Literature : ಅಭಿಜ್ಞಾನ ; ‘ಮನುಷ್ಯನಲ್ಲಿ ನಿಸರ್ಗದಲ್ಲಿ ಎಲ್ಲವೂ ಹೇಗೆಲ್ಲ ಕಳಚಿಬೀಳಬೇಕೆಂದು ಹಂಬಲಿಸುತ್ತವೆ‘

Literature : ಅಭಿಜ್ಞಾನ ; ‘ಮನುಷ್ಯನಲ್ಲಿ ನಿಸರ್ಗದಲ್ಲಿ ಎಲ್ಲವೂ ಹೇಗೆಲ್ಲ ಕಳಚಿಬೀಳಬೇಕೆಂದು ಹಂಬಲಿಸುತ್ತವೆ‘
ಲೇಖಕಿ ಗ್ರೇತ್ಸಿಯಾ ದೆಲೆದ್ದಾ

Grazia Deledda - The Shoes : ‘ಅವನು ಆ ಬೂಟುಗಳನ್ನು ಎತ್ತಿಕೊಂಡು ತನ್ನ ಉಡುಪಿನೊಳಗೆ ಅಡಗಿಸಿಟ್ಟುಕೊಂಡ. ಆಮೇಲೆ ಸರಸರನೆ ಮೆಟ್ಟಲುಗಳನ್ನು ಇಳಿದ. ಅಂಗಳದಲ್ಲಿ ಕುದುರೆಗಳನ್ನು ಕಾಯುತ್ತಿದ್ದವನೊಬ್ಬ ಚಾಪೆಯ ಮೇಲೆ ಮಲಗಿ ನಿದ್ದೆ ಹೊಡೆಯುತ್ತಿದ್ದ. ಗೇಟನ್ನು ಆಗಷ್ಟೇ ಮುಚ್ಚಿ ಚಿಲಕ ಹಾಕಲಾಗಿತ್ತು.’

ಶ್ರೀದೇವಿ ಕಳಸದ | Shridevi Kalasad

|

Jan 18, 2022 | 1:13 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಕಥೆಗಾರ, ಅನುವಾದಕ ಎಸ್. ದಿವಾಕರ ಅನುವಾದಿಸಿದ ನೊಬೆಲ್ ಪುರಸ್ಕೃತ ಲೇಖಕಿ ಗ್ರೇತ್ಸಿಯಾ ದೆಲೆದ್ದಾ ಕಥೆ ‘ಬೂಟುಗಳು’ ಆಯ್ದ ಭಾಗ.

*

ಕತ್ತಲು ತುಂಬಿಕೊಂಡ ರಸ್ತೆಗಳು; ಸಮುದ್ರದಿಂದ ಬೀಸಿಬರುತ್ತಿದ್ದ ಗಾಳಿ. ಒಂದು ನರಪಿಳ್ಳೆಯ ಸುಳಿವೂ ಇಲ್ಲ. ಊರಿನ ಚೌಕದಲ್ಲಿದ್ದ ಒಂದು ಸಣ್ಣ ಹೋಟೆಲಿನಲ್ಲಿ ಮಾತ್ರ ಬಾ ಎಂದು ಕರೆಯುವ ಬೆಳಕು. ಎಲಿಯಾ ಅದರ ಒಳಗೆ ಹೋಗಿ ಒಂದು ರಾತ್ರಿ ಉಳಿಯಲು ಜಾಗ ಕೇಳಿದ. ಅವನು ಮುಂಗಡ ಪಾವತಿ ಮಾಡಿದ ಮೇಲೆಯೇ ಕಸ ತುಂಬಿದ ಕೋಣೆಯೊಂದರಲ್ಲಿ ಒಂದು ಹಾಸಿಗೆ ಸಿಕ್ಕಿದ್ದು, ಅಲ್ಲಿ ಆಗಲೇ ಮಲಗಿಬಿಟ್ಟಿದ್ದ ಇನ್ನೂ ಇಬ್ಬರಲ್ಲಿ ಒಬ್ಬ ಗೊರಕೆ ಹೊಡೆಯುತ್ತಿದ್ದ. ಎಲಿಯಾ ಬಟ್ಟೆಬಿಚ್ಚದೆ ಹಾಗೆಯೇ ಬಿದ್ದುಕೊಂಡ. ಆದರೆ ನಿದ್ದೆ ಮಾತ್ರ ಸುಳಿಯಲಿಲ್ಲ. ಅವನ ಕಣ್ಣಿಗೆ ಇಡೀ ಜಗತ್ತೇ ಕಾಣಿಸತೊಡಗಿತು. ಜಗತ್ತಿನ ಎಲ್ಲ ರಸ್ತೆಗಳಲ್ಲಿ ಮನೆಗಳಲ್ಲಿ ಬಯಲುಗಳಲ್ಲಿ ಎಲ್ಲಿ ನೋಡಿದರೂ ಬೂಟುಗಳೇ. ಮನುಷ್ಯರು ಎಲ್ಲೆಲ್ಲಿದ್ದರೋ ಅಲ್ಲೆಲ್ಲಾ ಒಂದೊಂದು ಜೊತ ಬೂಟುಗಳು. ಬಹಳಷ್ಟು ಬೂಟುಗಳು ಡ್ರಾಯರುಗಳಲ್ಲಿ, ಬೀರುಗಳಲ್ಲಿ ಮೂಲ ಮೂಲೆಗಳಲ್ಲಿ ಬಿದ್ದಿದ್ದುವು. ಕೆಲವು ತಮ್ಮಯಜಮಾನರ ಹಾಸಿಗೆಗಳ ಅಂಚಿನಲ್ಲಿ ಕುಳಿತು ಕಾವಲು ಕಾಯುತ್ತಿದ್ದುವು. ಇನ್ನು ಕೆಲವು ಬಾಗಿಲ ಹೊರಗೆ ನಿಂತಿದ್ದುವು. ಮತ್ತೆ ಕೆಲವು ತನ್ನ ಬೂಟುಗಳಂತೆಯೇ, ತೊಡುವವರ ಬಡತನವನ್ನು ಕೂಗಿ ಹೇಳುವಂತ ರಾರಾಜಿಸುತ್ತಿದ್ದುವು.

