Literature : ಅಭಿಜ್ಞಾನ ; ಮೇಷ್ಟ್ರು ಬಯ್ತಾರೆ… ಅರೆ ಓ ಗಂಧರ್ವಾ, ನಿಂಗ್ಯಾಕ್ ಲೆಕ್ಕ? ಹೋಗು, ಗಾನಾಬಾಜ್ ಮಾಡ್ಕೊಂಡಿರು ಅಂತಾರೆ

Gandaki Zone Short Story : ಒಟ್ಟು ಹನ್ನೊಂದು ಹಾಲಿನ ಬಾಟಲಿಗಳನ್ನು ಖಾಕೀ ಬಣ್ಣದ ತನ್ನ ಕೈಚೀಲದಿಂದ ಒಂದೊಂದಾಗಿ ತೆಗೆದು ಬಚ್ಚಲು ಮನೆಯ ಕಟ್ಟೆಯ ಮೇಲೆ ಒಂದರ ಪಕ್ಕದಲ್ಲೊಂದರಂತೆ ಜೋಡಿಸುತ್ತ ಸುನೀತಾ ಕೂಗಿದಳು. “ಯಾರೂ ಏಳಬೇಡಿ. ನನ್ನನ್ನು ಬಿಟ್ಟರೆ ಇಡೀ ಪೋಖರಾದಲ್ಲಿ ಯಾರಿಗೂ ಬೆಳಗಾಗೋದಿಲ್ಲ!”

Literature : ಅಭಿಜ್ಞಾನ ; ಮೇಷ್ಟ್ರು ಬಯ್ತಾರೆ... ಅರೆ ಓ ಗಂಧರ್ವಾ, ನಿಂಗ್ಯಾಕ್ ಲೆಕ್ಕ? ಹೋಗು, ಗಾನಾಬಾಜ್ ಮಾಡ್ಕೊಂಡಿರು ಅಂತಾರೆ
ಡಾ. ಕಣಾದ ರಾಘವ
Follow us
ಶ್ರೀದೇವಿ ಕಳಸದ
|

Updated on:Jan 25, 2022 | 3:39 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಕಥೆಗಾರ, ಸಿತಾರ್ ವಾದಕ ಡಾ. ಕಣಾದ ರಾಘವ ಬರೆದ ‘ಗಂಡಕೀ ಝೋನ್’ ಕಥೆಯ ಆಯ್ದ ಭಾಗ.

