Folklore : ಅಭಿಜ್ಞಾನ ; ಮಣ್ಣುಹೊರುವ ಜೀತದಾಳಾಗಿದ್ದ ರಾಮಣ್ಣನವರ ಜೀವನದಲ್ಲಿ ನಡೆದ ಕೋಲ್ಮಿಂಚಿನಂಥ ಪ್ರಸಂಗ

Folklore : ಅಭಿಜ್ಞಾನ ; ಮಣ್ಣುಹೊರುವ ಜೀತದಾಳಾಗಿದ್ದ ರಾಮಣ್ಣನವರ ಜೀವನದಲ್ಲಿ ನಡೆದ ಕೋಲ್ಮಿಂಚಿನಂಥ ಪ್ರಸಂಗ
ಜಾನಪದ ಕಲಾವಿದ ಯುಗಧರ್ಮ ರಾಮಣ್ಣ

Yugadharma Ramanna : ಊರಿನ ಮಧ್ಯೆಯಿರುವ ಮರದ ಕೆಳಗೆ ಯಾವುದೋ ಆಲೋಚನೆಯ ಸುಳಿಯಲ್ಲಿ ಸಿಕ್ಕ ಮನಸ್ಸು ಮಮ್ಮಲ ಮರುಗುತ್ತಿತ್ತು. ಒಂಟಿಯಾಗಿ ಕುಳಿತ ರಾಮಣ್ಣನವರ ಮೈಯೆಲ್ಲ ಭಾರವಾದಂತಾಗಿತ್ತು. ಏನೆಲ್ಲಾ ಕಳೆದುಕೊಂಡು ಬರಿಗೈ ಆದಂತಹ ಆಲೋಚನೆ, ಹುಡುಕಲೊರಟರೆ ತಾನು ಕಳೆದದ್ದೇನೂ ಸಿಗದಂಥ ಭಾವನೆ...

ಶ್ರೀದೇವಿ ಕಳಸದ | Shridevi Kalasad

|

Jan 16, 2022 | 3:11 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

‘ಹಾಡ ತೂರ್ಯಾಡತಾವ’ – ಬೈಲೂರು ಬಸಲಿಂಗಯ್ಯ ಹಿರೇಮಠ ಅಭಿನಂದನ ಗ್ರಂಥದಲ್ಲಿ ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಅವರ ಬಗ್ಗೆ ನೀರ್ತಡಿ ರಾಜಣ್ಣ ಬರೆದ ಬರಹದ ಆಯ್ದ ಭಾಗ.

