Gokak Falls : ಘಟಪ್ರಭೇ, ನಿನ್ನ ಪಥ ಬದಲಿಸು ಎಂದು ನಿನ್ನವರೊಬ್ಬರು ಹೇಳಿದರೆ ಏನು ಮಾಡುತ್ತೀ?

Possessive : ಮಕ್ಕಳು ನನ್ನ ಇಚ್ಛೆಯಂತೆಯೇ ಬದುಕಲಿ, ನಾನು ಹೇಳಿದಂತೆಯೇ ವಿದ್ಯಾರ್ಥಿಗಳು ಕೇಳಲಿ, ನನ್ನ ಸಂಗಾತಿಯ ಮೊದಲ ಆದ್ಯತೆ ನಾನೇ ಆಗಿರಲಿ, ನನ್ನ ಸ್ನೇಹಿತ ನನ್ನ ಮಾತನ್ನೇ ಕೇಳಲಿ, ನನ್ನ ಪ್ರೇಮಿಯ ಸಂಪೂರ್ಣ ಅಧಿಕಾರ ನನ್ನದು ಮಾತ್ರ!

Gokak Falls : ಘಟಪ್ರಭೇ, ನಿನ್ನ ಪಥ ಬದಲಿಸು ಎಂದು ನಿನ್ನವರೊಬ್ಬರು ಹೇಳಿದರೆ ಏನು ಮಾಡುತ್ತೀ?
ಸಾಂದರ್ಭಿಕ ಚಿತ್ರ, ರೂಪದರ್ಶಿ : ಕೃಷ್ಣ ದೇವಾಂಗಮಠ
Follow us
ಶ್ರೀದೇವಿ ಕಳಸದ
|

Updated on:Jan 26, 2022 | 2:53 PM

ಗೋಕಾಕ ಫಾಲ್ಸ್​ | Gokak Falls : ಸೂರ್ಯನಿಗೆ ತನ್ನ ನೋವಿಗಿಂತ ಹೆಚ್ಚಾಗಿ ಎಲ್ಲಿ ಅಪ್ಪ ಬೈದು ಬಿಡುತ್ತಾರೋ ಎಂಬ ಭಯವೇ ಹೆಚ್ಚಿತ್ತು. ಕೈ-ಕಾಲಿನ ಗಾಯ ಬಹುಬೇಗ ವಾಸಿಯಾಯ್ತು ಆದರೆ ಎದೆಯೊಳಗೆ ಬಚ್ಚಿಟ್ಟ ಗಾಯ ಅಲ್ಲಿಯೇ ಹೆಪ್ಪುಗಟ್ಟಿ ಆತನ ಅಂತ್ಯಕ್ಕೆ ತಯಾರಾಗಿ ನಿಂತಿತ್ತು. ಆದರೂ ಆತ ಬಾಯಿಬಿಟ್ಟು ಹೇಳುವ ಗೋಜಿಗೆ ಹೋಗಿರಲೇ ಇಲ್ಲ. ಕೊನೆಗೆ ಒಂದು ದಿನ  ತನ್ನ ಅಮ್ಮನ ಬಳಿ, ‘ಅಮ್ಮ ನನಗೇಕೋ ಎದೆ ನೋವು’ ಎಂದಿದ್ದ. ಆದರೆ ಆ ಮಾತಿನ ಭಯಾನಕ ಸ್ವರೂಪ ಆ ದಿನ ಅವನ ಅಮ್ಮನಿಗೆ ತಿಳಿದಿರಲಿಲ್ಲ. ತಿಳಿಯುವ ಹೊತ್ತಿಗೆ ಕಾಲ ಮೀರಿ ಹೋಗಿತ್ತು. ಆತನ ಜೀವನದ ಕೊನೆಯ ರಾತ್ರಿ ಅವನ ಅಮ್ಮ ಆಸ್ಪತ್ರೆಯ ಐಸಿಯುನಲ್ಲಿ ಬಿಕ್ಕುವಾಗಲೂ ಆತ ಹೇಳಿದ್ದು- ‘ಅಳಬೇಡ ಅಮ್ಮ ಅಪ್ಪ ನೋಡಿದ್ರೆ ಬೈತಾರೆ…!’ ಬಹುಶಃ ಆತನ ಎದೆಗೆ ತಾಗಿದ ಕಲ್ಲಿಗಿಂತ ಅಪ್ಪನೆಂಬ ಭಯವೇ ಆತನ ಹೃದಯವನ್ನು ಹೆಪ್ಪುಗಟ್ಟಿತ್ತೇನೋ. ಆತ ಕಣ್ಣುಮುಚ್ಚಿದ ಮರುದಿನವೇ ಗೊತ್ತಾಯಿತು, ಎಸ್.ಎಸ್.ಎಲ್.ಸಿ ಯಲ್ಲಿ ಶಾಲೆಗೆ ಫಸ್ಟ್ ರ‍್ಯಾಂಕ್ ಅಂತ. ಆಗಲಾದರೂ ಸೂರ್ಯನ ತಂದೆ ಅವನನ್ನು ಹೊಗಳುತ್ತಿದ್ದರೇನೋ, ಆದರೆ ಹೊಗಳಿಸಿಕೊಳ್ಳಬೇಕಾದವರೇ ಇರಲಿಲ್ಲವಲ್ಲ.

ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

*

(ಹರಿವು – 7)

ಕೆಲವೊಮ್ಮೆ ಕೆಲವು ವಿಷಯಗಳು ಮನಸ್ಸನ್ನು ತೀರ ಇನ್ನಿಲ್ಲದಂತೆ ಕಾಡಿಬಿಡುತ್ತವೆ. ಕೆಲವು ಘಟನೆಗಳು, ಕೆಲ ಮಾತುಗಳು, ಎಲ್ಲೋ ಕೇಳಿದ ಕಥೆ, ಇನ್ನೆಲ್ಲೋ ಓದಿದ ಕವಿತೆ… ಆ ಕಾಡುವ ವಿಷಯದ ಜಾಡು ಹಿಡಿದು ಹೊರಟಾಗ ಕೆಲವೊಮ್ಮೆ ಮತ್ತ್ಯಾವುದೋ ಹೊಸ ತೀರ ಕಾಣುತ್ತದೆ, ಹೊಸ ಬೆಳಕಿನಂತೆ. ಇನ್ನೂ ಕೆಲವೊಮ್ಮೆ ಎಷ್ಟೇ ಯೋಚಿಸಿದರೂ ಉತ್ತರವೇ ಸಿಗದೇ ಒದ್ದಾಡಿ ಕೊನೆಗೆ ಮೌನವಾಗಿ ಬಿಡುತ್ತದೆ. ಹೀಗೆ ತೀರ ಕಾಡಿದ ವಿಷಯಗಳಲ್ಲಿ ಸೂರ್ಯನ ಸಾವು ಮತ್ತು ಅವನ ಭಯವೂ ಒಂದು. ಆತ ತುಂಬ ಜಾಣ, ಒಳ್ಳೆಯ ಮಾತುಗಾರ, ಶಾಲೆಯಲ್ಲಿ ರ‍್ಯಾಂಕ್ ಸ್ಟೂಡೆಂಟ್. ಎಲ್ಲರ ಅಚ್ಚು-ಮೆಚ್ಚಿನ ಹುಡುಗ. ಆದರೆ ತನ್ನ ತಂದೆಯೆಂದರೆ ಇನ್ನಿಲ್ಲದ ಭಯ ಅವನಿಗೆ.