*

ಒಟ್ಟು ಹನ್ನೊಂದು ಹಾಲಿನ ಬಾಟಲಿಗಳನ್ನು ಖಾಕೀ ಬಣ್ಣದ ತನ್ನ ಕೈಚೀಲದಿಂದ ಒಂದೊಂದಾಗಿ ತೆಗೆದು ಬಚ್ಚಲು ಮನೆಯ ಕಟ್ಟೆಯ ಮೇಲೆ ಒಂದರ ಪಕ್ಕದಲ್ಲೊಂದರಂತೆ ಜೋಡಿಸುತ್ತ ಸುನೀತಾ ಕೂಗಿದಳು. “ಯಾರೂ ಏಳಬೇಡಿ. ನನ್ನನ್ನು ಬಿಟ್ಟರೆ ಇಡೀ ಪೋಖರಾದಲ್ಲಿ ಯಾರಿಗೂ ಬೆಳಗಾಗೋದಿಲ್ಲ!” ಅವಳು ಹಾಗೆ ಕೂಗಿದ್ದು ಕೇಳಿ ಬಚ್ಚಲ ಮನೆಯ ಮೂಲೆಯಲ್ಲಿ ರಾತ್ರಿಯ ಚಳಿಯಿಂದ ರಕ್ಷಣೆಗೆಂದು ಬಿದಿರ ಗೂಡಿನಲ್ಲಿ ಕುಳ್ಳಿರಿಸಿದ್ದ ನಾಲ್ಕಾರು ಹುಂಜಗಳೂ, ಎರಡು ರಾಜಾಪೇಟೆಗಳೂ “ಕೋ..ಕ್ಕೋ..ಕ್ಕೊ” ಎಂದು ಗಾಬರಿಯಲ್ಲಿ ಅರಚ ತೊಡಗಿದವು. “ನೀವು ಕೂಗಿದರೆ ಸೂರ್ಯನಿಗೆ ಬೆಳಗಾಗುತ್ತೆ. ನಿಮ್ಮನ್ನೆಬ್ಬಿಸಲು ನಾನು ಕೂಗಬೇಕು” ಸುನೀತಾ ಸಣ್ಣ ಸಮಾಧಾನದ ಮುಗುಳನ್ನು ತನ್ನ ಗುಳಿಕೆನ್ನೆಗಳಲ್ಲಿ ಅರಳಿಸುತ್ತ ಹೇಳಿದಳು. ಕೋಳಿಗಳು ಕೂಗುತ್ತಲೇ ಇದ್ದವು. ನೋಡಲು ಮನುಷ್ಯರು ವಾಸಿಸುವಂಥ ಮನೆಯ ಆಟಿಕೆಯಂತೆ ಕಾಣುತ್ತಿದ್ದ ಆ ಬಿದಿರುಗೂಡಿನ ಒಳಗೆ ಕೂತಲ್ಲೆ ಚಡಪಡಿಸುತ್ತ ಹಾರಲಾರದೆ ರೆಕ್ಕೆಗಳನ್ನು ಬಡಿಯುತ್ತಿದ್ದವು, ಮೈಮುರಿದು ಆಕಳಿಸುವಂತೆ, ಆಗಾಗ ಇಡೀ ಮೈಯನ್ನು ಕೊಡವುತ್ತ. “ರುಕ್ಕೂಸ್, ನನ್ನ ಕೆಲಸವನ್ನೂ ಮುಗಿದಿಲ್ಲ. ಈ ಬಾಟಲಿಗಳಿಗೆ ಬಿಸಿನೀರು ಹಾಕಿ ತಾಸು ಬಿಟ್ಟು ತೊಳೆದು ಮಗುಚಿಡದಿದ್ದರೆ ನಾಳೆ ಆ ಗುರುಂಗ್ ಸಾಹೇಬನ ಹೆಂಡತಿ ಬಯ್ಯುತ್ತಾಳೆ, ವಾಸನೆ ಹಾಲು ಕೊಡ್ತೀಯ ನೀನು ಅಂತ. ಡ್ರೈವರ್ ಗೂರ್ಖಾನ ಹೆಂಡತಿಗೆ ಹಾಲು ಸ್ವಲ್ಪವಾದರೂ ವಾಸನೆ ಹೊಡೆದರೆ ಸಾಕು, ಮಾರನೆಯ ದಿನ ನಾನು ಹಾಗೆಯೇ ಆ ಒಡೆದ ಹಾಲನ್ನು ವಾಪಸು ತಂದು ಇದೇ ಬಚ್ಚಲಿಗೆ ಚೆಲ್ಲಬೇಕು” ಬೆಳಿಗ್ಗೆ ತಾನು ಹಾಲು ಕರೆಯಲು ಹೊರಡುವಾಗ ಬಚ್ಚಲಿನ ಪುಟ್ಟ ಹಿತ್ತಾಳೆಯ ಹಂಡೆಯ ಬುಡಕ್ಕೆ ಕಿಚ್ಚೊತ್ತಿ ಹೋಗಿದ್ದರಿಂದ ಈಗ ಕುದಿಯುತ್ತಿರುವ ನೀರನ್ನು ಎಲ್ಲ ಬಾಟಲಿಗಳ ಮುಚ್ಚಳವನ್ನು ತೆಗೆದು ಆ ಪ್ಲಾಸ್ಟಿಕ್ ಬಾಟಲಿಗಳೊಳಗೆ ಬಿಸಿನೀರನ್ನು ತುಂಬತೊಡಗಿದಳು ಸುನೀತಾ. ವರ್ಷಗಳಿಂದ ಬಳಸಿ ಬಳಸಿ ನಪ್ಪಿಹೋದ ಹಸಿರು ಬಣ್ಣದ ಸೆವೆನಸ್ಸಿನ ಬಾಟಲಿಗಳು, ಕಪ್ಪು ಬುರುಬುರು ದ್ರವವನ್ನು ಬಿಟ್ಟು ಹಾಲಿನಂಥ ಹಾಲಿನ ಮಿದುವನ್ನಪ್ಪಿಕೊಂಡ ಥಮೃಪ್ಪಿನ ಬಾಟಲಿಗಳು, ಮಿರಿಂಡಾ, ಸೋಡಾ, ಮಾಜಾದ ಬಾಟಲಿಗಳು, ಈಗ ತಮ್ಮೊಳಗೆ ಸೇರಿದ ಸುಡು ಬಿಸಿನೀರಿನ ಹದವಾದ ಹಬೆಯಲ್ಲಿ ಪೋಖರಾದ ಬೆಳಗಿನ ಹುಚ್ಚು ಚಳಿಯನ್ನು ಮರೆಯತೊಡಗಿದವು.