ಹೊರಗೆ ಗಾಳಿಯ ಘರ್ಜನೆ, ಒಳಗೆ ಮಲಗಿರುವವರ ಗೊರಕೆ. ಹೀಗೆಯ ಆದಷ್ಟು ಹೊತ್ತಾಯಿತೋ ಏನೋ. ಆಕಾಶದಿಂದ ಕಳಚಿಕೊಂಡು ಕೆಳಗಿಳಿದ ನಕ್ಷತ್ರವೊಂದು ಸಮುದ್ರದ ನೀರಿನಲ್ಲಿ ಮುಳುಗಿಬಂದಂತ ನೀಲಿಯಾಗಿ ಹೊಳೆಯುತ್ತಾ ಕಟಕಟವೆನ್ನುತ್ತಿದ್ದ ಕಿಟಕಿಯ ಹೊರಗೆ ನಿಂತುಕೊಂಡಿತು. ಎಲಿಯಾ ತನ್ನ ಹೆಂಡತಿಯ ಬಗೆಗೆ, ತಾನು ಅವಳಿಗಾಗಿ ಬರೆದ ಪದ್ಯಗಳ ಬಗೆಗೆ, ಮಾವ ಅಗೋಸ್ತಿನೋ ಆಸ್ತಿಯನ್ನೆಲ್ಲ ಬರೆದುಕೊಟ್ಟರೆ ತಾವಿಬ್ಬರೂ ಹೇಗೆ ಸುಖವಾಗಿರಬಹುದು ಎಂಬುದರ ಬಗಗೆ ಯೋಚಿಸಿದ.

ಇದ್ದಕ್ಕಿದ್ದಂತೆ ಮೇಲೆದ್ದು ಗೊರಕೆ ಹೊಡೆಯುತ್ತಿದ್ದವನ ಬೂಟುಗಳನ್ನು ಎತ್ತಿಕೊಳ್ಳಲೆಂದು ಬಾಗಿದ. ಮೈಯೆಲ್ಲ ನಡುಗುತ್ತಿತ್ತು. ಭಾರೀ ಬೂಟುಗಳು, ಅವುಗಳ ಹಿಮ್ಮಡಿಗೆ ಬಡಿದಿದ್ದ ಮೊಳೆಗಳು ಅವನ ಬಿಸಿಯಾದ ಬೆರಳುಗಳನ್ನು ತಣ್ಣಗೆ ಕೂರೆದವು.