ಒಮ್ಮೆ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿ ರಜೆಗೆಂದು ಸಂಬಂಧಿಕರ ಊರಿಗೆ ಹೋಗಿದ್ದ. ಅಲ್ಲಿ ತನ್ನ ವಯಸ್ಸಿನ ಮಕ್ಕಳ ಜೊತೆ ಸೇರಿ ಮೋಜು ಮಸ್ತಿ ಮಾಡುತ್ತಿರುವಾಗ ದುರಾದೃಷ್ಟವಶಾತ್ ಮರಕೋತಿ ಆಡಲು ಹೋದಾಗ ಮರದ ಮೇಲಿಂದ ಆಯತಪ್ಪಿ ಬಿದ್ದ. ಅಷ್ಟೇನು ಎತ್ತರದ ಮರ ಅಲ್ಲವಾದ್ದರಿಂದ ದೊಡ್ಡ ಪೆಟ್ಟೇನೂ ಆದಂತೆ ಕಂಡಿರಲಿಲ್ಲ. ಕೈ-ಕಾಲುಗಳಿಂದ ಜಾರಿದ ರಕ್ತ ಮಾತ್ರ ಎಲ್ಲರಿಗೂ ಕಂಡಿತ್ತು. ಹೀಗಾಗಿ ಅದಕ್ಕೆ ತುರ್ತು ಚಿಕಿತ್ಸೆಯ ಅಗತ್ಯವೂ ಇತ್ತು. ಆದರೆ ಆತ ಬಿದ್ದಾಗ ಆತನ ಎದೆ ಕಲ್ಲಿಗೆ ತಾಕಿ ಅದು ಹೃದಯಕ್ಕೆ ಕುತ್ತು ತಂದಿತ್ತು.

ಸೂರ್ಯನಿಗೆ ತನ್ನ ನೋವಿಗಿಂತ ಹೆಚ್ಚಾಗಿ ಎಲ್ಲಿ ಅಪ್ಪ ಬೈದು ಬಿಡುತ್ತಾರೋ ಎಂಬ ಭಯವೇ ಹೆಚ್ಚಿತ್ತು. ಕೈ-ಕಾಲಿನ ಗಾಯ ಬಹುಬೇಗ ವಾಸಿಯಾಯ್ತು ಆದರೆ ಎದೆಯೊಳಗೆ ಬಚ್ಚಿಟ್ಟ ಗಾಯ ಅಲ್ಲಿಯೇ ಹೆಪ್ಪುಗಟ್ಟಿ ಆತನ ಅಂತ್ಯಕ್ಕೆ ತಯಾರಾಗಿ ನಿಂತಿತ್ತು. ಆದರೂ ಆತ ಬಾಯಿಬಿಟ್ಟು ಹೇಳುವ ಗೋಜಿಗೆ ಹೋಗಿರಲೇ ಇಲ್ಲ. ಕೊನೆಗೆ ಒಂದು ದಿನ  ತನ್ನ ಅಮ್ಮನ ಬಳಿ, ‘ಅಮ್ಮ ನನಗೇಕೋ ಎದೆ ನೋವು’ ಎಂದಿದ್ದ. ಆದರೆ ಆ ಮಾತಿನ ಭಯಾನಕ ಸ್ವರೂಪ ಆ ದಿನ ಅವನ ಅಮ್ಮನಿಗೆ ತಿಳಿದಿರಲಿಲ್ಲ. ತಿಳಿಯುವ ಹೊತ್ತಿಗೆ ಕಾಲ ಮೀರಿ ಹೋಗಿತ್ತು. ಆತನ ಜೀವನದ ಕೊನೆಯ ರಾತ್ರಿ ಅವನ ಅಮ್ಮ ಆಸ್ಪತ್ರೆಯ ಐಸಿಯುನಲ್ಲಿ ಬಿಕ್ಕುವಾಗಲೂ ಆತ ಹೇಳಿದ್ದು- ‘ಅಳಬೇಡ ಅಮ್ಮ ಅಪ್ಪ ನೋಡಿದ್ರೆ ಬೈತಾರೆ…!’ ಬಹುಶಃ ಆತನ ಎದೆಗೆ ತಾಗಿದ ಕಲ್ಲಿಗಿಂತ ಅಪ್ಪನೆಂಬ ಭಯವೇ ಆತನ ಹೃದಯವನ್ನು ಹೆಪ್ಪುಗಟ್ಟಿತ್ತೇನೋ. ಆತ ಕಣ್ಣುಮುಚ್ಚಿದ ಮರುದಿನವೇ ಗೊತ್ತಾಯಿತು, ಎಸ್.ಎಸ್.ಎಲ್.ಸಿ ಯಲ್ಲಿ ಶಾಲೆಗೆ ಫರ್ಸ್ಟ್​  ರ‍್ಯಾಂಕ್ ಅಂತ. ಆಗಲಾದರೂ ಸೂರ್ಯನ ತಂದೆ ಅವನನ್ನು ಹೊಗಳುತ್ತಿದ್ದರೇನೋ, ಆದರೆ ಹೊಗಳಿಸಿಕೊಳ್ಳಬೇಕಾದವರೇ ಇರಲಿಲ್ಲವಲ್ಲ.

