Forest Stories : ಕಾಡೇ ಕಾಡತಾವ ಕಾಡ ; ಛಾಯಾಗ್ರಾಹಕ ವಿನೋದ್ ಕುಮಾರರ ಹೇಳದೆ ಉಳಿದ ಕಾಡಕಥನಗಳು

Real Stories : ‘ಕಾಡಿನ ಹಲ ಘಟನೆಗಳು ಒಮ್ಮೊಮ್ಮೆ ದಿನಪೂರ್ತಿ ನಗಿಸಿದರೆ ಕೆಲವೊಮ್ಮೆ ವಾರಗಟ್ಟಲೆ ವಿಷಾದದ ಕಡೆಗೆ ದೂಡಿಬಿಡುತ್ತಿದ್ದವು. ಅಪರೂಪಕ್ಕೊಮ್ಮೆ ಇವುಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳತೊಡಗಿದೆ. ಬಹಳ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಕಾಡಿನ ಕಥೆಗಳು ಜನರಿಗೆ ಇಷ್ಟರಮಟ್ಟಿಗೆ ಆಸಕ್ತಿ ಹುಟ್ಟಿಸುತ್ತವೆ ಎನ್ನಿಸತೊಡಗಿದ್ದೇ ಆಗ.’ ವಿ. ಕೆ. ವಿನೋದ್ ಕುಮಾರ್

Forest Stories : ಕಾಡೇ ಕಾಡತಾವ ಕಾಡ ; ಛಾಯಾಗ್ರಾಹಕ ವಿನೋದ್ ಕುಮಾರರ ಹೇಳದೆ ಉಳಿದ ಕಾಡಕಥನಗಳು
Follow us
ಶ್ರೀದೇವಿ ಕಳಸದ
|

Updated on:Jan 14, 2022 | 7:28 PM

ಕಾಡೇ ಕಾಡತಾವ ಕಾಡ | Kaade Kaadataava Kaada : ಅರೂಪಕ್ಕೊಮ್ಮೆ ಅಪ್ಪ ಕಾಡಿನೊಳಗಿನ ಕಥೆ ಹೇಳುತ್ತಿದ್ದರು; ಕಾಡು ಕಾಯುವ ಕೆಲಸದಲ್ಲಿದ್ದ ಅಪ್ಪ ಕಾಡಿನೊಳಗಿನ ಮಾನವ-ಪ್ರಾಣಿಗಳ ಸಂಘರ್ಷಗಳ ಬಗ್ಗೆ, ಸಹಜೀವನದ ಬಗ್ಗೆ, ಕಾಡು ಕಾಯುವ ಕಷ್ಟದ ಬಗ್ಗೆ, ಇದೆಲ್ಲದರ ಜೊತೆಗೇ ನಡೆಯುತ್ತಿದ್ದ ಹಾಸ್ಯ ಪ್ರಸಂಗಗಳ ಬಗ್ಗೆ, ಮೇಲಧಿಕಾರಿಗಳ ದರ್ಪ, ಪ್ರೀತಿ, ಮಾನವೀಯ ಗುಣಗಳು ಹೀಗೆ ಕಾಡು ಮುಂತಾದ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳತೊಡಗಿದರು. ಅದು ಕಾಡಿನ ಮೇಲಿನ ನನ್ನ ಕುತೂಹಲ, ಬೆರಗನ್ನು ಹೆಚ್ಚಿಸುತ್ತ ಹೋಯಿತು. ಕಾಡು ನಾಶವಾದರೆ ಮನುಷ್ಯ ಭಯಾನಕ ಹಿಂಸೆಗೊಳಗಾಗುತ್ತಾನೆ, ಕಾಡಿಲ್ಲದಿದ್ದರೆ ಮನುಷ್ಯನಿಗೆ ಬದುಕೇ ಇಲ್ಲ ಎನ್ನುವುದು ಅವರ ಮಾತುಗಳಲ್ಲಿ ಧ್ವನಿಸುತ್ತಿತ್ತು. ಹೀಗೆ ಅಪ್ಪ ಹೇಳುತ್ತಿದ್ದ ಕಾಡಿನ ಕಥೆಗಳು ನನ್ನನ್ನು ಗಾಢವಾಗಿ ಆವರಿಸಿಕೊಳ್ಳತೊಡಗಿದವು. ಮುಂದೆ ನಾನೇ ಅರಣ್ಯ ಸಿಬ್ಬಂದಿಯಾಗಿ ಸೇರಿದೆ. ಆಗ ಕಥೆಗಳ ಇನ್ನೊಂದು ಆಯಾಮ ನನ್ನನ್ನು ಎಳೆದುಕೊಂಡಿತು.