*

ಬಾಲಕನನ್ನು ಟಾನಲ್ ತೋಡುವ ಮಣ್ಣಿನ ಕೆಲಸಕ್ಕೆ ನಿತ್ಯ ಕರೆದುಕೊಂಡು ಹೋಗುತ್ತಿದ್ದರು. ಹರೆಯಕ್ಕೆ ಬರುವ ಮೊದಲೇ ರಟ್ಟೆಗಳು ಗಟ್ಟಿಗೊಳ್ಳದೇ ಇದ್ದರೂ ಕಂಡಕಂಡವರ ಮನೆಯಲ್ಲಿ ಜೀತದಾಳಾಗಿ ಮೈ ಮುರಿಯುವಂತೆ ದುಡಿಯುತ್ತಿದ್ದ. ರಾಮಣ್ಣನಿಗೆ ಭಾರ ಯಾವುದೂ ಹಗುರ ಯಾವುದೂ ತಿಳಿಯುವ ಮೊದಲೇ ಮೂರು ವರ್ಷ ಟಾನಲ್ ಮಣ್ಣು ಹೊತ್ತು, ಐದು ವರ್ಷ ಜೀತದಾಳಾಗಿದ್ದರೂ ಹುಟ್ಟಿ 30 ವರ್ಷಗಳವರೆಗೆ ಯಾವುದೇ ನೆಲೆಯಿಲ್ಲದೇ ಬದುಕೊಂದು ಜಟಕಾಬಂಡಿಯಾಗಿ ಅಲೆದಾಡದೆ ಕತ್ತಲಲ್ಲೇ ದುಡಿಯುತ್ತಿದ್ದವರಿಗೆ, ಯಾವ ಪುಣ್ಯವೋ, ಯಾರ ದೃಷ್ಟಿಕೋನವೋ 1962 ಜನವರಿ 20 ರಂದು ತನ್ನೂರಿನ ಅಂಚೆ ಕಚೇರಿಯಲ್ಲಿ ಟಪಾಲುಗಳನ್ನು ಊರಿಂದೂರಿಗೆ ಒಯ್ದು ಹಂಚುವಂತಹ ರನ್ನರ್ ಹುದ್ದೆಯೊಂದು ದೊರಕಿತ್ತು. ಇಲ್ಲಿಂದ ನಿತ್ಯ ಟಪಾಲುಳ್ಳ ಚೀಲವನ್ನು ಹೆಗಲ ಮೇಲೆ ಹೊತ್ತು ಐದು ವರ್ಷಗಳು ಉರುಳುತ್ತಲೇ 1967ರ ಜುಲೈ 18ರಂದು ಹೆಸರಿಗೆ ತಕ್ಕಂತಿದ್ದ ಲಕ್ಷ್ಮೀದೇವಿಯನ್ನು ಕೈಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಂಸಾರಿಯಾಗಿ, ಅಂಚೆ ಇಲಾಖಾ ಕೆಲಸವನ್ನು ಮಾಡುತ್ತಲೇ 1971ರಲ್ಲಿ ನಾಟಕದ ಕಲೆಯನ್ನು ಚಿಗುರಿಸಿಕೊಂಡು ಹಳ್ಳಿಯ ಗೆಳೆಯರ ಜೊತೆ ನಾಟಕಗಳನ್ನು ಆಡುತ್ತಾ ಜೀವನದ ಬದುಕನ್ನು ಸಾಗಿಸುತ್ತಿದ್ದರು. ಎತ್ತರದ ನಿಲುವು, ಗುಂಗುರು ಕೂದಲು, ಹೊಂಬೆಳಕಿನ ಮೈಕಾಂತಿ, ಹರೆಯಕ್ಕೆ ತಕ್ಕ ಮೈಕಟ್ಟು, ಮಾತು ಬೆಳ್ಳಿ, ಮೌನ ಬಂಗಾರ ಎಂಬಂತಿದ್ದ ರಾಮಣ್ಣನವರ ನಡೆ-ನುಡಿಗಳೂ ಅದಕೊಪ್ಪುವಂತಿದ್ದವು. ಗೆಳೆಯರ ಬಳಗವೇ ಅವರ ಆಸ್ತಿಯಾಗಿತ್ತು

ಹುಟ್ಟಿನಿಂದ ನಿರಕ್ಷರರಾದ ಇವರು, ಮಕ್ಕಳ ಕಂಠಪಾಠದಂತೆ, ಹೇಳಿ ಕೊಟ್ಟದ್ದನ್ನು ಮರೆಯದೆ, ಬೇರೇನೂ ಕಲಿಯದೆ, ನಾಟಕದ ಕಲೆಯನ್ನು ರೂಢಿಸಿಕೊಂಡು ಬಂದವರಿಗೆ ಆ ಒಂದು ದಿನ ಇವರಲ್ಲಿನ ಅಜ್ಞಾನದ ಕತ್ತಲು ದೂರ ಸರಿದು ಜ್ಞಾನದ ಬೆಳಕು ಬರುವ ಸನ್ನಿಹಿತ ಕಾಲಘಟ್ಟವಾಗಿತ್ತು.