ಸುನೀತಾ ನಿತ್ಯ ನಾಲ್ಕು ಗಂಟೆಗೆ ಎದ್ದು ಬಿಡುತ್ತಾಳೆ. ವರ್ಷಕ್ಕೊಮ್ಮೆ ಥಾಯ್​ಲ್ಯಾಂಡಿನಿಂದ ಬರುವ ತನ್ನ ಗಂಡ ಎರಡು ವರ್ಷಗಳ ಹಿಂದೆ ಬಂದಾಗ ತಂದುಕೊಟ್ಟಿದ್ದ ಬುದ್ಧನ ಫೈಬರ್‌ ಪ್ರತಿಮೆಯ ಹೊಟ್ಟೆಯಲ್ಲಿದ್ದ ಗಡಿಯಾರವು ಅವಳನ್ನು ನಿತ್ಯ ಬೆಳಗಿನಲ್ಲಿ ಎಬ್ಬಿಸುತ್ತದೆ. ಆ ಪ್ರತಿಮೆಯು ಮನೆಗೆ ಬರುವುದಕ್ಕಿಂತ ಮುಂಚೆಯೂ ಅವಳು ಏಳುತ್ತಿದ್ದಳು. ಆಗ ಅವಳು ನಿದ್ದೆಗಣ್ಣಿನಲ್ಲಿ ಪುಟ್ಟ ವಾಚಿನ ಮುಳ್ಳುಗಳನ್ನು ಕೀಲಿಸಿ ನೋಡುತ್ತಿದ್ದಳು. ಈಗ ಕಾಲ ದೊಡ್ಡದಾಗಿದೆ. ಹಾಗೆ ಎದ್ದವಳು ಹಿಂದಿನ ರಾತ್ರಿಯೇ ನೀರು ತುಂಬಿಸಿಟ್ಟಿದ್ದ ಹಂಡೆಯ ಬುಡಕ್ಕೆ ಬಗೂಲಾ ಮರದ ಕಟ್ಟಿಗೆಗಳಿಂದ ಬೆಂಕಿ ಹಚ್ಚುತ್ತಾಳೆ ಮತ್ತು ತುಸು ಹೊತ್ತು, ಹೊತ್ತಿದ ಬೆಂಕಿಯ ಬುಡದಲ್ಲಿ ಕುಳಿತು ಚಳಿಗೆ ಒಣಗಿದ ಚರ್ಮವನ್ನು ಬಿಸಿಗೆ ಒಣಗಿಸುತ್ತಾಳೆ. ಕೆಲವು ನಿಮಿಷಗಳು ಕಳೆದು ದೇಹವಿಡೀ ಆ ಬೆಂಕಿಯ ಶಾಖಕ್ಕೆ ಬೆಚ್ಚಗಾದಾಗ ಐದು ನಿಮಿಷಗಳ ಮಟ್ಟಿಗಾದರೂ ತನ್ನ ಗಂಡನನ್ನು ನೆನೆದು ಬಯ್ದುಕೊಳ್ಳುತ್ತಾಳೆ, ತನ್ನನ್ನು, ತನ್ನ ಅಪ್ಪನನ್ನು ಮತ್ತು ಗಂಡನನ್ನು, ಅಗತ್ಯಕ್ಕಿಂತ ಹೆಚ್ಚು ಕಾವು ಏರಿದಾಗ ಎದ್ದು ಹಿಂದಿನ ಕೊಟ್ಟಿಗೆಯ ಎರಡು ಎಮ್ಮೆಗಳ ಮೊಲೆಗಳನ್ನು ಸಿಟ್ಟಿನ ಹತಾಶೆಯ ಆವೇಶದ ವೇಗದಲ್ಲಿ ಕಿತ್ತುಬಿಡುವಂತೆ ಹಾಲುಕರೆಯುತ್ತಾಳೆ, ಹಾಲು ಕಡಿಮೆ ಹುಟ್ಟಿದರೆ, ಆ ಎಮ್ಮೆಗಳಿಗೂ ಬಯ್ಯುತ್ತಾಳೆ. ಕರೆದ ಹಾಲನ್ನು ಪಾಲು ಮಾಡಿ,