ವಿ.ಕೆ. ವಿನೋದ್ ಕುಮಾರ್ (V.K. Vinod Kumar)

*

ವಿ. ಕೆ. ವಿನೋದ್​ ಕುಮಾರ್ ಹುಟ್ಟಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು. ಅರಣ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರು. ಸದ್ಯ ಕುಶಾಲನಗರದಲ್ಲಿ ವಾಸ. ಪ್ರಕೃತಿ ಮತ್ತು ವನ್ಯಜೀವಿಗಳ ಫೋಟೋಗ್ರಫಿ ಹವ್ಯಾಸ. AFIP ಮತ್ತು AFIAP ಯಿಂದ ಫೋಟೋಗ್ರಫಿಗಾಗಿ ಮನ್ನಣೆ. ಹಲವಾರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಚಿತ್ರ ಪ್ರದರ್ಶನಗಳಲ್ಲಿ ಚಿನ್ನ, ಬೆಳ್ಳಿ ಪದಕಗಳ ಪುರಸ್ಕಾರ ಪಡೆದ ಇವರು ‘ಟಿವಿ9 ಡಿಜಿಟಲ್ ಕನ್ನಡ’ ದಲ್ಲಿ ಹದಿನೈದು ದಿನಕ್ಕೊಮ್ಮೆ (ಶನಿವಾರ) ಅಂಕಣ ಬರೆಯಲಿದ್ದಾರೆ. ಆಶಯವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದಾರೆ.

*

ನಾನು ಹುಟ್ಟಿದ್ದೇ ಕಾಡಿನ ನಡುವೆ ಅಂದರೆ ತಪ್ಪಲ್ಲ! ನಾನು ನನ್ನಮ್ಮನ ಹೊಟ್ಟೆಯಲ್ಲಿದ್ದಾಗ ನನ್ನಮ್ಮ ಕಾಡಿನಲ್ಲಿದ್ದಳು, ಅಪ್ಪ ಕಾಡು ಕಾಯುವ ಕೆಲಸದಲ್ಲಿದ್ದರು. ರಾತ್ರಿ ಕಾಡುಪ್ರಾಣಿಗಳಿಂದ ಭಯಪಡುತ್ತಿದ್ದ ನನ್ನಮ್ಮನ ಹೊಟ್ಟೆಯೊಳಗೆ ನಾನೂ ಭಯಪಡುತ್ತಿದ್ದೆನೋ ಏನೋ? ಆದ್ರೆ ಅಮ್ಮನಿಗೆ ಮಾತ್ರ ಗಾಬರಿಯಾಗುತ್ತಿತ್ತಂತೆ. ಹೀಗೇ ಕಾಡಿನ ಮಧ್ಯದಲ್ಲೇ ನನ್ನ ಬಾಲ್ಯ ಶುರುವಾಯಿತು ಎಂದರೂ ತಪ್ಪಿಲ್ಲ.  ಬೆಳೆಯುತ್ತಿದ್ದಂತೆ ಕಾಡಿನ ಮೇಲೆ ನನಗೆ ಪ್ರೀತಿ ಹುಟ್ಟಲು ಕಾರಣ ಕಾಡಿನಲ್ಲಿ ಉಚಿತವಾಗಿ ಸಿಗುತ್ತಿದ್ದ ಹಣ್ಣುಗಳು! ಎಲಚಿ ಹಣ್ಣು, ಎಳಂದೆ ಹಣ್ಣು, ತಡಸಲು ಹಣ್ಣು, ಖಾರೆ ಹಣ್ಣು, ಅಮ್ಮೆ ಹಣ್ಣು, ಸೀಬೆ ಹಣ್ಣು, ಕಾಡು ನೆಲ್ಲಿಕಾಯಿ, ಹಾಲಣ್ಣು… ಹೀಗೇ ಬಗೆಬಗೆಯ ಕಾಡುಹಣ್ಣುಗಳನ್ನು ತಿನ್ನುತ್ತಿದ್ದ ಕಾರಣದಿಂದಲೇ ನನಗೆ ಕಾಡು ಅತಿ ಪ್ರಿಯವಾಗಿತ್ತು. ನಂತರದ ಶಾಲಾ ದಿನಗಳಲ್ಲಿ ಅಪರೂಪಕ್ಕೊಮ್ಮೆಅಪ್ಪನ ಜೊತೆ ಕಾಡಿನೊಳಗಿನ ಕೆರೆ ಬಳಿಯ ಸೀಬೆಹಣ್ಣಿನ ಮರದ ಬಳಿ ಕರೆದುಕೊಂಡು ಹೋಗಿ ಮರ ಹತ್ತಿಸಿ ಕಾಯಿ ಕೀಳಿಸುತ್ತಿದ್ದರು. ಹೀಗೆ ಕಾಡಿನೊಳಗಿನ ಹಣ್ಣುಗಳ ಜಗತ್ತು ಪರಿಚಯವಾಯ್ತು. ಪ್ರಾಥಮಿಕ ಶಾಲೆಯ ದಿನಗಳು ಕಳೆದು ಪ್ರೌಢಶಾಲೆಗೆ ತಲುಪುತ್ತಿದ್ದಂತೆ ಕಾಡಿನ ಕಥೆಗಳಿಗೂ ತೆರೆದುಕೊಳ್ಳತೊಡಗಿದೆ.