ಅವನ್ನು ಕೆಳಗಿಟ್ಟು, ಆ ಕತ್ತಲಿನಲ್ಲಿ ಇನ್ನೊಬ್ಬನ ಬೂಟುಗಳಿಗಾಗಿ ನೆಲದಲ್ಲೇ ತಡವರಿಸುತ್ತಾ ತೆವಳಿದ. ಆದರೆ ಏನೂ ಸಿಕ್ಕಲಿಲ್ಲ.

ಆವುಲೆ ಹೊರಗಿನ ಕಾರಿಡಾರಿನಲ್ಲಿ ಯಾರೋ ಬರಿಗಾಲಿನಲ್ಲಿ ನಡೆದಾಡುತ್ತಿರುವ ಸದ್ದು ಕೇಳಿಸಿತು. ಎಲಿಯಾ ಕೈಗಳನ್ನು ನೆಲಕ್ಕೆ ಊರಿ, ಹೆದರಿಕೊಂಡ ಪ್ರಾಣಿಯ ಹಾಗೆ ತತ್ಥರ ನಡುಗಿದ. ಎಂಥ ದುಃಸ್ಥಿತಿಗಿಳಿದೆ ಎನ್ನಿಸಿತು. ಆಘಾತಕ್ಕೆ ಒಳಗಾಗಲಿರುವ ಹೃದಯದಂತೆ ಒಂದು ಬಗೆಯ ನೋವು ಅವನನ್ನು ಅಮರಿಕೊಂಡಿತು. ಹೊರಗಡೆ ಸದ್ದು ನಿಂತ ತಕ್ಷಣ ಬಾಗಿಲ ಬಳಿಗೆ ಹೋದ. ಯಾರೂ ಕಾಣಿಸಲಿಲ್ಲ. ಕಾರಿಡಾರಿನ ಕೊನೆಯಲ್ಲಿ ಒಂದು ದೀಪ ಮಂಕಾಗಿ ಉರಿಯುತ್ತಿತ್ತು, ಅದರ ಬೆಳಕಿನಲ್ಲಿ ಒಂದು ಬೆಕ್ಕು ಬಾಲ ಮೇಲೆತ್ತಿಕೊಂಡು ಗೋಡೆಗೆ ಮೈಯುಜ್ಜುತ್ತಿದ್ದುದು ಕಾಣಿಸಿತು. ಅದರ ಬದಿಯಲ್ಲೇ ಒಂದು ಜೊತೆ ಬೂಟುಗಳು ಎರಡು ದೊಡ್ಡ ಕೊಂಡಿಗಳ ಹಾಗೆ ನೆರಳು ಚೆಲ್ಲುತ್ತಾ ಕುಳಿತಿದ್ದುವು.

Abhijnana excerpt from Grazia Deledda‘s Short Story The Shoes Translated by Kannada Writer S Diwakar

ಅನುವಾದಕ ಎಸ್. ದಿವಾಕರ್

ಅವನು ಆ ಬೂಟುಗಳನ್ನು ಎತ್ತಿಕೊಂಡು ತನ್ನ ಉಡುಪಿನೊಳಗೆ ಅಡಗಿಸಿಟ್ಟುಕೊಂಡ. ಆಮೇಲೆ ಸರಸರನೆ ಮೆಟ್ಟಲುಗಳನ್ನು ಇಳಿದ. ಅಂಗಳದಲ್ಲಿ ಕುದುರೆಗಳನ್ನು ಕಾಯುತ್ತಿದ್ದವನೊಬ್ಬ ಚಾಪೆಯ ಮೇಲೆ ಮಲಗಿ ನಿದ್ದೆ ಹೊಡೆಯುತ್ತಿದ್ದ. ಗೇಟನ್ನು ಆಗಷ್ಟೇ ಮುಚ್ಚಿ ಚಿಲಕ ಹಾಕಲಾಗಿತ್ತು. ಎಲಿಯಾ ಒಂದಿಷ್ಟು ಸದ್ದಾಗದಂತೆ ಅಲ್ಲಿಂದ ಪಲಾಯನ ಮಾಡಿ ಸಮುದ್ರ ತೀರವನ್ನು ತಲುಪಿದ. ಬೂದು ಬಣ್ಣದ ಸಮುದ್ರ. ಮೇಲೆ ಮಿನುಗುತ್ತಿದ್ದ ನಕ್ಷತ್ರಗಳು ಆಕಾಶದಿಂದ ಕಳಚಿ ಬೀಳಲು ತವಕಪಡುತ್ತಿರುವಂತೆ ಕಾಣಿಸುತ್ತಿದ್ದುವು.