ಬೇಕಾದರೆ ತುಸು ನೀರು ಬೆರೆಸಿ ಮನೆಯ ಖರ್ಚಿಗೆ ತುಸು ಹಾಲನ್ನಿಟ್ಟು ಫುಲ್ ಬಾರಿ ಗುಡ್ಡದ ಮೇಲಿನ ಹನ್ನೊಂದು ಮನೆಗಳ ಬಾಗಿಲಿನಲ್ಲಿ ತುಂಬಿದ ಹಾಲಿನ ಬಾಟಲಿಯನ್ನಿಟ್ಟು, ಅಲ್ಲಿ ವಾಡಿಕೆಯಂತೆ ಇರುತ್ತಿದ್ದ ಹಿಂದಿನ ದಿನದ ಖಾಲಿ ಬಾಟಲಿಯನ್ನು ಚೀಲದಲ್ಲಿ ಹಾಕಿಕೊಂಡು ಅದೇ ಫುಲ್ ಬಾರಿ ಗುಡ್ಡದ ತುತ್ತ ತುದಿಯಲ್ಲಿದ್ದ ತನ್ನ ಮನೆಯತ್ತ ಹತ್ತುತ್ತ ನಡೆಯುವಂತೆ ಓಡುತ್ತಾಳೆ. ಇಷ್ಟಾದರೂ ಸೂರ್ಯನಿಗೆ ಅವಳ ಮೇಲೆ ಕರುಣೆ ಹುಟ್ಟಿರುವುದಿಲ್ಲ. ಅಲ್ಲಿ ಕೋಳಿಗಳನ್ನು ಎಬ್ಬಿಸಬೇಕು, ಅಡುಗೆ ಮಾಡಿ ಮಗನನ್ನೆಬ್ಬಿಸಿ ಶಾಲೆಗೆ ಕಳಿಸಬೇಕು. ಇತ್ತೀಚೆಗೆ ಅವನು ಶಾಲೆಗೆ ಸರಿಯಾಗಿ ಹೋಗದೇ ರಸ್ತೆ ಬದಿಯಲ್ಲಿ ಕೇರಮ್ ಆಡುತ್ತಾ ಸಮಯ ಹಾಳುಮಾಡುತ್ತಾನಂತೆ, ಅವನನ್ನು ಶಾಲೆಗೆ ಕಳಿಸುವಾಗ ಸರಿಯಾಗಿ ಬುದ್ಧಿ ಹೇಳಬೇಕು. ಒಂದು ಲೀಟರಿಗೆ ಐವತ್ತು ರುಪಾಯಿಯಾದರೆ ತಾನು ನಿತ್ಯ ಕೊಡುವ ಏಳೂವರೆ ಲೀಟರಿಗೆ ಒಟ್ಟು ತಿಂಗಳ ಉತ್ಪತ್ತಿಯೆಷ್ಟು? ತನಗಿನ್ನೂ ಲೆಕ್ಕ ಮಾಡುವುದಕ್ಕೆ ಸರಿಯಾಗಿ ಯಾಕೆ ಬರುವುದಿಲ್ಲ? ಆ ಡ್ರೈವರ್ ಗೂರ್ಖಾನ ಹೆಂಡತಿ ಯಾಕೆ ಯಾವಾಗಲೂ ಕಡಿಮೆ ಹಣ ಕೊಡುತ್ತಾಳೆ? ಗುರುಂಗ್ ಸಾಹೇಬ ಯಾವಾಗಲೂ ಬೆಳಿಗ್ಗೆ ಅಷ್ಟು ಹೊತ್ತಿಗೇ ಊರಿಗೆ ಮುಂಚೆ ಯಮಚಳಿಯಲ್ಲಿ ಎದ್ದು ನಾನು ಹಾಲು ಕೊಡಲು