Theatre : ಅಭಿಜ್ಞಾನ ; ವಿಧಾನಸೌಧದಲ್ಲಿ ಜಾಯಿಕಾಯಿ, ಲಕ್ಸ್, ಲೈಫ್​ಬಾಯ್ ಸೋಪ್ ಪೆಟ್ಟಿಗೆಯ ಮೇಲೆ ಶುರುವಾದ ಕಚೇರಿ

R. Nagesh : ‘‘ಸಸ್ಪೆಂಡ್ ಆಗಿದೇಂತ ಮನೇಲಿ ಹೇಳಲೇ ಇಲ್ಲ. ಹೋಗಿ ಬರೋದು ನೋಡಿ ಆಫೀಸಿಗೆ ಹೋಗಿದಾನೆ ಅಂದುಕೊಳ್ಳೋರು. ಸ್ನೇಹಿತನೊಬ್ಬ ಹುಡುಕಿಕೊಂಡು ಬಂದ. ಆಫೀಸಿನಲ್ಲಿ ವಿಷಯ ತಿಳೀತು. ಮನೆಗೆ ಹೋದ. 'ಆಫೀಸಿಗೆ ಹೋಗಿದಾರೆ' ಅಂದಾಗ 'ಇಲ್ಲ ಸಸ್ಪೆಂಡ್ ಆಗಿದಾನಂತೆ' ಅಂದು ಬಿಟ್ಟ. ನನ್ನ ಹೆಂಡತಿ, ತಾಯಿ ಪೈಪೋಟಿ ಮೇಲೆ ಅತ್ತರು ನೋಡಿ" ಆರ್. ನಾಗೇಶ್

Theatre : ಅಭಿಜ್ಞಾನ ; ವಿಧಾನಸೌಧದಲ್ಲಿ ಜಾಯಿಕಾಯಿ, ಲಕ್ಸ್, ಲೈಫ್​ಬಾಯ್ ಸೋಪ್ ಪೆಟ್ಟಿಗೆಯ ಮೇಲೆ ಶುರುವಾದ ಕಚೇರಿ
ರಂಗತಜ್ಞ ಆರ್. ನಾಗೇಶ್

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಡಾ. ವಿಜಯಾ ಬರೆದ ‘ಆರ್. ನಾಗೇಶ್ – ರಂಗಸಂಪನ್ನರು ಕಿರು ಜೀವನಚರಿತ್ರೆ’ಯಿಂದ ಆಯ್ದ ಭಾಗ.

*

ಕಾಲೇಜು ದಿನಗಳಲ್ಲಿದ್ದಾಗಲೇ ಎಂಪ್ಲಾಯ್ಮೆಂಟ್ ಎಕ್ಸ್‌ಚೇಂಜ್ ಮೂಲಕ ಹಲವು ಕೆಲಸಗಳಿಗೆ ಸಂದರ್ಶನದ ಕರೆಗಳು ಬಂದವು. ನಾಲ್ಕಾರು ಬಾರಿ ಆಯ್ಕೆಯೂ ಆದರು. ಮನೆಯಲ್ಲಿ ಎಲ್ಲಕ್ಕೂ ಸಲಹೆ ಕೊಡುತ್ತಿದ್ದ ದೊಡ್ಡಪ್ಪ, ‘ಇನ್ಕಮ್ ಟ್ಯಾಕ್ಸ್‌ನಲ್ಲಿ ಸೇರಿಕೊ ಇನ್ಕಮ್ ಇರುತ್ತೆ’ ಅಂತ ಒತ್ತಾಯಿಸಿ, ಸೇರಿಸಿದರು. ಆ ದಿನಗಳಲ್ಲಿ ಪರಿಚಯವಾದ ಅಲ್ಲಿಯ ವೈ. ವಿ. ವೆಂಕಟೇಶ್ವರ ರಾವು ಮೊದಲಾದವರಲ್ಲಿ ನಾಟಕವೊಂದರ ಸಿದ್ಧತೆ – ಶಿಸ್ತುಗಳ ಪರಿಚಯ ಆಗಿತ್ತು, ಅಲ್ಲೂ ನನಗೊಬ್ಬ ಪ್ರತಿಸ್ಪರ್ಧಿ ಇದ್ದರು ಶಿವರಾಮಯ್ಯ ಅಂತ. ನಮ್ಮಿಬ್ಬರ ಕಂಠ ಚೆನ್ನಾಗಿತ್ತು. ಎಲ್ಲಕ್ಕೂ ಪೈಪೋಟಿ ನಮಗೆ, ಉದ್ದಕ್ಕೂ ನಾನು ಇಂಥ ಸ್ಪರ್ಧೆಗಳನ್ನು ನಿಭಾಯಿಸಿಕೊಂಡೇ ಬಂದಿದ್ದೇನೆ ಬಿಡಿ’ ಎನ್ನುತ್ತಾರೆ ನಾಗೇಶ್, ಆ ಕಚೇರಿಯಲ್ಲಿ ಸುಮಾರು ಆರು ವರ್ಷ ಕೆಲಸ ಮಾಡಿದರು ನಾಗೇಶ್.