Gokak Falls Column Writer Sushma Savasuddi discussed Possessiveness Parenting

ಫೋಟೋ : ಕೃಷ್ಣ ದೇವಾಂಗಮಠ

ಈ ಘಟನೆ ನೆನಪಾದಾಗಲೆಲ್ಲ ಮನಸ್ಸು ಕಲೀಲ್ ಗಿಬ್ರಾನ್​ನ ಕವಿತೆಯನ್ನು ಪಠಿಸುತ್ತದೆ. ಅಯ್ಯೋ ಸೂರ್ಯನ ತಂದೆಗೆ ಈ ಕವಿತೆಯನ್ನೊಮ್ಮೆ ಓದಿಸಬಾರದಿತ್ತೆ ಎಂದೆನಿಸುತ್ತದೆ. “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ” ಎನ್ನುವ ಮೊದಲ ಸಾಲನ್ನು ಓದಿದಾಗ, ಅದೆಷ್ಟು ಸರಾಗವಾಗಿ ಹೀಗೆ ಹೇಳುತ್ತಾನೆ ಕವಿ ಎನ್ನಿಸುತ್ತದೆ. ಮುಂದುವರಿಯುತ್ತಾ…  ನೀವು ಅವರಿಗೆ ನಿಮ್ಮ ಪ್ರೀತಿಯನ್ನು ನೀಡಿ ಆದರೆ ನಿಮ್ಮ ಆಲೋಚನೆಗಳನ್ನಲ್ಲ. ಅವರಿಗೆ ಅವರದ್ದೇ ಆದ ಆಲೋಚನೆಗಳಿವೆ. ನೀವು ಅವರ ದೇಹಗಳಿಗೆ ಮಾತ್ರ ಮನೆಯಾಗಬಲ್ಲಿರಿ. ಆದರೆ ಅವರ ಆತ್ಮಗಳಿಗಲ್ಲ. ಅವರ ಆತ್ಮ ನಾಳೆಗಳಲ್ಲಿ ನೆಲೆಸುತ್ತವೆ. ಬೇಕಾದರೆ ನೀವು ಅವರಂತಾಗಲು ಯತ್ನಿಸಿ ಆದರೆ ಅವರು ನಿಮ್ಮಂತಾಗಲಿ ಎಂದು ಬಯಸದಿರಿ. ನದಿ ಎಂದಿಗೂ ಹಿಮ್ಮುಖವಾಗಿ ಚಲಿಸಲಾರದು. ನಿಮ್ಮ ಮಕ್ಕಳು ಬಾಣಗಳಂತೆ, ನೀವು ಆ ಬಾಣವನ್ನು ಚಿಮ್ಮುವ ಬಿಲ್ಲುಗಳು.’’

