Orange Signal : ‘ಗುಡ್ ನ್ಯೂಸ್ ಯಾವಾಗ?’ ಹೀಗೆ ಕೇಳುವುದನ್ನು ನಿಲ್ಲಿಸುವುದು ಸೂಕ್ತ

Orange Signal : ‘ಗುಡ್ ನ್ಯೂಸ್ ಯಾವಾಗ?’ ಹೀಗೆ ಕೇಳುವುದನ್ನು ನಿಲ್ಲಿಸುವುದು ಸೂಕ್ತ

DINK : ‘ಮಕ್ಕಳು ಬೇಕು, ಅವು ನಮ್ಮ ವಂಶವಾಹಿಗಳನ್ನು ಪ್ರಪಂಚದಲ್ಲಿ ಮುಂದುವರೆಸಿಕೊಂಡು ಹೋಗಬೇಕು ಎನ್ನುವುದು ಸ್ವಾರ್ಥ ಅಲ್ಲವೇ? ಸಮಾಜದ ಸಮ್ಮತಕ್ಕೆ ಅನುಗುಣವಾಗಿ ಬದುಕಿ ನೆಮ್ಮದಿಯಲ್ಲಿರಬೇಕು ಎನ್ನುವುದು ಸ್ವಾರ್ಥವೇ ಅಲ್ಲವೆ?’ ಸೌರಭಾ ಕಾರಿಂಜೆ

ಶ್ರೀದೇವಿ ಕಳಸದ | Shridevi Kalasad

|

Oct 30, 2021 | 10:21 AM

Orange Signal – ಆರೇಂಜ್ ಸಿಗ್ನಲ್ : ‘Duel income no kids’ ಇವರನ್ನು ಸ್ವಾರ್ಥಿಗಳು ಎಂದು ಸಾಂಪ್ರದಾಯಿಕ ಮನೋಭಾವದವರು ಜರಿಯಬಹುದು. ಹಾಗೆ ನೋಡಿದರೆ ಮಕ್ಕಳನ್ನು ಹೆತ್ತು, ಅವರಿಗಾಗಿ ಮತ್ತಷ್ಟು ಜನರ ಅನ್ನವನ್ನು ಕದಿಯುವುದು ಸ್ವಾರ್ಥ ಎಂದು ಈ ಮಂದಿ ವಾದಿಸುತ್ತಾರೆ. ಸ್ವಾರ್ಥ ಎಂಬುದು ಪ್ರತಿ ಮನುಷ್ಯನಲ್ಲಿದೆ. ಮಕ್ಕಳು ಬೇಕು, ಅವು ನಮ್ಮ ವಂಶವಾಹಿಗಳನ್ನು ಪ್ರಪಂಚದಲ್ಲಿ ಮುಂದುವರೆಸಿಕೊಂಡು  ಹೋಗಬೇಕು ಎನ್ನುವುದು ಸ್ವಾರ್ಥವೇ ಅಲ್ಲವೇ? ಸಮಾಜದ ಸಮ್ಮತಕ್ಕೆ ಅನುಗುಣವಾಗಿ ಬದುಕಿ ನೆಮ್ಮದಿಯಲ್ಲಿರಬೇಕು ಎನ್ನುವುದು ಸ್ವಾರ್ಥವಲ್ಲವೇ? ಮಕ್ಕಳನ್ನು ಹುಟ್ಟಿಸಿ, ಅವರಿಗಾಗಿ ತ್ಯಾಗಗಳನ್ನು ಮಾಡಿ, ಆಮೇಲೆ ಜೀವನವನ್ನೆಲ್ಲ ಮಕ್ಕಳಿಗಾಗಿ ಸವೆಸಿದೆವು ಎಂಬ ಅಪರಾಧೀ ಭಾವದ ಭಾರವನ್ನು ಮಕ್ಕಳ ಮೇಲೆ ಹಾಕಿ ಅವರ ಬದುಕನ್ನು ನರಕ ಮಾಡಬೇಕೇ ಎಂಬುದು ಇವರ ಪ್ರಶ್ನೆ. ಸೌರಭಾ ಕಾರಿಂಜೆ