ನಾಗೇಶ್ ಸಮಾರಂಭಗಳ ನಿರೂಪಣೆ ಮಾಡಿದರೆ ಚೆನ್ನ. ಒಂದು ಕಾಲಕ್ಕೆ ಆಕಾಶವಾಣಿಯಲ್ಲಿ ಎಂ.ಎಸ್.ಐ.ಎಲ್. ಸಂಸ್ಥೆ ಪ್ರಾಯೋಜಿಸುತ್ತಿದ್ದ ‘ಗೀತಲಹರಿ’ ಅವರ ನಿರೂಪಣೆಯೇ ಪ್ರಮುಖ ಕಾರ್ಯಕ್ರಮದಲ್ಲಿ ನಾಗೇಶ್ ಅವರ ನಿರೂಪಣೆಯೇ ಪ್ರಮುಖ ಆಕರ್ಷಣೆಯಾಗಿತ್ತು. ಅಲ್ಲಿಯೂ ನಾಗೇಶ್‌ಗೆ ಪ್ರತಿಸ್ಪರ್ಧಿ ಶಿವರಾಮಯ್ಯನವರೇ ಎಂದು ನೆನಪು. ಇಂದು ನಿನ್ನೆಯವರೆಗೂ ನಾಗೇಶ್ ಪ್ರಶಸ್ತಿ ಸಮಾರಂಭಗಳಲ್ಲಿ ಸೊಗಸಾಗಿ ನಿರೂಪಣೆ ಮಾಡಿ ಸಮಯ ಸ್ಪೂರ್ತಿಯಿಂದ ತೊಡಕುಗಳನ್ನು ನಿವಾರಿಸಿ ನಿಭಾಯಿಸಿದ್ದನ್ನು ಕಂಡಿದ್ದೇವೆ, ಅವರ ಕಂಠಸಿರಿಯ ಮೋಡಿಗೆ ಮೈ ಮರೆತಿದ್ದೇವೆ.

ಇನ್ಕಮ್ ಟ್ಯಾಕ್ಸ್ ಆಫೀಸಿನಲ್ಲಿ ನಾಗೇಶ್‌ ಮಾಡಿಸಿದ್ದ ನಾಟಕಗಳನ್ನು ನೋಡಿದ್ದು, ಶ್ರೀರಂಗರ ಶಿಫಾರಸ್ಸು ಇದ್ದುದರಿಂದ ವಾರ್ತಾ ಇಲಾಖೆಯ ಅಧಿಕಾರಿ ಮರಿಪುಟ್ಟಣ್ಣನವರು ‘ಸಂಗೀತ ನಾಟಕ ವಿಭಾಗ ಪ್ರಾರಂಭವಾಗುತ್ತೆ ಬನ್ನಿ’ ಅಂದರು. ಕೇಂದ್ರ ಸರ್ಕಾರ ಬಿಟ್ಟು ರಾಜ್ಯ ಸರ್ಕಾರಕ್ಕೆ ಅದೂ ಇನ್‌ಕಂ ಟ್ಯಾಕ್ಸ್‌ನಂಥ ಸಂಭಾವಿತ ಕೆಲಸ ಬಿಟ್ಟು ನಾಟಕಕ್ಕೆ ಬಂದರೆ ಮನೆಯವರು ಒಪ್ಪುವುದುಂಟೆ ? ಅವರಿಗೆ ಹೇಳಲೇ ಇಲ್ಲ. ಕೆಲಸ ಪ್ರಾರಂಭ ಆಗಿದ್ದು ವಿಧಾನಸೌಧದ ಸಣ್ಣದೊಂದು ಕೋಣೆಯಲ್ಲಿ. ಕುರ್ಚಿ ಟೇಬಲ್ಲುಗಳಿಲ್ಲ. ಅಲ್ಲಿದ್ದ ಜಾಯಿಕಾಯಿ ಪೆಟ್ಟಿಗೆ ಮೇಲೆ ಲಕ್ಸ್, ಲೈಫ್ ಬಾಯ್ ಸೋಪಿನ ಪೆಟ್ಟಿಗೆಯ ಮೇಲೆ ಕೂತು ಕಚೇರಿ ಅಂದುಕೊಂಡರು. ಕಡೆಗೊಂದು ದಿನ ಅವರ ಅಮ್ಮನಿಗೆ ಗೊತ್ತಾಗಿ ದಿನಗಟ್ಟಲೆ ಅತ್ತಿದ್ದೂ ಆಯಿತು.