ಕತ್ತಲೆ ಮುಡಿದುಕೊಂಡ ಬೆಟ್ಟಗಳ ಮತ್ತು ಬೂದು ಬಣ್ಣದ ಸಮುದ್ರದ ನಡುವೆ ಗಾಳಿಯ ಜೊತೆ ಸರಸರ ಹೆಜ್ಜೆ ಹಾಕುತ್ತಾ ಎಲಿಯಾ, ಎಂಥ ವಿಚಿತ್ರ! ಮನುಷ್ಯನಲ್ಲಿ ನಿಸರ್ಗದಲ್ಲಿ ಎಲ್ಲವೂ ಹೇಗೆಲ್ಲ ಕಳಚಿಬೀಳಬೇಕೆಂದು ಹಂಬಲಿಸುತ್ತವೆ!” ಎಂದುಕೊಂಡ.

ಸುಮಾರು ಅರ್ಧಗಂಟೆಯ ಕಾಲ ನಡೆದ ಮೇಲೆ ಅವನು ಆ ಕದ್ದ ಬೂಟುಗಳನ್ನು ತೊಟ್ಟುಕೊಳ್ಳಲು ನಿರ್ಧರಿಸಿದ. ಒಂದು ಮೈಲಿ ಕಲ್ಲಿನ ಮೇಲೆ ಕುಳಿತು ತೊಟ್ಟುಕೊಂಡು ನೋಡಿದ. ಸಂತೋಷದಿಂದ ಮುಖ ಹಿಗ್ಗಿತು; ಮೃದುವಾದ, ವಿಶಾಲವಾದ ಬೂಟುಗಳು. ಆದರೆ ಅವುಗಳನ್ನೇ ಬಾಗಿ ನೋಡುತ್ತಿರುವಾಗ ಅವನಿಗೆ ಮತ್ತೆ ತನ್ನ ದುಸ್ಥಿತಿಯ ನೆನಪಾಗಿ ನೋವಾಯಿತು.

“ಯಾರಾದರೂ ನನ್ನನ್ನು ಹಿಂಬಾಲಿಸಿದರೆ? ಆಗ ತಿಳಿಯುತ್ತಲ್ಲ ನನ್ನ ಬಂಡವಾಳ…ಹೆಂಡತಿ ಏನೆಂದಾಳು? ‘ಎಲಿಯಾ, ನೀನು ಕದಿಯುವುದೇ ಆಗಿದ್ದರೆ ಒಂದು ಮಿಲಿಯನ್ ಲೈರ್‌ಗಳಷ್ಟು ದುಡ್ಡು ಕದಿಯಬಹುದಿತ್ತಲ್ಲ!’ ಎಂದರೆ…”

ಆಮೇಲೆ ಒಂದು ಮಿಲಿಯನ್ ಲೈರ್! ಅಷ್ಟು ದುಡ್ಡು ಎಲ್ಲಿ ಸಿಕ್ಕುತ್ತೆ? ಸಿಕ್ಕಿದರೆ ತಕ್ಷಣ ಕದ್ದೇ ಬಿಡುತ್ತೇನೆ’ ಎಂದೂ ಸೇರಿಸಿದ -ನಗುತ್ತಾ. ಕಾಲ ಬೆರಳುಗಳು ಆ ಬೂಟುಗಳಲ್ಲಿ ವಿಲಿವಿಲಿಯೆನ್ನುತ್ತಿದ್ದುವು. ವಿಚಿತ್ರ! ಉರಿಯತೊಡಗಿದ ಪಾದಗಳು ಬೂಟುಗಳನ್ನು ತಿರಸ್ಕರಿಸುವ ಹಾಗೆ ಮಿಡಿದವು.

ಸದ್ಯದಲ್ಲೇ ಈ ಕೃತಿಯ ಮೂರನೇ ಮುದ್ರಣ ಹೊರಬರಲಿದೆ. ಸಂಪರ್ಕಿಸಿ : Prism Books

ಇದನ್ನೂ ಓದಿ : Folklore : ಅಭಿಜ್ಞಾನ ; ಮಣ್ಣುಹೊರುವ ಜೀತದಾಳಾಗಿದ್ದ ರಾಮಣ್ಣನವರ ಜೀವನದಲ್ಲಿ ನಡೆದ ಕೋಲ್ಮಿಂಚಿನಂಥ ಪ್ರಸಂಗ

Follow us on

Related Stories

Most Read Stories

Click on your DTH Provider to Add TV9 Kannada