(ಸಿಗ್ನಲ್ : 3)

ಸಹೋದ್ಯೋಗಿಗಳ ಗುಂಪಿನಲ್ಲಿ ಚಹಾ ವಿರಾಮದ ಕಾಡುಹರಟೆ ನಡೆಯುತ್ತಿತ್ತು. ಮಕ್ಕಳು, ಮರಿ, ಸಂಸಾರ, ಊರು ಕೇರಿ ಇತ್ಯಾದಿ. ಒಬ್ಬರಂದರು,

“ನಾವು ಮಕ್ಕಳು ಬೇಡ ಅಂತ ನಿರ್ಧಾರ ಮಾಡಿದ್ದೇವೆ. ಅದಕ್ಕೆ ನಾವಿಬ್ಬರೇ ಇರೋದು ಮನೇಲಿ.”

ಒಂದಷ್ಟು ಹೆಂಗಸರು,

“ಒಳ್ಳೆದಾಯಿತು ಬಿಡಿ, ನಾವು ಮನೆ, ಮಕ್ಕಳು, ಆಫೀಸು ಎಲ್ಲ ನೋಡಿಕೊಂಡು ಸುಸ್ತಾಗಿದ್ದೀವಿ, ನಿಮಗೆ ಒಂದು ಚಿಂತೆಯಾದರೂ ತಪ್ಪಿತಲ್ಲ” ಅಂದರು. ಗಂಡಸರು ಮಾತಾಡಲಿಲ್ಲ. ಅವರಿಗೆ ಮಕ್ಕಳನ್ನು ನೋಡಿಕೊಳ್ಳುವ ಚಿಂತೆ ಹೇಗೂ ಇರಲಿಲ್ಲ. ಆದ್ದರಿಂದ ಅದೊಂದು ಚಿಂತೆಯ ವಿಷಯ ಅಂತ ಅವರಿಗೆ ತೋರಲಿಲ್ಲ ಅನ್ನುವುದನ್ನು ಅವರ ಮುಖಭಾವದಿಂದ ಗ್ರಹಿಸಬಹುದಿತ್ತು.

“ನನ್ನ ಪತ್ನಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ, ಅದಕ್ಕಾಗಿ ಪ್ರಯಾಣ ಮಾಡುವುದರಲ್ಲಿ ಬಹಳ ಆಸಕ್ತಿ, ಹಾಗಾಗಿ ಮಕ್ಕಳು ಬೇಡ ಅಂತ ನಿರ್ಧರಿಸಿದೆವು.” ಅವರು ಮುಂದುವರೆಸಿದರು.

ಹರಟೆ ಮುಗಿಸಿ ಹೊರಬಂದಾಗ,

“ಬಹುಶಃ ಏನೋ ತೊಂದರೆ ಇರಬೇಕು ಮಕ್ಕಳಾಗುವುದರಲ್ಲಿ, ಅದಕ್ಕೆ ಈ ಥರ ನೆವ ಹುಡುಕಿ ಮಾತಾಡುತ್ತಾರೆ.” ಅನ್ನುವ ಮಾತುಗಳೂ ಕೇಳಿಬಂದವು.

ಅದು ನಿಜವೂ ಇರಬಹುದು, ಇಲ್ಲದೆಯೂ ಇರಬಹುದು. ಭಾರತೀಯ ಸಮಾಜದಲ್ಲಿ ಎಂದಿನಂತೆ ಇಂದಿನದೂ ಪರ್ವಕಾಲ. ಒಂದು ಕಡೆ ಮಕ್ಕಳು ಬೇಕೆಂದು ಕಂಡಕಂಡ ದೇವರಿಗೆ ಹರಕೆ ಹೊತ್ತುಕೊಳ್ಳುವ, ಐವಿಎ‍‍‍ಫ್ ಅದೂ ಇದೂ ಮಾಡಿಸಿಕೊಂಡು ಆರೋಗ್ಯ, ಭವಿಷ್ಯ ಯಾವುದನ್ನೂ ಲೆಕ್ಕಿಸದೆ ಮಕ್ಕಳಿಗಾಗಿ ಪ್ರಯತ್ನಿಸುವ ಮಂದಿ. ಇನ್ನೊಂದು ಕಡೆ ಮಕ್ಕಳೇ ಬೇಡವೆಂದು ನಿರ್ಧರಿಸುವ ಮಂದಿ.

