುಕತೆಯಾಡಲು ಹೋಗುವ ಆತುರ. ಧರ್ಮವ್ವನಿಗೆ ಇದು ತಿಳಿದ ಮಾತು. ಅಂತಲೇ ಅವಳು ನಸುಕು ಹರಿಯುವದರಲ್ಲಿ ಎದ್ದು, ಕಸಮುಸುರೆ ಮಾಡಿ ಮುಗಿಸಿ, ಬಟ್ಟೆ ಒಗೆಯುತ್ತಿದ್ದಳು. ದ್ಯಾವಪ್ಪ ನೀರು ಜಗ್ಗಲು ತಂಗಿಗೆ ಸಹಾಯ ಮಾಡಿ, ಸ್ನಾನ ಮುಗಿಸಿ, ಪೂಜೆ ಮಾಡುತ್ತಿದ್ದ. ಧರ್ಮವ್ಯ ನ್ಯಾರಿಗೆ ಚಪಾತಿ ಮಾಡಿ ಚಹಾ ಕಾಸಿದಾಗ ಸಾಂತವ್ವ ಹಾಸಿಗೆ ಬಿಟ್ಟು ಏಳುತ್ತಿದ್ದಳು. ಅಣ್ಣ ತಂಗಿ ನ್ಯಾರಿ ಮುಗಿಸಿ, ಚಹಾ ಕುಡುದು ಒಮ್ಮೆ ಬಿದಿರು ಸೀಳಲು ಕುಳಿತರೆಂದರೆ ಮಧ್ಯಾಹ್ನದ ಊಟಕ್ಕೆ ಮಾತ್ರ ಏಳುತ್ತಿದ್ದರು. ಸಾಂತವ್ವನಿಗೆ ಮಧ್ಯಾಹ್ನದ ಊಟಕ್ಕೆ ಅಡಿಗೆ ಮಾಡುವದು ಬೇಸರದ ಕೆಲಸ. ಅದೆಷ್ಟೋ ಸಾರೆ ಧರ್ಮವ್ವನಿಗೆ ನಸುಕಿನಲ್ಲಿಯೇ ಗೋಧಿ ರೊಟ್ಟಿ, ಜೋಳದ ರೊಟ್ಟಿ ಎರಡೂ ಮಾಡಲು ಗಂಡನಿಲ್ಲದಾಗ ಹೇಳುತ್ತಿದ್ದಳು. ಧರ್ಮವ್ವನ ಬಿದಿರು ಹೆಣಿಕೆಯ ಕೆಲಸ ದ್ಯಾವಪ್ಪನಿಗೆ ಬಲು ಮೆಚ್ಚಿಕೆ, ಅವಳ ಕಷ್ಟದ ದುಡಿತದಿಂದ ನಾಲ್ಕು ದುಡ್ಡು ಹೆಚ್ಚು ಕೈಗೆ ಬರುತ್ತಿತ್ತು. ಬರಿ ಮನೆಗೆಲಸದಲ್ಲಿ ಹೊತ್ತು ಹಾಕಿದರೆ ಬಂದ ಗಿರಾಕಿಗಳು ಆ ದಿನ ಮಾಲಿಲ್ಲದೇ ಮರಳಿ ಹೋಗಬೇಕಾಗುತ್ತಿತ್ತು. ಆತ ಹೆಂಡತಿಯ ಮೇಲೆ ರೇಗುತ್ತಿದ್ದ.

“ನಸಿಕಿನ್ಯಾಗಿಂದ ಧರ್ಮಿ ಮನಿ ವಾರ್ಹೆಕ್ಕ ನಿಂತರ ಒಬ್ಬನ ಇಷ್ಟ ಮಕ್ಕಳ ಬಾಯಿ ಹ್ಯಾಂಗ ತುಂಬಲಿ? ಮನಿ ಮನಿ ತಿರುಗಿ ಪಂಟ ಬಡೀಬ್ಯಾಡ ಕುಂತ ರೊಟ್ಟಿ ಬಡೀ”

ಸಾಂತಮ್ಮ ಹರೇಮಿ ಹೆಂಗಸು. ಗಂಡನಿಗೆ ಎದುರುತ್ತರಿಲ್ಲ. ನಾದಿನಿಯೊಡನೆ ವಿರಸವಿಲ್ಲ. ಸಮಯ ಸಾಧಕಳು. ಧರ್ಮವ್ವನಂತೆ ಪಾಪ ಪುಣ್ಯಗಳ ಅರಿವು, ಜೀವನದ ತಿಳಿವಳಿಕಿದ್ದ ಸೂಕ್ಷ್ಮ ಮನಸ್ಸಿನವಳಲ್ಲ. ಅವಳ ಪ್ರತಿಯೊಂದು ನಡೆನುಡಿಯಲ್ಲಿ ಸ್ವಾರ್ಥದ ಪ್ರಖರತೆಯಿರುತ್ತಿತ್ತು. ನಾದಿನಿಯ ಮಾತನ್ನೇ ಪಟ್ಟ ಹಿಡಿದು ದ್ಯಾವಪ್ಪನ ತಲೆ ತುಂಬಿ, ಪುಸಲಾಯಿಸಿ ಧರ್ಮವ್ವನಿಗೊಂದು ಪ್ರತ್ಯೇಕ ಗುಡಿಸಲು ಹಾಕಿಸಿಯೇ ಬಿಟ್ಟಳು. ಬಿದಿರಿನ ಕೆಲಸದ ಅಧಿಕಾರ ಮಾತ್ರ ತಮ್ಮ ಕೈಯಲ್ಲಿಟ್ಟುಕೊಂಡಳು. ಗಂಡನೆದುರು ಒಳ್ಳೆಯವಳೆನಿಸಿಕೊಳ್ಳಲು ನಾದಿನಿಯ ಮನೆಯನ್ನು ಹೆಚ್ಚು ಆಸ್ಥೆ ವಹಿಸಿದಂತೆ ತೋರಿಸಿ ಮೈ ನುಗ್ಗು ಮಾಡಿಕೊಳ್ಳದೇ ಹಚ್ಚಿದಳು.

ಸೌಜನ್ಯ : ಅಂಕಿತ ಪುಸ್ತಕ. 080 2661 7100

ಸೌಜನ್ಯ : Literature : ಅಭಿಜ್ಞಾನ ; ಮೇಷ್ಟ್ರು ಬಯ್ತಾರೆ; ಅರೆ ಓ ಗಂಧರ್ವಾ, ನಿಂಗ್ಯಾಕ್ ಲೆಕ್ಕ? ಹೋಗು, ಗಾನಾಬಾಜ್ ಮಾಡ್ಕೊಂಡಿರು ಅಂತಾರೆ

Follow us on

Related Stories

Most Read Stories

Click on your DTH Provider to Add TV9 Kannada