1971 ನವೆಂಬರ್ 18, ಬೆಳಿಗ್ಗೆ 10ರ ಸಮಯ ಮನೆಯಲ್ಲಿ ಊಟ ಮುಗಿಸಿದ ಇವರ ದಾಪುಗಾಲು ಊರೊಳಗಿನ ಓಣಿಯ ಕಡೆಗೆ, ಏನೋ ಒಂದು ರೀತಿಯ ಅವ್ಯಕ್ತ ಮನೋಭಾವ, ಇದ್ದಕ್ಕಿದ್ದಂತೆ ಮಂಕು ಕವಿದ ವಾತಾವರಣ, ಊರಿನ ಮಧ್ಯೆಯಿರುವ ಮರದ ಕೆಳಗೆ ಯಾವುದೋ ಆಲೋಚನೆಯ ಸುಳಿಯಲ್ಲಿ ಸಿಕ್ಕ ಮನಸ್ಸು ಮಮ್ಮಲ ಮರುಗುತ್ತಿತ್ತು. ಇದೇ ಮರದ ಕಟ್ಟೆಯ ಮೇಲೆ ಒಂಟಿಯಾಗಿ ಕುಳಿತ ರಾಮಣ್ಣನವರ ಮೈಯೆಲ್ಲ ಭಾರವಾದಂತಾಗಿತ್ತು. ಏನೆಲ್ಲಾ ಕಳೆದುಕೊಂಡು ಬರಿಗೈ ಆದಂತಹ ಆಲೋಚನೆ, ಹುಡುಕಲೊರಟರೆ ತಾನು ಕಳೆದದ್ದೇನೂ ಸಿಗದಂಥ ಭಾವನೆ.

ಇದೆಲ್ಲವನ್ನೂ ಬೆನ್ನಟ್ಟಿದಂತೆ ರಾಮಣ್ಣನವರ ಮನಸ್ಸಿಗೆ ಯಾವುದೋ ಒಂದು ಮೂಲೆಯಲ್ಲಿನ ಕೊಠಡಿಯಲ್ಲಿ ಕಾಲ ಕೀರಲು ಧ್ವನಿಯಲ್ಲಿ ಕಿರುಚುತ್ತಿತ್ತು. ಪಾಪದ ಪ್ರಜ್ಞೆಯ ಪರಿತಾಪ ಅವುಡುಗಚ್ಚಿಕೊಂಡು ಅಳುತ್ತಿತ್ತು. ಹೊಸ ಶತಮಾನಗಳ ಕಡೆಗೆ ಕನಸುಗಳ ದಾಪುಗಾಲು ಇಡಲೆತ್ನಿಸುತ್ತಿತ್ತು. ಆದರೆ ಹಳೆಯ ಶತಮಾನಗಳ ಸರಪಳಿಯ ಕೊಂಡಿಬಿಡದೆ ಕಾಲನ್ನಿಡಿದಿಟ್ಟಿತ್ತು. ನೂರು ವರ್ಷಗಳಲ್ಲಿ ಘಟಿಸುವುದೆಲ್ಲವನ್ನು ಮೂರು ನಿಮಿಷದಲ್ಲಿ ಕೂಡಿ, ಕಳೆದು, ಉಳಿದಿದ್ದನ್ನು ಇಟ್ಟುಕೊಂಡು ನಳನಳಿಸುವ ಗಣಕಯುಗದಲ್ಲಿನ ಮಾನವ ಮಿಣುಕು ಹುಳುವಿನಂತೆ ಮಿನುಗುತ್ತಿದ್ದರೂ, ಇವರ ಪಾಲಿಗೆ ಎಲ್ಲವೂ ಶೂನ್ಯವಾಗಿತ್ತು. ಅಷ್ಟೊತ್ತಿಗಾಗಲೇ ಊರಿನ ತನ್ನ ಗೆಳೆಯರ ಗುಂಪೇ ರಾಮಣ್ಣನವರ ಸುತ್ತ ಕುಳಿತು ಮಾತುಗಳನ್ನಾಡುತ್ತಿದ್ದರೂ ಕೂಡ, ಬಂದವರೆಲ್ಲ ಏನು ಮಾತನಾಡುತ್ತಾರೆ, ಏನು ಮಾಡುತ್ತಾರೆಂಬುದೇ ತಿಳಿಯುತ್ತಿರಲಿಲ್ಲ. ಅವ್ಯಕ್ತ ಮನೋಭಾವನೆಯ ಪರಿತ್ಯಕ್ತಿಯಲ್ಲಿ ನಿಗೂಢಗೊಂಡ ಮನಸ್ಸು, ತನ್ನ ಶರೀರದ ನರಮಂಡಲಕ್ಕೆಲ್ಲ ವಿದ್ಯುತ್ ಸ್ಪರ್ಶದ ಅನುಭವ. ಅಂಗಾಲಿನಿಂದ ಮೆದುಳಿನವರೆಗೆ ಜೀರ್ ಎನ್ನುವ ಶಬ್ದಗಳ ತರಂಗ ಹರಿಯುತ್ತಿತ್ತು ಒಂದು ರೀತಿಯ ಮಿಂಚಿನ ಸಂಚಾರ. ಒಮ್ಮೆಲೇ ಫಳಲ್ ಎಂದು ಮುಗಿಲಿನಿಂದ ಕೋಲ್ಮೀಂಚು ಮಿಂಚಿದಂತಾಗಿ, ತನ್ನ ಕಣ್ಣುಗಳಲ್ಲಿ ದೀಪ ಹಚ್ಚಿದಂತಾಗಿ ಶರೀರವನ್ನೊಳಗೊಂಡಂತೆ ಮಿದುಳಿನ ಪೊರೆಯಲ್ಲ ಕಳಚಿಕೊಂಡಂತಾಗಿತ್ತು.