ಈ ಎರಡನೇ ಗುಂಪಿನ ಮಂದಿ ಬಹಳ ಆಸಕ್ತಿದಾಯಕವಾದ ಗುರಿಗಳನ್ನು, ದೃಷ್ಟಿಕೋನಗಳನ್ನು ಹೊಂದಿರುತ್ತಾರೆ. ಇವರಲ್ಲಿ ಹೆಚ್ಚಿನವರು ಮಿಲೆನಿಯಲ್‍ಗಳು. ಅಂದರೆ 1980ರ ನಂತರ ಹುಟ್ಟಿದವರು. ಆಧುನಿಕತೆ, ತಂತ್ರಜ್ಞಾನಪ್ರಿಯತೆ, ಮುಕ್ತ ಬದುಕನ್ನು ಅಳವಡಿಸಿಕೊಂಡು ಬದುಕುವುದು… ಇವರ ಲಕ್ಷಣಗಳು. ಸಹಜವಾಗಿಯೇ ಸಾಂಪ್ರದಾಯಿಕ ಮನಸ್ಥಿತಿಯ ಜನರಿಗೆ ಇವರು ಸಿಡಿದೆದ್ದವರಂತೆ, ಸಾಮಾಜಿಕ ವ್ಯವಸ್ಥೆಯನ್ನು ನೆಲಸಮಗೊಳಿಸಲು ಬಂದವರಂತೆ ಕಾಣುತ್ತಾರೆ. ಮತ್ತು ಇದು ಅಸಹನೆಗೆ ದಾರಿ ಮಾಡಿಕೊಟ್ಟಿದೆ.

Orange Signal Sowrabha Karinje

ಸೌಜನ್ಯ : ಅಂತರ್ಜಾಲ

ಇತ್ತೀಚಿನ ದಿನಗಳಲ್ಲಿ DINK (Double Income No Kids) ಅಂದರೆ “ಇಬ್ಬರ ಸಂಪಾದನೆ, ಮಕ್ಕಳು ಬೇಡ”ಎನ್ನುವ ಸಂಸಾರಗಳು ಹೆಚ್ಚಾಗುತ್ತಿವೆ. ಇದರ ಹಿಂದಿನ ಕಾರಣಗಳು ಅನೇಕ.