ಅರೂಪಕ್ಕೊಮ್ಮೆ ಅಪ್ಪ ಕಾಡಿನೊಳಗಿನ ಕಥೆ ಹೇಳುತ್ತಿದ್ದರು; ಕಾಡು ಕಾಯುವ ಕೆಲಸದಲ್ಲಿದ್ದ ಅಪ್ಪ ಕಾಡಿನೊಳಗಿನ ಮಾನವ-ಪ್ರಾಣಿಗಳ ಸಂಘರ್ಷಗಳ ಬಗ್ಗೆ, ಸಹಜೀವನದ ಬಗ್ಗೆ, ಕಾಡು ಕಾಯುವ ಕಷ್ಟದ ಬಗ್ಗೆ, ಇದೆಲ್ಲದರ ಜೊತೆಗೇ ನಡೆಯುತ್ತಿದ್ದ ಹಾಸ್ಯ ಪ್ರಸಂಗಗಳ ಬಗ್ಗೆ, ಮೇಲಧಿಕಾರಿಗಳ ದರ್ಪ, ಪ್ರೀತಿ, ಮಾನವೀಯ ಗುಣಗಳು ಹೀಗೆ ಕಾಡು ಮುಂತಾದ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳತೊಡಗಿದರು. ಅದು ಕಾಡಿನ ಮೇಲಿನ ನನ್ನ ಕುತೂಹಲ, ಬೆರಗನ್ನು ಹೆಚ್ಚಿಸುತ್ತ ಹೋಯಿತು. ಕಾಡು ನಾಶವಾದರೆ ಮನುಷ್ಯ ಭಯಾನಕ ಹಿಂಸೆಗೊಳಗಾಗುತ್ತಾನೆ, ಕಾಡಿಲ್ಲದಿದ್ದರೆ ಮನುಷ್ಯನಿಗೆ ಬದುಕೇ ಇಲ್ಲ ಎನ್ನುವುದು ಅವರ ಮಾತುಗಳಲ್ಲಿ ಧ್ವನಿಸುತ್ತಿತ್ತು. ಹೀಗೆ ಅಪ್ಪ ಹೇಳುತ್ತಿದ್ದ ಕಾಡಿನ ಕಥೆಗಳು ನನ್ನನ್ನು ಗಾಢವಾಗಿ ಆವರಿಸಿಕೊಳ್ಳತೊಡಗಿದಾಗಲೇ  2003 ರಿಂದ ಖುದ್ದು ನಾನೇ ಅರಣ್ಯ ಇಲಾಖೆಯ ಸಿಬ್ಬಂದಿಯಾಗಿಬಿಟ್ಟೆ.