Abhijnana excerpt from Folk artist Yugadharma Ramanna Article by Nirtadi Rajanna in Haada Tooryadatava edited by Balanna Sigihalli

ಈ ಕೃತಿಯ ಸಂಪಾದಕರಾದ ಬಾಳಣ್ಣ ಸೀಗೀಹಳ್ಳಿ

ಇಡೀ ಸಿದ್ಧನಮಠ ಗ್ರಾಮದಲ್ಲಿ ಅಂದಿನ ಇವರ ಸಂಗಡಿಗರು ಹಾಗೂ ಹಿರಿಯ ಸಮಕಾಲೀನದವರೇ ಹೇಳುವಂತೆ ನೋಡುನೋಡುತ್ತಿದ್ದಂತೆ ಗೆಳೆಯರ ಮಧ್ಯೆ ಕುಳಿತ ರಾಮಣ್ಣ ಎದ್ದು ನಿಂತು ಮುಗಿಲ ಕಡೆ ಮುಖವೆತ್ತಿ ಕೇಕೆ ಹಾಕಿದರು. ತನ್ನ ಗೆಳೆಯರೆಲ್ಲ ಅಲ್ಲಿಂದ ಓಡಿ ಹೋದವರೇ ದೂರ ನಿಂತು ನಿಬ್ಬೆರಗಾಗಿ ನೋಡುತ್ತಿದ್ದರು. ಸಾಕ್ಷಾತ್ ಸರಸ್ವತಿಯೇ ಇವರಿಗೆ ಪ್ರತ್ಯಕ್ಷಳಾಗಿ ಇವರ ಮೈ ಮನಸನ್ನಾವರಿಸಿಕೊಂಡಂತಾಗಿತ್ತು. ಅಲ್ಲಿಂದ ಮುಂದೆ ಎರಡು ಹೆಜ್ಜೆ ಚಂಗನೆ ನೆಗೆದರು. ಕುಣಿದು ಕುಪ್ಪಳಿಸುತ್ತಾ…

”ಕಾಡುವುದು, ಬೇಡುವುದು, ತನ್ನ ಮೂಡಿನೊಳು ಮೂಡು ಒಡಮೂಡಿ ಬಂದವನೆದುರಿಗೆ ಬೋಡು ಕೆತ್ತುವ ದಿನಸಿಗೆ ಜಾಡಿಸಿ ಒದ್ದವನಂತೆ ಹಾಡುವುದನ್ನು ತನ್ನೊಳು ರೂಢಿ ತಂದುಕೊಂಡೆ ಎಂದರೆ ಗಾಡಿ ಕೀಲುಕಿತ್ತೋಡಿಸಿ ದಂತೆ. ನಾಡಿಗೆ ಕೇಡು ಬಂದೊದಗಿದಂತೆ ಆಡುವ ಮಾತು ಅಂತರ್ ಮುಖಕ್ಕೊಂಟಾಗ ಹಂತಹಂತದ ಹಂತಕ್ಕೆ ತಡೆದು ಕಂತ್ರಿತನಕ್ಕೆ ಇಳಿದಂತೆ ಇಂತಿಂಥ ಇಚ್ಛೆಯೊಳಗೆ ಬೆದರೆ ಕುದಿವುಕ್ಕೋಕೆ ಬಿಡದಂತೆ, ಹದವರಿತು ಮದಮುರಿದು ಹೃದಯದುನ್ಮನೆಯೊಳಗೆ ಸದಮಲಾತ್ಮನ ಕಾದು ಕುಳಿತೆಯೆಂದರೆ, ತನ್ನೆಲ್ಲಾ ಅಲ್ಲಸಲ್ಲದ ಬಹು ಹುಲ್ಲುಬೀಜದಂತೆ ಪುಸಿಯುದುರಿ ಕಾಡುವ ಬೇಡುವಂತ ಕೋಡಿ ಕಿತ್ತೋಡುವುದು ನೋಡಾ ಯುಗಧರ್ಮ”