  1. ವಿಭಕ್ತ ಕುಟುಂಬಗಳು: ಮೊದಲಾಗಿದ್ದರೆ ಮಕ್ಕಳನ್ನು ನೋಡಿಕೊಳ್ಳಲು ಮನೆ ತುಂಬಾ ಜನ ಇರುತ್ತಿದ್ದರಲ್ಲ? ಈಗ ಗಂಡ ಹೆಂಡತಿ ಅಷ್ಟೇ ಇರುವುದು ಮನೆಯಲ್ಲಿ. ಮಕ್ಕಳು ಮಾಡಿಕೊಂಡರೆ ಬೆಂಬಲ ವ್ಯವಸ್ಥೆ ಇಲ್ಲ. ಆರೋಗ್ಯ ತಪ್ಪಿದರೆ ದೂರದಲ್ಲಿರುವ ಹೆತ್ತವರಾಗಲೀ, ಇತರ ಸಂಬಂಧಿಕರಾಗಲೀ ಬರುವುದು ಬಹಳ ಸಲ ಸಾಧ್ಯವೂ ಅಲ್ಲ.
  2. ಉದ್ಯೋಗಗಳು: ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳೂ ದುಡಿಯುತ್ತಾರೆ. ಗಂಡನಿಗೆ ಸರಿಸಮಾನವಾಗಿ ಸಂಬಳ ತರುವವರಿದ್ದಾರೆ. ಆದರೆ ಮನೆಕೆಲಸ ಬಹುತೇಕ ಹೆಂಗಸರದ್ದೇ ಜವಾಬ್ದಾರಿ ಇನ್ನೂ. ಹಾಗಿರುವಾಗ ಮಗು ಮಾಡಿಕೊಂಡರೆ ಮತ್ತೆ ಹೆಂಡತಿಯೇ ತಲೆ ಕೊಡಬೇಕು. ಜೊತೆಗೆ ಪ್ರಯಾಣವನ್ನು ಒಳಗೊಂಡ ಉದ್ಯೋಗಗಳಲ್ಲಿ ತೊಡಗಿಕೊಂಡಿರುವವರು ಅನೇಕರಿದ್ದಾರೆ. ಇವತ್ತು ಉದ್ಯೋಗ ಎಂಬುದು ಬರೇ ಆದಾಯದ ಮೂಲವಾಗಿ ಉಳಿದಿಲ್ಲ. ಅದು ವ್ಯಕ್ತಿಯ ಅಸ್ಮಿತೆಯ ಪ್ರಶ್ನೆಯೂ ಹೌದು. ಹಾಗಿರುವಾಗ ಮಗುವಿಗಾಗಿ ಅದನ್ನು ತ್ಯಾಗ ಮಾಡಲು ಗಂಡ ಹೆಂಡತಿ ಇಬ್ಬರೂ ತಯಾರಿಲ್ಲ.
  3. ಪರಿಸರದ ಕಾಳಜಿ: ಸಾಂಪ್ರದಾಯಿಕ ಮನಸ್ಸುಗಳಿಗೆ ಇದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಆದರೆ ಇಂತಹ ಅನೇಕ ಜೋಡಿಗಳ ಪ್ರಮುಖ ಚಿಂತನೆ ಇದು. ವಿಶ್ವದ ಜನಸಂಖ್ಯೆ ಏರುತ್ತಲೇ ಇದೆ. ಸಂಪನ್ಮೂಲಗಳ ಕೊರತೆ, ಇರುವ ಸಂಪನ್ಮೂಲಗಳ ಹಂಚಿಕೆಯಲ್ಲಿ ಅಸಮಾನತೆ ಇವು ಜಗತ್ತನ್ನು ಅಲ್ಲಾಡಿಸುತ್ತಿವೆ. ಹಾಗಿರುವಾಗ ಮತ್ತೊಂದು ಜೀವವನ್ನು ಭೂಮಿಗೆ ತರಬೇಕೇ ಎನ್ನುವ ಪ್ರಶ್ನೆ ಬಹಳಷ್ಟು ಮಂದಿಯನ್ನು ಕಾಡುತ್ತಿದೆ. ಕಳೆದ 50 ವರ್ಷಗಳಲ್ಲಿ ನಮ್ಮ ಜನಸಂಖ್ಯೆ ದುಪ್ಪಟ್ಟಾಗಿದೆ. ಮುಂಬರುವ ದಿನಗಳಲ್ಲಿ ನೀರಿಗೆ, ಆಹಾರಕ್ಕೆ ಹಾಹಾಕಾರ ಹೆಚ್ಚಲಿದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಅವರ ಪ್ರಕಾರ ಭೂಮಿಯ ಪೋಷಣಾ ಸಾಮರ್ಥ್ಯ 