ಹೋಗುವುದನ್ನೇ ಕಾದು ನಿಂತು ಹಾಲಿನ ಬಾಟಲಿಯನ್ನಿಡಲು ನಾನು ಬಗ್ಗುವಾಗ ನನ್ನ ಎದೆಯನ್ನೇ ಯಾಕೆ ನೋಡುತ್ತಾನೆ? ಹೆಂಡತಿಯಿದ್ದರೂ? ಮನೆಯ ಗುಡ್ಡದ ಏರುದಾರಿಯನ್ನು ಹತ್ತುವಾಗ ಅವಳ ಏದುಸಿರಿನ ಸಂಖ್ಯೆಗಳನ್ನು ಅವಳ ದೀನ ಹೋರಾಟದಲ್ಲಿ ಹುಟ್ಟುವ ಪ್ರಶ್ನೆಗಳು ಯಾವಾಗಲೂ ಮೀರಿ ನಿಲ್ಲುತ್ತವೆ. ಎದೆಯ ಭಾರ ತಾಳದೆ ಹೊರಚೆಲ್ಲುವ ಏದುಸಿರಿನಂತೆಯೇ ಪೋಖರಾದ ಕೊರೆಯುವ ಮುಂಜಾವುಗಳ ಹಸೀಹವೆಯಲ್ಲಿ ಉತ್ತರಕ್ಕಾಗಿ ಹಂಬಲಿಸದ ಖಾಲೀ ಸರಳ ರೇಖೆಯಂಥ ತನ್ನ ಪ್ರಶ್ನೆಗಳನ್ನು ಚೆಲ್ಲಿ ಮನೆಗೆ ಬರುತ್ತಾಳೆ ಸುನೀತಾ. ಕೋಳಿಗಳನ್ನು ಹಿತ್ತಲಿನ ಅಂಗಳದಲ್ಲಿ ಕಾಳುಚೆಲ್ಲಿ ಮೇಯಲು ಬಿಟ್ಟು ಹಿತ್ತಾಳೆಯ ಪಾತ್ರೆಯಲ್ಲಿ ಅನ್ನಕ್ಕಿಟ್ಟು ಇನ್ನೂ ತನಗೊಂದುಗ್ಯಾಸ್ ಕನೆಕ್ಷನನ್ನು ತೆಗೆದುಕೊಳ್ಳಲಾಗದ್ದಕ್ಕೆ ಹಪಹಪಿಸುತ್ತ ಬಯ್ದುಕೊಳ್ಳುತ್ತಾಳೆ, ತನ್ನನ್ನು, ಗಂಡನನ್ನು ಮತ್ತು ತನ್ನ ಅಪ್ಪನನ್ನು, ಹಾಗೆ ಬಯ್ದುಕೊಳ್ಳುತ್ತಲೇ ತಾನೇ ಬೆಳೆಯುವ ಹೂಕೋಸಿನ ಮಿದುವಾದ ಹೂಗಳನ್ನು ಬಿಡಿಸುತ್ತ ಅಡುಗೆಗೆ ಸಜ್ಜು ಮಾಡುತ್ತಾಳೆ. ಆ ದಿನದ ದಾಲ್ ಭಾತ್ ತಯಾರಾಗುವ ಹೊತ್ತಿಗೆ ಅತ್ತ ಋತುಪರ್ಣ ಎದ್ದು ಬರುತ್ತಾನೆ. ಸೂರ್ಯ ಮೂಡಿ ತಾಸುಗಳ ನಂತರ, ದಾಲ್‌ನ ಘಮಕ್ಕೆ ಮೂಗರಳಿಸಿಕೊಂಡು ಕಣ್ಣುಜ್ಜಿಕೊಳ್ಳುತ್ತ.