ಕವಿ ಇದನ್ನು ಪಾಲಕರಿಗಾಗಿ ಹೇಳಿದ್ದರೂ ಇದು ಬಹು ಅರ್ಥದಲ್ಲಿ ಎಲ್ಲರಿಗೂ ಅನ್ವಯವಾಗುತ್ತದೆ. ತಮ್ಮ ಮಕ್ಕಳು ತಮ್ಮ ಇಚ್ಛೆಯಂತೆಯೇ ಬದುಕಲಿ ಎನ್ನುವ ಪಾಲಕರು, ತಾನು ಹೇಳಿದಂತೆ ಕೇಳಬೇಕೆನ್ನುವ ಶಿಕ್ಷಕರು, ನನ್ನ ಸಂಗಾತಿಯ ಮೊದಲ ಆದ್ಯತೆ ತಾನೇ ಆಗಿರಲಿ ಎನ್ನುವವರು, ತಮ್ಮ ಸ್ನೇಹಿತನ ಮೇಲಿರುವ ಪೊಸೆಸಿವ್​ನೆಸ್, ತನ್ನ ಪ್ರೀತಿಯ ಸಂಪೂರ್ಣ ಅಧಿಕಾರ ನನಗೆ ಮಾತ್ರ ಎನ್ನುವ ಪ್ರೇಮಿಗಳು, ಯುವಕರೆಲ್ಲ ಕೆಟ್ಟು ಹೋದರು ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ನಮ್ಮಂತೆ ಇರಲು ಏನು ಕಷ್ಟ ಇವರಿಗೆ ಎಂದು ಬೈದುಕೊಳ್ಳುವ ಹಿರಿಯ ಜೀವಗಳು… ಹೀಗೆ ಎಲ್ಲರಿಗೂ ಈ ಕವಿತೆ ಅನ್ವಯಿಸುತ್ತದೆ. ಸಲಹೆ ನೀಡುವುದು, ಮಾರ್ಗದರ್ಶನ ನೀಡುವುದು, ಖಂಡಿತವಾಗಿಯೂ ತಪ್ಪಲ್ಲ ಆದರೆ ಅವರಿಗೆ ದೊರೆಯಬೇಕಾದ ಜ್ಞಾನ ಅವರಿಗೆ ತಮ್ಮ ಸ್ವಂತ ಅನುಭವದ ಮೂಲಕವೇ ದೊರೆತರೆ ಒಳ್ಳೆಯದಲ್ಲವಾ?

ಇದು ಸರಿ, ಇದು ತಪ್ಪು ಎಂದು ಕೇಳಿ ಕಲಿಯುವುದಕ್ಕಿಂತ ಅನುಭವಿಸಿ ಕಲಿತರೆ ಅದು ಕೊನೆಯವರೆಗೂ ನೆನಪುಳಿಯುವಂತಹದ್ದು. ದಾರಿ ಮಧ್ಯೆ ಹುಟ್ಟುವ ಗೊಂದಲಗಳು, ಸಮಸ್ಯೆಗಳು, ದ್ವಂದ್ವಗಳಿಗಾಗಿ ಆ ದಾರಿಯನ್ನೇ ಬದಲಿಸು ಎಂದು ನೀಡುವ ಸಲಹೆಗಿಂತ ಅವರಷ್ಟಕ್ಕೆ ಅದನ್ನು ಪರಿಹರಿಸಲು ಬಿಟ್ಟುಬಿಡುವುದು ಒಳ್ಳೆಯದು. ಕೆಲವು ಬಾರಿ ಎಂತೆಂತಹದ್ದೋ ಯಕ್ಷ ಪ್ರಶ್ನೆಗಳಿಗೆಲ್ಲ ಸಲಿಸಾಗಿ ಉತ್ತರ ಹುಡುಕುವ ಛಾತಿ ಇರುತ್ತದೆ. ಆದರೆ ತೀರ ನಮ್ಮದೇ ಗೊಂದಲಗಳಿಗ ಉತ್ತರವೇ ದೊರೆಯುವುದು ಕಷ್ಟವಾಗಿ ಹೋಗುತ್ತದೆ. ಅದರಲ್ಲೂ ಯುವ ಮನಸ್ಸುಗಳಿಗೆ ಇಂತಹ ದ್ವಂದ್ವ, ಗೊಂದಲಗಳು ಎದುರಾಗುವುದು ಸಹಜ.