9ರಿಂದ 10 ಬಿಲಿಯನ್‍ ಜನಸಂಖ್ಯೆ. ಇವತ್ತಿನ ಜನಸಂಖ್ಯೆ ಆಗಲೇ 7.8 ಬಿಲಿಯನ್ ಆಗಿ ಹೋಗಿದೆ. ನಾವು 1800ರಲ್ಲಿ ಮೊದಲ ಬಿಲಿಯನ್‍ ಜನಸಂಖ್ಯೆಯನ್ನು ತಲುಪಿದೆವು. ಆದರೆ ನಂತರ ಕೇವಲ 200 ವರ್ಷಗಳಲ್ಲಿ 7 ಬಿಲಿಯನ್ ಜನರಾಗಿಬಿಟ್ಟಿದ್ದೇವೆ. ಇವತ್ತು ಒಂದು ಬಿಲಿಯನ್‍ ನಷ್ಟು ಜನಸಂಖ್ಯೆ ಹೆಚ್ಚಾಗಲು ನಾವು ತೆಗೆದುಕೊಳ್ಳುತ್ತಿರುವ ಸಮಯ ಕೇವಲ 12 ವರ್ಷಗಳು! ಹೀಗೆ ಸಾಗಿದರೆ ಏನಾಗಬಹುದೆಂಬ ಚಿಂತೆ ಇವರದ್ದು. ಇದಕ್ಕೆಂದೇ ವಿಶ್ವದಾದ್ಯಂತ “ಸೊನ್ನೆ ಜನಸಂಖ್ಯಾ ಹೆಚ್ಚಳ”, “ಮಕ್ಕಳು-ರಹಿತ ಬದುಕು” ಇತ್ಯಾದಿ ಚಳವಳಿಗಳು ನಡೆಯುತ್ತಿವೆ.
  4. ಆರೋಗ್ಯದ ಕಾಳಜಿ: ಇವತ್ತು ಜನರಲ್ಲಿ, ಅದರಲ್ಲೂ ನಗರವಾಸಿಗಳಲ್ಲಿ ಆರೋಗ್ಯದ ಕಾಳಜಿ ಬಹಳ ಹೆಚ್ಚಾಗಿದೆ. ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಏರುಪೇರಾಗುವ ಹಾರ್ಮೋನುಗಳಿಂದಾಗಿ ಉಂಟಾಗುವ ಆರೋಗ್ಯದ ವ್ಯತ್ಯಯ ಗಮನೀಯ ವಿಷಯವಾಗಿದೆ. ಏನಾದರೂ ಚಿಂತೆಯಿಲ್ಲ, ಮಕ್ಕಳು ಚೆನ್ನಾಗಿದ್ದರೆ ಸಾಕು ಎಂದು ತಮ್ಮ ಇಚ್ಛೆಗಳನ್ನು, ಆರೋಗ್ಯವನ್ನು ತ್ಯಾಗ ಮಾಡಿ ಮಾಡಿ ಹೈರಾಣಾಗುತ್ತಿದ್ದ ತಾಯಿಯಂದಿರು ಕಮ್ಮಿಯಾಗಿದ್ದಾರೆ. ನಿದ್ದೆಯಿಲ್ಲದೆ ಕಳೆಯಬೇಕಾದ ರಾತ್ರಿಗಳು ಹೊಸ ಪೀಳಿಗೆಗೆ ಆತಂಕವನ್ನು ತಂದುಕೊಟ್ಟಿವೆ.
  5. ಸ್ವತಂತ್ರ ಮನೋಭಾವ: ಮಕ್ಕಳು ಮಡಿಲಿಗೆ ಬಂದಮೇಲೆ ಕನಿಷ್ಠ ಐದು ವರ್ಷಗಳ ಕಾಲ ನಮ್ಮಿಷ್ಟದಂತೆ ಬದುಕಲು ಸಾಧ್ಯವಿಲ್ಲ. ಯೋಲೋ(You Only Live Once-ನೀವು ಬದುಕುವುದು ಒಮ್ಮೆಯಷ್ಟೇ) ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಬದುಕುವ ಮಂದಿಗೆ ಐದು ವರ್ಷಗಳನ್ನು ತ್ಯಾಗ ಮಾಡುವುದು ಒಪ್ಪಿತವಲ್ಲ. ನಂತರವೂ ಮಕ್ಕಳನ್ನು ಬೆಳೆಸುವುದರಲ್ಲಿಯೇ ಅನೇಕ ವರ್ಷಗಳನ್ನು, ಆದಾಯವನ್ನು ಕಳೆಯುವ ಉಸಾಬರಿ ಬೇಡ ಎಂಬುದು ಇವರ ಯೋಚನೆ.
Orange Signal Sowrabha Karinje