ಎಂದು ಹಾಡುತ್ತಾ ಕುಣಿಯ ತೊಡಗಿದರು. ಹುಟ್ಟಿನಿಂದಲೂ ಓದು ಬರಹವಿಲ್ಲದ ಒಬ್ಬ ಸಾಧಾರಣ ವ್ಯಕ್ತಿ ಹಾಗೂ ನಿರಕ್ಷರ ಕುಕ್ಷಿ ಇದ್ದಕ್ಕಿದ್ದಂತೆ ಸಾಹಿತ್ಯ ಒಡಮೂಡಿದ್ದನ್ನು ನೋಡಿದರೆ ಇದರಲ್ಲಿ ಯಾವುದೋ ಒಂದು ನಿಗೂಢ ಶಕ್ತಿಯಿದೆ ಎಂದುಕೊಳ್ಳಬಹುದೇನೋ. ದಿನದಿನಕ್ಕೂ ಇವರಲ್ಲಿ ಸಾಹಿತ್ಯ ಮೊಳಕೆಯೊಡೆದು ಚಿಗುರತೊಡಗಿತ್ತು, ಚಿಗುರಿದಂತೆ ಬೆಳೆಯತೊಡಗಿತು. ಬೆಳೆದಂತೆ ಅಭಿವೃದ್ಧಿಯಾಗಿ ವಿಶಾಲತೆಯನ್ನು ಪಡೆದುಕೊಳ್ಳತೊಡಗಿತು. 1975ರ ವೇಳೆಗೆ ಜಾನಪದ ಸಾಹಿತ್ಯದಲ್ಲಿ ಪರಿಪೂರ್ಣರಾಗಿ ಕೃಷಿ ಕಾಯಕದೊಡನೆ ಅಂಚೆ ಇಲಾಖೆಯ ವೃತ್ತಿಯನ್ನು ಜೊತೆಯಲ್ಲೇ ಕೊಂಡೊಯ್ಯುತ್ತಿದ್ದವರಿಗೆ ಇವರ ಜೀವನ ಶೈಲಿಯೇ ಬದಲಾಗತೊಡಗಿತು. ಇದಕ್ಕೇನೇ ಕಾಲಾಯ ತಸ್ಮೈ ನಮಃ ಎನ್ನುವುದು.

ಸೌಜನ್ಯ : ಲಿಂಗಾಯತ ಅಧ್ಯಯನ ಅಕಾಡೆಮಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ, ಶರಣ ಸಾಹಿತ್ಯ ಅಕಾಡೆಮಿ, ರಾಜಗುರು ಸಂಸ್ಥಾನ ಕಲ್ಮಠ, ಚೆನ್ನಮ್ಮನ ಕಿತ್ತೂರು

ಇದನ್ನೂ ಓದಿ : Theatre : ಅಭಿಜ್ಞಾನ ; ವಿಧಾನಸೌಧದಲ್ಲಿ ಜಾಯಿಕಾಯಿ, ಲಕ್ಸ್, ಲೈಫ್​ಬಾಯ್ ಸೋಪ್ ಪೆಟ್ಟಿಗೆಯ ಮೇಲೆ ಶುರುವಾದ ಕಚೇರಿ 

Follow us on

Most Read Stories

Click on your DTH Provider to Add TV9 Kannada