ಲೆಕ್ಕದಲ್ಲಿ ನಾಗೇಶ್ ಎಷ್ಟು ಹಿಂದೆ ಅಂದರೆ ಇಲಾಖೆಯ ಸಲುವಾಗಿ ಒಂದು ಟೆಲಿಫಿಲಂ ಮಾಡಬೇಕಾಗಿತ್ತು, ‘ತಾಮ್ರಪತ್ರ’ವನ್ನು ಚಿತ್ರೀಕರಿಸಿದರು. ಯಾವುದೋ ಕಾರಣದಿಂದಾಗಿ ಅದು ದೂರದರ್ಶನದಲ್ಲಿ ಪ್ರಸಾರ ಆಗಲೇ ಇಲ್ಲ. ಆದರೆ ಇಲಾಖೆ ನೀವು ಅದಕ್ಕಾಗಿ 7,೦೦೦ ರೂ. ತಗೊಂಡಿದೀರಿ, ಹಿಂತಿರುಗಿಸಿ ಅಂದಾಗ ಹೇಗೇಗೋ ಮಾಡಿ ಆ ಹಣ ತೀರಿಸಿದರು, ಇನ್ನೂ ‘ತಾಮ್ರಪತ್ರ’ ಡಬ್ಬದಲ್ಲಿ ಬಿದ್ದುಕೊಂಡಿದೆ!

“ಹೀಗೆ ಅಮ್ಮನಿಗೆ, ಮನೆಯಾಕೆಗೆ ನನ್ನಿಂದ ತೊಂದರೆ ಆಗಿದೆ. ಮತ್ತೊಮ್ಮೆ ‘ತಬರನ ಕಥೆ’ ನಾಟಕ ಬರೆದು ಆಡಿಸಿದ ಸಮಯ, ನಿಷ್ಠೆ ಬಗ್ಗೆ ನಾಟಕ ಬರೆದೆ, ನಾನು ಭ್ರಷ್ಟ ಅನ್ನಿಸಿಕೊಂಡಿದ್ದೆ. ನನ್ನನ್ನು ಸಸ್ಪೆಂಡ್ ಮಾಡಿದ್ದರು. ನನಗೆ ಇವತ್ತಿಗೂ ಲೆಕ್ಕ ಇಡೋದು ಬರೋಲ್ಲ , ಇದರಿಂದಾಗಿ ಕಷ್ಟಗಳಲ್ಲಿ ಸಿಕ್ಕಿಕೊಳ್ತಾನೇ ಇರ್ತಿನಿ. ಸಸ್ಪೆಂಡ್ ಆಗಿದೇಂತ ಮನೇಲಿ ಹೇಳಲೇ ಇಲ್ಲ. ಹೋಗಿ ಬರೋದು ನೋಡಿ ಆಫೀಸಿಗೆ ಹೋಗಿದಾನೆ ಅಂದುಕೊಳ್ಳೋರು. ಸ್ನೇಹಿತನೊಬ್ಬ ಹುಡುಕಿಕೊಂಡು ಬಂದ. ಆಫೀಸಿನಲ್ಲಿ ವಿಷಯ ತಿಳೀತು. ಮನೆಗೆ ಹೋದ. ‘ಆಫೀಸಿಗೆ ಹೋಗಿದಾರೆ’ ಅಂದಾಗ ‘ಇಲ್ಲ ಸಸ್ಪೆಂಡ್ ಆಗಿದಾನಂತೆ’ ಅಂದು ಬಿಟ್ಟ. ನನ್ನ ಹೆಂಡತಿ, ತಾಯಿ ಪೈಪೋಟಿ ಮೇಲೆ ಅತ್ತರು ನೋಡಿ” ಎಂದು ನಗುತ್ತಾರೆ ನಾಗೇಶ್.