Abhijnana excerpt of Gandaki Zone Short story by Kannada Writer Musician Dr Kanaada Raaghava

ಗಂಡಕೀ ಝೋನ್

ಆದರೆ ಇಂದೇಕೋ ಋತುಪರ್ಣ, ಅತ್ತ ಹಿತ್ತಲಿನಲ್ಲಿ ಕೋಳಿಗಳ ಜಗಳವನ್ನು ಬಿಡಿಸುತ್ತಿದ್ದ ಅಮ್ಮನ ಗಲಾಟೆಗೆ ಎದ್ದು ತೆರೆದ ಬಾಗಿಲಿನ ಬುಡದಲ್ಲಿ ರಜಾಯಿ ಹೊದ್ದು ಕುಳಿತ. ಪೋಖರಾ ಎಂಬ ನೇಪಾಳದ ಅತೀವ ಸಿರಿದೇಹದ ಊರಿನ ಬಹಳ ಎತ್ತರವಾದ ಆ ಫುಲ್ ಬಾರಿ ಗುಡ್ಡದ ತುದಿಯಲ್ಲಿ ಅವನ ಮಗಳು ಜಾಲಿಂದ ಎದರು ಅಷ್ಟೇ ಎತ್ತರವಿದ್ದ ಗಾರಂಗ್ ಕೋಟ್ ಎಂಬ ಗುಡ್ಡದ ತುದಿ ಅವನಿಗೆ ಕಾಣಿಸಿತು. ಸೂರ್ಯನೂ ಆಗಷ್ಟೆ ಸಾರಂಗ್ ಕೋಟ್ ಗುಡ್ಡವನ್ನು ಹತ್ತಿನಿಂತಿದ್ದ. ಬೆಳಗಾಗುವುದನ್ನೇ ಕಾಯುತ್ತಿದ್ದವರಂತೆ ಪ್ಯಾರಾಚೂಟಿನ ಅಷ್ಟಗಲದ ರೆಕ್ಕೆಯನ್ನು ಹಾರಿಸುತ್ತ ಪ್ಯಾರಾಗ್ಲೈಡಿಂಗ್​ನ ಸಾಹಸಿಗಳು ಜಗತ್ತಿಗೆ ಸುಂದರ ಸೂರ್ಯೋದಯವೊಂದನ್ನು ನಭದ ಅಂಕಣದಲ್ಲಿ ನಿಂತು  ಸವಿಯುತ್ತಿದ್ದರು. ಋತುಪರ್ಣನ ಕಣ್ಣಿನ ಕ್ಷಿತಿಜಕ್ಕೆ ಆ ಪ್ಯಾರಾಚೂಟ್​ಗಳು ಸಾರಂಗ್ ಕೋಟ್ ಬೆಟ್ಟಕ್ಕೆ ಮುತ್ತಿಗೆ ಹಾಕಿದ ದಿವ್ಯ ಹಕ್ಕಿಗಳಂತೆ ಕಂಡವು.