Gokak Falls Column Writer Sushma Savasuddi discussed Possessiveness Parenting

ಫೋಟೋ : ಕೃಷ್ಣ ದೇವಾಂಗಮಠ

ಈ ಎಲ್ಲ ವಿಚಾರಗಳು ನನ್ನೊಳಗೆ ನುಸುಳಲು ಪ್ರೇರೇಪಿಸಿದ್ದು ನನ್ನ ಖಾಸಾ ಗೆಳತಿಯ ಕಣ್ಣೀರಿನಲ್ಲಿ ಅಡಗಿದ ಪ್ರಶ್ನೆಗಳು. ಅವಳು ಎದೆಯಲ್ಲಿ ದುಃಖವನ್ನಿಟ್ಟುಕೊಂಡು ಹೊರಜಗತ್ತಿಗೆ ನಗುವಿನ ಮುಖವಾಡ ಪ್ರದರ್ಶಿಸುತ್ತ ಕಾಲ ದೂಕುತ್ತಿದ್ದಾಳೆ. ದಿನವೂ ಅವಳೊಟ್ಟಿಗೆ ಇರುವ ನನಗೆ ಅವಳ ಮುಖವಾಡದ ಹಿಂದಿರುವ ನೋವನ್ನು ಗ್ರಹಿಸುವುದು ಕಷ್ಟವೇನೂ ಆಗಲಿಲ್ಲ. ಆದರೆ ಆ ನೋವಿನ ಕಾರಣ ತಿಳಿದುಕೊಳ್ಳಲು ಮಾತ್ರ ತುಂಬಾ ಕಷ್ಟಪಟ್ಟೆ. ಅವಳಿಗೆ ಯಾರೊಟ್ಟಿಗೂ ಹಂಚಿಕೊಳ್ಳುವ ಆಸಕ್ತಿ ಇಲ್ಲ. ತನ್ನೊಳಗೇ ಸಂಕಟ ಪಡುತ್ತಿದ್ದಾಳೆ. ಒಂದು ರೀತಿಯ ಭಯ, ನಿರ್ಬಂಧ, ಪಶ್ಚಾತ್ತಾಪ, ಅಪರಾಧಿ, ಹಿನ್ನಡೆ ಭಾವ… ಎಲ್ಲವೂ ಅವಳನ್ನು ಆವರಿಸಿದೆ. ಹೊರಲೋಕಕ್ಕೆ ಆಕೆ ಜಾಣೆ, ಉನ್ನತ ವಿಚಾರಗಳನ್ನು ಹೊತ್ತವಳು, ಎಲ್ಲವನ್ನೂ ಪ್ರಶ್ನಿಸಬಲ್ಲ ಧೈರ್ಯವಂತೆ. ಆದರೆ ತನ್ನ ಒಳಲೋಕದಲ್ಲಿ ತನಗೆ ತಾನೇ ವಿಲನ್ ಸ್ಥಾನ ಕೊಟ್ಟುಕೊಂಡಿದ್ದಾಳೆ.