Abhijnana excerpt from R Nagesh Rangasampannaru Kiru Jeevanacharitre by Writer Dr Vijaya

ಲೇಖಕಿ, ಪತ್ರಕರ್ತೆ ಡಾ. ವಿಜಯಾ

ಸಾಂಗ್ ಅಂಡ್ ಡ್ರಾಮಾ ವಿಭಾಗದಲ್ಲಿ ಹುದ್ದೆಗಳು ಭರ್ತಿಯಾದವು. ಆದರೆ ಫಂಡ್ಸ್ ಇರಲಿಲ್ಲ. ಆಗ ವಾರ್ತಾ ಇಲಾಖೆಯು ಗೃಹ ಮತ್ತು ಜೈಲು ಇಲಾಖೆಯಡಿ ಬರುತ್ತಿತ್ತು, ಆರು ತಿಂಗಳಾದರೂ ಸಂಬಳ ಬರಲಿಲ್ಲ. ಮುಂದೆ ವರ್ಷಕ್ಕೊಮ್ಮೆ ರಿನ್ಯೂ ಆಗೋದು. ಆ ಅವಧಿಯಲ್ಲಿ ಒಂದೋ ಎರಡೋ ತಿಂಗಳು ಸಂಬಳಾನೇ ಇರುತ್ತಿರಲಿಲ್ಲ. ನಾಗೇಶ್ ಮೊದಲಾದವರಿಗೆ ಕೆಲಸದ ಆರ್ಡರ್ ಕೊಡೋ ಮೊದಲು ಒಂದು ನಾಟಕ ಆಡಬೇಕಿತ್ತು, ಅದಕ್ಕಾಗಿ ಗೋವಾದಲ್ಲಿ ಕೈಲಾಸಂ ಅವರ ‘ಅನುಕೂಲಕ್ಕೊಬ್ಬಣ್ಣ’ ನಾಟಕದ ಸಿದ್ಧತೆ ಆಗಿತ್ತು. ನಾಗೇಶ್ ಜೊತೆಗಿದ್ದವರಲ್ಲಿ ಜಿ. ವಿ. ಶಿವಾನಂದ್ ಅದಾಗಲೇ ಎನ್.ಎಸ್.ಡಿ. ಗೆ ಹೋಗಿ ಬಂದವರು. ಬಿ. ಸಿ. ನಾಗರಾಜ್, ಹರಿಕೃಷ್ಣ ಮತ್ತಿತರರೂ ಇದ್ದರು. ಫೋಟೋ ತೆಗೆಯಲು ದಾಸಪ್ಪ ಬಂದಿದ್ದರು. ವೆಂ.ಮು.ಜೋಶಿ ಸಹ ಇದ್ದರು. ಗೋವೆಯ ಮಾಂಡೋವಿ ಹೋಟೆಲ್‌ನ ಏಳನೇ ಮಹಡಿಯಲ್ಲಿ ಸಭಾಂಗಣ, ಜನ ಸೇರಿತ್ತು. ನಾಟಕ ಚೆನ್ನಾಗಿ ಮಾಡಿದ್ರೆ ಮಾತ್ರ ಕೆಲಸ ಸಿಗುತ್ತೆ ಅಂತ ಇದ್ದುದರಿಂದ ಏನೋ ಆತಂಕದಲ್ಲೇ ರಂಗದ ಮೇಲೆ ಹೋಗುವ ಸಂದರ್ಭ ಕಾಯುತ್ತಿದ್ದರು. ಆದರೆ ಸ್ಥಳೀಯರ ಏಕ ಪಾತ್ರಾಭಿನಯ, ಹಾಡು, ಕುಣಿತಗಳು ಮುಗೀಲೇ ಇಲ್ಲ, ಮರಿಪುಟ್ಟಣ್ಣನವರು ಬಹಳ ಸಮಯ ಕಾದು ಮೇಲಕ್ಕೂ ಕೆಳಕ್ಕೂ ಓಡಾಡಿದರು. ಕಡೆಗೆ ಸಿಟ್ಟಾಗಿ “They don’t deserve your talent. Come down, Come down. Join me” ಎಲ್ಲರನ್ನೂ ಕೆಳಗೆ ಕರೆತಂದು ಭರ್ಜರಿ ಪಾರ್ಟಿ ಕೊಟ್ಟು ಬಿಟ್ಟರು. ‘ಮಾರನೇ ದಿನ ಸಮುದ್ರದಲ್ಲಿ ಎದ್ದು ಬಿದ್ದು ಆಡಿಕೊಂಡು ಬಂದೆವು, ಏನಾಗುತ್ತೋ ಅನ್ನೋ ಚಿಂತೆ ಎಲ್ಲರಿಗೂ… ಊರಿಗೆ ಬರೋ ಹೊತ್ತಿಗೆ ಅಪಾಯಿಂಟ್ಮೆಂಟ್ ಆರ್ಡರ್ ಬಂದಿತ್ತು’