ಕನಸನ್ನು ಋತುಪರ್ಣ ಕಾಣಲು ಶುರುವಿಟ್ಟು ಬಹಳ ಕಾಲವಾಗಿತ್ತು, ತಾನೊಂದು ದಿನ ಹಾಗೆ ಹಕ್ಕಿಯಂತೆ ಸಾರಂಗ್ ಕೋಟ್ ಬೆಟ್ಟದ ತುದಿಯಲ್ಲಿ ಹಾರುತ್ತ ಈ ಫುಲ್ ಬಾರಿ ಗುಡ್ಡದ ಶಿಖರದಲ್ಲಿದ್ದ ತನ್ನ ಮನೆಯನ್ನು ನೋಡಬೇಕೆಂಬ ಕನಸನ್ನು ಅವನು ತನ್ನ ಸಣ್ಣ ಕಣ್ಣುಗಳಿಂದ ಕಾಣುತ್ತಲೇ ಬಂದಿದ್ದ. ಒಂದು ತಾಸು ಹಾಗೆ ಹಾರಲು ಐದು ಸಾವಿರ ರೂಪಾಯಿಗಳು ಬೇಕು ಎಂಬುದನ್ನು ಅದು ಹೇಗೋ ಪತ್ತೆ ಹಚ್ಚಿ ಅದಕ್ಕಾಗಿ ಅವನು ಈಗಾಗಲೇ ಕೂಡಿರುತ್ತ ಬಂದ ಆರುನೂರು ರೂಪಾಯಿಗಳನ್ನು ನೆನೆಯುತ್ತ, ಜತೆಗೆ ತಾನು ಮಾಡದಿದ್ದ ಹಿಂದಿನ ದಿನದ ಗಣಿತದ ಲೆಕ್ಕವನ್ನು, ಅದನ್ನೊಪ್ಪಿಸದಿದ್ದರೆ ತನ್ನ ಜಾತಿಯನ್ನು ಹಿಡಿದು ಅವಮಾನಿಸುತ್ತಿದ್ದ ಗಣಿತದ ಮೇಷ್ಟರನ್ನು ನೆನೆಯುತ್ತಎದ್ದು ಹೊದ್ದ ರಜಾಯಿಯನ್ನು ಮತ್ತಷ್ಟು ಹಿತವಾಗಿ ತಬ್ಬಿಕೊಳ್ಳುತ್ತ ಇನ್ನೂ ಹಿತ್ತಲಿನಲ್ಲಿ ಕೋಳಿಗಳ ಜಗಳವನ್ನು ನಿಭಾಯಿಸಲು ಹೆಣಗುತ್ತಿದ್ದ ಅಮ್ಮನ ಬಳಿ ನಡೆದು, “ಅಮ್ಮಾ, ನಾನಿವತ್ತು ಸ್ಕೂಲಿಗೆ ಹೋಗೋಲ್ಲ. ಆ ಲೆಕ್ಕದ ಮೇಷ್ಟು ಬಯ್ತಾರೆ ಯಾವಾಗ್ಲೂ… ಅರೆ ಓ ಗಂಧರ್ವಾ.. ನಿಂಗ್ಯಾಕ್ ಲೆಕ್ಕ? ಹೋಗು, ಗಾನಾಬಾಜ್ ಮಾಡ್ಕೊಂಡಿರು ಅಂತಾರೆ” ಎಂದ.

ಸೌಜನ್ಯ : ಅಭಿರುಚಿ ಪ್ರಕಾಶನ, ಮೈಸೂರು. 9980560013

ಇದನ್ನೂ  ಓದಿ : Literature : ಅಭಿಜ್ಞಾನ ; ಸತ್ತ ಭಾಷಾ ಸಂಪತ್ತು ಹುಡುಕುವವರೇ ಇಂದು ಜೀವಂತವಾಗಿರುವ ಭಾಷೆಗಳ ಕತ್ತು ಹಿಚುಕುತ್ತಿದ್ದಾರೆ

Published On - 3:28 pm, Tue, 25 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್