ಬಹು ಎತ್ತರಕ್ಕೆ ಹಾರುವ ಕನಸುಗಳಿವೆ ಆಕೆಯ ರೆಕ್ಕೆಗೆ ಆದರೂ ಕೆಲವೊಮ್ಮೆ ಹಿಂಜರಿಯುತ್ತವೆ. ಕಾರಣ ಅರಿಯದ ನಾನು ಆಕೆಯ ಸ್ಥಿತಿ ನೋಡಲಾಗದೇ ಸಂಕಟಿಸುತ್ತಿದ್ದೆ. ಒಮ್ಮೆ ಕೇಳಿಯೇಬಿಟ್ಟೆ ತುಸು ಗಡಸು ಧ್ವನಿಯಲ್ಲಿ. ನನ್ನ ಧ್ವನಿ ಕೊಂಚ ಹೆಚ್ಚಾಯಿತೋ ಗೊತ್ತಿಲ್ಲ. ಅವಳ ಕಣ್ಣ ಜಲಪಾತ ಉಕ್ಕಿಯೇಬಿಟ್ಟಿತು. ನೀರೆಲ್ಲ ಬತ್ತಿ ಹೋದ ಮೇಲೆ ನಿಧಾನವಾಗಿ ಒಡಲಾಳದ ಮಾತುಗಳೆಲ್ಲ ಹೊರಬಿದ್ದವು.

ಅವಳನ್ನು ಕಾಡುವ ದೊಡ್ಡ ಪ್ರಶ್ನೆಗಳು- ‘ನಾನೇಕೆ ಬದಲಾಗಲು ಆಗುತ್ತಿಲ್ಲ? ನಾನು ನನ್ನಂತೆಯೇ ಇರುವ ಹಠ ನನಗೇಕೆ? ನನಗೇಕೆ ಇಷ್ಟು ಸಿಟ್ಟು? ಎಲ್ಲರಿಗೂ ಇಷ್ಟವಾಗುವ ನನ್ನ ಮಾತು, ನಡೆವಳಿಕೆ, ನನ್ನನ್ನು ತುಂಬಾ ಪ್ರೀತಿಸುವವರಿಗೆ ಯಾಕೆ ಇಷ್ಟವಾಗುವುದಿಲ್ಲ? ನನ್ನ ಮೆಚ್ಯೂರಿಟಿ ಲೆವೆಲ್ ಹೆಚ್ಚಿದಂತೆಲ್ಲ ನಾನು ನನ್ನವರಿಂದ ದೂರ ಹೋಗುತ್ತಿದ್ದೇನೆ ಎಂದೆನ್ನಿಸುತ್ತಿದೆ. ಮೆಚ್ಯೂರಿಟಿ ಜೊತೆಗೆ ಗರ್ವವೂ ಬೆಳೆಯುತ್ತಿದೆಯಾ ಹೇಗೆ? ನನ್ನ ಉದ್ದೇಶ ಎಲ್ಲರಿಗೂ ಒಳ್ಳೆಯದೇ ಮಾಡುವುದಾಗಿರುತ್ತದಾದರೂ ನನ್ನವರಿಗೆ ಅರಿವಿಲ್ಲದಂತೆ ನೋವು ಕೊಡುತ್ತೇನೆ. ನನ್ನ ಯಾವ ಮಾತು, ಯಾವ ನಡೆ, ಯಾವಾಗ ನೋವು ಕೊಡುತ್ತದೆ ಎಂಬುದೇ ನನಗೆ ಗೊತ್ತಾಗುವುದಿಲ್ಲ. ನಾನು ಅರ್ಥ ಮಾಡಿಕೊಳ್ಳಲಿ ಎಂದು ಅವರು ಬೈದರೆ ನನಗದು ಸಿಟ್ಟು ತರಿಸುತ್ತದೆ, ಅವರು ಹೇಳುವ ಕೆಲ ವಿಷಯಗಳನ್ನು ನನ್ನ ಮನ ಒಪ್ಪುವುದೇ ಇಲ್ಲ. ಅವರಿಗೆ ನನ್ನ ಮೇಲಿರುವ ಪೊಸೆಸಿವ್​ನೆಸ್​ ನನಗೆ ಕಿರಿಕಿರಿ ಎನಿಸುತ್ತದೆ, ನಿರ್ಬಂಧವೆನಿಸುತ್ತದೆ. ನಾನು ಏನು ಮಾಡಲಿ ಹೇಳು?’