Kaade Kaadataava Kaada Column Forest Stories by Photographer VK Vinod Kumar

ಫೋಟೋ : ವಿನೋದ್ ಕುಮಾರ್

ಮತ್ತೊಂದು ತೆರದಲ್ಲಿ ನನ್ನೊಳಗೆ ಮತ್ತಷ್ಟು ಕಾಡಿನ ಕಥೆಗಳು ಇಳಿಯತೊಡಗಿದವು. ಅನೇಕ ಕಥನಗಳಿಗೆ ನಾನು ಸಾಕ್ಷಿಯಾಗುತ್ತ ಬಂದೆ. ನನ್ನ ಸಹಸಿಬ್ಬಂದಿಗಳೂ ದಿನಗೂ ಕಥೆಗಳನ್ನು ಹೊತ್ತುತರುತ್ತಿದ್ದರು. ಒಂದೊಂದು ಕಥೆಯೂ ವಿಭಿನ್ನ. ನಗು, ಖುಷಿ, ದುಖ, ಭಯ, ಆತಂಕ, ಅಚ್ಚರಿ, ಅವಮಾನ, ಉತ್ಸಾಹ ಹೀಗೇ ಎಲ್ಲ ಭಾವಗಳನ್ನೂ ಒಳಗೊಂಡ ಅನುಭವಗಳು. ಕೆಲವು ದಿನಪೂರ್ತಿ ನಗಿಸಿದರೆ ಕೆಲವು ವಾರಗಟ್ಟಲೆ ವಿಷಾದದ ಕಡೆಗೆ ದೂಡಿಬಿಡುತ್ತಿದ್ದವು. ಅಪರೂಪಕ್ಕೊಮ್ಮೆ ಈ ಘಟನೆಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳತೊಡಗಿದೆ. ಬಹಳ  ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಕಾಡಿನ ಕಥೆಗಳು ಜನರಿಗೆ ಇಷ್ಟರಮಟ್ಟಿಗೆ ಆಸಕ್ತಿ ಹುಟ್ಟಿಸುತ್ತವೆ ಎನ್ನಿಸತೊಡಗಿದ್ದೇ ಆಗ. ಈಗ ‘ಟಿವಿ9 ಕನ್ನಡ ಡಿಜಿಟಲ್’ ಈ ತನಕ ಹೇಳದ ಕಥೆಗಳನ್ನು ಬರೆಯಲು ಇಲ್ಲಿ ಅವಕಾಶ ಮಾಡಿಕೊಟ್ಟಿದೆ. ಹದಿನೈದು ದಿನಕ್ಕೊಮ್ಮೆ (ಪ್ರತೀ ಶನಿವಾರ) ನಿಮ್ಮ ಮುಂದೆ ಹಾಜರಿರಲಿದ್ದೇನೆ. ಓದುತ್ತೀರಲ್ಲ?

ವಿನೋದ್ ಕುಮಾರರ ಈ ಬರಹವನ್ನೂ ಓದಿ : Earth Day 2021 : ಎಲ್ಲಿದ್ದೀಯೋ? ಇಲ್ಲಿ ಯಾವುದೂ ಹರಿಯುವ ಕಡೆ ಹರಿಯುತ್ತಿಲ್ಲ ನನ್ನ ಗೂಗಲ್​ ತೋಲಣ್ಣ

ಇದನ್ನೂ ಓದಿ : Jeevavemba Jaaladolage : ಅವರೆಚಪ್ಪರದಡಿ ಇರುವೆಬಳಗಕ್ಕೆ ಸಿಹಿಯೂಟ ನಡೆದ ಸಾಕ್ಷ್ಯಕಥನದೊಂದಿಗೆ ಸುಮಾ ಸುಧಾಕಿರಣ್

Published On - 7:21 pm, Fri, 14 January 22