ಹೀಗೆ ನಾಗೇಶ್ ನಾಟಕ ವಿಭಾಗದಲ್ಲಿ ಸೇರಿ ಹೋದರು, ಇಲ್ಲಿ ಒಮ್ಮೊಮ್ಮೆ ಖುಶಿ ಕೊಟ್ಟಂಥ ನಾಟಕಗಳಿವೆ. ಅದರಲ್ಲೂ ಕುವೆಂಪು ಅವರ ‘ಜಲಗಾರ’ ದಂಥ ನಾಟಕದಲ್ಲಿ ಸಮಾಧಾನ ಸಿಕ್ಕಿದೆ. ಪ್ರಚಾರಕ್ಕಾಗಿ ಗ್ರಾಮೀಣ ಪರಿಸರಕ್ಕೆ ಹೋಗಿ ಆಡುವ ನಾಟಕಗಳಾದ್ದರಿಂದ ಎಲ್ಲವೂ ಕಲಾತ್ಮಕವಾಗಿರುತ್ತವೆ. ಎನ್ನಲಾಗುವುದಿಲ್ಲ. ಇರುವುದರಲ್ಲೇ ಏನಾದರೂ ಸಮಾಧಾನ ಹುಡುಕಿಕೊಳ್ಳೋದಷ್ಟೇ.

ಈ ವೇಳೆಗೆ ಒಂದು ವಿಶಿಷ್ಟ ರೀತಿಯ ಬ್ಯಾಕ್ ಸ್ಟೇಜ್ ತಂಡವೇ ಹುಟ್ಟಿಕೊಂಡಿತ್ತು. ಯಾರೇ ನಾಟಕ, ಸಮಾರಂಭಗಳು, ಉತ್ಸವಗಳು ಏನೇ ಮಾಡಲಿ ಅದನ್ನು ಕಾಂಟ್ರ್ಯಾಕ್ಟ್ ಅಥವಾ ಪ್ಯಾಕೇಜ್ ಡೀಲ್ ಥರಾ ತಗೊಂಡು ಮಾಡಿಕೊಡೋದು. ನಾಟಕದ ಒಂದಷ್ಟು ಹುಡುಗರು ಹಾಗೆ ತಯಾರಾಗಿದ್ದರು. ಹಗಲು-ರಾತ್ರಿ ಅನ್ನದೇ ಕೆಲಸ ಮಾಡೋ ಹುಡುಗರಿದ್ದರು. ಅದೊಂದು ರೀತೀಲಿ ಕೆಲವರ ನಿರುದ್ಯೋಗ ಸಮಸ್ಯೆಗೂ ಪರಿಹಾರ ಆಗಿತ್ತು. ಇವೆಲ್ಲದರ ಹಿಂದಿನ ಬ್ರೇನ್ ನಾಗೇಶರೇ, ಇವತ್ತಿಗೂ ಅಂಥ ಒಂದು ಸ್ಟೇಜ್ ಕಾಂಟ್ರಾಕ್ಟ್ ಸಂಪ್ರದಾಯ ನಡೆದುಬಂದಿದೆ.

ಸೌಜನ್ಯ : ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು

ಇದನ್ನೂ ಓದಿ : Literature : ಅಭಿಜ್ಞಾನ ; ‘ಸಣ್ಯಾ, ಈವತ್ತು ನಿನ್ನ ಪಾರಿವಾಳ ಇಲ್ಲ ಅಂತ ಕಾಣತದ’ ಜಿ.ಎ. ಕುಲಕರ್ಣಿ ಅವರ ‘ಚಂದ್ರಾವಳ’

Published On - 2:24 pm, Sat, 15 January 22

Click on your DTH Provider to Add TV9 Kannada