ಸೌಜನ್ಯ : ಸೌರಭಾ ಕಾರಿಂಜೆ

ಇನ್ನೂ ಹತ್ತು ಹಲವು ಕಾರಣಗಳಿವೆ. ಇವರಲ್ಲಿ ಹಲವು ಮಂದಿ ಮಕ್ಕಳನ್ನು ದತ್ತು ತೆಗೆದುಕೊಂಡು ಬೆಳೆಸುವವರೂ ಇದ್ದಾರೆ.

ಇವರನ್ನು ಸ್ವಾರ್ಥಿಗಳು ಎಂದು ಸಾಂಪ್ರದಾಯಿಕ ಮನೋಭಾವದವರು ಜರಿಯಬಹುದು. ಹಾಗೆ ನೋಡಿದರೆ ಮಕ್ಕಳನ್ನು ಹೆತ್ತು, ಅವರಿಗಾಗಿ ಮತ್ತಷ್ಟು ಜನರ ಅನ್ನವನ್ನು ಕದಿಯುವುದು ಸ್ವಾರ್ಥ ಎಂದು ಈ ಮಂದಿ ವಾದಿಸುತ್ತಾರೆ. ಸ್ವಾರ್ಥ ಎಂಬುದು ಪ್ರತಿ ಮನುಷ್ಯನಲ್ಲಿದೆ. ಮಕ್ಕಳು ಬೇಕು, ಅವು ನಮ್ಮ ವಂಶವಾಹಿಗಳನ್ನು ಪ್ರಪಂಚದಲ್ಲಿ ಮುಂದುವರೆಸಿಕೊಂಡು  ಹೋಗಬೇಕು ಎನ್ನುವುದು ಸ್ವಾರ್ಥವೇ ಅಲ್ಲವೇ? ಸಮಾಜದ ಸಮ್ಮತಕ್ಕೆ ಅನುಗುಣವಾಗಿ ಬದುಕಿ ನೆಮ್ಮದಿಯಲ್ಲಿರಬೇಕು ಎನ್ನುವುದು ಸ್ವಾರ್ಥವಲ್ಲವೇ? ಮಕ್ಕಳನ್ನು ಹುಟ್ಟಿಸಿ, ಅವರಿಗಾಗಿ ತ್ಯಾಗಗಳನ್ನು ಮಾಡಿ, ಆಮೇಲೆ ಜೀವನವನ್ನೆಲ್ಲ ಮಕ್ಕಳಿಗಾಗಿ ಸವೆಸಿದೆವು ಎಂಬ ಅಪರಾಧೀ ಭಾವದ ಭಾರವನ್ನು ಮಕ್ಕಳ ಮೇಲೆ ಹಾಕಿ ಅವರ ಬದುಕನ್ನು ನರಕ ಮಾಡಬೇಕೇ ಎಂಬುದು ಇವರ ಪ್ರಶ್ನೆ.

ಸಂತಾನೋತ್ಪತ್ತಿ ನಿಸರ್ಗದ ನಿಯಮ ಎಂದು ವಾದಿಸುವವರಿಗೆ “ಮನುಷ್ಯ ನಿಸರ್ಗದತ್ತ ನಿಯಮಗಳಿಂದ ದೂರ ಸರಿದು ಕಾಲ ಬಹಳವಾಯಿತು. ಸಹಜವಾಗಿ ಬದುಕಿದ್ದಿದ್ದರೆ ನಮ್ಮ ಪೂರ್ವಜರಂತೆ 35 ವರ್ಷಕ್ಕೆ ಸಾಯಬೇಕಿತ್ತು. ವೈದ್ಯಕೀಯ ವ್ಯವಸ್ಥೆ ನಮ್ಮ ಆಯಸ್ಸನ್ನು ವಿಪರೀತ ಹೆಚ್ಚು ಮಾಡಿದೆ. ಅದನ್ನೆಲ್ಲ ಸಂತೋಷವಾಗಿ ಅನುಭವಿಸಿ ಈಗ ನಿಸರ್ಗದ ಮಾತೆತ್ತಬೇಡಿ” ಅಂತ ಇವರು ಉತ್ತರಿಸುತ್ತಾರೆ.