Gokak Falls Column Writer Sushma Savasuddi discussed Possessiveness Parenting

ಫೋಟೋ : ಕೃಷ್ಣ ದೇವಾಂಗಮಠ

ಅವಳ ಆತ್ಮೀಯರೊಬ್ಬರು ಅವಳಿಂದ ಏನನ್ನೋ ಅಪೇಕ್ಷಿಸುತ್ತಿದ್ದಾರೆ. ಅವರ ಅಪೇಕ್ಷೆಯಲ್ಲಿ ಸ್ವಾರ್ಥವಿಲ್ಲ, ಕೆಟ್ಟ ಉದ್ದೇಶವಿಲ್ಲ. ಆದರೆ ಎಷ್ಟೇ ಪ್ರಯತ್ನಿಸಿದರೂ ಇವಳಿಂದ ಅವರಿಚ್ಛೆಯಂತೆ ನಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ವಚ್ಛಂದವಾಗಿ ಆಕಾಶವೆಲ್ಲ ತನ್ನದೇ ಎನ್ನುತ್ತ ಹಾರುವ ವಯಸ್ಸದು. ಯಾರ ಲಗಾಮಿಗೂ ಒಳಗಾಗದೇ, ಎಲ್ಲ ಎಲ್ಲೆಯನ್ನೂ ಮೀರಿ ಹಾರುವ ಮನಸ್ಸದು. ‘ಆಕಾಶ ಇಷ್ಟೇ ಯಾಕಿದೇಯೋ’ ಎಂದೂ ಅನ್ನಿಸುವ ಚಿಲುಮೆಯ ಬುಗ್ಗೆಯದು. ಅಷ್ಟೊಂದು ಹಾರುವ ಹುಚ್ಚು ರೆಕ್ಕೆಗಳಿಗೆ. ತಪ್ಪಾದರೂ ಏನು? ಹಾರಲಿ ಬಿಡಿ ಮೇಲೆ ಹಾರಿದಷ್ಟು ಜಗತ್ತು ಚಿಕ್ಕದಾಗಿ ಕಂಡು, ವಿಶಾಲಾರ್ಥದಲ್ಲಿ ಒಳಗಿಳಿಯುತ್ತಾ ಮನಸ್ಸು ಗುರಿ ಕಂಡುಕೊಳ್ಳುತ್ತದೆ. ಆದರೆ, ಚಲಿಸದ ಹೊರತು ಗೊಂದಲಗಳಿಗೆ ಬಿಡುಗಡೆಯಾದರೂ ಸಿಗುವುದು ಹೇಗೆ?

ಘಟಪ್ರಭೆ, ನಿನ್ನೊಳಗೂ ಸುಳಿಗಳುಂಟು ಆದರೂ ಅದೆಷ್ಟು ಸರಾಗವಾಗಿ ಹರಿಯುತ್ತಿರುತ್ತೀ. ನಿನ್ನವರೊಬ್ಬರೂ ಬಂದು ನಿನ್ನ ಪಥ ಬದಲಿಸಿಬಿಡು ಎಂದರೆ ನೀನೇನು ಮಾಡುತ್ತಿ?

ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com 

(ಮುಂದಿನ ಹರಿವು : 9.2.2022)

ಹಿಂದಿನ ಹರಿವು : Gokak Falls : ಇದು ಇಲ್ಲದಿರೋ ನೆಗಡಿ ನೆಪವೊಡ್ಡಿ ಮೂಗು ಕತ್ತರಿಸಲೇಬೇಕು ಎಂಬ ಹುನ್ನಾರ

Published On - 11:16 am, Wed, 26 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್