“ಅಯ್ಯೋ, ನಮ್ಮ ಕಾಲದಲ್ಲಿ ಹತ್ತು ಹೆರುತ್ತಿದ್ದೆವು, ನೀವು ಒಂದಕ್ಕೆ ಹೀಗಾಡುತ್ತಿದ್ದೀರಲ್ಲ” ಎಂದು ಮೂಗುಮುರಿಯುವವರು, ಕಾಲ ಬದಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಮಂದಿಯ ಅನೇಕ ವಾದಗಳಿಗೆ ನಮ್ಮಲ್ಲಿ ಉತ್ತರವಿಲ್ಲ ಎಂಬುದನ್ನೂ ಒಪ್ಪಿಕೊಳ್ಳಲೇಬೇಕಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಮಗು ಮಾಡಿಕೊಳ್ಳುವುದು ಬಿಡುವುದು ಅವರವರ ವೈಯಕ್ತಿಕ ಆಯ್ಕೆ, ಅದರಲ್ಲೂ ಹೆಣ್ಣಿನ ಆಯ್ಕೆ ಎನ್ನುವುದಕ್ಕೆ ತೆರೆದುಕೊಳ್ಳಬೇಕಾಗಿದೆ. ಮದುವೆಯಾಗಿ ಮೂರು ತಿಂಗಳಿಗೆ “ಗುಡ್‍ ನ್ಯೂಸ್‍ ಯಾವಾಗ?’’ ಅಂತ ಪ್ರಶ್ನಿಸುವುದನ್ನು ನಿಲ್ಲಿಸುವುದು ಸೂಕ್ತ. ಗುಡ್‍ ನ್ಯೂಸ್‍ನ ಪರಿಕಲ್ಪನೆ ಬದಲಾಗುತ್ತಿರುವ ಕಾಲಘಟ್ಟ ಇದು. ಇತಿಹಾಸವನ್ನು ಚೂರುಪಾರಾದರೂ ಓದಿಕೊಂಡವರಿಗೆ ತಿಳಿಯುತ್ತದೆ- ಸಮಾಜ, ಬದುಕು ಮತ್ತದರ ಉದ್ದೇಶ ನಿಂತ ನೀರಾಗಿದ್ದೇ ಇಲ್ಲ. ಬದಲಾವಣೆ ನೀರಿನಂತೆ, ದಾರಿ ಮಾಡಿಕೊಂಡು ಸಾಗುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ.

ಇಂದಿನವರೆಗೆ ಆಚರಿಸಿಕೊಂಡು ಬಂದದ್ದು ಮಾತ್ರ ಸತ್ಯ ಅಲ್ಲ, ಜೊತೆಗೆ ಮಿಥ್ಯೆಯೂ ಅಲ್ಲ. ಮಕ್ಕಳು ಹೊಂದಿದವರನ್ನೆಲ್ಲ ಹೇಗೆ ತಪ್ಪಿತಸ್ಥರೆಂದು ಸಾರಾಸಗಾಟಾಗಿ ಕರೆಯಬಾರದೋ ಹಾಗೇ ಮಕ್ಕಳು ಬೇಡವೆನ್ನುವವರನ್ನು ಗೌರವಿಸುವುದೂ ಮುಖ್ಯ.

ಯಾವುದಕ್ಕೂ ವ್ಯಕ್ತಿಗತ ನಿರ್ಧಾರಗಳನ್ನು ಹೆಚ್ಚು ಗೌರವಿಸುವುದು ಸಮಾಜದ ಸ್ವಾಸ್ಥ್ಯಕ್ಕೆ ಬಹಳ ಒಳ್ಳೆಯದು.

ಹಿಂದಿನ ಸಿಗ್ನಲ್ : Orange Signal : ‘ಅವರು ತುಂಬಾ ಕಪ್ಪಗಿದ್ದಾರೆ, ಚೆನ್ನಾಗಿ ಕೆಲಸ ಮಾಡುತ್ತಾರೋ ಇಲ್ಲವೋ’ 

Follow us on

Most Read Stories

Click on your DTH Provider to Add TV9 Kannada